ಕಥೆ– ಪೂರ್ಣಿಮಾ ಆನಂದ್‌ 

ಮೀರಾ ತನ್ನ ಗಂಡ ಪ್ರವೀಣನ ಜೊತೆ ಡೈನಿಂಗ್‌ ಟೇಬಲ್ ಬಳಿ ಬೆಳಗಿನ ಉಪಾಹಾರಕ್ಕಾಗಿ ಕುಳಿತಿದ್ದಳು. ಅಷ್ಟರಲ್ಲಿ ಮೀರಾಳ ಪೋನ್‌ ರಿಂಗಾಯ್ತು. ಮನೆಗೆಲಸದ ಲತಾ ಕಾಲ್‌ ಮಾಡಿದ್ದಳು. “ಮೇಡಂ, ಇವತ್ತು ಬರಕ್ಕಾಗಲ್ಲ. ಅರ್ಜೆಂಟ್‌ ಕೆಲಸ ಬಂದಿದೆ. ನಾಳೆ ಬರ್ತೀನಿ,”

ಮೀರಾ ವಿಧಿಯಿಲ್ಲದೆ, “ಸರಿ,” ಎಂದು ಹೇಳಿ ತಲೆ ಆಡಿಸುತ್ತಾ ಫೋನಿಟ್ಟಳು.

ಪ್ರವೀಣನಿಗೆ ಹೆಂಡತಿಯ ಮೂಡ್‌ ಹಾಳಾಯಿತೆಂದು ತಿಳಿಯಿತು.

“ಏನಾಯ್ತು….? ಇವತ್ತೂ ಲತಾ ರಜೆ ಅಂತೇನು?”

ಮೀರಾ ನೀರಸವಾಗಿ, “ಹ್ಞೂಂ,” ಅಂದಳು.

“ಇರಲಿ ಬಿಡು ಮೀರಾ. ಟೇಕ್‌ ಈಟ್‌ ಈಝಿ.”

ಮೀರಾ ಹತಾಶಳಾಗಿ ನುಡಿದಳು, “ನನಗಂತೂ ಇವಳಿಂದ ತೊಂದರೆ ತಪ್ಪಿದ್ದಲ್ಲ. ಪ್ರತಿ ವಾರ 1-2 ದಿನ ರಜೆ ತಪ್ಪಿದ್ದಲ್ಲ. 8 ವರ್ಷದ ಹಳೆ ಕೆಲಸದವಳು, ಏಕ್‌ದಂ ನಾಳೆಯಿಂದ ಬರಬೇಡ ಅಂತ ಮುಖದ ಮೇಲೆ ಹೊಡೆದಂತೆ ಹೇಗೆ ಹೇಳಲಿ?”

“ಅದೂ ನಿಜ, ಇರಲಿ ಬಿಡು. ಈ ಸಣ್ಣಪುಟ್ಟ ವಿಷಯಗಳನ್ನು ಇಷ್ಟು ಸೀರಿಯಸ್‌ ಆಗಿ ತೆಗೆದುಕೊಳ್ಳಬಾರದು. ನೀನೇನೂ ಮಾಡಬೇಡ. ಎಲ್ಲಾ ಕೆಲಸ ಪೆಂಡಿಂಗ್‌ ಇಡು, ಅವಳೇ ನಾಳೆ ಬಂದು ಮಾಡಿಕೊಳ್ಳಲಿ.”

“ಅದು ಹೇಗೆ ಸಾಧ್ಯ? ಮನೆ ಗುಡಿಸಿ ಒರೆಸದೆ, ಪಾತ್ರೆ ತೊಳೆಯದೆ ಕೆಲಸಗಳಾಗುತ್ತವೆಯೇ? ಒಗೆಯುವ ಬಟ್ಟೆ ಮುಂದಕ್ಕೆ ಹಾಕಬಹುದಷ್ಟೆ.”

“ಹೇಗೋ ಆಗುತ್ತೆ ಬಿಡು. ಎಲ್ಲವನ್ನೂ ಮೈ ಮೇಲೆಳೆದುಕೊಂಡು ದೆವ್ವದ ಹಾಗೆ ಕೆಲಸ ಮಾಡ್ತೀಯ, ಆಮೇಲೆ ವಿಪರೀತ ಬೆನ್ನು ನೋವು ಅಂತ ಮಲಗಿಬಿಡ್ತೀಯ…. ಗುಡಿಸಿ ಸಾರಿಸದಿದ್ದರೆ 1 ದಿನಕ್ಕೆ ಏನೂ ಆಗದು. ಉಳಿದ ಕೆಲವು ಪಾತ್ರೆಗಳಲ್ಲೇ ಮ್ಯಾನೇಜ್‌ ಮಾಡು. ಲತಾ ನಾಳೆ ಬಂದ ಮೇಲೆ ಒಟ್ಟಿಗೆ ಎಲ್ಲಾ ಮಾಡಿಕೊಳ್ಳಲಿ.”

“ಏನು ಹೇಳ್ತೀರಿ ನೀವು? ಇಡೀ ದಿನ ಮನೆಯನ್ನು ಕಸಮಯ ಮಾಡಿಟ್ಟುಕೊಳ್ಳುವುದೇ? ಇದೆಲ್ಲ ನಡೆಯುವ ಕೆಲಸವೇ?”

“ಬಿಡು, ಅಂಥ ತಲೆ ಕೆಡಿಸಿಕೊಳ್ಳೋ ಕೆಲಸ ಏನಲ್ಲ. ಈಗ ಹೇಗೂ ತಿಂಡಿ ಆಯ್ತು, ಅಡುಗೆಗೆ ಕುಕ್ಕರ್‌, 1-2 ಪಾತ್ರೆ ಇದೆ. ಉಳಿದದ್ದೆಲ್ಲ ನಾಳೆಗಿರಲಿ. ಶೈಲಿ ಕೂಡ ಕಾಲೇಜಿಗೆ ಹೋಗಿದ್ದಾಯ್ತು. ಇದೋ, ನಾನೂ ಆಫೀಸಿಗೆ ಹೊರಟೆ. ಇನ್ನು ನಾವಿಬ್ಬರೂ ಬರುವುದೇ ಸಂಜೆಗೆ. ಮನೆ ತಕ್ಕಮಟ್ಟಿಗೆ ನೀಟಾಗೇ ಇದೆ. ಮನೆ ಗಲೀಜು ಮಾಡುವಂಥ ಮಕ್ಕಳು ಯಾರೂ ಇಲ್ಲ. ಉಳಿದ ಸಣ್ಣಪುಟ್ಟ ಕೆಲಸ ನಾಳೆಗಿರಲಿ. ಇರುವವಳು ಈಗ ನೀನೊಬ್ಬಳು, ಆರಾಮವಾಗಿ ನೆಮ್ಮದಿಯಾಗಿರು. ಇದೆಲ್ಲ ತೀರಾ ಸಣ್ಣ ಸಣ್ಣ ವಿಷಯ. ಇದಕ್ಕಾಗಿ ದಿನವಿಡೀ ಮೂಡ್‌ ಕೆಡಿಸಿಕೊಳ್ಳುವ ಅಗತ್ಯವಿಲ್ಲ.”

ಪ್ರವೀಣನ ಮಾತಿಗೆ ಮೀರಾ ಏನೂ ಹೇಳಲಾಗಲಿಲ್ಲ. ಅವನ ಶಾಂತ, ಸೌಮ್ಯ ಮುಖ ನೋಡುತ್ತಾ ಹಾಗೇ ಇದ್ದುಬಿಟ್ಟಳು. ಮದುವೆಯಾಗಿ 25 ವರ್ಷಗಳು ಅದೆಷ್ಟು ಬೇಗ ಕಳೆದುಹೋದವು ಅನಿಸುತ್ತದೆ. ಇವತ್ತಿಗೂ ಪತಿಪತ್ನಿಯರ ಪರಸ್ಪರ ಒಲವು ಮೊದಲ ದಿನದ ಹಾಗೇ ಉಳಿದುಕೊಂಡಿದೆ.

ಪ್ರವೀಣನನ್ನು ಹಾಗೆ ಗಮನಿಸುತ್ತಿದ್ದ ಮೀರಾಳನ್ನು ಉದ್ದೇಶಿಸಿ ಅವನು ಹೇಳಿದ, “ಏನೋ ಆಳವಾಗಿ ಯೋಚಿಸುತ್ತಿರುವಂತೆ ಕಾಣಿಸ್ತಿದೆ ಮೀರಾ….”

ತನಗೆ ಅರಿವಿಲ್ಲದೆಯೇ ಮೀರಾ ಈ ಮಾತನ್ನು ನುಡಿದಿದ್ದಳು, “ಅದೇನೋ ಗೊತ್ತಿಲ್ಲ, ನನಗೆ ನಿಮ್ಮನ್ನು ಕಂಡರೆ ಒಂದು ತರಹ ಅಸೂಯೆ….”

ಜೋರಾಗಿ ನಕ್ಕ ಪ್ರವೀಣ್‌ ಕೇಳಿದ, “ಹೌದಾ? ಯಾಕೆ?”

ಆ ಮಾತಿಗೆ ಅವಳಿಗೂ ನಗು ಬಂತು.

“ಇರಲಿ, ಹೇಳು.”

ಅದೇನೂ ಇಲ್ಲ ಎಂಬಂತೆ ಅವಳು ತಲೆ ಆಡಿಸಿದಳು.

ನಂತರ ಪ್ರವೀಣ್‌ ಗಡಿಯಾರ ನೋಡುತ್ತಾ, “ಓಹೋ…. ಲೇಟ್‌ ಆಗೇ ಹೋಯ್ತು. ಇವತ್ತು ಆಫೀಸಿನಲ್ಲಿ ಕೆಲಸ ಮಾಡುವಾಗಲೂ ಇದನ್ನೇ ಯೋಚಿಸುತ್ತಿರುತ್ತೇವೆ. ನನ್ನ ಹೆಂಡತಿಗೆ ನನ್ನ ಕಂಡರೆ ಅಸೂಯೆ ಅಂತ…. ಆಹಾ, ಏನು ಮಾತು ಹೇಳಿಬಿಟ್ಟೆಯೋ…. ಇರಲಿ, ಸಂಜೆ ಬಂದ ಮೇಲೆ ಅದರ ಬಗ್ಗೆ ವಿವರಿಸು.”

ಪ್ರವೀಣ್‌ ಆಫೀಸಿಗೆ ಹೊರಟಿದ್ದಾಯಿತು. ಮೀರಾ ಮನೆಯ ಅತ್ತಿತ್ತ ಓಡಾಡಿ ನೋಡಿದಳು. ಪ್ರವೀಣ್‌ ಮಾತಿನಲ್ಲಿ ಉತ್ಪ್ರೇಕ್ಷೆ ಇರಲಿಲ್ಲ. ಮನೆ ತುಂಬಾ ಕೊಳಕೇನೂ ಆಗಿರಲಿಲ್ಲ. ಆದರೆ ಮೀರಾಳಿಗೆ ಶಿಸ್ತುಬದ್ಧ ಜೀವನದ ಪರಿಪಾಠವಿತ್ತು. ಅಭ್ಯಾಸ ಬಲದಂತೆ ಒಂದು ಕೆಲಸ ನಂತರ ಇನ್ನೊಂದು ಕೆಲಸ ಆಗುತ್ತಿರಬೇಕು. ಇರಲಿ, ಅಡುಗೆಮನೆ ಕೆಲಸ ಪೂರೈಸೋಣ ಎಂದು ಡೈನಿಂಗ್‌ ಟೇಬಲ್ ಶುಚಿಗೊಳಿಸಿ. ತಟ್ಟೆ ಲೋಟ ತೊಳೆಯಲು ಹಾಕಿದಳು. ಸಣ್ಣಪುಟ್ಟ ಉಳಿದ ಪಾತ್ರೆಗಳನ್ನೂ ತೊಳದಿದ್ದಾಯಿತು. ಒಂದಿಷ್ಟು ಗುಡಿಸಿ ಮುಗಿಸೋಣ, ನಾಳೆ ಲತಾ ಬಂದ ಮೇಲೆ ಮನೆ ಒರೆಸಿಕೊಳ್ಳಲಿ ಎಂದು ಮೀರಾ ನಿರ್ಧರಿಸಿದಳು. ಇದನ್ನೇ ಅಲ್ಲವೇ ಅವರು ಮಾಡಬೇಡ ಎಂದಿದ್ದು ಎಂದು ಪ್ರವೀಣನ ಮಾತುಗಳನ್ನೇ ನೆನಪಿಸಿಕೊಂಡಳು.

ಹೌದು, ಪ್ರವೀಣನ ಬಿಂದಾಸ್‌, ಡೋಂಟ್‌ ಕೇರ್‌ ಸ್ವಭಾವ ಕಂಡು ತಾನು ಹಾಗೆ ಸದಾ ಚಿಂತೆಯಿಲ್ಲದೆ ಇರಲಾಗದಲ್ಲ ಎಂದು ಮೀರಾ ಅಸೂಯೆಪಡುತ್ತಿದ್ದಳು. ಪ್ರವೀಣನ ಸ್ವಭಾವವೇ ಹಾಗೆ. `ನಿಮ್ಮ ಮನದಲ್ಲಿ ಎಲ್ಲೋ ವಸಂತ ಮನೆ ಮಾಡಿದ್ದಾನೆ. ಇಲ್ಲದಿದ್ದರೆ ಎಂಥ ಗಂಭೀರ ಪರಿಸ್ಥಿತಿಯನ್ನೂ ಲೈಟ್‌ ಆಗಿಯೇ ತೆಗೆದುಕೊಳ್ಳುವುದು ಅಂದರೇನು?’

ಹಾಗೆಂದ ಮಾತ್ರಕ್ಕೆ ಪ್ರವೀಣ್‌ ಎಂದೂ ಯಾವ ದುಃಖ, ತೊಂದರೆಗೆ ಸಿಲುಕಲೇ ಇಲ್ಲ ಅಂತಲ್ಲ. ಅಂಥ ಎಷ್ಟೋ ಕಷ್ಟ ಬಂದುಹೋಗಿದೆ. ಪ್ರತಿಸಲ ಧೂಳಾದ ಬಟ್ಟೆಯನ್ನು ಕೊಡವಿ, ನೀರಲ್ಲಿ ಜಾಲಿಸಿ ಹಿಂಡಿ ಹರಡಿದಂತೆ ಅದನ್ನು ಮರೆತುಬಿಡುತ್ತಾನೆ. ಎಂದಾದರೂ ಆಫೀಸ್‌ ಟೆನ್ಶನ್‌ನಿಂದ ಮೂಡ್‌ ಕೆಟ್ಟಾಗ, ಮನೆಗೆ ಬಂದು ಅರ್ಧ ಗಂಟೆ ಕಾಲ ಸುಮ್ಮನೆ ಕುಳಿತುಬಿಡುತ್ತಾನೆ. ನಂತರ ಸುಧಾರಿಸಿಕೊಂಡು ಎಂದಿನ ಅದೇ ಹಾಸ್ಯದ ಮಾತು, ನಗು, ತಮಾಷೆ ಮಾತುಗಳಲ್ಲಿ ಅದನ್ನು ಮರೆಯುತ್ತಾನೆ. ಇದೇನು ನಿಮ್ಮ ಮನದಲ್ಲಿ ಇದಕ್ಕಾಗಿ ಏನಾದರೂ ಮ್ಯಾಜಿಕ್‌ ಮಂತ್ರ ಕಲಿತಿದ್ದೀರಾ ಎಂದು ಮೀರಾ ತಮಾಷೆ ಮಾಡುತ್ತಾಳೆ.

ಅದೇ ರೀತಿ ಯಾವುದೇ ಗಂಭೀರ ವಿಷಯವನ್ನು ರಾತ್ರಿವರೆಗೂ ಇಬ್ಬರೂ ಚರ್ಚಿಸುತ್ತಿದ್ದರೆ, ಮಲಗಿ ಎಷ್ಟು ಹೊತ್ತಾದರೂ ಮೀರಾ ನಿದ್ರೆ ಬರದೆ ಮಗ್ಗಲು ಬದಲಿಸುತ್ತಿರುತ್ತಾಳೆ. ಆದರೆ ಪ್ರವೀಣ್‌ ಮಾತ್ರ ಮಲಗಿದ ಸ್ವಲ್ಪ ಹೊತ್ತಿಗೇ ಗಾಢ ನಿದ್ದೆಗೆ ಜಾರಿರುತ್ತಾನೆ. ಪ್ರವೀಣ್‌ ಸುಖಾಸುಮ್ಮನೇ ಚಿಂತೆ ಕೊಡವಿ ನಿದ್ರಿಸುವುದನ್ನು ನೋಡಿದರೆ, ತಾನೂ ಅವನಂತೆ ಇರಬಾರದಾಗಿತ್ತೇ, ಆಗ ಜೀವನ ಎಷ್ಟು ಹಾಯಾಗಿರುತ್ತಿತ್ತು ಎಂದು ಮೀರಾ ನಿಡುಸುಯ್ಯುತ್ತಾಳೆ. ಮೀರಾಳಿಗೆ ಮೊದಲಿನಿಂದಲೂ ಹೀಗೆ, ಆತಂಕದ ಸ್ವಭಾವ. ಒಂದು ಸಣ್ಣ ವಿಚಾರ ತಲೆ ಕೊರೆಯಲಾರಂಭಿಸಿದರೂ ಅವಳು ಅದು ಪರಿಹಾರ ಆಗುವವರೆಗೂ ಬಿಡುತ್ತಿರಲಿಲ್ಲ, ನೆಮ್ಮದಿಯಾಗಿ ನಿದ್ದೆ ಮಾಡುತ್ತಿರಲಿಲ್ಲ. ಆದರೆ ಪ್ರವೀಣ್‌ ಅದೇನೂ ತಲೆ ಕೆಡಿಸಿಕೊಳ್ಳದೆ ಯಾವುದು ಹೇಗೆ ಇದ್ದರೂ ಮಾರನೇ ದಿನ ಬೆಳಗ್ಗೆ ವಾಕಿಂಗ್‌ ಹೊರಡಲು ರೆಡಿಯಾಗುತ್ತಿದ್ದ.

ಇವರಿಬ್ಬರ ಮಗ ರವಿ ವಿದೇಶದಲ್ಲಿ ಕಲಿಯುತ್ತಿದ್ದ. ಯಾವತ್ತಾದರೂ ಒಂದು ದಿನ ಅಕಸ್ಮಾತ್‌ ಮಗ ಫೋನ್‌ನಲ್ಲಿ ಲೈನ್‌ಗೆ ಸಿಗದಿದ್ದರೆ ಆ ಇಡೀ ದಿನ ಅವಳು ಸಪ್ಪೆ ಮೋರೆಯಿಂದ, ಅಲ್ಲೇನಾಗಿ ಹೋಯ್ತೋ ಎಂದು ಚಿಂತಿಸುತ್ತಿದ್ದಳು. ಆದರೆ ಪ್ರವೀಣ್‌ ಮಾತ್ರ ಕೂಲಾಗಿ, “ಅರೆ, ಬಿಝಿ ಇರ್ತಾನೆ ಬಿಡು. ಅಲ್ಲಿ ಎಲ್ಲವನ್ನೂ ಅವರವರೇ ನಿಭಾಯಿಸಬೇಕು. 108 ಕೆಲಸಗಳಿರುತ್ತವೆ. ಇದಕ್ಕೆ ಹೋಗಿ ಇಷ್ಟು ಟೆನ್ಶನ್ನೇ? ಅವನಿಗೆ ಬಿಡುವಾದಾಗ ತಾನಾಗಿ ಮಾಡ್ತಾನೆ ಬಿಡು. ಇಷ್ಟೆಲ್ಲ ಯೋಚಿಸಿದರೆ ಬಿ.ಪಿ. ಕೆಡುತ್ತೆ.”

ಮೀರಾ ಅವನನ್ನು ಇರಿಯುವಂತೆ ನೋಡಿದರೆ, “ಗೊತ್ತಾಯ್ತು ಗೊತ್ತಾಯ್ತು ಬಿಡು…. ನೀನು ಅವನ ತಾಯಿ…. ಹೆತ್ತ ಹೊಟ್ಟೆ ಸಂಕಟ ಗಂಡಸಿಗೇನು ಗೊತ್ತು ಇತ್ಯಾದಿ ಅಂತ್ಲೆ ಹೇಳ್ತೀಯಾ ಅಲ್ವಾ…. ನಾನೂ ಅವನ ತಂದೆ ಅನ್ನುವುದನ್ನು ಮರೆಯಬೇಡ. ಚಿಂತೆ ಮಾಡಿದಷ್ಟೂ ಆ ಸಮಸ್ಯೆ ಬೆಳೆಯುತ್ತದೆಯೇ ಹೊರತು ಮುಗಿಯುವುದಿಲ್ಲ.”

“ಆಯ್ತು…. ಗುರುಗಳೇ, ಈಗ ನನ್ನ ಬಿಟ್ಟುಬಿಡಿ.”

ಅದೇ ತರಹ ತಿಂಡಿ ಊಟದ ವಿಷಯದಲ್ಲಿ ಪ್ರವೀಣ್‌ ಎಂದೂ ಒಂದೇ ಒಂದು ದಿನ ಆಕ್ಷೇಪಣೆ ಮಾಡುವವನೇ ಅಲ್ಲ. ಇದನ್ನು ಗಮನಿಸಿದ ಇವಳ ತಾಯಿ, ಅಕ್ಕಾ ತಂಗಿ, ಗೆಳತಿಯರು ನಿಜಕ್ಕೂ ಅಸೂಯೆ ಪಡುತ್ತಾರೆ.

“ಮೀರಾ…. ನಿನ್ನ ಯಜಮಾನ್ರು ಆ ವಿಷಯದಲ್ಲಿ ಪುಣ್ಯಾತ್ಮ ಕಣೆ…. ನಮ್ಮ ಮನೆಯಲ್ಲಿ ಒಂದೊಂದು  ಕಾಫಿಟೀ ಕೊಟ್ಟಾಗಲೂ ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ 108 ಕಣಿಗಳು ತಪ್ಪಿದ್ದಲ್ಲ…..”

ಪ್ರವೀಣ್‌ ಹೇಳುವುದೊಂದೇ ಮಾತು, “ಸಾಯುವವರೆಗೂ ತಿನ್ನುವುದು ತಪ್ಪುವುದಿಲ್ಲ. ಅದಕ್ಕೆ ಯಾಕೆ ಟೀಕೆಟಿಪ್ಪಣಿ ಮಾಡಬೇಕು? 1-1 ದಿನ ಹಾಗೆ ಹೀಗೆ ಇರುತ್ತೆ, ಅದನ್ನು ನಿರ್ಲಕ್ಷಿಸಿದರೆ ಮಾರನೇ ದಿನ ಚೆನ್ನಾಗೇ ಇರುತ್ತೆ.”

ಒಮ್ಮೊಮ್ಮೆ ವೀರಾಳಿಗೆ ತನ್ನ ಅಡುಗೆಯ ಬಗ್ಗೆಯೇ ಬೇಸರ ಬರುತ್ತದೆ. ಆದರೆ ಪ್ರವೀಣ್‌ ಏನೂ ಹೇಳದೆ ಹಾಕಿಕೊಟ್ಟದ್ದನ್ನು ತೆಪ್ಪಗೆ ತಿಂದು, ಇನ್ನಷ್ಟು ಬೇಕು ಬೇಡ ಮಾತ್ರ ಹೇಳುತ್ತಾನೆ. ಇಂಥ ಸ್ಥಿತಪ್ರಜ್ಞತೆ ತನಗೇಕೆ ಇಲ್ಲ ಎಂದು ಅವಳು ಯೋಚಿಸುತ್ತಾಳೆ.

ಯಾವುದಾದರೂ ಸಿನಿಮಾಗೆ ಮೂವರೂ ಒಟ್ಟಿಗೆ ಹೋದಾಗ, ಚಿತ್ರ ಮುಗಿಸಿ ಮನೆಗೆ ಬರುವಾಗ ತಾಯಿಮಗಳು ದಾರಿಯುದ್ದಕ್ಕೂ ಕಾರಿನಲ್ಲಿ ಅದು ಹಾಗಿತ್ತು, ಇದು ಹೀಗಿತ್ತು, ಇದು ಸರಿ ಇಲ್ಲ ಅದು ಸರಿ ಇಲ್ಲ ಎಂದು ಬಯ್ಯುತ್ತಲೇ ಇರುತ್ತಾರೆ. ಆದರೆ ಪ್ರವೀಣ್‌ ಮಾತ್ರ ಸೈಲೆಂಟ್‌. ಏಕೆಂದು ಕೇಳಿದರೆ, “ಏನು ಮಾಡುವುದು….. ಒಮ್ಮೊಮ್ಮೆ ಸಿನಿಮಾ ಕೆಟ್ಟದಾಗಿರುತ್ತದೆ. ನಾವು ಹೋಗಿದ್ದೇ ಟೈಂಪಾಸಿಗಲ್ಲವೇ? ಅದಂತೂ ಆಯ್ತಲ್ಲ…. ಹೋಗ್ಲಿ ಬಿಡಿ.” ಏನು ಹೇಳುವುದು ಇಂಥ ಫಿಲಾಸಫಿಗೆ? ಮೀರಾ ತಲೆ ಚಚ್ಚಿಕೊಳ್ಳುತ್ತಾಳೆ.

ಮತ್ತೊಮ್ಮೆ ಅಂತೂ ವಿಷಯ ವಿಕೋಪಕ್ಕೆ ಹೋಗಿತ್ತು. ಮೀರಾಳ ಹತ್ತಿರದ ಸೋದರತ್ತೆ ಒಬ್ಬರು ಯಾವುದೋ ಕ್ಷುಲ್ಲಕ ಕಾರಣಕ್ಕೆ ಇವರೊಂದಿಗೆ ಜಗಳವಾಡಿಕೊಂಡು ಮಾತುಬಿಟ್ಟರು. ಅವರ ಮನೆಯವರು ಬೆಂಗಳೂರಿಗೆ ಬಂದಾಗೆಲ್ಲ ಇಲ್ಲೇ ಇಳಿದುಕೊಂಡು ಬೇಕಾದ ಲಾಭ ಪಡೆಯುತ್ತಿದ್ದರು. ಈ ಕುರಿತಾಗಿ ಪ್ರವೀಣ್‌ಗೂ ಬಹಳ ಬೇಜಾರಾಯಿತು. ಹಾಗೆಂದು ಅದನ್ನೇ ದೊಡ್ಡದು ಮಾಡಿಕೊಂಡು ಕುಳಿತರಾಯಿತೇ? ಮೀರಾ ಅಂತೂ ಆ ಶಾಕ್‌ನಿಂದ ಹೊರಬರಲು ಬಹಳ ದಿನಗಳಾಯಿತು.

ಆಗ ಪ್ರವೀಣ್‌ ನಾನಾ ಬಗೆಯಲ್ಲಿ ಮೀರಾಳನ್ನು ಸಮಾಧಾನಪಡಿಸುತ್ತಾ, “ಮೀರಾ, ಒಂದೇ ಮನಸ್ಸಿನಿಂದ ನಡೆದದ್ದು ಕೆಟ್ಟ ಕನಸು ಎಂದು ಮರೆತುಬಿಡು. ನಾವು ಯಾರಿಗೆ ಯಾವ ಕೇಡನ್ನೂ ಬಯಸಿಲ್ಲ, ನಮ್ಮಿಂದ ಅವರಿಗೆ ಅನಾನುಕೂಲ ಆಗಿಲ್ಲ. ಏನೋ ಒಂದು ಘಳಿಗೆ, ಅವರು ರೋಷದಲ್ಲಿ ಏನೇನೋ ಮಾತನಾಡಿಬಿಟ್ಟರು. ಹೋಗಲಿ ಅಂತ ಅದನ್ನು ಬಿಟ್ಟು ಬಿಡುವುದೇ ವಾಸಿ. ಯಾರನ್ನು ನಮ್ಮವರು ಅಂತ ಬಹಳ ಹಚ್ಚಿಕೊಂಡಿರುತ್ತೇವೆಯೋ ಅವರೇ ನಮಗೆ ಹೀಗೆ ಮನಸ್ಸು ಮುರಿಯುವ ಹಾಗೆ ಮಾಡಿದ ಮೇಲೆ ಅವರು ನಮ್ಮವರು ಹೇಗಾಗ್ತಾರೆ? ನಮ್ಮವರು ಅಂದ್ರೆ ಅವರು ನಮಗೆ ಪ್ರೀತಿ, ವಾತ್ಸಲ್ಯ, ಸಹಕಾರ ನೀಡುವವರಾಗಿರಬೇಕು.“

ಇಷ್ಟು ವರ್ಷಗಳಿಂದ ಜೊತೆಗಿದ್ದೂ ಅವರು ಬೆನ್ನಿಗೆ ಚೂರಿ ಹಾಕುತ್ತಾರೆ ಅಂದ್ರೆ ಅಂಥವರಿಂದ ದೂರ ಆಗುವುದೇ ಸಂತೋಷ ಅಲ್ವೇ? ಅನಗತ್ಯದ ಇಂಥ ಸಂಬಂಧಗಳಿಂದ ಬಿಡುಗಡೆ ಸಿಕ್ಕಿದ್ದೇ ಒಳ್ಳೆಯದಾಯಿತು ಅಂತ ಭಾವಿಸಬೇಕು. ನಮ್ಮ ಮನಸ್ಸನ್ನು ಅಕಾರಣ ಹಿಂಸೆಪಡಿಸುವ ಇಂಥ ಸಂಬಂಧಗಳಿಂದ ಏನು ಲಾಭ?” ಎಂದು ಮೀರಾಳನ್ನು ಸಂತೈಸಿದ್ದ.

ಹೀಗೆ ಪ್ರವೀಣನ ಕುರಿತಾಗಿ ಚಿಂತಿಸುತ್ತಲೇ ಮೀರಾ ಮನೆಗೆಲಸ ಪೂರೈಸಿದಳು. ತಾನು ಹೇಳಿದ ಮಾತುಗಳನ್ನೇ ಮೀರಾ ಮೆಲುಕು ಹಾಕುತ್ತಿದ್ದಳು. ಇಂಥ ಸಾವಿರಾರು ಉದಾಹರಣೆಗಳಿದ್ದವು. ತಾನೂ ಸಹ ಪ್ರವೀಣ್‌ ತರಹ ನಿರಾಳ ಸ್ವಭಾವ ಹೊಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಮೀರಾ ಅಂದುಕೊಳ್ಳದೇ ಇರುತ್ತಿರಲಿಲ್ಲ. ಪ್ರತಿಯೊಂದು ವಿಷಯವನ್ನೂ ಅದೇ ರೀತಿಯಲ್ಲಿ ತಾನೂ ಅಳೆದುತೂಗಿದ್ದರೆ ಚಿಂತೆಗೆ ಅವಕಾಶವೇ ಇಲ್ಲ ಎಂದುಕೊಳ್ಳುವಳು. ಹಾಗಾಗಿಯೇ ಗಂಡನ ಮನದ ನೆಮ್ಮದಿ, ನಿರಾಳತೆ ಕಂಡು ಅವಳಿಗೆ ಎಷ್ಟೋ ಸಲ ಅಸೂಯೆ ಆಗುತ್ತಿತ್ತು. ಆದರೆ ಆ ಅಸೂಯೆಯಲ್ಲಿ ಅವಳ ಪ್ರೀತಿ, ಪ್ರೇಮ, ಹೆಮ್ಮೆ, ಆದರಗಳೆಲ್ಲ ಅಡಗಿರುತ್ತಿದ್ದವು. ಆದರೆ ಅವಳ ಭಾವುಕ ಮನ ಅಷ್ಟು ಬೇಗ ಎಲ್ಲವನ್ನೂ ಮರೆತು ಬಿಡಲು ಅಥವಾ ಹಗುರವಾಗಿ ತೆಗೆದುಕೊಳ್ಳಲು ಆಗದೆ ಒದ್ದಾಡುತ್ತಿತ್ತು.

ಸಂಜೆ ಪ್ರವೀಣ್‌ 7 ಗಂಟೆ ನಂತರ ಮನೆಗೆ ಬಂದ ಮೇಲೆ ಕಾಫಿ, ತಿಂಡಿ ಮುಗಿಸಿ ಅಡುಗೆಮನೆಯಲ್ಲಿ ಇಣುಕಿ ಹೇಳಿದ, “ಮೀರಾ, ನನಗೆ ಗೊತ್ತಿತ್ತು ಬಿಡು. ನೀನು ಬಡಪಟ್ಟಿಗೆ ಒಪ್ಛುವವಳಲ್ಲ. ಹಠ ಹೂಡಿ ಎಲ್ಲಾ ಕೆಲಸ ಮುಗಿಸಿರುವೆ. ಯಾಕಿಷ್ಟು ಟೆನ್ಶನ್‌ ತಗೋತೀಯಾ?”

“ಮತ್ತೆ….. ಇಡೀ ದಿನ ಗಲೀಜಾಗಿರುವ ಮನೆಯಲ್ಲೇ ಕುಳಿತಿರು ಅಂತೀರಾ? ನಾನು ಒಪ್ಛುವವಳಲ್ಲ ಅಂತಾನೂ ನಿಮಗೆ ಗೊತ್ತಿದೆ.”

“ಹೋಗಲಿ ಬಿಡು. ಈಗ ಮತ್ತೆ ಬೆನ್ನು ನೋವು ಬಂತಾ? ಸ್ವಲ್ಪ ಬಾಮ್ ಏನಾದರೂ ತಿಕ್ಲಾ?”

“ಅದೇನೂ ಇಲ್ಲ ಬಿಡಿ, ಚೆನ್ನಾಗೇ ಇದ್ದೀನಿ,” ಎಂದು ನಿರಾಳವಾಗಿ ಗಂಡನೊಂದಿಗೆ ಪೇಪರ್‌ ನೋಡುತ್ತಾ ಕುಳಿತಳು.

“ಹೋಗಲಿ, ಈಗಲಾದರೂ ಬೆಳಗಿನ ಪ್ರಶ್ನೆಗೆ ಉತ್ತರ ಕೊಡು. ನನ್ನ ಕಂಡು ಅಸೂಯೆ ಯಾಕೆ ಪಡಬೇಕು? ಆಫೀಸಿನಿಂದಲೇ ಮಧ್ಯಾಹ್ನ ಫೋನ್‌ ಮಾಡಿ ಕೇಳೋಣಾಂತಿದ್ದೆ….. ಅಷ್ಟರಲ್ಲಿ ಯಾವುದೋ ಕ್ಲೈಂಟ್‌ ಮೀಟಿಂಗ್‌ ಬಂದು ಅದರಲ್ಲಿ ತಡವಾಗಿ ಹೋಯಿತು.”

“ಅದೇ ಹೇಳಿದ್ನಲ್ಲ…. ಎಲ್ಲಾ ವಿಷಯಗಳನ್ನೂ ನೀವು ಬಹಳ ಕೂಲ್‌ ಆಗಿ ತಗೊಳ್ತೀರಿ. ಪರಿಸ್ಥಿತಿ ಹೇಗೇ ಇರಲಿ, ಅದರಲ್ಲಿ ಹೊಂದಾಣಿಕೆ ಮಾಡಿಕೊಂಡು ಅದರಲ್ಲಿ ಬಹಳ ಇನ್‌ವಾಲ್ವ್‌ ಆಗದೆ ನಗುನಗುತ್ತಾ ಆ ಪ್ರಕರಣ ಮುಗಿಸುತ್ತೀರಿ. ಅದಕ್ಕೆ ನನಗೆ ಅಸೂಯೆ ಅಂದದ್ದು.”

ಪ್ರವೀಣ್‌ ಅವಳನ್ನೇ ಗಾಢವಾಗಿ ನೋಡುತ್ತಾ, “ಜೀವನದಲ್ಲಿ ನಾವು ಅಂದುಕೊಂಡದ್ದೆಲ್ಲ ಎಂದೂ ನಡೆಯೋದಿಲ್ಲ. ಯಾವುದು ಹೇಗೆ ಬರುತ್ತೋ ಅದನ್ನು ಹಾಗೇ ಸ್ವೀಕರಿಸುತ್ತಾ ಹೋಗಬೇಕು. ಇದರ ಆಂಗ್ಲ ನಾಣ್ಣುಡಿ ಕೇಳಿಲ್ಲವೇ? ಟೇಕ್‌ ಲೈಫ್‌ ಆ್ಯಸ್‌ ಇಟ್‌ ಕಮ್ಸ್!”

ಮೀರಾ ಅವನನ್ನೇ ಕಣ್ಣು ಮಿಟಿಕಿಸದೆ ನೋಡುತ್ತಾ ಕುಳಿತುಬಿಟ್ಟಳು. ಸೀದಾ ಸಾದಾ ಸರಳ ಮಾತುಗಳಲ್ಲಿ ಹೇಳಿದ ಅರ್ಥ ಎಷ್ಟು ಗಾಢವಾಗಿದೆ ಎನಿಸಿತು. ಅವಳು ಅದೇ ಮಾತುಗಳನ್ನು ಅರಗಿಸಿಕೊಳ್ಳುತ್ತಿದ್ದಳು. ಪ್ರವೀಣ್‌ ಅಷ್ಟರಲ್ಲಿ ಮತ್ತೆ, “ಇನ್ನು ನಿನ್ನ ಅಸೂಯೆ ಹೋಗಲಿಲ್ಲವೇ?” ಎಂದು ನಕ್ಕಾಗ ಮೀರಾ ತಾನೂ ಜೋರಾಗಿ ನಕ್ಕಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ