“ನನ್ನ ಮಗ ಸೊಸೆಯ ಡೈವೋರ್ಸ್‌ಆಗ್ತಿದೆಯೆಂದು ಯಾರು ಹೇಳಿದರು? ಯಾರು ಹೀಗೆ ಸುದ್ದಿ ಹಬ್ಬಿಸಿದ್ದಾರೊ ಅವರದ್ದೇ ಡೈವೋರ್ಸ್‌ಆಗಿ ಹೋಗಲಿ! ಜನ ಎಲ್ಲೆಲ್ಲಿಂದ ಇಂತಹ ಸುದ್ದಿಗಳನ್ನು ತೆಗೆದುಕೊಂಡು ಬರ್ತಾರೊ ಏನೊ? ಮೊದಲು ಅವರು ತಮ್ಮ ಮನೇಲಿ ಏನು ನಡಿತೀದೆ ನೋಡಲಿ, ನಂತರ ಇನ್ನೊಬ್ಬರ ಬಗ್ಗೆ ಮಾತನಾಡಲಿ. ಯಾರಿಗೆ ಏನು ಮಾತಾಡೋದಿದೆಯೊ, ನನ್ನ ಮುಂದೆ ಬಂದು ಮಾತಾಡಬೇಕು. ಬೆನ್ನ ಹಿಂದೆ ಮಾತಾಡೋದ್ರಿಂದ ಏನು ಲಾಭ?”
ಹೀಗೆ ಸ್ವಲ್ಪ ಹೊತ್ತು ಜೋರಾಗಿ ಕೂಗಾಡಿ ಮಾಲಾ ತಮ್ಮ ಮನೆಗೆ ಹೊರಟುಹೋದರು. ಆದರೆ ಸೊಸೈಟಿಯಲ್ಲಿ ಮಾತನಾಡುವವರಿಗೆ ಅವರೊಂದು ಬಿಸಿಬಿಸಿ ವಿಷಯ ಕೊಟ್ಟು ಹೋಗಿದ್ದರು.
“ನಾನಂತೂ ಆ ವಿಷಯ ಕೇಳಿಸಿಕೊಂಡಿದ್ದೆ. ಮೊನ್ನೆಯಷ್ಟೇ ಮಾತಾಡಿದ್ದನ್ನು ಯಾರೋ ಅವರಿಗೆ ಹೋಗಿ ಹೇಳಿರಬಹುದು. ನಿನ್ನೆ ರಾತ್ರಿ ಮಾಲಾ ಹಾಗೂ ಮಗ ಸೊಸೆ ನಡುವೆ ಜೋರು ಜೋರಾಗಿ ಕೂಗಾಟದ ಶಬ್ದ ಕೇಳಿಸಿತ್ತು. ಅವರ ಮನೆಯಲ್ಲಿ ಇದು ದೈನಂದಿನ ಕಥೆ. ಒಮ್ಮೆ ಅತ್ತೆ ಜೋರಾಗಿ ಅರಚಿದರೆ, ಇನ್ನೊಮ್ಮೆ ಸೊಸೆ ಕೂಗಾಡುತ್ತಾಳೆ, ಅತ್ತೆ ಸೊಸೆಯ ನಿಂದೆ ಮಾಡುತ್ತಿದ್ದರೆ, ಸೊಸೆ ಅತ್ತೆಯ ನಿಂದನೆ ಮಾಡುತ್ತಿದ್ದಳು. ಯಾರೂ ಯಾರಿಗೂ ಕಡಿಮೆ ಏನಿಲ್ಲ,” ಎಲ್ಲರೂ ನೆರೆಮನೆಯ ಮಾಲಾ ವಿರುದ್ಧ ವ್ಯಂಗ್ಯದ ಬಾಣಗಳಿಂದ ಚುಚ್ಚುತ್ತಿದ್ದರು. ಆಶ್ಚರ್ಯದ ಸಂಗತಿಯೆಂದರೆ ಅವರಲ್ಲಿ ಕೆಲವರು ಮಾಲಾರ ಜೊತೆ ಕುಳಿತು ತಿಂಡಿ ತಿನ್ನುತ್ತ ಹರಟೆ ಹೊಡೆಯುತ್ತಿದ್ದರು.
ವೀಣಾ ಹಾಗೂ ನೆರೆಮನೆಯ ರಶ್ಮಿಯ ಕುಟುಂಬದ ನಡುವೆ ಒಳ್ಳೆಯ ಸಂಬಂಧ ಇತ್ತು. ಇಬ್ಬರೂ ತಮ್ಮ ತಮ್ಮ ಕುಟುಂಬಗಳ ಪ್ರತಿಯೊಂದು ಮಾತನ್ನು ಹಂಚಿಕೊಳ್ಳುತ್ತಿದ್ದರು. ಅದೊಂದು ದಿನ ರಶ್ಮಿ ಇನ್ನೊಬ್ಬ ನೆರೆಮನೆಯವಳಿಂದ ಕೆಲವು ಮಾತುಗಳನ್ನು ಕೇಳಿಸಿಕೊಂಡು ದಂಗಾಗಿ ಹೋದಳು. ಕೆಲವು ದಿನಗಳ ಹಿಂದಷ್ಟೇ ಆಕೆ ವೀಣಾಳ ಮುಂದೆ ಮಾತ್ರ ಆ ವಿಷಯ ಹೇಳಿದ್ದಳು. ಯಾರ ಮೇಲೆ ಆಕೆ ನಂಬಿಕೆಯಿಟ್ಟು ತನ್ನ ಅಂತರಂಗದ ವಿಷಯ ಹೇಳಿದ್ದಳೊ ಅದೇ ಗೆಳತಿ ಆ ವಿಷಯವನ್ನು ಬೇರೆಯವರ ಕಿವಿಗೆ ಹಾಕಿದ್ದಳು. ಕ್ರಮೇಣ ರಶ್ಮಿ ಹಾಗೂ ಮನೆಯವರು ವೀಣಾಳ ಮನೆಗೆ ಹೋಗುವುದನ್ನು ನಿಲ್ಲಿಸಿದರು. ವೀಣಾಳ ಒಂದಿಷ್ಟು ನಿರ್ಲಕ್ಷ್ಯತನದ ಪರಿಣಾಮವಾಗಿ ಹಲವು ವರ್ಷಗಳಿಂದ ಇದ್ದ ಮಧುರ ಸಂಬಂಧಕ್ಕೆ ಕಲ್ಲು ಬಿತ್ತು.
ಅಂದಹಾಗೆ, ಯಾವ ಗೆಳತಿಯ ಮುಂದೆ ವೀಣಾ ರಶ್ಮಿಯ ಬಗ್ಗೆ ಅವಹೇಳನಕಾರಿ ವಿಷಯ ಹೇಳಿದ್ದಳೊ, ಅದೇ ಗೆಳತಿ ರಶ್ಮಿಗೆ ಫೋನ್‌ಮಾಡಿ ತಿಳಿಸಿದ್ದಳು.
ಅರ್ಚನಾ ತನ್ನ ಹೊಸ ಮನೆಗೆ ಹೋದಾಗ ನೆರೆಮನೆಯ ಒಬ್ಬಾಕೆ ಮತ್ತೊಬ್ಬ ನೆರೆಮನೆಯ ಮಹಿಳೆಯ ಬಗ್ಗೆ ಎಚ್ಚರಿಸುತ್ತ, “ನೀನು ಆ ಪಕ್ಕದ್ಮನೆಯವಳ ಬಗ್ಗೆ ಎಚ್ಚರದಿಂದಿರು, ಬಹಳ ಚಾಲಾಕಿ ಅವಳು.”
ಅರ್ಚನಾ ಹೇಳಿದಳು, “ಹೌದಾ, ಆ ಹಳ್ಳಿಯವಳ ಥರಾ ಗೌನ್ ಧರಿಸಿರುತ್ತಾಳಲ್ಲಾ….. ಅವಳಾ?”
“ಹೌದು ಅವಳೇ.’
‘ಅರ್ಚನಾ ಸಹಜವಾಗಿ ಹೇಳಿದ ಮಾತು ಅದ್ಹೇಗೆ ಉಪ್ಪು ಖಾರ ಮಸಾಲೆ ರೂಪ ಪಡೆದುಕೊಂಡಿತೊ ಗೊತ್ತೇ ಆಗಲಿಲ್ಲ. ಅದೊಂದು ದಿನ ಅರ್ಚನಾ ತನ್ನ ಮನೆಗೆ ಆ ಮಹಿಳೆಯನ್ನು ಸಮಾರಂಭವೊಂದಕ್ಕೆ ಕರೆದಿದ್ದಳು. ಆಕೆ ಸಮಾರಂಭಕ್ಕೆ ಬಂದು ಅರ್ಚನಾಳ ಮುಂದೆ ನಿಂತು ಹೇಳಿದಳು, “ನಾವು ಹಳ್ಳಿಯವರು. ಎಂತೆಂಥದೊ ಬಟ್ಟೆ ಧರಿಸ್ತೀವಿ. ನಿಮ್ಮಂಥವರು ನಮ್ಮನ್ನು ಕರೆಯದಿರುವುದೇ ಒಳ್ಳೆಯದು.”
ನೆರೆಮನೆಯ ಮಹಿಳೆಯ ಮಾತು ಕೇಳಿ ಅರ್ಚನಾಳಿಗೆ ಏನು ಉತ್ತರ ಕೊಡಬೇಕೊ ಗೊತ್ತೇ ಆಗಲಿಲ್ಲ. ಅಂದಹಾಗೆ ಒಬ್ಬರ ಬಗ್ಗೆ ಇನ್ನೊಬ್ಬರ ಬೆನ್ನ ಹಿಂದೆ ಮಾತನಾಡುವುದರಲ್ಲಿ ಮಹಿಳೆಯರು ಕುಖ್ಯಾತಿ ಪಡೆದಿದ್ದಾರೆ. ತಮ್ಮ ಹೊಟ್ಟೆಯಲ್ಲಿರುವ ಮಾತನ್ನು ಹಾಗೆಯೇ ಬಚ್ಚಿಟ್ಟುಕೊಳ್ಳಲು ಮಹಿಳೆಯರಿಗೆ ಸಾಧ್ಯವೇ ಆಗುವುದಿಲ್ಲ.
ಅವರಿಗೆ ತಮಗಿಂತ ಹೆಚ್ಚಾಗಿ ಇನ್ನೊಬ್ಬರ ಮನೆಯಲ್ಲಿ ಏನು ನಡೆಯುತ್ತಿದೆ ಎನ್ನುದರಲ್ಲಿ ಆಸಕ್ತಿ ಜಾಸ್ತಿ. ಒಬ್ಬರು ಇನ್ನೊಬ್ಬರ ಬಗ್ಗೆ ಮಾತನಾಡುವುದರಲ್ಲಿ ಸಮಯ ಹೇಗೆ ಕಳೆಯುತ್ತೋ ಗೊತ್ತೇ ಆಗುವುದಿಲ್ಲ.
ನಿಂದಾರಸದ ಮಜಾ
ಲೇಖಕರೊಬ್ಬರು ನಿಂದಾರಸದ ಬಗ್ಗೆ ಹೀಗೆ ಬರೆದಿದ್ದಾರೆ. ನಿಂದೆ ಎನ್ನುವ ರಸ ಹೇಗಿದೆಯೆಂದರೆ, ಅದನ್ನು ಕುಡಿಯಲು ಮಹಿಳೆಯರಿಗೆ ಬಹಳ ಖುಷಿಯಾಗುತ್ತದೆ. ಈ ವಿಶ್ವ ದುಂಡಗಿದೆ ಎನ್ನುವ ಸಿದ್ಧಾಂತದ ಮೇರೆಗೆ ನಾಲ್ವರು ಮಹಿಳೆಯರು ಒಬ್ಬರಿಂದೊಬ್ಬರು ಮಾಡುವ ನಿಂದೆಯ ಮಾತುಗಳು 5ನೇ ವ್ಯಕ್ತಿಯ ಮುಖಾಂತರ ಸ್ವತಃ ಅವರಿಗೇ ಹೇಗೆ ಬಂದು ತಲುಪುತ್ತೋ ಅವರಿಗೆ ಗೊತ್ತಾಗುವುದಿಲ್ಲ. ಇದರ ದುಷ್ಪರಿಣಾಮ ಒಮ್ಮೊಮ್ಮೆ ಭಯಾನಕ ರೂಪ ಪಡೆದುಕೊಳ್ಳುತ್ತದೆ.
ಸ್ಮಿತಾಳ ಮನೆಯ ಪಕ್ಕಕ್ಕೆ ಹೊಸಬರು ಯಾರೇ ಬಂದರೂ ಸ್ಮಿತಾ ಅವರನ್ನು ಪರಿಚಯಿಸಿಕೊಂಡು ಮನೆಗೆ ಕರೆದು ತಿಂಡಿ ಕಾಫಿಯ ವ್ಯವಸ್ಥೆ ಮಾಡುತ್ತಾರೆ. ಆಗ ಅಕ್ಕಪಕ್ಕದ ಇತರೆ ಮಹಿಳೆಯರು ಕೂಡ ಬಂದು ಸೇರಿಕೊಳ್ಳುತ್ತಾರೆ. ಕಾಫಿಯ ಸ್ವಾದದ ಜೊತೆಗೆ ಅಕ್ಕಪಕ್ಕದವರ ಬಗ್ಗೆ ಒಂದಿಷ್ಟು ಚರ್ಚೆ ನಡೆಯುವುದು ಸಾಮಾನ್ಯ ಸಂಗತಿ.
ಸ್ಮಿತಾಳ ಆ ಹೊಸ ನೆರೆಮನೆಯಾಕೆ ಬೇರೆ ಕೆಲವು ಮನೆಗೆ ಹೋದಾಗ, ಈ ಹಿಂದೆ ಸ್ಮಿತಾಳ ಜೊತೆ ಆಡಿದ್ದ ಮಾತುಗಳಿಗೆ ಉಪ್ಪು ಖಾರ ಸವರಿ ಬೇರೆಯವರಿಗೆ ಹೇಳುತ್ತಾಳೆ. ಅದರಿಂದ ಅವಳೇನೊ ಸೇಫ್ ಆಗಿರುತ್ತಾಳೆ. ಆದರೆ ಬೇರೆಯವರನ್ನು ಸಿಲುಕಿಸುತ್ತಾ ಹೋಗುತ್ತಾಳೆ.
ಈ ಪ್ರಕಾರದ ಬೆನ್ನ ಹಿಂದಿನ ಮಾತುಕತೆಯಲ್ಲಿ ಉದ್ಯೋಗಸ್ಥ ಮಹಿಳೆಯರು ಪಾಲ್ಗೊಳ್ಳುವುದು ಕಡಿಮೆ. ಆದರೆ ಮನೆಗೆಲಸ ಮುಗಿಸಿ ಅಕ್ಕಪಕ್ಕದವರ ಬಗ್ಗೆ ಮಾತನಾಡುವುದು ಮಹಿಳೆಯರ ಒಂದು ಅಭ್ಯಾಸವೇ ಆಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಅವರ ಯೋಚನೆಯ ವ್ಯಾಪ್ತಿ ಬಹಳ ಸೀಮಿತವಾಗಿರುತ್ತದೆ. ವ್ಯರ್ಥ ಮಾತುಕತೆ ನಡೆಸಲು ಅವರಿಗೆ ಸಾಕಷ್ಟು ಸಮಯ ಇರುತ್ತದೆ. ಎಷ್ಟೋ ಸಲ ಗೊತ್ತಿದ್ದೋ ಗೊತ್ತಿಲ್ಲದೆಯೊ, ಬೇರೆಯವರ ಬಗ್ಗೆ ನಾವು ಆಡಿದ ಕೊಂಕು ಮಾತು, ಕೊನೆಗೆ ಯಾರು ಯಾರದೊ ಮುಖಾಂತರ ನಮ್ಮ ಮುಂದೆಯೇ ಬಂದಾಗ ಸಂಕೋಚದಿಂದ ತಲೆತಗ್ಗಿಸಬೇಕಾಗಿ ಬರುತ್ತದೆ. ನಮ್ಮ ಸ್ಥಿತಿಯನ್ನು ಅರುಹಲು ಮೇಲಿಂದ ಮೇಲೆ ಸ್ಪಷ್ಟೀಕರಣ ಕೊಡಬೇಕಾಗಿ ಬರುತ್ತದೆ. ಹೀಗಾಗಿ ಎಷ್ಟು ಸಾಧ್ಯವೋ ಅಂಥವರಿಂದ ದೂರ ಇರುವುದು ಒಳ್ಳೆಯದು.
ಮಾತಿನ ಮೇಲೆ ನಿಗಾ ಇರಲಿ
ಪರರ ಬಗ್ಗೆ ಬೆನ್ನ ಹಿಂದೆ ಆಡಿಕೊಳ್ಳುವುದು ಬಹಳ ಖುಷಿ ಕೊಡುತ್ತದೆ. ಅದು ನಿಮ್ಮಲ್ಲಿ ನಕಾರಾತ್ಮಕ ವಿಚಾರ ತುಂಬುವುದರ ಜೊತೆಗೆ ಬೇರೆಯವರ ಎದುರು ತಲೆತಗ್ಗಿಸಿ ನಿಲ್ಲಬೇಕಾಗುತ್ತದೆ. ಗೋಡೆಗಳಿಗೂ ಕಿವಿ ಇರುತ್ತದೆ ಎನ್ನುವ ಮಾತಿದೆ. ನೀವು ಬೇರೆಯವರ ಬಗ್ಗೆ ಆಡಿದ ಒಂದು ಸಣ್ಣ ಮಾತು ದೊಡ್ಡ ರೂಪ ಪಡೆದು ಅವರ ತನಕ ಒಮ್ಮಿಲ್ಲೊಮ್ಮೆ ತಲುಪುತ್ತದೆ. ಇಂತಹದರಲ್ಲಿ ನಿಮ್ಮ ಸಂಬಂಧಗಳು ಹದಗೆಡಬಹುದು.
ನೆರೆಮನೆಯವರ ಜೊತೆ ಸೌಹಾರ್ದತೆ ಕಾಯ್ದುಕೊಳ್ಳಿ. ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಬೇಡ, ನಿಮ್ಮ ಬಗೆಗೊ ಯಾರ ಬಳಿಯೂ ವ್ಯರ್ಥ ಮಾತುಗಳನ್ನು ಹೇಳಲು ಹೋಗಬೇಡಿ. ಕುಟುಂಬಕ್ಕೆ ಸಂಬಂಧಪಟ್ಟ ನಿಮ್ಮ ವೈಯಕ್ತಿಕ ಸಮಸ್ಯೆಗೆ ಪಕ್ಕದವರ ಬಳಿ ಪರಿಹಾರ ಕೇಳಿಕೊಂಡು ಹೋಗಬೇಡಿ. ಅವರು ನಿಮ್ಮ ಸಮಸ್ಯೆಗೆ ಪರಿಹಾರವನ್ನಂತೂ ಕೊಡಲಾರರು. ಅದರಿಂದ ಮೋಜು ತೆಗೆದುಕೊಳ್ಳಲು ನೋಡಿದರೆ ಕಷ್ಟ. ನಿಮ್ಮ ಎಂಥ ಸಮಸ್ಯೆಗೆ ಅವರು ಪರಿಹಾರ ಕೊಡಲು ಸಾಧ್ಯವೋ ಅಂಥ ಸಮಸ್ಯೆಗಷ್ಟೇ ಪರಿಹಾರ ಕೇಳಿ. `ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು,’ ಎಂಬ ನಾಣ್ಣುಡಿಯಂತೆ ನಮ್ಮ ಮಾತುಗಳು ಸದಾ ನಯನಾಜೂಕಿನಿಂದ ಕೂಡಿರಬೇಕು.
– ಜಿ. ಪ್ರತಿಭಾ