ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ಪ್ರಾಂತ್ಯದ ಜನರಿಗೆ ಬೇರೆ ಬೇರೆ ರೀತಿಯ ಆಹಾರಗಳು ಇಷ್ಟಾಗುತ್ತವೆ. ಆದರೆ ಭಾರತದಾದ್ಯಂತ ಸ್ನ್ಯಾಕ್ಸ್ ಇಷ್ಟಪಡಲಾಗುತ್ತದೆ. ಸ್ನ್ಯಾಕ್ಸ್ ತಯಾರಿಸುವಾಗ ರುಚಿ ಹಾಗೂ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಲಾಗುತ್ತದೆ. ಆದರೆ ಜನರು ಹೇಳುವುದೇನೆಂದರೆ, ಹುರಿದ ಕರಿದ ಪದಾರ್ಥಗಳೇ ರುಚಿಕರವಾಗಿರುತ್ತವೆ ಅಥವಾ ಅವು ಮಸಾಲೆಯುಕ್ತ ಆಗಿರುವುದು ಅತ್ಯವಶ್ಯ. ಈಗ ಎಂತಹ ಕೆಲವು ಪದಾರ್ಥಗಳಿವೆ ಎಂದರೆ, ಅವುಗಳಿಂದ ನೀವು ತ್ವರಿತವಾಗಿ ಸ್ನ್ಯಾಕ್ಸ್ ತಯಾರಿಸಬಹುದು. ಅವು ಯಾವುದೇ ಸ್ನ್ಯಾಕ್ಸ್ ನ ರುಚಿಗಿಂತ ಕಡಿಮೆ ಏನಿರುವುದಿಲ್ಲ.
ಆದರೆ ಈ ಸ್ನ್ಯಾಕ್ಸ್ ನಲ್ಲಿ ಆರೋಗ್ಯಭರಿತ ಪದಾರ್ಥಗಳನ್ನು ಹಾಕಬೇಕು. ಬಟರ್, ಮೆಯೋನೀಸ್ ಹಾಗೂ ರೀಫೈಂಡ್ ಆಯಿಲ್‌ನ ಹಾಗೆ ಆಲಿವ್ ಆಯಿಲ್, ಸಂಪೂರ್ಣ ಗೋಧಿಯಿಂದ ತಯಾರಿಸಿದ ನೂಡಲ್ಸ್ ಮತ್ತು ಪಾಸ್ತಾದಂತಹ ಬಗೆಬಗೆಯ ಪದಾರ್ಥಗಳನ್ನು ಬಳಸಬಹುದು. ಸಕ್ಕರೆಯ ಬದಲು ಬ್ರೌನ್ ಶುಗರ್, ಮೇಲೆ ಗೋಡಂಬಿ, ಒಣದ್ರಾಕ್ಷಿ ಹಾಕಬಹುದು. ಸಲಾಡ್‌ನ ಹೆವಿ ಡ್ರೆಸಿಂಗ್‌ನ ಬದಲು ಎಕ್ಸ್ ಟ್ರಾ ವರ್ಜಿನ್ ಆಲಿವ್, ಒಣ ಹಣ್ಣುಗಳನ್ನು ಸೇರಿಸಿ.
ನೀವು ಇಷ್ಟಪಟ್ಟರೆ ಪಾಸ್ತಾ ಮತ್ತು ಆಯ್ದ ಡ್ರೈ ಫ್ರೂಟ್ಸ್ ನಿಂದ ಕೆಲವು ರುಚಿಕರ ಸ್ನ್ಯಾಕ್ಸ್ ಸಿದ್ಧಪಡಿಸಬಹುದು. ಚೆನ್ನಾಗಿ ಕುದಿಸಿದರೆ ಸ್ವಾದಿಷ್ಟಕರ ರುಚಿ ಮತ್ತು ಸುವಾಸನೆಯ ಜೊತೆ ಜೊತೆಗೆ ಆರೋಗ್ಯಕರ ಲಾಭ ಪಡೆದುಕೊಳ್ಳಬಹುದು. ಕೆಲವು ಆರೋಗ್ಯಕರ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳಿ.
ಪಾಪ್ ಕಾರ್ನ್ : ಇದರಲ್ಲಿ ನಾರಿನಂಶದ ಜೊತೆ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಕೂಡ ಇರುತ್ತದೆ. ಇದೊಂದು ಸಾಮಾನ್ಯ ಕುರುಕಲು ತಿಂಡಿ ಅನ್ನಿಸಬಹುದು. ಆದರೆ ಇದರಲ್ಲಿ ಸಾಕಷ್ಟು ಪೌಷ್ಟಿಕಾಂಶಗಳು ಇವೆ. ಇತ್ತೀಚಿನ ದಿನಗಳಲ್ಲಿ ಪಾಪ್ ಕಾರ್ನ್ ಬಟರ್ ಮತ್ತು ಕರಿಮೆಣಸಿನ ಜೊತೆಗೆ ತಯಾರಿಸುವ ಪದ್ಧತಿ ಶುರುವಾಗಿದೆ. ಆದರೆ ಇದರಲ್ಲಿರುವ ಹೆಚ್ಚುವರಿ ಬೆಣ್ಣೆ ಆರೋಗ್ಯ ಸಂಬಂಧಿ ಲಾಭಗಳನ್ನು ಕಡಿಮೆ ಮಾಡುತ್ತದೆ. ಬೆಣ್ಣೆಯ ಬದಲಿಗೆ ಆಲಿವ್ ಆಯಿಲ್‌ನ್ನು ಉಪಯೋಗಿಸಬಹುದು.
ಅದರ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿಕೊಳ್ಳಿ. ವಿಶಿಷ್ಟ ಮೈಕ್ರೋವೇವ್‌ನಲ್ಲಿ ಸಿದ್ಧಪಡಿಸುವ ಪಾಪ್ ಕಾರ್ನ್‌ಗೆ ಕೊಬ್ಬಿನಂಶ ಸೇರ್ಪಡೆ ಮಾಡಲಾಗುತ್ತದೆ. ಅಂದಹಾಗೆ ಕೊಬ್ಬಿನ ಜೊತೆ ಜೊತೆಗೆ ಕ್ಯಾಲೋರಿ ಹೆಚ್ಚು ಅಪಾಯವಿರುತ್ತದೆ.
ಪಾಪ್ ಕಾರ್ನ್‌ನ ಮುಖ್ಯ ಪೋಷಕಾಂಶಗಳು ಅದರ ಹೊರಭಾಗದ ಕವಚದಲ್ಲಿ ಇರುತ್ತವೆ. ನಿಮ್ಮ ಮನಸ್ಸು ಮಸಾಲೆಯುಕ್ತ ಪಾಪ್‌ಕಾರ್ನ್‌ನ್ನು ಸವಿಯಬೇಕೆಂದಿದ್ದಲ್ಲಿ ಬ್ರೌನ್ ಶುಗರ್ ಜೊತೆಗೆ ಅದರ ಸಾಸ್ ತಯಾರಿಸಿಕೊಳ್ಳಿ ಮತ್ತು ಚಿಲಿ ಫ್ಲೇಕ್ಸ್ ಹಾಕಿ ಅದರ ಸುವಾಸನೆಯನ್ನು ಹೆಚ್ಚಿಸಿಕೊಳ್ಳಿ. ಈ ಪಾಪ್ ಕಾರ್ನ್ ನಿಮಗೆ ಏಕಕಾಲಕ್ಕೆ ಸಿಹಿ ಮತ್ತು ಉಪ್ಪಿನ ರುಚಿ ಕೊಡುತ್ತವೆ. ರುಚಿಗಾಗಿ ಬಿಳಿ ಸಕ್ಕರೆ ಬದಲು ಬ್ರೌನ್ ಶುಗರ್ ಉಪಯುಕ್ತ ಎನಿಸುತ್ತದೆ.
1 ಕಪ್ ಪಾಪ್ ಕಾರ್ನ್‌ನಲ್ಲಿ ಸುಮಾರು 30-35 ಕ್ಯಾಲೋರಿ ಶಕ್ತಿ ಇರುತ್ತದೆ. ನೀವು ಇಷ್ಟಪಟ್ಟರೆ ಸ್ವಲ್ಪ ಆಲಿವ್ ಆಯಿಲ್‌ನ್ನು ಮೇಲೆ ಸಿಂಪಡಿಸಿಕೊಂಡು ಮೆಡಿಟರೇನಿಯನ್ ರುಚಿಯನ್ನು ಪಡೆಯಬಹುದು.
ನೀವು ಅಡುಗೆಮನೆಗೆ ಹೆಜ್ಜೆ ಇಟ್ಟಾಗ ನಿಮ್ಮ ಎದುರಿಗಿನ ಶೆಲ್ಫಿನಲ್ಲಿ ಈ ಎಲ್ಲ ಸಲಕರಣೆಗಳು ಇದ್ದರೆ ನೀವು ಆರೋಗ್ಯಕರ ಸ್ನ್ಯಾಕ್ಸ್ ನ್ನು ಅವಶ್ಯವಾಗಿ ತಯಾರಿಸಿಕೊಳ್ಳಬಹುದು.
ಪಾಸ್ತಾ : ಇದು ಮೆಡಿಟರೇನಿಯನ್ ರುಚಿಕರ ಪದಾರ್ಥಗಳಲ್ಲಿ ಒಂದು. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೂ ಇದನ್ನು ಬಹಳ ಇಷ್ಟಪಡಲಾಗುತ್ತದೆ. ಪಾಸ್ತಾದಲ್ಲಿ ಆರೋಗ್ಯಕರ ಪದಾರ್ಥಗಳನ್ನು ಸೇರ್ಪಡೆ ಮಾಡಿಕೊಂಡು ಅದನ್ನು ಇನ್ನಷ್ಟು ರುಚಿಕರ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ನಾವು ಪಾಸ್ತಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಣ್ಣೆ ಹಾಗೂ ಮಸಾಲೆಗಳ ಜೊತೆ ಚೀಸ್‌ಕೂಡ ಹಾಕುತ್ತೇವೆ. ಅಂದಹಾಗೆ ಸಾಮಾನ್ಯ ಕುಕ್ಕಿಂಗ್ ಆಯಿಲ್‌ಗೆ ಬದಲಿಯಾಗಿ ಎಕ್ಸ್ ಟ್ರಾ ಲೈಟ್ ಆಲಿವ್ ಆಯಿಲ್ ಹಾಕಿ ಪಾಸ್ತಾವನ್ನು ಭಾರತದ ಜನರಿಗೆ ಇಷ್ಟವಾಗುವ ರೀತಿಯಲ್ಲಿ ತಯಾರಿಸಬಹುದು. ಆಲಿವ್ ಆಯಿಲ್‌ನಲ್ಲಿ ಕರಿದ ಬಳಿಕ ಮೇಲೆ ಆಲಿವ್ ಮತ್ತು ಡ್ರೈ ಪ್ರೂಟ್ಸ್ ಹಾಕಿದರೆ ಕೇವಲ ಸ್ಪ್ಯಾನಿಶ್ ಫ್ಲೇವರ್ ಬರುವುದಷ್ಟೇ ಅಲ್ಲ, ಅದು ಆರೋಗ್ಯಕ್ಕೂ ಉಪಯುಕ್ತವಾಗಿರುತ್ತದೆ. ಈ ಪಾಸ್ತಾದಲ್ಲಿ ನಾರಿನಂಶ ಹಾಗೂ ಇತರೆ ಪೋಷಕಾಂಶಗಳು ಹೇರಳವಾಗಿರುತ್ತವೆ. ಗೋಧಿಯಲ್ಲಿರುವ ಪೋಷಕಾಂಶಗಳು ನಿಮಗೆ ಅದರ ಮೇಲ್ಭಾಗದ ಹೊಟ್ಟು ಹಾಗೂ ಮೊಳಕೆಗಳಿಂದ ದೊರಕುತ್ತವೆ.
ಚೀಸ್ ಹೊರತಾಗಿ ಪಾಸ್ತಾ ನಿಮಗೆ ರುಚಿ ರಹಿತ ಅನಿಸುತ್ತಿದ್ದರೆ, 1 ಬಟ್ಟಲು ಪಾಸ್ತಾದಲ್ಲಿ ಅದರ ಒಂದು ಕ್ಯೂಬ್ ಮಾತ್ರ ಹಾಕಿ. ಮೇಲ್ಭಾಗದಲ್ಲಿ ತರಕಾರಿಗಳನ್ನು ಸೇರಿಸಿ. ಪಾಸ್ತಾ ಸೇವನೆ ನಿಮಗೆ ವಿಶಿಷ್ಟ ಖುಷಿ ಕೊಡುತ್ತದೆ, ಇದರ ಸಾಲ್ಟೀ ಟೆಕ್‌ಸ್ಚರ್
ಯಾರನ್ನಾದರೂ ಮೋಹಿತಗೊಳಿಸಬಹುದು. ಒಂದು ವೇಳೆ ಪಾಸ್ತಾದಲ್ಲಿ ಟ್ವಿಸ್ಟ್ ತರಬೇಕೆಂದಿದ್ದರೆ ಗ್ರಿಲ್ ಮಾಡಿದ ತರಕಾರಿಗಳನ್ನು ಹಾಕಿ ನೋಡಿ. ಮೊಸರನ್ನು ಕಡೆದು ಪಾಸ್ತಾಗೆ ವಿಭಿನ್ನ ರುಚಿ ಕೊಡಬಹುದು. ಮೇಲೆ ನಿಂಬೆ ಹಾಗೂ ಮೆಣಸಿನಪುಡಿ ಸಿಂಪಡಿಸಿದರೆ ಅದಕ್ಕೆ ಮತ್ತಷ್ಟು ವಿಶಿಷ್ಟ ಸ್ವಾದ ನೀಡುತ್ತದೆ. ಪಾಸ್ತಾ ತಯಾರಿಸುವ ಬೇರೆ ಬೇರೆ ವಿಧಾನಗಳಿವೆ. ಉದಾಹರಣೆಗೆ ಪಾಸ್ತಾವನ್ನು ಸಲಾಡ್, ಹಣ್ಣುಗಳು ಮತ್ತು ಡ್ರೈ ಫ್ರೂಟ್ಸ್ ಜೊತೆಗೆ ಸೇವಿಸಬಹುದು.
ಮಸಾಲಾ ಪಾಸ್ತಾ
ತರಕಾರಿ ಹಾಗೂ ಭಾರತೀಯ ಮಸಾಲೆಗಳಿಂದ ತಯಾರಿಸಿದ ರುಚಿಕರ ಹಾಗೂ ಆರೋಗ್ಯಕರ ಪಾಸ್ತಾದ ಈ ಸ್ಯಾಂಪಲ್ ನೋಡಿ.
ಸಾಮಗ್ರಿ : 2 ಕಪ್ ಪಾಸ್ತಾ, 2 ಈರುಳ್ಳಿ, 1 ಕ್ಯಾಪ್ಸಿಕಂ, 2-3 ಹುಳಿ ಟೊಮೇಟೊ, 4-5 ಹಸಿಮೆಣಸು, 1 ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಅರ್ಧ ಸೌಟು ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ಧನಿಯಾ, ಕರಿಬೇವು, 8-10 ಎಸಳು ಜಜ್ಜಿದ ಬೆಳ್ಳುಳ್ಳಿ, 2 ಚಿಟಕಿ ಅರಿಶಿನ.
ವಿಧಾನ : ಒಂದು ಪಾತ್ರೆಯಲ್ಲಿ 4 ಕಪ್ ನೀರು ಕಾಯಿಸಿ. ಅದು ಕುದಿಯುತ್ತಿದ್ದಂತೆ ತುಸು ಉಪ್ಪು, ಎಣ್ಣೆ, ಪಾಸ್ತಾ ಹಾಕಿ ಮಂದ ಉರಿಯಲ್ಲಿ ಬೇಯಿಸಿ. ಇದು ಬೆಂದಿದೆ ಎಂದು ಖಾತ್ರಿಪಡಿಸಿಕೊಂಡು ಕೆಳಗಿಳಿಸಿ ನೀರು ಬಸಿಯಿರಿ. ಪಾಸ್ತಾ ಭರಿತ ಸ್ಟೀಲ್ ಜರಡಿಯನ್ನು ಕೊಳಾಯಿ ನೀರಿನಡಿ ನೇರ ಹಿಡಿದು ತೊಳೆಯಿರಿ. ಮೊದಲು ಎಲ್ಲಾ ತರಕಾರಿ ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಆಮೇಲೆ ಹೆಚ್ಚಿದ ಶುಂಠಿ, ಹಸಿಮೆಣಸು ಹಾಕಿ ಬಾಡಿಸಿ. ನಂತರ ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ, ಆಮೇಲೆ ಟೊಮೇಟೊ ಹಾಕಿ ಬಾಡಿಸಿ. ನಂತರ ಉಪ್ಪು, ಅರಿಶಿನ, ಖಾರ, ಗರಂಮಸಾಲ ಸೇರಿಸಿ ಕೆದಕಬೇಕು. 5-6 ನಿಮಿಷಗಳ ನಂತರ ಪಾಸ್ತಾ ಹಾಕಿ ಕೈಯಾಡಿಸಿ. ಕೆಳಗಿಳಿಸಿದ ಮೇಲೆ ಚಿತ್ರದಲ್ಲಿರುವಂತೆ ಕೊ.ಸೊಪ್ಪಿನಿಂದ ಅಲಂಕರಿಸಿ ಬಿಸಿಯಾಗಿ ಸವಿಯಲು ಕೊಡಿ.
ಡ್ರೈ ಫ್ರೂಟ್ಸ್ : ಪ್ರತಿ ಅಡುಗೆಮನೆಯಲ್ಲೂ ಇವು ಇದ್ದೇ ಇರುತ್ತವೆ. ಅವುಗಳಲ್ಲಿ ಸಾಕಷ್ಟು ಆರೋಗ್ಯಕರ ಪೋಷಕಾಂಶಗಳು ದೊರಕುತ್ತವೆ. ಬಾದಾಮಿ, ಪಿಸ್ತಾ ಮತ್ತು ಅಖರೋಟಿನಿಂದ ತಯಾರಿಸಿದ ಅದೆಷ್ಟೂ ಸಿಹಿ ತಿನಿಸುಗಳು ಬಾಯಲ್ಲಿ ನೀರೂರಿಸುತ್ತವೆ. ಇವು ಅದ್ಭುತ ಸ್ನ್ಯಾಕ್ಸ್. ಸಲಾಡ್ ಆಗಿರಬಹುದು ಅಥವಾ ಯಾವುದೇ ಬಗೆಯ ರೈಸ್ ಐಟಂಗಳಲ್ಲಿ ಇವನ್ನು ಹಾಕಿ ನೋಡಿ. ಆ ಪದಾರ್ಥ ಮತ್ತಷ್ಟು ರುಚಿ ಪಡೆಯುವುದರಲ್ಲಿ ಸಂದೇಹವೇ ಇಲ್ಲ. ಹುರಿದ ಅಥವಾ ಉಪ್ಪು ಬೆರೆತ ಡ್ರೈ ಫ್ರೂಟ್ಸ್ ನಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ. ಬಾದಾಮಿ, ಒಣದ್ರಾಕ್ಷಿ, ಪಿಸ್ತಾದಲ್ಲಿ ಕೊಲೆಸ್ಟ್ರಾಲ್ ಸೂಕ್ತ ಪ್ರಮಾಣದಲ್ಲಿ ಇರುತ್ತದೆ. ಅದರ ಜೊತೆಗೆ ವಿಟಮಿನ್ ಮತ್ತು ಮಿನರಲ್ಸ್ ಕೂಡ ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ. ದೈನಂದಿನ ತಿಂಡಿ ಊಟ ಬದಲಾಗಿ ನೇರ ಡ್ರೈ ಫ್ರೂಟ್ಸ್ ಸೇವನೆ ತೂಕವನ್ನು ನಿಯಂತ್ರಣದಲ್ಲಿಡುವ ಒಂದು ನೈಸರ್ಗಿಕ ಉಪಾಯ. ಡ್ರೈ ಫ್ರೂಟ್ಸ್ ನ ನೈಸರ್ಗಿಕ ರುಚಿ ಸವಿಯಲು ಅವನ್ನು ಮೂಲರೂಪದಲ್ಲಿಯೇ ಸೇವಿಸಿ. ಹುರಿಯುವುದರಿಂದ ಕೂಡ ಅವುಗಳಿಗೆ ವಿಶಿಷ್ಟ ರುಚಿ ಬರುತ್ತದೆ.
ಬಾದಾಮಿ : ಪೋಷಕಾಂಶಗಳಿಂದ ಭರ್ತಿಯಾಗಿರುವ ಬಾದಾಮಿ ದೇಹದ ಕೊಬ್ಬನ್ನು ನಿಯಂತ್ರಣದಲ್ಲಿ ಇಡುವುದರ ಜೊತೆಗೆ ಅದು ಹೃದಯ ಹಿತೈಷಿಯಾಗಿಯೂ ಕೆಲಸ ಮಾಡುತ್ತದೆ.
ಪಿಸ್ತಾ : ಇದೊಂದು ಅಮೂಲ್ಯ ಡ್ರೈ ಫ್ರೂಟ್ ಆಗಿದೆ. ಇದರಲ್ಲಿ ಹಲವು ಬಗೆಯ ಖನಿಜಾಂಶಗಳು ಅಂದರೆ ಕಾಪರ್, ಮ್ಯಾಂಗನೀಸ್, ಪೊಟ್ಯಾಶಿಯಂ, ಕ್ಯಾಲ್ಶಿಯಂ, ಕೊಬ್ಬಿನಂಶ, ಮೆಗ್ನಿಷಿಯಂ, ಝಿಂಕ್ ಮುಂತಾದವು ಸಾಕಷ್ಟು ಪ್ರಮಾಣದಲ್ಲಿರುತ್ತವೆ.
ಅಖರೋಟ್ : ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಇದು ನೆರವಾಗುತ್ತದೆ. ಇದು ನಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಮಧುಮೇಹದ ಮೇಲೂ ನಿಯಂತ್ರಣ ಹೇರುತ್ತದೆ.
– ರಂಜಿತಾ ಪ್ರಭು
ಗಮನದಲ್ಲಿರಲಿ
ದಪ್ಪ ಮೆಣಸಿನಕಾಯಿಯ ಜೊತೆಗೆ ಎಷ್ಟು ಬಗೆಯ ತರಕಾರಿಗಳನ್ನು ಬೇಕಾದರೂ ಹಾಕಬಹುದು. ಅದರಿಂದ ರುಚಿಯ ಜೊತೆಗೆ ಪೋಷಣೆ ಕೂಡ ಲಭಿಸುತ್ತದೆ.
ನೀವು ಇದರಲ್ಲಿ ಪಾವ್ ಭಾಜಿ, ಗರಂಮಸಾಲಾ ಯಾವುದನ್ನಾದರೂ ಉಪಯೋಗಿಸಬಹುದು.
ಪಾಸ್ತಾ ಬೇಯಿಸುವಾಗ ಅದರಲ್ಲಿ ಆಯಿಲ್ ಬೆರೆಸುವುದರಿಂದ, ಅವು ಪರಸ್ಪರ ಅಂಟಿಕೊಳ್ಳುವುದಿಲ್ಲ ಹಾಗೂ ಮುರಿಯುವುದೂ ಇಲ್ಲ.