ಬೆಂಗಾಲಿ ಸ್ಟ್ಯೂ
ಸಾಮಗ್ರಿ : 2 ಉದ್ದಿನ ವಡೆ, ಅರ್ಧ ಕಪ್ ಬದನೆ ಹೋಳು, 1 ಸಣ್ಣ ಆಲೂಗಡ್ಡೆ, ಒಂದಿಷ್ಟು ಹೆಚ್ಚಿದ ಬೀನ್ಸ್, ಮೂಲಂಗಿ ತುರಿ, 1 ಕಪ್
ಸುವರ್ಣಗೆಡ್ಡೆ ಹೋಳು, 2 ಹಾಗಲಕಾಯಿ, 1-2 ನುಗ್ಗೇಕಾಯಿ, 1 ಬಾಳೇಕಾಯಿ, ರುಚಿಗೆ ತಕ್ಕಷ್ಟು ಉಪ್ಪುಖಾರ, ಸಕ್ಕರೆ, ಬೆಂಗಾಲಿ ಪಂಚ್ ಮಸಾಲ (ರೆಡಿಮೇಡ್ ಲಭ್ಯ), ತುಸು ಶುಂಠಿಯ ಪೇಸ್ಟ್, 1-2 ಪಲಾವ್ ಎಲೆ,
ಒಗ್ಗರಣೆಗೆ ಸಾಮಗ್ರಿ : ಎಣ್ಣೆ, ಅರ್ಧ ಚಮಚ ಸಾಸುವೆಯ ಪೇಸ್ಟ್.
ವಿಧಾನ : ಮೊದಲು ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಕೊಡಿ. ಇದಕ್ಕೆ ಮೊದಲು ಹೆಚ್ಚಿದ ಹಾಗಲ, ನುಗ್ಗೆಕಾಯಿ…. ಹೀಗೆ ಒಂದೊಂದಾಗಿ ಎಲ್ಲಾ ತರಕಾರಿ ಹಾಕಿ. ಚೆನ್ನಾಗಿ ಬಾಡಿಸಿ, ನೀರು ಚಿಮುಕಿಸಿ ಬೇಯಲು ಬಿಡಿ. ಮಧ್ಯೆ ಮಧ್ಯೆ ಕೈಯಾಡಿಸುತ್ತಾ, ನೀರು ಚಿಮುಕಿಸುತ್ತಾ ಚೆನ್ನಾಗಿ ಬೇಯಿಸಿ. ನಂತರ ಅರಿಶಿನ, ಉಪ್ಪು, ಖಾರ, ಸಕ್ಕರೆ, ಶುಂಠಿ ಪೇಸ್ಟ್, ಎಲ್ಲಾ ಬೆರೆಸಿ. ಅರ್ಧ ಲೋಟ ನೀರು ಹಾಕಿ ಕೆದಕಿ ಕುದಿಯಲು ಬಿಡಿ. ಇನ್ನೊಂದು ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸುವೆ ಪೇಸ್ಟ್, ಪಂಚ್ ಮಸಾಲ ಹಾಕಿ ಕೆದಕಿ ಈ ಸ್ಟ್ಯೂಗೆ ಬೆರೆಸಿಕೊಳ್ಳಿ. ಎಲ್ಲ ಕುದ್ದು ಗ್ರೇವಿಯಂತೆ ಆದಾಗ ಕೆಳಗಿಳಿಸಿ, ಬಿಸಿಬಿಸಿಯಾಗಿ ಅನ್ನದ ಜೊತೆ ಸವಿಯಲು ಕೊಡಿ.
ತೊಂಡೆ ಮಸಾಲೆ
ಸಾಮಗ್ರಿ : 500 ಗ್ರಾಂ ತೊಂಡೆಕಾಯಿ, 100 ಗ್ರಾಂ ಪನೀರ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪಂಚ್ ಮಸಾಲ, ಸಕ್ಕರೆ, ಶುಂಠಿಯ ಪೇಸ್ಟ್, ತುಸು ಅರಿಶಿನ, 1-2 ಇಡಿಯಾದ ಒಣಮೆಣಸು, ಅರ್ಧ ಸೌಟು ಎಣ್ಣೆ, ಒಗ್ಗರಣೆ ಸಾಮಗ್ರಿ.
ವಿಧಾನ : ತೊಂಡೆಗಳ ಮೇಲ್ಭಾಗ ಕತ್ತರಿಸಿ, ಅದರ ಒಳಭಾಗ ಟೊಳ್ಳಾಗುವಂತೆ ಬೀಜ, ತಿರುಳು ತೆಗೆದುಬಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಶುಂಠಿ ಪೇಸ್ಟ್, ಉಪ್ಪು ಖಾರ, ಅರಿಶಿನ, ತುರಿದ ಪನೀರ್, ತೊಂಡೆಯ ತಿರುಳು ಬೀಜ ಇತ್ಯಾದಿ ಎಲ್ಲಾ ಹಾಕಿ ಬಾಡಿಸಿ. ಈ ಮಿಶ್ರಣವನ್ನು ಕೆಳಗಿಳಿಸಿ ಆರಲು ಬಿಡಿ. ಟೊಳ್ಳು ತೊಂಡೆಗೆ ಇದನ್ನು ತುಂಬಿಸಿ. ಮತ್ತೆ ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈ ತೊಂಡೆಗಳನ್ನು ಇಡಿಯಾಗಿ ಫ್ರೈ ಮಾಡಬೇಕು. ಮತ್ತಷ್ಟು ಉಪ್ಪು, ಪಂಚ್
ಮಸಾಲ, ಒಣ ಮೆಣಸಿನಕಾಯಿ ಹಾಕಿ ಎಲ್ಲವನ್ನೂ ಒಟ್ಟಾಗಿ ಬಾಡಿಸಿ ಕೆಳಗಿಳಿಸಿ. ಬಿಸಿಯಾಗಿ ಚಪಾತಿ, ಅನ್ನದ ಜೊತೆ ಸವಿಯಲು ಕೊಡಿ.
ಬಟಾಣಿ ಉಸುಲಿ
ಸಾಮಗ್ರಿ : 1 ಕಪ್ ಹಸಿ ಬಟಾಣಿ, ಅರ್ಧರ್ಧ ಕಪ್ ಹೆಚ್ಚಿದ ಈರುಳ್ಳಿ, ಟೊಮೇಟೊ, ತೆಂಗಿನ ತುರಿ, ಒಗ್ಗರಣೆ ಸಾಮಗ್ರಿ, ಎಣ್ಣೆ, ಉಪ್ಪು, ಖಾರ, ಅರಿಶಿನ.
ವಿಧಾನ : ಮೊದಲು ಬಟಾಣಿ ಬೇಯಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಶುಂಠಿ ಪೇಸ್ಟ್, ಉಪ್ಪು ಖಾರ, ಅರಿಶಿನ ಎಲ್ಲಾ ಹಾಕಿ ಕೆದಕಬೇಕು. ಕೊನೆಗೆ ಬೆಂದ ಬಟಾಣಿ, ತೆಂಗಿನ ತುರಿ ಸೇರಿಸಿ ಕೆಳಗಿಳಿಸಿ. ಇದಕ್ಕೆ ಕೊ.ಸೊಪ್ಪು ಉದುರಿಸಿ ಸವಿಯಲು ಕೊಡಿ.
ಸ್ಟಫ್ಡ್ ಹೀರೇಕಾಯಿ
ಸಾಮಗ್ರಿ : 250 ಗ್ರಾಂ ಸಣ್ಣ ಗಾತ್ರದ ತುಪ್ಪದ ಹೀರೇಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಸೋಂಪಿನ ಪುಡಿ, ಅಮ್ಚೂರ್ ಪೌಡರ್, ಅರಿಶಿನ. ಒಗ್ಗರಣೆಗಾಗಿ ತುಸು ಸಾಸುವೆ ಎಣ್ಣೆ, 4 ಲವಂಗ, 4 ಕಾಳು ಮೆಣಸು, 1 ತುಂಡು ದಾಲ್ಚಿನ್ನಿ, 2 ಏಲಕ್ಕಿ, 1-2 ಪಲಾವ್ ಎಲೆ.
ವಿಧಾನ : ಹೀರೇಕಾಯಿಯ ಸಿಪ್ಪೆ ಹೆರೆದು ಶುಚಿ ಮಾಡಿ. ಅದರ ಮೇಲೆ, ಕೆಳಗಿನ ಭಾಗ ಕತ್ತರಿಸಿ. ಇದನ್ನು 2-2 ಇಂಚಿನ ಹೋಳಾಗಿಸಿ. ಒಂದು ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಎಲ್ಲಾ ಮಸಾಲೆ ಹಾಕಿ ಕೆದಕಿ ಕೆಳಗಿಳಿಸಿ. ಅಡಿ ಭಾಗ ಬಿಟ್ಟುಕೊಳ್ಳದಂತೆ ಮೇಲಿನಿಂದ ಉದ್ದಕ್ಕೆ ಸೀಳಿಕೊಂಡು ಮಸಾಲೆ ತುಂಬಿಸಿ. ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಕೊಡಿ. ಇವನ್ನು ಇಡಿಯಾಗಿ ಅದಕ್ಕೆ ಹಾಕಿ ಬಾಡಿಸಿ. ಚೆನ್ನಾಗಿ ಬೆಂದಾಗ ಕೆಳಗಿಳಿಸಿ, ಸಲಾಡ್ ಜೊತೆ ಸವಿಯಲು ಕೊಡಿ.
ಸ್ಪೆಷಲ್ ದಾಲ್
ಸಾಮಗ್ರಿ : 100 ಗ್ರಾಂ ಕಡಲೆಬೇಳೆ, 1 ಗಿಟುಕು ತೆಂಗಿನ ತುರಿ, 1 ಸಣ್ಣ ಶುಂಠಿ, 2-3 ಲವಂಗ, 2-3 ಇಡಿ ಒಣ ಮೆಣಸಿನಕಾಯಿ, 1-2 ಏಲಕ್ಕಿ, 1 ತುಂಡು ಚಕ್ಕೆ, ತುಸು ಜೀರಿಗೆ, 1-2 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, 2 ಚಿಟಕಿ ಅರಿಶಿನ.
ವಿಧಾನ : ಕುಕ್ಕರ್‌ನಲ್ಲಿ ಕಡಲೆಬೇಳೆ ಬೇಯಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಒಗ್ಗರಣೆ ಕೊಡಿ. ತುಂಡರಿಸಿದ ಒಣ ಮೆಣಸು, ಹಸಿ ಮೆಣಸು, ಹಾಕಿ ಬಾಡಿಸಿ. ಆಮೇಲೆ ಹೆಚ್ಚಿದ ಹಸಿ ಶುಂಠಿ, ತೆಂಗಿನ ತುರಿ ಸೇರಿಸಿ. ನಂತರ ಇದಕ್ಕೆ ಉಪ್ಪು, ಖಾರ, ಸಕ್ಕರೆ ಸೇರಿಸಿ. ನೀರಿನ ಸಮೇತ ಬೆಂದ ಬೇಳೆ ಬೆರೆಸಿ ಕುದಿಸಬೇಕು. ಕೊನೆಯಲ್ಲಿ ಒಂದಿಷ್ಟು ತುಂಡರಿಸಿದ ತೆಂಗಿನ ಚೂರು ಹಾಕಿ. ಈ ದಾಲ್ ಬಿಸಿ ಚಪಾತಿ, ಅನ್ನಕ್ಕೆ ಸೂಟ್ ಆಗುತ್ತದೆ.
ಮಸಾಲೆ ಬದನೆ
ಸಾಮಗ್ರಿ : ದೊಡ್ಡ ಗಾತ್ರದ 1 ಗುಂಡು ಬಂದನೆ, ಅರ್ಧ ಕಪ್ ಅಕ್ಕಿಹಿಟ್ಟು, ತುಸು ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಕರಿಯಲು ಎಣ್ಣೆ.
ವಿಧಾನ : ಮೊದಲು ಬದನೆಯನ್ನು ಬಿಲ್ಲೆಗಳಾಗಿಸಿ. ಇದರ ಮೇಲೆ ಉಪ್ಪು, ಖಾರ, ಅರಿಶಿನ ಉದುರಿಸಿ. ಸ್ವಲ್ಪ ಹೊತ್ತು ಹಾಗೆ ಇರಿಸಿ, ಅಕ್ಕಿಹಿಟ್ಟಲ್ಲಿ ಹೊರಳಿಸಿ ಎಣ್ಣೆಗೆ ಹಾಕಿ ಕರಿಯಿರಿ. ಬಿಸಿ ಇರುವಾಗಲೇ ಕಾಫಿ, ಟೀ ಜೊತೆ ಸವಿಯಿರಿ.
ಸೀಮೆ ಎಲೆ ರೋಲ್ಸ್
ಮೂಲ ಸಾಮಗ್ರಿ : 2 ಕಪ್ ಕಡಲೆಹಿಟ್ಟು, ಸೀಮೆಗೆಡ್ಡೆಯ 3-4 ಎಲೆಗಳು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಯಲು ಎಣ್ಣೆ.
ಹೂರಣದ ಸಾಮಗ್ರಿ : ಅರ್ಧರ್ಧ ಕಪ್ ಬೆಂದ ಕಾಬೂಲ್ ಕಡಲೆಕಾಳು, ಬಟಾಣಿ, ಕ್ಯಾರೆಟ್ ತುರಿ, ಹೆಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಣಿಸೇ ರಸ.
ವಿಧಾನ : ಹೂರಣದ ಎಲ್ಲಾ ಸಾಮಗ್ರಿ ಬೆರೆಸಿ, ಲಘುವಾಗಿ ಮಸೆಯಿರಿ. ಮೂಲ ಸಾಮಗ್ರಿ ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಗಟ್ಟಿಯಾಗಿಸಿ. ನಂತರ ಸೀಮೆಗೆಡ್ಡೆ ಎಲೆಗಳನ್ನು ತೊಳೆದು ಶುಚಿಗೊಳಿಸಿ, ಅದರ ಮೇಲೆ ಒಂದು ಪದರ ಕಡಲೆಹಿಟ್ಟಿನ ಮಿಶ್ರಣ ಹರಡಿ. ಇದರ ಮೇಲೆ ಹೂರಣ ಮಿಶ್ರಣದ ಒಂದು ಪದರ ಬರಲಿ. ಇದನ್ನು ಸುರುಳಿ ಸುತ್ತಿ ಬಿಟ್ಟುಕೊಳ್ಳದಂತೆ ಟೂಥ್ ಪಿಕ್ ಸಿಗಿಸಿಡಿ. ನಂತರ ಇದನ್ನು ಇಡ್ಲಿ ತರಹ ಆವಿಯಲ್ಲಿ ಬೇಯಿಸಿ. ಉಳಿದ ಕಡಲೆಹಿಟ್ಟಿಗೆ ಉಪ್ಪುಖಾರ ಹಾಕಿ ಬೋಂಡ ತರಹ ಮಿಶ್ರಣ ಕಲಸಿ. ಇದರಲ್ಲಿ ಆವಿಯಲ್ಲಿ ಬೆಂದ ಸುರುಳಿಗಳನ್ನು ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಟೂಥ್ ಪಿಕ್ ತೆಗೆದು ನಂತರ ಸವಿಯಲು ಕೊಡಿ.
ತೆಂಗಿನ ಲಡ್ಡು
ಸಾಮಗ್ರಿ : 1 ತೆಂಗಿನಕಾಯಿ, 18-20 ದ್ರಾಕ್ಷಿ, 18-20 ಗೋಡಂಬಿ, 1 ಕಪ್ ಸಕ್ಕರೆ, ಅರ್ಧ ಕಪ್ ಮಿಲ್ಕ್ ಪೌಡರ್, ಅರ್ಧ ಸಣ್ಣ ಚಮಚ ಏಲಕ್ಕಿ ಪುಡಿ, 1 ಕಪ್ ಖೋವಾ, ಅರ್ಧ ಕಪ್ ಕಂಡೆನ್ಸ್ಡ್ ಮಿಲ್ಕ್, ಅರ್ಧ ಕಪ್ ತುಪ್ಪ.
ವಿಧಾನ : ಮೊದಲು ತೆಂಗಿನಕಾಯಿ ತುರಿದು, ಅದನ್ನು ಮಿಕ್ಸಿಗೆ ಹಾಕಿ. ಕಾದಾರಿದ ಹಾಲು ಬೆರೆಸಿ ಗಟ್ಟಿ ತೆಂಗಿನಹಾಲು ಸಿದ್ಧಪಡಿಸಿ. ಒಂದು ಪ್ಯಾನಿನಲ್ಲಿ ತುಪ್ಪು ಬಿಸಿ ಮಾಡಿ, ದ್ರಾಕ್ಷಿ ಗೋಡಂಬಿ ಹುರಿದು ತೆಗೆಯಿರಿ. ಇದಕ್ಕೆ ತೆಂಗಿನ ಹಾಲು ಬೆರೆಸಿ ಮಂದ ಉರಿಯಲ್ಲಿ ಕೆದಕುತ್ತಾ ಇರಿ. ಸಾಕಷ್ಟು ಗಟ್ಟಿಯಾದ ಮೇಲೆ ಸಕ್ಕರೆ, ಕಂಡೆನ್ಸ್ಡ್ ಮಿಲ್ಕ್ ಬೆರೆಸಿ. ಇದನ್ನು ಕೆದುಕುತ್ತಾ, ನಡುನಡುವೆ ತುಪ್ಪ ಬೆರೆಸುತ್ತಿರಿ. ಆಮೇಲೆ ಏಲಕ್ಕಿಪುಡಿ, ಹಾಲಿನಪುಡಿ ಹಾಕಿ ಕೆದಕಬೇಕು. ಕೆಳಗಿಳಿಸಿ ಆರಲು ಬಿಡಿ. ಆಮೇಲೆ ಖೋವಾ ತೆಗೆದುಕೊಂಡು ಚೆನ್ನಾಗಿ ಮಸೆದು ಸಣ್ಣ ನಿಂಬೆ ಗಾತ್ರ ಉಂಡೆ ಮಾಡಿಡಿ. ತೆಂಗಿನ ಮಿಶ್ರಣದಿಂದ ಅದಕ್ಕಿಂತಲೂ ದೊಡ್ಡ ಗಾತ್ರದ ಉಂಡೆಗಳನ್ನು ಮಾಡಿ, ಅಂಗೈ ಮೇಲೆ ಜಿಡ್ಡು ಸವರಿ ಚಪ್ಪಟೆ ತಟ್ಟಿಕೊಳ್ಳಿ. ಮಧ್ಯೆ ಖೋವಾ ಉಂಡೆ ಇರಿಸಿ, ತುಪ್ಪದಲ್ಲಿ ಹುರಿದ 2-2 ಗೋಡಂಬಿ ದ್ರಾಕ್ಷಿ ಹಾಕಿ ನಿಧಾನವಾಗಿ ಲಡ್ಡು ಕಟ್ಟಬೇಕು. ನಂತರ ಈ ಉಂಡೆಗಳನ್ನು ತೆಂಗಿನ ತುರಿಯಲ್ಲಿ ಹೊರಳಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಸ್ಪೆಷಲ್ ಪಾಯಸ
ಸಾಮಗ್ರಿ : ಅರ್ಧ ಕಪ್ ಸಣ್ಣಕ್ಕಿ, 1 ಲೀ. ಗಟ್ಟಿ ಹಾಲು, 1 ಕಪ್ ಸಕ್ಕರೆ, ತುಸು ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು, ಅರ್ಧ ಸೌಟು ತುಪ್ಪ.
ವಿಧಾನ : ಒಂದು ದಪ್ಪ ತಳದ ಸ್ಟೀಲ್ ಪಾತ್ರೆಯಲ್ಲಿ ಹಾಲು ಕಾಯಲು ಇರಿಸಿ. ಹಾಲು ಕಾದಂತೆ ಮಂದ ಉರಿ ಮಾಡಿ, ಕುದಿಯಲು ಬಿಡಿ. ಏಲಕ್ಕಿ ಪುಡಿ ಸೇರಿಸಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ದ್ರಾಕ್ಷಿ ಗೋಡಂಬಿ ಹುರಿದು ತೆಗೆಯಿರಿ. ಅದರಲ್ಲಿ ಅಕ್ಕಿ ಹಾಕಿ ಹುರಿಯಿರಿ. ಆಮೇಲೆ ಇದನ್ನು ತುಪ್ಪದ ಸಮೇತ ಹಾಲಿಗೆ ಬೆರೆಸಿ ಬೇಯಲು ಬಿಡಿ. ಮುಕ್ಕಾಲು ಬೆಂದಾಗ ಸಕ್ಕರೆ, ದ್ರಾಕ್ಷಿ ಗೋಡಂಬಿ ಹಾಕಿ ಕೈಯಾಡಿಸಿ. ಚೆನ್ನಾಗಿ ಬೆಂದು ಹಾಲು ಸಾಕಷ್ಟು ಹಿಂಗಿದಾಗ ಕೆಳಗಿಳಿಸಿ. ಈ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಮಾಡಿ ಸವಿಯಿರಿ.
ಆಲೂ ಮಸಾಲೆ
ಸಾಮಗ್ರಿ : 500 ಗ್ರಾಂ ಆಲೂ, 1 ಗಿಟುಕು ತೆಂಗಿನ ತುರಿ, 2-2 ಚಮಚ ಗಸಗಸೆ ಗೋಡಂಬಿ ಪೇಸ್ಟ್, 1-2 ಹಸಿ ಮೆಣಸು, 1-2 ಒಣ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಸಕ್ಕರೆ, ಅರಿಶಿನ, ಕರಿಯಲು ಎಣ್ಣೆ.
ವಿಧಾನ : ಆಲೂ ಸಿಪ್ಪೆ ಹೆರೆದು ಚೌಕವಾಗಿ ಕತ್ತರಿಸಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ನಂತರ ತೆಂಗಿನ ತುರಿಯ ಗಟ್ಟಿ ಪೇಸ್ಟ್ ಮಾಡಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಒಗ್ಗರಣೆ ಕೊಡಿ. ತುಂಡರಿಸಿದ ಹಸಿಒಣ ಮೆಣಸು ಹಾಕಿ ಕೆದಕಬೇಕು, ಕರಿಬೇವು ಕೂಡ. ಇದಕ್ಕೆ ತೆಂಗಿನ ಪೇಸ್ಟ್, ಗಸಗಸೆ ಗೋಡಂಬಿ ಪೇಸ್ಟ್ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಅರಿಶಿನ, ಸಕ್ಕರೆ ಎಲ್ಲಾ ಸೇರಿಸಿ. ಕರಿದ ಆಲೂ ಹಾಕಿ ಎಲ್ಲ ಮೆತ್ತಿಕೊಳ್ಳುವಂತೆ ಮಾಡಿ. 2 ನಿಮಿಷ ಕೆದಕಿ ಕೆಳಗಿಳಿಸಿ, ಬಿಸಿ ಬಿಸಿಯಾಗಿ ಅನ್ನ, ಚಪಾತಿಗೆ ಕೊಡಿ.
ಹಲಸಿನ ಗ್ರೇವಿ
ಸಾಮಗ್ರಿ : 500 ಗ್ರಾಂ ಹೆಚ್ಚಿದ ಹಲಸಿನಕಾಯಿ, ಅರ್ಧ ಕಪ್ ಹುಳಿಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಜೀರಿಗೆ ಪುಡಿ, ಧನಿಯಾ ಪುಡಿ, ಸಕ್ಕರೆ, 2 ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ, 2 ಹುಳಿ ಟೊಮೇಟೊ, 1-2 ಹಸಿ ಮೆಣಸು, 1 ಏಲಕ್ಕಿ, 2 ಲವಂಗ, 1 ಸಣ್ಣ ತುಂಡು ಚಕ್ಕೆ, 2 ಪಲಾವ್ ಎಲೆ.
ವಿಧಾನ : ಶುಚಿಗೊಳಿಸಿದ ಹಲಸಿನ ಹೋಳುಗಳಿಗೆ ಉಪ್ಪು, ಅರಿಶಿನ ಹಾಕಿ ಕುಕ್ಕರ್‌ನಲ್ಲಿ 1 ಸೀಟಿ ಬರುವಂತೆ ಬೇಯಿಸಿ. ಒಂದು ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಏಲಕ್ಕಿ, ಲವಂಗ, ಚಕ್ಕೆ, ಪಲಾವ್ ಎಲೆ ಹಾಕಿ ಚಟಪಟಾಯಿಸಿ. ನಂತರ ಹೆಚ್ಚಿದ ಹಸಿ ಮೆಣಸು, ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಅರಿಶಿನ, ಜೀರಿಗೆ ಪುಡಿ, ಧನಿಯಾಪುಡಿ, ಸಕ್ಕರೆ ಹಾಕಿ. ಜೊತೆಗೆ ನೀರಿನ ಸಮೇತ ಹಲಸಿನ ಹೋಳು ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸುತ್ತಾ ಗ್ರೇವಿ ಕುದಿಸಿ ಕೆಳಗಿಳಿಸಿ. ಬಿಸಿ ಇರುವಾಗಲೇ ಅನ್ನ, ರೊಟ್ಟಿ ಜೊತೆ ಸವಿಯಲು ಕೊಡಿ.
TAGS : ಬಂಗಾಳದ ರಸಗವಳ, ಬೆಂಗಾಲಿ ಸ್ಟ್ಯೂ. ತೊಂಡೆ ಮಸಾಲೆ, ಬಟಾಣಿ ಉಸಲಿ, ಸ್ಟಫ್ಡ್ ಹೀರೆಕಾಯಿ, ಸ್ಪೆಷಲ್ ದಾಲ್, ಮಸಾಲೆ ಬದನೆ, ಸೀಮೆ ಎಲೆ ರೋಲ್ಸ್, ತೆಂಗಿನ ಲಡ್ಡು, ಸ್ಪೆಷಲ್ ಪಾಯಸ, ಆಲೂ ಮಸಾಲೆ, ಹಲಸಿನ ಗ್ರೇವಿ