ನೀಳ್ಗಥೆ – ಚಂದ್ರಿಕಾ ಸುಧೀಂದ್ರ 

ವಿಶಾಲವಾದ ಆವರಣದಲ್ಲಿ ಸುಂದರವಾದ ಅಮೃತಶಿಲೆಯ ಪ್ರತಿಮೆ ಅನಾವರಣಗೊಂಡಿತು. ಅದು ದಿವಂಗತ ನಂದಿತಾಳ ಪ್ರತಿಮೆ. ನಂದಿತಾ ರಾಜಕಾರಣಿಯೋ, ಹೋರಾಟಗಾರ್ತಿಯೋ ಅಥವಾ ಕ್ರೀಡಾಪಟುವೋ ಅಲ್ಲ. ಅವಳನ್ನು ಸಾಧಕಿಯ ಸ್ಥಾನದಲ್ಲಿ ಎಲ್ಲರೂ ನೋಡುತ್ತಿದ್ದರು. ಕಾರಣ ಅವಳ ತ್ಯಾಗ ಮನೋಭಾವ, ಇತರರ ನೋವಿಗೆ ಸ್ಪಂದಿಸುವ ಗುಣ, ಪರೋಪಕಾರದ ಸ್ವಭಾವ ಮೆಚ್ಚಿ ಅವಳ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂಧು ಬಳಗದವರಲ್ಲದೆ, ನೂರಾರು ಜನರು, ಅನಾಥಾಶ್ರಮದ ಅಂಧ ಮಕ್ಕಳು ಎಲ್ಲರೂ ನೆರೆದಿದ್ದರು. ಎಲ್ಲರ ಮುಖದಲ್ಲಿ ನೋವಿನ ಗೆರೆಗಳು ಕಾಣುತ್ತಿತ್ತು.

ನಂದಿತಾಳ ಪತಿ ವಿನಯ್‌ ದುಃಖತಪ್ತನಾಗಿ ಪ್ರೀತಿಯ ಪತ್ನಿಯ ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ಕಣ್ಣೀರು ಕಡಲಾಗಿತ್ತು. ಅವಳ ತಂಗಿ ಪಲ್ಲವಿಗಂತೂ ಅಕ್ಕನ ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ದುಃಖ ತಡೆಯಲಾಗದೆ ಹೊರಗೋಡಿ ಬಂದು ಅಲ್ಲಿದ್ದ ಕಲ್ಲು ಬೆಂಚಿನ ಮೇಲೆ ಸಂಕಟದಿಂದ ಯೋಚಿಸುತ್ತಾ ಕುಳಿತಳು.

ತ್ಯಾಗಮಯಿ, ಕರುಣಾಸಿಂಧುವಾಗಿದ್ದ ತನ್ನಕ್ಕನಿಗೆ ತಾನು ಪ್ರತ್ಯುಪಕಾರವಾಗಿ ಮಾಡಿದ್ದಾದರೂ ಏನು? ಬೇರೆಯವರಿಗೆ ಕೇಡು ಬಯಸಬಾರದೆಂದು ಕನಿಷ್ಠ ಮನೋಭಾವವಿಲ್ಲದ ತಾನು ಕೃತಘ್ನಳಾಗಿ ಅವಳಿಗೆ ಮಾಡಬಾರದ್ದನ್ನೆಲ್ನ ಮಾಡಿದೆನಲ್ಲಾ ಎಂದು ನೊಂದುಕೊಂಡ ಪಲ್ಲವಿ ಕಣ್ಣೀರಿನ ಜೊತೆಗೆ ತನ್ನ ನೆನಪಿನಂಗಳಕ್ಕೆ ಜಾರಿದಳು.

ಜಗದೀಶ್‌ ಮತ್ತು ಸುವರ್ಣಾ ದಂಪತಿಗಳಿಗೆ ನಂದಿತಾ, ಪಲ್ಲವಿ ಇಬ್ಬರೇ ಮಕ್ಕಳು. ಹಿರಿಯಳಾದ ನಂದಿತಾ ತಾಯಿಯಂತೆ ಬೆಳ್ಳಗೆ ಮುದ್ದಾಗಿ ದಂತದ ಬೊಂಬೆಯಂತೆ ಆಕರ್ಷಕ ನೀಳಕಾಯದವಳಾಗಿದ್ದಳು. ಎರಡನೇ ಮಗಳಾದ ಪಲ್ಲವಿ ನಂದಿತಾಳಷ್ಟು ಲಕ್ಷಣವಾಗಿರಲಿಲ್ಲ. ಜೊತೆಗೆ ಕಪ್ಪಗಿದ್ದಳು. ಅವರಿಬ್ಬರ ಸ್ವಭಾವದಲ್ಲೂ ಅಜಗಜಾಂತರ ವ್ಯತ್ಯಾಸವಿತ್ತು. ನಂದಿತಾ ಯಾವ ವಿಚಾರವನ್ನಾದರೂ ಯೋಚಿಸಿ, ಯಾರ ಮನಸ್ಸಿಗೂ ನೋವಾಗದಂತೆ ಸಹನೆಯಿಂದ ನಡೆದುಕೊಳ್ಳುತ್ತಿದ್ದಳು. ಆದರೆ ಪಲ್ಲವಿ ಅದಕ್ಕೆ ತದ್ವಿರುದ್ಧವಾಗಿ ಬಹಳ ದುಡುಕು ಹಾಗೂ ಕೋಪಿಷ್ಠೆಯಾಗಿದ್ದಳು. ಹಿಂದು ಮುಂದು ಯೋಚಿಸದೆ ಮುಖಕ್ಕೆ ಹೊಡೆದಂತೆ ಮಾತನಾಡಿ ನೋಯಿಸಿ ಏನೂ ಆಗದವಳಂತೆ ಇರುತ್ತಿದ್ದಳು.

ಅಕ್ಕ ಉತ್ತರ ಧ್ರುವವಾದರೆ ತಂಗಿ ದಕ್ಷಿಣ ಧ್ರುವ. ಇಬ್ಬರಲ್ಲೂ ಅಷ್ಟೇನೂ ಹೊಂದಾಣಿಕೆ ಇರಲಿಲ್ಲ. ನಂದಿತಾ ಎಷ್ಟೇ ಸಮಾಧಾನವಾಗಿ ತಂಗಿಯ ಬಳಿ ಮಾತನಾಡಿದರೂ ಅವಳು ಅದರಲ್ಲಿ ತಪ್ಪು ಹುಡುಕಿ ಮಾತು ಬಿಡುತ್ತಿದ್ದಳು. ಸಾಲದ್ದಕ್ಕೆ ಮನೆಗೆ ಬಂದುಹೋಗುತ್ತಿದ್ದ ನೆಂಟರಿಷ್ಟರು ನಂದಿತಾಳ ರೂಪ ಮತ್ತು ಗುಣವನ್ನು ಹೊಗಳಿ, `ನಂದಿತಾಗೆ ಒಳ್ಳೇ ಕಡೆ ಸಂಬಂಧ ಸಿಗುವುದರಲ್ಲಿ ಸಂಶಯವಿಲ್ಲ, ಆದರೆ ಪಲ್ಲವಿಗೆ ಗಂಡು ಹುಡುಕಲು ನೀವು ಹರಸಾಹಸ ಮಾಡಬೇಕಾಗುತ್ತದೆ,’ ಎಂದು ಹೇಳುತ್ತಿದ್ದರು.

ಇದರಿಂದ ಪಲ್ಲವಿಗೆ ಅಕ್ಕನ ಹೊಗಳಿಕೆ ಸಹಿಸಲಾಗದೆ ಅವಳ ಬಗ್ಗೆ ದ್ವೇಷ, ಮತ್ಸರ ಬೆಳೆಸಿಕೊಂಡಳು. ಅವಳ ಮನಸ್ಸಿನಲ್ಲಿ ಅಕ್ಕನ ಬಗ್ಗೆ ಯಾವಾಗಲೂ ದ್ವೇಷ ಹೊಗೆಯಾಡುತ್ತಿತ್ತು. ಆಗಾಗ್ಗೆ ಪಲ್ಲವಿ ವಿನಾಕಾರಣ ಕಾಲು ಕೆರೆದು ನಂದಿತಾಳೊಂದಿಗೆ ಜಗಳವಾಡುವುದು ಸರ್ವೇಸಾಮಾನ್ಯವಾಯಿತು.

ತಾಯಿಗೆ ಮಕ್ಕಳ ಸ್ವಭಾವ ಗೊತ್ತಿದ್ದರಿಂದ ನಂದಿತಾಳ ಪರ ವಹಿಸಿ ಪಲ್ಲವಿಗೆ ಬೈದು ಬುದ್ಧಿ ಹೇಳುತ್ತಿದ್ದರು. ಆಗೆಲ್ಲಾ ಅವಳು ತಾಯಿಗೆ. `ನೀನು ಯಾವಾಗಲೂ ಅವಳ ಪರವೇ ಎಂದು ನನಗೆ ಗೊತ್ತು. ನಿನಗೆ ನನ್ನ ಕಂಡರೆ ಆಗುವುದಿಲ್ಲ,’ ಎಂದು ಅಸಹನೆ ತೋರಿಸುತ್ತಿದ್ದಳು.

ಜಗದೀಶ್‌ ಸರ್ಕಾರಿ ನೌಕರಿಯಲ್ಲಿದ್ದು ಕಡಿಮೆ ಸಂಬಳದಲ್ಲಿ ಸರಳ ಜೀವನ ನಡೆಸುತ್ತಿದ್ದರು. ಇದ್ದುದರಲ್ಲೇ ಇಬ್ಬರು ಮಕ್ಕಳ ಮದುವೆಗೂ ಸಹ ಕೂಡಿಡುತ್ತಿದ್ದರು. ಪಲ್ಲವಿಗೆ ಐಷಾರಾಮಿ ಜೀವನದ ಮಹದಾಸೆ. ಕಾಲಕ್ಕೆ ತಕ್ಕಂತೆ ಹೊಸ ವಿನ್ಯಾಸದ ಉಡುಗೆ ತೊಡುಗೆ ತೊಟ್ಟು ಅಲಂಕಾರ ಮಾಡಿಕೊಳ್ಳುವುದರಲ್ಲಿ ಅವಳಿಗೆ ಬಹಳ ಆಸಕ್ತಿ. ಅದಕ್ಕಾಗಿ ತಂದೆ ತಾಯಿಯನ್ನು ಪೀಡಿಸಿ ಹಠ ಮಾಡಿ ತನ್ನ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದಳು.

ನಂದಿತಾ ಅದಕ್ಕೆ ತದ್ವಿರುದ್ಧವಾಗಿ ಫ್ಯಾಷನ್‌ ಉಡುಪು, ಅಲಂಕಾರದಲ್ಲಿ ನಿರಾಸಕ್ತಳಾಗಿ ಸರಳ ಸಾಧಾರಣ ಉಡುಪಿನಲ್ಲೇ ತೃಪ್ತಿ ಪಟ್ಟುಕೊಳ್ಳುತ್ತಿದ್ದಳು. ನಂದಿತಾ ಪದವಿ ಮುಗಿಸುವ ಹೊತ್ತಿಗೆ ಪಲ್ಲವಿ ಹೈಸ್ಕೂಲ್‌ ವಿದ್ಯಾಭ್ಯಾಸ ಮುಗಿಸಿ ಕಾಲೇಜು ಮೆಟ್ಟಿಲೇರಿದ್ದಳು.

ಮನೆಯಲ್ಲಿ ನಂದಿತಾಗೆ ಮದುವೆ ಮಾಡಬೇಕೆಂದು ತಂದೆ ತಾಯಿ ಮಾತನಾಡಲಾರಂಭಿಸಿದರು. ಇದು ಪಲ್ಲವಿಗೆ ತಿಳಿದಾಗ ಅವಳಿಗೆ ಸಹಿಸಲಾಗಲಿಲ್ಲ. ಎಲ್ಲಿ ತನ್ನಕ್ಕನಿಗೆ ಒಳ್ಳೆಯ ಕಡೆ ಸಂಬಂಧ ಸಿಕ್ಕಿ ಅವಳು ಸುಖವಾಗಿರುತ್ತಾಳೋ ಎನ್ನುವ ಅಸೂಯೆ ಅಸಮಾಧಾನ ಅವಳಲ್ಲಿ ಉಂಟಾಯಿತು. ಹೇಗಾದರೂ ಮಾಡಿ ನಂದಿತಾಳ ಮದುವೆ ಮುರಿಯಬೇಕೆಂಬ ಕೆಟ್ಟ ಆಲೋಚನೆ ಅವಳ ಮನಸ್ಸಿನಲ್ಲಿ ಬಲವಾಯಿತು.

ನಂದಿತಾ ಮತ್ತು ಅವಳ ತಾಯಿಯ ಅಣ್ಣನ ಮಗ ಗಿರಿಧರ್‌ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಗಿರಿಧರ್‌ ಓದಿನ ಸಲುವಾಗಿ, ನೋಟ್ಸ್ ಕೇಳಲು ಆಗಾಗ್ಗೆ ಇವರ ಮನೆಗೆ ಬರುತ್ತಿದ್ದ. ಅವನಿಗೆ ಪಲ್ಲವಿ, ನಂದಿತಾಳಗೆ ಬಗ್ಗೆ ಕಿಡಿ ಕಾರುವುದು, ಜಗಳಾಡುವುದು ಎಲ್ಲ ಗೊತ್ತಿತ್ತು. ಅದರಿಂದ ನೊಂದ ನಂದಿತಾಳನ್ನು ಸಮಾಧಾನಪಡಿಸಿ ಅವಳ ಪರವಾಗಿ ಮಾತನಾಡುತ್ತಿದ್ದ. ಇದರಿಂದಾಗಿ ಪಲ್ಲವಿ ಗಿರಿಧರನನ್ನು ಕಂಡರೆ ಸಿಡುಗುಟ್ಟುತ್ತಿದ್ದಳು. `ಇವನು ಮಾವನ ಮಗ ಎಂದು ಹೆಚ್ಚು ಕಡಿಮೆ ನಮ್ಮ ಮನೆಯಲ್ಲೇ ಕಾಲ ಕಳೆಯುತ್ತಾನಲ್ಲ?’ ಎಂದು ತಾಯಿಯ ಬಳಿ ಗೊಣುಗುಟ್ಟುತ್ತಿದ್ದಳು.

ತಾಯಿ ಅವಳನ್ನು, `ನಿನಗಂತೂ ಯಾರೂ ಬೇಡ. ನಮ್ಮಣ್ಣನ ಮಗ ನಮ್ಮ ಮನೆಗೆ ಬಂದರೆ ನಿನಗೇನು ತೊಂದರೆ ಸುಮ್ಮನಿರು,’ ಎಂದು ಗದರಿಸುತ್ತಿದ್ದರು.

ನಂದಿತಾ, `ನೋಡೋ ಗಿರಿ, ಪಲ್ಲವಿ ನನ್ನ ಜೊತೆ ಯಾಕೆ ಹೀಗೆ ವರ್ತಿಸುತ್ತಾಳೆ? ನಾನು ಅವಳ ಜೊತೆ ಪ್ರೀತಿ, ಮಮತೆಯಿಂದ ಮಾತನಾಡಿದರೂ ಸಿಡುಕುತ್ತಾಳೆ. ಅಷ್ಟೇ ಅಲ್ಲ, ನಾನು ಓದಲು ಕುಳಿತರೆ ಸಾಕು ಟಿ.ವಿ. ವಾಲ್ಯೂಮ್ ಜೋರು ಮಾಡುತ್ತಾಳೆ,’ ಎಂದು ಅವನ ಬಳಿ ಹೇಳಿಕೊಳ್ಳುತ್ತಿದ್ದಳು.

ಇದ್ಯಾವುದೂ ಗಿರಿಧರನಿಗೆ ಹೊಸದೇನಲ್ಲ. ಅವನು ಅವಳನ್ನು ಸಮಾಧಾನಪಡಿಸುತ್ತಾ, `ಅವಳ ಸ್ವಭಾವ ನಿನಗೆ ಗೊತ್ತಲ್ವಾ ನಂದಿತಾ, ಐದು ಬೆರಳೂ ಒಂದೇ ಸಮವಾಗಿರುವುದಿಲ್ಲ ಎನ್ನುವ ಹಾಗೆ ಅಕ್ಕ ತಂಗಿಯಾದರೂ ಒಬ್ಬೊಬ್ಬರ ಸ್ವಭಾವ ಬೇರೆ ಬೇರೆ ಇರುತ್ತದೆ. ಅಷ್ಟೇ ಅಲ್ಲ ಅವಳಿಗಿಂತ ನೀನು ಸುಂದರವಾಗಿದ್ದಿ, ಎಲ್ಲರೂ ನಿನ್ನನ್ನು ಹೊಗಳುತ್ತಾರೆ. ಇದನ್ನು ಅವಳಿಂದ ಸಹಿಸಲಾಗುತ್ತಿಲ್ಲ. ಇದರಿಂದ ಅವಳಿಗೆ ಕೀಳರಿಮೆಯ ಮನೋಭಾವ ಉಂಟಾಗಿದೆ. ಆದ್ದರಿಂದ ನಿನ್ನನ್ನು ವಿನಾಕಾರಣ ದ್ವೇಷಿಸುತ್ತಾಳೆ. ಅದಕ್ಕಾಗಿ ನೀನು ತಲೆ ಕೆಡಿಸಿಕೊಳ್ಳಬೇಡ,’ ಎಂದು ಸಮಾಧಾನಪಡಿಸುತ್ತಿದ್ದ.

ಪ್ರತಿಯೊಬ್ಬರೂ ನಂದಿತಾಳ ರೂಪ, ಗುಣ ಹೊಗಳುವುದನ್ನು ಸಹಿಸದ ಪಲ್ಲವಿ, ಅವಳು ಆಸೆಪಟ್ಟು ತೆಗೆದುಕೊಂಡಿದ್ದ ಹೊಸ ಸೀರೆಯನ್ನು ಕತ್ತರಿಸಿ ಹಾಕಿ ವಿಕೃತ ತೃಪ್ತಿಪಟ್ಟುಕೊಂಡಳು. ನಂದಿತಾಗೆ ಇದರಿಂದ ದುಃಖ ತಡೆಯಲಾಗದೆ ಪಲ್ಲವಿಯನ್ನು ಕೇಳಿದಳು. ಏನೂ ನಡೆದೇ ಇಲ್ಲವೆನ್ನುವಂತೆ, `ನನಗೇನೂ ಗೊತ್ತಿಲ್ಲ? ನಾನ್ಯಾಕೆ ನಿನ್ನ ಸೀರೆ ಕತ್ತರಿಸಲಿ….?’ ಎಂದು ವಿತಂಡವಾಗಿ ವಾದಿಸಿದಳು.

ಇದಾದ ನಂತರ ಸದ್ಯದಲ್ಲೇ ನಂದಿತಾಳನ್ನು ನೋಡಲು ಗಂಡಿನ ಕಡೆಯವರು ಬರುತ್ತಿರುವ ವಿಷಯ ತಿಳಿದ ಪಲ್ಲವಿಗೆ ಹೇಗಾದರೂ ಮಾಡಿ ಬರುವ ಹುಡುಗ ಅವಳನ್ನು ಒಪ್ಪದಂತೆ ಮಾಡಬೇಕು, ಇಲ್ಲ ಅವರುಗಳು ಬರುವುದನ್ನು ತಪ್ಪಿಸಬೇಕೆಂಬ ಕೆಟ್ಟ ಆಲೋಚನೆ ಮನಸ್ಸಿನಲ್ಲಿ ಉಂಟಾಯಿತು. ಹೇಗೆಂದು ಉಪಾಯ ಹುಡುಕಲಾರಂಭಿಸಿದಳು. ಹುಡುಗನ ಮನೆಯವರಿಗೆ ಅನಾಮಧೇಯ ಕರೆ ಮಾಡಿ, `ನಂದಿತಾ ತನ್ನ ಮಾವನ ಮಗನ ಜೊತೆ ಸುತ್ತಾಡುತ್ತಿದ್ದಾಳೆ. ಅವರಿಬ್ಬರೂ ಓಡಾಡದ ಜಾಗವೇ ಇಲ್ಲ. ಬಹುಶಃ ಅವರಿಬ್ಬರು ಮದುವೆಯಾಗಬಹುದು. ಇದರ ಮೇಲೆ ನಿಮ್ಮಿಷ್ಟ,’ ಎಂದು ತಿಳಿಸಿದಳು.

ಗಂಡಿನ ಕಡೆಯವರು ನಂದಿತಾಳ ತಂದೆಗೆ ಫೋನ್‌ ಮಾಡಿ, `ನಮ್ಮ ಮಗನಿಗೆ ಬೇರೊಂದು ಹುಡುಗಿ ನಿಶ್ಚಯಾಯಿತು. ನಾವು ನಿಮ್ಮ ಹುಡುಗಿಯನ್ನು ನೋಡಲು ಬರುತ್ತಿಲ್ಲ,’ ಎಂದರು. ಕಾರಣ ತಿಳಿಸದೆ ಬರುತ್ತೇವೆಂದು ಹೇಳಿದ್ದವರು ಹೀಗೆ ಮಾಡಿದರಲ್ಲ ಎನ್ನುವ ಬೇಸರ, ಆಶ್ಚರ್ಯವಾಯಿತು ನಂದಿತಾ ತಂದೆ ತಾಯಿಗೆ. ಹೀಗೆ ಬರುತ್ತಿದ್ದ ವರಗಳಿಗೆಲ್ಲಾ ಯಾವುದೋ ನೆಪ ಹೇಳಿ ಬರುವುದನ್ನು ತಪ್ಪಿಸುತ್ತಿದ್ದಳು ಪಲ್ಲವಿ.

ನಂದಿತಾಳಿಗೆ ಯಾಕೆ ಹೀಗಾಗುತ್ತಿದೆ ಎನಿಸಿ ತಾಯಿಯ ಬಳಿ ತನ್ನ ಬೇಗುದಿ ಹೇಳಿಕೊಳ್ಳುತ್ತಾ, `ಪಲ್ಲವಿಗಾದರೂ ಗಂಡು ನೋಡಿ,’ ಎಂದು ಹೇಳಿದಳು.

`ಈಗಲೇ ಬರುತ್ತಿರುವ ವರಗಳೆಲ್ಲಾ ತಪ್ಪಿ ಹೋಗುತ್ತಿದೆ. ಇನ್ನು ಅವಳಿಗೆ ಗಂಡು ನೋಡಿದರೆ, ದೊಡ್ಡವಳಿಗೆ ಏನೋ ಕಾಯಿಲೆ ಇದೆ ಎಂದು ಮದುವೆಯೇ ಇಲ್ಲದೆ ನೀನು ಕಡೆಯತನಕ ಹಾಗೇ ಇರಬೇಕಷ್ಟೇ ಸುಮ್ಮನಿರು. ಇಲ್ಲದ್ದೆಲ್ಲ ಹೇಳಬೇಡ ಯಾವುದಕ್ಕೂ ಸಹನೆ ಇರಬೇಕು,’ ಎಂದು, ಅವಳಿಗೆ ಸಮಾಧಾನ ಹೇಳಿದರು ತಾಯಿ.

ಇದಾಗಿ ಕೆಲವು ವಾರಗಳಾದ ಮೇಲೆ ಪಲ್ಲವಿ ಕಾಲೇಜಿನಿಂದ ಟ್ರಿಪ್‌ಗೆ 1 ವಾರ ಹೋಗುವುದಾಗಿ ಹೇಳಿ ಹೋಗಿದ್ದಳು. ಆ ಸಮಯದಲ್ಲಿ ಸುವರ್ಣಮ್ಮನ ಪರಿಚಯದವರೊಬ್ಬರಾದ ಶಾಂತಮ್ಮ ಮನೆಗೆ ಬಂದು, `ನಿಮ್ಮ ನಂದಿತಾಳಿಗೆ ಯಾರೋ ಒಂದು ಒಳ್ಳೆಯ ವರನ ಬಗ್ಗೆ ತಿಳಿಸಿದರು. ಒಳ್ಳೆಯ ಸುಸಂಸ್ಕೃತ ಕುಟುಂಬದ ಹುಡುಗ. ಸಿ.ಎ. ಮಾಡಿದ್ದಾನೆ. ದೊಡ್ಡ ಕಂಪನಿಯಲ್ಲಿ ಆಡಿಟರ್‌ ಆಗಿದ್ದಾನೆ. ಅಲ್ಲದೆ ಸಿರಿವಂತರು, ಅವನಿಗೆ ಒಬ್ಬ ತಂಗಿ ಇದ್ದಾಳೆ.  ನೋಡಿ ನಿಮಗೆ ಅನುಕೂಲವಾಗುವುದಾದರೆ,’ ಎಂದರು.

ನಂದಿತಾಳ ತಾಯಿ ಸಂಭ್ರಮದಿಂದ, `ಹಾಗೇ ಆಗಲಿ. ಸಧ್ಯ, ಬಂದ ಗಂಡುಗಳೆಲ್ಲ ತಪ್ಪಿ ಹೋಗುತ್ತಿವೆ. ಇದಾದರೂ ಕೂಡಿ ಬಂದರೆ ಸಾಕು. ಹುಡುಗನನ್ನು ನೋಡಲು ಏರ್ಪಾಡು ಮಾಡಿ,’ ಎಂದರು. ವಿಷಯವನ್ನು ಗಂಡನಿಗೆ ತಿಳಿಸಿದರು. ಮರುದಿನವೇ ನಂದಿತಾ ಮತ್ತು ಅವಳ ತಂದೆ ತಾಯಿ, ಶಾಂತಮ್ಮ ಹುಡುಗನ ಮನೆಗೆ ಹೋದರು. `ನಂದಗೋಕುಲ’ ಎಂಬ ಭವ್ಯವಾದ ಬಂಗಲೆ ಅವರನ್ನು ಸ್ವಾಗತಿಸಿತು. ಅದನ್ನು ಕಂಡು ಮನೆ ಯಾವಾಗಲೂ ನಗುನಗುತ್ತಾ ನಂದಗೋಕುಲವಾಗಿರಬೇಕೆಂದು ದಂಪತಿಗಳು ಮನಸ್ಸಿನಲ್ಲೇ ಹರಸಿದರು. ಈ ಮನೆಗೆ ನನ್ನ ಮಗಳು ಸೇರಿದರೆ ಅವಳ ಜೀವನ ಹಾಗೇ ಇರುತ್ತದೆ ಎಂದುಕೊಂಡು ಎಲ್ಲರೂ ಮನೆಯೊಳಗೆ ಹೋದರು.

ಹುಡುಗ ವಿನಯ್‌, ಅವನ ತಂದೆ ರಾಮಯ್ಯ, ತಾಯಿ ವಿಶಾಲಾಕ್ಷಿ ಹಾಗೂ ತಂಗಿ ಜ್ಯೋತಿ ಎಲ್ಲರೂ ಇವರನ್ನು ಸ್ವಾಗತಿಸಿದರು.  ಎಲ್ಲರಿಗೂ ಕಾಫಿ, ತಿಂಡಿ ಉಪಚಾರವಾಯಿತು. ಪ್ರತಿಯೊಬ್ಬರ ಪರಿಚಯ ಆಯಿತು. ವಿನಯ್‌ ಸ್ಛುರದ್ರೂಪಿ ತರುಣ. ಹೆಸರಿಗೆ ತಕ್ಕಂತೆ ವಿನಯವಂತ. ನಂದಿತಾಳನ್ನು ನೋಡಿದ ವಿನಯ್‌ ಕಣ್ಣಲ್ಲೇ ಒಪ್ಪಿಗೆ ಸೂಚಿಸಿದ್ದ. ಅದರಂತೆ ನಂದಿತಾಳೂ ವಿನಯ್‌ನನ್ನು ಮನಸಾರೆ ಮೆಚ್ಚಿದಳು. ವಿನಯ್‌ ಮತ್ತು ಅವನ ಮನೆಯವರಿಗೂ ನಂದಿತಾಳ ಮುಗ್ಧ ಸರಳ ನಡತೆ ಮೆಚ್ಚುಗೆಯಾಯಿತು. ವಿನಯ್‌ನಂದಿತಾಳ ಜೊತೆ ಮಾತನಾಡಬೇಕೆಂದು ಬಯಸಿದ. ಹಿರಿಯರ ಅಪ್ಪಣೆ ಪಡೆದ ನಂದಿತಾ ಮತ್ತು ವಿನಯ್‌ ಮಹಡಿಯ ಮೇಲಿನ ಸಿಟ್‌ ಔಟ್‌ನಲ್ಲಿ ಎದುರು ಬದುರು ಕುಳಿತರು. ವಿನಯ್‌ನನ್ನು ನೇರವಾಗಿ ನೋಡಲಾಗದೆ ನಂದಿತಾ ಗಲಿಬಿಲಿಗೊಂಡಳು. ವಿನಯ್‌ಹಸನ್ಮುಖದಿಂದ ಕೆಂಪಾದ ಅವಳ ಮುಖನ್ನು ನೋಡಿ, “ಏಕೆ ಗಾಬರಿಯಾಗುತ್ತೀರಾ? ನಾವಿಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳುವ ಸಲುವಾಗಿ ಇಲ್ಲಿಗೆ ಬಂದಿದ್ದೇವೆ. ಮನಬಿಚ್ಚಿ ಧಾರಾಳವಾಗಿ ಮಾತಾಡಿ,” ಎಂದ.

“ಏನು ಕೇಳುವುದು?” ಎಂದಳು.

“ನೀವು ನನ್ನನ್ನು ಮನಃಪೂರ್ವಕವಾಗಿ ಒಪ್ಪಿದ್ದೀರಾ?” ಎಂದ

“ಹ್ಞೂಂ….” ಎಂದಷ್ಟೇ ಹೇಳಿದಳು.

ವಿನಯ್‌ ತನ್ನ ಪರಿಚಯದ ಜೊತೆಗೆ ತಂಗಿ ಜ್ಯೋತಿ ಈ ಮನೆಯ ಅಚ್ಚುಮೆಚ್ಚಿನ ಮಗಳು. ಅವಳು ಓದುತ್ತಿರುವ ವಿಚಾರ, ತಂದೆ ತಾಯಿ ನಡೆಸುತ್ತಿರುವ ಅನಾಥಾಶ್ರಮ ಹಾಗೂ ಮನೆಗೆ ಬರುವ ಸಂಬಂಧಿಕರೆಲ್ಲರ ಬಗ್ಗೆ ವಿವರವಾಗಿ ತಿಳಿಸಿದ.

ನಂದಿತಾ ಕೂಡ ತನ್ನ ಓದಿನ ಬಗ್ಗೆ, ಮನೆಯವರ ಬಗ್ಗೆ ತಿಳಿಸಿದಳು. ಇಬ್ಬರೂ ಮನಃಪೂರ್ವಕವಾಗಿ ಒಪ್ಪಿರುವ ವಿಚಾರ ತಿಳಿದ ಎರಡೂ ಕುಟುಂಬದವರಿಗೆ ಬಹಳ ಸಂತೋಷವಾಯಿತು.

ವಿನಯ್‌ ತಂದೆ, “ನಿಶ್ಚಿತಾರ್ಥದ ಬದಲು ನೇರ ಮದುವೆಗೆ ಲಗ್ನ ನೋಡಿದರೆ ಒಳ್ಳೆಯದು,” ಎಂದರು.

“ಹಾಗೇ ಆಗಲಿ,” ಎಂದು ಜಗದೀಶ್‌ ದಂಪತಿಗಳು ಒಪ್ಪಿದರು.

“ಮದುವೆ ಎಂದರೆ ಎರಡೂ ಮನೆಯವರೂ ಸಂಬಂಧ ಬೆಳೆಸುವುದು. ಆದ್ದರಿಂದ ನೀವೊಬ್ಬರೇ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುವುದು ಕಷ್ಟವಾಗಬಹುದು. ಆದ್ದರಿಂದ ಮದುವೆಯ ಖರ್ಚು, ವೆಚ್ಚಗಳು ಏನೇ ಬಂದರೂ ಇಬ್ಬರೂ ಸಮನಾಗಿ ಹಂಚಿಕೊಳ್ಳೋಣ,” ಎಂದರು ರಾಮಯ್ಯ.

ಆಶ್ಚರ್ಯಗೊಂಡ ಜಗದೀಶ್‌ ದಂಪತಿಗಳು, ಹೆಚ್ಚಿನವರು ವರದಕ್ಷಿಣೆಗಾಗಿ ಕಿರುಕುಳ ಕೊಡುವ ಈಗಿನ ಕಾಲದಲ್ಲಿ ಇಂತಹ ಧಾರಾಳತನವಿರುವ ಗಂಡಿನ ತಂದೆಯ ಮಾತು ಕೇಳಿ ಸಂತೋಷಗೊಂಡರು.

ವಿನಯ್‌ ಸಹ ತಂದೆಯ ಮಾತನ್ನೇ ಅನುಮೋದಿಸಿದ. ಸಧ್ಯ ಈ ಸಲವಾದರೂ ನಮ್ಮ ನಂದಿತಾಳಿಗೆ ಒಳ್ಳೆಯ ಸಂಬಂಧ ಸಿಗುವಂತಾಯಿತಲ್ಲ ಎಂದುಕೊಂಡ ಜಗದೀಶ್‌ ದಂಪತಿಗಳು ಸಮಾಧಾನದ ಉಸಿರುಬಿಟ್ಟರು.

ಟ್ರಿಪ್‌ನಿಂದ ಬಂದ ಪಲ್ಲವಿಗೆ, ನಂದಿತಾಳಿಗೆ ಮದುವೆ ನಿಶ್ಚಯವಾಗಿರುವುದು ತಿಳಿದು ಆಘಾತವಾಯಿತು. ಕಾರಣ ಅವಳ ಆಸೆ ನೆರವೇರಲಿಲ್ಲ ಎಂದು ನಿರಾಶೆಯಿಂದ ಕುದ್ದುಹೋದಳು. ತಂದೆ ತಾಯಿಯೊಂದಿಗೆ ಈ ವಿಚಾರವಾಗಿ, “ನಮ್ಮ ಅಕ್ಕನನ್ನು ಕೈ ಹಿಡಿಯುವ ಹುಡುಗನನ್ನು ನಾನು ನೋಡುವುದು ಬೇಡವಾ? ನಾನಿಲ್ಲದಿರುವಾಗಲೇ ನಿಶ್ಚಯ ಮಾಡಿದ್ದೀರಲ್ಲ?” ಎಂದು ಕೂಗಾಡಿದಳು.

“ಈಗ ತಾನೇ ಏನಾಯಿತು? ಒಳ್ಳೆಯ ಕಡೆ ಸಂಬಂಧ ಬಂದಾಗ, ನೀನು ಬರುವವರೆಗೂ ಕಾಯಬೇಕಿತ್ತಾ? ಹೇಗೂ ಮದುವೆಯಲ್ಲಿ ನಿನ್ನ ಭಾವನನ್ನು ಅವರ ಮನೆಯರನ್ನು ನೋಡುವಿಯಂತೆ. ಬಹಳ ಒಳ್ಳೆಯ ಜನ. ಒಟ್ಟಿನಲ್ಲಿ ನಮ್ಮ ನಂದಿತಾ ಆ ಮನೆ ಸೇರಲು ಅದೃಷ್ಟವಂತಳು,” ಎಂದು ಹೊಗಳಿದರು. ಇದರಿಂದ ಪಲ್ಲವಿಗೆ ಸಹಿಸಲಾಗಲಿಲ್ಲ. ಏನು ಮಾಡುವುದು ಎಂದು ಕೈ ಕೈ ಹಿಸುಕಿಕೊಂಡಳು. ಆದರೆ ಅವಳಿಗೆ ಮನಸ್ಸಿನೊಳಗೊಂದು ಸಮಾಧಾನ. ತನ್ನಷ್ಟು ಒಳ್ಳೆಯ ಅಭಿರುಚಿ ಇಲ್ಲದ ನಂದಿತಾ, ಒಳ್ಳೆಯ ಹುಡುಗನನ್ನು ಆರಿಸಿರಲಾರಳು ಎಂದುಕೊಂಡವಳಿಗೆ  ವಿನಯ್‌ ಫೋಟೋ ನೋಡಿ ಮನಸ್ಸಿನಲ್ಲಿ ಮತ್ಸರದ ಅಲೆ ಎದ್ದಿತು. ಕಾರಣ ಅವರ ಮನೆಯ ಸಿರಿವಂತಿಕೆಯೆಲ್ಲಾ ತಿಳಿದು, ಅವರ ಮನೆಗೆ ಹೋಗುವ ನಂದಿತಾ ಸುಖವಾಗಿ ಬಾಳುತ್ತಾಳಲ್ಲ ಎನ್ನುವ ಹೊಟ್ಟೆ ಉರಿಯೊಂದಿಗೆ ದಿನ ಕಳೆಯಲಾರಂಭಿಸಿದಳು.

ಕಡೆಗೂ ಮೂರನೆಯವರ ಮೂಲಕ ವಿನಯ್‌ಗೆ ತಲುಪುವಂತೆ, ಹಿಂದಿನಂತೆಯೇ ಗಾಳಿ ಸುದ್ದಿ ಹಬ್ಬಿಸಿದಳು. ಆದರೆ ವಿನಯ್‌ಗೆ ಹೆಣ್ಣಿನ ಬಗ್ಗೆ ಗೌರವ, ಅದರಲ್ಲೂ ತಾನು ಕೈ ಹಿಡಿಯುವ ನಂದಿತಾಳ ಬಗ್ಗೆ ಯಾವ ಕಲ್ಮಶ ಇಲ್ಲದ ನಿಷ್ಕಪಟ ಹುಡುಗಿ ಎನ್ನುವ ದೃಢ ನಂಬಿಕೆಯಿಂದ ಒಂದು ಹುಡುಗಿ ಒಳ್ಳೆಯ ಕಡೆ ಸೇರುತ್ತಾಳೆಂದರೆ, ಈ ರೀತಿಯ ಪುಕಾರು ಸಹಜವೇ! ಅದಕ್ಕಾಗಿ ನಮ್ಮ ಜೀವನ ಹಾಳು ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲವೆಂದು ಅವಳ ಮಾತನ್ನು ಅಲ್ಲಗಳೆದ. ಪಲ್ಲವಿ ಬಿಟ್ಟ ಬಾಣ ಅವಳಿಗೇ ವಾಪಸ್ಸಾಯಿತು.

ಮದುವೆ ಮನೆಯಲ್ಲಿ ಪಲ್ಲವಿಗೆ ಉಲ್ಲಾಸವಾಗಲೀ, ಉತ್ಸಾಹವಾಗಲೀ ಇಲ್ಲದೆ ತೆಪ್ಪಗೆ ಇದ್ದಳು. ತಾನೇನೋ ಅಂದುಕೊಂಡರೆ ಅಕ್ಕ ವೈಭವದಿಂದ ಬಾಳುತ್ತಾಳಲ್ಲ ಎನ್ನುವ ವ್ಯಥೆ ಅವಳಲ್ಲಿ ಕಾಡುತ್ತಿತ್ತು.

ಶುಭ ಮುಹೂರ್ತದಲ್ಲಿ ವಿನಯ್‌ ಹಾಗೂ ನಂದಿತಾ ಸತಿಪತಿಗಳಾದರು. ಅತ್ತೆ ಮಾವ ಇಬ್ಬರೂ ನಂದಿತಾಳನ್ನು ಆತ್ಮೀಯತೆಯಿಂದ ಮನೆ ತುಂಬಿಸಿಕೊಂಡರು. ನಂದಿತಾಳನ್ನು ಆದರದಿಂದ ನೋಡಿಕೊಳ್ಳುತ್ತಿದ್ದರು. ನಾದಿನಿ ಜ್ಯೋತಿಗಂತೂ ಅತ್ತಿಗೆ ಎಂದರೆ ಅಚ್ಚುಮೆಚ್ಚು. ನಂದಿತಾಳೂ ಸಹ ಅತ್ತೆ, ಮಾವನನ್ನು ಪೂಜ್ಯ ಭಾವನೆಯಿಂದ ನೋಡಿಕೊಳ್ಳುತ್ತಿದ್ದಳು. ನಾದಿನಿ ಜ್ಯೋತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಕಾಲೇಜಿನ ವಿಚಾರವನ್ನು ಅತ್ತಿಗೆಯೊಂದಿಗೆ ಹಂಚಿಕೊಳ್ಳುತ್ತಿದ್ದಳು ಜ್ಯೋತಿ. ಅತ್ತಿಗೆ ನಾದಿನಿ ಎನ್ನುವುದಕ್ಕಿಂತ ಅವರಿಬ್ಬರು ಒಳ್ಳೆಯ ಗೆಳತಿಯರಾಗಿದ್ದರು. ವಿನಯ್‌ ಅಂತೂ ನಂದಿತಾಳನ್ನು ಹೃದಯದಲ್ಲಿಟ್ಟುಕೊಂಡು ಅವಳನ್ನು ಸಂತೋಷ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ನಂದಿತಾ ಸಂಸಾರದಲ್ಲಿನ ಯಾವುದೇ ಸಮಸ್ಯೆ, ಗೊಂದಲಗಳನ್ನು ಸುಲಭವಾಗಿ ಪರಿಹರಿಸುತ್ತಿದ್ದಳು. ಆದ್ದರಿಂದ ವಿನಯ್‌ ಅವಳಲ್ಲಿ ವಿಶ್ವಾಸವಿಟ್ಟು ಅವಳಿಗೆ ಸಂಪೂರ್ಣ ಜವಾಬ್ದಾರಿ ಸ್ವಾತಂತ್ರ್ಯ ಕೊಟ್ಟಿದ್ದ. ಅವಳು ಏನೇ ನಿರ್ಣಯ, ನಿರ್ಧಾರ ತೆಗೆದುಕೊಂಡರೂ ಅವನಿಗೆ ಮೆಚ್ಚುಗೆಯೇ.

ಸೊಸೆಯ ಸಹೃದಯಂತಿಕೆಯನ್ನು ನೋಡಿ ತಾವು ನಡೆಸುತ್ತಿದ್ದ ಅನಾಥಾಶ್ರಮ ಹಾಗೂ ಧರ್ಮಕಾರ್ಯಗಳ ವಹಿವಾಟನ್ನು ಅತ್ತೆ ಮಾವ ಸೊಸೆಗೇ ಒಪ್ಪಿಸಿದರು.

“ನಾವು 100 ರೂ. ಸಂಪಾದಿಸಿದರೆ ಅದರಲ್ಲಿ 20 ರೂ. ಆದರೂ ಬಡವರಿಗೆ, ಅಸಹಾಯಕರಿಗೆ ದಾನ ಮಾಡುವುದು ಎಲ್ಲಕ್ಕಿಂತ ಶ್ರೇಷ್ಠ. ಅದೇ ಕಡೆಯವರೆಗೂ ನಮ್ಮನ್ನು ಕಾಪಾಡುವುದು,” ಎಂದು ಮಾವ ಹೇಳುತ್ತಿದ್ದ ಮಾತನ್ನು ನಂದಿತಾ ಅಕ್ಷರಶಃ ಪಾಲಿಸುತ್ತಿದ್ದಳು.

ಅದರಂತೆ ಅತ್ತೆ ಮಾವನವರ ಹುಟ್ಟು ಹಬ್ಬದ ದಿನ ಅಂಧ ಮಕ್ಕಳಿಗೆ ಅನ್ನದಾನ ಹಾಗೂ ಬಟ್ಟೆ ಬರೆಗಳನ್ನು ಕೊಡುತ್ತಿದ್ದಳು. ವಿನಯ್‌ ಸಹ ಇದಕ್ಕೆ ಹೊರತಾಗಿರಲಿಲ್ಲ. ಅಷ್ಟರಲ್ಲಿ ನಂದಿತಾ ತಾಯಿಯಾಗುತ್ತಿದ್ದಾಳೆಂದು ತಿಳಿದು ಅತ್ತೆ ಮನೆಯವರು ಸಂಭ್ರಮಿಸಿದರು. ನಂದಿತಾಳಿಗೆ ಯಾವ ಕೆಲಸ ಮಾಡುವುದಕ್ಕೂ ಬಿಡದೆ ಅಡುಗೆಯವರನ್ನು ನೇಮಿಸಿ ಅವಳನ್ನು ಜಾಗರೂಕತೆಯಿಂದ ನೋಡಿಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಿದರು. ನಂದಿತಾ ಗರ್ಭಿಣಿ ಎಂದು ತಿಳಿದ ಪಲ್ಲವಿಗೆ ತಾನೂ ಮದುವೆಯಾಗಬೇಕೆನ್ನುವ ಹಂಬಲ ಹೆಚ್ಚಾಯಿತು. ತಾನು ಮದುವೆಯಾಗಿ ಅಕ್ಕನಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವಂತೆ ಬಾಳಬೇಕೆಂದು ಕನಸು ಕಾಣಲಾರಂಭಿಸಿದಳು.

ಪಲ್ಲವಿಯ ತಾಯಿ ಅವಳಿಗೆ ಹುಡುಗನನ್ನು ನೋಡಲು ಪ್ರಾರಂಭಿಸಿದರು. ಕೆಲವು ಗಂಡುಗಳು ಪಲ್ಲವಿಯನ್ನು ನಿರಾಕರಿಸಿದಾಗ ಅವಳಿಗೆ ನಿರಾಸೆ ಹಾಗೂ ಮುಖಭಂಗವಾಯಿತು. ಕಡೆಗೆ ಮೋಹನ ಎನ್ನುವ ಹುಡುಗನಿಗೆ ತಂದೆ, ತಾಯಿ ಇಲ್ಲ, ಬೇಕಾದಷ್ಟು ಆಸ್ತಿ ಇದೆ. ಯಾರ ಹಂಗೂ ಇಲ್ಲದೆ ಇರಬಹುದೆಂದು ತಿಳಿದ ಪಲ್ಲವಿ, ತಾನೇ ಆ ಮನೆಯಲ್ಲಿ ಯಜಮಾನಿಯಂತೆ ಸುಖಾವಾಗಿರಬಹುದೆಂದು ಮೋಹನನನ್ನು ಮನಸಾರೆ ಒಪ್ಪಿದಳು.

ಪಲ್ಲವಿ ತಂದೆ ತಾಯಿಗೆ ಅವಳನ್ನು ಮದುವೆ ಮಾಡಲು ಹಣಕಾಸು ಸಾಲದೇ ಬಂದಾಗ, ನಂದಿತಾಳೇ ತಂಗಿಯ ಮದುವೆಗೆ ಸಹಾಯ ಮಾಡಿದಳು. ಸುವರ್ಣಮ್ಮ ಮಗಳ ಸಹಾಯವನ್ನು ಹೊಗಳಿದಾಗ ನಂದಿತಾ, “ಇದ್ಯಾವ ದೊಡ್ಡ ತ್ಯಾಗ ಬಿಡಮ್ಮಾ…. ನೀನು ಈ ವಿಚಾರವನ್ನು ಪಲ್ಲವಿಯ ಬಳಿ ಹೇಳಬೇಡ. ಮೊದಲೇ ಅವಳಿಗೆ ನನ್ನ ಕಂಡರೆ ಅಷ್ಟಕ್ಕಷ್ಟೇ. ಸಧ್ಯ, ಅವಳು ಒಳ್ಳೆಯ ಕಡೆ ಸೇರಿದರೆ ಸಾಕು,” ಎಂದಳು.

ಪಲ್ಲವಿಯ ಮದುವೆ ನಂದಿತಾಳ ಮದುವೆಯಂತೆ ವೈಭವವಾಗಿ ನಡೆಯದೇ ಸರಳವಾಗಿ ನೆರವೇರಿತು. ಪಲ್ಲವಿ ಮೋಹನನೊಂದಿಗೆ ಹೊಸ ಸಂಸಾರ ಪ್ರಾರಂಭಿಸಿದಳು. ಮದುವೆಯಾದ ತಿಂಗಳೊಳಗಾಗಿ ಅವಳಿಗೆ ಒಂದೊಂದೇ ವಿಚಾರ ತಿಳಿಯತೊಡಗಿತು. ಏನೆಂದರೆ ಮೋಹನನಿಗೆ ಆಸ್ತಮಾ ವ್ಯಾಧಿ ಇತ್ತು. ಬೇಕಾದಷ್ಟು ಆಸ್ತಿ ಪಾಸ್ತಿ ಇದೆ ಎಂದು ಹೇಳಿದ್ದು ಶುದ್ಧ ಸುಳ್ಳು. ಮೋಸದಿಂದ ಮದುವೆ ಮಾಡಿದ್ದರು. ಇದರ ಅರಿವಾದ ಪಲ್ಲವಿಗೆ ತಲೆ ಮೇಲೆ ದೊಡ್ಡ ಬಂಡೆ ಅಪ್ಪಳಿಸಿದಂತಾಯಿತು. ಮೋಹನ ಸಾಧಾರಣ ಕೆಲಸದಲ್ಲಿದ್ದು ಕಡಿಮೆ ಸಂಬಳ ಬರುತ್ತಿತ್ತು. ಇದರಿಂದ ಪಲ್ಲವಿಗೆ ಅತೀವ ದುಃಖವಾಯಿತು.

ಈ ಮಧ್ಯೆ  ವಿನಯ್‌ ತಂದೆ ತಾಯಿ ಇಬ್ಬರೂ ಎಲ್ಲಾ ತೀರ್ಥಯಾತ್ರೆ ಮಾಡಲು 4 ತಿಂಗಳ ಪ್ರವಾಸಕ್ಕಾಗಿ ತಯಾರಿ ಮಾಡಿಕೊಂಡರು.

“ನಂದಿತಾ, ನಾವು ಪ್ರವಾಸದಿಂದ ಬರುವ ವೇಳೆಗೆ ನಿನಗೆ ಮಗನೋ ಮಗಳೋ ಹುಟ್ಟಿರುತ್ತೆ. ನಾವು ಕಾತುರದಿಂದ ಕಾಯುತ್ತಿದ್ದೇವೆ. ಮನೆಯಲ್ಲಿ ಅಡುಗೆಯವರು, ಆಳುಕಾಳುಗಳೆಲ್ಲಾ ಇದ್ದಾರೆ. ನೀನೇನು ಆಯಾಸ ಮಾಡಿಕೊಳ್ಳಬೇಡ. ಎಲ್ಲಾ ಕೆಲಸವನ್ನೂ ನೀನೇ ಮಾಡಬೇಡ. ಆರಾಮವಾಗಿ ರೆಸ್ಟ್ ತಗೋ. ಜ್ಯೋತಿ ನಾವು ಬರುವವರೆಗೆ ನಿನ್ನ ಅತ್ತಿಗೆ ಜವಾಬ್ದಾರಿ ನಿನಗೆ ಸೇರಿದ್ದು,” ಎಂದರು.

“ನೀನೇನು ಯೋಚಿಸಬೇಡಮ್ಮಾ….. ಅತ್ತಿಗೆಗೆ ಆಯಾಸವಾಗುವ ಯಾವ ಕೆಲಸನ್ನೂ ಮಾಡಲು ಬಿಡುವುದಿಲ್ಲ. ನಾನು ನೋಡಿಕೊಳ್ಳುತ್ತೇನೆ,” ಎಂದಳು ಜ್ಯೋತಿ.

ಎಲ್ಲರನ್ನೂ ಆಶೀರ್ವದಿಸಿ ತಂದೆ, ತಾಯಿ ಪ್ರವಾಸಕ್ಕೆ ಹೊರಟರು.

ಇತ್ತ ಪಲ್ಲವಿ ಕಟ್ಟಿದ್ದ ಕನಸಿನ ಗೋಪುರ ಸ್ವಲ್ಪ ಸ್ವಲ್ಪವಾಗಿ ಕುಸಿಯತೊಡಗಿತು. ಮೋಹನನ ಕಾಯಿಲೆಗಾಗಿ ನೀರಿನಂತೆ ದುಡ್ಡು ಸುರಿದರೂ ಏನೂ ಪ್ರಯೋಜನವಾಗದೆ ರೋಗ ಉಲ್ಬಣಗೊಂಡಿತ್ತು. ಈ ಮಧ್ಯೆ ಪಲ್ಲವಿ ಗರ್ಭಿಣಿಯಾಗಿದ್ದಳು. ಆರೈಕೆಗೆಂದು ತಾಯಿ ಮನೆಗೆ ಬಂದಳು. ಆದರೆ ಅಲ್ಲಿಯೂ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಕಾರಣ ಅವಳ ತಂದೆ ಬಚ್ಚಲಲ್ಲಿ ಜಾರಿ ಬಿದ್ದು ಕೆಲಸಕ್ಕೆ ಹೋಗುತ್ತಿರಲಿಲ್ಲವಾದ್ದರಿಂದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿತ್ತು. ಆಗಲೂ ನಂದಿತಾ ಮತ್ತು ವಿನಯ್‌ ಇಬ್ಬರೂ ಸೇರಿ  ಅವರಿಗೆ ವೈದ್ಯಕೀಯ ಸೌಲಭ್ಯಕ್ಕಾಗಿ ನೀರಿನಂತೆ ಖರ್ಚು ಮಾಡಿದರು.

“ನಮ್ಮ ನಂದಿತಾ ಅಪರಂಜಿ. ಕೆಲವರು ಗಂಡು ಮಕ್ಕಳಿಲ್ಲ ಎಂದು ಕೊರಗುತ್ತಾರೆ. ನಮ್ಮ ನಂದಿತಾ ಗಂಡು ಮಗನಿಗಿಂತ ಹೆಚ್ಚಾಗಿ ನಮಗೆ ಸಹಾಯ ಮಾಡುತ್ತಿದ್ದಾಳೆ. ವಿನಯ್‌ ಸಹ ಸದ್ಗುಣವಂತ. ಅವನ ಕೈ ಹಿಡಿಯಲು ನಂದಿತಾ ನಿಜವಾಗಿ ಪುಣ್ಯ ಮಾಡಿದ್ದಳು. ಅವಳು ಅದೃಷ್ಟವಂತಳು,” ಎಂದು ತಾಯಿ ಪಲ್ಲವಿಯೆದುರು ನಂದಿತಾಳನ್ನು ಹೊಗಳಿದಾಗ ಅವಳಿಗೆ ಸಹಿಸಲಾಗಲಿಲ್ಲ.

ನಂದಿತಾ ಮಹಿಳಾ ಸಮಾಜದ ಅಧ್ಯಕ್ಷೆಯಾಗಿದ್ದಳು. ಅಲ್ಲಿನ ಕೆಲವು ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹಣದ ಕೊರತೆ ಇದ್ದು ಮುಂದೆ ಓದಲಾಗದವರಿಗೆ ನಂದಿತಾ ಓದಲು ಹಣ ಸಹಾಯ ಮಾಡಿದಳು. ದಾರಿ ತಪ್ಪಿ ಬಂದಿದ್ದ ಎಷ್ಟೊ ಮಕ್ಕಳಿಗೆ ಅವರವರ ನಿಪುಣತೆಗೆ ತಕ್ಕಂತೆ ಬುಟ್ಟಿ ಹೆಣೆಯುವುದು, ಕಸೂತಿ, ಸ್ವೆಟರ್‌ ಹೆಣೆಯುವುದು, ಕರಕುಶಲ ತರಬೇತಿ ಕೊಡಿಸಿ ಬಂದ ಹಣದಲ್ಲಿ ಅವರ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಳು. ಅಲ್ಲದೆ ಬೆಳೆದ ಹೆಣ್ಣುಮಕ್ಕಳ ಮದುವೆಗೂ ಹಣ ಸಹಾಯ ಮಾಡುತ್ತಿದ್ದಳು.

ಕೆಲವು ಸಮಾರಂಭಗಳಿಗೆ ನಂದಿತಾಳನ್ನು ಗೌರವಾನ್ವಿತ ಅತಿಥಿಯಾಗಿ ಆಹ್ವಾನಿಸುತ್ತಿದ್ದರು. ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದಳು. ಹೆಣ್ಣುಮಕ್ಕಳು ಯಾವತ್ತೂ ಹಿಂದುಳಿದಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಮಹಿಳೆ ದುಡಿಯುತ್ತಿದ್ದಾಳೆ. ಎಲ್ಲಿಯವರೆಗೆ ಹೆಣ್ಣುಮಕ್ಕಳು ತಮ್ಮ ಶೀಲಕ್ಕೆ ಭಂಗ ಬರದಂತೆ, ಸನ್ನಡತೆಯಿಂದ ಕೆಲಸ ಮಾಡುತ್ತಾರೋ ಆಗ ನಮ್ಮ ದೇಶ ಮಹಿಳೆಯರಿಂದಲೇ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ. ಪ್ರತಿಯೊಂದು ಮಹಿಳೆಗೂ ತನ್ನದೇ ಆದ ನಿಪುಣತೆ ಇರುತ್ತದೆ. ಅವಳು ನ್ಯಾಯ ಮಾರ್ಗದಲ್ಲಿ ಸಂಪಾದಿಸಿ ಯಶಸ್ಸನ್ನು ಕಾಣಬಹುದು. ನಾವು ಯಾರಿಗೂ ಕಡಿಮೆ ಇಲ್ಲ. ದಿಟ್ಟತನದಿಂದ ಹೆಜ್ಜೆಯನ್ನು ಮುಂದಿಡಬೇಕು, ಹಿಂದೆಗೆಯಬಾರದು. ನಾವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಸನ್ಮಾರ್ಗದಲ್ಲಿ ನಡೆದಾಗ ಸಮಾಜದಲ್ಲಿ ಎಲ್ಲ ಹೆಣ್ಣುಮಕ್ಕಳಿಗೂ ಖಂಡಿತ ಮನ್ನಣೆ, ಗೌರವ ಸಿಗುತ್ತದೆ ಎಂಬ ನಂದಿತಾಳ ಮಾತಿನಿಂದ ಉತ್ತೇಜಿತರಾಗಿ ತಮ್ಮ ಜೀವನದ ಮಾರ್ಗವನ್ನು ಕಂಡುಕೊಂಡರು. ಅಷ್ಟೇ ಅಲ್ಲದೆ ಅವರೆಲ್ಲರ ಪಾಲಿಗೆ ನಂದಿತಾ ಮಾರ್ಗದರ್ಶಕಿಯಾದಳು.

(ಮುಂದಿನ ಸಂಚಿಕೆಯಲ್ಲಿ ಮುಕ್ತಾಯ)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ