ಕಥೆ - ಬಿ. ಪ್ರಾರ್ಥನಾ
ಆಫೀಸಿನಿಂದ ಮನೆಗೆ ಮರಳಿದ ಮೋಹನ್‌ಗೆ ತನ್ನ ಮುದ್ದಿನ ಮಡದಿಯ ಮುಖ ಕಂಡು ಆಯಾಸವೆಲ್ಲ ಮಾಯಾದಂತೆನಿಸಿತು.
``ನೀವು ಫ್ರೆಶ್ ಆಗಿ ಬನ್ನಿ. ಕಾಫಿ ತರುತ್ತೇನೆ,'' ಎನ್ನುತ್ತಾ ಮುಕ್ತಾ ಅಡುಗೆಮನೆಯ ಕಡೆ ನಡೆದಳು.
ಇಬ್ಬರೂ ಕುಳಿತು ಕಾಫಿ ಕುಡಿಯುತ್ತಾ ಮಾತನಾಡತೊಡಗಿದರು. ಪರಸ್ಪರ ಹಂಚಿಕೊಳ್ಳಲು ಅವರಿಗೆ ಅನೇಕ ವಿಷಯಗಳಿದ್ದವು. ವೋಹನ್ ತನ್ನ ಆಫೀಸಿನ ಘಟನೆಗಳನ್ನು ಕುರಿತು ಹೇಳಿದರೆ, ಮುಕ್ತಾ ಆ ದಿನ ಬೆಳಗಿನಿಂದ ನಡೆದ ವಿಷಯಗಳನ್ನು ವಿವರಿಸುತ್ತಿದ್ದಳು.
ಮೋಹನ್‌ಗೆ ತನ್ನ ಮೆಚ್ಚಿನ ಮಡದಿಯನ್ನು ಎಷ್ಟು ಹೊಗಳಿದರೂ ಸಾಲದು, ``ನಿನ್ನ ಕೈ ಕಾಫಿ ರುಚಿ ವಂಡರ್‌ಫುಲ್ ಮುಕ್ತಾ, ಜೊತೆಗೆ ಈ ಗರಿಗರಿ ಪಕೋಡಾ ಸೂಪರ್. ಹೋಟೆಲ್‌ನ ತಿನಿಸುಗಳಿಗಿಂತ ಈ ಮನೆ ತಿಂಡಿಗಳು ರುಚಿಯೋ ರುಚಿ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ನೀನು ಒಬ್ಬ ಉತ್ತಮ ಗೃಹಿಣಿ ಅನ್ನೋದನ್ನು ಸಾಬೀತುಪಡಿಸುತ್ತಾ ಇದೀಯಾ...'' ಎಂದ.
ಪತಿಯ ಮಾತಿನಿಂದ ಮುಕ್ತಾಳಿಗೆ ಏಕಕಾಲಕ್ಕೆ ಲಜ್ಜೆ ಸಂತೋಷಗಳ ಅನುಭವವಾಯಿತು. ಅವಳು ನಸುನಗುತ್ತಾ ತಲೆ ಬಾಗಿಸಿರುವಾಗಲೇ ಮೋಹನ್‌ನ ಗೆಳೆಯ ಗೋಪಾಲ್ ಒಳಗೆ ಬಂದ.
``ಓಹೋ! ಬಾ ಗೋಪಾಲ್, ಅಪರೂಪವಾಗಿ ಬಂದಿದ್ದೀಯಾ ಬಾ ಕುಳಿತುಕೋ,'' ಎಂದು ಗೆಳೆಯನಿಗೆ ಹೇಳಿ ಮೋಹನ್ ಮತ್ತೆ ಪತ್ನಿಯ ಕಡೆ ತಿರುಗಿ, ``ಗೋಪಾಲ್‌ಗೆ ಕಾಫಿ ತಂದುಕೊಡು,'' ಎಂದ.
ತಾವು ತಿಂದಿದ್ದ ತಟ್ಟೆ, ಲೋಟಗಳನ್ನು ಜೋಡಿಸಿಕೊಂಡು ಮುಕ್ತಾ ಕಾಫಿ ತರಲು ಒಳಗೆ ಹೋದಳು.``ಏನು ಮೋಹನ್, ನಾನು ಬರುತ್ತಿದ್ದ ಹಾಗೆ ಅತ್ತಿಗೆಯನ್ನು ಒಳಗೆ ಕಳುಹಿಸಿಬಿಟ್ಟೆ? ಹೋಗಲಿ ಬಿಡು. ಒಳ್ಳೆಯದಾಯಿತು. ನಾನು ನಿನಗೆ ಒಂದು ಸಮಾಚಾರ ತಿಳಿಸೋಣ ಎಂದು ಬಂದೆ. ನಿನ್ನ ಫ್ರೆಂಡ್ ಪ್ರಿಯಾ ತನ್ನ ತಾಯಿಯ ಮನೆಗೆ ವಾಪಸ್ ಬಂದಿದ್ದಾಳೆ. ನನಗೆ ನಿನ್ನೆ ಮಾರ್ಕೆಟ್‌ನಲ್ಲಿ ಸಿಕ್ಕಿದಳು. ನಿನ್ನನ್ನು ತುಂಬಾ ವಿಚಾರಿಸಿದಳು. ಭೇಟಿ ಮಾಡೋದಿಕ್ಕೆ ಹೇಳು ಅಂತಲೂ ತಿಳಿಸಿದಳು,'' ಎಂದ ಗೋಪಾಲ್ ಪ್ರಿಯಾಳ ಹೆಸರು ಹೇಳಿದೊಡನೆಯೇ ಮೋಹನ್ ಮನಸ್ಸು ಅತೀತಕ್ಕೆ ಜಾರಿತು. ಗೋಪಾಲ್ ಮುಂದೆ ಏನು ಹೇಳಿದನೆಂಬುದು ಅವನ ಅರಿವಿಗೇ ಬರಲಿಲ್ಲ. 6 ತಿಂಗಳ ಹಿಂದಿನವರೆಗೂ ಈ ಹೆಸರು ಅವನ ಮೈಮನಗಳನ್ನು ಆವರಿಸಿತ್ತು. ಅವನ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಅವನ ಪ್ರಿಯಾ, ಅವನ ಪ್ರೀತಿ, ಅವನ ಪ್ರಾಣ......
ಕಾರ್ತಿಕ್ ಏರ್ಪಡಿಸಿದ್ದ ಒಂದು ಪಾರ್ಟಿಯಲ್ಲಿ ಪ್ರಿಯಾ ವಿಶೇಷವಾಗಿ ಕಂಗೊಳಿಸುತ್ತಿದ್ದಳು. ಅವಳಿಂದ ಆಕರ್ಷಿತರಾಗದಿದ್ದವರು ಆ ಪಾರ್ಟಿಯಲ್ಲಿ ಯಾರೂ ಇಲ್ಲವೆಂದೇ ಹೇಳಬೇಕು. ಸಂಕೋಚ ಸ್ವಭಾವದವನಾದ ಮೋಹನ್ ದೂರದಿಂದಲೇ ಅವಳನ್ನು ನೋಡಿ ಆನಂದಿಸುತ್ತಿದ್ದ. ಪಾರ್ಟಿ ಮುಗಿದ ನಂತರ ಅವಳ ಮನೆ ಮೋಹನ್‌ನ ಮನೆಯ ದಾರಿಯಲ್ಲಿದೆ ಎಂದೂ, ಆದ್ದರಿಂದ ಅವಳನ್ನು ಮನೆ ತಲುಪಿಸಬೇಕೆಂದೂ ಕಾರ್ತಿಕ್ ಹೇಳಿದಾಗ ಮೋಹನ್ ಸಂತೋಷದಿಂದ ಒಪ್ಪಿಕೊಂಡ. ಮನೆಗೆ ಹಿಂದಿರುಗುವ ದಾರಿಯಲ್ಲಿ ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಂಡರು. ಪ್ರಿಯಾ ಕಾಲೇಜು ವಿದ್ಯಾರ್ಥಿನಿ. ಮೋಹನ್ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಸ್ಪರ್ಧಾ ಪರೀಕ್ಷೆಯ ಸಿದ್ಧತೆಯಲ್ಲಿದ್ದ.
``ಹಾಗಾದರೆ ನೀನು ಬುದ್ಧಿವಂತನೇ ಇರಬೇಕು. ನನಗೆ ಅರ್ಥವಾಗದೆ ಇರುವ ವಿಷಯಗಳನ್ನು ನಿನ್ನ ಹತ್ತಿರ ಹೇಳಿಸಿಕೊಳ್ಳಲು ಬರಲೇನು?'' ಪ್ರಿಯಾ ಮೋಹಕವಾಗಿ ಕೇಳಿದಳು.