ಕಥೆ – ಬಿ. ಪ್ರಾರ್ಥನಾ

ಆಫೀಸಿನಿಂದ ಮನೆಗೆ ಮರಳಿದ ಮೋಹನ್‌ಗೆ ತನ್ನ ಮುದ್ದಿನ ಮಡದಿಯ ಮುಖ ಕಂಡು ಆಯಾಸವೆಲ್ಲ ಮಾಯಾದಂತೆನಿಸಿತು.

“ನೀವು ಫ್ರೆಶ್‌ ಆಗಿ ಬನ್ನಿ. ಕಾಫಿ ತರುತ್ತೇನೆ,” ಎನ್ನುತ್ತಾ ಮುಕ್ತಾ ಅಡುಗೆಮನೆಯ ಕಡೆ ನಡೆದಳು.

ಇಬ್ಬರೂ ಕುಳಿತು ಕಾಫಿ ಕುಡಿಯುತ್ತಾ ಮಾತನಾಡತೊಡಗಿದರು. ಪರಸ್ಪರ ಹಂಚಿಕೊಳ್ಳಲು ಅವರಿಗೆ ಅನೇಕ ವಿಷಯಗಳಿದ್ದವು. ವೋಹನ್‌ ತನ್ನ ಆಫೀಸಿನ ಘಟನೆಗಳನ್ನು ಕುರಿತು ಹೇಳಿದರೆ, ಮುಕ್ತಾ ಆ ದಿನ ಬೆಳಗಿನಿಂದ ನಡೆದ ವಿಷಯಗಳನ್ನು ವಿವರಿಸುತ್ತಿದ್ದಳು.

ಮೋಹನ್‌ಗೆ ತನ್ನ ಮೆಚ್ಚಿನ ಮಡದಿಯನ್ನು ಎಷ್ಟು ಹೊಗಳಿದರೂ ಸಾಲದು, “ನಿನ್ನ ಕೈ ಕಾಫಿ ರುಚಿ ವಂಡರ್‌ಫುಲ್ ಮುಕ್ತಾ, ಜೊತೆಗೆ ಈ ಗರಿಗರಿ ಪಕೋಡಾ ಸೂಪರ್‌. ಹೋಟೆಲ್‌ನ ತಿನಿಸುಗಳಿಗಿಂತ ಈ ಮನೆ ತಿಂಡಿಗಳು ರುಚಿಯೋ ರುಚಿ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ನೀನು ಒಬ್ಬ ಉತ್ತಮ ಗೃಹಿಣಿ ಅನ್ನೋದನ್ನು ಸಾಬೀತುಪಡಿಸುತ್ತಾ ಇದೀಯಾ…” ಎಂದ.

ಪತಿಯ ಮಾತಿನಿಂದ ಮುಕ್ತಾಳಿಗೆ ಏಕಕಾಲಕ್ಕೆ ಲಜ್ಜೆ ಸಂತೋಷಗಳ ಅನುಭವವಾಯಿತು. ಅವಳು ನಸುನಗುತ್ತಾ ತಲೆ ಬಾಗಿಸಿರುವಾಗಲೇ ಮೋಹನ್‌ನ ಗೆಳೆಯ ಗೋಪಾಲ್ ಒಳಗೆ ಬಂದ.

“ಓಹೋ! ಬಾ ಗೋಪಾಲ್‌, ಅಪರೂಪವಾಗಿ ಬಂದಿದ್ದೀಯಾ ಬಾ ಕುಳಿತುಕೋ,” ಎಂದು ಗೆಳೆಯನಿಗೆ ಹೇಳಿ ಮೋಹನ್‌ ಮತ್ತೆ ಪತ್ನಿಯ ಕಡೆ ತಿರುಗಿ, “ಗೋಪಾಲ್‌ಗೆ ಕಾಫಿ ತಂದುಕೊಡು,” ಎಂದ.

ತಾವು ತಿಂದಿದ್ದ ತಟ್ಟೆ, ಲೋಟಗಳನ್ನು ಜೋಡಿಸಿಕೊಂಡು ಮುಕ್ತಾ ಕಾಫಿ ತರಲು ಒಳಗೆ ಹೋದಳು.“ಏನು ಮೋಹನ್‌, ನಾನು ಬರುತ್ತಿದ್ದ ಹಾಗೆ ಅತ್ತಿಗೆಯನ್ನು ಒಳಗೆ ಕಳುಹಿಸಿಬಿಟ್ಟೆ? ಹೋಗಲಿ ಬಿಡು. ಒಳ್ಳೆಯದಾಯಿತು. ನಾನು ನಿನಗೆ ಒಂದು ಸಮಾಚಾರ ತಿಳಿಸೋಣ ಎಂದು ಬಂದೆ. ನಿನ್ನ ಫ್ರೆಂಡ್‌ ಪ್ರಿಯಾ ತನ್ನ ತಾಯಿಯ ಮನೆಗೆ ವಾಪಸ್‌ ಬಂದಿದ್ದಾಳೆ. ನನಗೆ ನಿನ್ನೆ ಮಾರ್ಕೆಟ್‌ನಲ್ಲಿ ಸಿಕ್ಕಿದಳು. ನಿನ್ನನ್ನು ತುಂಬಾ ವಿಚಾರಿಸಿದಳು. ಭೇಟಿ ಮಾಡೋದಿಕ್ಕೆ ಹೇಳು ಅಂತಲೂ ತಿಳಿಸಿದಳು,” ಎಂದ ಗೋಪಾಲ್ ‌ಪ್ರಿಯಾಳ ಹೆಸರು ಹೇಳಿದೊಡನೆಯೇ ಮೋಹನ್‌ ಮನಸ್ಸು ಅತೀತಕ್ಕೆ ಜಾರಿತು. ಗೋಪಾಲ್ ‌ಮುಂದೆ ಏನು ಹೇಳಿದನೆಂಬುದು ಅವನ ಅರಿವಿಗೇ ಬರಲಿಲ್ಲ. 6 ತಿಂಗಳ ಹಿಂದಿನವರೆಗೂ ಈ ಹೆಸರು ಅವನ ಮೈಮನಗಳನ್ನು ಆವರಿಸಿತ್ತು. ಅವನ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಅವನ ಪ್ರಿಯಾ, ಅವನ ಪ್ರೀತಿ, ಅವನ ಪ್ರಾಣ……

ಕಾರ್ತಿಕ್‌ ಏರ್ಪಡಿಸಿದ್ದ ಒಂದು ಪಾರ್ಟಿಯಲ್ಲಿ ಪ್ರಿಯಾ ವಿಶೇಷವಾಗಿ ಕಂಗೊಳಿಸುತ್ತಿದ್ದಳು. ಅವಳಿಂದ ಆಕರ್ಷಿತರಾಗದಿದ್ದವರು ಆ ಪಾರ್ಟಿಯಲ್ಲಿ ಯಾರೂ ಇಲ್ಲವೆಂದೇ ಹೇಳಬೇಕು. ಸಂಕೋಚ ಸ್ವಭಾವದವನಾದ ಮೋಹನ್‌ ದೂರದಿಂದಲೇ ಅವಳನ್ನು ನೋಡಿ ಆನಂದಿಸುತ್ತಿದ್ದ. ಪಾರ್ಟಿ ಮುಗಿದ ನಂತರ ಅವಳ ಮನೆ ಮೋಹನ್‌ನ ಮನೆಯ ದಾರಿಯಲ್ಲಿದೆ ಎಂದೂ, ಆದ್ದರಿಂದ ಅವಳನ್ನು ಮನೆ ತಲುಪಿಸಬೇಕೆಂದೂ ಕಾರ್ತಿಕ್‌ ಹೇಳಿದಾಗ ಮೋಹನ್‌ ಸಂತೋಷದಿಂದ ಒಪ್ಪಿಕೊಂಡ. ಮನೆಗೆ ಹಿಂದಿರುಗುವ ದಾರಿಯಲ್ಲಿ ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಂಡರು. ಪ್ರಿಯಾ ಕಾಲೇಜು ವಿದ್ಯಾರ್ಥಿನಿ. ಮೋಹನ್‌ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಸ್ಪರ್ಧಾ ಪರೀಕ್ಷೆಯ ಸಿದ್ಧತೆಯಲ್ಲಿದ್ದ.

“ಹಾಗಾದರೆ ನೀನು ಬುದ್ಧಿವಂತನೇ ಇರಬೇಕು. ನನಗೆ ಅರ್ಥವಾಗದೆ ಇರುವ ವಿಷಯಗಳನ್ನು ನಿನ್ನ ಹತ್ತಿರ ಹೇಳಿಸಿಕೊಳ್ಳಲು ಬರಲೇನು?” ಪ್ರಿಯಾ ಮೋಹಕವಾಗಿ ಕೇಳಿದಳು.

“ಓಹೋ! ಖಂಡಿತ ಬಾ,” ಮೋಹನ್‌ ತಡಮಾಡದೆ ಉತ್ತರಿಸಿದ.

ಮೋಹನ್‌ ತನ್ನ ತಂದೆತಾಯಿಗಳಿಗೆ ಒಬ್ಬನೇ ಮಗ. ಅವನ ಮನೆಗೆ ಹೋಗಲು ಪ್ರಿಯಾಳಿಗೆ ಯಾವ ಅಡ್ಡಿಯೂ ಇರಲಿಲ್ಲ. ಅವನ ತಂದೆ ಆಫೀಸ್‌ಗೆ ಹೋಗುತ್ತಿದ್ದರು. ಅವನ ಮುಗ್ಧೆ ತಾಯಿ ಇವರಿಬ್ಬರೂ ಗಂಟೆಗಟ್ಟಲೆ ಕೋಣೆಯಲ್ಲಿ ಕುಳಿತಿದ್ದರೂ ಬೇಸರಿಸುತ್ತಿರಲಿಲ್ಲ. ಪ್ರಿಯಾಳ ತಾಯಿ ವಿಚ್ಛೇದಿತ ಮಹಿಳೆ. ಆಕೆ ಹೆಚ್ಚು ಕಾಲ ಮನೆಯಿಂದ ಹೊರಗೇ ಇರುತ್ತಿದ್ದರು. ಹೀಗಾಗಿ ಇವರಿಬ್ಬರ ಭೇಟಿ ಅನಾಯಸವಾಗಿ ನಡೆಯುತ್ತಿತ್ತು. ಕ್ರಮೇಣ ಮೋಹನ್‌ ಮತ್ತು ಪ್ರಿಯಾರ ಸಂಬಂಧ ಗಾಢವಾಗತೊಡಗಿತು. ಎಳೆಯ ವಯಸ್ಸು ಮತ್ತು ಬಣ್ಣ ಬಣ್ಣದ ಕನಸುಗಳು ಅವರಿಬ್ಬರನ್ನು ಬಿಗಿಯತೊಡಗಿದವು. ಪರಸ್ಪರ ಸಾಮೀಪ್ಯಕ್ಕಾಗಿ ಕಾತರಿಸುತ್ತಿದ್ದರು. ಪ್ರಿಯಾ ಮೋಹನ್‌ನ ಪ್ರತಿಯೊಂದು ಮಾತಿಗೂ ತಲೆದೂಗುತ್ತಿದ್ದಳು. ಮೋಹನ್‌ ಅವಳಿಗೆ ಡ್ರೆಸ್‌, ನೇಲ್‌ಪಾಲಿಶ್‌, ಲಿಪ್‌ಸ್ಟಿಕ್‌, ಪರ್ಫ್ಯೂಮ್ ಇತ್ಯಾದಿಗಳನ್ನು ಗಿಫ್ಟ್ ಕೊಡುತ್ತಿದ್ದ. ಅವಳು ತನಗಿಷ್ಟವಾದದ್ದನ್ನು ಕೊಳ್ಳುವಂತೆ ತನ್ನ ಕ್ರೆಡಿಟ್‌ಕಾರ್ಡ್‌ನ್ನು ಕೂಡ ಅವಳಿಗೆ ಕೊಟ್ಟಿದ್ದ. ಇದಕ್ಕೆ ಬದಲಾಗಿ ಪ್ರಿಯಾ ತನ್ನನ್ನೇ ಮೋಹನ್‌ಗೆ ಸಮರ್ಪಿಸಿದ್ದಳು. ಈ ಅನುಭವದ ನಂತರ ಮೋಹನ್‌ ಮನಸ್ಸಿಗೆ ಪ್ರಿಯಾಳನ್ನು ಬಿಟ್ಟು ಬೇರೇನೂ ಹಿಡಿಸುತ್ತಿರಲಿಲ್ಲ.

“ಪ್ರಿಯಾ, ನೀನಿಲ್ಲದೆ ನಾನು ಬದುಕಿರಲಾರೆ. ಬರಿದಾಗಿದ್ದ ನನ್ನ ಬಾಳಿನಲ್ಲಿ ನೀನು ಬಣ್ಣ ತುಂಬಿ ಬೆಳಕು ಮೂಡಿಸಿದೆ….” ಎನ್ನುತ್ತಿದ್ದ. ಮೋಹನ್‌ ಅವಳ ಪ್ರೀತಿಯ ಅಲೆಯಲ್ಲಿ ತೇಲಿ ಹೋಗುತ್ತಿದ್ದ, “ಈ ಕಣ್ಣುಗಳು ನನ್ನ ಬದುಕನ್ನು ಮುಳುಗಿಸುತ್ತಿವೆ. ಕಣ್ಣು ಬಿಟ್ಟರೆ ನಿನ್ನದೇ ಹುಡುಕಾಟ. ಕಣ್ಣು ಮುಚ್ಚಿದರೆ ನಿನ್ನದೇ ಕನಸು.”

ಈ ಪ್ರೀತಿಯ ಪ್ರಭಾವ ಮೋಹನ್‌ ಜೀವನದ ಮೇಲೂ ಆಗತೊಡಗಿತು. ಅವನ ಪರೀಕ್ಷಾ ಸಿದ್ಧತೆ ಕುಂಠಿತವಾಗತೊಡಗಿತು. ಓದಿನ ಕಡೆಗೆ ಗಮನ ನೀಡಲು ಅವನಿಗೆ ಸಾಧ್ಯವಾಗಲಿಲ್ಲ. ಪ್ರಿಯಾಳ ರೂಪವೇ ಅವನ ಕಣ್ಮುಂದೆ ಕುಣಿಯುತ್ತಿತ್ತು. ಇದರ ಪರಿಣಾಮವಾಗಿ ಅವನು ಪರೀಕ್ಷೆಯಲ್ಲಿ ಹಿಂದುಳಿದ. ತಾನು ಬಯಸಿದ ಉದ್ಯೋಗ ಪಡೆಯಲು ವಿಫಲನಾಗಿ ಅವನ ಕ್ರೆಡಿಟ್‌ ಕಾರ್ಡ್, ಮೊಬೈಲ್ ಫೋನ್‌ ಮುಂತಾದ ಖರ್ಚುಗಳಿಗೆ ಕಡಿವಾಣ ಬಿದ್ದಿತು.

ಆ ದಿನ ನಡೆದ ಘಟನೆ ಮೋಹನ್‌ಗೆ ಇಂದೂ ಚೆನ್ನಾಗಿ ನೆನಪಿದೆ. ಅವನಿಗೆ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ದೊರೆಯದ ನೋವಿಗೆ ದುಃಖ ಸೂಚಿಸಲು ಅವನ ಕೆಲವು ಗೆಳೆಯರು ಮನೆಗೆ ಬಂದಿದ್ದರು. ಪ್ರಿಯಾ ಸಹ ಅವರ ಜೊತೆಯಲ್ಲಿದ್ದಳು. ಆದರೆ ಅವಳ ಮುಖದಲ್ಲಿ ದುಃಖದ ಸೂಚನೆಯೇ ಇರಲಿಲ್ಲ. ಒಬ್ಬ ಸ್ನೇಹಿತ ಮೋಹನ್‌ಗೆ, “ನೀನು ಪ್ರಿಯಾಳ ಹಿಂದೆ ಬಿದ್ದು ಹೀಗಾದೆ,” ಎಂದ.

ಅವಳು ನಿರ್ಲಕ್ಷ್ಯವಾಗಿ ನಗುತ್ತಾ, “ಫೇಲ್ ‌ಆಗಿರೋದೂ ಅಲ್ಲದೆ, ಅದನ್ನು ಇನ್ನೊಬ್ಬರ ತಲೆಗೆ ಕಟ್ಟುತ್ತಾ ಇದೀಯಾ?” ಎಂದು ವ್ಯಂಗ್ಯವಾಗಿ ಹೇಳಿದಳು.

ಮೋಹನ್‌ಗೆ ಅವಳ ಮಾತಿನಿಂದ ನೋವಾದರೂ ಅದನ್ನು ಹುಡುಗಾಟ ಎಂದು ಭಾವಿಸಿದ. ಅವಳಿನ್ನೂ ತನ್ನ ಬಾಳಿನ ಭಾಗವಾಗಿಲ್ಲದೆ ಇರುವುದರಿಂದ ಹೀಗಿದ್ದಾಳೆ. ಇಬ್ಬರೂ ಒಂದಾದಾಗ ಪರಸ್ಪರ ಜವಾಬ್ದಾರಿ ಬರುತ್ತದೆ ಎಂದುಕೊಂಡ. ನಂತರ ಅವನು ಹೆಚ್ಚು ತಡ ಮಾಡದೆ ಅವಳ ಮುಂದೆ ಮದುವೆಯ ಪ್ರಸ್ತಾಪವನ್ನಿಟ್ಟ. ಪ್ರಿಯಾ ಕೊಂಚ ಕಾಲ ಸ್ತಬ್ಧವಾಗಿ ಅವನನ್ನು ನೋಡಿದ ನಂತರ, “ಇದೇನು ಮಾತು ಮೋಹನ್‌? ನೀನು ನನಗೆ ತುಂಬಾ ಇಷ್ಟ ನಿಜ. ಆದರೆ ಮದುವೆಯ ಮಾತೇಕೆ? ನಾನು ನಿನ್ನವಳೇ ಆಗಿದ್ದೇನಲ್ಲ,” ಎಂದಳು.

“ಆದರೆ ಹೀಗೆ ಎಷ್ಟು ದಿನ ಇರೋದಕ್ಕೆ ಆಗುತ್ತೆ? ನಮ್ಮಿಬ್ಬರ ಮನೆಗಳಲ್ಲೂ ಮದುವೆಯ ಬಗ್ಗೆ ಯೋಚಿಸುತ್ತಾರೆ. ಎಲ್ಲಿಯವರೆಗೆ ಸುಮ್ಮನಿರೋಕೆ ಸಾಧ್ಯ? ನಾನು ಕೆಲಸಕ್ಕೆ ಪ್ರಯತ್ನಿಸ್ತಿದ್ದೀನಿ. ಚಿಕ್ಕದಾದರೂ ಸರಿ, ಸಂಸಾರ ನಡೆಸಿಕೊಂಡು ಹೋಗಬಹುದು,” ಎಂದ ಮೋಹನ್‌.

“ಚಿಕ್ಕ ಕೆಲಸಾನಾ…? ಅರ್ಥ ಮಾಡಿಕೊ ಮೋಹನ್‌…. ಹಣ ಇಲ್ಲದೆ ಎಂಥ ಜೀವನ? ನೀನೇ ನೋಡು, ಈಚೆಗೆ ನೀನು ನನಗೇನೂ ಗಿಫ್ಟ್ ಕೊಡೋದಕ್ಕೆ ಆಗಿಲ್ಲ. ನನಗೇನೂ ಶಾಪಿಂಗ್‌ ಮಾಡೋಕೂ ಆಗುತ್ತಿಲ್ಲ. ಹಾಗಿರುವಾಗ ಮದುವೆ ಬಗ್ಗೆ ಯೋಚಿಸುತ್ತಿದ್ದೀಯಾ? ಮದುವೆ ಅಂದರೆ ಏನು…? ಅಡುಗೆ ಮಾಡು, ಮನೆ ನೋಡಿಕೋ…. ಆಮೇಲೆ ಮಕ್ಕಳು ನಂತರ ಅವರ ಭವಿಷ್ಯದ ಚಿಂತೆಯಲ್ಲಿ ಒದ್ದಾಡು….. ಅಬ್ಬಾ! ನನಗೆ ಇವುಗಳನ್ನೆಲ್ಲ ಮಾಡೋದಕ್ಕೆ ಆಗಲ್ಲ. ನಾನು ಸ್ವತಂತ್ರ ವಿಚಾರಗಳನ್ನು ಇಟ್ಟುಕೊಂಡಿರುವ ಹುಡುಗಿ. ನನ್ನ ತಾಯಿಯನ್ನು ನೋಡು ಒಬ್ಬರೇ ಎಷ್ಟು ಆರಾಮಾಗಿ ಇದ್ದಾರೆ. ನಾನೂ ಅಂತಹ ಜೀವನವನ್ನೇ ಇಷ್ಟಪಡುತ್ತೇನೆ….”

ಪ್ರಿಯಾಳ ಮಾತಿಗೆ ಮೋಹನ್‌ ನಿರುತ್ತರನಾದ. ಇದಾದ ನಂತರ ಅವಳು ತನ್ನಿಂದ ದೂರ ಸರಿಯುತ್ತಿರುವಂತೆ ಮೋಹನ್‌ಗೆ ಭಾಸವಾಯಿತು. ಎಷ್ಟೋ ದಿನಗಳ ಕಾಲ ಅವಳ ಭೇಟಿ, ಫೋನ್‌ ಕಾಲ್ ‌ಯಾವುದೂ ಇರಲಿಲ್ಲ. ಎಂದಾದರೂ ಸಿಕ್ಕಿದಾಗ ಆ ಬಗ್ಗೆ ಕೇಳಿದರೆ, “ನೀನು ಇಷ್ಟೇ ಏನು ನನ್ನನ್ನು ಅರ್ಥ ಮಾಡಿಕೊಂಡಿರೋದು? ನಾನು ನಿನ್ನನ್ನು ಮರೆಯುತ್ತೇನೆಯೇ? ನಾನು ನನ್ನನ್ನು ಬೇಕಾದರೆ ಮರೆಯುತ್ತೇನೆ. ಆದರೆ ನನ್ನ ಪ್ರತಿ ಉಸಿರಿನಲ್ಲೂ ನೀನಿದ್ದೀಯಾ…” ಎಂದು ಬಾಯಿ ಮುಚ್ಚಿಸುತ್ತಿದ್ದಳು.

ಮಿತಭಾಷಿಯಾದ ಮೋಹನ್‌ಗೆ ಮುಂದೇನೂ ಹೇಳಲಾಗುತ್ತಿರಲಿಲ್ಲ. ಹೆಚ್ಚು ಮಾತನಾಡಿದರೆ ಅವಳನ್ನು ಕಳೆದುಕೊಂಡು ಬಿಡುವೆನೇನೋ ಎಂಬ ಭಯ ಅವನಿಗೆ.

ಒಂದು ದಿನ ಪ್ರಿಯಾ, “ನಾನು ಸ್ವಲ್ಪ ದಿವಸ ನನ್ನ ಮಾಮನ ಮನೆಗೆ ಹೋಗುತ್ತಿದ್ದೇನೆ…. ನೀನಿಲ್ಲದೆ ನಾನು ಸಂತೋಷವಾಗಿರುತ್ತೇನೆ ಅಂತ ತಿಳಿದಿದ್ದೀಯಾ? ಖಂಡಿತ ಇಲ್ಲ. ನಿನಗೋಸ್ಕರ ನಾನು ಈಗ ಹೊರಟಿರುವುದು. ನಾನು ಇಲ್ಲಿದ್ದರೆ ನಿನಗೆ ಓದೋದಕ್ಕೆ ಆಗಲ್ಲ. ಇದು ನಮಗೆ ಪರೀಕ್ಷಾ ಕಾಲ…. ನಾವು ಇದರಲ್ಲಿ ಪಾಸ್‌ ಆಗಿ ತೋರಿಸಬೇಕು…..” ಎಂದಳು.

ಕಷ್ಟಪಟ್ಟು ಮೋಹನ್‌ ಮನಸ್ಸನ್ನು ಶಾಂತಗೊಳಿಸಿಕೊಂಡ. `ತಾನು ಪ್ರಿಯಾಳನ್ನು ಪಡೆಯಲು ಜೀವನದಲ್ಲಿ ಗುರಿ ಮುಟ್ಟಬೇಕಾಗಿದೆ,’ ಎಂದು ಯೋಚಿಸಿ ಮೋಹನ್‌ ಮತ್ತೊಮ್ಮೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿಸಿಕೊಂಡ. ಈ ಸಲ ಅವನು ಪ್ರಾರಂಭದಿಂದಲೇ ಶ್ರಮವಹಿಸಿ ಓದತೊಡಗಿದ. ಫೋನ್‌ನಲ್ಲಿ ಅವಳೊಡನೆ ಮಾತನಾಡಿ ಮನಸ್ಸನ್ನು ಹಗುರಗೊಳಿಸುತ್ತಿದ್ದ.

ಪ್ರಿಯಾಳಿಂದ ದೂರ ಉಳಿದು ದಿನ ಕಳೆಯುವುದು ಅವನಿಗೆ ಸುಲಭದ ವಿಷಯವಾಗಿರಲಿಲ್ಲ. ಬೀಸುತ್ತಿದ್ದ ತಂಗಾಳಿಯೂ ಅವನ ಮೈ ಮನಸ್ಸಿಗೆ ತಂಪೆರೆಯುತ್ತಿರಲಿಲ್ಲ. ಪ್ರಿಯಾ ಫೋನ್‌ನಲ್ಲೂ ಸಿಗುವುದೂ ಕಡಿಮೆಯಾಯಿತು. ಇಮೇಲ್ ಮೂಲಕ ಅವಳಿಂದ ಉತ್ತರ ನಿರೀಕ್ಷಿಸುತ್ತಾ ಇದ್ದ. ಕಡೆಗೆ 3 ತಿಂಗಳ ನಂತರ ಅವಳಿಂದ ಉತ್ತರ ಬಂದಿತು. ಅದರಲ್ಲಿ ಅವಳು ಮೋಹನ್‌ ಇಲ್ಲದ ತನ್ನ ನೀರಸ ಬಾಳಿನ ಬಗ್ಗೆ ವರ್ಣಿಸಿದ್ದಳು. ಅದನ್ನು ಓದಿ ಮೋಹನನ ಕಣ್ಣಾಲಿಗಳು ತುಂಬಿಬಂದವು. ಪ್ರಿಯಾಳ ಪ್ರೀತಿಯ ಬಗ್ಗೆ ತನ್ನ ನಂಬಿಕೆ ಸಡಿಲಗೊಳಿಸಿಕೊಂಡಿದ್ದಕ್ಕಾಗಿ ಅವನು ತನ್ನನ್ನೇ ಹಳಿದುಕೊಂಡ.

`ಪ್ರತಿಯೊಬ್ಬರೂ ಪ್ರೀತಿಸುವ ಮತ್ತು ಅದನ್ನು ವ್ಯಕ್ತಪಡಿಸುವ ರೀತಿ ಬೇರೆ ಬೇರೆಯಾಗಿರುತ್ತದೆ. ಅಷ್ಟಕ್ಕೂ ಪ್ರಿಯಾ ಹುಡುಗಿ. ಲಜ್ಜೆ ಅವಳ ಸ್ವಭಾವವೇ ಆಗಿರುತ್ತದೆ. ಎಲ್ಲವನ್ನೂ ಬಾಯಿಬಿಟ್ಟು ಹೇಳಲಾರಳು. ನಾನೇ ಅದನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು. ಒಬ್ಬ ಒಳ್ಳೆಯ ಪ್ರೇಮಿಯನ್ನು ಪಡೆದ ನಾನೇ ಧನ್ಯ,’ ಎಂದು ಮೋಹನ್‌ ಸಮಾಧಾನಪಟ್ಟುಕೊಂಡನು.

ಮೋಹನನ ಪರೀಕ್ಷೆ ಮುಗಿಯಿತು. ಕೆಲವು ದಿನಗಳ ನಂತರ ಫಲಿತಾಂಶಗಳು ಬಂದಿತು. ಈ ಬಾರಿ ಅವನ ತಂದೆತಾಯಿಯರ ಸಂತೋಷಕ್ಕೆ ಎಣೆಯೇ ಇಲ್ಲ. ಗೆಳೆಯರಿಗೆಲ್ಲಾ ಮನೆಯಲ್ಲಿ ಒಂದು ಪಾರ್ಟಿ ಏರ್ಪಡಿಸಿದ. ಆ ಸಂಜೆ ಪ್ರಿಯಾ ಜೊತೆಯಲ್ಲಿಲ್ಲದ ಕೊರತೆ ಅವನನ್ನು ಕಾಡಿತು. ಪ್ರಿಯಾಳಿಗೆ ಈ ಸಂತೋಷದ ಸಮಾಚಾರವನ್ನು ಸ್ವತಃ ತಿಳಿಸಿ ಅವಳ ಮುಖದ ಮೇಲೆ ಮಿಂಚುವ ಆನಂದದ ಬೆಳಕನ್ನು ಕಾಣಲು ಬಯಸಿದ. ಫೋನ್‌ನಲ್ಲಿ ವಿಷಯ ತಿಳಿಸಿ ಈ ದೃಶ್ಯವನ್ನು ಕಳೆದುಕೊಳ್ಳಲು ಅವನಿಗೆ ಇಷ್ಟವಿರಲಿಲ್ಲ.

ಪ್ರಿಯಾಳ ವಿಳಾಸ ತಿಳಿಯಲು ಮೋಹನ್‌ ಗೆಳೆಯ ಕಾರ್ತಿಕ್‌ ಬಳಿಗೆ ಹೋಗಿ ತನ್ನ ಮನಸ್ಸನ್ನು ತೆರೆದಿಟ್ಟ, “ನನ್ನ ಪರೀಕ್ಷೆಯ ಸಿದ್ಧತೆಗಾಗಿ ಪ್ರಿಯಾ ಇಷ್ಟು ದಿನಗಳು ದೂರ ಇದ್ದಾಳೆ. ಈ ಅಗಲಿಕೆಯ ದಿನಗಳು ನಮ್ಮಿಬ್ಬರಿಗೂ ಬಹಳ ಕಷ್ಟಕರವಾಗಿವೆ. ನನ್ನ ಸಫಲತೆಗಾಗಿ ಅವಳು ಈ ತ್ಯಾಗ ಮಾಡಿದ್ದಾಳೆ. ನಾನಿನ್ನು ನನ್ನ ಕಾಲ ಮೇಲೆ ನಿಲ್ಲಬಲ್ಲೆ. ಆದಷ್ಟು ಬೇಗನೆ ಅವಳನ್ನು ಮದುವೆ ಆಗಬೇಕೆಂದಿದ್ದೇನೆ….”

“ಅರೇ ಮೋಹನ್‌, ನಿನ್ನಂತಹ ಗುಣಶಾಲಿ ಹುಡುಗ ಆ ಪ್ರಿಯಾಳಂತಹ ಬಣ್ಣದ ಚಿಟ್ಟೆಯ ಬಲೆಗೆ ಬೀಳುತ್ತೀ ಎಂದು ನಾನು ಭಾವಿಸಿರಲಿಲ್ಲ. ಅವಳು ಹುಡುಗರ ಜೊತೆಗೆ ಸುತ್ತುತ್ತಾಳೆಯೇ ಹೊರತು, ಮದುವೆ ಆಗಲು ಒಪ್ಪುವುದಿಲ್ಲ. ಅವಳ ಹಿಂದೆ ಬಿದ್ದು ನೀನು ಯಾಕೆ ನಿನ್ನ ಬಾಳು ಹಾಳು ಮಾಡಿಕೊಳ್ಳುತ್ತೀಯ…?”

ಮೋಹನನ ಮನಸ್ಸಿನ ಶಾಂತ ಸರೋವರಕ್ಕೆ ಕಾರ್ತಿಕ್‌ ಮೊದಲ ಕಲ್ಲು ತೂರಿದ. ಪ್ರಿಯಾಳ ಬಗ್ಗೆ ಅವನು ಮುಂದೆ ಹೇಳಿದ್ದನ್ನೆಲ್ಲಾ ಕೇಳುತ್ತಾ ಮೋಹನನಿಗೆ ಮಾತೇ ಹೊರಡಲಿಲ್ಲ.

“ಪ್ರಿಯಾಳಿಗೆ ಎಷ್ಟು ಜನ ಪ್ರಿಯಕರರಿದ್ದಾರೆ ಎಂಬ ವಿಷಯ ನಿನಗೆ ಗೊತ್ತಿದೆಯಾ? ಹೊಸ ಹೊಸ ಹುಡುಗರ ಸ್ನೇಹ ಬೆಳೆಸಿ ಅವರೊಂದಿಗೆ ರಾಸಲೀಲೆ ಆಡುತ್ತಾಳೆ…. ಮೊದಲಿನಿಂದಲೂ ಅವಳು ಹೀಗೇ ಮಾಡುತ್ತಾ ಬಂದಿದ್ದಾಳೆ…… ಅವಳ ತಾಯಿ ಕೂಡ ಅಂಥವಳೇ….” ಎನ್ನುತ್ತಾ ಕಾರ್ತಿಕ್‌ ವ್ಯಂಗ್ಯವಾಗಿ ನಗತೊಡಗಿದ.

ಮೋಹನನ ಬಾಳಿನ ನಾಯಕಿಯಾಗಿದ್ದವಳು ಈಗ ಇದ್ದಕ್ಕಿದ್ದಂತೆ ಖಳನಾಯಕಿಯಾಗಿ ತೋರತೊಡಗಿದಳು. ಅವನ ಮನಸ್ಸು ಅಲ್ಲೋಲಕಲ್ಲೋವಾಯಿತು. ತಾನು ನಿಜವಾಗಿಯೂ ಮೋಸ ಹೋದೆನೋ ಅಥವಾ ಪ್ರಿಯಾ ತನ್ನ ಪಾಲಾಗುವಳೆಂದು ಕಾರ್ತಿಕ್

ಈರ್ಷ್ಯೆ ಪಡುತ್ತಿರುವನೇ? ಮೋಹನನ ಮನಸ್ಸು ತಳಮಳಿಸಿತು. ಇದು ತನ್ನ ಜೀವನದ ಮುಖ್ಯ ನಿರ್ಧಾರ, ಆದ್ದರಿಂದ ಸ್ವತಃ ಪತ್ತೆ ಮಾಡಲು ತೀರ್ಮಾನಿಸಿದ. ಈ ಬಗ್ಗೆ ಸಾಕಷ್ಟು ವಿಚಾರಿಸಿದ. ವಿಷಯಗಳು ಹೊರ ಬರುತ್ತಿದ್ದಂತೆ ಅವನು ಹೆಚ್ಚು ಹೆಚ್ಚು ಖಿನ್ನನಾಗತೊಡಗಿದ. ಪ್ರಿಯಾಳ ಪ್ರೀತಿಯಲ್ಲಿ ಅವನು ಹುಚ್ಚನಾಗಿದ್ದ. ಅವಳ ಜೇನಿನಂತಹ ಮಾತುಗಳಿಗೆ ಮರುಳಾಗಿದ್ದ. ಆ ಹುಚ್ಚು ಪ್ರೀತಿಯ ಸುಳಿಯಿಂದ ಮೋಹನ್‌ ಕ್ರಮೇಣ ಕಷ್ಟಪಟ್ಟು ಹೊರಬಂದ. ತಂದೆ ತಾಯಿ ತೋರಿಸಿದ ಹುಡುಗಿಯನ್ನು ನೋಡಿ ಮದುವೆಗೆ ಒಪ್ಪಿಕೊಂಡ.

ಮುಕ್ತಾ ಮುದ್ದಾದ ಹುಡುಗಿ. ತನ್ನ ಬಾಳ ಸಂಗಾತಿ ಆಗುವವಳಿಗೆ ತನ್ನ ಬದುಕಿನ ವೃತ್ತಾಂತವನ್ನೆಲ್ಲಾ ತಿಳಿಸಬಯಸಿದ ಮೋಹನ್ ಅವಳೊಡನೆ ಏಕಾಂತವಾಗಿ ಮಾತನಾಡಲು ಆಶಿಸಿದ.

“ನಾವು ಮುಂದೆ ಒಟ್ಟಾಗಿ ಬಾಳ ಬೇಕಾಗಿರುವುದರಿಂದ ಪರಸ್ಪರ ವಿಷಯ ಹಂಚಿಕೊಳ್ಳುವುದು ಒಳ್ಳೆಯದು. ನಾನು ನನ್ನ ಬಗ್ಗೆ ಹೇಳುತ್ತೇನೆ. ಅದನ್ನು ಕೇಳಿದ ಮೇಲೆ ನಿನ್ನ ನಿರ್ಧಾರನ್ನು ತಿಳಿಸು,” ಎಂದು ಮೋಹನ್‌ ಪ್ರಾಮಾಣಿಕವಾಗಿ ಪ್ರಿಯಾಳ ವಿಷಯವೆಲ್ಲವನ್ನೂ ಅವಳಿಗೆ ತಿಳಿಸಿದ.

ಕ್ಷಣಕಾಲ ಸುಮ್ಮನಿದ್ದ ಮುಕ್ತಾ, “ಹೋಗಲಿ ಬಿಡಿ. ನಿಮಗೆ ಪ್ರೀತಿಸುವ ಅವಕಾಶ, ಅನುಭವ ಎರಡೂ ಸಿಕ್ಕಿದೆ. ನಿಜ ಹೇಳಬೇಕೆಂದರೆ ನನಗೂ ಲವ್ ಮ್ಯಾರೇಜ್‌ ಆಗಬೇಕು ಅಂತ ಇಷ್ಟ ಇತ್ತು. ಆದರೆ ಅದು ಸಾಧ್ಯವಿಲ್ಲದ ಮಾತು. ನಮ್ಮಲ್ಲಿ ಹುಡುಗಿಯರು ಕಣ್ಣೆತ್ತಿ ಆ ಕಡೆ ಈ ಕಡೆ ನೋಡುವ ಹಾಗೂ ಇಲ್ಲ…..”

“ಅದಕ್ಕೆ ನಿನಗೆ ಬೇಜಾರಾಗಿದೆಯಾ…?”

ಮುಕ್ತಾ ಮಾತನಾಡಲಿಲ್ಲ. ಅವಳ ಕಣ್ಣುಗಳು ಹೌದು ಎನ್ನುವಂತೆ ಬಾಗಿದವು.

“ನಿಮ್ಮ ಮನಸ್ಸಿನಲ್ಲಿ ವಿಷಯ ಮುಚ್ಚಿಟ್ಟಿದ್ದರೆ ಭಾರ ಆಗಿರುತ್ತಿತ್ತು. ಈಗ ನಿಮಗೆ ತಿಳಿಸಿದ್ದರಿಂದ ಮನಸ್ಸು ಹಗರುವಾಗಿರುತ್ತದೆ.”

“ನೀನೂ ಅಷ್ಟೇ…. ನಿನ್ನ ಮನಸ್ಸಿನ ಮಾತು ಹೇಳಿದ್ದೀಯ. ಇನ್ನು ನಮ್ಮ ನಡುವೆ ಯಾವ ಸಂಕೋಚ, ಅನುಮಾನ ಉಳಿಯಬಾರದು.”

ಇಬ್ಬರೂ ಬಿಚ್ಚು ಮನಸ್ಸಿನಿಂದ ವಿವಾಹಕ್ಕೆ ಸನ್ನದ್ಧರಾದರು. ಅಂದಿನಿಂದಲೇ ಮೋಹನ್‌ ಮುಕ್ತಾಳ ಜೀನನದಲ್ಲಿ ಬಣ್ಣ, ಬೆಡಗು ಮತ್ತು ಬೆಳಕನ್ನು ತುಂಬುವ ನಿರ್ಧಾರ ಮಾಡಿದ. ಪ್ರೀತಿಯಿಂದ ದೊರೆಯುವ ಎಲ್ಲ ಸಂತಸನನ್ನೂ ಅನಳ ಬಾಳಿನಲ್ಲಿ ತುಂಬಲು ಪ್ರಯತ್ನಿಸಿದ. ಅವನ ಈ ಪ್ರಯತ್ನದ ಫಲವಾಗಿ ಮುಕ್ತಾಳಿಗೆ ತನ್ನದೂ ಒಂದು ಲವ್ ಮ್ಯಾರೇಜ್‌ ಎಂದು ಭಾಸವಾಯಿತು.

`ವಿವಾಹಗಳು ಸ್ವರ್ಗದಲ್ಲಿ ನಿಗದಿಯಾಗಿರುತ್ತವೆ. ಭೂಮಿಯ ಮೇಲೆ ಅವು ನಡೆಯುತ್ತವೆ,’ ಎಂದು ಹೇಳಿಕೆಯುಂಟು. ಅಂತೆಯೇ ಮೋಹನ್‌ ಮತ್ತು ಮುಕ್ತಾರ ವಿವಾಹ ನಡೆದು ಅವರು ಬಾಳ ಸಂಗಾತಿಗಳಾದರು.

ಇಂದು ಗೋಪಾಲ್ ‌ಬಂದು ಮೋಹನನ ಸಂಸಾರವನ್ನು ಅಲುಗಿಸುವ ಸುದ್ದಿ ಕೊಟ್ಟನು. ಆದರೂ ಈಗ ಮೋಹನ್‌ ಶಾಂತನಾಗಿದ್ದ. ಅವನ ಸಂಸಾರದ ರಥ ಸುಭದ್ರವಾಗಿದ್ದು ಅದರ ಲಗಾಮು ಮುಕ್ತಾಳ ಕೈಯಲ್ಲಿತ್ತು. ಇಬ್ಬರೂ ಪ್ರೀತಿಯಲ್ಲಿ ತೇಲುತ್ತಾ ಬಾಳನ್ನು ಬೆಳಗಿಸುವ ಬಣ್ಣ, ಬೆಡಗು ಮತ್ತು ಬೆಳಕನ್ನು ಅನುಭವಿಸುತ್ತಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ