ದೂರ ಬಹು ದೂರದ ತನಕ ಪಸರಿಸಿರುವ ಸಮುದ್ರ, ಅತ್ಯಂತ ಪ್ರಶಾಂತ ಗಾಳಿ, ಬಗೆಬಗೆಯ ಸಮುದ್ರ ಪಕ್ಷಿಗಳು, ದೂರದ ತನಕ ವ್ಯಾಪಿಸಿಕೊಂಡಿರುವ ಕಾಡು, ಗೋಡಂಬಿ ಹಾಗೂ ತೆಂಗಿನ ಮರಗಳು ಮತ್ತು ಅದ್ಭುತ ದೃಶ್ಯಗಳ ಜೊತೆ ರುಚಿ ರುಚಿಯಾದ ಸಮುದ್ರ ಉತ್ಪನ್ನಗಳನ್ನು ಸವಿಯಬೇಕಿದ್ದರೆ ಅಂಡಮಾನ್‌ ನಿಕೋಬಾರ್‌ಗೆ ಒಮ್ಮೆ ಪ್ರವಾಸ ಹೋಗಿಬನ್ನಿ.

ಇಲ್ಲಿನ ನೀಲಿ ಬಣ್ಣದ ನೀರು ಹಾಗೂ ಶಾಂತ ಸಮುದ್ರ ಯಾವುದೇ ನಿಟ್ಟಿನಲ್ಲೂ ಮಾಲ್ಡೀವ್ ‌ಸ್ಪೆಷಲ್ ಮಾರಿಷಸ್‌, ಮಲೇಶಿಯಾಗಿಂತ ಕಡಿಮೆ ಏನಿಲ್ಲ. ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹವನ್ನು ಪ್ರೀತಿಯಿಂದ `ಎಮರಾಲ್ಡ್ ಐಲ್ಯಾಂಡ್ಸ್’ ಎಂದು ಕರೆಯಲಾಗುತ್ತದೆ. ಇದರ ವಿಶೇಷತೆಯೇನೆಂದರೆ, ಇಲ್ಲಿನ ಅನುಪಮ ಸೌಂದರ್ಯ ಮತ್ತು ಚಕಿತಗೊಳಿಸುವ ಸಸ್ಯ ಸಂಪನ್ಮೂಲ ಮತ್ತು ಜೀವಜಂತುಗಳು, ಅತ್ಯಾಕರ್ಷಕ ಪಿಕ್ನಿಕ್‌ ಸ್ಪಾಟ್ಸ್ ಹಾಗೂ ಇತರೆ ಕೆಲವು ಅಚ್ಚರಿದಾಯಕ ಸಮುದ್ರದ ಸಂಗತಿಗಳು, ಪ್ರವಾಸಿಗರನ್ನು ಸದಾ ಕೈ ಬೀಸಿ ಕರೆಯುತ್ತಿರುತ್ತವೆ. ಸಮುದ್ರ ತೀರ ತನ್ನ ವಿಸ್ತಾರ ಹಾಗೂ ಬಂಗಾರ ವರ್ಣದ ಮರಳಿನಿಂದಾಗಿ ಮನಮೋಹಕ ಎನಿಸಿಕೊಂಡಿದೆ.

ಪ್ರಮುಖ ಪ್ರವಾಸಿ ಸ್ಥಳಗಳು

ಪೋರ್ಟ್‌ ಬ್ಲೇರ್‌ : ಹಿಂದೊಮ್ಮೆ ಪೋರ್ಟ್‌ ಬ್ಲೇರ್‌ ಕರಿ ನೀರಿನ ಶಿಕ್ಷೆಗೆ ಕುಖ್ಯಾತಿ ಪಡೆದಿತ್ತು. ಅದೀಗ ಆಧುನಿಕ ಸುಖ ಸೌಲಭ್ಯಗಳ ನಗರವಾಗಿದ್ದು, ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹದ ರಾಜಧಾನಿಯಾಗಿದೆ. ಇಲ್ಲಿ ಜಲಕ್ರೀಡೆಯ ವ್ಯವಸ್ಥೆ ಕೂಡ ಇದೆ. ಅದು ಹೆಚ್ಚುವರಿ ಆಕರ್ಷಣೆ ಕೇಂದ್ರವಾಗಿದೆ. ಪೋರ್ಟ್‌ ಬ್ಲೇರ್‌ನಿಂದ 35 ಕಿ.ಮೀ. ದೂರದಲ್ಲಿರುವ ಪಕ್ಷಿಗಳ ನಡುಗಡ್ಡೆ ಅದನ್ನು `ಸನ್ ಸೆಟ್‌ ಪಾಯಿಂಟ್‌’ ಎಂದು ಕರೆಯುತ್ತಾರೆ. ಕಾರ್ಬಿನ್‌ ಕೋಲ್ಸ್, ಮೌಂಟ್‌ ಹ್ಯಾರಿಟ್‌, ರೋಸ್‌ ನಡುಗಡ್ಡೆ, ಮಧುಬನ ತೀರ ಮತ್ತು ಕಾಲಾಪತ್ಥರ್‌ ಪೋರ್ಟ್‌ ಬ್ಲೇರ್‌ನ ಜನಪ್ರಿಯ ಪ್ರವಾಸಿ ತಾಣಗಳಾಗಿವೆ.

ಸೆಲ್ಯುಲರ್‌ ಜೈಲ್ ‌: ಅಂಡಮಾನ್‌ ಪ್ರವಾಸಕ್ಕೆ ಹೋಗುವ ಪ್ರತಿಯೊಬ್ಬ ಪ್ರವಾಸಿಗರೂ ಸೆಲ್ಯುಲರ್‌ ಜೈಲ್ ‌ನೋಡುವ ಕಾತುರ ಹೊಂದಿರುತ್ತಾರೆ. ಇದು ನಮ್ಮ ದೇಶದ ಪ್ರಮುಖ ಪಾರಂಪರಿಕ ತಾಣ. ಸ್ವಾತಂತ್ರ್ಯ ಚಳವಳಿಗಾರರನ್ನು ಇಲ್ಲಿ ಕೂಡಿ ಹಾಕಿ ಅವರಿಗೆ ಬಗೆಬಗೆಯ ಚಿತ್ರಹಿಂಸೆ ನೀಡಲಾಗುತ್ತಿತ್ತು. ಅದಕ್ಕೆ ಈ ಜೈಲು ಮೂಕಸಾಕ್ಷಿ ಎಂಬಂತೆ ನಿಂತಿದೆ. 1906ರಲ್ಲಿ ಇದರ ನಿರ್ಮಾಣ ಪೂರ್ಣಗೊಂಡಿತು. ಇದರಲ್ಲಿ ಶಿಕ್ಷೆಗೊಳಗಾದವರನ್ನು ಇಡಲಾಗುತ್ತಿತ್ತು. ಇದನ್ನು ಕರಿ ನೀರಿನ ಶಿಕ್ಷೆ ಎಂದು ಹೇಳಲಾಗುತ್ತಿತ್ತು.

ಹ್ಯಾವ್ ಲಾಕ್‌ ದ್ವೀಪ : ಇಲ್ಲಿನ ಪರಿಶುದ್ಧ ನೀರು ಪ್ರವಾಸಿಗರ ಗಮನ ಸೆಳೆಯುವಂತೆ ಮಾಡುತ್ತದೆ. ಇಲ್ಲಿ ಡಾಲ್ಛಿನ್‌ಗಳು ಹಿಂಡು ಹಿಂಡಾಗಿ ಈಜುತ್ತಿದ್ದು ಗಮನ ಸೆಳೆಯುತ್ತವೆ. ಕನ್ನಡಿಯ ಪ್ರತಿಬಿಂಬದಂತೆ ನೀರಿನೊಳಗಿನ ಸಸ್ಯಗಳು, ಬಣ್ಣ ಬಣ್ಣದ ಮೀನುಗಳನ್ನು ನೋಡಿ ಪ್ರವಾಸಿಗರು ಬಾಹ್ಯ ಪ್ರಪಂಚವನ್ನು ಮರೆತೇಬಿಡುತ್ತಾರೆ.

ಲಾಂಗ್‌ ಐಲ್ಯಾಂಡ್‌ : ಇದು ಕೂಡ ಅಂಡಮಾನ್‌ ದ್ವೀಪದ ಜನಪ್ರಿಯ ಪ್ರವಾಸಿ ತಾಣ. ಇಲ್ಲೂ ಕೂಡ ಪ್ರವಾಸಿಗರು ಡಾಲ್ಛಿನ್ ಗಳನ್ನು ನೋಡುವ ಉತ್ಸಾಹದಿಂದ ಕಾಯುತ್ತಿರುತ್ತಾರೆ. ಲಾಲಾಜಿ ಬೇ, ಲಾಂಗ್‌ ಐಲ್ಯಾಂಡ್‌ನ ಒಂದು ಪ್ರಮುಖ ಸ್ಥಳ.

ಮಹಾತ್ಮ ಗಾಂಧಿ ಮರೀನ್‌ ನ್ಯಾಷನಲ್ ಪಾರ್ಕ್‌: ಅಂಡಮಾನ್‌ನ ರಮ್ಯ ತಾಣಗಳಲ್ಲಿ ಮಹಾತ್ಮ ಗಾಂಧಿ ಮರೀನ್‌ ನ್ಯಾಷನಲ್ ಪಾರ್ಕ್‌ ಕೂಡ ಸೇರಿದೆ. ವಾಂಡೂರ್‌ ಎಂಬ ಸ್ಥಳದಲ್ಲಿ ಈ ಪಾರ್ಕ್‌ ಇದ್ದು, ಮುಕ್ತ ಸಮುದ್ರ ಹಾಗೂ ಆಯಕಟ್ಟಿನ ಕೊಲ್ಲಿ ಸೇರಿದಂತೆ 15 ದ್ವೀಪಗಳಲ್ಲಿ ಇದು ವ್ಯಾಪಿಸಿಕೊಂಡಿದೆ. ಇಲ್ಲಿ ಅಪರೂಪದ ಹವಳಗಳು, ಸಮುದ್ರ ಜೀವಿಗಳನ್ನು ನೋಡಲು ಜನರು ಬರುತ್ತಾರೆ.

ಆಂಥ್ರಾ ಪಾಲಾಜಿಕಲ್ ಮ್ಯೂಸಿಯಂ : ‘ಆಂಥ್ರಾಪಾಲಜಿ ಅಂದರೆ ಮಾನವಶಾಸ್ತ್ರ. ಈ ಸಂಗ್ರಹಾಲಯದಲ್ಲಿ ಅಂಡಮಾನ್‌ನ ಆದಿವಾಸಿಗಳ ಜೀವನದ ಅವಶೇಷಗಳನ್ನು ಕಾಣಬಹುದು. ಅದರ ಜೊತೆಗೆ ಬೇರೆ ಬೇರೆ ಆದಿವಾಸಿಗಳ ಕಲಾಕೃತಿಗಳು, ಪಾತ್ರೆಗಳು, ಪೋಷಾಕುಗಳು, ಮೂರ್ತಿಗಳನ್ನು ಕಾಣಬಹುದು.

ನಿಕೋಬಾರ್‌ನ ಪ್ರಮುಖ ತಾಣಗಳು

ಈ ದ್ವೀಪದ ಪ್ರಮುಖ ಆಕರ್ಷಣೆಯೆಂದರೆ ಪಕ್ಷಿಗಳು ಮತ್ತು ಹೂಗಳು. ನಿಕೋಬಾರ್‌ನ ರಮ್ಯ, ವೈವಿಧ್ಯ ತಾಣಗಳಲ್ಲಿ ಸಮುದ್ರ ತೀರಗಳು ಕೂಡ ಸೇರಿವೆ. ಇಲ್ಲಿಗೆ ಬರುವ ಪ್ರವಾಸಿಗರು ಶಾಂತ ನೈಸರ್ಗಿಕ ಸೌಂದರ್ಯದ ಆನಂದ ಪಡೆಯಬಹುದು. ನಿಕೋಬಾರ್‌ ದ್ವೀಪದಲ್ಲಿ ದೂರ ಬಹುದೂರದ ತನಕ ಸುಂದರ ತಾಣಗಳು ಪಸರಿಸಿಕೊಂಡಿವೆ.

ಇಂದಿರಾ ಪಾಯಿಂಟ್

ಇಲ್ಲಿನ ಕೆಲವು ಪ್ರವಾಸಿ ತಾಣಗಳು ಸಾಕಷ್ಟು ಜನಪ್ರಿಯವಾಗಿವೆ. ಇಲ್ಲಿ ವರ್ಷವಿಡೀ ಪ್ರವಾಸಿಗರು ಹಿಂಡುಹಿಂಡಾಗಿ ಹೋಗುತ್ತಿರುತ್ತಾರೆ. ಅದರಲ್ಲೊಂದು ತಾಣ ಇಂದಿರಾ ಪಾಯಿಂಟ್‌. ಇದೊಂದು ವಿಶಾಲ ವೈಟ್‌ ಹೌಸ್‌ ಆಗಿದೆ. ಗಗನಚುಂಬಿಯಂತಿರುವ ಇದರ ಕಟ್ಟಡ ಅತ್ಯಂತ ಸುಂದರವಾಗಿದೆ. ಅಕ್ಕಪಕ್ಕದ ನೈಸರ್ಗಿಕ ಸೌಂದರ್ಯದ ನಡುವೆ ಮಾಲಿನ್ಯರಹಿತ ವಾತಾವರಣದ ನಡುವೆ ಒಂದಿಷ್ಟು ಹೊತ್ತು ಕಳೆಯುವುದು ಖುಷಿ ಕೊಡುತ್ತದೆ.

ಇಂದಿರಾ ಪಾಯಿಂಟ್‌ ವೈಟ್‌ ಹೌಸ್‌ ನಿರ್ಮಾಣಗೊಂಡಿತ್ತು. ಮಲೇಶಿಯಾದ ನಗರ ಮಲಕ್ಕಾದಿಂದ ಬರುವ ಹಡಗುಗಳಿಗೆ ಇದು ಆಗಿನಿಂದ ದ್ವೀಪಸ್ತಂಭವಾಗಿದೆ. ಈ ವೈಟ್‌ ಸ್ಟೇಷನ್‌ನ್ನು ಮೊದಲು ಪಾರ್ಸಸ್‌ ಪಾಯಿಂಟ್‌ ಹಾಗೂ ನಂತರ `ಪೈಗೊಮೆಲಿಯನ್‌ ಪಾಯಿಂಟ್‌’ ಎಂದು ಕರೆಯಲಾಯಿತು. ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಕೂಡ ಈ ಪಾಯಿಂಟ್‌ಗೆ ಬಂದಿದ್ದರು. ಹೀಗಾಗಿ ಅದಕ್ಕೆ ಅವರ ಹೆಸರನ್ನು ಇಡಲಾಯಿತು.

ಕಾರ್‌ ನಿಕೋಬಾರ್‌

ಮೂಲತಃ ಇದು ನಿಕೋಬಾರ್‌ ದ್ವೀಪ ಸಮೂಹದ ಕೇಂದ್ರ ಸ್ಥಳ. ತೆಂಗಿನ ಮರಗಳಿಂದ ಇಡೀ ಪ್ರದೇಶ ಹಸಿರುಮಯವಾಗಿದೆ.

ಪೋರ್ಟ್‌ ಬ್ಲೇರ್‌ನಿಂದ ಈ ದ್ವೀಪಕ್ಕೆ ತಲುಪಲು ಸಮುದ್ರ ಮಾರ್ಗದಲ್ಲಿ 16 ಗಂಟೆ ಸಮಯ ತಗುಲುತ್ತದೆ. ನಿಕೋಬಾರ್‌ನ ಗುಡಿಸಲುಗಳಲ್ಲಿ ವಾಸಿಸುವುದು ಒಂದು ವಿಶೇಷ ಅನುಭವ ನೀಡುತ್ತದೆ. ಅ ಬಿದಿರಿನಿಂದ ರೂಪಿಸಲ್ಪಟ್ಟಿರುತ್ತವೆ.

ಕಟ್ಚ್‌ಲಾ ದ್ವೀಪ

ಈ ದ್ವೀಪದ ಸೌಂದರ್ಯ ಹೋಲಿಕೆಯಿಲ್ಲದ್ದು. ಇದರ ವಿಸ್ತೀರ್ಣ 146.5 ಚದರ ಕಿ.ಮೀ.ಗಳು ತನ್ನ ಅದ್ಭುತ ನೈಸರ್ಗಿಕ ಸೌಂದರ್ಯದಿಂದ ಜಗತ್ತಿನಾದ್ಯಂತದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುತ್ತದೆ. ಇಲ್ಲಿನ ಸಮುದ್ರದ ನೀರು ಸ್ಛಟಿಕದಷ್ಟು ಶುದ್ಧವಾಗಿ ಗೋಚರಿಸುತ್ತದೆ. ಇಲ್ಲಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತದ ವಿಹಂಗಮ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು.

ಗ್ರೇಟ್‌ ನಿಕೋಬಾರ್‌ ದ್ವೀಪ

ಅಂಡಮಾನ್‌ ಹಾಗೂ ನಿಕೋಬಾರ್‌ ಹಲವು ದ್ವೀಪಗಳ ಸಮೂಹ. ಅದರಲ್ಲೊಂದು ಗ್ರೇಟ್‌ ನಿಕೋಬಾರ್‌ ದ್ವೀಪ. ಜಗತ್ತಿನ ಮೂಲೆ ಮೂಲೆಯಿಂದ ಈ ದ್ವೀಪದ ಸೌಂದರ್ಯ ಆಸ್ವಾದಿಸಲು ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.

ಕಾರ್ಬಿನ್‌ ಕೋಲ್ಸ್

ಸಮುದ್ರ ತೀರ ಹಸಿರು ದೃಶ್ಯಗಳಿಂದ ಆವೃತವಾದ ಈ ಸಮುದ್ರ ತೀರ ಬಹಳ ನಯನ ಮನೋಹರವಾಗಿದೆ. ಇಲ್ಲಿಂದಲೂ ಕೂಡ ಸೂರ್ಯಾಸ್ತದ ವಿಹಂಗಮ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಇಲ್ಲಿ ಸಮುದ್ರದಲ್ಲಿ ಈಜುತ್ತಲೇ ಸಮುದ್ರದಾಳದ ಜಗತ್ತಿನ ಅವಲೋಕನ ಮಾಡಿಕೊಳ್ಳಬಹುದು.

ರೋಸ್‌ ದ್ವೀಪ     

ಈ ದ್ವೀಪ ಬ್ರಿಟಿಷ್‌ ವಾಸ್ತುಶಿಲ್ಪದ ಅವಶೇಷಗಳಿಗೆ ಪ್ರಸಿದ್ಧವಾಗಿದೆ. ರೋಸ್‌ ದ್ವೀಪ 200 ಎಕರೆ ಪ್ರದೇಶದಲ್ಲಿ ಪಸರಿಸಿದೆ. ಫಿನಿಕ್ಸ್ ಕೊಲ್ಲಿಯಿಂದ ಇಲ್ಲಿಗೆ ಕೆಲವೇ ನಿಮಿಷಗಳಲ್ಲಿ ತಲುಪಬಹುದು. ಮುಂಜಾನೆ ಸಮಯದಲ್ಲಿ ಈ ದ್ವೀಪ ಪಕ್ಷಿ ಪ್ರೇಮಿಗಳಿಗೆ ಸ್ವರ್ಗ ಸಮಾನ ಎನಿಸುತ್ತದೆ.

ಬ್ಯಾರನ್‌ ದ್ವೀಪದ ಜ್ವಾಲಾಮುಖಿ

ಭಾರತದ ಏಕೈಕ ಸಕ್ರಿಯ ಜ್ವಾಲಾಮುಖಿ ಇಲ್ಲಿದೆ. ಮೇ 28, 2005ರಲ್ಲಿ ಇಲ್ಲಿ ಜ್ವಾಲಾಮುಖಿ ಸ್ಛೋಟಗೊಂಡಿತ್ತು. ಆಗಿನಿಂದಲೂ ಲಾವಾರಸ ಹೊರಸೂಸುತ್ತಲೇ ಇದೆ. ಬ್ಯಾರನ್‌ ದ್ವೀಪದಲ್ಲಿ ಬೆಂಕಿಯ ರಸ ಚಿಮ್ಮುತ್ತಿರುವುದನ್ನು ಪ್ರವಾಸಿಗರು ಬಹಳ ಅಚ್ಚರಿಯಿಂದ ನೋಡುತ್ತಾರೆ.

ಡಿಗ್ಲಿ ಪುರ

ಕಿತ್ತಳೆ, ಅಕ್ಕಿ ಹಾಗೂ ಸಮುದ್ರ ಆಹಾರಕ್ಕೆ ಈ ಸ್ಥಳ ಪ್ರಸಿದ್ಧವಾಗಿದೆ. ಇಲ್ಲಿನ ಸ್ಯಾಂಡ್ ಪೀಕ್‌ ಅತಿ ಹೆಚ್ಚು ಎತ್ತರದ ಶಿಖರವಾಗಿದ್ದು, ಅದು 732 ಮೀಟರ್‌ ಎತ್ತರದ್ದಾಗಿದೆ. ಅಂಡಮಾನ್‌ನ ಏಕೈಕ ನದಿ ಕ್‌ಪಾಂಗ್‌ ಇಲ್ಲಿಯೇ ಉಗಮವಾಗಿದೆ.

ವೈಪರ್‌ ದ್ವೀಪ

ಭಾರತ ಸ್ವಾತಂತ್ರ್ಯಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ವೈಪರ್‌ ದ್ವೀಪದಲ್ಲಿ ಇರಿಸಲಾಗುತ್ತಿತ್ತು. ಈಗ ಆ ಸ್ಥಳ ಪ್ರವಾಸಿ ಸ್ಥಳವಾಗಿ ವಿಕಸಿತಗೊಂಡಿದೆ. ಆಂಗ್ಲರ ಕಾಲದಲ್ಲಿ ಗಲ್ಲಿಗೇರಿಸುತ್ತಿದ್ದ ಸ್ಥಳ ಈಗಲೂ ಅಲ್ಲಿ ಮೂಕಸಾಕ್ಷಿಯಾಗಿ ನಿಂತಿದೆ. 1872 ರಲ್ಲಿ ಭಾರತದ ಗವರ್ನರ್‌ ಜನರಲ್ ಆಗಿದ್ದ ವಾರ್ಡ್‌ಮೋನನ್ನು ಹತ್ಯೆ ಮಾಡಿದ್ದ ಶೇರ್‌ ಅಲಿಯನ್ನು ಇದೇ ಸ್ಥಳದಲ್ಲಿ ಗಲ್ಲಿಗೇರಿಸಲಾಗಿತ್ತು.

ರೆಡ್‌ ಸ್ಕಿನ್‌ ದ್ವೀಪ

ಇಲ್ಲಿ ಆಚರಿಸುವ ಮುಖ್ಯ ಉತ್ಸವವೆಂದರೆ ಐಲ್ಯಾಂಡ್‌ ಟೂರಿಸಂ ಫೆಸ್ಟಿವಲ್. ಡಿಸೆಂಬರ್‌ ನಿಂದ ಜನವರಿ 15ರ ತನಕ ಈ ಉತ್ಸವ ನಡೆಯುತ್ತದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರಿಂದ ಬಗೆ ಬಗೆಯ ಕಾರ್ಯಕ್ರಮಗಳು ಜರುಗುತ್ತವೆ. ಅಂಡಮಾನ್ ನಿಕೋಬಾರ್‌ ದ್ವೀಪ ಸಮೂಹದ ಆದಾಯದ ಮುಖ್ಯ ಮೂಲ ಪ್ರವಾಸೋದ್ಯಮವೇ ಆಗಿದೆ.

– ಅನಿತಾ ಜೈನ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ