ಕಥೆ – ವೀಣಾ ರಾವ್
ಇವತ್ತೂ ದಿವ್ಯಾ ಅದೇ ಬಾಲ್ಕನಿಯಲ್ಲಿ ನಿಂತಿದ್ದಾಳೆ. ಇಲ್ಲೇ ಅವಳು ನಕ್ಷತ್ರಗಳ ಜೊತೆ ಮಾತನಾಡಲು ಶುರು ಮಾಡಿದ್ದು, ಇಲ್ಲಿಂದಲೇ ಧ್ರುವತಾರೆಯನ್ನು ಗುರುತಿಸಿದ್ದು. ಇಂದು ಅವಳು ನಕ್ಷತ್ರಗಳ ಪ್ರಪಂಚವನ್ನು ಕ್ಷಮೆ ಕೇಳಲು ಬಂದಿದ್ದಾಳೆ. ಏಕೆಂದರೆ ಅವುಗಳ ಜೊತೆ ಮಾತನಾಡಿ ತುಂಬಾ ಸಮಯವೇ ಕಳೆದಿದೆ.
ತಾಯಿಯ ನಡವಳಿಕೆ ಬದಲಾಗಿದೆ. ಅದರಿಂದ ಅವಳು ಕೊಡುತ್ತಿದ್ದ ಬಾಲ್ಕನಿಯಲ್ಲಿ ನಿಲ್ಲುವ ಶಿಕ್ಷೆಯೂ ನಿಂತುಹೋಗಿದೆ. ಚಿಕ್ಕವಳಿದ್ದಾಗ ಕಿವಿ ಹಿಡಿದುಕೊಂಡು ಬಾಲ್ಕನಿಯಲ್ಲಿ ನಿಂತುಕೊಳ್ಳುವ ಶಿಕ್ಷೆ ಎಷ್ಟು ಸಲ ಅನುಭವಿಸಿದ್ದಾಳೋ… ಅದು ಸಾಧಾರಣ ವಿಷಯಕ್ಕೂ ಶಿಕ್ಷೆ. ಹಿಂದಿನ ಜನ್ಮದ ಬದ್ಧ ವೈರಿಯೇನೋ ಎಂಬಂತೆ. ದಿವ್ಯಾ ಆಜ್ಞಾಕಾರಿಯಾದ ಮುದ್ದಾದ ಹುಡುಗಿ, ಈಗಲೂ ಹಾಗೆ ಇದ್ದಾಳೆ. ತಾಯಿ ಅವಳಿಗೆ ಪೆದ್ದಿ, ಮಂದಬುದ್ಧಿ ಮತ್ತು ಇನ್ನೂ ಏನೇನೋ ಹೆಸರುಗಳಿಂದ ಕರೆಯುತ್ತಿದ್ದಳು. ಮೊದಲ ಸಲ ಮಂದಬುದ್ಧಿ ಅಂತ ಕೇಳಿದಾಗ ದಿವ್ಯಾ ಮತ್ತು ಅಪೂರ್ವಾ ಇಬ್ಬರೂ ನಕ್ಕಿದ್ದರು. ಅದರ ಅರ್ಥ ಆಮೇಲೆ ಯಾವಾಗಲೋ ಗೊತ್ತಾಗಿತ್ತು.
ಮೊದಲನೆ ಸಲ ಶಿಕ್ಷೆ ಸಿಕ್ಕಿದ್ದೂ ಅವಳಿಗೆ 7 ವರ್ಷವಾಗಿದ್ದಾಗ. ಅವಳ ಎರಡು ಕೆನ್ನೆಗಳೂ ಕಣ್ಣೀರಿನಿಂದ ತೊಯ್ದು ಹೋಗಿದ್ದವು. ಸ್ವಲ್ಪ ಹೊತ್ತು ಮುಚ್ಚಿದ ಬಾಗಿಲ ಕಡೆ ಮುಖ ಮಾಡಿ ನಿಂತಿದ್ದಳು. ಏಕೋ ಅಮಾವಾಸ್ಯೆಯ ಆಕಾಶ ನೋಡಿದಾಗ ಅವಳ ಅಳು ನಿಂತುಹೋಯಿತು.
ಮಿನುಗು ನಕ್ಷತ್ರಗಳು ತನ್ನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿವೆ ಎಂದು ಅನಿಸುತ್ತಿತ್ತು. ತನ್ನೆದುರು ಒಂದು ಹೊಸ ಲೋಕವೇ ತೆರೆದು ಕೊಂಡಿದೆ ಎಂದು ಅವಳಿಗನ್ನಿಸಿತು. ಅವಳಿಗೆ ತನ್ನ ಪಠ್ಯಪುಸ್ತಕದಲ್ಲಿ ಓದಿದ್ದ ಧ್ರುವತಾರೆಯ ನೆನಪಾಯಿತು. ಹಾಗೇ ಹೊಳೆಯುವ ಆಕರ್ಷಕ ನಕ್ಷತ್ರಗಳ ಲೋಕದಲ್ಲಿ ಮುಳುಗಿಹೋದಳು. ತಾಯಿ ಬಾಗಿಲು ತೆರೆದು ಕೂಗಿದ್ದೂ ತಿಳಿಯದಷ್ಟು, ಅದರಲ್ಲಿ ಮಗ್ನಳಾಗಿದ್ದಳು. ಯಾವುದೋ ಸವಿಗನಸಿನಲ್ಲಿ ಮುಳುಗಿಹೋಗಿದ್ದ ದಿವ್ಯಾಳನ್ನು ನೋಡಿ ತಾಯಿಗೂ ಕಡಿಮೆ ಆಶ್ಚರ್ಯವಾಗಲಿಲ್ಲ. ಕಪ್ಪು ಮಸಿಯಂಥ ಆಕಾಶದ ಎಲ್ಲಾ ನಕ್ಷತ್ರಗಳೂ ಈಗ ಅವಳ ಸಂಗಾತಿಗಳು, ಸ್ನೇಹಿತರು. ಹುಣ್ಣಿಮೆ ಬರುತ್ತಿದ್ದಂತೆ ಅವಳು ಚಡಪಡಿಸುತ್ತಿದ್ದಳು.
ಏಕೆಂದರೆ ಚಂದ್ರನ ಪೂರ್ಣ ಬೆಳಕಿನಲ್ಲಿ ನಕ್ಷತ್ರಗಳ ಗುಂಪು ಅವಳ ಜೀವನದಲ್ಲಿ ಕಾಂತಿ ತುಂಬಿದ್ದವು. ಜೀವನವನ್ನು ಸರಳವಾಗಿಸಿದ್ದವು. ಆಗಾಗ ಅವಳ ಕಣ್ಣೆದುರಿನಲ್ಲಿ ಯಾವುದಾದರೂ ನಕ್ಷತ್ರ ಬಿದ್ದಾಗ ಅವಳು ತಕ್ಷಣ ಕಣ್ಣುಚ್ಚಿ ನನ್ನನ್ನೂ ಧ್ರುವನ ಹಾಗೆ ಮಾಡು ಎಂದು ಪ್ರಾರ್ಥಿಸುತ್ತಿದ್ದಳು. ಅವಳ ಬಾಲಿಶ ಮನಸ್ಸು ತಾನು ಬಹಳ ಒಳ್ಳೆಯ ಹುಡುಗಿಯಾಗಿ ಇರುತ್ತೇನೆ ಮತ್ತು ಧ್ರುವನ ತರಹ ನಕ್ಷತ್ರವಾಗಿ ಆಕಾಶದಲ್ಲಿ ಹೊಳೆಯುತ್ತೇನೆ ಎಂದು ಯೋಚಿಸುತ್ತಿತ್ತು.
ಈ ಬಾಲ್ಕನಿ ಇರಲಿ ಇಲ್ಲದಿರಲಿ ತಾನು ಇಲ್ಲಿಗೆ ಬರಬಾರದು ಎಂದಿದ್ದರೆ ತನ್ನ ಸ್ಥಿತಿ ಏನಾಗುತ್ತಿತ್ತು ಎಂದು ಎಷ್ಟೋ ಸಲ ದಿವ್ಯಾ ಯೋಚಿಸುತ್ತಿದ್ದಳು. ಅವಳಿಗೆ ಅಮಾವಾಸ್ಯೆ ಮತ್ತು ಮಿನುಗುವ ನಕ್ಷತ್ರಗಳು ತನ್ನವರು ಎನಿಸುತ್ತಿತ್ತು. ಅವಳು ಬಹಳ ಸುಲಭವಾಗಿ ಅವುಗಳೊಂದಿಗೆ ಮಾತನಾಡುತ್ತಿದ್ದಳು. ತನ್ನ ತಾಯಿಯ ಜೊತೆ ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ.
ಅಪ್ಪ ಮಾತ್ರ ಅವಳ ಜೊತೆ ಮಾತನಾಡುತ್ತಿದ್ದರು. ಅವಳನ್ನು ಮುದ್ದು ಮಾಡುತ್ತಿದ್ದರು. ಅಮ್ಮನಿಗೆ ಅಣ್ಣ ಮತ್ತು ಅಕ್ಕಂದಿರನ್ನು ನೋಡಿಕೊಳ್ಳುವುದರಲ್ಲಿ ತನಗಾಗಿ ಪುರಸತ್ತು ಎಲ್ಲಿರುತ್ತಿತ್ತು? ಅವರಿಬ್ಬರೇ ತನ್ನ ನಿಜವಾದ ಮಕ್ಕಳೇನೋ ಎಂಬಂತೆ ಅವರ ಮೇಲೆ ತನ್ನೆಲ್ಲೇ ಪ್ರೀತಿ ಸುರಿಸುತ್ತಿದ್ದಳು. ಬಾಲ್ಯದಲ್ಲಿ ತಾಯಿ ಅವಳನ್ನು ಕಾರಣ ಇರಲಿ ಇಲ್ಲದಿರಲಿ ಬೈಯುತ್ತಿದ್ದರೆ ಅವಳು ಜೋರಾಗಿ ಕಿರುಚುತ್ತಾ ಅಳುತ್ತಿದ್ದಳು. ಅಪ್ಪ ಮನೆಯಲ್ಲಿದ್ದರೆ ಬಂದು ಅವಳನ್ನು ಪುಸಲಾಯಿಸಿ, ಸಮಾಧಾನ ಮಾಡಿ ಚಾಕಲೇಟ್ ಕೊಡುತ್ತಿದ್ದರು. ಅಪ್ಪ ಇಲ್ಲದಿದ್ದಾಗ ಅವಳಿಗಿಂತ 5 ವರ್ಷ ದೊಡ್ಡವನಾದ ಅಮಿತ್ ಅಣ್ಣ ಅವಳನ್ನು ಸುಮ್ಮನಾಗಿಸುತ್ತಿದ್ದ.
ಅದರೆ ಅಪ್ಪನ ಹಾಗೆ ಸ್ನೇಹಭಾವದಿಂದಲ್ಲ, ಅವಳು ಅಳು ನಿಲ್ಲಿಸಿದರೆ ಸಾಕು ಎನ್ನುವ ಮನೋಭಾವದಿಂದ. ಅಪ್ಪ ಎಷ್ಟೋ ಸಲ ಅಮ್ಮನನ್ನು ಗದರಿದ್ದಾರೆ, “ಪುಷ್ಪಾ, ಈ ಮಗು ನಿನಗೇನು ಮಾಡಿದೆ, ಯಾವಾಗಲೂ ಬೈತಾ ಇರ್ತೀಯಲ್ಲಾ. ಅಮಿತ್ ಮತ್ತು ಅಪೂರ್ವಾಳ ಹಾಗೆ ಇವಳೂ ನಮ್ಮ ಮಗಳೇ!”
ಅಮ್ಮ ಏನೋ ಗೊಣಗಿಕೊಂಡು, ಕೋಪ ಮಾಡಿಕೊಂಡು ಹೊರಟುಹೋಗುತ್ತಿದ್ದಳು. ದಿವ್ಯಾಳಿಗೆ ತನ್ನ ಬಾಲ್ಯ ಅಥವಾ ಕಿಶೋರ ವಯಸ್ಸಿನಲ್ಲಿ ತಾಯಿ ಪ್ರೀತಿ ಅಥವಾ ಮುದ್ದು ಮಾಡಿದ ಒಂದು ದಿನ ನೆನಪಿಗೆ ಬರುವುದಿಲ್ಲ. ಅದರಲ್ಲಿ ತನಗಿಂತ 1 ವರ್ಷ ದೊಡ್ಡವಳಾದ ಅಪೂರ್ವಾಳನ್ನು ಮುದ್ದು ಮಾಡಿದಷ್ಟು, ನಿಧಾನವಾಗಿ ದಿವ್ಯಾ ತನ್ನಕ್ಕ ಅಪೂರ್ವಾ ಕೊಲೆ ಮಾಡಿದರೂ ಕ್ಷಮೆ ಸಿಕ್ಕಿಬಿಡುತ್ತೆ ಎನ್ನುವುದನ್ನು ಅರ್ಥ ಮಾಡಿಕೊಂಡಳು. ಆದರೆ ದಿವ್ಯಾ ತರಗತಿಯಲ್ಲಿ ಮೊದಲನೆ ಸ್ಥಾನ ಪಡೆಯುವುದೂ ಆಪತ್ತನ್ನೇ ತರುತ್ತಿತ್ತು.
“ಯಾಕೆ? ಯಾರನ್ನು ಕಾಪಿ ಮಾಡಿದೆ? ನೀನಾಗಿ ಇಷ್ಟು ಚೆನ್ನಾಗಿ ಮಾಡಲು ಸಾಧ್ಯವೇ ಇಲ್ಲ. ಹೇಳು ಇಲ್ಲಾಂದರೆ ಏಟು ಬಿಳುತ್ತೆ.” ಅಮ್ಮ ಎಂದಿನಂತೆ ಸಿಟ್ಟಿನಿಂದ ಬೈಯುತ್ತಿದ್ದಳು.
ಅಪೂರ್ವಾಳ ಫಲಿತಾಂಶ ಸ್ವಲ್ಪ ಚೆನ್ನಾಗಿರಲಿಲ್ಲ. ಅದಕ್ಕೆ ಆ ಕೋಪವನ್ನು ದಿವ್ಯಾಳ ಮೇಲೆ ತೀರಿಸಿಕೊಳ್ಳುತ್ತಿದ್ದಳು. ಹೆದರಿಕೆಯಿಂದ ದಿವ್ಯಾಳ ಬಿಕ್ಕಳಿಕೆಯೂ ನಿಂತುಹೋಗುತ್ತಿತ್ತು. ತರಗತಿಗೆ ಮೊದಲ ಸ್ಥಾನ ಪಡೆದದ್ದಕ್ಕೆ ಸಂತೋಷ ಪಡುವುದಿರಲಿ ಅಮ್ಮನ ಕೋಪದ ಏಟುಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಅನ್ನುವುದು ಗೊತ್ತಾಗುತ್ತಿರಲಿಲ್ಲ. ಫೇಲಾದರೂ ಏಟು ಬೀಳುತ್ತೆ. ತಾನು ಬಹಳ ಕಡಿಮೆ ನಂಬರ್ ಪಡೆದು ಬರೀ ಪಾಸ್ ಆಗಿದ್ದರೆ ಸರಿಯಾಗ್ತಿತ್ತು.
ಅವತ್ತು ದಿವ್ಯಾಳ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತೆ. ಮಾಮ ಊರಿಂದ ಇದ್ದಕ್ಕಿದ್ದ ಹಾಗೆ ಬಂದಿದ್ದರು. ಮಕ್ಕಳ ಪರೀಕ್ಷಾ ಫಲಿತಾಂಶ ನೋಡಿ ದಿವ್ಯಾಳ ಬೆನ್ನು ತಟ್ಟಿ ತಕ್ಷಣ 100 ರೂ.ಗಳ ನೋಟೊಂದನ್ನು ಅವಳಿಗೆ ಕೊಟ್ಟರು. ಅಮ್ಮನ ಹತ್ತಿರ “ಅಕ್ಕಾ, ನಿಮ್ಮ ಇಬ್ಬರು ಹೆಣ್ಣು ಮಕ್ಕಳೂ ನೋಡಲು ಒಂದೇ ತರಹ ಇದ್ದರೂ ಸ್ವಭಾವ ಮತ್ತು ಬುದ್ಧಿಯಲ್ಲಿ ಎಷ್ಟು ವ್ಯತ್ಯಾಸವಿದೆ,” ಎಂದರು.
ಅಮ್ಮನಿಗೆ ಎಂದಿನಂತೆ ದಿವ್ಯಾಳನ್ನು ಕೀಳಾಗಿ ತೋರಿಸಲು ಆಗಲಿಲ್ಲ. ಆದರೂ ಅಪೂರ್ವಾಳ ಪರವಾಗಿ ಮಾತನಾಡಲು ಇಷ್ಟಪಡುತ್ತಿದ್ದಳು. ಆಗ ಮಾಮ ತಮ್ಮ ಮಾತನ್ನು ಮುಂದುವರಿಸಿ, “ಇಲ್ನೋಡಿ, ಅಪೂರ್ವಾ ಮಾತಾಡುವುದರಲ್ಲಿ ಆಟ ಆಡುವುದರಲ್ಲಿ ತನ್ನ ಎನರ್ಜಿ ಕಳೆದು ಕೊಂಡುಬಿಡುತ್ತಾಳೆ. ದಿವ್ಯಾ ಎಷ್ಟು ಶಾಂತ, ಗಂಭೀರ ಹಾಗೂ ಮಿತಭಾಷಿ. ಅಕ್ಕಾ, ನಿಮ್ಮ ಈ ಚಿಕ್ಕಮಗಳು ನಿಮ್ಮಿಬ್ಬರ ಗೌರವ ಹೆಚ್ಚಿಸುತ್ತಾಳೆ. ನಾನು ಬರೆದುಕೊಡ್ತೀನಿ ಬೇಕಾದರೆ” ಎಂದಿದ್ದರು.
ಮಾಮ ಕೆಲಸದ ಮೇಲೆ ಬಂದಿದ್ದರು. 1 ವಾರ ಇದ್ದರು. ತನ್ನಕ್ಕ ಅಪೂರ್ವಾಳ ಮೇಲೆ ಪ್ರೀತಿಯ ಮಳೆ ಸುರಿಸುತ್ತಾಳೆ, ಅದೇ ದಿವ್ಯಾಳ ಮೇಲೆ ರೇಗುತ್ತಲೇ ಇರ್ತಾಳೆ ಎನ್ನುವುದು ಅವರಿಗೆ ಗೊತ್ತಾಯಿತು. ಅಮಿತ್ ಒಬ್ಬನೇ ಮಗ, ಅಲ್ಲದೆ ಅವನೇ ಹಿರಿಯ ಸಂತಾನ, ಆದ್ದರಿಂದ ಅವನ ಪಾಲಿಗೆ ತುಂಬಾ ಪ್ರೀತಿ ಸಿಗುತ್ತಿತ್ತು. ನೋಡಲು ದಿವ್ಯಾ ಹೆಚ್ಚು ಕಡಿಮೆ ಅಪೂರ್ವಾಳ ಹಾಗೆ ಇದ್ದಳು.
ಆದರೆ ಅವಳ ಮುಗ್ಧತೆ ಮತ್ತು ಬೆಳಗುವ ಕಣ್ಣುಗಳು ಎಲ್ಲರನ್ನೂ ಆಕರ್ಷಿಸುತ್ತಿದ್ದವು. ಅಪೂರ್ವಾ ಅಮೆರಿಕನ್ ವಜ್ರಗಳ ಕೃತಕ ರೂಪವಾದರೆ ದಿವ್ಯಾ ಗಣಿಯಿಂದ ತೆಗೆದ ಕೋಹಿನೂರ್ ವಜ್ರ. ಅದನ್ನು ಉಜ್ಜಿ ಸಿದ್ಧಗೊಳಿಸಬೇಕಷ್ಟೆ. ಅಕ್ಕನಿಗೆ ಏನೂ ಹೇಳದೆ ಇರಲು ಸಾಧ್ಯವಾಗದಿದ್ದಾಗ ಅವರು, “ಅಕ್ಕಾ, ನೀವು ದಿವ್ಯಾಳನ್ನು ಅನ್ನುತ್ತಾನೇ ಇರ್ತೀರ, ಇಂತಹ ಸುಂದರ ಸುಶೀಲ ಹುಡುಗಿ ನಿಮ್ಮ ಮಗಳು ಅಂತ ನೀವು ಹೆಮ್ಮೆಪಡಬೇಕು,” ಎಂದರು.
ಅಕ್ಕ ಕಣ್ಣು ಹೊರಳಿಸಿ ದಿವ್ಯಾಳನ್ನು ನೋಡಿ ಹೇಳಿದ್ದರು, “ನಿನಗೆ ಯಾಕೆ ಹಾಗನ್ನಿಸುತ್ತೆ? ನನಗೆ ಅಪೂರ್ವಾ ದಿವ್ಯಾ ಇಬ್ಬರೂ ಒಂದೇನೆ.”
ದಿವ್ಯಾ ಕೂಡಾ ಎಷ್ಟೋ ಸಲ ತನ್ನಮ್ಮ ಮಲತಾಯಿ ಅಲ್ಲ ತಾನೇ ಎಂದು ತನ್ನಲ್ಲೇ ಪ್ರಶ್ನೇ ಹಾಕಿಕೊಂಡಿದ್ದಾಳೆ. ಅಪ್ಪನ ಮೊದಲ ಹೆಂಡತಿ ಏನೋ ಕಾರಣದಿಂದ ಮನೆಯಲ್ಲಿ ಇಲ್ಲದಿದ್ದರೆ ಮಲತಾಯಿ ಮನೆಗೆ ಬರುತ್ತಾಳೆ. ಆ ಲೆಕ್ಕ ತಗೊಂಡರೆ ತಾನು ಮಕ್ಕಳಲ್ಲಿ ಎಲ್ಲರಿಗಿಂತ ಹಿರಿಯಳಾಗಿರಬೇಕಾಗಿತ್ತು. ಈಗ ಮೂವರಲ್ಲಿ ಎಲ್ಲರಿಗಿಂತ ಚಿಕ್ಕವಳಾಗಿರುವುದರಿಂದ ಸವತಿಯ ಮಗಳಾಗಲು ಸಾಧ್ಯವಿಲ್ಲ.
ಮಾಮ ಬಂದಿದ್ದರಿಂದ ಮತ್ತು ಅವರು ತನ್ನ ಮೇಲೆ ತೋರಿದ ಸ್ನೇಹದಿಂದ ದಿವ್ಯಾ ತುಂಬಾ ಖುಷಿಯಾಗಿದ್ದಳು. ಇಲ್ಲಿಯವರೆಗೆ ಅವಳಿಗೆ ಅಪ್ಪನ ಪ್ರೀತಿ ಮಾತ್ರ ಸಿಕ್ಕಿತ್ತು. ಮಕ್ಕಳನ್ನು ಅಪ್ಪ ಅಮ್ಮ ಪ್ರೀತಿಸೇ ಪ್ರೀತಿಸುತ್ತಾರೆ. ಪ್ರೀತಿಸಲಿಲ್ಲ ಅಂದರೆ ಅದು ಆಶ್ಚರ್ಯದ ಮಾತು. ದಿವ್ಯಾಳಿಗೆ ತಾಯಿಯ ಕಾರಣದಿಂದ ಆಗುವ ಹಾಗೆ. ಈಗ ಮಾಮ ಬಂದಿದ್ದರಿಂದ ದಿವ್ಯಾ ತನ್ನ ಅಸಂಬದ್ಧ ವಿಚಾರಗಳಿಂದ ದೂರವಾಗಿದ್ದಳು. ಮಾಮ ತನ್ನ ಪರ ವಹಿಸಿ ಮಾತನಾಡುವುದು ಅವಳಿಗೆ ಇಷ್ಟವಾಗುತ್ತಿತ್ತು.
ಮರುದಿನ ಮಾಮ ವಾಪಸ್ಸು ಹೋಗುವವರಿದ್ದರು. ದಿವ್ಯಾ ಅವರು ಹೋಗುವ ಮುಂಚೆ ಸ್ವಲ್ಪ ಹೊತ್ತು ಅವರ ಜೊತೆ ಮಾತಾಡಲು ಇಷ್ಟಪಡುತ್ತಿದ್ದಳು. ಅವಳು ಒಂದು `ಥ್ಯಾಂಕ್ಯೂ’ ಕಾರ್ಡನ್ನು ಮಾಡಿದ್ದಳು. ಅದನ್ನು ಅವರು ಒಬ್ಬರೇ ಇದ್ದಾಗ ಕೊಡಬೇಕೆಂದು ಇಷ್ಟಪಟ್ಟಳು.
ಅಮಿತ್ ಮತ್ತು ಅಪೂರ್ವಾ ತಂತಮ್ಮ ಹಾಸಿಗೆ ಮೇಲೆ ರಗ್ಗು ಹೊದ್ದು ಮಲಗಿದ್ದರು. ಅಮ್ಮ ಬೆಳಗಿನ ತಿಂಡಿಗೆ ಏನೋ ತಯಾರಿ ಮಾಡಿಕೊಳ್ಳುತ್ತಿದ್ದಳು. ಅಪ್ಪ ಮತ್ತು ಮಾಮ ಹೊರಗೆ ಚಿಕ್ಕ ತೋಟದಲ್ಲಿ ಬೆತ್ತದ ಕುರ್ಚಿಗಳಲ್ಲಿ ಕುಳಿತು ಏನೋ ಮಾತನಾಡುತ್ತಿದ್ದರು. ದಿವ್ಯಾ ಮೆಲ್ಲಗೆ ಹೋಗಿ ಇಬ್ಬರನ್ನೂ ಅಶ್ಚರ್ಯಪಡಿಸಬೇಕೆಂದು, ತಾನು ಮಾಡಿದ ಕಾರ್ಡನ್ನು ಎತ್ತಿಕೊಂಡು ಮುಂದೆ ಹೋಗುವವಳಿದ್ದಳು. ಆಗ ಅವಳಿಗೆ ಅಪ್ಪ ಮತ್ತು ಮಾಮ ತನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎನಿಸಿತು. ಸ್ವಲ್ಪ ಯೋಚಿಸಿ, ಅವಳು ಮರೆಯಲ್ಲಿ ನಿಂತಳು. ಸ್ವಲ್ಪ ಸರಿದರೂ ಬೆಳಕು ಅವಳ ಮೇಲೆ ಬೀಳುತ್ತಿತ್ತು. ಅವಳು ಗಮನವಿಟ್ಟು ಅವರ ಮಾತು ಕೇಳುವ ಪ್ರಯತ್ನ ಮಾಡಿದಳು.
“ಏನು?” ಮಾಮನ ತೀಕ್ಷ್ಣ ದನಿ ಕೇಳಿ ದಿವ್ಯಾಳಿಗೆ ಗಾಬರಿಯಾಯಿತು. ಮುಂದಿನ ಮಾತು ಕೇಳುವ ಕುತೂಹಲದಿಂದ ಅವಳು ಮುಂದೆ ಸರಿದು ನಿಂತುಕೊಂಡಳು. ದಿವ್ಯಾಳಿಗೆ ಯಾಕೋ ತನಗೆ ಸಂಬಂಧಿಸಿದ ರಹಸ್ಯವೊಂದು ಹೊರಬೀಳುತ್ತದೆ ಎಂದು ಅನಿಸುತ್ತಿತ್ತು.
“ಹೌದು, ನಾನು ಸರಿಯಾಗೇ ಹೇಳ್ತಿದೀನಿ. ದಿವ್ಯಾ ಬೇಡವಾದ ಮಗು.”
ದಿವ್ಯಾಳ ಕಿವಿಗಳು ಸ್ಪಷ್ಟವಾಗಿ ಕೇಳಿಸಿಕೊಂಡವು. ಕಿವಿ ಮಾತ್ರವಲ್ಲ, ಇಡೀ ಶರೀರ ನಿರ್ಜೀವವಾದಂತಾಯಿತು. ಅವಳ ಕೈಯಲ್ಲಿದ್ದ `ಥ್ಯಾಂಕ್ಯೂ’ ಕಾರ್ಡ್ ಕೆಳಗೆ ಬಿತ್ತು. ಹೇಗೋ ಸುಧಾರಿಸಿಕೊಂಡು ಅವಳು ಹಾಸಿಗೆಯವರೆಗೆ ಬಂದು ಜಡವಸ್ತುವಿನಂತೆ ಬಿದ್ದುಕೊಂಡಳು. ಅವಳ ಮೆದುಳು ಮಾತ್ರ ಓಡುತ್ತಿತ್ತು. `ನಾನು ಬೇಡವಾದ ಮಗು!’ ಯಾರ ಹೊಟ್ಟೆಯಿಂದ ಹುಟ್ಟಿದೆನೋ ಯಾರು ಪಾಪದ ಫಲವನ್ನು ತಿಪ್ಪೆಗೆ ಎಸೆದು ಹೋಗಿದ್ದರೋ… ಅಪ್ಪನೇ ಎತ್ತಿಕೊಂಡು ಬಂದಿರಬೇಕು. ಅಮ್ಮ ಬೇಡ ಎಂದು ಹೇಳಿರಬೇಕು. ಯೋಚಿಸುತ್ತಾ ಅವಳ ಬಾಯಿಂದ ಅದುಮಿಟ್ಟ ಅಳು ಎಷ್ಟು ಜೋರಾಗಿ ಹೊರಹೊಮ್ಮಿತೆಂದರೆ ಅವಳಿಗೇ ಗಾಬರಿಯಾಯಿತು.
ಅವಳು ತನ್ನ ದುಃಖದಲ್ಲಿ ಎಷ್ಟು ಮುಳುಗಿ ಹೋಗಿದ್ದಳೆಂದರೆ, ಅವಳು ಓಡುತ್ತಾ ಬಂದು ಹಾಸಿಗೆಯ ಮೇಲೆ ಮಲಗಿಕೊಂಡಾಗ ಹತ್ತಿರದಲ್ಲೇ ಒಬ್ಬ ವ್ಯಕ್ತಿ ಅವಳ ಕೈಯಿಂದ ಬಿದ್ದಿದ್ದ ಕಾರ್ಡನ್ನು ಎತ್ತಿಕೊಂಡಿದ್ದು ಅವಳಿಗೆ ಗೊತ್ತಾಗಲಿಲ್ಲ. ಆ ವ್ಯಕ್ತಿ ಬಾಗಿಲ ಬಳಿಯೇ ನಿಂತು ಅವಳನ್ನೇ ಬಹಳ ಹೊತ್ತು ನೋಡುತ್ತಿತ್ತು. ದಿವ್ಯಾಗೆ ನಿದ್ರೆ ಬಂದಿದೆ ಎಂದು ಗೊತ್ತಾದ ಮೇಲೆ ಹತ್ತಿರ ಬಂದು ಅವಳ ತಲೆ ನೇವರಿಸಿ ಹಣೆಯನ್ನು ಚುಂಬಿಸಿ ನಿಧಾನವಾಗಿ ರೂಮಿನಿಂದ ಹೊರಗೆ ಹೋಯಿತು.
ದಿವ್ಯಾ ತಾಯಿಯ ವರ್ತನೆಯಿಂದ ದುಃಖಿತಳಾಗಿದ್ದಳು. ನಿದ್ರೆ ಮಾಡುತ್ತಿರುವ ಹಾಗೆ ಬಿಗಿಯಾಗಿ ಕಣ್ಣುಗಳನ್ನು ಮುಚ್ಚಿಕೊಂಡಿದ್ದಳು. ಇವತ್ತು ಅಮ್ಮನಿಗೇನಾಗಿದೆ? ದಿನಾಲೂ ತಾನು ಮಲಗಿದ ಮೇಲೆ ಇದೇ ರೀತಿ ತಲೆ ಸವರಿ ಪ್ರೀತಿ ತೋರುತ್ತಿದ್ದಳೇ? ಏನೇ ಇರಲಿ, ದಿವ್ಯಾಳ ಶರೀರದಲ್ಲಿ ರೋಮಾಂಚನವಾಗುತ್ತಿತ್ತು. ಸ್ವಲ್ಪ ಹೊತ್ತಿಗೆ ಮುಂಚೆ ಅಪ್ಪ ಮಾಮನಿಗೆ ಹೇಳುತ್ತಿದ್ದುದು ನಿಜವಾಗಿದ್ದರೆ, ಅವಕಾಶ ಸಿಕ್ಕಾಗ ತನ್ನನ್ನು ಎಲ್ಲಿಂದ ಕರೆದುಕೊಂಡು ಬಂದಿರೆಂದು ಕೇಳುತ್ತೇನೆ ಎಂದುಕೊಂಡಳು.
ಆದರೆ ಸ್ವಲ್ಪ ಹೊತ್ತಿಗೆ ಮುಂಚೆ ನಡೆದಿದ್ದನ್ನು ನೆನೆಸಿಕೊಂಡಾಗ ಅವಳು ದ್ವಂದ್ವದಲ್ಲಿ ಸಿಕ್ಕಿಹಾಕಿಕೊಂಡಳು. ಸ್ವಲ್ಪ ದಿನ ಮೌನವಾಗಿರುವುದು ಈ ವಿಷಯದ ಮೇಲೆ ಏನೂ ಹೇಳುವುದಿಲ್ಲ, ಏನೂ ಕೇಳುವುದಿಲ್ಲ ಎಂದು ನಿರ್ಧರಿಸಿದಳು. ಮರುದಿನದಿಂದ ತಾಯಿ ದಿವ್ಯಾಳ ಜೊತೆ ಸ್ನೇಹ, ಮಮತೆಯಿಂದ ನಡೆದುಕೊಳ್ಳತೊಡಗಿದಳು. ದಿವ್ಯಾ ಸಂತೋಷದಿಂದ ಇದ್ದರೂ ಪರಿಸ್ಥಿತಿ ಬದಲಾಗಿದ್ದೇಕೆ ಎಂದು ಚಿಂತಿಸಿ ಚಿಂತಿಸಿ, ಹಣ್ಣಾಗಿದ್ದಳು.
ದಿವ್ಯಾ ಮರೆಯಿಂದ ಹೊರಬಂದು ಓಡಿದಾಗ ಅವಳ ತಂದೆ ಮಾಮನ ಜೊತೆ ಮಾತನಾಡುತ್ತಿದ್ದುದು ಅಲ್ಪಸ್ವಲ್ಪ ಕಿವಿಗೆ ಬಿದ್ದಿತು.“ನಾನು ಮತ್ತು ನಿನ್ನಕ್ಕ ಒಂದು ಆದರ್ಶ ಕುಟುಂಬವನ್ನು ಕಲ್ಪಿಸಿಕೊಂಡಿದ್ದೆವು. ಒಬ್ಬ ಮಗ, ಒಬ್ಬಳು ಮಗಳು ಇವರ ಸುಖೀ ಸಂಸಾರ. ಮೂರನೇ ಮಗು ಬಗ್ಗೆ ಯೋಚಿಸಿರಲಿಲ್ಲ. ದಿವ್ಯಾಳಿಗೆ ಬಸುರಿಯಾದಾಗ ನಿನ್ನಕ್ಕನಿಗೆ ತಾನು ಹಾಕಿದ್ದ ಯೋಜನೆ ಹಾಳಾಯಿತೆಂದು ಅನಿಸಿತ್ತು.”
“ಓಹೋ, ಹೀಗೆ ದಿವ್ಯಾ `ಬೇಡವಾದ ಮಗು’ ಆದಳು. ಆದರೆ ಭಾವ, ಅವಳು ಅನೈತಿಕ ಸಂತಾನವಲ್ಲ. ಅಲ್ಲದೇ ಇದರಲ್ಲಿ ಅವಳ ತಪ್ಪೇನೂ ಇಲ್ಲ,” ಮಾಮನಿಗೆ ಕೋಪ ಬಂದಿತ್ತು.
“ಹೌದು, ನನಗೆ ಈ ವಿಷಯ ಗೊತ್ತು. ಅದಕ್ಕೆ ನಾನು ಅವಳಿಗೆ ಇಮ್ಮಡಿ ಪ್ರೀತಿ ತೋರಿಸ್ತೀನಿ. ಆಗಲಾದರೂ ಅವಳಿಗೆ ತಾಯಿಯ ಪ್ರೀತಿಯ ಕೊರತೆ ಕಾಣದಿರಲಿ ಅಂತ.”
ಮರುದಿನ ತಿಂಡಿ ತಿನ್ನುವ ಸಮಯದಲ್ಲಿ ಮಾಮ ದಿವ್ಯಾ ಮಾಡಿದ್ದ ಕಾರ್ಡನ್ನು ತೆರೆದರು. ಅದನ್ನು ಎಲ್ಲರಿಗೂ ತೋರಿಸಿ ಹೊಗಳತೊಡಗಿದರು. ದಿವ್ಯಾಳಿಗೆ ಸಂಕೋಚ ಆಗುತ್ತಿತ್ತು, ಸಂತೋಷ ಆಗುತ್ತಿತ್ತು. ಆದರೆ ಕಾರ್ಡು ಟೇಬಲ್ ಮೇಲೆ ಹೇಗೆ ಬಂತು ಅನ್ನುವ ಕುತೂಹಲ ಇತ್ತು. ಮಾಮ ಎಲ್ಲರಿಂದ ಬೀಳ್ಕೊಂಡರು.
ಮನೆಯಲ್ಲಿ ಸಂತೋಷದ ವಾತಾವರಣ ಉಂಟುಮಾಡಿದ್ದರು. ದಿವ್ಯಾಳ ಪಾಲಿಗೆ ಮಾಮ ಬಂದಿದ್ದು ವರದಾನದ ಹಾಗೆ ಆಗಿತ್ತು. ಈಗ ಅವಳು ತನ್ನನ್ನು ಅಪೂರ್ವಾ ಮತ್ತು ಅಮಿತರ ಸಮನಾಗಿ ಭಾವಿಸಿಕೊಳ್ಳತೊಡಗಿದಳು. ಒಂದು ಮುಖ್ಯ ವಿಷಯವೆಂದರೆ ಬಾಲ್ಕನಿಯಲ್ಲಿ ನಿಂತು ತಾರೆಗಳ ಸಭೆಯಲ್ಲಿ ಕಣ್ಣಾಮುಚ್ಚಾಲೆ ಆಡುವುದು ನಿಂತೇಹೋಗಿತ್ತು. ಇದು ದಿವ್ಯಾಳ ಗಮನಕ್ಕೆ ಬಂದಿರಲಿಲ್ಲ.
ಮೇಲಿನ ತರಗತಿಗೆ ಹೋಗುತ್ತಿದ್ದ ಹಾಗೆ ಓದುವುದೂ ಹೆಚ್ಚಾಗುತ್ತಿತ್ತು. ಅಮ್ಮ ಈಗ ಅವಳ ನಡವಳಿಕೆ ಮತ್ತು ಓದುವುದರ ಬಗ್ಗೆ ಖುಷಿಯಾಗಿದ್ದಳು. ಆದರೆ ಅಪೂರ್ವಾ ಚೆನ್ನಾಗಿ ಓದದಿರುವ ಬಗ್ಗೆ ಚಿಂತೆಯೂ ಇರುತ್ತಿತ್ತು. ಅವಳನ್ನು ಬೈಯುತ್ತಿದ್ದಳು ಕೂಡಾ. ಇದು ಆಶ್ಚರ್ಯಪಡುವಂತಹ ಸಂಗತಿ!
ದಿವ್ಯಾಳಿಗೆ ತಾನು ಅಮ್ಮ ಅಪ್ಪನ ನಿಜವಾದ ಮಗಳಲ್ಲ ಅನ್ನುವ ವಿಷಯ ನೆನಪಾದಾಗ ಅವಳು ಇಮ್ಮಡಿ ಶ್ರಮ ಹಾಕಿ ಓದುತ್ತಿದ್ದಳು ಮತ್ತು ಕೆಲಸ ಮಾಡುತ್ತಿದ್ದಳು. ತನ್ನ ಯಾವುದೇ ಕೆಲಸದಿಂದ ತಾಯಿ ತಂದೆಗೆ ದುಃಖವಾಗಬಾರದು ಎಂದು ಬಯಸುತ್ತಿದ್ದಳು. ಅವರು ತನ್ನನ್ನು ಸಾಕಿರದಿದ್ದರೆ ತನ್ನ ಅವಸ್ಥೆ ಏನಾಗುತ್ತಿತ್ತು? ಅಪ್ಪನನ್ನು ತಾನು ಅವರಿಗೆ ಎಲ್ಲಿ ಸಿಕ್ಕಿದೆ ಎಂದು ಕೇಳದಿರಲು ನಿರ್ಧರಿಸಿದಳು.
ಆ ಸಮಯದಲ್ಲಿ ಒಂದು ಘಟನೆ ನಡೆಯಿತು. ಸತ್ಯ ತಿಳಿದು ದಿವ್ಯಾಳಿಗೆ ಅಳಬೇಕೋ ನಗಬೇಕೋ ತಿಳಿಯಲಿಲ್ಲ. ಅವಳ ಸಮಸ್ಯೆಯೂ ದೂರವಾಯಿತು. ಸತ್ಯ ಎಷ್ಟು ಸಿಹಿಯಾಗಿತ್ತೆಂದರೆ ಅವಳಿಗೆ ತನ್ನ ಅಲ್ಪ ಬುದ್ಧಿಶಕ್ತಿಯ ಬಗ್ಗೆ ನಾಚಿಕೆಯಾಯಿತು.
ಆ ವರ್ಷ ಅಪೂರ್ವಾ ಪರೀಕ್ಷೆಯಲ್ಲಿ ಫೇಲಾಗಿದ್ದಳು. ದಿವ್ಯಾ ತನ್ನ ತರಗತಿಗೆ ಮೊದಲನೆಯ ಸ್ಥಾನ ಗಳಿಸಿದ್ದಳು. ಈಗ ಇಬ್ಬರೂ ಒಂದೇ ತರಗತಿಯಲ್ಲಿದ್ದರು. ಅಪ್ಪ ಅಪೂರ್ವಾಗೆ ಏನೂ ಅನ್ನಲಿಲ್ಲ. ಆದರೆ ಅಮ್ಮ ಬಹಳ ಕೋಪ ಮಾಡಿಕೊಂಡು ಅವಳ ಜೊತೆ ಮಾತಾಡುವುದನ್ನೇ ಬಿಟ್ಟುಬಿಟ್ಟರು. ಅಪೂರ್ವಾಳ ಎದುರಿಗೆ ತನ್ನ ಮೇಲೆ ಪ್ರೀತಿ ತೋರಿಸಿದಾಗ ದಿವ್ಯಾಳಿಗೆ ಏನೋ ಒಂದು ರೀತಿ ಆಗುತ್ತಿತ್ತು. ಮೊದಲಿನ ಹಾಗೆ ಬೈಯಲಿ ಅಥವಾ ಶಿಕ್ಷೆ ಕೊಡಲಿ ಎಂದು ದಿವ್ಯಾಳಿಗೆ ಅನಿಸುತ್ತಿತ್ತು. ಆಗ ತಾಯಿಯ ವರ್ತನೆ ಅಸಹಜ ಎನಿಸುವುದಿಲ್ಲ.
ತಾಯಿ ದಿವ್ಯಾಳನ್ನು ಉದಾಹರಿಸಿ ಅವಳಿಂದ ಸ್ವಲ್ಪ ಕಲಿತುಕೋ ಎಂದು ಅಪೂರ್ವಾಗೆ ಹೇಳುತ್ತಿದ್ದರು. ಒಂದು ಸಲ ಅಪೂರ್ವಾಗೆ ಬಹಳ ಕೋಪ ಬಂತು. “ಇವಳಿಂದ, ಈ ಕಾಲ ಕೆಳಗೆ ತುಳಿದು ಹಾಕಿದ ಹುಲ್ಲಿನಿಂದ…” ಹೇಳುತ್ತಾ ಅವಳು ನೆಲವನ್ನು ಹುಲ್ಲನ್ನು ತುಳಿಯುವವಳಂತೆ ತುಳಿಯತೊಡಗಿದಳು.
“ನಾನು ಯಾರು? ಅಪೂರ್ವಾ… ನನ್ನಂತಹವಳು ಬೇರೆ ಯಾರೂ ಇರಲು ಸಾಧ್ಯವಿಲ್ಲ. ನನ್ನ ಜೊತೆ ಸ್ಪರ್ಧೆನಾ?”
“ನೀವು ನನ್ನನ್ನು ಹೊಡೆದಿರಾ? ನನ್ನನ್ನು…. ಅಪೂರ್ವಾಳನ್ನು,” ಅಪನಂಬಿಕೆಯಿಂದ ಕೂಗುತ್ತಾ ಅಪೂರ್ವಾ ಅಲ್ಲಿಂದ ಓಡುತ್ತಾ ಹೊರಟುಹೋದಳು. ದಿವ್ಯಾಳಿಗೆ ಇದೆಲ್ಲಾ ನೋಡಿ ಗಾಬರಿಯಾಯಿತು. ಅವಳೂ ಅಳತೊಡಗಿದಳು. ಅವಳಿಗೆ ಸುಮ್ಮನಿರಲಾಗಲಿಲ್ಲ.
“ಅಮ್ಮಾ, ನನ್ನ ಉದಾಹರಣೆ ಕೊಟ್ಟು ಅಕ್ಕನ್ನ ಹೊಡೆಯಲೇಬೇಡಿ. ಅಪ್ಪ ಮತ್ತು ನೀವು ಕನಿಕರದಿಂದ ನನ್ನನ್ನು ನಿಮ್ಮ ಮಗಳ ಹಾಗೆ ಬೆಳೆಸಿ ದೊಡ್ಡವಳನ್ನಾಗಿ ಮಾಡ್ತಿದೀರಿ. ಇದೇನು ಕಡಿಮೆಯೇ?” ಎಂದಳು.
“ಏನಂದೆ? ಏನು ಹೇಳ್ತಿದೀಯ? ನಿಮ್ಮ ಮಗಳ ಹಾಗೆ… ನೀನು ನಮ್ಮ ಮಗಳಲ್ವಾ? ನಿನಗೆ ಈ ಅಭಿಪ್ರಾಯ ಯಾಕೆ ಬಂತು?” ಅಮ್ಮ ಕೇಳಿದರು.
“2 ವರ್ಷದ ಹಿಂದೆ ಮಾಮ ಇಲ್ಲಿಗೆ ಬಂದಿದ್ದಾಗ ಅಪ್ಪನೇ ಅವರ ಹತ್ತಿರ ನಾನು `ಬೇಡವಾದ ಮಗು’ ಎಂದು ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದೆ,” ದಿವ್ಯಾ ಅಳತೊಡಗಿದಳು.
“ಹೇ ಭಗವಂತ, ಇಷ್ಟು ಅನರ್ಥವಾಗುತ್ತೆ ಅಂತ ನಾನು ಯೋಚಿಸೇ ಇರಲಿಲ್ಲ. ಗೊತ್ತಿದ್ದರೆ ಅವತ್ತೇ ಅರ್ಥ ಮಾಡಿಸುತ್ತಿದ್ದೆ,” ನಂತರ ದಿವ್ಯಾಳ ಬಳಿಹೋಗಿ ಅವಳ ಕಣ್ಣೀರು ಒರೆಸಿ ಹೇಳಿದರು, “ಇಷ್ಟು ವರ್ಷ ಈ ಮಾತನ್ನು ನಿನ್ನ ಹೃದಯದಲ್ಲಿ ಮುಳ್ಳಿನ ಹಾಗೆ ಜೋಪಾನವಾಗಿ ಇಟ್ಟುಕೊಂಡಿದ್ದೆಯಾ? ಆವತ್ತು ನೀನು ಅಪ್ಪನ ಮಾತನ್ನು ಸ್ವಲ್ಪವೇ ಕೇಳಿಸಿಕೊಂಡು ಅಳುತ್ತಾ ಓಡಿಹೋದೆ. ಸ್ವಲ್ಪ ಹೊತ್ತು ನಿಂತಿದ್ದು ಪೂರ್ತಿ ಮಾತು ಕೇಳಿಸಿಕೊಂಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.”
ದಿವ್ಯಾ ಅರ್ಥವಾಗದೇ ತಾಯಿಯ ಮುಖವನ್ನೇ ನೋಡಿದಳು.“ದಿವ್ಯಾ, ಅಪ್ಪ ಮತ್ತು ನಾನು ಚಿಕ್ಕ ಕುಟುಂಬ ಇಟ್ಟುಕೊಂಡು 2 ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಒಳ್ಳೆಯ ಪೋಷಣೆ ಕೊಡಬೇಕು ಎಂದು ಇಷ್ಟಪಟ್ಟಿದ್ದೆವು. ಈಗ ನೀನು ತಿಳಿವಳಿಕೆಯುಳ್ಳ ಹುಡುಗಿ. ನಮ್ಮ ಮಾತನ್ನು ಚೆನ್ನಾಗಿ ತಿಳಿದುಕೊಳ್ತೀಯಾ. ನಾವು ಇಷ್ಟಪಟ್ಟಿದ್ದು ತಪ್ಪಾಗಿರಲಿಲ್ಲ. ನೀನು ಮೂರನೇ ಮಗಳಾಗಿ ಹುಟ್ಟಿ ಯಾವ ತಪ್ಪನ್ನೂ ಮಾಡಲಿಲ್ಲ. ಲೆಕ್ಕ ಏರುಪೇರಾಯಿತು ಅಷ್ಟೇ. ನಾನಂದುಕೊಂಡಿದ್ದ ಹಾಗೆ ಆಗಲಿಲ್ಲ, ಅದಕ್ಕೇ ನಾನು `ಅಪ್‌ಸೆಟ್’ ಆಗಿದ್ದೆ. ಆದರೆ ಮಗಳೇ ನೀನು ನನ್ನ ನಡವಳಿಕೆಯನ್ನು, ಅಪ್ಪನ ಅರ್ಧ ಮಾತಿನ ಜೊತೆ ಕೂಡಿಸಿ ನಿನ್ನ ಸುತ್ತಲೂ ಮುಳ್ಳಿನ ಬೇಲಿಯನ್ನೇ ಹಾಕಿತೊಂಡೆ,” ಅಮ್ಮನ ಆರ್ದ್ರ ದನಿ, ಮತ್ತು ತೇವವಾದ ಕಣ್ಣುಗಳು ಮಗಳ ಕ್ಷಮೆ ಯಾಚಿಸುವಂತಿತ್ತು.
ದಿವ್ಯಾ ನಾಚಿಕೆ ಮತ್ತು ಸಂಕೋಚದಿಂದ ಮುದುಡುತ್ತಾ ಅಮ್ಮನ ಬಳಿ ಬಂದು ಬಾಗಿ ಹೇಳಿದಳು, “ಅಮ್ಮಾ, ನನ್ನನ್ನು ಕ್ಷಮಿಸಿ. ಅರ್ಥಮಾಡಿಕೊಳ್ಳದೆ ನಾನು ನಿಮಗೆ ದುಃಖಕೊಟ್ಟೆ.
”ಇಷ್ಟರಲ್ಲಿ ಅಪ್ಪ, ಅಪೂರ್ವಾಳ ಜೊತೆ ಕೋಣೆಯೊಳಗೆ ಬಂದರು. ಹೆಂಡತಿಗೆ, “ನೋಡು ನನಗೆ ಈ ತರಹದ ಹಿಂಸೆ ಖಂಡಿತಾ ಇಷ್ಟವಾಗಲ್ಲ. ಮಕ್ಕಳಿಗೆ ಪ್ರೀತಿಯಿಂದ ತಿಳಿಸಿ ಹೇಳಬೇಕು. ಇಲ್ಲಾಂದರೆ…” ನಂತರ ದಿವ್ಯಾಳ ಕಡೆ ನೋಡಿ ಹೇಳಿದರು.
“ನೀನು ಬಹಳ ಜಾಣೆ, ಬುದ್ಧಿವಂತೆ ಇರಬಹುದು. ಆದರೆ ನೀನು ಅಪೂರ್ವಾಳ ಜೊತೆ ಓದಿ ಇಬ್ಬರೂ ಒಳ್ಳೆ ನಂಬರು ತೆಗೆದು ಪಾಸಾದರೆ ನಿನ್ನ ಬುದ್ಧಿವಂತಿಕೇನಾ ಒಪ್ಪಿಕೋಬಹುದು. ಚಾಲೆಂಜ್ ಒಪ್ಪಿಕೊಳ್ತೀಯಾ?” ದಿವ್ಯಾಳಿಗೆ ಏನೂ ತೋಚದಂತಾಯಿತು. ಅಪ್ಪ ಯಾವಾಗಲೂ ಹೀಗೆ. ಆದರೆ ಇಂದು ಅಪ್ಪ ನಿಜವಾದ ಅಪ್ಪನ ಹಾಗೆ ಹಕ್ಕಿನಿಂದ ಅವಳಿಗೆ ಏನೋ ಹೇಳುತ್ತಿದ್ದಾರೆ. ಅವಳು ನಸುನಗುತ್ತಾ ಅಪೂರ್ವಾಳ ಹತ್ತಿರ ಬಂದು ಅವಳ ಕೈಯನ್ನು ಹಿಡಿದು ಹೇಳಿದಳು, “ಒಪ್ಪಿಗೆ ಅಪ್ಪಾ, ನಾವಿಬ್ಬರೂ ಒಟ್ಟಿಗೆ ಓದುತ್ತೇವೆ. ಅಮ್ಮ ಮತ್ತು ನೀವು ಇಬ್ಬರೂ ನೋಡುತ್ತಾ ಇರಿ. ಮುಂದಿನ ವರ್ಷ ಇಬ್ಬರ ಪರೀಕ್ಷಾ ಫಲಿತಾಂಶ ಒಂದೇ ತರಹ ಒಳ್ಳೆಯದಾಗಿರುತ್ತದೆ.”
ಅಪ್ಪ ಬಹಳ ಯೋಚಿಸಿ ಅಪೂರ್ವಾಳನ್ನು ಅಲ್ಲಿಗೆ ಕರೆತಂದಿದ್ದರು.. ಅಂದರೂ ಅವಳಲ್ಲಿ ಇನ್ನೂ ಜಂಭ, ಸಂಕೋಚ ಉಳಿದಿತ್ತು. ದಿವ್ಯಾಳಿಗೆ ತಾನು ಅಕ್ಕನ ಸ್ನೇಹ, ತಂಗಿಯಾಗಿ ತನ್ನ ಹಕ್ಕು ಎರಡನ್ನೂ ನಿಧಾನವಾಗಿ ಗಳಿಸುತ್ತೇನೆ ಅನ್ನುವ ಭರವಸೆ ಇತ್ತು. ಅವರಿಬ್ಬರೂ ಸೋದರಿಯರಷ್ಟೇ ಅಲ್ಲ, ಗೆಳತಿಯರೂ ಆಗುತ್ತಾರೆ. ಆಗ ದಿವ್ಯಾಳಿಗೆ ತನ್ನ ಹಳೆಯ ಮಿತ್ರರ ನೆನಪಾಯಿತು. ತನ್ನ ಕೆಟ್ಟ ದಿನಗಳ ಸಂಗಾತಿಗಳು, ಹೊಳೆಯುವ ಮಿನುಗುವ ನಕ್ಷತ್ರಗಳು ಅವಳ ಹೃದಯದಲ್ಲೂ ಆಶಾಕಿರಣದ ಬೆಳಕನ್ನು ಹುಟ್ಟಿಸಿದವು ಆ ನಕ್ಷತ್ರಗಳನ್ನು ಹೇಗೆ ಮರೆತಾಳು?
ಇಂದು ಈ ಬಾಲ್ಕನಿಯಲ್ಲಿ ನಿಂತು ಆ ಪ್ರಪಂಚವನ್ನು ನೋಡುತ್ತಾ ಝಗಮಗಿಸುವ ಸಭೆಯ ಕ್ಷಮೆ ಕೇಳುತ್ತಾ ಮನದಲ್ಲೇ ಹೇಳಿಕೊಂಡಳು, `ಇನ್ನು ಮುಂದೆ ಸಂತೋಷವನ್ನೂ ನಿಮ್ಮ ಜೊತೆ ಹಂಚಿಕೊಳ್ತೀನಿ, ನಿಮ್ಮ ಸ್ನೇಹವನ್ನು ಎಂದೆಂದಿಗೂ ಮರೆಯುವುದಿಲ್ಲ.’