ಅವಳ ಬಗ್ಗೆ ಅಯ್ಯೋ ಎನಿಸುತ್ತೆ. ಅವಳಿಗೆ 35 ವರ್ಷ. ಆದರೂ ಈವರೆಗೆ ಏಕಾಂಗಿ, ಸುಂದರಿ, ದೊಡ್ಡ ಹುದ್ದೆಯಲ್ಲಿದ್ದಾಳೆ. ಆದರೂ ಈವರೆಗೆ ಆಕೆಗೆ ಮದುವೆಯಾಗಿಲ್ಲ!”

ಶ್ರೀಲತಾ ತನ್ನ ಅಪಾರ್ಟ್‌ಮೆಂಟ್‌ಗೆ ಬಂದಾಗ ಮೇಲ್ಕಂಡ ಮಾತುಗಳು ಕೇಳಿಸಿದವು. ಅವಳು ಈ ಮಾತುಗಳನ್ನು ಕೇಳಿಸಿಕೊಂಡಿದ್ದು ಇದೇ ಮೊದಲಲ್ಲ. ಇಂತಹ ಮಾತುಗಳನ್ನು ಅನೇಕರು ಬೇರೆ ಬೇರೆ ರೀತಿಯಲ್ಲಿ ಮಾಡಿಕೊಂಡದ್ದನ್ನು ಅವಳು ಕೇಳಿಸಿಕೊಂಡಿದ್ದಾಳೆ. ಒಂದು ರೀತಿಯಲ್ಲಿ ಅವಳು ಅಂತಹ ಮಾತುಗಳಿಗೆ ಒಗ್ಗಿ ಹೋಗಿದ್ದಾಳೆ ಆದರೂ ಒಮ್ಮೊಮ್ಮೆ ಅಂತಹ ಮಾತುಗಳನ್ನು ಕೇಳಿದಾಗ ಅವಳ ಮನಸ್ಸಿಗೆ ನೋವಾಗುತ್ತದೆ.

ಜನರು ಅವಳ ಜೀವನದಲ್ಲಿ ಏಕೆ ಹಸ್ತಕ್ಷೇಪ ಮಾಡುತ್ತಾರೆ? ಅವಳಿಗೆ ನೆಮ್ಮದಿಯಿಂದ ಇರಲು ಏಕೆ ಅವಕಾಶ ಕೊಡುವುದಿಲ್ಲ? ಅವಳ ಪ್ರತಿಯೊಂದು ಆಗುಹೋಗುಗಳನ್ನು ಏಕೆ ಗಮನಿಸಲಾಗುತ್ತದೆ? ಏಕಾಂಗಿಯಾಗಿರುವುದು ಭಾರಿ ದೊಡ್ಡ ಅಪರಾಧವೇ? ಅವಳು ತನ್ನ ಇಷ್ಟಕ್ಕೆ ತಕ್ಕಂತೆ ಅದನ್ನು ಸ್ವೀಕರಿಸಿದ್ದರೆ ಅದರಿಂದ ಸಮಾಜಕ್ಕೇನು ತೊಂದರೆ? ಅವಳು ಅದನ್ನೇ ಚೆನ್ನಾಗಿ ಎಂಜಾಯ್‌ ಮಾಡುತ್ತಾಳೆ.

ತನ್ನ ಅಕ್ಕನ ವೈವಾಹಿಕ ಜೀವನದ ಗೋಳನ್ನು ನೋಡಿದ ಬಳಿಕ ಶ್ರೀಲತಾ ಮದುವೆಯಾಗದೇ ಏಕಾಂಗಿಯಾಗಿರಲು ನಿರ್ಧರಿಸಿದಳು. ಅಕ್ಕನ ಮೇಲೆ ಅದೆಷ್ಟು ನಿರ್ಬಂಧ ಹೇರಲಾಗುತ್ತೆಂದರೆ, ಯಾವುದೇ ಕೆಲಸವನ್ನು ಅವಳು ತನ್ನ ಗಂಡನ ಅನುಮತಿ ಇಲ್ಲದೆ ಮಾಡಲು ಆಗುವುದಿಲ್ಲ. ಅಕ್ಕನ ವಯಸ್ಸು 36. ಆದರೆ ಈಗ ಆಕೆ 60 ವರ್ಷದ ಅಜ್ಜಿಯ ಥರ ಕಾಣ್ತಿದ್ದಾಳೆ.

ಶ್ರೀಲತಾಳಂತಹ ಮಹಿಳೆಯರ ಸಂಖ್ಯೆ ಕಡಿಮೆಯೇನಿಲ್ಲ. ಏಕೆಂದರೆ ಅವರು ತಮ್ಮ ಇಚ್ಛೆಗನುಗುಣವಾಗಿ ಮದುವೆಯಾಗದಿರಲು ನಿರ್ಧರಿಸಿದ್ದಾರೆ. ಅವರು ತಮ್ಮದೇ ಆದ ರೀತಿಯಲ್ಲಿ ಜೀವನ ನಡೆಸಲು ಬಯಸಿದ್ದಾರೆ. ಯಾವುದೋ ಕಾರಣದಿಂದ ಮದುವೆ ಆಗದೇ ಇದ್ದರೂ ಏಕಾಂಗಿಯಾಗಿ ಖುಷಿಯಿಂದ ಇರಬಹುದಾಗಿದೆ. ಆದರೆ ಜೀವನ ನಡೆಸುವ ವಿಧಾನ ಮಾತ್ರ ಗೊತ್ತಿರಬೇಕು.

ಶ್ರೀಲತಾ ಈ ಕುರಿತು ಹೀಗೆ ಹೇಳುತ್ತಾಳೆ, “ಮದುವೆ ಆಗಲೇಬೇಕೆಂದೇನಿಲ್ಲ. ಎಷ್ಟೋ ಸಲ ನಾವು ಇಷ್ಟಪಟ್ಟ ಸಂಗಾತಿ ದೊರೆಯುವುದಿಲ್ಲ. ಹೀಗಾಗಿ ಮದುವೆ ಆಗುವುದಿಲ್ಲ. ಮತ್ತೆ ಕೆಲವು ಸಲ ಯಾರೋ ಒಬ್ಬರು ಇಷ್ಟವಾದರೂ ಜೀವನವಿಡೀ ಇವರ ಜೊತೆ ಜೀವನ ಸಾಗಿಸಬೇಕಾ ಎಂದೆನಿಸುತ್ತದೆ. ನನ್ನ ಜೊತೆಗೆ ಹೀಗೆ ಆಯಿತು. ಪ್ರೀತಿ ಒಂದು ವಿಶೇಷ ಅನುಭೂತಿ. ನಿಮಗೆ ಸೂಕ್ತ ಸಂಗಾತಿ ದೊರಕದಿದ್ದರೆ ಇದರರ್ಥ ನೀವು ಜೀವನದ ಬಗ್ಗೆ ಖುಷಿಯಿಂದಿಲ್ಲ ಎಂದಲ್ಲ. ನೀವು ಏಕಾಂಗಿಯಾಗಿದ್ದರೆ, ಮದುವೆ ಆಗದೇ ಇದ್ದರೆ ನಿಮ್ಮ ಜೀವನ ಅಪೂರ್ಣ ಎಂದು ಭಾವಿಸುವುದು ತಪ್ಪು. ಮದುವೆಯೇ ಎಲ್ಲ ಅಲ್ಲ. ಜೀವನ ನಮಗೆ ಅಗಣಿತ ಅವಕಾಶಗಳನ್ನು ದೊರಕಿಸಿಕೊಡುತ್ತದೆ. ಅವನ್ನು ನೀವೇ ಹುಡುಕಬೇಕು ಹಾಗೂ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು.”

ನಾವು ಏಕಾಂಗಿಯಾಗಿರುವುದನ್ನು ನೋಡಿ ನಿಮ್ಮ ಸ್ನೇಹಿತರು, ತಾಯಿತಂದೆಯರು, ಅಣ್ಣತಂಗಿ ಮತ್ತು ಸಮಾಜ ನೀವು ದುಃಖಿತರಾಗಿರಬಹುದು ಎಂದು ಅಂದುಕೊಳ್ಳುತ್ತಾರೆ. ನೀವು ಏಕಾಂಗಿಯಾಗಿರಲು ನಿರ್ಧರಿಸಿರುವ ಕಾರಣ ಏನೇ ಆಗಿರಬಹುದು, ನಾನು ಏಕಾಂಗಿಯಾಗಿದ್ದರೂ ಖುಷಿಯಿಂದ ಇರಬಲ್ಲೆ ಎಂದು ನಿರ್ಧರಿಸಿಕೊಂಡೇ ಮುನ್ನಡೆಯಿರಿ. ನೀವು ಮಾನಸಿಕವಾಗಿ ಪರಿಪೂರ್ಣವಾಗಿ ಸನ್ನದ್ಧರಾದಾಗಲೇ ಏಕಾಂಗಿಯಾಗಿ ಇರುವ ಬಗ್ಗೆ ನಿರ್ಧಾರ ಮಾಡಿ.

ಬಂಧನ ಮುಕ್ತತೆಯನ್ನು ಸೆಲೆಬ್ರೇಟ್‌ ಮಾಡಿ :  ನೀವು ಮದುವೆಯಾಗಿದ್ದರೆ ನಿಮ್ಮ ಜೀವನ ಖುಷಿಯಿಂದ ಕೂಡಿದೆ ಎಂದರ್ಥವಲ್ಲ. ಜವಾಬ್ದಾರಿಗಳ ಜೊತೆ ಸಮಸ್ಯೆಗಳು ಹೇಳದೇ ಕೇಳದೇ ಬಂದುಬಿಡುತ್ತವೆ. ನೀವು ಏಕಾಂಗಿಯಾಗಿದ್ದರೆ ನಿಮಗೆ ಯಾವುದೇ ಹೊಣೆಗಾರಿಕೆಯಿಲ್ಲ. ಯಾವುದೇ ಕಮಿಟ್‌ಮೆಂಟ್‌ ಇಲ್ಲ. ಹಾಗಾಗಿ ಅದನ್ನು ಸೆಲೆಬ್ರೇಟ್‌ ಮಾಡಿ. ಯಾರಾದರೂ ದಂಪತಿಗಳು ಕೈಯಲ್ಲಿ ಕೈ ಹಾಕಿಕೊಂಡು ಹೋಗುವುದನ್ನು ನೋಡಿ ಖೇದ ವ್ಯಕ್ತಪಡಿಸುವ ಬದಲು ನಿಮಗಾಗಿ ನೀವು ಜೀವಿಸಿ. ಸ್ವಾತಂತ್ರ್ಯದ ಗಾಳಿಯಲ್ಲಿ ಮುಕ್ತವಾಗಿ ಉಸಿರಾಡಿ. ಸಿಂಗಲ್ ಸ್ಟೇಟಸ್‌ನ ಬಗ್ಗೆ  ಮನಸ್ಸಿನಲ್ಲಿ ನಿರಾಶೆಯ ಭಾವನೆ ಇಟ್ಟುಕೊಳ್ಳದೆ, ನಾನು ಯಾರ ಹಂಗಿನಲ್ಲೂ ಇಲ್ಲ ಎಂದು ಯೋಚಿಸಿ. ನಿಮಗೆ ಎಲ್ಲಿಗೆ ಬೇಕಾದರೂ ಹೋಗುವ ಸ್ವಾತಂತ್ರ್ಯವಿದೆ. ಅದಕ್ಕಾಗಿ ನಿಮ್ಮ ಆತ್ಮವಿಶ್ವಾಸನ್ನು ಕಾಯ್ದುಕೊಂಡು ಹೋಗಿ.

ನಿಮಗಾಗಿ ಸಮಯ ವಿನಿಯೋಗಿಸಿ : ನಿಮಗಾಗಿ ಸಾಕಷ್ಟು ಸಮಯ ಖರ್ಚು ಮಾಡಲು ಸಿಗುತ್ತದೆ. ವಿವಾಹಿತ ಮಹಿಳೆಗೆ ಜೀವನವಿಡಿ ಆ ಒಂದು ನೋವು ಕಾಡುತ್ತಿರುತ್ತದೆ. ಅಂತಹ ನೋವು ನಿಮಗೆ ಖಂಡಿತ ಇರುವುದಿಲ್ಲ. ಗಂಡ, ಮಕ್ಕಳು, ಸಂಸಾರದ ತಾಪತ್ರಯದಲ್ಲಿ ಮಹಿಳೆಗೆ ತನಗಾಗಿ ಒಂದಿಷ್ಟೂ ಸಮಯ ದೊರಕುವುದಿಲ್ಲ. ನೀವು ಏಕಾಂಗಿಯಾಗಿರುವ ಕಾರಣದಿಂದ ನಿಮಗಾಗಿ ಸಾಕಷ್ಟು ಸಮಯ ವಿನಿಯೋಗಿಸಲು ಲಭಿಸುತ್ತದೆ. ನಿಮಗೆ ಇಷ್ಟವಾದ ರೀತಿಯಲ್ಲಿ ಸಿಂಗರಿಸಿಕೊಳ್ಳಿ, ಎಲ್ಲಿಗೆ ಬೇಕೆಂದರಲ್ಲಿ ಹೋಗಿ ಬನ್ನಿ. ಇಷ್ಟದ ಸಂಗೀತ ಆಲಿಸಿ, ಪುಸ್ತಕ ಓದಿ. ಯಾವುದೇ ನಿರ್ಬಂಧ ಇರದು.

ಆಗ ನಿಮಗೆ ಏಕಾಂಗಿತನದ ಅನುಭೂತಿ ಬರುವುದೇ ಇಲ್ಲ. ನಿಮ್ಮನ್ನು ನೀವು ಅರಿತುಕೊಳ್ಳಲು ಹೆಚ್ಚು ಸಮಯ ದೊರೆಯುತ್ತದೆ. ನಿಮ್ಮಿಂದ ಯಾರೂ ಅಪೇಕ್ಷೆ ಇಟ್ಟುಕೊಳ್ಳುವುದಿಲ್ಲ.  ನೀವು ಕೂಡ ಅಷ್ಟೇ, ಮನಸ್ಸಿನಲ್ಲಿ ಯಾವುದೇ ವಿರೋಧಾಭಾಸವಾಗಲಿ, ಕಹಿತನದ ಭಾವನೆಯಾಗಲಿ ಇರದು.

ಸೋಶಿಯಲ್ ಆಗಿರಿ : ನಿಮ್ಮದೇ ಆದ ಒಂದು ಸೋಶಿಯಲ್ ಸರ್ಕಲ್ ರಚಿಸಿಕೊಳ್ಳಿ. ನಿಮಗೆ ಬೇಸರ ಅನಿಸಿದಾಗ ಯಾರ ಜೊತೆಗಾದರೂ ಪಾರ್ಟಿಗೆ ಹೋಗಿ, ಸಿನಿಮಾಕ್ಕೆ ಹೋಗಿ ಬನ್ನಿ. ನೀವೆಷ್ಟೇ ಸೋಶಿಯಲ್ ಆಗಿ, ಆದರೆ ಬೇರೆಯವರನ್ನು ಹೆಚ್ಚು ಅವಲಂಬಿಸಲು ಹೋಗಬೇಡಿ. ಯಾರಾದರೂ ಜೊತೆಗೆ ಇದ್ದರೆ ಮಾತ್ರ ನಾನು ಸಿನಿಮಾಕ್ಕೆ ಹೋಗ್ತೀನಿ ಎನ್ನುವ ಸ್ಥಿತಿ ತಂದುಕೊಳ್ಳಬೇಡಿ. ನಾನೊಬ್ಬಳೇ  ಕೂಡ ಹೋಗಬಲ್ಲೆ ಎಂದುಕೊಳ್ಳಿ. ನಿಮ್ಮ ಸ್ನೇಹದ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇರಿ. ಏಕೆಂದರೆ ತುರ್ತುಸ್ಥಿತಿಯಲ್ಲಿ ನಿಸ್ಸಂಕೋಚವಾಗಿ ಯಾರದ್ದಾದರೂ ಸಹಾಯ ಪಡೆದುಕೊಳ್ಳಬಹುದು.

ಕೆರಿಯರ್‌ ಬಗ್ಗೆ ಸಂಪೂರ್ಣ ಗಮನ : ಸಿಂಗಲ್ ವುಮನ್‌ ಆಗಿರುವ ಕಾರಣದಿಂದ ನೀವು ಕೆರಿಯರ್‌ ಬಗ್ಗೆ ಸಂಪೂರ್ಣವಾಗಿ ಗಮನಹರಿಸಬಹುದು. ಮೆಟ್ರೋ ನಗರಗಳಲ್ಲಿ ಹುಡುಗಿಯರು ತಮ್ಮ ಕೆರಿಯರ್‌ ರೂಪಿಸಿಕೊಳ್ಳಲೆಂದೇ ಮತ್ತು ತಮ್ಮ ಮಹತ್ವಾಕಾಂಕ್ಷೆ ಈಡೇರಿಕೆಗೆ ಏಕಾಂಗಿಯಾಗಿರಲು ಇಷ್ಟಪಡುತ್ತಾರೆ.
ಅನುಪ್ರಿಯಾಗೆ 35 ವರ್ಷ. ಆಕೆ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಾಳೆ, “ನಾನು ಉದ್ದೇಶಪೂರ್ವಕವಾಗಿ ಮದುವೆ ಮಾಡಿಕೊಳ್ಳಲಿಲ್ಲ. ಕೆರಿಯರ್‌ ಬಗ್ಗೆ ನಾನು ಮೊದಲಿನಿಂದಲೇ ಬಹಳ ಆಸಕ್ತಳಾಗಿದ್ದೆ. ಮದುವೆಯ ಬಳಿಕ ಸಾಕಷ್ಟು ಹೊಂದಾಣಿಕೆಗೆ ಸಿದ್ಧಳಾಗಿರಬೇಕಾಗುತ್ತದೆ ಎಂಬುದು ನನಗೆ ಗೊತ್ತಿತ್ತು. ಉದ್ಯೋಗ ಮುಂದುವರಿಸಲು ಆಗದೆಯೂ ಇರಬಹುದು. ಅಕಸ್ಮಾತ್‌ಉದ್ಯೋಗದಿಂದ ಕೆಲವು ತಿಂಗಳು ಬ್ರೇಕ್‌ ತೆಗೆದುಕೊಂಡರೆ ಕೆಲಸ ಕಾರ್ಯಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಕೆಲವೊಮ್ಮೆ ಹೊಸ ಕೆಲಸ ನೋಡಿಕೊಳ್ಳುವ ಅನಿವಾರ್ಯತೆಯೂ ಉಂಟಾಗಬಹುದು. ಮೊದಲು ಮಾಡಿದ್ದ ಕೆಲಸ ವ್ಯರ್ಥ ಎನಿಸುತ್ತದೆ. ಈ ಕಾರಣದಿಂದ ನಾನು ಮದುವೆ ವಿಚಾರ ಬಿಟ್ಟು ಕೆಲಸದ ಮೇಲೆಯೇ ಗಮನಕೊಟ್ಟೆ. ಹೀಗಾಗಿ ಈಗ ನಾನು ಸಕ್ಸೆಸ್‌ಫುಲ್ ಅನಿಸಿಕೊಂಡಿರುವೆ. ಅದರ ಸಂಪೂರ್ಣ ಆನಂದವನ್ನು ಅನುಭವಿಸುತ್ತಿರುವೆ!”

ಸಿಂಗಲ್ ವುಮನ್‌ ಕೆರಿಯರ್‌ನಲ್ಲಿ ಹೆಚ್ಚು ಯಶಸ್ವಿಯಾಗುತ್ತಾಳೆ. ಇದಂತೂ ಸಾಬೀತಾದ ಸಂಗತಿ. ಖಾಸಗಿ ಕಂಪನಿಗಳು ಈಗ ಇಂಥ ಮಹಿಳೆಯರಿಗೇ ಹೆಚ್ಚು ಪ್ರಾಮುಖ್ಯತೆ ಕೊಡುತ್ತವೆ. ಅವರು ಕೆಲಸಕ್ಕೆ ಹೆಚ್ಚು ಸಮಯ ತೊಡಗಿಸುವುದರ ಜೊತೆ ಜೊತೆಗೆ ಹೆಚ್ಚು ಫೋಕಸ್ಡ್ ಕೂಡ ಆಗಿರುತ್ತಾರೆ.

ಹವ್ಯಾಸ ಪೂರೈಸಿಕೊಳ್ಳಿ : ನೀವು ಏಕಾಂಗಿಯಾಗಿದ್ದರೆ ಸಂಪೂರ್ಣ ಸಮಯ ನಿಮ್ಮದೇ. ನೀವು ನಿಮ್ಮ ಹವ್ಯಾಸ ಈಡೇರಿಸಿಕೊಳ್ಳಿ. ತೋಟಗಾರಿಕೆ, ಹೊಲಿಗೆ, ಹೆಣಿಗೆ, ಚಿತ್ರಕಲೆ, ಪೇಂಟಿಂಗ್‌ ಅಥವಾ ಯಾವುದೇ ಆಟದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು. “ಇದೆಲ್ಲ ನಿಮ್ಮ ವಯಸ್ಸಿನವರು ಮಾಡುತ್ತಾರೇನ್ರಿ?” ಎಂದು ನಿಮ್ಮನ್ನು ಯಾರೂ ತಡೆಯುವುದಿಲ್ಲ. ನೀವು ಯಾವುದಾದರೊಂದು ಹವ್ಯಾಸ ರೂಢಿಸಿಕೊಳ್ಳಬೇಕು. ನಿಮ್ಮನ್ನು ನೀವು ಹೊಸ ಹೊಸ ಸಂಗತಿಗಳಿಂದ ಅಪ್‌ಡೇಟ್‌ ಮಾಡಿಕೊಳ್ಳುತ್ತ ಇರಬೇಕು. ಮನಸ್ಸಿನ ಮಾತು ಆಲಿಸಿ : ಸೈಕ್ಲಿಂಗ್‌ ಮಾಡಿ, ಟ್ರೆಕ್ಕಿಂಗ್‌ಗೆ ಹೋಗಿ, ವಾರಾಂತ್ಯದಲ್ಲಿ ಲಾಂಗ್‌ ಡ್ರೈವ್ ‌ಹೋಗಿ ಅಥವಾ ಯಾವುದಾದರೂ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನೆಮ್ಮದಿದಾಯಕ ಜೀವನ ನಡೆಸುವುದೇ ನಿಮ್ಮ ಗುರಿಯಾಗಬೇಕು. ನಾನು ಸಿಂಗಲ್ ಆಗಿರುವುದರ ಹೊರತಾಗಿ ಅದೆಷ್ಟು ಖುಷಿಯಾಗಿದ್ದೇನೆ ಎಂಬುದನ್ನು ಜನರಿಗೆ ತೋರಿಸಿ ಕೊಡಬೇಕು.

ಏಕಾಂಗಿಯಾಗಿ ಪ್ರವಾಸಕ್ಕೆ ತೆರಳಿ : ಪ್ರವಾಸಕ್ಕೆ ತೆರಳುವ ಹವ್ಯಾಸ ಯಾರಿಗೆ ತಾನೇ ಇರುವುದಿಲ್ಲ? ಹಾಗಾದರೆ ನಿಮ್ಮನ್ನು ತಡೆಯುತ್ತಿರುವವರು ಯಾರು? ನಿಮಗಿಷ್ಟವಾಗುವ ಯಾವುದಾದರೊಂದು ಸ್ಥಳಕ್ಕೆ ಹೋಗಿ. ಅದು ಟ್ರೆಕ್ಕಿಂಗ್‌ಗೆ ಇರಬಹುದು ಇಲ್ಲಿ ರೆಸಾರ್ಟ್‌ಗೆ ವಿಶ್ರಾಂತಿಗೆ ಹೋಗುವುದು ಆಗಿರಬಹುದು. ಅಲ್ಲಿ ನೀವು ನಿಮ್ಮದೇ ಆದ ರೀತಿಯಲ್ಲಿ ಖುಷಿಯಿಂದ ಇರಬಹುದು. ಯಾವುದೇ ಅಡೆತಡೆಯಿಲ್ಲದೆ ಮ್ಯೂಸಿಕ್‌ ಫೆಸ್ಟಿವಲ್‌ಗೆ ಹೋಗಿ, ನಾಟಕ ನೋಡಿ. ವಿವಾಹಿತ ಮಹಿಳೆಗೆ ಈ ರೀತಿ ಯೋಚನೆ ಕೂಡ ಮಾಡಲು ಸಾಧ್ಯವಾಗುವುದಿಲ್ಲ.

ಶಾಪಿಂಗ್‌ ಮಾಡಿ : ನೀವು ಗಳಿಸುವವರಾಗಿದ್ದಲ್ಲಿ ನಿಮಗಾಗಿಯೂ ಅಷ್ಟಿಷ್ಟು ಖರ್ಚು ಮಾಡಿಕೊಳ್ಳಿ. ನಿಮ್ಮದೇ ಗಳಿಕೆಯಿಂದ ಶಾಪಿಂಗ್‌ ಮಾಡುವ ಆನಂದ ವಿಭಿನ್ನವಾಗಿರುತ್ತದೆ. ನನಗಾಗಿ ಹಣ ಖರ್ಚು ಮಾಡಿಕೊಳ್ಳುತ್ತಿದ್ದೇನೆ ಎಂಬ ಗಿಲ್ಟ್ ನಿಮ್ಮನ್ನು ಕಾಡದು. ನಿಮಗಾಗಿ ಏನು ಬೇಕಾದರೂ ಖರೀದಿಸಬಹುದು. ಎಂಥದೇ ಡ್ರೆಸ್‌ ಬೇಕಾದರೂ ಕೊಳ್ಳಬಹುದು. ನಿಮ್ಮನ್ನು ತಡೆಯುವವರು ಯಾರೂ ಇರುವುದಿಲ್ಲ. ಮೇಲಿಂದ ಮೇಲೆ ಬೇರೆಯವರ ಅಥವಾ ಗಂಡನ ಅನುಮತಿ ಪಡೆದುಕೊಳ್ಳುವ ಸಂದರ್ಭವೇ ಬರದು. ಬೇರೆಯವರ ಖುಷಿ ಅಥವಾ ಆಸಕ್ತಿಗನುಗುಣವಾಗಿ ನಿಮ್ಮ ಆಸಕ್ತಿ ಅನಾಸಕ್ತಿಯನ್ನು ನಿರ್ಧರಿಸುವುದಕ್ಕಿಂತ ನೀವು ಸಿಂಗಲ್ ಆಗಿದ್ದುಕೊಂಡು ನಿಮಗೆ ಇಷ್ಟವಾದದ್ದನ್ನು ಧರಿಸಿ ಅಥವಾ ತಿನ್ನಿ.

ನೋ ಕಾಂಪ್ರಮೈಸ್‌ : ಬೇರೆಯವರ ಖುಷಿಗೆ ನಿಮ್ಮ ಖುಷಿಯನ್ನು ಪಣಕ್ಕೊಡ್ಡುವ ಅಗತ್ಯ ಬೀಳದು. ಜನರು ನಿಮ್ಮನ್ನು ಸ್ವಾರ್ಥಿ ಎಂದು ಟೀಕಿಸಬಹುದು. ಆದರೆ ಅದರಲ್ಲಿ ತಪ್ಪೇನಿದೆ? ಅಷ್ಟಿಷ್ಟು ಸ್ವಾರ್ಥಿಯಾಗುವುದರಲ್ಲಿ ತಪ್ಪೇನಿಲ್ಲ. ಏಕೆಂದರೆ ಜೀವನ ಹೊಂದಾಣಿಕೆಯ ಚಕ್ರದಡಿ ಸಿಲುಕಿದಾಗ ಖುಷಿ ಕಡಿಮೆ, ದುಃಖ ಜಾಸ್ತಿಯಾಗುತ್ತದೆ. ಇನ್ನೊಬ್ಬರ ನೆರಳಿನಲ್ಲಿ ಕುಗ್ಗಿ ಕುಗ್ಗಿ ಜೀವನ ಸಾಗಿಸುವ ಅರ್ಥವಾದರೂ ಏನಿದೆ? ನೀವೇ ಸ್ವತಃ ನಿರ್ಣಯ ಕೈಗೊಳ್ಳಿ. ಬೇರೆಯವರು ನಿಮ್ಮ ಖುಷಿಯನ್ನು ಏಕೆ ನಿರ್ಧರಿಸಬೇಕು? ಹಾಗಾದರೆ ಮನಸೋಕ್ತವಾಗಿ ಜೀವಿಸಿ.

– ಸುಮತಿ ಭಾರ್ಗವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ