ಕಥೆ – ಮಾಲತಿ ಮೂರ್ತಿ
ದೀಪಾ ಸುಂದರ ಹುಡುಗಿ. ಯಾವುದೇ ಗಂಡಾದರೂ ನೋಡಿದ ಕೂಡಲೇ ಒಪ್ಪುವಂತಹ ರೂಪ ಅವಳದು. ಆದರೂ ಅವಳ ಮದುವೆ ಮುಂದೂಡಿ ಹೋಗುತ್ತಿತ್ತು. ಅವಳ ತಂದೆ ಕಾಲೇಜಿನಲ್ಲಿ ಪ್ರಿನ್ಸಿಪಾಲರು. ಜಾತಕ, ಜಾತಿ, ಅಂತಸ್ತುಗಳ ಕಾರಣದಿಂದ ಯಾವ ಸಂಬಂಧವನ್ನೂ ಒಪ್ಪುತ್ತಿರಲಿಲ್ಲ.
ದೀಪಾ ತನ್ನ ಸಹಪಾಠಿ ಅರುಣನನ್ನು ಮೆಚ್ಚಿಕೊಂಡಿದ್ದಳು. ಕಳೆದ 3-4 ವರ್ಷಗಳಿಂದ ಅವರ ಪ್ರೇಮ ಪ್ರಕರಣ ನಡೆಯುತ್ತಿತ್ತು. ಆದರೆ ಅರುಣ್ ಬೇರೆ ಜಾತಿಗೆ ಸೇರಿದವನೆಂದು ಅವಳ ತಂದೆ ಮದುವೆಗೆ ಒಪ್ಪಿರಲಿಲ್ಲ. ಕಡೆಗೆ ಅವರು ಲಘು ಹೃದಯಾಘಾತದಿಂದ ಹಾಸಿಗೆ ಹಿಡಿದಾಗ ವಿಧಿಯಿಲ್ಲದೆ ಮಗಳ ಪ್ರೇಮ ವಿವಾಹಕ್ಕೆ ಅಸ್ತು ಎನ್ನಬೇಕಾಯಿತು.
ವಿವಾಹವಾದ ಕೆಲವೇ ದಿನಗಳಲ್ಲಿ ದೀಪಾಳ ತಂದೆ ವಿಧಿವಶರಾದರು. ಗಂಡು ಸಂತಾನವಿಲ್ಲದ ಆ ಮನೆಯಲ್ಲಿ ಅರುಣ್ ಮಗನಂತೆ ನಿಂತು ಕಾರ್ಯ ನೆರವೇರಿಸಲು ನೆರವು ನೀಡಿದ. ಎಲ್ಲ ಮುಗಿದ ನಂತರ ದೀಪಾಳನ್ನು ತನ್ನ ಮನೆಗೆ ಕರೆದೊಯ್ದ.
ಅರುಣ್ ತಂದೆಯದೇ ಬಿಸ್‌ನೆಸ್‌ನ್ನು ನೋಡಿಕೊಳ್ಳುತ್ತಿದ್ದ. ಅವರು ಆರ್ಥಿಕವಾಗಿ ಸದೃಢವಾಗಿದ್ದರು. ತಂದೆಯ ಗಮನ ಸಂಪೂರ್ಣವಾಗಿ ಬಿಸ್‌ನೆಸ್ ಕಡೆಗೆ. ಮನೆಯ ಜವಾಬ್ದಾರಿಯೆಲ್ಲ ತಾಯಿಯದು. ತಾಯಿ ಕಾಂತಾಮಣಿ ಸಂಪ್ರದಾಯಸ್ಥೆಯಾದರೂ ಬೇರೆ ಜಾತಿಯವಳಾದ ಸೊಸೆಯನ್ನು ಪ್ರೀತಿಯಿಂದ ಬರಮಾಡಿಕೊಂಡರು.
ಆದರೆ ದೀಪಾಳಿಗೆ ಅತ್ತೆಯ ಆಚಾರ ವಿಚಾರ ಒಪ್ಪಿಗೆಯಾಗಲಿಲ್ಲ. ಅವರ ಪೂಜೆ, ದೈಭಕ್ತಿಯನ್ನು ಮೂಢನಂಬಿಕೆ ಎಂದು ಟೀಕಿಸಿದಳು. ಪತ್ನಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ಅರುಣ್ ಅವಳಿಗೆ ತಿಳಿಹೇಳಲು ಪ್ರಯತ್ನಿಸಿ ಸೋತುಹೋದ. ಕಡೆಗೊಂದು ದಿನ ಅವನೊಂದಿಗೆ ಜಗಳವಾಡಿ ತೌರಿಗೆ ಹೊರಟುಹೋದಳು.
ಅತ್ತೆಮನೆಯನ್ನು ತೊರೆದು ತೌರಿಗೆ ಬಂದ ಮಗಳಿಗೆ ಅವಳ ತಾಯಿ ಮಾಲಿನಿ ಬುದ್ಧಿವಾದ ಹೇಳಲಿಲ್ಲ. ಅಕ್ಕ ರೂಪಾ ಸಹ ಅವಳ ಪರವಾಗಿಯೇ ಮಾತನಾಡಿದಳು. ಹೀಗೆ ತಾಯಿ ಮತ್ತು ಅಕ್ಕನ ಬೆಂಬಲದಿಂದ ದೀಪಾ ಪತಿಯ ಪ್ರೀತಿಗೆ ವಿಮುಖಳಾಗುತ್ತಾ ಹೋದಳು. ಅರುಣ್ ಮತ್ತೆ ಮತ್ತೆ ಹೋಗಿ ಅವಳ ಮನವೊಲಿಸಲು ಪ್ರಯತ್ನಿಸಿದ. ಆದರೆ ದೀಪಾ ಯಾವುದಕ್ಕೂ ಜಗ್ಗಲಿಲ್ಲ.
ಇತ್ತ ತೌರಿನಲ್ಲಿ ದೀಪಾ ತಿಂದುಂಡು ಮನಬಂದಂತೆ ತಿರುಗುತ್ತಾ ಕಾಲ ಕಳೆಯುತ್ತಿದ್ದರೆ, ಅತ್ತ ಅರುಣ್ ಪತ್ನಿಗಾಗಿ ಚಿಂತಿಸುತ್ತಿದ್ದನು. ಅವಳಿರುವಲ್ಲಿಗೆ ಹೋಗಿ ಮನೆಗೆ ಹಿಂದಿರುಗುವಂತೆ ಕರೆದು ಸಾಕಾದನು. ಅವಳ ತಿರಸ್ಕಾರದಿಂದ ನೊಂದು ಭೇಟಿ ಮಾಡುವುದನ್ನು ನಿಲ್ಲಿಸಿದ. ಏನಾದರೂ ಅವಳು ಮಾತ್ರ ಅತ್ತೆ ಮನೆಯತ್ತ ತಲೆ ಹಾಕಲಿಲ್ಲ. ಬೇರೆ ಯಾವುದೇ ಹವ್ಯಾಸವಿರಿಸಿಕೊಂಡಿಲ್ಲದ ಅರುಣ್‌ಗೆ ಒಂಟಿತನ ಅತಿಯಾಗಿ ಬಾಧಿಸತೊಡಗಿತು. ಕಾಂತಾಮಣಿಗೂ ಸೊಸೆ ಮನೆಗೆ ಬಂದು ಮಗ ಸಂತೋಷವಾಗಿರಲಿ, ಅವರ ಸಂಸಾರ ಮುಂದುವರಿಯಲಿ, ತಾವು ಮೊಮ್ಮಗುವನ್ನು ಮುದ್ದಾಡುವಂತಾಗಲಿ ಎಂದೆಲ್ಲ ಆಸೆಯಾಗುತ್ತಿತ್ತು. ಆದರೆ ದೀಪಾ ಪತಿಯತ್ತ ತಿರುಗಲೂ ಇಲ್ಲ ಅಥವಾ ಅವನಿಗೆ ವಿವಾಹ ವಿಚ್ಛೇದನವನ್ನೂ ಕೊಡಲಿಲ್ಲ.
ಅರುಣ್ ಪತ್ನಿಯನ್ನು ಮನಃಪೂರ್ವಕವಾಗಿ ಇಷ್ಟಪಟ್ಟಿದ್ದನು. ಅವಳಿಗಾಗಿ ಕಾದು ಕಾದು ನಿರಾಶನಾದನು. ದೀಪಾಳಿಲ್ಲದ ಜೀವನ ಅವನಿಗೆ ದುಸ್ತರವಾಗಿ ಕಂಡಿತು. ಜೀವನದಲ್ಲಿ ಆಸಕ್ತಿಯೇ ಇಲ್ಲವಾಯಿತು. ಯಾವಾಗಲೂ ಅನ್ಯಮನಸ್ಕನಾಗಿ ಇರುತ್ತಿದ್ದ. ಒಂದು ದಿನ ಯಾವುದೋ ಯೋಚನೆಯಲ್ಲಿ ಬೈಕ್ ಓಡಿಸುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ. ತಲೆಗೆ ದೊಡ್ಡ ಪೆಟ್ಟು ಬಿದ್ದಿತು ಜನರು ಸುತ್ತುವರಿದು ಪೊಲೀಸರು ಅವನನ್ನು ಆಸ್ಪತ್ರೆಗೆ ಸೇರಿಸಿದರು. ತಂದೆ ತಾಯಿಗೆ ಸುದ್ದಿ ಮುಟ್ಟಿಸಿದರು. ನಾರಾಯಣ್ ಮತ್ತು ಕಾಂತಾಮಣಿ ಓಡೋಡಿ ಬಂದರು. ಐಸಿಯುನಲ್ಲಿದ್ದ ಮಗನ ಸ್ಥಿತಿಯನ್ನು ಕಂಡು ರೋಧಿಸಿದರು. ಸೊಸೆಯ ಮನೆಗೆ ವಿಷಯ ತಿಳಿಸಿದರು. ಆದರೆ ದೀಪಾ ಆಗಲಿ ಅವಳ ತಾಯಿಯಾಗಲಿ ಆಸ್ಪತ್ರೆಗೆ ಬರಲಿಲ್ಲ. ಬಂದು ನೋಡಬೇಕೆಂಬ ಮನಸ್ಸು ಅವರಿಗೆ ಇರಲಿಲ್ಲ.
ದೀಪಾ ಬಂದು ಪತಿಯನ್ನು ನೋಡಲಿ ಎಂದು ಮತ್ತೆ ಮತ್ತೆ ಫೋನ್ ಮಾಡಿದಾಗ ಮಗಳನ್ನು ಕಳುಹಿಸುವ ಬದಲು ತಾಯಿ ಮಾಲಿನಿ ಷರತ್ತನ್ನು ಮುಂದಿಟ್ಟಳು. “ದೀಪಾ ಅತ್ತೆಯ ಮನೆಗೆ ಬರಲು ಸಾಧ್ಯವಿಲ್ಲ. ಬೇರೆ ಮನೆ ಮಾಡಿದರೆ ಬರುತ್ತಾಳೆ.”
ಮಗನ ಸುಖಕ್ಕಾಗಿ ತಂದೆ ನಾರಾಯಣ್ ತಲೆ ಬಾಗಿದರು. ಆದರೆ ಆಸ್ಪತ್ರೆಯ ಓಡಾಟದಿಂದಾಗಿ ಮನೆ ಹುಡುಕುವ ಕೆಲಸ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.
ಮತ್ತೆ ಕೆಲವು ದಿನಗಳು ಕಳೆದವು. ಅರುಣ್ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಗಾಯಗೊಂಡು ದುರ್ಬಲನಾಗಿದ್ದ ಪತಿಯನ್ನು ನೋಡಲು ದೀಪಾ ಆಸ್ಪತ್ರೆಗೆ ಬರಲೇ ಇಲ್ಲ. ಬೇರೆ ಮನೆ ಮಾಡುವ ಬೇಡಿಕೆಯನ್ನೇ ಪಟ್ಟಾಗಿ ಹಿಡಿದಿದ್ದಳು. ಅವಳಿಗೆ ಪತಿಗಿಂತ ಪ್ರತ್ಯೇಕ ಮನೆಯೇ ಮುಖ್ಯವಾಗಿತ್ತು.
ಅರುಣ್ ಕೊಂಚ ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಮನೆಗೆ ಬಂದ. ಆ ನಂತರವೇ ಅವನ ತಂದೆಗೆ ಮನೆ ಹುಡುಕಲು ಸಮಯ ಸಿಕ್ಕಿದ್ದು. ಆದರೆ ಗಾಯಗೊಂಡಿದ್ದ ಅರುಣನಿಗೆ ದೀಪಾಳ ಸ್ವಾರ್ಥ ಪೂರ್ಣ ಷರತ್ತಿನಿಂದ ಬಹಳ ನೋವಾಯಿತು. ಅವನು ಮೊದಲಿಗಿಂತ ಹೆಚ್ಚು ಮೌನವಾಗಿ ಇರತೊಡಗಿದ. ಈ ನಿರಾಶೆಯು ಅರುಣನನ್ನು ಒಳಗಿಂದೊಳಗೆ ಘಾಸಿಗೊಳಿಸಿತು. ಯಾರನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸಿದ್ದನೋ ಅವಳು ಮಡದಿಯಾಗಿದ್ದರೂ ತನ್ನ ಅನಾರೋಗ್ಯ ಸ್ಥಿತಿಯಲ್ಲಿ ಬಳಿಗೆ ಬಾರದಿರುವಾಗ ಇನ್ನೂ ಅವಳೊಂದಿಗೆ ಜೀವನ ನಡೆಸುವ ಆಸೆ ಏಕೆ ಬೇಕು ಎಂದು ಯೋಚಿಸಿದ ಅವನ ಕನಸೆಲ್ಲ ಕರಗಿಹೋಯಿತು. ಯಾವ ಪ್ರೀತಿಯ ಭಾವನೆ ಬಾಳನ್ನು ನಡೆಸಲು ಸ್ಛೂರ್ತಿ ಕೊಟ್ಟಿತ್ತೋ ಅದೇ ಇಲ್ಲದಂತಾಯಿತು. ಇನ್ನು ಬದುಕಿನಲ್ಲಿ ಏನೂ ಉಳಿದಿಲ್ಲ ಎಂದು ಮನಸ್ಸು ಹೇಳಿತು.
ಅರುಣ್ ಇಂತಹ ಯೋಚನೆಯಲ್ಲಿ ತೊಳಲುತ್ತಿದ್ದ. ದೀಪಾಳ ಮೇಲಿನ ಪ್ರೀತಿ, ಆಸೆ ಹೊರಟುಹೋಗಿತ್ತು. ಅವನು ಯಾರನ್ನು ಬಹಳವಾಗಿ ಇಷ್ಟಪಟ್ಟಿದ್ದನೋ ಆ ಪ್ರೀತಿಯ ದೇವತೆ ಈಗ ಶಿಲಾಮೂರ್ತಿ ಆಗಿರುವವಳೆಂದು ಅವನು ಅರ್ಥ ಮಾಡಿಕೊಂಡನು.
ಅರುಣನ ತಲೆಗೆ ಕಟ್ಟಿದ್ದ ಗಾಯದ ಪಟ್ಟಿ ಇನ್ನೂ ಇತ್ತು. ಅವನ ತಾಯಿ ಪಕ್ಕದ ಕೋಣೆಯಲ್ಲಿ ಮಲಗಿದ್ದರು. ಮನಸ್ಸಿಗೆ ನೆಮ್ಮದಿ ಇಲ್ಲದೆ ಅವನಿಗೆ ನಿದ್ರೆ ಬರುತ್ತಿರಲಿಲ್ಲ. ಎದ್ದು ಹೊರಗೆ ಬಂದು ಮೆಟ್ಟಿಲಿನ ಕಡೆಗೆ ಹೋದನು ನಿಮಿಷಾರ್ಧದಲ್ಲಿ ಮೆಟ್ಟಿಲಿನಿಂದ ಉರುಳಿ ಕೆಳಗೆ ಬಿದ್ದ. ಅಲ್ಲೇ ಅವನ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಗಾಯಗೊಂಡ ಪತಿಯನ್ನು ನೋಡಲು ಬಾರದಿದ್ದ ದೀಪಾ ಪತಿಯ ಮರಣಾನಂತರ ತನ್ನ ತಾಯಿ ಮತ್ತು ಅಕ್ಕ ಭಾವಂದಿರೊಡನೆ ಪತಿಯ ಪಾಲಿನ ಭಾಗ ಕೇಳಲು ಬಂದಳು.
ದೀಪಾಳನ್ನು ನೋಡಿದವರು, “ಬೇರೆ ಜಾತಿಯ ಅನುಕೂಲಸ್ಥ ಹುಡುಗನನ್ನು ಕಪಟ ಪ್ರೀತಿಯ ಬಲೆಯಲ್ಲಿ ಸಿಕ್ಕಿಸಿ ಅವನ ಬಾಳನ್ನು ಹಾಳು ಮಾಡಿ ಅವನು ಸಾಯುವಂತೆ ಮಾಡಿದಳು. ಈಗ ಅತ್ತೆ ಮಾವಂದಿರ ಬಳಿಗೆ ಆಸ್ತಿಯ ಭಾಗವನ್ನು ಕೇಳಲು ಬಂದಿದ್ದಾಳೆ. ಇದು ಎಂತಹ ಪ್ರೀತಿ? ಎಂತಹ ಕಪಟ ನಾಟಕ…..?” ಎಂದು ಮಾತನಾಡಿಕೊಂಡರು.