ಅಂಜೂರದ ಪುಡಿಂಗ್
ಸಾಮಗ್ರಿ : 4-5 ರಸಭರಿತ ಅಂಜೂರ, 150 ಗ್ರಾಂ ಖೋವಾ, 1 ಕಪ್ ಗಟ್ಟಿ ಹಾಲು, ಅಗತ್ಯವಿದ್ದಷ್ಠು ಸಕ್ಕರೆ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ತುಪ್ಪದಲ್ಲಿ ಹುರಿದದ್ದು), ಏಲಕ್ಕಿ ಪುಡಿ, ಪುದೀನಾ ಎಲೆ.
ವಿಧಾನ : ಅಂಜೂರ ಶುಚಿಗೊಳಿಸಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಡಿ. ದಪ್ಪ ತಳದ ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ, ಮಂದ ಉರಿಯಲ್ಲಿ ಕುದಿಸಿ. ಇದಕ್ಕೆ ಖೋವಾ ಬೆರೆಸಿ ಸತತ ಕೈಯಾಡಿಸಿ. 2 ನಿಮಿಷ ಬಿಟ್ಟು ಸಕ್ಕರೆ, ಏಲಕ್ಕಿ ಸೇರಿಸಿ ಕೆದಕಿ ಕೆಳಗಿಳಿಸಿ. ಇದು ಚೆನ್ನಾಗಿ ಆರಿದ ನಂತರ ಮತ್ತೆ ಮಿಕ್ಸಿಗೆ ಹಾಕಿ ತಿರುವಿಕೊಳ್ಳಿ. ಇದನ್ನು 1-2 ತಾಸು ಫ್ರಿಜ್ನಲ್ಲಿರಿಸಿ, ನಂತರ ಗ್ಲಾಸುಗಳಿಗೆ ಸುರಿದು ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ತೇಲಿಬಿಟ್ಟು, ಪುದೀನಾದಿಂದ ಅಲಂಕರಿಸಿ ತಣ್ಣಗೆ ಸವಿಯಿರಿ.
ಫಿಗ್ ಏಪ್ರಿಕಾಟ್ ಸ್ಮೂದಿ
ಸಾಮಗ್ರಿ : 8-10 ಅಂಜೂರ (ಫಿಗ್), 2-3 ಏಪ್ರಿಕಾಟ್ (ಸಕ್ಕರೆ ಬಾದಾಮಿ), 100 ಗ್ರಾಂ ಖೋವಾ, ಅರ್ಧ ಲೀ. ಕೋಲ್ಡ್ ಮಿಲ್ಕ್, 2-3 ಚಮಚ ಸಕ್ಕರೆ, 5-6 ಇಡಿಯಾದ ಬಾದಾಮಿ, ತುಸು ಏಲಕ್ಕಿ ಪುಡಿ, ಅರ್ಧ ಕಪ್ ಪುಡಿ ಐಸ್, ತುಸು ಪುದೀನಾ ಎಲೆ.
ವಿಧಾನ : ಮಿಕ್ಸಿಗೆ ಬೀಜ ತೆಗೆದ ಏಪ್ರಿಕಾಟ್, ಹಾಲಲ್ಲಿ ನೆನೆಸಿದ ಬಾದಾಮಿ, ಅಂಜೂರ ಸೇರಿಸಿ ಪೇಸ್ಟ್ ಮಾಡಿ. ಆಮೇಲೆ ಬಾಣಲೆಯಲ್ಲಿ ಖೋವಾ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಅಂಜೂರದ ಪೇಸ್ಟ್, ಸಕ್ಕರೆ ಸೇರಿಸಿ ಕೆದಕಬೇಕು. ನಂತರ ಇದನ್ನು ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ತಣ್ಣಗಾದ ನಂತರ ಇದನ್ನು ಮಿಕ್ಸಿಗೆ ಹಾಕಿ. ಜೊತೆಗೆ ಏಲಕ್ಕಿ ಪುಡಿ, ಪುಡಿ ಐಸ್ ಹಾಕಿ ಮತ್ತೆ ಚಲಾಯಿಸಿ. ನಂತರ ಈ ಸ್ಮೂದಿಯನ್ನು ಗ್ಲಾಸುಗಳಿಗೆ ಬಗ್ಗಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ಸವಿಯಲು ಕೊಡಿ.
ಅಂಜೂರದ ಲಡ್ಡು
ಸಾಮಗ್ರಿ : 10 ಒಣ ಅಂಜೂರ (3-4 ಗಂಟೆ ನೀರಲ್ಲಿ ನೆನೆಸಿ), 2 ಲೀ. ಫುಲ್ ಕ್ರೀಂ ಹಾಲು, 250 ಗ್ರಾಂ ಪುಡಿ ಸಕ್ಕರೆ, ಅರ್ಧ ಸೌಟು ತುಪ್ಪ, ಒಂದಿಷ್ಟು ಬಾದಾಮಿ ಚೂರು.
ವಿಧಾನ : ಮೊದಲು ನೆನೆಸಿದ ಅಂಜೂರ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ದಪ್ಪ ತಳದ ಪಾತ್ರೆಯಲ್ಲಿ ಹಾಲು ಕಾಯಿಸಿ, ಮಂದ ಉರಿಯಲ್ಲಿ ಅದನ್ನು ಕಾಯಿಸುತ್ತಾ ಮುಕ್ಕಾಲು ಭಾಗ ಹಿಂಗಿಸಿ. ನಂತರ ಇದಕ್ಕೆ ಅಂಜೂರದ ಪೇಸ್ಟ್, ಸಕ್ಕರೆ ಹಾಕಿ ಅದು ಗಟ್ಟಿ ಆಗುವವರೆಗೂ ಕೆದಕಬೇಕು. ಮಧ್ಯೆ ಮಧ್ಯೆ ತುಪ್ಪ ಬೆರೆಸುತ್ತಾ ಗಂಟಿಲ್ಲದಂತೆ ಮಾಡಿ. ಕೆಳಗಿಳಿಸಿದ ಮೇಲೆ ಚೆನ್ನಾಗಿ ಆರಿದ ನಂತರ, ಮತ್ತೆ ತುಪ್ಪ ಬೆರೆಸಿ, ಉಂಡೆ ಕಟ್ಟಿ. ಚಿತ್ರದಲ್ಲಿರುವಂತೆ ಇದನ್ನು ಬಾದಾಮಿಯಿಂದ ಅಲಂಕರಿಸಿ ಸವಿಯಲು ಕೊಡಿ.
ಅಂಜೂರದ ಹಲ್ವಾ
ಸಾಮಗ್ರಿ : 7-8 ತಾಜಾ ಅಂಜೂರ, ಅರ್ಧ ಕಪ್ ಗೋಧಿಹಿಟ್ಟು, 4-5 ಚಮಚ ತುಪ್ಪ, ಅರ್ಧ ಕಪ್ ಹಾಲು, 5-6 ಚಮಚ ಪುಡಿ ಸಕ್ಕರೆ, ತುಸು ಏಲಕ್ಕಿ ಪುಡಿ, ಗೋಡಂಬಿ, ಪಿಸ್ತಾ ಚೂರು.
ವಿಧಾನ : ಮೊದಲು ಅಂಜೂರವನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಿ. ಈಗ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಅದಕ್ಕೆ ಹಿಟ್ಟು ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಿಧಾನವಾಗಿ ಹಾಲು ಬೆರೆಸುತ್ತಾ ಕೆದಕಿರಿ. ಸಕ್ಕರೆ, ಏಲಕ್ಕಿ ಜೊತೆ ಮಧ್ಯೆ ಮಧ್ಯೆ ತುಪ್ಪ ಬೆರೆಸುತ್ತಾ ಗಂಟಾಗದಂತೆ ಕೆದಕಿರಿ. ಕೊನೆಗೆ ಗೋಡಂಬಿ, ಪಿಸ್ತಾ ಉದುರಿಸಿ ಸವಿಯಲು ಕೊಡಿ.
ಅಂಜೂರದ ಲಸ್ಸಿ
ಸಾಮಗ್ರಿ : 7-8 ಅಂಜೂರ, ಅರ್ಧ ಲೀ. ಕೆನೆ ಮೊಸರು, 1 ಕಪ್ ಹಾಲು, ಅರ್ಧರ್ಧ ಕಪ್ ಸಕ್ಕರೆ, ಪುಡಿ ಐಸ್, ಒಂದಿಷ್ಟು ಪುದೀನಾ ಎಲೆ.
ವಿಧಾನ : ಗಟ್ಟಿ ಮೊಸರನ್ನು ತೆಳು ಬಟ್ಟೆಯಲ್ಲಿ ಕಟ್ಟಿ, 2-3 ಗಂಟೆ ಕಾಲ ತೂಗುಬಿಡಿ. ಅದರ ತೇವಾಂಶ ಎಲ್ಲಾ ಸೋರಿಹೋಗುವಂತೆ ಮಾಡಿ. ನಂತರ ಇದಕ್ಕೆ ಮೇಲಿನ ಸಾಮಗ್ರಿ ಬೆರೆಸಿ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಗ್ಲಾಸುಗಳಿಗೆ ತುಂಬಿಸಿ, ಪುದೀನಾದಿಂದ ಅಲಂಕರಿಸಿ ಸವಿಯಲು ಕೊಡಿ.
ಅಂಜೂರದ ಐಸ್ ಕ್ರೀಂ
ಸಾಮಗ್ರಿ : 1 ಕಪ್ ಹೆಚ್ಚಿದ ತಾಜಾ ಅಂಜೂರ, 4 ಕಪ್ ಫುಲ್ ಕ್ರೀಂ ಗಟ್ಟಿ ಹಾಲು, 1 ಕಪ್ ಕಂಡೆನ್ಸ್ಡ್ ಮಿಲ್ಕ್, ಅರ್ಧ ಕಪ್ಹಾಲಿನಪುಡಿ, ಒಂದಿಷ್ಟು ಪಿಸ್ತಾ ಚೂರು, ರುಚಿಗೆ ತಕ್ಕಷ್ಟು ಸಕ್ಕರೆ.
ವಿಧಾನ : ಅಂಜೂರವನ್ನು ಹೋಳು ಮಾಡಿ 2 ಕಪ್ ಹಾಲಿನಲ್ಲಿ ಬೇಯಿಸಿ. ಇದಕ್ಕೆ ಸಕ್ಕರೆ ಹಾಕಿ, ನಡುನಡುವೆ ಕೆದಕುತ್ತಿರಬೇಕು. ಇದನ್ನು ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ನಂತರ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಆಮೇಲೆ ಇದಕ್ಕೆ ಕಂಡೆನ್ಸ್ಡ್ ಮಿಲ್ಕ್, ಹಾಲಿನ ಪುಡಿ ಹಾಗೂ ಉಳಿದ ಹಾಲನ್ನು ಬೆರೆಸಿ ಮತ್ತೊಮ್ಮೆ ಮಿಕ್ಸಿ ಚಲಾಯಿಸಿ. ಇದನ್ನು ಅಲ್ಯುಮಿನಿಯಂ ಪಾತ್ರೆಗೆ ತುಂಬಿಸಿ, ಅದಕ್ಕೆ ಅಲ್ಯುಮಿನಿಯಂ ಫಾಯಿಲ್ನಿಂದ ಟೈಟಾಗಿ ಮುಚ್ಚಿ, ಫ್ರೀಝರ್ನಲ್ಲಿ 5-6 ತಾಸು ಇರಿಸಿ, ಸೆಟ್ ಆಗಲು ಬಿಡಿ. ಆಮೇಲೆ ಹೊರತೆಗೆದು ಪಿಸ್ತಾ ಉದುರಿಸಿ ಸವಿಯಲು ಕೊಡಿ.
ಅಂಜೂರದ ಶ್ರೀಖಂಡ
ಸಾಮಗ್ರಿ : 7-8 ತಾಜಾ ಅಂಜೂರ, ಅರ್ಧ ಲೀ. ಗಟ್ಟಿ ಮೊಸರು, 4-5 ಚಮಚ ಕೆನೆ, ರುಚಿಗೆ ತಕ್ಕಷ್ಟು ಸಕ್ಕರೆ, ಒಂದಿಷ್ಟು ಹೆಚ್ಚಿದ ಪಿಸ್ತಾ ಚೂರು.
ವಿಧಾನ : ಮಿಕ್ಸಿಗೆ ಅಂಜೂರ ಹೆಚ್ಚಿ ಹಾಕಿ, ಇದಕ್ಕೆ ಉಳಿದ ಸಾಮಗ್ರಿ ಬೆರೆಸಿ ಪೇಸ್ಟ್ ಮಾಡಿ. 2-3 ತಾಸು ಫ್ರಿಜ್ನಲ್ಲಿರಿಸಿ ಚಿಲ್ ಮಾಡಿ. ಇದನ್ನು ಬಟ್ಟಲುಗಳಿಗೆ ತುಂಬಿಸಿ, ಮೇಲೆ ಪಿಸ್ತಾ ಉದುರಿಸಿ ತಣ್ಣಗೆ ಸವಿಯಲು ಕೊಡಿ.
ಅಂಜೂರದ ಕುಲ್ಛಿ
ಸಾಮಗ್ರಿ : 8-10 ತಾಜಾ ಅಂಜೂರ, 1 ಲೀ. ಫುಲ್ ಕ್ರೀಂ ಗಟ್ಟಿ ಹಾಲು, 2 ಚಮಚ ಹಾಲಿನ ಪುಡಿ, 100 ಗ್ರಾಂ ಪುಡಿ ಸಕ್ಕರೆ, ತುಸು ಏಲಕ್ಕಿ ಪುಡಿ, 2 ಚಮಚ ಪಿಸ್ತಾ ಚೂರು.
ವಿಧಾನ : ಹಾಲನ್ನು ದಪ್ಪ ತಳದ ಪಾತ್ರೆಯಲ್ಲಿ ಕಾಯಿಸಿ. ಇದು ಅರ್ಧ ಹಿಂಗುವವರೆಗೂ ಕುದಿಸಬೇಕು. ನಂತರ ಇದಕ್ಕೆ ಸಕ್ಕರೆ, ಹಾಲಿನಪುಡಿ, ಏಲಕ್ಕಿ ಸೇರಿಸಿ ಚೆನ್ನಾಗಿ ಕೆದಕುತ್ತಾ, 5 ನಿಮಿಷ ಬಿಟ್ಟು ಇಳಿಸಿ. ಆರಿ ತಣ್ಣಗಾಗಲು ಬಿಡಿ. ಈಗ ಮಿಕ್ಸಿಗೆ ಹೆಚ್ಚಿದ ಅಂಜೂರ, ಚಿಲ್ಡ್ ಹಾಲು ಬೆರೆಸಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಕುಲ್ಛಿ ಅಚ್ಚುಗಳಿಗೆ ತುಂಬಿಸಿ 7-8 ತಾಸು ಫ್ರೀಝರ್ನಲ್ಲಿಡಿ. ಚೆನ್ನಾಗಿ ಸೆಟ್ ಆದ ನಂತರ, ಕುಲ್ಛಿ ಹೊರತೆಗೆದು, ಮೇಲೆ ಪಿಸ್ತಾ ಉದುರಿಸಿ ಸವಿಯಲು ಕೊಡಿ.