ಚೀಝೀ ಪೊಟೇಟೊ ವೆಜೆಸ್
ಸಾಮಗ್ರಿ : 4-5 ಆಲೂ, 1 ಕಪ್ ತುರಿದ ಮೋಜರೆಲಾ ಚೀಸ್, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ತುಸು ಒಣ ಪುದೀನಾ, ಓರಿಗೇನೋ ಹರ್ಬ್ಸ್, ಕರಿಯಲು ಎಣ್ಣೆ.
ವಿಧಾನ : ಎಲ್ಲಾ ಆಲೂಗಳನ್ನು ಚೆನ್ನಾಗಿ ತೊಳೆದು, ಉದ್ದುದ್ದ ಹೋಳುಗಳಾಗಿ (ಸಿಪ್ಪೆ ಹೆರೆಯದೆ) ಹೆಚ್ಚಿಕೊಳ್ಳಿ. ಇವನ್ನು ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಇದರ ಮೇಲೆ ಉಪ್ಪು, ಮೆಣಸು, ಹರ್ಬ್ಸ್, ಪುದೀನಾ ಉದುರಿಸಿ. ನಂತರ ಚೀಸ್ ಹರಡಿ 2 ನಿಮಿಷ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ. ಚೀಸ್ ಕರಗಿದ ನಂತರ ಇದನ್ನು ಹೊರತೆಗೆದು ಇನ್ನಷ್ಟು ಮಸಾಲೆ ಉದುರಿಸಿ ತಕ್ಷಣ ಸವಿಯಲು ಕೊಡಿ.
ಬನಾನಾ ಕೋಕೋ ಐಸ್‌ಕ್ರೀಂ
ಸಾಮಗ್ರಿ : 1 ಲೀ. ಫುಲ್ ಕ್ರೀಂ ಗಟ್ಟಿ ಹಾಲು, 4 ಮಾಗಿದ ಬಾಳೆಹಣ್ಣು, 1 ಚಮಚ ಕೋಕೋ ಪೌಡರ್, 2 ಚಮಚ ತುರಿದ ಚಾಕಲೇಟ್, 4-5 ಚಮಚ ಸಕ್ಕರೆ, ಒಂದಿಷ್ಟು ಸಣ್ಣಗೆ ಹೆಚ್ಚಿದ ಬಾದಾಮಿ ಪಿಸ್ತಾ.
ವಿಧಾನ : ಬಾಳೆಹಳ್ಳಿನ ಸಿಪ್ಪೆ ಸುಲಿದು, ಹಣ್ಣನ್ನು ಬಿಲ್ಲೆಗಳಾಗಿ ಕತ್ತರಿಸಿ. ಸಕ್ಕರೆ ಜೊತೆ ಇದನ್ನು ಮಿಕ್ಸಿಗೆ ಹಾಕಿ ಚಲಾಯಿಸಿ. ನಂತರ ಹಾಲು, ಕೋಕೋ, ಚಾಕಲೇಟ್ ಸೇರಿಸಿ ಮತ್ತೊಮ್ಮೆ ಚಲಾಯಿಸಿ. ಈ ಮಿಶ್ರಣವನ್ನು ಗಾಜಿನ ಬಟ್ಟಲಿಗೆ ಹಾಕಿಕೊಂಡು ಫ್ರೀಝರ್‌ನಲ್ಲಿಟ್ಟು ಚೆನ್ನಾಗಿ ಸೆಟ್ ಮಾಡಿ. ಹೊರತೆಗೆದ ನಂತರ ಇದಕ್ಕೆ ಪಿಸ್ತಾ, ಬಾದಾಮಿ ಹಾಕಿ ಸವಿಯಲು ಕೊಡಿ.
ಕಾಜೂ ಪೋಟ್ಲಿ
ಸಾಮಗ್ರಿ : 200 ಗ್ರಾಂ ಮೈದಾ, ಕರಿಯಲು ರೀಫೈಂಡ್ ಎಣ್ಣೆ, 1 ಕಪ್ ಗೋಡಂಬಿ ಚೂರು, 4-5 ಬೆಂದ ಆಲೂ, 2 ಚಮಚ ಒಣದ್ರಾಕ್ಷಿ, ಒಂದಿಷ್ಟು ಹೆಚ್ಚಿದ ಹಸಿಶುಂಠಿ, ಕೊ.ಸೊಪ್ಪು, ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ಪುಡಿ, ಗರಂ ಮಸಾಲ.
ವಿಧಾನ : ಮೈದಾಗೆ ತುಸು ಉಪ್ಪು, ನೀರು ಬೆರೆಸಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ಎಣ್ಣೆ ಹಾಕಿ ಚೆನ್ನಾಗಿ ನಾದಿ ನೆನೆಯಲು ಬಿಡಿ. ಇದರ ಮೇಲೊಂದು ತೆಳು ಒದ್ದೆ ಬಟ್ಟೆ ಹೊದಿಸಿಡಿ. ಆಲೂ ಸಿಪ್ಪೆ ಸುಲಿದು ಮಸೆದಿಡಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಹೂರಣ ಕಲಸಿಡಿ. ಮೈದಾ ಮಿಶ್ರಣಕ್ಕೆ ಮತ್ತಷ್ಟು ಎಣ್ಣೆ ಬೆರೆಸಿ ನಾದಿಕೊಳ್ಳಿ. ಇದನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಪೂರಿ ಲಟ್ಟಿಸಿ. ಅದರ ಮಧ್ಯೆ 2-3 ಚಮಚ ಆಲೂ ಮಿಶ್ರಣ ಇರಿಸಿ. ಚಿತ್ರದಲ್ಲಿರುವಂತೆ ತುದಿಗಳನ್ನು ಬೆಸೆದು ಸಂಚಿ (ಪೋಟ್ಲಿ)ಯ ಆಕಾರ ಕೊಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಇವನ್ನು ಹೊಂಬಣ್ಣ ಬರುವಂತೆ ಕರಿಯಿರಿ. ಇವಕ್ಕೆ ಸಾಸ್ ಹಾಕಿ, ಸಂಜೆ ಬಿಸಿ ಕಾಫಿ/ಟೀ ಜೊತೆ ಸವಿಯಲು ಕೊಡಿ.
ಕೆಸುವಿನ ಎಲೆ ಪತ್ರೋಡೆ
ಸಾಮಗ್ರಿ : ಒಂದಷ್ಟು ಕೆಸುವಿನ ಎಲೆ, 1 ಗಿಟುಕು ತೆಂಗಿನತುರಿ, 1 ದೊಡ್ಡ ಕಪ್ ಕಡಲೆಹಿಟ್ಟು, 1 ಸಣ್ಣ ಚಮಚ ಜೀರಿಗೆ, 2 ಚಿಟಕಿ ಅರಿಶಿನ, ಅರ್ಧ ಸಣ್ಣ ಚಮಚ ಸೋಂಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ಪುಡಿ, ಧನಿಯಾಪುಡಿ, ಇಂಗು, ಅರ್ಧ ಸೌಟು ರೀಫೈಂಡ್ ಎಣ್ಣೆ.
ವಿಧಾನ : ಕಡಲೆಹಿಟ್ಟಿಗೆ ತುಸು ಎಣ್ಣೆ, ನೀರು, ಉಪ್ಪು, ಮಸಾಲೆ, ತೆಂಗಿನ ತುರಿ ಎಲ್ಲಾ ಸೇರಿಸಿ ಗಟ್ಟಿಯಾಗಿ ಹಿಟ್ಟು ಕಲಸಿಡಿಸಿ. ಚಪಾತಿ ಮಣೆ ಮೇಲೆ ಕೆಸುವಿನ ಎಲೆ ಹರಡಿ ತುಪ್ಪ ಸವರಿ. ಇದರ ಮೇಲೆ ಕಲಸಿದ ಹಿಟ್ಟು ಹರಡಿ ನಿಧಾನವಾಗಿ ಲಟ್ಟಿಸಿ. ಇದರ ಮೇಲೆ ತುಪ್ಪ ಸವರಿದ ಮತ್ತೊಂದು ಎಲೆ ಉಲ್ಟಾ ಇರಿಸಿ. ಇದನ್ನು ಸುರುಳಿ ಸುತ್ತಿ, ಇಡ್ಲಿ ಸ್ಟ್ಯಾಂಡ್‌ಗಳಲ್ಲಿ ಇರಿಸಿ. ಹೀಗೆ ಎಲ್ಲಾ ಸುರುಳಿ ಸಿದ್ಧಪಡಿಸಿಕೊಂಡು, ಇಡ್ಲಿ ತರಹ ಹಬೆಯಲ್ಲಿ ಬೇಯಿಸಿ. ಕೆಳಗಿಳಿಸಿದ ಮೇಲೆ ಇವನ್ನು ತುಂಡುಗಳಾಗಿಸಿ. ಒಂದು ಸಣ್ಣ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಸಾಸುವೆ, ಜೀರಿಗೆ, ಸೋಂಪು, ಇಂಗು, ಮೆಂತ್ಯ, ಕರಿಬೇವು ಎಲ್ಲಾ ಸೇರಿಸಿ. ಇದಕ್ಕೆ ಒಗ್ಗರಣೆ ಕೊಡಿ. ಟೊಮೇಟೊ ಸಾಸ್ ಜೊತೆ ಇದನ್ನು ಬಿಸಿ ಬಿಸಿಯಾಗಿ ಸವಿಯಿರಿ.
ಬೀಟ್‌ರೂಟ್ ಊತಪ್ಪಂ
ಸಾಮಗ್ರಿ : 1 ಕಪ್ ರವೆ, ಅರ್ಧ ಕಪ್ ಮೊಸರು, 1 ಸೌಟು ಸಣ್ಣಗೆ ಹೆಚ್ಚಿ ಬೇಯಿಸಿ ಮಸೆದ ಬೀಟ್‌ರೂಟ್, ಒಗ್ಗರಣೆಗೆ ತುಸು ಎಣ್ಣೆ, ಸಾಸುವೆ, ಜೀರಿಗೆ, ಕ/ಉ ಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಫ್ರೂಟ್ ಸಾಲ್ಟ್.
ವಿಧಾನ : ರವೆ ತುಸು ಹುರಿದು ಮೊಸರು, ಬೀಟ್‌ರೂಟ್ ಜೊತೆ ಬೆರೆಸಿರಿ. ಇದಕ್ಕೆ ತುಸು ನೀರು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಕಲಸಿ. ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಒಗ್ಗರಣೆ ಕೊಟ್ಟು, ಬೇಳೆ ಹಾಕಿ ಚಟಪಟಾಯಿಸಿ. ನಂತರ ಅದನ್ನು ಈ ಮಿಶ್ರಣಕ್ಕೆ ಬೆರೆಸಿ, ಫ್ರೂಟ್ ಸಾಲ್ಟ್, ಉಪ್ಪು ಖಾರ ಸಹ ಹಾಕಿ ಗೊಟಾಯಿಸಿ. ನಂತರ ಇದರಿಂದ ಪುಟ್ಟ ಪುಟ್ಟದಾದ ದೋಸೆ (ಒಂದೇ ಬದಿ ಬೇಯಿಸಿ, ತಿರುವಿ ಹಾಕಬಾರದು) ತಯಾರಿಸಿ. ಈಗ ಈ ಬಿಸಿ ಬಿಸಿ ಬೀಟ್‌ರೂಟ್ ಊತಪ್ಪಂ, ಕಾಯಿ ಚಟ್ನಿ ಜೊತೆ ಸವಿದರೆ ಚೆಂದ!
ಕೋಕೋನಟ್ ರೈಸ್ ಡೋನಟ್
ಸಾಮಗ್ರಿ : 1 ಕಪ್ ಬಿಸಿ ಅನ್ನ, ಒಗ್ಗರಣೆಗೆ ತುಸು ಎಣ್ಣೆ, ಸಾಸುವೆ, ಜೀರಿಗೆ, ಇಂಗು, ಕರಿಬೇವು, 1 ಗಿಟುಕು ಕೊಬ್ಬರಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ಪುಡಿ, ಗರಂಮಸಾಲ, 2 ಚಿಟಕಿ ಅರಿಶಿನ.
ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಕೊಡಿ. ನಂತರ ಉಪ್ಪು, ಖಾರ, ಮಸಾಲೆ ಹಾಕಿ ಕೆದಕಿ, ಅನ್ನ ಸೇರಿಸಿ ಬೇಗ ಬೇಗ ಕೈಯಾಡಿಸಿ. ಇದನ್ನು ಕೆಳಗಿಳಿಸಿ ಚೆನ್ನಾಗಿ ಆರಿದ ಮೇಲೆ, ಮಿಕ್ಸಿಗೆ ಹಾಕಿ ತಿರುವಿಕೊಳ್ಳಿ. ನಂತರ ಡೋನಟ್‌ನ ಸಿಲಿಕಾನ್‌ಅಚ್ಚುಗಳಿಗೆ ಜಿಡ್ಡು ಸವರಿ ಈ ಮಿಶ್ರಣವನ್ನು ಅದಕ್ಕೆ ತುಂಬಿಸಿ. ನಂತರ ಮೊದಲೇ 180 ಡಿಗ್ರಿ ಶಾಖದಲ್ಲಿ ಬಿಸಿ ಮಾಡಿದ ಓವನ್ನಿನಲ್ಲಿ ಇವನ್ನು ಇರಿಸಿ 5-6 ನಿಮಿಷ ಬೇಕ್ ಮಾಡಿ. ನಂತರ ಇದನ್ನು ಚಿತ್ರದಲ್ಲಿರುವಂತೆ ಸಾಸ್, ಚಟ್ನಿ ಜೊತೆ ಅಲಂಕರಿಸಿ, ಬಿಸಿಯಾಗಿ ಸವಿಯಲು ಕೊಡಿ.