ಪ್ರತಿಯೊಬ್ಬ ಮಹಿಳೆಯೂ ತನ್ನ ಹಣದ ಬಗ್ಗೆ ಪೂರ್ಣ ಮಾಹಿತಿ ಪಡೆದಿರುವುದರ ಜೊತೆಗೆ ಅದರ ಮೇಲೆ ಸಂಪೂರ್ಣ ಹತೋಟಿಯನ್ನು ಹೊಂದಿರುವುದು ಅವಶ್ಯಕ. ಆ ಬಗ್ಗೆ ಮಹಿಳೆಯರು ಕೆಳಗಿನ ಕೆಲವು ಅಂಶಗಳನ್ನು ಗಮನದಲ್ಲಿಟ್ಟಿರಬೇಕು.
ನಿಮ್ಮದೇ ಬ್ಯಾಂಕ್ ಅಕೌಂಟ್
ನೀವು ಉದ್ಯೋಗಸ್ಥ ಮಹಿಳೆಯಾಗಿದ್ದಲ್ಲಿ ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಇದ್ದೇ ಇರಬೇಕು. ಈ ಖಾತೆಯಲ್ಲಿ ನಿಮ್ಮ ಉಳಿತಾಯವನ್ನು ಸುರಕ್ಷಿತವಾಗಿ ಇರಿಸಬಹುದು. ನಿಮ್ಮ ಕುಟುಂಬಕ್ಕೆ ಆರ್ಥಿಕ ನೆರವು ನೀಡಬಹುದು. ನೀವು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬೇಕೆಂದಿದ್ದರೆ ಅದನ್ನು ನಿಮ್ಮ ಹೆಸರಿನಲ್ಲೇ ಪಡೆಯಿರಿ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ ಮತ್ತು ನಿಮಗೆ ಸಾಲದ ಅವಶ್ಯಕತೆ ಬಿದ್ದಾಗಲೂ ಸಹಾಯವಾಗುತ್ತದೆ.
ತೀರ್ಮಾನದಲ್ಲಿ ನಿಮ್ಮ ಪಾತ್ರ
ಹಣಕಾಸಿನ ವ್ಯವಹಾರ ಮತ್ತು ಹಣ ಹೂಡಿಕೆಯ ವಿಷಯಗಳನ್ನು ತಮ್ಮ ಪಾರ್ಟ್‌ನರ್ ಅಥವಾ ಕುಟುಂಬದವರ ಪಾಲಿಗೆ ಬಿಡುವುದು ಮಹಿಳೆಯರ ಸ್ವಭಾವವಾಗಿರುತ್ತದೆ. ನೀವು ಸಹ ಹೀಗೆ ಹಣದ ಜವಾಬ್ದಾರಿಯನ್ನು ಬೇರೆಯವರ ಪಾಲಿಗೆ ಕೊಡುವುದಾದರೆ, ಆ ವ್ಯವಹಾರದ ಬಗ್ಗೆ ನಿಮಗೆ ತಿಳಿವು ಇರಬೇಕು. ನಂಬಿಕೆ ಒಳ್ಳೆಯದೇ, ಆದರೆ ಎಚ್ಚರಿಕೆಯೂ ಅವಶ್ಯಕ. ವಿಮಾ ಪಾಲಿಸಿ ಅಥವಾ ಮನೆ ಕೊಳ್ಳುವ ವಿಷಯವನ್ನು ನಿಮ್ಮ ಆಡಿಟರ್ ಅಥವಾ ಫೈನಾನ್ಸ್ ಅಡ್ವೈಸರ್ ಜೊತೆ ಮಾತನಾಡಿ. ಆ ಭೇಟಿಯ ಸಮಯದಲ್ಲಿ ನಿಮ್ಮ ಪಾರ್ಟ್‌ನರ್‌ನೊಂದಿಗೆ ನೀವು ಇರಬೇಕು ಮತ್ತು ನಿಮ್ಮ ಅಭಿಪ್ರಾಯವನ್ನೂ ಅವರ ಮುಂದಿಡಬೇಕು.
ಆಯವ್ಯಯದ ಬಗ್ಗೆ ಗಮನ
ನಿಮ್ಮ ಆದಾಯ ಮತ್ತು ವೆಚ್ಚದ ಬಗೆಗೆ ನಿಮಗೆ ಸಂಪೂರ್ಣ ಗಮನವಿರಬೇಕು. ಆಗಲೇ ನಿಮಗೆ ನಿಮ್ಮ ಖರ್ಚಿನ ಮೇಲೆ ಹತೋಟಿ ಇರಿಸಲು ಸಾಧ್ಯವಾಗುವುದು. ಇದರಿಂದ ನಿಮಗೆ ಎಷ್ಟು ಉಳಿತಾಯ ಮಾಡಬಹುದೆಂಬ ಅಂದಾಜು ದೊರೆಯುತ್ತದೆ ಮತ್ತು ನಿಮ್ಮ ಸರಾಸರಿ ಮಾಸಿಕ ಖರ್ಚು ವೆಚ್ಚದ ಲೆಕ್ಕ ಆಗುತ್ತದೆ.
ಮಕ್ಕಳ ಭವಿಷ್ಯ ನಿಧಿ
ನಿಮ್ಮ ಮಕ್ಕಳ ಮುಂದಿನ ಶಿಕ್ಷಣಕ್ಕಾಗಿ ಹಣ ಹೂಡಿಕೆ ಮಾಡಲು ನಿಮ್ಮ ಪಾರ್ಟ್‌ನರ್ ಆಸಕ್ತಿ ವಹಿಸದಿದ್ದಲ್ಲಿ, ಈ ಬಗ್ಗೆ ನೀವು ಅವರೊಂದಿಗೆ ಮಾತನಾಡಿ ಮತ್ತು ಆದಷ್ಟು ಬೇಗನೆ ಅದನ್ನು ಪ್ರಾರಂಭಿಸಿ. ಈ ಭವಿಷ್ಯ ನಿಧಿಗೆ ನಿಯಮಿತವಾಗಿ ಉಳಿತಾಯ ಮಾಡುತ್ತಾ ಬರಬೇಕು. ಇದನ್ನು ಬೇಗನೆ ಪ್ರಾರಂಭಿಸಿದಾಗ ಮಾತ್ರ ಹೆಚ್ಚು ಹಣ ಉಳಿತಾಯ ಮಾಡಲು ಸಾಧ್ಯ. ಮಕ್ಕಳು 15-16 ವಯಸ್ಸಿನವರಾದಾಗ ನೀವು ಪ್ರಾರಂಭಿಸಿದರೆ, ಆಗ ಕಡಿಮೆ ಉಳಿತಾಯ ಮಾಡಬಲ್ಲಿರಿ.
ರಿಟೈರ್‌ಮೆಂಟ್ ಪ್ಲಾನ್
ನೀವು ಸದಾ ಕುಟುಂಬ ನಿರ್ವಹಣೆಯಲ್ಲೇ ಮುಳುಗಿರುತ್ತೀರಿ ನಿಜ. ಆದರೆ, ಮುಂದೆ ಒಂದು ದಿನ ನೀವು ವಿಶ್ರಾಂತಿ ಪಡೆಯಲಿದ್ದೀರಿ ಎಂಬುದನ್ನು ಮರೆಯಬೇಡಿ. ಆದ್ದರಿಂದ ನೀವು ಮತ್ತು ನಿಮ್ಮ ಪಾರ್ಟ್‌ನರ್ ನಿವೃತ್ತ ಜೀವನಕ್ಕಾಗಿ ಉಳಿತಾಯ ಮಾಡುವುದರ ಬಗ್ಗೆ ಗಮನ ನೀಡಿ. ಈ ಪೆನ್ಶನ್ ಪ್ಲಾನ್‌ಗಾಗಿ ನೀವು ಎಷ್ಟು ಉಳಿತಾಯ ಮಾಡಬೇಕೆಂಬುದರ ಬಗ್ಗೆ ಸಲಹೆಗಾರರೊಂದಿಗೆ ಚರ್ಚಿಸಿ. ಮುಂದೆ ನೀವು ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ ನಿವೃತ್ತ ಜೀವನ ನಡೆಸಲು ಅನುಕೂಲವಾಗುವಂತೆ ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳಿ.
ಫಿಕ್ಸೆಡ್ ಡೆಪಾಸಿಟ್
ಉಳಿತಾಯ ಮಾಡುವಲ್ಲಿ ಮಹಿಳೆಯರು ಕುಶಲಿಗಳು. ಪ್ರತಿ ತಿಂಗಳು ಮನೆಯ ಖರ್ಚು ಕಳೆದ ಮೇಲೂ ಒಂದಷ್ಟನ್ನು ಉಳಿಸಿಯೇ ಇರುತ್ತಾರೆ. ಆದರೆ ಹೀಗೆ ಉಳಿಸಿದ ಹಣ ಹಾಗೇ ಉಳಿಯದೆ, ಅದು ಬೆಳೆಯಬೇಕಾದರೆ ಅದನ್ನು ಒಳ್ಳೆಯ ಭದ್ರತಾ ಠೇವಣಿಯಲ್ಲಿ ತೊಡಗಿಸಬೇಕು. ಹೀಗೆ ಹೂಡಿಕೆ ಮಾಡಿದ ಹಣ ಹೆಚ್ಚುತ್ತಾ ಹೋಗಿ ಮುಂದೆ ನಿಮ್ಮ ಅಗತ್ಯ ಸಂದರ್ಭಗಳಲ್ಲಿ ಉಪಯೋಗವಾಗುತ್ತದೆ.
ಆಧುನಿಕ ಹಣ ಹೂಡಿಕೆ ಯೋಜನೆಗಳು
ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್‌ನಲ್ಲಿ ಹಣ ಹೂಡಿಕೆ ಅಥವಾ ಚಿನ್ನ ಕೊಳ್ಳುವಿಕೆ, ಇವು ಸಾಮಾನ್ಯ ಉಳಿತಾಯ ವಿಧಾನಗಳಾಗಿವೆ. ಆದರೆ ಆರ್ಥಿಕ ಮಾರುಕಟ್ಟೆಯಲ್ಲಿ ಹಣ ಗಳಿಸಲು ಇನ್ನೂ ಹೆಚ್ಚಿನ ಆಧುನಿಕ, ಉತ್ತಮ ವಿಧಾನಗಳಿವೆ ಎಂಬುದನ್ನು ನೀವು ತಿಳಿದಿರಬೇಕು. ಮ್ಯೂಚುವಲ್‌ಫಂಡ್, ಬಾಂಡ್, ಈಕ್ವಿಟಿಗಳು ನಿಮ್ಮ ಹಣವನ್ನು ಹೆಚ್ಚು ಪಟ್ಟು ಹೆಚ್ಚಿಸಲು ಸಹಕಾರಿಯಾಗುತ್ತವೆ. ಇವುಗಳಿಂದ ನಿಮಗೆ ತೆರಿಗೆಯ ಹೆಚ್ಚಿನ ಹೊರೆಯೂ ಬೀಳುವುದಿಲ್ಲ. ವೆಬ್‌ನಲ್ಲಿ ಇವುಗಳ ಬಗೆಗೆ ಸಾಕಷ್ಟು ಮಾಹಿತಿ ದೊರೆಯುತ್ತದೆ. ಅವುಗಳನ್ನೆಲ್ಲ ವಿಸ್ತಾರವಾಗಿ ಓದಿ ತಿಳಿದುಕೊಂಡು ಆ ವಿವಿಧ ವಿಧಾನಗಳಲ್ಲಿ ನಿಮ್ಮ ಹಣ ಹೂಡಿಕೆಗೆ ಯಾವುದು ಸೂಕ್ತ ನಿರ್ಧರಿಸಿ.
ಮನೆ ಖರೀದಿ
ಒಂದು ಮನೆ ಮಾಡಿಕೊಂಡರೆ ನೆಮ್ಮದಿಯಾಗಿ ಜೀವನ ನಡೆಸಬಹುದು ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ಅವರಿಗೆ ಸರಿ ಹೊಂದುವ ಮನೆ ಸಿಕ್ಕಿದರೆ ಸಂತೋಷದಿಂದ ಅದನ್ನು ಕೊಳ್ಳಲು ಮುಂದಾಗಿ, ಅದಕ್ಕಾಗಿ ಮುಂದಿನ 10-15 ವರ್ಷಕ್ಕೆ ಸಾಲ ಪಡೆಯುತ್ತಾರೆ. ಆದರೆ ಇದು ಸರಿಯಲ್ಲ. ನೀವೇನಾದರೂ ಉದ್ಯೋಗದಲ್ಲಿ ಬ್ರೇಕ್ ಪಡೆಯುವ ಸಂದರ್ಭ ಬಂದರೆ ಕುಟುಂಬ ನಿರ್ವಹಣೆಯ ಆದಾಯಕ್ಕೆ ಕೊರತೆಯುಂಟಾಗುತ್ತದೆ ಎಂಬುದನ್ನು ಗಮನದಲ್ಲಿಡಿ. ಜೊತೆಗೆ ನಿಮ್ಮ ವೈವಾಹಿಕ ಜೀವನದ ಸ್ಥಿರತೆಯ ಬಗೆಗೂ ಎಚ್ಚರವಹಿಸಿ. ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ ಮನೆ ಕೊಳ್ಳುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ.
ವಿಮಾ ಪಾಲಿಸಿ
ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಬೇಸಿಕ್ ಟರ್ಮ್ ಕವರ್ ಆಗುವಂತಹ ವಿಮಾ ಪಾಲಿಸಿ ಮಾಡಿಸಿರಬೇಕು. ನಿಮ್ಮ ಜೀವನ ಸಂಗಾತಿಯ ವಿಮಾ ಪಾಲಿಸಿಯ ಟರ್ಮ್ ಓವರ್ ನೋಡಿ ಮತ್ತು ನೀವು ವಿಮಾದಾರರಾಗಿರುವುದನ್ನು ಖಚಿತ ಮಾಡಿಕೊಳ್ಳಿ. ಪಾಲಿಸಿಯ ನಿಯಮಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ನಿಮ್ಮ 8 ವರ್ಷಗಳ ಆದಾಯ ಕವರ್ ಆಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಿ. ಇದರಿಂದ ಯಾವುದೇ ದುರ್ದೆಶೆಯಲ್ಲೂ ಮುನ್ನಡೆಯಲು ಸಹಾಯಕವಾಗುತ್ತದೆ.
ಆನ್‌ಲೈನ್ ಫೈನಾನ್ಸ್ ನಿಮ್ಮ ಹಣದ ವ್ಯವಹಾರವನ್ನು ನಿಭಾಯಿಸಲು ನಿಮಗೆ ಸಮಯವಿಲ್ಲ ಎನ್ನಲು, ನಿಮ್ಮ ಹೆಗಲ ಮೇಲೆ ಕುಟುಂಬದ ಜವಾಬ್ದಾರಿ ಇದೆ ಎನ್ನುವುದನ್ನೇ ಒಂದು ನೆನಪಾಗಿ ಮುಂದಿಡುತ್ತೀರಿ. ನಿಮ್ಮ ಹಣದ ಬಗ್ಗೆ ಎಚ್ಚರ ವಹಿಸಲು ಅದನ್ನು ಹೂಡಿಕೆಗಳಲ್ಲಿ ತೊಡಗಿಸಲು ಮತ್ತು ರಿಡೀಮ್ ಮಾಡಲು ಆನ್‌ಲೈನ್ ವಿಧಾನಗಳನ್ನು ಅಳವಡಿಸಿಕೊಂಡು ಹೆಚ್ಚಿನ ಜಂಜಾಟವನ್ನು ದೂರ ಮಾಡಿಕೊಳ್ಳಿ. ಮೇಲ್, ಚಾಟ್ಸ್, ಕಾಲ್ಸ್ ಮೂಲಕ ಸಲಹೆ ದೊರೆಯುವಂತಹ ಆನ್‌ಲೈನ್ ವಿಧಾನವನ್ನು ಬಳಸಿಕೊಳ್ಳಿ. ಇದರಿಂದ ನಿಮ್ಮ ಶ್ರಮ ಕಡಿಮೆಯಾಗುವುದಲ್ಲದೆ, ನೀವು ಸ್ಮಾರ್ಟ್ ವಿಧಾನಗಳಿಂದ ಹಣ ತೊಡಗಿಸಿ ನಿಶ್ಚಿಂತರಾಗಿರಬಹುದು.
– ವಿದ್ಯಾ ಪ್ರಸಾದ್