`ಹೌದು’ ಮತ್ತು  `ಇಲ್ಲ’ ಎಂಬ ಇವೆರಡು ಶಬ್ದಗಳು ಮನಸ್ಸಿನ ಭಾವನೆ ಮತ್ತು ಮಾತುಗಳನ್ನು ವ್ಯಕ್ತಪಡಿಸಬಲ್ಲವು. ಆದರೆ ನಮ್ಮ ಸಮಾಜ ಭಾಷೆಯನ್ನೂ ಸಹ ತನಗೆ ಬೇಕಾದಂತೆ ಅಚ್ಚಿಳಿಸುತ್ತದೆ. ಒಬ್ಬ ಮಹಿಳೆಯ `ಉಹ್ಞೂಂ’ ಎಂಬ ಉತ್ತರವನ್ನು `ಹ್ಞೂಂ’ ಎಂದೇ ಪರಿಗಣಿಸಲಾಗುತ್ತದೆ. ಒಬ್ಬ ಯುವತಿ ಅಥವಾ ಮಹಿಳೆಯು ತನ್ನ ಸ್ವಭಾವ ಸಹಜವಾದ ಲಜ್ಜೆಯಿಂದಾಗಿ `ಆಗಲಿ’ ಎನ್ನುವ ಸಂದರ್ಭದಲ್ಲಿ ಹಾಗೆ ಹೇಳಲು ಅಸಮರ್ಥಳಾಗುತ್ತಾಳೆ.  ಹೀಗಾಗಿ `ಮೌನಂ ಸಮ್ಮತಿ ಲಕ್ಷಣಂ’ ಎಂಬಂತೆ ಅವಳ ಮೌನವನ್ನು ಅಥವಾ ಅವಳ ಬೇಡ ಎಂಬುದನ್ನು ಒಪ್ಪಿಗೆ ಎಂದೇ ತಿಳಿಯಲಾಗುತ್ತದೆ. ಮತ್ತೊಂದು ಅಂಶವೆಂದರೆ, ಮಹಿಳೆಯು ಹೌದು ಅಥವಾ ಅಲ್ಲವೆಂದು ಹೇಳಿ ಯಾವುದಾದರೂ ವಿಷಯವನ್ನು ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸಿದರೆ ಅವಳನ್ನು ಜಂಬಗಾತಿ, ನಿರ್ಲಜ್ಜಳು, ದರ್ಪ ಮಾಡುವವಳು ಎಂದೆಲ್ಲ ಹೆಸರಿಸಲಾಗುತ್ತದೆ. ಅದೇ ಒಬ್ಬ ಪುರುಷನ ಹೌದು ಅಥವಾ ಅಲ್ಲವೆಂಬ ಮಾತನ್ನು ಯಾರೂ ವಿಮರ್ಶಿಸುವುದಿಲ್ಲ. ಅಂದರೆ ಸಮಾಜದಲ್ಲಿ ಭಾಷೆಯು ಪುರುಷ ಪಕ್ಷಪಾತಿಯಾಗಿದೆ. ಸಿನಿಮಾ, ಸೀರಿಯಲ್, ಸುದ್ದಿ ಸಮಾಚಾರ ಮತ್ತು ಜಾಹೀರಾತುಗಳು ಇದಕ್ಕೆ ಹೊರತಾಗಿಲ್ಲ. ಅವುಗಳಲ್ಲೂ ಆಧುನಿಕ ಚಮತ್ಕಾರವೇ ಮಹಿಳೆಯ ಚಿತ್ರಣವನ್ನು ಬಿಂಬಿಸುತ್ತವೆ ಅಥವಾ ಒಬ್ಬ ಸಾಧಾರಣ ಅಸಹಾಯಕ ಮಹಿಳೆಯ ಗೋಳನ್ನು ಪ್ರಸ್ತುತಪಡಿಸುತ್ತವೆ. ಸಾಮಾನ್ಯ ಜೀವನ ನಡೆಸುವ ಮಧ್ಯಮ ವರ್ಗದ ಮಹಿಳೆಯ ಚಿತ್ರವನ್ನು ಯಾರೂ ಪ್ರದರ್ಶಿಸುವುದೇ ಇಲ್ಲ.

ಹಿಡಿತವಲ್ಲ ಅಧಿಕಾರ

ಮಹಿಳಾ ಪರ ವಾದಿಗಳು, “ಇಡೀ ಆಕಾಶವೇ ಮಹಿಳೆಗೆ ಸೇರಿದ್ದು. ಅವಳಿಗೆ ಎಲ್ಲ ಅಧಿಕಾರ ದೊರೆಯಬೇಕು. ಸೆಕ್ಸ್ ನಿಂದ ಹಿಡಿದು ತುಂಡು ಬಟ್ಟೆ ಧರಿಸುವ ಅಧಿಕಾರವೆಲ್ಲ ಅವಳದೇ,” ಎಂದು ಘೋಷಿಸುವುದುಂಟು.

ಆದರೆ ಆಕಾಶ ಎಂದೂ ಯಾರೊಬ್ಬರದೂ ಆಗಲು ಸಾಧ್ಯವಿಲ್ಲ. ಆಕಾಶದಲ್ಲಿ ಹಾರಾಡುವ ಪಕ್ಷಿಗಳೂ ನೆಲಕ್ಕೆ ಇಳಿಯಲೇಬೇಕಾಗುತ್ತದೆ. ಹಾಗಿರುವಾಗ ಸ್ತ್ರೀ ಅಥವಾ ಪುರುಷರು ಆಕಾಶವನ್ನು ವಶಪಡಿಸಿಕೊಳ್ಳಲು ಹೇಗೆ ಸಾಧ್ಯ? ಇಲ್ಲಿ ಹೇಳುತ್ತಿರುವ ವಿಷಯ ವಶಪಡಿಕೆಯದಲ್ಲ. ಅಧಿಕಾರಕ್ಕೆ ಸಂಬಂಧಪಟ್ಟದ್ದು. ಮಹಿಳೆಯರಿಗೆ ಕಡೆಯ ಪಕ್ಷ ಆಕಾಶದಲ್ಲಿ ಹಾರಾಡುವ ಅವಕಾಶವಾದರೂ ದೊರೆಯಬೇಕು. ಇಂದು ನಗರವಾಸಿಗಳ ಜೀವನದಲ್ಲಿ ಒಡೆದ ಕುಟುಂಬಗಳು, ಮುರಿದ ದಾಂಪತ್ಯಗಳು, ಸ್ತ್ರೀ-ಪುರುಷರೆಂಬ ಭೇದ ಮುಂತಾದ ಅನೇಕ ಸಮಸ್ಯೆಗಳಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹುಡುಗಿಯರು ಆಧುನಿಕರಾಗಲು ಹಾತೊರೆಯುತ್ತಿದ್ದಾರೆ. ಆದರೆ ತಮ್ಮ ವಂಶಪಾರಂಪರ್ಯವಾದ ಕಂದಾಚಾರಗಳನ್ನು ಹಿಂದಿಕ್ಕಿ ಆಧುನಿಕ ಜಗತ್ತಿಗೆ ಕಾಲಿಡಲು ಅವಶ್ಯಕವಾದ ಸಾಮರ್ಥ್ಯ ಅವರಿಗಿಲ್ಲ.

ಏಕೆಂದರೆ ಈ ಬಗೆಯ ವ್ಯಾವಹಾರಿಕ ಜ್ಞಾನ ಅವರಿಗೆ ಎಲ್ಲಿಯೂ ದೊರೆಯುವುದಿಲ್ಲ. ಸ್ವತಃ ತಾಯಿಯೇ ಮಗಳನ್ನು ಗೂಟಕ್ಕೆ ಬಿಗಿದು ಹಸುವನ್ನಾಗಿ ಮಾಡಿಬಿಡುತ್ತಾಳೆ. ಪುರುಷನ ಕಣ್ಣಿನಲ್ಲಿ ನೀರು ಬಂದರೆ ಅವನನ್ನು ಹೆಣ್ಣಿಗನೆಂದು ಅಣಕಿಸಿ ನಗುತ್ತಾರೆ. ಆದರೆ ಮಹಿಳೆ ಕಣ್ಣೀರಿಡದಿದ್ದರೆ ಅವಳು ಹೆಣ್ಣು ಅನ್ನಿಸಿಕೊಳ್ಳಲು ಯೋಗ್ಯಳಲ್ಲವೆಂದು ತೀರ್ಮಾನಿಸುತ್ತಾರೆ.

ಕೇವಲ ತೋರಿಕೆ

ಹಿತಮಿತವಾಗಿ ಮಾತನಾಡುವುದು, ನಗುವುದು ಮುಂತಾದ ವಿಷಯಗಳನ್ನು ತಾಯಿತಂದೆಯರು ತಮ್ಮ ಹೆಣ್ಣುಮಕ್ಕಳಿಗೆ ಕಲಿಸಿಕೊಡುತ್ತಾರೆ. ಆದರೆ, ಈ ವಿಷಯಗಳನ್ನು ತಮ್ಮ ಗಂಡುಮಕ್ಕಳಿಗೂ ಕಲಿಸಬೇಕೆಂದು ಯೋಚಿಸುವುದೇ ಇಲ್ಲ. ಮನೆಗೆ ಅತಿಥಿಗಳು ಬಂದಾಗ ಅವರಿಗೆ ನೀರು, ತಿಂಡಿ ತಿನಿಸು ನೀಡಿ ಆತಿಥ್ಯ ಮಾಡಲು ಹೆಣ್ಣುಮಕ್ಕಳೇ ಆಗಬೇಕು, ಗಂಡು ಮಕ್ಕಳೇಕೆ ಮಾಡಬಾರದು? ಹೀಗೆ ಒಬ್ಬ ಪತ್ನಿಯೋ, ತಾಯಿಯೋ, ಮಗಳೋ ಕಾಫಿ ತಿಂಡಿ ತಂದುಕೊಟ್ಟಾಗ `ಥ್ಯಾಂಕ್ಸ್’ ಎಂದು ಹೇಳಿ ತಮ್ಮ ಪ್ರೀತಿ ಗೌರವವನ್ನೇನೋ ಪ್ರದರ್ಶಿಸುತ್ತಾರೆ. ಆದರೆ ಅದು ಕೇವಲ ತೋರಿಕೆಯಾಗಿರುತ್ತದೆ.

ಸ್ತ್ರೀ ವ್ಯಕ್ತಿತ್ವದ ಮುನ್ನಡೆ

ಸಿನಿಮಾ ಮಾಧ್ಯಮ ಮಹಿಳೆಗೆ ಅವಕಾಶ, ಸ್ವಾತಂತ್ರ್ಯವನ್ನು ಒದಗಿಸಿದೆ. ಆದರೆ ಅದು ಕೇವಲ ಶರೀರ ಸಂಬಂಧವಾದ ಲಜ್ಜಾ ಭಾವನೆಯನ್ನು ದೂರಗೊಳಿಸುವುದಕ್ಕಷ್ಟೇ ಸೀಮಿತವಾಗಿದೆ. ವಾಸ್ತವವಾಗಿ ಸಿನಿಮಾ ಪ್ರಪಂಚ ಪುರುಷ ಪ್ರಧಾನವಾದುದಾಗಿದೆ. ಇದಕ್ಕೆ ಅಲ್ಲಿನ ಉದ್ಯೋಗಸ್ಥ ಪುರುಷರ ಸಂಖ್ಯೆ ಕಾರಣವಲ್ಲ. ಅಲ್ಲಿನ ಮೂಲ ವ್ಯವಸ್ಥೆಯೇ ಹಾಗಿದೆ. ಸಿನಿಮಾಗಳಲ್ಲಿ ಹಿಂದಿನಿಂದಲೂ ಮಹಿಳೆಯ ಜೀವನ ಯಾತ್ರೆಯ ಕಥೆಗಳನ್ನು ತೋರಿಸುತ್ತಲೇ ಬಂದಿದ್ದಾರೆ. ತಾಯಿ, ಸೋದರಿ, ಪತ್ನಿ, ಪುತ್ರಿಯಾಗಿ ಕೆಲವು  ಚಿತ್ರಗಳಲ್ಲಿ ತೋರಿಸಿದರೆ, ಮತ್ತೆ  ಕೆಲವೆಡೆ ಸಶಕ್ತ ನಾರಿಯನ್ನಾಗಿ ಮೆರೆಸಿದ್ದಾರೆ. ಅವಳು ಅಬಲೆಯಾಗಿ ಕಣ್ಣೀರು ಕರೆಯುವ ಚಿತ್ರಗಳೂ ಸಾಕಷ್ಟು ಬಂದು ಹೋಗಿವೆ.

ಭಾರತೀಯ ಚಿತ್ರರಂಗ ಪ್ರಾರಂಭವಾದಾಗ ನಮ್ಮ ಸಮಾಜದಲ್ಲಿನ ಮಹಿಳಾ ಜೀವನದ ಸಮಸ್ಯೆಗಳ ಸುತ್ತಲೂ ಹೆಣೆದ ಕಥೆಗಳ ಆಧಾರದ ಮೇಲೆ ಹಲವು ಚಿತ್ರಗಳು ತೆರೆಕಂಡವು. ಉದಾ: `ದುನಿಯಾ ನಾ ಮಾನೆ’ (1937), `ಅಚೂತ್‌ ಕನ್ಯಾ’ (1936), `ದೇವದಾಸ್‌’ (1935), `ಆದ್ಮೀ’ (1939) ಇತ್ಯಾದಿ… ಇವೆಲ್ಲ `ಬಾಲ್ಯ ವಿವಾಹ,’ `ಅನಕ್ಷರತೆ,’ `ಇಜ್ಜೋಡು ವಿವಾಹ’ ಮುಂತಾದ ವಿಷಯಗಳನ್ನು ಆಧರಿಸಿ ಕನ್ಯೆಯರ ಸಮಸ್ಯೆಗೆ ಕನ್ನಡಿ ಹಿಡಿದು ತೋರಿಸಲಾಗಿತ್ತು.

ನಂತರ 1950 ಮತ್ತು 60ರ ದಶಕಗಳಲ್ಲಿ ವಿಮಲ್, ಗುರುದತ್‌ ಮತ್ತು ರಾಜ್‌ಕಪೂರ್‌ರಂತಹ ಚಿತ್ರ ನಿರ್ಮಾಪಕರು ಮಹಿಳೆಯನ್ನು ತಾಯಿ, ಪತ್ನಿ, ಪ್ರಿಯತಮೆ ರೂಪದಲ್ಲಿ ನೈಜವಾಗಿ ಚಿತ್ರೀಕರಿಸಿ, ಸ್ತ್ರೀ ವ್ಯಕ್ತಿತ್ವದ ಮುನ್ನಡೆಯನ್ನು ಸಾಬೀತುಪಡಿಸಿದರು. 1970 ರಿಂದ 90ರ ದಶಕಗಳಲ್ಲಿ ಸ್ತ್ರೀ ಪಾತ್ರಗಳ ಕಥೆಗಳಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿತು. `ಅನುಭವ್,’ `ಗೃಹಕ್ಲೇಶ್‌,’ `ಶ್ರೀಮಾನ್‌ ಶ್ರೀಮತಿ’ ಚಿತ್ರಗಳಲ್ಲಿ ಮಹಿಳೆಯು ಉದ್ಯೋಗ ಮಾಡುವುದು, ವಿದೇಶೀ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವುದು ಮುಂತಾದ ನಡವಳಿಕೆಯನ್ನು ತೋರಿಸಲಾಯಿತು.

ಕನ್ನಡ ಚಿತ್ರರಂಗ ಇಂತಹದೇ ದಾರಿಯಲ್ಲಿ ಸಾಗಿ ಬಂದಿರುವುದನ್ನು ನಾವು ನೋಡಿದ್ದೇವೆ. 1950-60ರವರೆಗೂ ಮಹಿಳೆಯನ್ನು ತಾಯಿ, ಪತ್ನಿ, ಸೊಸೆಯ ಪಾತ್ರಗಳಲ್ಲಿ ಅಪ್ಪಟ ಗೃಹಿಣಿಯಾಗಿ ತೋರಿಸಿರುವುದು  `ಸ್ಕೂಲ್ ‌ಮಾಸ್ಟರ್‌,’ `ಜೇನುಗೂಡು,’ `ಅಣ್ಣ ಅತ್ತಿಗೆ,’ `ಮನಶ್ಶಾಂತಿ,’ `ಸೊಸೆ ತಂದ ಸೌಭಾಗ್ಯ’ ಮುಂತಾದ ಚಿತ್ರಗಳಿಂದ ವಿಧಿತವಾಗುತ್ತದೆ. ನಂತರದ ವರ್ಷಗಳಲ್ಲಿ ಪುಟ್ಟಣ್ಣ ಕಣಗಾಲ್‌, ಕೆ.ವಿ. ಜಯರಾಂ, ಗೀತಪ್ರಿಯ,  ಭಾರ್ಗವರಂಥವರ ಮೂಲಕ ಸ್ತ್ರೀ ಪ್ರಧಾನ ಪಾತ್ರಗಳ ಚಿತ್ರಗಳು ತೆರೆಕಂಡವು. `ಗೆಜ್ಜೆಪೂಜೆ,’ `ಕಪ್ಪು ಬಿಳುಪು,’ `ರಂಗನಾಯಕಿ,’ `ಶ್ವೇತ ಗುಲಾಬಿ,’ `ಬಾಡದ ಹೂ,` `ಹೊಂಬಿಸಿಲು’ ಮುಂತಾದ ಚಿತ್ರಗಳು ಮಹಿಳೆಯ ಸ್ಥೈರ್ಯ, ಮನಃಶಕ್ತಿಗಳನ್ನು ಪರಿಚಯಿಸಿದವು.

ಹೊಸ ವ್ಯಾಖ್ಯಾನ ಕಳೆದ 30 ವರ್ಷಗಳಲ್ಲಿ ಮಹಿಳೆಯ ಬಗೆಗಿನ ವಿಚಾರಧಾರೆಗೆ ಹೊಸ ತಿರುವನ್ನು ನೀಡುವಂತಹ ಚಿತ್ರಗಳು ಹೊರಬಂದವು. ಕೇತನ್‌ ಮೆಹ್ತಾರ `ಮಿರ್ಚ್‌ ಮಸಾಲಾ’ ಚಿತ್ರದಲ್ಲಿ ಮಹಿಳೆಯು ಸಮಾಜದ ಸ್ತ್ರೀಯಲ್ಲಿ ಜಾಗೃತಿ ಉಂಟು ಮಾಡುವ ಕೆಲಸದಲ್ಲಿ ತೊಡಗಿ ತನ್ನ ಪ್ರತಿಭೆಯನ್ನು ತೋರಿದ್ದಾಳೆ. ಮಹಿಳೆಯು ಮನೆಯ ನಾಲ್ಕು ಗೋಡೆಗಳ ಮಧ್ಯೆ ಇದ್ದುಕೊಂಡು, ಮನೆಗೆಲಸ ಮತ್ತು ಮಕ್ಕಳನ್ನು ಪೋಷಿಸುವ ಕೆಲಸಕ್ಕಷ್ಟೇ ಸೀಮಿತ ಎಂದು ಸಮಾಜದ ವಿಚಾರಧಾರೆಯನ್ನು ಈ ಚಿತ್ರ ಅಳಿಸಿಹಾಕುವ ಪ್ರಯತ್ನ ಮಾಡಿದೆ.

1993ರಲ್ಲಿ ತೆರೆಕಂಡ `ದಾಮಿನಿ’ ಚಿತ್ರದಲ್ಲಿ ಮಹಿಳೆಯು ಒಬ್ಬ ಸಶಕ್ತ ಸ್ತ್ರೀ ಪಾತ್ರದಲ್ಲಿ ಶೋಭಿಸಿದ್ದಾಳೆ. ಪತಿಯಿಂದ ಪ್ರತ್ಯೇಕವಾಗಿ ಇರಬೇಕಾದಾಗಲೂ ಸಹ ಸಮಾಜದಲ್ಲಿ ಆಗುತ್ತಿರುವ ಅತ್ಯಾಚಾರಗಳ ವಿರುದ್ಧ ಎದ್ದು ನಿಲ್ಲುತ್ತಾಳೆ. ಸಂದರ್ಭ ಬಿದ್ದಾಗ ಕೈಯಲ್ಲಿ ಆಯುಧ ಹಿಡಿದು ಗೂಂಡಾಗಳನ್ನು ಎದುರಿಸುತ್ತಾಳೆ. `ಸಲಾಮ್ ನಮಸ್ತೆ’ ಚಿತ್ರದಲ್ಲಿ ಲಿವ್ ‌ಇನ್‌ ರಿಲೇಶನ್‌ ಶಿಪ್‌ನ ಕಥೆಯನ್ನು ತೋರಿಸಲಾಗಿದೆ. ಅದರಲ್ಲಿ ಸ್ತ್ರೀ ಸಹ ಪುರುಷನಂತೆ ಸ್ವಾತಂತ್ರ್ಯ ಬಯಸುತ್ತಾಳೆ, ಆಕೆಗೆ ಪ್ರೀತಿ ಬೇಕು. ಆದರೆ ಅದು ಬಂಧನವಲ್ಲದೆ ಸ್ವತಂತ್ರವಾದ ರೂಪದಲ್ಲಿರಬೇಕು.

ಕನ್ನಡ ಚಿತ್ರಗಳಲ್ಲಿ ಸಶಕ್ತ ಮಹಿಳಾ ಪಾತ್ರಗಳನ್ನು ಸೃಷ್ಟಿಸಿರುವ ಉದಾಹರಣೆಗಳಿವೆ. ಮಾಲಾಶ್ರೀ ಕಿರಣ್‌ ಬೇಡಿ ಆಗಿ ಅದೇ ಹೆಸರಿನ ಚಿತ್ರದಲ್ಲಿ ಮಿಂಚಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಚಾರಧಾರೆಯಲ್ಲಿ ಬದಲಾವಣೆ

21ನೇ ಶತಮಾನದಲ್ಲಿ ತೆರೆಕಂಡ ಚಿತ್ರಗಳಲ್ಲಿ ಮಹಿಳೆಯ ಹೊಸ ಬಗೆಯ ಜೀವನ ಚರಿತ್ರೆಗೆ ಹೊಸ ಆಯಾಮ ಮತ್ತು ವ್ಯಾಖ್ಯಾನವನ್ನು ನೀಡಲಾಗಿದೆ. ಉದಾ : `ನೋ ಒನ್‌ ಕಿಲ್ಡ್ ಜೆಸ್ಸಿಕಾ,’ `ಬ್ಯಾಂಡ್‌ ಬಾಜಾ ಬಾರಾತ್‌,’ `ಅಂಜಾನಾ ಅಂಜಾನಿ,’ `ಪೀಕೂ’ ಇತ್ಯಾದಿ.

`ಪಿಂಕ್‌’ ಚಿತ್ರದಲ್ಲಿ ನಾಯಕಿಯರ ಪಾತ್ರಗಳಲ್ಲಿ ಚಮತ್ಕಾರ ಅಥವಾ ಅಸಹಾಯಕತೆಯನ್ನು ಬಿಂಬಿಸದೆ ಅವರಿಗೆ ತಮ್ಮ  ಸ್ತ್ರೀತ್ವದ ಮೇಲೆ ಹೆಮ್ಮೆ ಇರುವಂತೆ ಮಾಡಲಾಗಿದೆ. ಈ ಚಿತ್ರದಲ್ಲಿರುವ ಒಂದು ಮುಖ್ಯ ಅಂಶವೆಂದರೆ, ಒಬ್ಬ ಮಹಿಳೆಯ ಚರಿತ್ರೆಯನ್ನು ತಿಳಿಯಲು ಆಕೆಯ ಉಡುಪು ಅಥವಾ ಪುರುಷರೊಂದಿಗಿನ ಸಂಬಂಧವನ್ನು ಅಳತೆಗೋಲಾಗಿ ಬಳಸಬೇಕಾಗಿಲ್ಲ ಎಂಬುದು. ಆದರೂ ನಮ್ಮ ಸಮಾಜದಲ್ಲಿ ಇಂದೂ ಸಹ ಮಹಿಳೆಯರ ಚರಿತ್ರೆ, ವೇದನೆ, ಭಾವನೆಗಳನ್ನು ಹಿಂಡಿ ಹಾಕುವ ಕೆಲಸ ನಡೆಯುತ್ತಲೇ ಇದೆ. ಭಾರತದಲ್ಲಿ ಶೇ.50ರಷ್ಟು ಮಹಿಳೆಯರು ಸೌಲಭ್ಯಗಳ ಕೊರತೆಯಿಂದ ಕೂಡಿರುವ ಗ್ರಾಮೀಣ ವಾತಾವರಣದಲ್ಲಿಯೇ ಇದ್ದಾರೆ. ಸಮಾಜದಲ್ಲಿ ಸಮಯಾನುಸಾರವಾಗಿ ಆಗುತ್ತಿರುವ ಬದಲಾವಣೆಗಳಿಂದಾಗಿ ಹುಡುಗಿಯರು ಮತ್ತು ಮಹಿಳೆಯರ ಸಂಬಂಧವಾದ ಸಾಮಾಜಿಕ ವಿಚಾರಧಾರೆಯು ಪರಿವರ್ತನೆಯಾಗುತ್ತಿದೆ.

ಹಿಂದೆ ತನ್ನ ಜೀವನವನ್ನು ಮನೆಗಷ್ಟೇ ಸೀಮಿತಗೊಳಿಸಿದ್ದ ಮಹಿಳೆ, ಇಂದು ಹೊರ ಬಂದು ಕ್ರೀಡೆ, ಚಿಕಿತ್ಸೆ, ಕಾನೂನು, ಮೀಡಿಯಾ, ಬ್ಯಾಂಕಿಂಗ್‌, ಸಿನಿಮಾ, ರಾಜಕೀಯ, ಆಡಳಿತ ವ್ಯವಸ್ಥೆ ಮುಂತಾದ ಎಲ್ಲ ಕ್ಷೇತ್ರಗಳಿಗೂ ಅಡಿಯಿರಿಸಿದ್ದಾಳೆ. ಅಷ್ಟೇ ಅಲ್ಲದೆ, ಹೊಸ ಬಗೆಯ ವಿಚಾರಗಳನ್ನೂ ಪ್ರಸ್ತುತಪಡಿಸುತ್ತಿದ್ದಾಳೆ.

ವಿಸ್ತೃತ ಪರಿಧಿ

ಇಂದು ಯುವತಿಯರು ಮತ್ತು ಮಹಿಳೆಯರು ವಿಭಿನ್ನ ಕ್ಷೇತ್ರಗಳಿಗೆ ಪಾದಾರ್ಪಣೆ ಮಾಡಿದ್ದಾರೆ. ವಿವಾಹದ ಬಗೆಗಿನ ಅವರ ಅಭಿಪ್ರಾಯ ಬದಲಾಗತೊಡಗಿದೆ. ಅವರು ಸ್ವತಃ ತೀರ್ಮಾನ ಕೈಗೊಂಡು ತಮ್ಮ ಇಚ್ಛೆಯಂತೆ ಕೆರಿಯರ್‌ ರೂಪಿಸಿಕೊಳ್ಳಲು ಬಯಸುತ್ತಾರೆ. ಪುರುಷರಂತೆ ತಾವು ವ್ಯಕ್ತಿತ್ವದ ಗುರುತು ಮೂಡಿಸಲು ಆಶಿಸುತ್ತಾರೆ. ಇತರರ ಮಾತಿಗೆ ಲಕ್ಷ್ಯ ಕೊಡದೆ ತಮಗೆ ಬೇಕಾದಂತೆ ಜೀವಿಸುತ್ತಾರೆ. ಆದ್ದರಿಂದ ಮಹಿಳೆಯರಿಗೆ ಮೂಲಭೂತ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ಅಧಿಕಾರಗಳು ದೊರೆಯಬೇಕಾಗಿದೆ.

ಸ್ತ್ರೀ ಇಂದೂ ಭೋಗ್ಯ ವಸ್ತುವೇ ಆಗಿದ್ದಾಳೆ ಎಂಬುದು ಖೇದನೀಯ ಅಂಶ. ಕಾನೂನು ಅಪರಾಧಿಗೆ ಶಿಕ್ಷೆ ನೀಡಬಲ್ಲದು. ಆದರೆ ಅಪರಾಧವನ್ನು ಕೊನೆಗಾಣಿಸಲಾರದು ಎಂಬುದನ್ನು ನಾವು ನೆನಪಿಡಬೇಕು. ಮನೆಮನೆಗಳ ಮತ್ತು ಮನಮನಗಳ ಮಾನಸಿಕ ಪ್ರಯತ್ನದಿಂದ ಮಾತ್ರವೇ ಸಮಾಜವನ್ನು ಬದಲಿಸಬಹುದು ಮತ್ತು ಬದಲಾಗುತ್ತಿರುವ ಕಾನೂನುಗಳನ್ನು  ಸಾರ್ಥಕಗೊಳಿಸಬಹುದು.

– ಎಚ್‌. ಮೋನಿಕಾ

ಆಧುನಿಕ ಮಹಿಳೆಯು ಮನೆಯ ನಾಲ್ಕು ಗೋಡೆಗಳ ಮಧ್ಯೆ ಇದ್ದುಕೊಂಡು ಮನೆಗೆಲಸ ಮತ್ತು ಮಕ್ಕಳ ಪೋಷಣೆ ಮಾಡುತ್ತಾ ಇರುವುದಿಲ್ಲ. ಅವಳು ಹೊರಗಿನ ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸವಾಲಾಗಿ ನಿಂತಿದ್ದಾಳೆ. ಆದರೆ ಸ್ತ್ರೀಯ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಿದೆಯೇ…..?

ಕನಸು ಪೂರ್ಣವಾಗಬಲ್ಲದು

ಇಂದು ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ನಡೆಯುತ್ತಿದ್ದಾರೆ ಮತ್ತು ಯಶಸ್ವಿಗಳೂ ಆಗಿದ್ದಾರೆ ಎಂಬುದೇನೋ ನಿಜ. ಆದರೆ ಪುರುಷರ ಮಾನಸಿಕತೆ ಸ್ತ್ರೀಯನ್ನು ಕೆಳದೃಷ್ಟಿಯಲ್ಲೇ ಕಾಣುತ್ತದೆ. ಮಹಿಳೆಯರು ಸಮಾಜದಲ್ಲಿ ಹರಡಿರುವ ಸಾಂಪ್ರದಾಯಿಕ ಪರಂಪರೆಗಳಿಂದ ಹೊರಬರಬೇಕು. ಮೂಢನಂಬಿಕೆಯನ್ನು ಬಿಟ್ಟು ವೈಜ್ಞಾನಿಕ ಆಲೋಚನೆಗಳೊಂದಿಗೆ ಮುನ್ನಡೆಯಬೇಕು. ಆಗಲೇ ಸ್ತ್ರೀಯ ಕನಸು ಪೂರ್ಣವಾಗಬಲ್ಲದು.

ಮನೀ ಬನ್ಸ್

ಬರಿದೇ ಸ್ತ್ರೀ ಶಕ್ತಿಯ ಕುರಿತಾಗಿ ಭಾಷಣ ಬಿಗಿಯುವುದರಿಂದ, ಘೋಷಣೆ ಕೂಗುವುದರಿಂದ ಹೆಣ್ಣಿನ ಪ್ರಗತಿ ಸಾಧ್ಯವಿಲ್ಲ. ಇದಕ್ಕಾಗಿ ನಿಜವಾದ ಸ್ತ್ರೀಪರ ಕಾಳಜಿ, ಕಳಕಳಿ ಇರಬೇಕು. ಸಮಾಜ ತನ್ನ ದೃಷ್ಟಿಕೋನ ಬದಲಿಸಬೇಕು. ನಾವೆಲ್ಲರೂ ಒಗ್ಗೂಡಿ ಇದನ್ನು ಮನೆಗಳಿಂದಲೇ ಆರಂಭಿಸಬಾರದೇಕೆ……?

ಸಮಾನ ಶ್ರೇಣಿ ದೊರೆಯಲಿ

ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲಿ ಮಹಿಳೆಯರದೂ ಸಮಾನ ಕೊಡುಗೆ ಇದೆ. ಆದರೆ ಪುರುಷ ವರ್ಗ ಇದನ್ನು ಒಪ್ಪುವುದಿಲ್ಲ. ಇಂದೂ ಮಹಿಳೆಯರಿಗೆ ಪುರುಷರಿಗೆ ಸಮಾನವಾದ ಅವಕಾಶ ದೊರೆಯುತ್ತಿಲ್ಲ. ಯಾವುದೋ ಒಂದು ಸ್ಥಾನವನ್ನು ತಲುಪುವ ಮಹಿಳೆಯು ಅಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಬೇಕಾಗುತ್ತದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸವಾಲಾಗಿ ನಿಂತಿದ್ದಾರೆ ಎಂಬುದಕ್ಕೆ ಎರಡು ಮಾತಿಲ್ಲ. ಇಲ್ಲಿ ಹೇಳಬೇಕಾದ ವಿಷಯವೆಂದರೆ, ಅವರು ಪುರುಷರಿಗಿಂತ ಮುಂದೆ ನಡೆಯಬೇಕು ಎಂದಲ್ಲ, ಆದರೆ ಸಮಾನ ಶ್ರೇಣಿ ದೊರೆಯಬೇಕು ಎಂಬುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ