`ಹೌದು' ಮತ್ತು `ಇಲ್ಲ' ಎಂಬ ಇವೆರಡು ಶಬ್ದಗಳು ಮನಸ್ಸಿನ ಭಾವನೆ ಮತ್ತು ಮಾತುಗಳನ್ನು ವ್ಯಕ್ತಪಡಿಸಬಲ್ಲವು. ಆದರೆ ನಮ್ಮ ಸಮಾಜ ಭಾಷೆಯನ್ನೂ ಸಹ ತನಗೆ ಬೇಕಾದಂತೆ ಅಚ್ಚಿಳಿಸುತ್ತದೆ. ಒಬ್ಬ ಮಹಿಳೆಯ `ಉಹ್ಞೂಂ' ಎಂಬ ಉತ್ತರವನ್ನು `ಹ್ಞೂಂ' ಎಂದೇ ಪರಿಗಣಿಸಲಾಗುತ್ತದೆ. ಒಬ್ಬ ಯುವತಿ ಅಥವಾ ಮಹಿಳೆಯು ತನ್ನ ಸ್ವಭಾವ ಸಹಜವಾದ ಲಜ್ಜೆಯಿಂದಾಗಿ `ಆಗಲಿ' ಎನ್ನುವ ಸಂದರ್ಭದಲ್ಲಿ ಹಾಗೆ ಹೇಳಲು ಅಸಮರ್ಥಳಾಗುತ್ತಾಳೆ. ಹೀಗಾಗಿ `ಮೌನಂ ಸಮ್ಮತಿ ಲಕ್ಷಣಂ' ಎಂಬಂತೆ ಅವಳ ಮೌನವನ್ನು ಅಥವಾ ಅವಳ ಬೇಡ ಎಂಬುದನ್ನು ಒಪ್ಪಿಗೆ ಎಂದೇ ತಿಳಿಯಲಾಗುತ್ತದೆ. ಮತ್ತೊಂದು ಅಂಶವೆಂದರೆ, ಮಹಿಳೆಯು ಹೌದು ಅಥವಾ ಅಲ್ಲವೆಂದು ಹೇಳಿ ಯಾವುದಾದರೂ ವಿಷಯವನ್ನು ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸಿದರೆ ಅವಳನ್ನು ಜಂಬಗಾತಿ, ನಿರ್ಲಜ್ಜಳು, ದರ್ಪ ಮಾಡುವವಳು ಎಂದೆಲ್ಲ ಹೆಸರಿಸಲಾಗುತ್ತದೆ. ಅದೇ ಒಬ್ಬ ಪುರುಷನ ಹೌದು ಅಥವಾ ಅಲ್ಲವೆಂಬ ಮಾತನ್ನು ಯಾರೂ ವಿಮರ್ಶಿಸುವುದಿಲ್ಲ. ಅಂದರೆ ಸಮಾಜದಲ್ಲಿ ಭಾಷೆಯು ಪುರುಷ ಪಕ್ಷಪಾತಿಯಾಗಿದೆ. ಸಿನಿಮಾ, ಸೀರಿಯಲ್, ಸುದ್ದಿ ಸಮಾಚಾರ ಮತ್ತು ಜಾಹೀರಾತುಗಳು ಇದಕ್ಕೆ ಹೊರತಾಗಿಲ್ಲ. ಅವುಗಳಲ್ಲೂ ಆಧುನಿಕ ಚಮತ್ಕಾರವೇ ಮಹಿಳೆಯ ಚಿತ್ರಣವನ್ನು ಬಿಂಬಿಸುತ್ತವೆ ಅಥವಾ ಒಬ್ಬ ಸಾಧಾರಣ ಅಸಹಾಯಕ ಮಹಿಳೆಯ ಗೋಳನ್ನು ಪ್ರಸ್ತುತಪಡಿಸುತ್ತವೆ. ಸಾಮಾನ್ಯ ಜೀವನ ನಡೆಸುವ ಮಧ್ಯಮ ವರ್ಗದ ಮಹಿಳೆಯ ಚಿತ್ರವನ್ನು ಯಾರೂ ಪ್ರದರ್ಶಿಸುವುದೇ ಇಲ್ಲ.
ಹಿಡಿತವಲ್ಲ ಅಧಿಕಾರ
ಮಹಿಳಾ ಪರ ವಾದಿಗಳು, ``ಇಡೀ ಆಕಾಶವೇ ಮಹಿಳೆಗೆ ಸೇರಿದ್ದು. ಅವಳಿಗೆ ಎಲ್ಲ ಅಧಿಕಾರ ದೊರೆಯಬೇಕು. ಸೆಕ್ಸ್ ನಿಂದ ಹಿಡಿದು ತುಂಡು ಬಟ್ಟೆ ಧರಿಸುವ ಅಧಿಕಾರವೆಲ್ಲ ಅವಳದೇ,'' ಎಂದು ಘೋಷಿಸುವುದುಂಟು.
ಆದರೆ ಆಕಾಶ ಎಂದೂ ಯಾರೊಬ್ಬರದೂ ಆಗಲು ಸಾಧ್ಯವಿಲ್ಲ. ಆಕಾಶದಲ್ಲಿ ಹಾರಾಡುವ ಪಕ್ಷಿಗಳೂ ನೆಲಕ್ಕೆ ಇಳಿಯಲೇಬೇಕಾಗುತ್ತದೆ. ಹಾಗಿರುವಾಗ ಸ್ತ್ರೀ ಅಥವಾ ಪುರುಷರು ಆಕಾಶವನ್ನು ವಶಪಡಿಸಿಕೊಳ್ಳಲು ಹೇಗೆ ಸಾಧ್ಯ? ಇಲ್ಲಿ ಹೇಳುತ್ತಿರುವ ವಿಷಯ ವಶಪಡಿಕೆಯದಲ್ಲ. ಅಧಿಕಾರಕ್ಕೆ ಸಂಬಂಧಪಟ್ಟದ್ದು. ಮಹಿಳೆಯರಿಗೆ ಕಡೆಯ ಪಕ್ಷ ಆಕಾಶದಲ್ಲಿ ಹಾರಾಡುವ ಅವಕಾಶವಾದರೂ ದೊರೆಯಬೇಕು. ಇಂದು ನಗರವಾಸಿಗಳ ಜೀವನದಲ್ಲಿ ಒಡೆದ ಕುಟುಂಬಗಳು, ಮುರಿದ ದಾಂಪತ್ಯಗಳು, ಸ್ತ್ರೀ-ಪುರುಷರೆಂಬ ಭೇದ ಮುಂತಾದ ಅನೇಕ ಸಮಸ್ಯೆಗಳಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹುಡುಗಿಯರು ಆಧುನಿಕರಾಗಲು ಹಾತೊರೆಯುತ್ತಿದ್ದಾರೆ. ಆದರೆ ತಮ್ಮ ವಂಶಪಾರಂಪರ್ಯವಾದ ಕಂದಾಚಾರಗಳನ್ನು ಹಿಂದಿಕ್ಕಿ ಆಧುನಿಕ ಜಗತ್ತಿಗೆ ಕಾಲಿಡಲು ಅವಶ್ಯಕವಾದ ಸಾಮರ್ಥ್ಯ ಅವರಿಗಿಲ್ಲ.
ಏಕೆಂದರೆ ಈ ಬಗೆಯ ವ್ಯಾವಹಾರಿಕ ಜ್ಞಾನ ಅವರಿಗೆ ಎಲ್ಲಿಯೂ ದೊರೆಯುವುದಿಲ್ಲ. ಸ್ವತಃ ತಾಯಿಯೇ ಮಗಳನ್ನು ಗೂಟಕ್ಕೆ ಬಿಗಿದು ಹಸುವನ್ನಾಗಿ ಮಾಡಿಬಿಡುತ್ತಾಳೆ. ಪುರುಷನ ಕಣ್ಣಿನಲ್ಲಿ ನೀರು ಬಂದರೆ ಅವನನ್ನು ಹೆಣ್ಣಿಗನೆಂದು ಅಣಕಿಸಿ ನಗುತ್ತಾರೆ. ಆದರೆ ಮಹಿಳೆ ಕಣ್ಣೀರಿಡದಿದ್ದರೆ ಅವಳು ಹೆಣ್ಣು ಅನ್ನಿಸಿಕೊಳ್ಳಲು ಯೋಗ್ಯಳಲ್ಲವೆಂದು ತೀರ್ಮಾನಿಸುತ್ತಾರೆ.
ಕೇವಲ ತೋರಿಕೆ
ಹಿತಮಿತವಾಗಿ ಮಾತನಾಡುವುದು, ನಗುವುದು ಮುಂತಾದ ವಿಷಯಗಳನ್ನು ತಾಯಿತಂದೆಯರು ತಮ್ಮ ಹೆಣ್ಣುಮಕ್ಕಳಿಗೆ ಕಲಿಸಿಕೊಡುತ್ತಾರೆ. ಆದರೆ, ಈ ವಿಷಯಗಳನ್ನು ತಮ್ಮ ಗಂಡುಮಕ್ಕಳಿಗೂ ಕಲಿಸಬೇಕೆಂದು ಯೋಚಿಸುವುದೇ ಇಲ್ಲ. ಮನೆಗೆ ಅತಿಥಿಗಳು ಬಂದಾಗ ಅವರಿಗೆ ನೀರು, ತಿಂಡಿ ತಿನಿಸು ನೀಡಿ ಆತಿಥ್ಯ ಮಾಡಲು ಹೆಣ್ಣುಮಕ್ಕಳೇ ಆಗಬೇಕು, ಗಂಡು ಮಕ್ಕಳೇಕೆ ಮಾಡಬಾರದು? ಹೀಗೆ ಒಬ್ಬ ಪತ್ನಿಯೋ, ತಾಯಿಯೋ, ಮಗಳೋ ಕಾಫಿ ತಿಂಡಿ ತಂದುಕೊಟ್ಟಾಗ `ಥ್ಯಾಂಕ್ಸ್' ಎಂದು ಹೇಳಿ ತಮ್ಮ ಪ್ರೀತಿ ಗೌರವವನ್ನೇನೋ ಪ್ರದರ್ಶಿಸುತ್ತಾರೆ. ಆದರೆ ಅದು ಕೇವಲ ತೋರಿಕೆಯಾಗಿರುತ್ತದೆ.