ಕಥೆವಸಂತಾ ವಿನೋದ್‌ 

ಮದುವೆಯಾದ ಮೇಲೆ ಮೊದಲ ಸಲ ಮಾಯಾ ಮಾಧವನ ಜೊತೆ ಅವನ ಮನೆಗೆ ಬಂದಾಗ ಎಷ್ಟೋ ವಿಷಯಗಳು ಅವಳನ್ನು ನಿರೀಕ್ಷಿಸುತ್ತಿದ್ದವು

ಮಾಯಾ ಬೆಚ್ಚಿದಳು. ಹೃದಯ ಬಡಿತ ಅರೆಕ್ಷಣ ನಿಂತಂತಾಯಿತು. ತಾನು ನೋಡುತ್ತಿರುವುದು ಸತ್ಯವೇ? ಇದು ಸುಳ್ಳಾಗಿದ್ದರೆ ಸತ್ಯವೇನು? ಮದುವೆಯಾದ ಮೇಲೆ ಮಾಯಾ ಮೊದಲ ಸಲ ಗಂಡನ ಮನೆಗೆ ಬಂದಿದ್ದಳು. ಮಾಧವನ ರಜಾ ಮುಗಿಯುತ್ತ ಬಂದಂತೆ ಅವನು ಮಾಯಾಳನ್ನು ಮನೆಯವರ ಇಚ್ಛೆಗೆ ವಿರುದ್ಧವಾಗಿ ಕರೆತಂದಿದ್ದ. ಮಾಯಾಗೂ ಅದೇ ಇಷ್ಟವಿತ್ತು. ಯಾವ ನವವಿವಾಹಿತೆ ತಾನೆ ತನ್ನ ಗಂಡನಿಂದ ದೂರ ಇರಲು ಇಷ್ಟ ಪಡುತ್ತಾಳೆ? ಮಾಯಾ ಅಂದುಕೊಂಡಿದ್ದಕ್ಕಿಂತ ಮನೆ ಕೊಳಕಾಗಿತ್ತು. ಯಾವ ವಸ್ತುವೂ ತನ್ನ ಜಾಗದಲ್ಲಿರಲಿಲ್ಲ. ಮಾಧವ ಇಲ್ಲದಿದ್ದಾಗ ಯಾರೋ ಕಳ್ಳ ಬಂದು ಸಾಮಾನುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಮಾಡಿದ್ದಂತೆ ಕಾಣಿಸುತ್ತಿತ್ತು. ಅವಳಿಗೆ ನಗು ಬಂತು.

“ಇಲ್ಲ, ಇಲ್ಲ. ಯಾವ ಕಳ್ಳನೂ ಬಂದಿಲ್ಲ. ಎಲ್ಲಾ ಸಾಮಾನು ಹಾಗೇ ಇವೆ. ಹೊರಡುವ ಮೊದಲು ಎಲ್ಲಾ ಸರಿಯಾಗಿಡಲು ಸಮಯವೇ ಸಿಗಲಿಲ್ಲ,” ಎಂದ ಮಾಧವ.

“ನೀವು ಇಷ್ಟು ಕೊಳಕು ಅಂತ ನನಗೆ ಗೊತ್ತಿರಲಿಲ್ಲ.” ಮಾಯಾ ನಕ್ಕಳು

“ಸರಿಯಾಗಿಡಲು ತಿಂಗಳುಗಳೇ ಬೇಕಾಗುತ್ತೆ.”

“ಪರವಾಗಿಲ್ಲ, `ಕೆಲಸವಿಲ್ಲದ ಮೆದುಳು ಸೈತಾನನ ಮನೆ ಅಂತ,’ ಹೇಳ್ತಾರಲ್ಲ. ಇಡೀ ದಿನ ಕೆಲಸ ಇದ್ದರೆ ಮೆದುಳು ಒಳ್ಳೆಯದನ್ನೇ ಯೋಚಿಸುತ್ತೆ.”

“ನನಗೆ ಕೆಲಸದಲ್ಲಿ ವ್ಯಸ್ತಳಾಗುವುದು ಬರುತ್ತೆ. ಇವತ್ತು ರಾತ್ರಿ ಊಟ ಹೊರಗೆ ಮಾಡೋದು ತಾನೇ?” ಎಂದಳು ಮಾಯಾ.

“ಹೌದು ಮತ್ತೆ. ಆದರೆ ದಿನಾಲೂ ಅಲ್ಲ.”

ರಜೆ ಮುಗಿದಿತ್ತು. ಸಾಮಾನು ತರಿಸಿ ಬೆಳಗಿನ ತಿಂಡಿ ಮಾಡಿ ಮಾಧವನಿಗೆ ಕೊಟ್ಟು ನಂತರ ಮಸಾಲೆ ರೊಟ್ಟಿ ಮಾಡಿ ಮಧ್ಯಾಹ್ನದ ಊಟಕ್ಕೆಂದು ಡಬ್ಬಿಯಲ್ಲಿ ಹಾಕಿಟ್ಟಳು.

ಸ್ನಾನ ಮಾಡಿ ಮಾಯಾ ಬಟ್ಟೆಯ ಬೀರು ತೆರೆದಳು. ಬೀರು ಅಲ್ಲ ಅದು. ಬಟ್ಟೆಯ ಉಗ್ರಾಣವಾಗಿತ್ತು. ಅವಳ ಬಾಯಿ ಸೊಟ್ಟಗಾದರೂ ಮನದಲ್ಲೇನೋ ಖುಷಿಯೂ ಇತ್ತು. ಸಿನಿಮಾಗಳಲ್ಲಿ ನೋಡಿದ್ದು ಈಗ ವಾಸ್ತವ ರೂಪದಲ್ಲಿ ಎದುರಾಗಿದೆ. ಬಟ್ಟೆಗಳನ್ನು ಓರಣವಾಗಿ ಜೋಡಿಸಿದಳು. ಕೆಲವನ್ನು ಮೇಲಿನ ಹ್ಯಾಂಗರ್‌ಗಳಿಗೆ ಹಾಕಿದಳು. ಕೆಳಗೆ ಎರಡು ಖಾನೆಗಳಿದ್ದವು. ಒಂದರಲ್ಲಿ ಕೆಲವು ಕಾಗದಗಳು, ಚೀಟಿಗಳು, ರಸೀದಿಗಳು, ಮುರಿದ ಪೆನ್ನುಗಳು, ಗುಂಡಿಗಳು ಇತ್ಯಾದಿ ಇದ್ದವು.

ಪ್ರತಿಯೊಬ್ಬ ಹೆಂಗಸು ಮೊದಲ ಸಲ ಅತ್ತೆ ಮನೆಗೆ ಬಂದಾಗ ತನ್ನ ಪತಿಯ ಗುಟ್ಟುಗಳೇನಾದರೂ ಇವೆಯೇ ಎಂದು ತಿಳಿಯಬಯಸುತ್ತಾಳೆ. ಮದುವೆಯಾಗುವವರೆಗೆ ಎಲ್ಲರೂ ಮುಖವಾಡ ಹಾಕಿಕೊಂಡಿರುತ್ತಾರೆ. ಮದುವೆಯಾದ ಮೇಲೆ ಪತಿಯ ನಿಜವಾದ ವ್ಯಕ್ತಿತ್ವ ಗೊತ್ತಾಗುತ್ತದೆ. ಪತಿಯ ಬಗ್ಗೆ ಎಲ್ಲಾ ವಿಷಯ ತಿಳಿದುಕೊಳ್ಳಲು ಪತ್ನಿಗೆ ಕುತೂಹಲ ಇರುತ್ತದೆ. ಇದನ್ನು ಪತ್ತೆದಾರಿಕೆ ಎನ್ನಬಹುದಾದರೂ ಇದು ನ್ಯಾಯವಾಗಿದೆ.

ಖಾನೆಯಲ್ಲಿ ಕಾರ್ಡುಗಳು ತುಂಬಿದ್ದವು. ಒಂದು ಕಾರ್ಡನ್ನು ತೆಗೆದುಕೊಂಡು ಮೂಸಿದಳು. ಅದರಿಂದ ಸುಗಂಧ ಬರುತ್ತಿತ್ತು. ಎರಡನೇದು, ಮೂರನೇಯದನ್ನು ಮೂಸಿದಾಗಲೂ ಸುವಾಸನೆ ಬಂತು. ಆಳವಾಗಿ ಉಸಿರೆಳೆದುಕೊಂಡಳು. ಒಂದು ಕಾರ್ಡನ್ನು ಓದಿದಳು. ಅವಳಿಗೆ ಬೆಚ್ಚುವಂತಾಯಿತು. ಹೃದಯಬಡಿತ ನಿಂತ ಹಾಗಾಯಿತು.

ಪ್ರಿಯ ಮಾಯಾ, ಎಷ್ಟು ದಿನದಿಂದ ನಿನ್ನ ಪತ್ರವನ್ನು ನಿರೀಕ್ಷಿಸುತ್ತಿದ್ದೇನೆ. ಫೋನ್‌ ಮಾಡಿದೆ. ನೀನು ಮನೆಯಲ್ಲಿರಲಿಲ್ಲ. ನನ್ನನ್ನು ಇನ್ನೂ ಸತಾಯಿಸಬೇಡ. ನೀನಿಲ್ಲದೆ ಜೀವನ ಅಪೂರ್ಣವೆನ್ನಿಸುತ್ತದೆ. ಏನು ಕಾರಣ ಇದ್ದರೂ ಸರಿ ಹೇಳು. ನಾನು ಹೋರಾಡಲೂ ಸಿದ್ಧನಾಗಿದ್ದೇನೆ.

ನಿನ್ನ ಮಾಧವ.

ಒಂದೊಂದಾಗಿ ಬಹಳ ಕಾರ್ಡುಗಳನ್ನು ಓದಿದಳು. ಎಲ್ಲದರಲ್ಲೂ ಒಂದೇ ಪ್ರೇಮಾಲಾಪ. ಮುಂದೆ ಓದಲು ಧೈರ್ಯವಾಗದೆ ಹಾಗೇ ಕುಳಿತಳು. ಆಗ ಅವಳಿಗೆ ತನ್ನ ಪ್ರಥಮ ರಾತ್ರಿಯ ಮಾತುಗಳು ನೆನಪಾದವು. ಮದುವೆಗೆ ಮೊದಲು ಮಾಯಾಳ ಹೆಸರು ಸುಮತಿ ಎಂದಿತ್ತು. ಮಾಧವ ಅಂದು ಸುಮತಿಯ ಮುಖವನ್ನು ಮಂತ್ರಮುಗ್ಧನಾಗಿ ನೋಡುತ್ತಾ ಹೇಳಿದ್ದ, “ನೀನಂತೂ ಒಳ್ಳೆ ಮಾಯಾವಿ ಹಾಗೆ ಕಾಣ್ತೀಯ. ನಾನು ನಿನ್ನನ್ನು ಮಾಯಾ ಅಂತ ಕರೀಲಾ?”

ಸುಮತಿಯ ನಗು ದೇವಸ್ಥಾನದ ಗಂಟೆ ಬಾರಿಸಿದಂತೆ ಇತ್ತು. “ನಿಮಗೆ ಏನು ಇಷ್ಟವೋ ಹಾಗೆ ಕರೀರಿ. ನನ್ನನ್ನೇ ನಿಮಗೆ ಅರ್ಪಿಸಿಕೊಂಡಿದೀನಿ. ಹೆಸರು ಏನು ಮಹಾ. ಷೇಕ್ಸ್ ಫಿಯರ್‌ ಈ ವಿಷಯ….”

“ಗುಲಾಬಿಯನ್ನು ಯಾವ ಹೆಸರಿನಿಂದ ಕರೆದರೂ ಅದರಿಂದ ಗುಲಾಬಿಯ ವಾಸನೆಯೇ ಬರುತ್ತೆ. ನೀನು ತುಂಬಾ ಜಾಣೆ. ಅಂದಹಾಗೆ ಮಾಯಾ ಅನ್ನೋ ಹೆಸರು ಹೇಗನಿಸಿತು?” ಎಂದ ಮಾಧವ.

“ಈಗಾಗಲೇ ಕರೆದಿದ್ದೀರಲ್ಲಾ. ಚೆನ್ನಾಗೇ ಇದೆ,” ಸುಮತಿ ಅಂದರೆ ಮಾಯಾ ನಗುತ್ತಾ ಹೇಳಿದಳು.

“ಮಾಯಾ ಅನ್ನುವ ಹೆಸರನ್ನೇ ಯಾಕೆ ಹೇಳಿದಿರಿ?” ಮತ್ತೆ ಕೇಳಿದಳು.

“ಗೊತ್ತಿಲ್ಲ, ಮೊದಲಿನಿಂದಲೂ ನನಗೆ ಈ ಹೆಸರು ತುಂಬಾ ಇಷ್ಟ,” ಎಂದ.

ಹಾಗಾದರೆ ಈ ಮಾಯಾ ಮಾಧವನ ಪ್ರಿಯತಮೆ. ಬಹಳ ಹಳೆಯ ಪ್ರೀತಿ. ಅಂದು ಪ್ರಾಮಾಣಿಕವಾಗಿ ಹೇಳಿದ ಮಾತು ಇಂದು ಸುಳ್ಳು ಮತ್ತು ಮೋಸ ಎಂದು ಸಾಬೀತಾಯಿತು. ಈಗ ಮುಂದಿನ ಹೆಜ್ಜೆ ಏನು?

ಅಡುಗೆ ಮಾಡಿದ್ದಾಗಿತ್ತು. ಆದರೆ ಊಟ ಮಾಡಲಾಗಲಿಲ್ಲ. ಕಾಫಿ ಮಾಡಿದ್ದಳು. ಅದು ತಣ್ಣಗಾಗಿತ್ತು. ಕುಡಿಯಲು ಆಗಲಿಲ್ಲ. ನೆಟ್‌ವರ್ಕ್‌ ಸರಿ ಇರದ ಕಾರಣ ಅಮ್ಮನ ಮೊಬೈಲ್ ‌ರೀಚ್‌ ಆಗಲೇ ಇಲ್ಲ, ಅಮ್ಮನ್ನ ಬಿಟ್ಟರೆ ಬೇರೆ ಯಾರು ಸಲಹೆ ಕೊಡುತ್ತಾರೆ? ಎಲ್ಲಾ ವಿಷಯ ತಿಳಿಸಿ ಅಮ್ಮನಿಗೆ ವಿವರಿಸಬೇಕು. ಏನೇ ಇರಲಿ, ಅವಳು ಸಾಮಾನ್ಯಳಂತೂ ಆಗಿರಲಿಲ್ಲ. ಇದೇ ಮಂಚದ ಮೇಲೆ ಮಾಧವನ ಪಕ್ಕ ಮಲಗಲು  ಸಾಧ್ಯವೇ? ಈ ವಿಷಯ ಯೋಚಿಸಿ ಅವಳ ದೇಹ ಕಂಪಿಸಿತು. ಮಾಯಾಗೂ ಈ ಹಾಸಿಗೆಗೂ ಏನಾದರೂ ಸಂಬಂಧವಿದೆಯೇ?

“ಹಲೋ ಮಾಯಾ,” ಆಫೀಸಿನಿಂದ ಬರುತ್ತಿದ್ದಂತೆ ಮಾಧವ ಬ್ರೀಫ್‌ಕೇಸನ್ನು ಒಂದು ಕಡೆ ಎಸೆದು ಮಾಯಾಳನ್ನು ಎಳೆದುಕೊಳ್ಳುವ ಪ್ರಯತ್ನ ಮಾಡುತ್ತಾ, “ನಿಜವಾಗಲೂ ಆಫೀಸಿನಲ್ಲಿ ಇರಲು ಮನಸ್ಸೇ ಇರಲಿಲ್ಲ. ಮತ್ತೆ ಮತ್ತೆ ಗಡಿಯಾರ ನೋಡ್ತಿದ್ದೆ. ನಿನಗೂ ನನ್ನ ನೆನಪು ಬಂದಿತ್ತು ಅಲ್ವಾ ಮಾಯಾ ಮೇಮ್ ಸಾಹೇಬ್‌?”

ಮಾಯಾ ನುಣುಚಿಕೊಳ್ಳುತ್ತಾ ಹೇಳಿದಳು, “ನೀವು ಮಾಯಾ ಅಂತ ಕರೀಬೇಡಿ. ಸುಮತಿ ಅಂತಲೇ ಕರೀರಿ.”

“ಯಾಕೆ?” ಮಾಧವನಿಗೆ ಅಚ್ಚರಿಯಾಯಿತು.

“ಈ ಹೆಸರು ನನರೆ ಯಾರದೋ ಎಂಜಲು ಅನ್ನಿಸುತ್ತೆ.”

“ನಿನ್ನ ಮಾತು ಏನೂ ಅಂತ ಗೊತ್ತಾಗ್ತಿಲ್ಲ,” ಮಾಧವನ ಉಕ್ಕುತ್ತಿದ್ದ ಪ್ರೀತಿಯ ಹಾಲಿಗೆ ತಣ್ಣೀರು ಸುರಿದಂತಾಯಿತು.

“ನೀವು ಕೈಕಾಲು ತೊಳೆದುಕೊಳ್ಳಿ, ನಾನು ಕಾಫಿ ತರ್ತೀನಿ.” ಎಂದಳು.

“ಸಿನಿಮಾದಲ್ಲಿ ಹೆಂಡತಿ ಗಂಡನಿಗೆ ಅಂಟಿಕೊಂಡಿರುತ್ತಾಳೆ.”

“ಇಡೀ ಜೀವನ ಸಿನಿಮಾದ ಹಾಗೆ ಇದ್ದರೆ,” ಮಾಯಾ ತಿರುಗಿ ನೋಡಿ ಹೇಳಿದಳು,

“ಜೀವನದಲ್ಲಿ ಬಹಳ ಏರಿಳಿತಗಳು ಬರುತ್ತವೆ.”

ಏನೋ ಎಡವಟ್ಟಾಗಿದೆ ಎಂದು ಮಾಧನಿಗೆ ಅನಿಸಿತು. ಏನೆಂದು ಅವನಿಗೆ ಅರ್ಥವಾಗಲಿಲ್ಲ. ಬೆಳಗ್ಗೆ ನಗುಮುಖದ, ಉಲ್ಲಾಸಭರಿತಳಾಗಿದ್ದ ಮಾಯಾಳನ್ನು ಬೀಳ್ಕೊಂಡಿದ್ದ. ಅವಳು ಇವಳಲ್ಲ. ಅವಳ ಅವಳಿ ಸೋದರಿಯೇನಾದರೂ ಇರಬಹುದೇ?

ರಾತ್ರಿ ಊಟದ ಹೊತ್ತಿನವರೆಗೂ ಮಾಧವ ಅವಳನ್ನು ನಗಿಸುವ ಪ್ರಯತ್ನ ಮಾಡಿದ, ಆದರೆ ಎಲ್ಲ ವಿಫಲವಾಯಿತು.

ಮಾಯಾ ಇದ್ದಕ್ಕಿದ್ದಂತೆ ಯಾಕೆ ತಣ್ಣಗಾಗಿದ್ದಾಳೋ? ಅವನಿಗೆ ಚಿಂತೆಯಾಯಿತು.

“ನಡಿ ಮಲಗುವ ಹೊತ್ತಾಯ್ತು. ಉಳಿದ ಕೆಲಸ ನಾಳೆ ಮಾಡು,” ಎಂದ.

“ಇಲ್ಲ, ನೀವು ನಡೀರಿ, ನಾನು ಕೆಲಸ ಮುಗಿಸಿ ಬರ್ತೀನಿ,” ಗಂಡ ಹಿಡಿದಿದ್ದ ಕೈಯನ್ನು ಬಿಡಿಸಿಕೊಳ್ಳುತ್ತಾ ಮಾಯಾ ನುಡಿದಳು.

“ಯಾಕೆ ಹಟ ಮಾಡ್ತಿದೀಯ? ನಾನು ಕ್ಲೀನ್‌ ಮಾಡ್ತೀನಿ. ನನಗೆ ಅಭ್ಯಾಸವಿದೆ,” ಸಿಡುಕುತ್ತಾ ಹೇಳಿದ.

“ನೀವೇನೂ ಚಿಂತೆ ಮಾಡಬೇಡಿ. ಈಗ ಮಾಯಾ ಬಂದಿದ್ದಾಳಲ್ಲ,” ವ್ಯಂಗ್ಯವಾಗಿ ನುಡಿದಳು.

ಮಾಧನಿಗೆ ಅರ್ಥವಾಗಲಿಲ್ಲ. ಮಾತಾಡದೆ ಭುಜ ಕುಣಿಸಿ ಮೌನವಾಗಿ ಹೋಗಿ ಹಾಸಿಗೆ ಮೇಲೆ ಮಲಗಿದ.

ತುಂಬಾ ಹೊತ್ತಾದರೂ ಮಾಯಾ ಬರದಿದ್ದಾಗ ಎದ್ದು ಬಂದು ನೋಡಿದ. ಮಾಯಾ ಸೋಫಾ ಮೇಲೆ ಕುಳಿತು ಪತ್ರಿಕೆ ಓದುತ್ತಿದ್ದಳು.

“ಅರೆ, ಈಗಲಾದರೂ ಬಾ,” ಎಂದ.

“ನನಗೆ ಮಲಗುವ ಮೊದಲು ಓದುವ ಅಭ್ಯಾಸ ಇದೆ. ನೀವು ಮಲಗಿ, ನಾನು ಸ್ವಲ್ಪ ಹೊತ್ತಿಗೆ ಬರ್ತೀನಿ,” ಎಂದಳು ಮಾಯಾ.

“ಅದ್ಹೇಗಾಗುತ್ತೆ? ನೀನಿಲ್ಲದೆ ಮಲಗಿದ್ರೆ ನನಗೆ ನಿದ್ರೆ ಬರೋದಿಲ್ಲ.” ಅವನು ಅಸಹನೆಯಿಂದ ಹೇಳಿದ.

“ಅಭ್ಯಾಸ ಮಾಡಿಕೋಬೇಕು.”

“ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತೆ.” ಮಾಧವ ಅವಳ ಕೈಯಲ್ಲಿದ್ದ ಪತ್ರಿಕೆಯನ್ನು ತೆಗೆದುಕೊಂಡು ಪಕ್ಕಕ್ಕಿಟ್ಟು ಅವಳನ್ನು ಮೇಲೆಬ್ಬಿಸಿದ.

“ಬಿಡಿ ನನ್ನ,” ಮಾಯಾ ರೇಗಿದಳು.

“ಬಿಡೋದಿಕ್ಕೆ ಹಿಡಿದುಕೊಂಡಿಲ್ಲ,” ಎಂದ ಮಾಧವ.

ಹಾಸಿಗೆ ಮೇಲೆ ಮಲಗಿದಾಗ ಮಾಧವ ಅವಳ ಬಳಿ ಬರಲು ಯತ್ನಿಸಿದಾಗ ಅವಳು ಪಕ್ಕಕ್ಕೆ ಸರಿದಳು, “ನನಗೆ ಹುಷಾರಿಲ್ಲ. ದಯವಿಟ್ಟು ನನಗೆ ತೊಂದರೆ ಕೊಡಬೇಡಿ.” ಎಂದಳು.

“ಏನು ಈ ರೀತಿ ಮಾತಾಡ್ತೀಯ ನೀನು ಮಾಯಾನೇ ತಾನೇ?” ಎಂದ.

“ನನ್ನನ್ನು ಸುಮ್ಮನೆ ಬಿಟ್ಟುಬಿಡಿ,” ಅವಳು ಕೋಪದಿಂದ ಹೇಳಿದಳು.

ಮಾಧವನಿಗೆ ಇದೆಲ್ಲಾ ಹಿತವಾಗಲಿಲ್ಲ. ಹೆಂಡತಿಗೆ ಅನೇಕ ರೂಪಗಳಿರುತ್ತವೆ ಎಂದು ಯಾರೋ ಗೆಳೆಯರು ಮೊದಲೇ ಎಚ್ಚರಿಸಿದ್ದರು. ಅವಳನ್ನು ಯಾರೂ ಎಂದೂ ಅರ್ಥ ಮಾಡಿಕೊಂಡಿಲ್ಲ. ಇದರ ಬಗ್ಗೆ ಅನೇಕ ಸಂಶೋಧನೆಗಳಾಗಿವೆ. ಗ್ರಂಥಗಳನ್ನೂ ಬರೆದಿದ್ದಾರೆ.

ಇದೆಲ್ಲಾ ಮಾಧವನಿಗೆ ಸಾಧ್ಯವಿಲ್ಲ. ಅವನದು ಮೃದು ಸ್ವಭಾವ. ಸೌಮ್ಯವಾದ ನಗುಮುಖದ ವ್ಯಕ್ತಿ. ಈ ಸ್ವಭಾವವೇ ಸುಮತಿಗೆ ಇಷ್ಟವಾಗಿದ್ದು. ಅವನು ಮೌನವಾಗಿ ಮುದುರಿಕೊಂಡು ಮಲಗಿದ. ಇಬ್ಬರಿಗೂ ಪರಸ್ಪರರಿಗೆ ನಿದ್ರೆ ಬಂದಿಲ್ಲವೆಂಬುದು ಗೊತ್ತಾಗಿತ್ತು. ಇಬ್ಬರೂ ಮಗ್ಗಲು ಬದಲಿಸುತ್ತಾ ತಂತಮ್ಮ ವಿಚಾರಗಳಲ್ಲಿ ಮುಳುಗಿದರು. ನಿದ್ರೆಯ ಜೋಂಪು ಹತ್ತಿತ್ತು. ಮಾಧವ ಬೆಚ್ಚಿ ಎದ್ದ. ಮಾಯಾ ಹಾಸಿಗೆಯ ಮೇಲಿರಲಿಲ್ಲ. ಎದ್ದು ಹೋಗಿ ಅಡುಗೆ ಮನೇಲಿ ಇಣುಕಿದ. ಅವಳು ಕಾಫಿ ಮಾಡುತ್ತಿದ್ದಳು. ಮಾಧವ ನಿಟ್ಟುಸಿರುಬಿಟ್ಟ.

ಆಫೀಸಿಗೆ ಹೋಗುವವರೆಗೂ ಇಬ್ಬರ ನಡುವೆ ಯಾವ ಮಾತೂ ಆಗಲಿಲ್ಲ. ಮಾಯಾ ಊಟದ ಡಬ್ಬಿ ಕೊಟ್ಟಳು. ಮಾಧವ ಕೇಳಿದ್ದಕ್ಕೆಲ್ಲಾ `ಹೌದು’ ಅಥವಾ `ಇಲ್ಲ’ ಇಷ್ಟೇ ಉತ್ತರ ಬರುತ್ತಿತ್ತು ಅವಳಿಂದ.

ಮಾಯಾ ನಿರ್ಧರಿಸಿದ್ದಳು. ಅವಳ ಹೃದಯಕ್ಕೆ ಭಾರಿ ಪೆಟ್ಟಾಗಿತ್ತು. ಅವಳಿಗೆ ಈ ಮನೆಯಲ್ಲಿ ಮಾಧವನ ಜೊತೆಗಿರಲಾಗದು. ಎರಡನೇ ಪತ್ನಿ ಎಂದು ಹೇಳಿಸಿಕೊಳ್ಳಲು ಇಷ್ಟವಿಲ್ಲ. ಮನಸ್ಸು ಗಟ್ಟಿ ಮಾಡಿಕೊಂಡು ಅಮ್ಮನಿಗೆ ಫೋನ್‌ ಮಾಡಿದಳು.

“ಅಮ್ಮಾ” ಮಾಯಾ ಅಳುತ್ತಾ, “ನೀನು ಅಪ್ಪ ತಕ್ಷಣ ಇಲ್ಲಿಗೆ ಬನ್ನಿ. ನಾನಿಲ್ಲಿರೊಲ್ಲ….” ಎಂದಳು.

“ಏನಾಯಿತು ಮಗಳೇ? ಇದುವರೆಗೂ ಎಲ್ಲಾ ಸರಿಯಾಗಿತ್ತು ತಾನೇ?” ತಾಯಿ ಗಾಬರಿಯಿಂದ ನುಡಿದಳು.

“ಎಲ್ಲಾ ಮೋಸ, ಕಪಟ, ಫೋನಿನಲ್ಲಿ ಏನೂ ಹೇಳಕ್ಕಾಗಲ್ಲ, ನೀವಿಬ್ಬರೂ ಬನ್ನಿ, ನಾನು ತಯಾರಾಗಿದ್ದೀನಿ,” ಎಂದಳು.

“ಮಗಳೇ ಅವಸರದಲ್ಲಿ ಮಾಡಿದ ಕೆಲಸ ಸರಿಯಾಗೋದಿಲ್ಲ. ಸ್ವಲ್ಪ ಧೈರ್ಯ ತಂದುಕೊ. ತಿಳಿವಳಿಕೆಯಿಂದ ಕೆಲಸ ಮಾಡು.

“ನಾನು ತಕ್ಷಣ ಹೊರಡಕ್ಕಾಗಲ್ಲ. ಅಪ್ಪನ್ನ ಮುಂದಿನವಾರ ಕಳಿಸ್ತೀನಿ. ನಿನಗೇ ಗೊತ್ತು. ಏನಾದರೂ ಅಲ್ಲ ಸಲ್ಲದ ವಿಷಯ ಕೇಳಿದರೆ ಅವರ ರಕ್ತದೊತ್ತಡ ಜಾಸ್ತಿಯಾಗುತ್ತೆ.”

“ಆಯ್ತಮ್ಮ, ಅಪ್ಪನಿಗೆ ತೊಂದರೆ ಕೊಡೋದು ಬೇಡ, ನಾನೇ ಏನಾದರೂ ಪರಿಹಾರ ಹುಡುಕ್ತೀನಿ,” ಎಂದಳು.

“ಮಗು ನಿನ್ನ ಆರೋಗ್ಯ ಜೋಪಾನ.” ತಾಯಿ ಮುಂದೆ ಮಾತನಾಡಲು ಅವಕಾಶ ಕೊಡಲು ಇಷ್ಟವಿಲ್ಲದೆ ಮಾಯಾ ಫೋನಿಟ್ಟಳು.

ಮುಂದೆ ಏನು ಮಾಡಬೇಕೆಂದು ಯೋಜನೆ ಹಾಕಿದಳು. ಮಾಧವ ಬರುತ್ತಿದ್ದಂತೆ ಅವನ ಮೇಲೆ ಆಕ್ರಮಣ ಮಾಡುವುದು. ತಪ್ಪಿಸಿಕೊಳ್ಳುವ ಯಾವ ಅವಕಾಶವನ್ನೂ ಕೊಡಬಾರದು.

ಮಾಧವ ಆಫೀಸಿನಿಂದ ಬಂದಾಗ ಆತಂಕವನ್ನೆಲ್ಲಾ ಮರೆತು ಸಂತೋಷದಿಂದಿದ್ದ. ಬ್ರೀಫ್‌ಕೇಸನ್ನು ಎಸೆದು ಮಾಯಾಳನ್ನು ಬರಸೆಳೆದು, “ಹಾಯ್‌,” ಎಂದ.

“ಬಿಡಿ” ಎಂದಳು ಮಾಯಾ.

“ಬಹಳ ಸಂತೋಷದ ವಿಷಯ ತಂದಿದೀನಿ. ಹೆಡ್‌ ಆಫೀಸಲ್ಲಿ ಏನೋ ವಿಚಾರಣೆ ನಡೀತಿದೆ. ನಾನೂ ಕೂಡಾ ಹೇಳಿಕೆ ಕೊಡಬೇಕಾಗಿದೆ. 3-4 ದಿನಗಳಾಗುತ್ತವೆ. ನಮ್ಮ ಕಂಪನಿಯ ಅತಿಥಿಗೃಹ ತುಂಬಾ ದೊಡ್ಡದಾಗಿದೆ. ನೀನು ನನ್ನ ಜೊತೆ ಬಾ, ಚೆನ್ನಾಗಿರುತ್ತೆ.” ಎಂದ.

“ನಾನೂ ಎಲ್ಲಿಗೂ ಬರಲ್ಲ. ನೀವು ಹೋಗಿ ನನಗೆ ಇಲ್ಲೇ ಬಹಳ ಕೆಲಸವಿದೆ. ಅಲ್ಲದೆ ನನ್ನ ಆರೋಗ್ಯ ಕೂಡಾ ಚೆನ್ನಾಗಿಲ್ಲ,” ಮಾಯಾ ತನ್ನನ್ನು ಬಿಡಿಸಿಕೊಳ್ಳುತ್ತಾ ಹೇಳಿದಳು.

ಮಾಧವನ ಮುಖ ಇಳಿದುಹೊಯಿತು. ಉತ್ಸಾಹವೆಲ್ಲಾ ಮಾಯವಾಯಿತು. ಮಾಯಾಳ ಹಟದ ಮುಂದೆ ಅವನೇನೂ ಮಾಡಲಾಗಲಿಲ್ಲ. ಮರುದಿನ ಮಾಧವ ಹೋರಟು ಹೋದ. ಮಾಧವನ ತಂಗಿ ರತ್ನಾಳ ಜೊತೆ ಮಾಯಾಗೆ ಸ್ನೇಹ ಬೆಳೆದಿತ್ತು. ಅವಳು ಕಾಲೇಜಿಂದ ಬಂದಿರಬಹುದು. ಬಹುಶಃ ಅವಳು ಏನಾದರೂ ಹೇಳಬಹುದು ಎಂದು ರತ್ನಾಳಿಗೆ ಫೋನ್‌ ಮಾಡಿದಳು. “ಹಾಯ್‌ ರತ್ನಾ.”

“ಹಾಯ್‌ ಅತ್ತಿಗೆ, ನಿಮಗೆ 100 ವರ್ಷ ಆಯುಸ್ಸು. ನಾವೆಲ್ಲರೂ ನಿಮ್ಮ ವಿಷಯವನ್ನೇ ಮಾತಾಡ್ತಿದ್ದೆವು,” ರತ್ನಾ ಖುಷಿಯಿಂದ ಹೇಳಿದಳು.

“ನಿಜವಾಗಲೂ? ನಿನ್ನ ಒಂದು ಮಾತು ಕೇಳಬೇಕಿತ್ತು.”

“ಹೂಂ ಕೇಳಿ,” ರತ್ನಾ ಹೇಳಿದಳು.

“ನಿಮ್ಮಣ್ಣನ ಸ್ನೇಹಿತರಿಗೆ ಕಾರ್ಡು ಕಳಿಸಬೇಕೂಂತಿದೀನಿ. ಕೆಲವರ ಹೆಸರು ಹೇಳಿದ್ದಾರೆ, ಅವರು ಕಂಪನಿ ಕೆಲಸದ ಮೇಲೆ ಹೊರಗೆ ಹೋಗಿದ್ದಾರೆ, ನೀನು ಹೇಳಕ್ಕಾಗುತ್ತಾ?” ಎಂದು ಕೇಳಿದಳು.

“ಆಯ್ತು ಅತ್ತಿಗೆ,” ಎಂದು ಹೇಳಿ ರತ್ನಾ ಕೆಲವು ಹೆಸರು ಹೇಳಿದಳು.

“ಕೆಲವು ಹುಡುಗಿಯರೂ ಇರಬಹುದಲ್ವಾ?” ಮಾಯಾ ಕೇಳಿದಳು.

“ಹೌದು ಅಣ್ಣನಿಗೆ ಹುಡುಗಿಯರೂ ಸ್ನೇಹಿತರಾಗಿದ್ದರು,” ಎಂದು ಹೇಳಿ ರತ್ನಾ ಕೆಲವು ಹೆಸರು ಹೇಳಿದಳು. ಮಾಯಾ ಅನ್ನೋ ಹೆಸರು ಮಾತ್ರ ಇರಲಿಲ್ಲ.

“ಯಾರಾದರೂ ಮಾಯಾ ಗೀಯಾ ಅಂತ ಇಲ್ವಾ?” ಮಾಯಾ ಕೇಳಿದಳು.

“ಇಲ್ಲ, ಮಾಯಾ ಅಂತ ಯಾರೂ ಇಲ್ಲ. ಯಾಕೆ ಏನಾಯ್ತು?” ರತ್ನಾ ವಿಚಾರ ಮಾಡುತ್ತಾ ಕೇಳಿದಳು.

“ಏನಿಲ್ಲ, ಹೀಗೆ ಏನೋ ಹೇಳ್ತಿದ್ದರು. ಮಾಯಾ, ಛಾಯಾ…”

“ನನಗಂತೂ ನೆನಪಿಲ್ಲಾ. ಅಮ್ಮನ್ನ ಕೇಳಲಾ?” ಎಂದಳು ರತ್ನಾ.

“ಬೇಡ ಬಿಡು,” ಎಂದು ಹೇಳಿ ಮುಂದೆ ಬೇರೇನೋ ಮಾತನಾಡಿ ಫೋನಿಟ್ಟಳು. ತಂಗಿ ಬಿಟ್ಟುಕೊಡುತ್ತಾಳಾ? ಮುರಳಿ ಮಾಧವನ ಆಪ್ತ ಸ್ನೇಹಿತ. ಅವನನ್ನು ಕೇಳುವುದೇ? ಮಾಯಾಗೆ ಸಂಕೋಚವಾಯಿತು. ಆದರೆ ಹೃದಯದಲ್ಲೇಳುತ್ತಿದ್ದ ಬಿರುಗಾಳಿಯಿಂದ ಏನು ಬೇಕಾದರೂ ಮಾಡಲು ಸಿದ್ಧಳಿದ್ದಳು. ಮುರಳಿ ಮನೆಯಲ್ಲೇ ಭೇಟಿಯಾಗಿದ್ದು, ಚೆನ್ನಾಗಿ ಮಾತನಾಡಿದ್ದ. ಮಾಯಾ ಡೈರೀಲಿ ಹುಡುಕಿದಳು. ಅವನ ನಂಬರ್‌ ಸಿಕ್ಕಿತು. ಫೋನ್‌ ಮಾಡಿದಳು.

“ಮುರಳೀನಾ?” ಮಾಯಾಳ ದನಿಯಲ್ಲಿ ಅನುಮಾನವಿತ್ತು.

“ಅರೆ ಜಯಾ ಯಾವಾಗಿನಿಂದಾ ನನ್ನ ಅಂದರೆ ನಿನ್ನ ಭಾವೀ ಪತೀನ ಹೆಸರು ಹಿಡಿದು ಕರೆಯೋಕೆ ಶುರು ಮಾಡಿದೆ?”

“ಮುರಳಿಯವರೇ, ನಾನು ಜಯಾ ಅಲ್ಲ. ಮಾಧವರ ಮನೆಯಿಂದ ಮಾತಾಡ್ತಿದೀನಿ.”

“ಓಹೋ ಕ್ಷಮಿಸಿ, ನನಗೆ ಗುರುತು ಸಿಗಲಿಲ್ಲ. ಅಲ್ಲದೆ, ಜಯಾ ಕೂಡ ತಲೆಹರಟೆ ಮಾಡತ್ತಿರುತ್ತಾಳೆ.”

“ನೀವು ಅದೃಷ್ಟವಂತರು,” ಎಂದಳು ಮಾಯಾ.

“ಏನು ಫೋನ್‌ ಮಾಡಿದ್ದು. ಮಾಧವನಿಂದ ಫೋನ್‌ ಬಂದಿಲ್ಲವೇ?”

“ಇಲ್ಲ ಆ ರೀತಿ ಏನೂ ಇಲ್ಲ. ನಾನು ಒಂದು ಪಟ್ಟಿ ಮಾಡ್ತಾ ಇದ್ದೆ. ಸ್ನೇಹಿತರು ಮತ್ತು ನೆಂಟರದು. ಕೆಲವರ ಹೆಸರು ನೆನಪಿಲ್ಲ, ಬಹುಶಃ ನಿಮಗೆ ನೆನಪಿರಬಹುದು.”

“ಹೇಳಿ ನನ್ನಿಂದೇನಾದರೂ ಸಹಾಯವಾಗಬಹುದು.”

“ಕೆಲವು ಹೆಸರುಗಳು ಹೀಗಿದ್ದವು. ಮಾಯಾ, ಛಾಯಾ,” ಸ್ವಲ್ಪ ತಡೆದು ಹೇಳಿದಳು, “ಪೂರ್ತಿ ಹೆಸರು ನೆನಪಿಗೆ ಬರ್ತಿಲ್ಲ,” “ಇಲ್ಲ, ಆ ತರಹ ಹೆಸರಿನವರು ಯಾರೂ ನನಗೆ ನೆನಪಿಲ್ಲ.”

“ಖಂಡಿತ…..”

“ಹೌದು ಖಂಡಿತವಾಗಿ.”

`ಪ್ರಾಣ ಸ್ನೇಹಿತ’ ಹೇಗೆ ಹೇಳ್ತಾನೆ ಎಂದುಕೊಂಡಳು. ಈಗ ನೇರವಾದ ಆಕ್ರಮಣ ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಮಾಧವ ವಾಪಸ್ಸು ಬಂದಾಗ ಅವನಿಗೆ ಅನಿರೀಕ್ಷಿತವೊಂದು ಕಾದಿತ್ತು. ಮಾಯಾ ತನ್ನ ಬಟ್ಟೆಗಳನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ತಯಾರಾಗಿಟ್ಟಿದ್ದಳು.

“ಏನಿದರ ಅರ್ಥ?” ಮಾಧವ ಕೇಳಿದ.

“ನಾನು ಹೋಗಲು ತೀರ್ಮಾನಿಸಿದ್ದೇನೆ. ನಿಮ್ಮ ಜೊತೆ ಈ ಮನೇಲಿ ಈ ಮಂಚದ ಮೇಲೆ ಇರಲು ಸಾಧ್ಯವಿಲ್ಲ.”

“ಆದರೆ ಯಾಕೆ? ಈ ಮನೆ ಹಾಸಿಗೆಯಲ್ಲಿ ಕೆಟ್ಟದ್ದೇನಿದೆ?”

“ನಿಮ್ಮನ್ನೇ ಕೇಳಿಕೊಳ್ಳಿ. ಉತ್ತರ ಸಿಗುತ್ತೆ,” ಒರಟಾಗಿ ಹೇಳಿದಳು.

“ನನಗರ್ಥವಾಗಲಿಲ್ಲ.”

“ಇಷ್ಟು ಮುಗ್ಧರ ಹಾಗೆ ಆಡಬೇಡಿ. ನಿಮ್ಮ ಗುಟ್ಟು ರಟ್ಟಾಗಿದೆ. ಮಾಯಾಳ ಮೇಲೆ ಇಷ್ಟೊಂದು ಪ್ರೀತಿಯಿದ್ದರೆ ನನ್ನ ಜೀವನ ಹಾಳು ಮಾಡುವ ಅಗತ್ಯ ಏನಿತ್ತು?” ಕಟುವಾಗಿ ನುಡಿದಳು.

“ಏನು ಹೇಳ್ತಿದೀಯ. ಹುಚ್ಚು ಹಿಡಿದಿದೆಯೇನು?” ಮಾಧವ ಕೇಳಿದ.

ಮಾಯಾ ಬೀರುವಿನಲ್ಲಿದ್ದ ಕಾಗದಗಳನ್ನು ಹಿಡಿದು ತೋರಿಸಿದಳು, “ಇದೆಲ್ಲಾ ಏನು?” ಮಾಧವನ ಮೇಲೆ ಹಾಕಿದಳು. ಮಾಧವ ಒಂದು ಕಾರ್ಡನ್ನು ನೋಡಿದ. ಕೈಯಿಂದ ಹಣೆಯನ್ನು ಚಚ್ಚಿಕೊಂಡ.

“ನಾನೆಂಥ ಮೂರ್ಖ. ಈ ಕಾರ್ಡುಗಳನ್ನು ಎಸೀಬೇಕಾಗಿತ್ತು. ಏನು ಮಾಡಲಿ? ಕ್ಲೀನ್‌ ಮಾಡಲು ಸಮಯವೇ ಸಿಗಲಿಲ್ಲ.”

“ಅದರಿಂದೇನಾಗ್ತಿತ್ತು, ಎಲ್ಲಿ ತನಕ ಮುಚ್ಚಿಡ್ತಿದ್ದೀರಿ?” ಎಂದಳು.

“ವಾಸ್ತವದಲ್ಲಿ ಮುಚ್ಚಿಡುವಂತಾದ್ದೇನೂ ಇಲ್ಲ. ನೀನು ಎರಡು ನಿಮಿಷ ಶಾಂತಳಾಗಿ ನನ್ನ ಮಾತು ಕೇಳಿದರೆ ಎಲ್ಲಾ ವಿಷಯ ಹೇಳ್ತೀನಿ,” ಎಂದ. ಮಾಯಾ ಕೆಲವು ಕ್ಷಣ ವಿಚಾರ ಮಾಡಿದಳು. ನಂತರ ವಿಷಯ ತಿಳಿದುಕೊಳ್ಳಲೇ ಬೇಕು ಕೇಳಿಬಿಡೋಣ ಎಂದುಕೊಂಡಳು.

“ಆಯ್ತು ಹೇಳಿ ನಿಮ್ಮ ಪ್ರೆಮಕಥೆ. ನಾನು ಸುಲಭವಾಗಿ ನಂಬುವಷ್ಟು ಪೆದ್ದಿಯಲ್ಲ ತಿಳ್ಕೊಳ್ಳಿ,” ವ್ಯಂಗ್ಯವಾಗಿ ಹೇಳಿದಳು.

“ನಾನು ಶಾಲೆಯಲ್ಲಿ ಓದುತ್ತಿದ್ದಾಗ ನನ್ನ ಟೀಚರ್‌ ಬಗ್ಗೆ ನನಗೆ ಬಹಳ ಆಸಕ್ತಿ ಇತ್ತು. ಕಿಶೋರಾವಸ್ಥೆಯಲ್ಲಿ ಉಂಟಾಗುವ ಪ್ರೀತಿ ನಿನಗೆ ಅರ್ಥವಾಗುತ್ತಲ್ವಾ? ಏಕಮುಖ ಪ್ರೀತಿ. ಅವರ ಹೆಸರು ಮಾಯಾ. ನಾನು ಯಾವಾಗಲೂ ಅವರನ್ನೇ ನೋಡುತ್ತಿರುತ್ತಿದ್ದೆ. ಅವರು ಚೆನ್ನಾಗಿದ್ದರು.”

“ಮೇರಾ ನಾಮ್ ಜೋಕರ್‌ನಲ್ಲಿ ರಿಷಿ ಕಪೂರ್‌ ಪ್ರೀತಿ ಇತ್ತಲ್ಲ. ಹಾಗಾ?”

“ಹೌದು, ಸ್ವಲ್ಪ ಹಾಗೇನೇ. ನಾನು ಅವರ ಜನ್ಮದಿನ ತಿಳಿದುಕೊಂಡು ಒಂದು ಕಾರ್ಡ್‌ ಕಳಿಸಿದ್ದೆ, 2ನೇದು ಉಪಾಧ್ಯಾಯರ ದಿನದಂದು, ಮೂರನೇದು ವ್ಯಾಲೆಂಟೈನ್‌ ದಿವಸ. ಪ್ರತಿಸಲ ಅವರು ಮುಗುಳ್ನಕ್ಕು ಧನ್ಯವಾದ ಹೇಳುತ್ತಿದ್ದರು. ಬೇರೇನೂ ಮಾತಾಡ್ತಿರಲಿಲ್ಲ.

“ಬೇರೆ ಯಾವ ಮಾತು ಆಡ್ತಿರಲಿಲ್ವಾ?” ಅಪನಂಬಿಕೆಯಿಂದ ಕೇಳಿದಳು ಮಾಯಾ.

“ಹೌದು ಬೇರೇನೂ ಇಲ್ಲ. ಕೆಲವು ತಿಂಗಳ ನಂತರ ಅವರ ಮದುವೆಯಾಯಿತು. ನನಗೆ ಆಹ್ವಾನ ಪತ್ರಿಕೆ ಕೊಟ್ಟಿದ್ದರು. ನನ್ನ ಹೃದಯ ಒಡೆದುಹೋಯಿತು. ಅಂದರೂ ಅವರ ನೆನಪು ಮಾತ್ರ ಹೋಗಲಿಲ್ಲ. ಯಾವಾಗಲೂ ಅವರ ನೆನಪು ಮಾಡಿಕೊಳ್ತಾ ಇದ್ದೆ. ತುಂಬಾ ನೆನಪಾದಾಗ, ಅವರಿಗಾಗಿ ಕಾರ್ಡ್‌ ತಂದು ಅವರಿಗೆ ಪ್ರೇಮಪತ್ರ ಬರೀತಿದ್ದೆ.”

“ಸುಳ್ಳು, ಬರೀ ಸುಳ್ಳು. ನಾನು ಮೂರ್ಖಳಲ್ಲ. ಅವರು ನಿಮ್ಮ ಪತ್ರಗಳಿಗೆ ಖಂಡಿತ ಉತ್ತರ ಕೊಟ್ಟಿರಬೇಕು.”

“ಸುಳ್ಳು ಅಂತಾನಾದ್ರೂ ಅಂದುಕೋ, ನಿಜ ಅಂತನಾದ್ರೂ ಅಂದುಕೋ. ನನ್ನ ಹತ್ತಿರ ಅವರ ವಿಳಾಸ ಇರಲಿಲ್ಲ. ಅವರಿಗೆ ನನ್ನ ವಿಳಾಸ ಗೊತ್ತಿರಲಿಲ್ಲ. ಇನ್ನೊಂದು ವಿಷಯ. ಅವರಿಗೆ ಕಾರ್ಡ್‌ ಕಳಿಸ್ತಿದ್ದೆ ಅಂತ ನೀನಂದುಕೊಂಡಿದೀಯ. ಹಾಗಾದರೆ ಅವೆಲ್ಲಾ ನನ್ನ ಬಳಿಯೇ ಏಕೆ ಇರುತ್ತಿದ್ದವು? ಅವರ ಹತ್ತಿರ ಯಾಕಿಲ್ಲ? ಅಷ್ಟೇ ಅಲ್ಲ ಬರೆದಿರೋ ಪತ್ರ ಯಾವುದಾದರೂ ಇಲ್ಲಿ ಸಿಕ್ತಾ?”

“ಇಲ್ಲ,” ಮಾಯಾ ಒಪ್ಪಿಕೊಂಡಳು.

“ಸ್ವಲ್ಪ ದಿನಗಳ ನಂತರ ನನ್ನ ಹುಚ್ಚು ಬಿಟ್ಟುಹೋಯಿತು. ಆದರೆ ಯಾಕೋ ಏನೋ ಬಹುಶಃ ಭಾವನೆಗಳಿಂದಾಗಿ ಈ ಕಾರ್ಡುಗಳನ್ನು ಹಾಗೇ ಇಟ್ಟುಕೊಂಡೆ. ಆಗಾಗ ಓದುತ್ತಿದ್ದೆ. ಇವು ನಿನ್ನನ್ನು ಹುಚ್ಚಳನ್ನಾಗಿ ಮಾಡುತ್ತೇಂತ ನನಗೇನು ಗೊತ್ತು?”

“ನಿಜ ಹೇಳ್ತಿದೀರಾ?” ಮಾಯಾ ಕೇಳಿದಳು.

“ಖಂಡಿತವಾಗಲೂ,” ತೆಳು ನಗೆ ಮಾಧವನ ಮುಖದ ಮೇಲೆ ಮೂಡಿತು.

“ಹೌದು ನಾನು ನನ್ನ ಹೆಂಡತೀನಾ ಮಾಯಾ ಅಂತಲೇ ಕರೀಬೇಕು ಅಂತ ನಿರ್ಧರಿಸಿದ್ದೆ. ಆದರೆ ನೀನು ಸುಮತಿ…. ಕ್ಷಮಿಸು.” “ಇಲ್ಲ, ಈಗ ನನಗೆ ನಿಮ್ಮ ಮಾಯಾ ಆಗಲು ಯಾವ ಅಭ್ಯಂತರವೂ ಇಲ್ಲ.” ಮಾಯಾ ನಸುನಗುತ್ತಾ ಹೇಳಿದಳು.

“ನಿಜವಾಗಲೂ, ನಿನಗೀಗ ಕೋಪ ಇಲ್ವಾ? ನನಗೆ ಬಹಳ ಹೆದರಿಕೆಯಾಗ್ತಿದೆ.”

“ಪ್ರೀತೀಲಿ ಆಗಾಗ ಹೀಗಾಗ್ತಿರುತ್ತೆ ” ಮಾಯಾ ಓರೇನೋಟ ಬೀರಿ ಹೇಳಿದಳು.

“ಹಾಗಾದರೆ ಈಗಲೇ ಆಗಲಿ,” ಮಾಧವ ಹತ್ತಿರ ಬಂದು ಹೇಳಿದ.

“ಏನು” ಮಾಯಾ ಪ್ರಶ್ನಿಸಿದಳು.

“ಕಾಫಿ!” ಎಂದ ಮಾಧವ.

ಕಾಫಿ ಕುಡಿಯುತ್ತಾ ಮಾಧವ ಕೇಳಿದ, “ಈಗ ಅಪ್ಪ ಅಮ್ಮನಿಗೆ ಏನು ಹೇಳ್ತೀಯ, ಅಲ್ಲಿಗೆ ಹೋಗ್ತೀಯಾ?”

“ಅರೆ ಇಲ್ಲಪ್ಪ,” ಮಾಯಾ ನಗುತ್ತಾ ಹೇಳಿದಳು, “ನನಗೆ ಅವರ ನೆನೆಪು ತುಂಬಾ ಬರ್ತಿತ್ತು ಅಂತ ಹೇಳ್ತೀನಿ.”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ