“ನೋಡು ನೋಡು….. ಸಾರ್‌ ಬೆಲ್ ‌ಮಾಡ್ತಿದ್ದಾರೆ. ಈಗ ಡೀಪ್‌ ನೆಕ್‌ ಟಾಪ್‌ ಮಿನಿ ಸ್ಕರ್ಟ್‌ ಧರಿಸಿರುವ ಟೀನಾ ಅವರ ಕ್ಯಾಬಿನ್‌ಗೆ ಹೋಗಿಬಿಡುತ್ತಾಳೆ. ಅವಳು ತನ್ನ ಕಣ್ಣು, ಕೈ ತಿರುಗಿಸುತ್ತಾ ತೋರುವ ಹಾವಭಾವಗಳಿಂದ ಅವರು ಅವಳನ್ನೇ ಎವೆಯಿಕ್ಕದೆ ನೋಡುತ್ತಾ ಕೂತುಬಿಡುತ್ತಾರೆ. ರೀ ಸಾರ್‌….. ನಮ್ಮನ್ನು ಯಾವಾಗಲಾದರೂ ಕ್ಯಾಬಿನ್‌ಗೆ ಹೀಗೆ ಕರೆಸಿಕೊಳ್ಳಬಾರದೇ? ನಾವೇನು ಅಂದವಾಗಿ ಇಲ್ಲವೇ? ಗೂಬೆಗಳ ತರಹ ಕಾಣ್ತೀವಾ? ನೀವು ಹ್ಞೂಂ ಅಂದ್ರೆ ನಾಳೆಯಿಂದಾನೇ ನಾವು ಶಾರ್ಟ್ಸ್ ಧರಿಸಿ ಬರುತ್ತೇವೆ…..”

“ಏ ಸಾಕು ಸುಮ್ನಿರೇ….. ಕೇಳಿಸಿಕೊಂಡವರು ಏನೆಂದುಕೊಂಡಾರು? ನಾವೆಂದಾದರೂ ಅಂಥ ಕಿರು ಸೈಝಿನ ಬಿಗಿ ಡ್ರೆಸ್‌ ಧರಿಸಿ ಬರುತ್ತೇವೆಯೇ? ಹಾಗೆಂದು ಇವರೇನಾದರೂ ರೂಲ್ಸ್ ‌ಮಾಡಲಿ, ಈಗಲೇ ಕೆಲಸಕ್ಕೆ ರಿಸೈನ್‌ ಮಾಡಿ ಹೋಗಿಬಿಡೋಣ.”

“ಹೋಗೆ ಸಾಕು….. ನಿನ್ನ ಗೊಡ್ಡು ಪುರಾಣ! ಸದಾ ಗಂಗಮ್ಮ ಗೌರಮ್ಮರ ಹಾಗೆ ನಾವಿದ್ದು ಸಾಧಿಸಿರುವುದೇನು? ಇಂಥ ಟೀನಾ ರೀನಾರನ್ನು ಕಂಡು ಹೊಟ್ಟೆ ಉರಿದುಕೊಳ್ಳೋದೇ ಬಂತು. ಅದೇ ನಮ್ಮ ಟೀನಾ ನೋಡು, ತನ್ನ ಹಾವಭಾವಗಳಿಂದ ಹೇಗೆ ನಮ್ಮ ಬಾಸ್‌ರನ್ನು ತನ್ನ ಬೆರಳ ತುದಿಯಲ್ಲೇ ಕುಣಿಸುತ್ತಾಳೆ…. ನಾನು ನೀನು ಇದ್ದೀವಿ…. ದಂಡಕ್ಕೆ!”

ಆಫೀಸ್‌ನಲ್ಲಿ ನಡೆಯುತ್ತಿದ್ದ ಉಮಾ ಸುಮಾರ ಈ ಮಾತುಗಳನ್ನು ಇತರ ಸಿಬ್ಬಂದಿ ಕೇಳಿ ಮುಸಿ ಮುಸಿ ನಗುತ್ತಿದ್ದರು. ಆದರೆ ಟೀನಾ ಕ್ಯಾಬಿನ್‌ನಿಂದ ಹೊರಬಂದಿದ್ದೇ ಎಲ್ಲರ ಬಾಯಿಗೂ ಬೀಗ ಬಿತ್ತು. ಟೀನಾ ಎಲ್ಲರನ್ನೂ ಕಡೆಗಣ್ಣಿನಲ್ಲೇ ಒಮ್ಮೆ ಗಮನಿಸಿಕೊಂಡು, `ಅಂತಿಂಥ ಹೆಣ್ಣು ನಾನಲ್ಲ…. ನನ್ನಂಥ ಹೆಣ್ಣು ಯಾರೂ ಇಲ್ಲ….’ ಎಂದು ಮನದಲ್ಲೇ ಗುನುಗುತ್ತಿದ್ದರೆ, `ಮುಂದಿದೆ ನಿಂಗೆ ಮಾರಿಹಬ್ಬ!’ ಎಂದು ಸಿಬ್ಬಂದಿ ಮನದಲ್ಲೇ ಶಾಪ ಹಾಕಿಕೊಂಡಂತಿತ್ತು.

ಖಾಸಗಿ ಆಫೀಸುಗಳ ಹಣೆಬರಹ

ಈ ಪರಿಸ್ಥಿತಿ ಕೇವಲ ಉಮಾ ಸುಮಾರ ಖಾಸಗಿ ಕಂಪನಿ ಒಂದರದೇ ಅಲ್ಲ, ಬದಲಿಗೆ ಎಷ್ಟೋ ಆಫೀಸುಗಳಲ್ಲಿ ನಡೆಯುವುದೇ ಹೀಗೇ. ಸೆಕ್ಷುಯಲಿ ಆ್ಯಕ್ಟಿವ್ ಆಗಿರುವಂಥ ಇಂಥ ಯುವತಿಯರು ಎಲ್ಲಿಯವರೆಗೆ ತಮ್ಮ ಬಾಸ್‌ಗಳನ್ನು ಕಿರುಬೆರಳಿನಲ್ಲಿ ಆಡಿಸುತ್ತಾ ದರ್ಬಾರು ನಡೆಸುತ್ತಾರೋ, ಅಲ್ಲಿಯವರೆಗೂ ಆ ಆಫೀಸ್‌ನ ಇತರ ತರುಣಿಯರು ಶಿಕ್ಷೆ ಅನುಭವಿಸುವುದು ತಪ್ಪಲ್ಲ. ಈ ತರಹದ ಬೋಲ್ಡ್ ಯುವತಿಯರ ಕಾರಣದಿಂದ ಸಾಧಾರಣ ತರುಣಿಯರು ಯಾವ ತರಹದ ಮೆಂಟಲ್, ಫೈನಾನ್ಶಿಯಲ್ ಹರಾಸ್ಮೆಂಟ್‌ಎದುರಿಸಬೇಕಾಗುತ್ತದೆ ಎಂಬುದನ್ನು ಗಮನಿಸೋಣವೇ?

ನಮಗೆ ಬೈಗುಳ ತಪ್ಪಿದ್ದಲ್ಲ!

ಈ ಬೋಲ್ಡ್ ಹುಡುಗಿಯರು ಎಂಥದೇ ತಪ್ಪು ಮಾಡಿರಲಿ, ಬಾಸ್‌ ಅವರನ್ನು ಬೇಗ ಬೈಯಲು ಹೋಗುವುದಿಲ್ಲ. ಬದಲಿಗೆ ಯಾರ ತಪ್ಪು ಇಲ್ಲವೋ ಅಂಥ ತರುಣಿಯರನ್ನು ಬೈದು ತಮ್ಮ ಕೋಪ ತಣಿಸಿಕೊಳ್ಳುತ್ತಾರೆ. ಒಂದು ಆ್ಯಡ್‌ ಏಜೆನ್ಸಿಯಲ್ಲಿ ಕೆಲಸ ಮಾಡುವ ಶಶಿಕಲಾ ಕುಲಕರ್ಣಿ ಹೇಳುತ್ತಾರೆ, “ನನ್ನ ಜೊತೆ ಇಂಥ ಹಲವಾರು ಹಿಂಸಕ ಪ್ರಸಂಗಗಳು ನಡೆದಿವೆ. ನನ್ನ ಹಾಟ್‌ ಕಲೀಗ್ ಒಬ್ಬಳು ಮಾಡುವ ತಪ್ಪುಗಳನ್ನು ನಿರ್ಲಕ್ಷಿಸಿ, ನಾನು ಎದುರಿಗೆ ಕಂಡ ತಕ್ಷಣ ಚೇಂಬರ್‌ಗೆ ಕರೆಸಿ, ಬಾಸ್‌ ನನ್ನನ್ನು ಬೇಕಾದಷ್ಟು ಬೈದಿದ್ದಾರೆ.

“ಆರಂಭದಲ್ಲಿ ನಾನು ಏನೂ ಹೇಳುತ್ತಿರಲಿಲ್ಲ. ಆದರೆ ನಂತರ ನನಗೇ ಅನ್ನಿಸಿತು, ಅವಳು ತಪ್ಪು ಮಾಡಿದ್ದರೆ ಆ ಕೋಪವನ್ನು  ಇವರು ನನ್ನ ಮೇಲೇಕೆ ಕಾರಬೇಕು? ಅದಾದ ಮೇಲೆ ನಾನು ಬಾಸ್‌ ಬಳಿ ಹೋಗಬೇಕಾಗಿ ಬಂದಾಗ, ನಾನು ನಿರಪರಾಧಿ ಎನ್ನುವ ಸಾಕ್ಷಿ ಪುರಾವೆ ತೆಗೆದುಕೊಂಡೇ ಹೋಗುತ್ತಿದ್ದೆ. ಆಗ ಅವರಿಗೆ ಅದರಿಂದ ನೇರವಾಗಿ ಅಪರಾಧಿ ಯಾರು ಎಂದು ಗೊತ್ತಾಗುತ್ತಿತ್ತು. “ಒಮ್ಮೊಮ್ಮೆ ಬಾಸ್‌ ಅವಳನ್ನು ನನ್ನ ಮುಂದೆಯೇ ಕರೆಸಿ ಬೈದದ್ದಿದೆ. ಇದು ನಾಟಕೀಯ ಎನಿಸಿದರೂ, ಅದರಿಂದ ನನ್ನ ಮನಸ್ಸಿಗೆ ತುಸು ಸಮಾಧಾನ ಸಿಗುತ್ತಿದ್ದುದಂತೂ ಸುಳ್ಳಲ್ಲ.”

ಶಶಿಕಲಾ ತರಹ ಇನ್ನೂ ಎಷ್ಟೋ ತರುಣಿಯರಿಗೆ ಅವರ ತಪ್ಪು ಏನೂ ಇಲ್ಲದಿದ್ದರೂ, ಬೋಲ್ಡ್ ನೆಸ್‌ ಪ್ರದರ್ಶಿಸುವ ಇತರ ಹುಡುಗಿಯರ ಕಾರಣ, ಬಾಸ್‌ರಿಂದ ವಿನಾಕಾರಣ ಬೈಗುಳ ಕೇಳಬೇಕಾಗುತ್ತದೆ.

ಹಾಟ್ಎಸ್‌, ಟ್ಯಾಲೆಂಟ್ನೋ

ಎಕ್ಸ್ ಪೋರ್ಟ್‌ ಇಂಪೋರ್ಟ್‌ನಲ್ಲಿ ಕೆಲಸ ನಿರ್ವಹಿಸುವ ಪ್ರೀತಿ ಹೇಳುತ್ತಾಳೆ, “ಯಾವುದೇ ಮೀಟಿಂಗ್‌ಗೆ ಸೀನಿಯಾರಿಟಿ, ಟ್ಯಾಲೆಂಟ್‌ ಕಾರಣ ಬಾಸ್‌ ಜೊತೆ ನಾನು ಹೊರಗೆ ಹೋಗಬೇಕಾದ ಸಂದರ್ಭ ಬಂದಾಗ ಖುಷಿಯಾಗಿ ಹೊರಡುವ ನಾನು, ಹೊಸ ಕ್ಲೈಂಟ್‌ ಮೀಟಿಂಗ್‌ಗೆಂದು ಅವರು ನನ್ನ ಈ ಹಾಟ್‌ ಕಲೀಗ್‌ನ್ನು ಕರೆದೊಯ್ದಾಗ ನನಗೆ ಕೆಂಡದಂಥ ಕೋಪ ಬರುತ್ತದೆ. ಅಷ್ಟು ಮಾತ್ರವಲ್ಲ, ಆ ಮೀಟಿಂಗ್‌ನ ವರದಿ ಇತ್ಯಾದಿ ತಯಾರಿ ಮಾಡಿ ಕ್ಲೈಂಟ್‌ನ್ನು ಒಪ್ಪಿಸಬೇಕಾದ ಸಂದರ್ಭದಲ್ಲಿ, ಅವಳ ಎದುರಿನಲ್ಲೇ `ಅವಳ ಬದಲು ನೀನು ಈ ರಿಪೋರ್ಟ್‌ ರೆಡಿ ಮಾಡಿ ಕ್ಲೈಂಟ್‌ಗೆ ಕಳುಹಿಸಿಬಿಡು. ನೀನು ಅವಳಿಗಿಂತ ಸಾಕಷ್ಟು ಸೀನಿಯರ್‌, “ಹೀಗಾಗಿ ಈ ರಿಪೋರ್ಟ್‌ ವರ್ಕ್‌ ನೀನೇ ಮುಗಿಸಿಬಿಡು,’ ಎಂದಾಗ ನನಗೆಷ್ಟು ಸಂಕಟ ಆಗಬೇಡ? `ಅವಳಿಗೆ ಏನೂ ಬರುವುದಿಲ್ಲ ಎಂದು ನಿಮಗೂ ಗೊತ್ತು. ಹೀಗಾಗಿಯೇ ರಿಪೋರ್ಟ್‌ ತಯಾರಿ ಮಾಡುವ ಕೆಲಸ ನನಗೆ ಅಂಟಿಸಿದಿರಿ. ಆದರೆ ಕ್ಲೈಂಟ್‌ಎದುರು ಮೀಟಿಂಗ್‌ ಮಾಡಲು, ಆ ಡೀಲ್ ಕ್ಲಿಕ್‌ ಆಯಿತು ಎಂದು ಇನ್‌ಕ್ರಿಮೆಂಟ್‌ ನೀಡಲು ಮಾತ್ರ ಅವಳ ಗ್ಲಾಮರ್‌ ಬೇಕಲ್ಲವೇ?’ ಎಂದು ಕೂಗಾಡಬೇಕು ಅನಿಸುತ್ತದೆ. `ಬಡವನ ಕೋಪ ದವಡೆಗೆ ಮೂಲ’ ಎಂದು ಹಲ್ಲು ಕಚ್ಚಿಕೊಂಡು ಕೆಲಸ ಬಿಡಲಾರದ ಅಸಹಾಯಕತೆಗೆ ಅಲ್ಲೇ ಉಳಿಯುತ್ತೇವೆ.”

ಬುದ್ಧಿ ಇಲ್ಲದಿದ್ದರೂ ಸಹ ಗ್ಲಾಮರಸ್‌ ಹುಡುಗಿಯರನ್ನು ಕೆಲಸಕ್ಕೆ ತೆಗೆದುಕೊಳ್ಳುವುದೇ ಕ್ಲೈಂಟ್‌ ಮೀಟಿಂಗ್‌ಗಳಲ್ಲಿ ಅವರನ್ನು ಮುಂದೆ ಛೂ ಬಿಟ್ಟು, ಥಳುಕು ಬಳುಕಿನ ಪ್ರದರ್ಶನದಿಂದ ಡೀಲ್‌ ಕ್ಲಿಕ್‌ ಮಾಡಿಸಲು ಎಂಬುದು ಎಷ್ಟೋ ಕಂಪನಿಗಳಲ್ಲಿ ನಡೆಯುವ ನಿತ್ಯ ಸತ್ಯ. ಆದರೆ ಇಂಥ ಬಿಚ್ಚಮ್ಮಂದಿರ ದೆಸೆಯಿಂದಾಗಿ ಗೌರಮ್ಮನಾಗಿರಬೇಕಾದ ಮಾನವಂತೆಯರ ಗತಿ ಏನು? ಅವರಿಗೆ ಟ್ಯಾಲೆಂಟ್‌ ಇದ್ದು ಸಹ ಕೈಗೆ ಇನ್‌ಕ್ರಿಮೆಂಟ್‌ ಬರದಿದ್ದರೆ ಮಾಡುವುದೇನು?

ವೇಗವಾಗಿ ಮೇಲೇರುವ ಸೌಲಭ್ಯಗಳು

ಇಂಥ ಹುಡುಗಿಯರು ತಮ್ಮ ಗ್ಲಾಮರ್‌ನಿಂದಾಗಿ ಖಾಲಿ ಹುದ್ದೆಗಳಲ್ಲಿ ಬೇಗ ಭರ್ತಿಯಾಗುತ್ತಾರೆ ಎಂಬುದು ಗೊತ್ತಿರುವ ವಿಷಯ. ತಮ್ಮ ಹಾಟ್‌ನೆಸ್‌ ಪ್ರದರ್ಶಿಸುತ್ತಾ ಉತ್ತಮ ಸಂಬಳ, ಸವಲತ್ತು ಪಡೆಯುತ್ತಾರೆ. ಜೊತೆಗೆ ಇವರು ಕಂಪನಿಗೆ ಹಳಬರಾಗತೊಡಗಿದಂತೆ, ಇವರ ಸಂಬಳ, ಬಡ್ತಿ, ಇನ್‌ಕ್ರಿಮೆಂಟ್‌ ಇತ್ಯಾದಿ ಹೆಚ್ಚುತ್ತಲೇ ಹೋಗುತ್ತದೆ. ಇತ್ತೀಚೆಗೆ ಒಂದು ಖಾಸಗಿ ಪಿಆರ್‌ ಏಜೆನ್ಸಿಗೆ ಸೇರಿದ ನಿಶಾ ಹೇಳುತ್ತಾಳೆ, “ನಾನು ನನ್ನ ಹಳೆಯ ಕಂಪನಿ ಬಿಡಲು ಇದೇ ಕಾರಣ. ಅಲ್ಲಿ ನಾನು ಸೇರಿ 4 ವರ್ಷಗಳಾದರೂ ನನ್ನ ಸಂಬಳ ಹೆಚ್ಚಿದ್ದು ಕೇವಲ 6 ಸಾವಿರ ಮಾತ್ರ. ಆದರೆ ಅದೇ ಆಫೀಸ್‌ನ ಬಾಸ್‌ಗೆ ಹತ್ತಿರದವಳಾದ ಹಾಟ್ ಅನಿತಾಗೆ 2 ವರ್ಷಗಳಲ್ಲೇ 6 ಸಾವಿರ ಸಂಬಳ ಹೆಚ್ಚಳವಾಯಿತು. ಆದರೆ ನಾನು ಅವಳಿಗಿಂತ ಹೆಚ್ಚು ಟ್ಯಾಲೆಂಟೆಡ್‌ ಮತ್ತು ಹೆಚ್ಚು ಕೆಲಸ ಮಾಡುತ್ತಿದ್ದೆ.”

ಯಾವ ಕಂಪನಿಯೇ ಇರಲಿ, ಸಾಧಾರಣ ಹೆಣ್ಣುಮಕ್ಕಳನ್ನು ಹೀಗೆ ಗೋಳುಗುಟ್ಟಿಸಿದರೆ ಇದು ಆರ್ಥಿಕ ಶೋಷಣೆ ಅಲ್ಲದೆ ಮತ್ತೇನು?

ಬಾಸೇ ಪ್ರತ್ಯಕ್ಷ ದೇವರು!

ವಿಷಯ ರಜೆ ಮಂಜೂರಿ ಇರಲಿ ಅಥವಾ ಬಡತಿ ಆಗಿರಲಿ, ಮಾಮೂಲಿ ಹುಡುಗಿಯರು ಹೋಗಿ ಕೇಳಿದ ತಕ್ಷಣ ಬಾಸ್‌ ಹುಬ್ಬು ಮೇಲೇರುತ್ತದೆ, ಮುಖ ಗಂಟಾಗುತ್ತದೆ. ಆದರೆ ಇಂಥ ಬೋಲ್ಡ್ ಹುಡುಗಿಯರು ಹೋಗಿ ಈ ಬಗ್ಗೆ ಕೇಳಿದಾಗ, ಇವರಿಗೆ `ತಥಾಸ್ತು’ ಬೇಗ ಸಿಗುತ್ತದೆ, ಅದು ವಿಭಾಗದಿಂದ ಆದರೂ ಸರಿಯೇ! ಇದಕ್ಕೆ ಕಾರಣ ಇವರುಗಳು ಬಾಸ್‌ನ್ನು ಪ್ರತ್ಯಕ್ಷ ದೇವರೆಂದೇ ಓಲೈಸುತ್ತಾರೆ. ಇಂಥ ಹುಡುಗಿಯರು ಪ್ರಮೋಶನ್‌ಗಾಗಿ ತಮ್ಮನ್ನು ತಾವು ಪ್ರೂವ್ ‌ಮಾಡಿಕೊಳ್ಳಬೇಕಾದ ಅಗತ್ಯವೇ ಇರುವುದಿಲ್ಲ. ಆದರೆ ಬೇರೆ ಸಾಧಾರಣ ಹುಡುಗಿಯರು ಎಷ್ಟೇ ಕಷ್ಟಪಟ್ಟಿರಲಿ, ಅವರಿಗೆ ಹಕ್ಕಿನಿಂದ ಸಿಗಬೇಕಾದ ಪ್ರಮೋಶನ್ಸ್ ಕೂಡ ಸಿಗುವುದಿಲ್ಲ. ಇನ್ನು ಇನ್‌ಕ್ರಿಮೆಂಟ್‌ ಬಗ್ಗೆ ಕೇಳಲೇಬೇಡಿ.

ಈ ಕುರಿತು ರಜನಿ ಹೇಳುತ್ತಾಳೆ, “ನನ್ನೊಂದಿಗೂ ಸಹ ಹೀಗೆ ನಡೆಯಿತು, ನನ್ನ ಹಾಟ್‌ ಸಹೋದ್ಯೋಗಿಗಿಂತ ನಾನು ಸಾಕಷ್ಟು ಸೀನಿಯರ್‌. ಆದರೆ ನಮ್ಮ ಬಾಸ್‌, ನನಗೆ ಕೊಡಬೇಕಿದ್ದ ಪ್ರಮೋಶನ್‌ನ್ನು ಅವಳಿಗೇ ಕೊಡುವುದೇ? ಅದಕ್ಕೆ ಒಂದೇ ಕಾರಣ, ಅವಳು ಬೋಲ್ಡ್ ಹಾಟ್‌! ನನ್ನಂಥ ಸಾಧಾರಣ ರೂಪಿನ ಹುಡುಗಿಗೆ ಅಲ್ಲಿ ಗೌರವ ಇಲ್ಲ ಎಂದಾಗ ನಾನೇಕೆ ಅಲ್ಲಿ ಕೆಲಸ ಮಾಡಲಿ?”

ಎದುರು ಮಾತನಾಡಿ ಉಳಿದವರುಂಟೇ?

`ಬಾಸ್‌ ಈಸ್‌ ಆಲ್ವೇಸ್‌ ರೈಟ್‌!’ ಎನ್ನುತ್ತದೆ ಆಂಗ್ಲ ನಾಣ್ಣುಡಿ. ಹಾಗಿರುವಾಗ ಬಾಸ್‌ ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ ಎಂದರೆ, `ಅಹುದಹುದು’ ಎನ್ನಲೇಬೇಕು. ಈ ಮಧ್ಯೆ ಬಾಸ್‌ ಕೃಪಾಕಟಾಕ್ಷ ಯಾವ ಹಾಟ್‌ ಬೇಬಿ ಮೇಲಿದೆಯೋ ಅವಳು ಅಲ್ಲಿ ಮರಿ ಬಾಸ್‌ಆಗುತ್ತಾಳೆ. ಅವಳು ಹೇಳಿದ್ದಕ್ಕೆ ಇಲ್ಲ ಎನ್ನಲಾದೀತೇ? ಹಾಗೆ ಎದುರು ವಾದಿಸಿ ಕೆಲಸ ಉಳಿಸಿಕೊಳ್ಳಲು ಸಾಧ್ಯವೇ? ದೇವರು ವರ ಕೊಡಬೇಕೆಂದರೆ ಈ ಪೂಜಾರಿ ಪ್ರಸನ್ನನಾಗಿ ಇರಲೇಬೇಕಷ್ಟೆ…..? ಬಾಸ್‌ಗೆ ತಾನು ನಿಕಟವರ್ತಿ ಎಂದು ತೋರಿಸಿಕೊಳ್ಳಲು ಈಕೆ ನೆಲದ ಮೇಲೆ ಕಾಲಿರಿಸದೆ ನಡೆದಾಡುತ್ತಾ ಇತರರ ಮೇಲೆ ದರ್ಪ ತೋರುತ್ತಾಳೆ. ಬೇರೆ ಸಾಧಾರಣ ಹುಡುಗಿಯರೊಂದಿಗೆ (ಹಾರ್ದಿಕದ ಮನೆ ಹಾಳಾಯ್ತು) ಮಾತನಾಡುವುದಿರಲಿ, ಈಕೆ ಅವರತ್ತ ತಿರುಗಿಯೂ ನೋಡುವುದಿಲ್ಲ. ಹೀಗಾಗಿ ಪ್ಯೂನ್ ಭರಮಣ್ಣನಿಂದ ಹಿಡಿದು, ಸೀನಿಯರ್‌ ಅಕೌಂಟೆಂಟ್‌ ಸುರೇಶ್‌ ಭಟ್‌ರವರೆಗೂ, ತಮ್ಮ ಕೆಲಸ ಆಗಬೇಕಾದಾಗ ಈಕೆಗೆ `ಜೀ ಹುಜೂರ್‌’ ಎನ್ನಲೇಬೇಕು. ಈಕೆ ನೇಲ್ ‌ಪಾಲಿಶ್‌ ತೀಡಿದ ಹೊಳೆಯುವ ಉಗುರುಗಳ ತನ್ನ ಮೋಹಕ ಬೆರಳುಗಳ ಮಧ್ಯೆ ಇವರುಗಳ ರಜೆ ಚೀಟಿ ನೀಡಿದಾಗ, ಆ ಬಾಸ್‌ ಅದನ್ನು ತಿರಸ್ಕರಿಸಲು ಸಾಧ್ಯವೇ?

ಹಾಗಾಗಿ ಇವಳ ಆಜ್ಞೆ ಮೀರುವವರು ಯಾರೂ ಇಲ್ಲ, ಇಷ್ಟು ಮಾತ್ರವಲ್ಲ ಭರಮಣ್ಣನಿಗೆ ಒಮ್ಮೆಲೇ ಈಕೆ ಮತ್ತು ಗುಮಾಸ್ತೆ ಕಮಲಮ್ಮ ಕೆಲಸ ಹೇಳಿಬಿಟ್ಟರೆ ಭರಮಣ್ಣ ಕಮಲಮ್ಮನ ಕಡೆ ತಿರುಗಿ ನೋಡುವುದೂ ಉಂಟೇ? ಏಕೆಂದರೆ ಅನುಭವಿ ಭರಮನಿಗೂ ಗೊತ್ತು, ಈ ಮೇಡಂ ಎಷ್ಟು ಕೇಪಬಲ್ ಎಂದು! ಆಫೀಸ್‌ ಕೆಲಸಕ್ಕಾಗಿ ಕಮಲಮ್ಮನಿಗೆ ಜೆರಾಕ್ಸ್ ಮಾಡಿಸಿಕೊಡುವುದಕ್ಕಿಂತ ಮೇಡಂ ಕೇಳಿದ ಕೂಲ್ ‌ಡ್ರಿಂಕ್ಸ್ ತಂದು ಕೊಡಬೇಕಾದುದು ಬಲು ಮುಖ್ಯವೆಂದು ಅವನಿಗೆ ಗೊತ್ತಿಲ್ಲವೇ……?

ಬೋಲ್ಡ್ ಹುಡುಗಿಯರೇ ಎಚ್ಚರ!

ಹೀಗೆ ಬೋಲ್ಡ್ ನೆಸ್‌ ಪ್ರದರ್ಶಿಸುವ ಹುಡುಗಿಯರ ಕುರಿತು ಒಂದು ವಿಷಯವನ್ನು ಸ್ಪಷ್ಟ ಹೇಳಲೇಬೇಕು. ಇವರುಗಳು ಮಾಡುತ್ತಿರುವುದೆಲ್ಲ 4 ದಿನಗಳ ಬೂಟಾಟಿಕೆಯಷ್ಟೆ. ಮುಂದೆ ಬರಬಹುದಾದ ಅಪಾಯದ ಎಚ್ಚರಿಕೆ ಗಂಟೆ ಬಗ್ಗೆ ಮೊದಲೇ ತಿಳಿದಿರಬೇಕಾದುದು ಲೇಸು. ಮುಂದೆ ಇವರಿಗೆ ಬರಬಹುದಾದ ಅಪಾಯ ಎಂಥದು? ಬನ್ನಿ, ನೋಡೋಣ.

4 ದಿನಗಳ ದರ್ಬಾರು : ಇಂದು ನಿಮ್ಮ ಹಿಂದೆ ಹುಚ್ಚನಂತೆ ಅಲೆಯುವ ಈ ಬಾಸ್‌, ಸದಾ ನಿಮ್ಮ ಬಗ್ಗೆ ಹೀಗೆ ಜೊಲ್ಲು  ಸುರಿಸಿಕೊಂಡಿರುತ್ತಾನೆಂಬ ಭ್ರಮೆ ಬೇಡ! ನಿಮ್ಮ ಈ ದರ್ಬಾರೆಲ್ಲ ಕೇವಲ 4 ದಿನಗಳದ್ದು ಎಂದು ನೆನಪಿಡಿ. ಯಾವಾಗ ನಿಮ್ಮ ದೇಹ ತನ್ನ ಯೌವನ, ರೂಪಲಾವಣ್ಯ ಕಳೆದುಕೊಂಡು ಗ್ಲಾಮರ್‌ ಬದಿಗೆ ಸರಿಯುವುದೋ ಬೇರೊಬ್ಬ ಪಿ.ಎ. ಆ ಸ್ಥಾನಕ್ಕೆ ಬಂದಿರುತ್ತಾಳೆ. ಆಗ ನಿಮ್ಮ ಗತಿ….. ಅಧೋಗತಿ! ನಿಮ್ಮ ಯೌವನ ಕಳೆದ ಮೇಲೂ ಈ ಬಾಸ್‌ ಎಂಬ ಪ್ರಾಣಿ ಗಂಡನಂತೆ ಪ್ರೀತಿಸುತ್ತಾನೆಂದು ಕನಸುಮನಸಿನಲ್ಲೂ ಎಣಿಸಬೇಡಿ.

ಕೆಟ್ಟ ಹೆಸರನ್ನು ಸಹಿಸಲೇಬೇಕು : ಬಾಸ್‌ನ ಕೃಪಾದೃಷ್ಟಿ ಇರುವುದರಿಂದ ಹಣದ ಹೊಳೆಯ ಜೊತೆ ನಿಮಗೆ ಬೇಕಾದ ಇನ್‌ಕ್ರಿಮೆಂಟ್‌, ಪ್ರಮೋಶನ್‌, ಆಫೀಸ್‌ನಲ್ಲಿ ಜೂನಿಯರ್‌, ಸೀನಿಯರ್‌ಗಳೆಲ್ಲರ ನಡುವೆ ಹೆಚ್ಚಿನ ಪ್ರೆಸ್ಟೀಜ್‌….. ಇವೆಲ್ಲ ಸರಿ, ಆದರೆ ಅದೇ ಸಹೋದ್ಯೋಗಿಗಳು ಮುಂದೆ ನಿಮ್ಮನ್ನು ಹೊಗಳಿ, ನೀವು ಆ ಕಡೆ ಸರಿದಿದ್ದೇ, `ಅವಳು ಬಿಡು…. ಬಾಸ್‌ಗೆ ವೆರಿ ಕ್ಲೋಸ್‌’ ಎಂದು ವ್ಯಂಗ್ಯವಾಗಿ ಏನೆಲ್ಲ ಆಡಿಕೊಳ್ಳುತ್ತಾರೆಂದು ಗೊತ್ತಿದ್ದೂ ನೀವು ತುಟಿ ಪಿಟಕ್‌ ಎನ್ನುವಂತಿಲ್ಲ. ಇಂದಿನ ದುಬಾರಿ ಯುಗದಲ್ಲಿ ಯಾರೂ ತಮ್ಮ ಸ್ವಾರ್ಥ ಸಾಧಿಸಿಕೊಳ್ಳದೆ ಬೇರೊಬ್ಬರಿಗೆ 1 ರೂ. ಸಹ ಎತ್ತಿಕೊಡುವುದಿಲ್ಲ ಎಂಬುದು ನೆನಪಿರಲಿ. ಹಾಗಿರುವಾಗ ಬಾಸ್‌ ನಿಮಗಾಗಿ ಸಾವಿರಾರು ರೂ. ಖರ್ಚು ಮಾಡಲು ಹಿಂಜರಿಯದಿರುವುದು ಸುಮ್ಮನೇ ಅಲ್ಲವಲ್ಲ? ಒಂದಲ್ಲ ಒಂದು ದಿನ ನೀವು ಅದಕ್ಕೆ ಬೆಲೆ ತೆರಲೇಬೇಕಾಗುತ್ತದೆ. ಈ ವಿಷಯ ಆಫೀಸ್‌ನ ಮುಖ್ಯ ಗಾಸಿಪ್‌ ಆಗುತ್ತದೆ.

ಸೆಕ್ಸ್ ಸಿಂಬಲ್ ಆಗಬೇಕಾದೀತು : ನಿಮ್ಮ ಇಂಥ ವ್ಯವಹಾರಗಳಿಂದ ನೀವು ಬಾಸ್‌ ಮತ್ತು ಸ್ಟಾಫ್‌ ದೃಷ್ಟಿಯಲ್ಲಿ ಕೇವಲ `ಬಣ್ಣದ ಬೀಸಣಿಗೆ’ ಆಗಿ ಉಳಿದುಹೋಗುತ್ತೀರಿ ಎಂಬುದು ನೆನಪಿರಲಿ. ಅದರಲ್ಲೂ ಬಾಸ್‌ ವಿವಾಹಿತನಾಗಿದ್ದರೇ ನೀವು ಕೇವಲ ಆತನ `…..’  ಮಾತ್ರ! ಹೀಗಾಗಿ ಬಾಸ್‌ ಕೇವಲ ತನ್ನ ಕಣ್ಣೋಟದ ತೃಪ್ತಿಗಾಗಿ ನಿಮ್ಮ ಕಡೆ ನೋಡಿದಾಗ, ಆಫೀಸ್‌ ಸ್ಟಾಫ್‌ ನಿಮ್ಮನ್ನು ಬಾಸ್‌ನ ಕೀಪ್‌ ಎಂದೇ ಗಮನಿಸುತ್ತಾರೆ.

ಕೆಲಸದ ಜೊತೆ ಕಾಮಲೀಲೆ : ಎಲ್ಲಕ್ಕೂ ದೊಡ್ಡ ಕಹಿ ಸತ್ಯ ಎಂದರೆ, ಬಾಸ್‌ ನಿಮ್ಮ ಥಳುಕಿಗೆ ಮರುಳಾಗಿದ್ದರೆ, ಬಾಸ್‌ ನಿಮ್ಮಿಂದ ಕೆಲಸ ಮಾತ್ರವಲ್ಲ ಕಾಮಲೀಲೆಯನ್ನೂ ಬಯಸುತ್ತಾನೆ ಎಂಬುದರ ಅರಿವಿರಲಿ. ಹೀಗಿರುವಾಗ ನೀವು ಕೇವಲ ಕಾಮಲೀಲೆ ನಡೆಸಿ ಹೇಗೋ ತಪ್ಪಿಸಿಕೊಳ್ಳೋಣ, ಆಫೀಸಿನ ಕೆಲಸ ಮಾಡುವುದೇ ಬೇಡ ಎಂದು ಬಯಸಿದರೆ ಅದು ಖಂಡಿತಾ ತಪ್ಪಾಗುತ್ತದೆ. ಏಕೆಂದರೆ ನಿಮ್ಮನ್ನು ಆಫೀಸಿಗೆ ಸೇರಿಸಿಕೊಂಡಿರುವುದೇ ಕೆಲಸಕ್ಕಾಗಿ.

ಗೇಟ್ಪಾಸ್ನಲ್ಲಿ ನಿಮ್ಮ ನಂಬರ್ಮೊದಲಿದ್ದೀತು : ಯಾವ ಕಂಪನಿಯೇ ಇರಲಿ, ಏಳುಬೀಳು ತಪ್ಪಿದ್ದಲ್ಲ. ಹೀಗೆ ನಷ್ಟ ಉಂಟಾದಾಗ, ಕಾಸ್ಟ್ ಕಟಿಂಗ್‌ಗಾಗಿ ಇರುವ ಸಿಬ್ಬಂದಿಯನ್ನು ತೆಗೆಯುವುದು ಅನಿವಾರ್ಯವಾಗುತ್ತದೆ. ಆಗ ನಿಮ್ಮ ಗ್ಲಾಮರ್‌ಕೆಲಸಕ್ಕೆ ಬಾರದು, ಟ್ಯಾಲೆಂಟ್ ಮುಖ್ಯವಾಗುತ್ತದೆ. ಆಗ ಗೇಟ್‌ ಪಾಸ್‌ ಲಿಸ್ಟ್ ನಲ್ಲಿ ನಿಮ್ಮ ಹೆಸರು ಮೊದಲಾದರೆ ಯಾವ ಆಶ್ಚರ್ಯವೂ ಇಲ್ಲ. ನಿಮ್ಮ ಹಾಟ್‌ನೆಸ್‌ ಕೇವಲ ಬಾಸ್‌ಗೆ ಮನರಂಜನೆಯೇ ಹೊರತು ಕಂಪನಿಗೆ ಲಾಭಕರ ಏನಲ್ಲ ಎಂಬುದನ್ನೂ ಚೆನ್ನಾಗಿ ನೆನಪಿಡಿ.

ಪರ್ಸನಲ್ ಲೈಫ್ನಲ್ಲೂ ಕಷ್ಟ ತಪ್ಪಿದ್ದಲ್ಲ : ಯಾವುದೇ ಆಫೀಸ್‌ನಲ್ಲಿ ನೀವು ನಿಮ್ಮ ಯೌವನವನ್ನು ಈ ರೀತಿ ಬಾಸ್‌ನ್ನು ಕುಣಿಸುವುದಕ್ಕಾಗಿ ಬಳಸಿದರೆ, ಅದರಿಂದ ಬರುವ ಅಪಖ್ಯಾತಿ ನಿಮ್ಮ ಪರ್ಸನಲ್ ಲೈಫ್‌ಗೆ ಬೆಂಕಿ ಹಚ್ಚುವುದರಲ್ಲಿ ತಡವಾಗದು. ಈ ಪ್ರಪಂಚ ಬಹಳ ಚಿಕ್ಕದೆಂಬುದನ್ನು ಮರೆಯದಿರಿ. ಯಾರಿಗೆ ಈ ವಿಷಯ ತಿಳಿಯಬಾರದೆಂದು ನೀವು ಬಯಸುತ್ತೀರೋ, ಎಲ್ಲಕ್ಕಿಂತ ಮೊದಲು ಅವರಿಗೇ ಈ ವಿಷಯ ಮುಟ್ಟಿರುತ್ತದೆ. ನೀವು ಅವಿವಾಹಿತೆಯಾಗಿದ್ದು, ವರಾನ್ವೇಷಣೆ ನಡೆಯುತ್ತಿದ್ದರೆ, ವರನ ಕಡೆಯವರಿಗೆ ಇದರ ಸುಳಿವು ಸಿಕ್ಕಿ ನಿಮ್ಮ ನಿಶ್ಚಯಗೊಂಡಿದ್ದ ಮದುವೆ ಮುರಿದು ಬೀಳುವುದರಲ್ಲಿ ಸಂದೇಹವಿಲ್ಲ. ವಿವಾಹಿತೆಯಾಗಿದ್ದು, ಪತಿ ಸದಾ ಹೊರಗಿನ ಟೂರಿಂಗ್‌ನಲ್ಲಿದ್ದರೆ (ಇಲ್ಲದಿದ್ದರೂ ಸಹ) ನಿಮ್ಮ ಸಾಂಸಾರಿಕ ಜೀವನ ಇದರಿಂದ ಕಲುಷಿತಗೊಂಡು ಸಂಸಾರದಲ್ಲಿ ಅಲ್ಲೋಲಕಲ್ಲೋಲ ಉಂಟಾಗಲು ತಡವಾಗದು. ವಿಚ್ಛೇದನಕ್ಕೆ ಶರಣಾದಿರೋ, ಈ ಸಮಾಜ ನಿಮ್ಮನ್ನು ಇನ್ನಷ್ಟು ತುಚ್ಛೀಕರಿಸುತ್ತದೆ.

ಆದ್ದರಿಂದ ಆಫೀಸ್‌ನಲ್ಲಿ ಸದಾ ಪ್ರೆಸೆಂಟೆಬಲ್ ಆಗಿರಿ, ಅದು ಒಳ್ಳೆಯ ಅಭ್ಯಾಸ. ಆದರೆ ಬೋಲ್ಡ್ ನೆಸ್‌, ಹಾಟ್‌ನೆಸ್‌ ಪ್ರದರ್ಶಿಸುವ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗಬೇಡಿ. ಇದರಿಂದ ಅಪಖ್ಯಾತಿ, ಅಶಾಂತಿ ತಪ್ಪಿದ್ದಲ್ಲ. ಪರಿಶ್ರಮದಿಂದ ಸಿಗುವ ಬಡತಿ, ಉನ್ನತಿ ನಿಮಗೆ ಹೆಚ್ಚಿನ ಗೌರವಾದರ, ಸಂತೃಪ್ತಿ ತಂದುಕೊಡುತ್ತವೆ. ಆಗ ನಿಮ್ಮ ಜೀವನ ನಿಜಕ್ಕೂ ಸುಖಮಯ ಆಗುತ್ತದೆ.

ಪಿ. ಪೂರ್ಣಿಮಾ 

ಕೆಲಸವೇ ಮುಖ್ಯ, ಚಮಚಾಗಿರಿಯಲ್ಲ

ಇಂಥ ವಿಪರೀತದ ಹೆಜ್ಜೆ ಇರಿಸಿ, ನೀವು ಅಲ್ಪಕಾಲಿಕ ಯಶಸ್ಸನ್ನು ಪಡೆದು, ಇಡೀ ಆಫೀಸ್‌ ನಿಮ್ಮ ಕಂಟ್ರೋಲ್‌ನಲ್ಲಿದೆ ಎಂದು ಬಾಸ್‌ ಪ್ರಿಯೆಯಾದ ನೀವು ಬೀಗಬಹುದು. ಆದರೆ ಅದು ಕ್ಷಣಿಕ! ಬೇರೆಯವರಿಗಾಗಿ ನಿಮ್ಮನ್ನು ನೀವು ದುರ್ಬಲರಾಗಿಸದಿರಿ. ಇದರಿಂದ ನಿಮಗೆ ನಷ್ಟ ತಪ್ಪಿದ್ದಲ್ಲ.

ಅದೇ ತರಹ ಈ ಗ್ಲಾಮ್ ಹಾಟ್‌ನೆಸ್‌ ಹುಡುಗಿಯರನ್ನು ಕಂಡು ಸಾಧಾರಣ ಹುಡುಗಿಯರು ಕುಗ್ಗಿ ಹೋಗಬೇಕಾದ್ದಿಲ್ಲ. ಇಂಥ ತರುಣಿಯರ ಚಲನವಲನಗಳನ್ನು ನಿರ್ಲಕ್ಷಿಸಿ ನೀವು ನಿಮ್ಮ ಪ್ರಗತಿಪರ ಕೆಲಸದತ್ತ ಗಮನಕೊಡಿ. ಕೆಲವು ಹುಡುಗಿಯರು ತಾವು ಆ ಹಾಟ್‌ ಹುಡುಗಿಯರಂತೆಯೇ ಆಗಬೇಕೆಂದು ಪ್ರಯತ್ನಿಸುತ್ತಾರೆ ಕೂಡ. ಆದರೆ ಅಪ್ಪಿತಪ್ಪಿಯೂ ನೀವು ಅಂಥ ಪ್ರಯತ್ನಕ್ಕೆ ಕೈ ಹಾಕದಿರಿ. ಬೇರೆಯವರಂತೆ ಆಗುವ ಬದಲು ನೀವು ನಿಮ್ಮತನ ಉಳಿಸಿಕೊಳ್ಳಿ, ಆಗ ಇತರ ಹುಡುಗಿಯರು ನಿಮ್ಮಂತೆ ಆಗಲು ಬಯಸುತ್ತಾರೆ!

ನೀವು ಸ್ವಯಂ ಯೋಗ್ಯತೆ ಉಳ್ಳವರಾಗಿದ್ದರೆ, ಟ್ಯಾಲೆಂಟೆಡ್‌ ಆಗಿದ್ದರೆ ಅದನ್ನು ಕೃತಕವಾಗಿ ಇತರ ವಿಧಾನಗಳಲ್ಲಿ ಹೇಳಿಕೊಳ್ಳಬೇಕಾದ ಅಗತ್ಯವೇನಿಲ್ಲ. ನಿಮ್ಮ ಕೆಲಸವೇ ಅದನ್ನು ಸಾರುತ್ತದೆ, ಚಮಚಾಗಿರಿಯ ಅಗತ್ಯ ಖಂಡಿತಾ ಇಲ್ಲ!

ಈ ಕುರಿತಾಗಿ ನಡೆದಿರುವ ಸಂಶೋಧನೆಗಳು ಏನು ಹೇಳುತ್ತವೆ ಗೊತ್ತೇ? ನಾವು ಒಳಗೊಳಗೇ ಕುಗ್ಗಿಹೋಗುತ್ತಿದ್ದರೆ ನಮ್ಮ ಆತ್ಮವಿಶ್ವಾಸ ತಗ್ಗುತ್ತದೆ. ಆಗ ನಮ್ಮ ವ್ಯಕ್ತಿತ್ವದಲ್ಲಿ ಈ ಕೆಳಗಿನ ಬದಲಾವಣೆ ಕಾಣಿಸುತ್ತವೆ :

ನಾವು ನಮ್ಮನ್ನು ಬೇರೆಯವರಿಗೆ ಹೋಲಿಸಿಕೊಂಡು, ಅವರಿಗಿಂತ ನಾವು ಕಡಿಮೆ ಎಂದು ಭಾವಿಸಿ, ನಮ್ಮನ್ನು ನಾವೇ ತುಚ್ಛೀಕರಿಸುತ್ತೇವೆ. ಇದೊಂದು ರೀತಿಯ ಮಾನಸಿಕ ಕಾಯಿಲೆ.

ಈ ರೀತಿ ನಾವು ನಕಾರಾತ್ಮಕ ಭಾವನೆಗಳಿಂದ ಕುಗ್ಗಿ ಹೋಗುತ್ತಿರುವಾಗ, ನಮ್ಮ ಪ್ರಗತಿಗೆ ನಾವೇ ಮಾರಕ ಆಗುತ್ತೇವೆ. ಇದಕ್ಕೆ ಅವಕಾಶ ಕೊಡಬೇಡಿ.

ನಮ್ಮ ಅಂತರಂಗದ ಬೆಂಕಿ ನಂದಿಸಲು ಎಷ್ಟೋ ಸಲ ನಾವು ತಪ್ಪು ಹೆಜ್ಜೆ ಇರಿಸುತ್ತೇವೆ. ಸಿಗರೇಟ್‌ ಸೇವನೆ, ಕುಡಿತ, ಅನೇಕ ಬಾಯ್‌ಫ್ರೆಂಡ್ಸ್…. ಇತ್ಯಾದಿ ಇಂಥ ಭಾವನೆಗಳಿಗೆ ಎಂದೂ ಈಡಾಗದಿರಿ.

ಹೆಚ್ಚಿನ ಪ್ರಮಾಣದ ಸ್ಟ್ರೆಸ್‌ ಭರಿಸಲಾಗದೆ ನಾವು ಅನೇಕ ರೋಗಗಳಿಗೆ ತುತ್ತಾಗುತ್ತೇವೆ.

ನಾವು ನಮ್ಮ ಸುತ್ತಮುತ್ತಲಿನ ವಾತಾವರಣದಿಂದ ಸಂತೃಪ್ತರಲ್ಲದಿದ್ದರೆ, ಅದನ್ನು ಸುಧಾರಿಸುವ ಬದಲು ಬೇರೆಯವರನ್ನು ದೂಷಿಸುತ್ತೇವೆ. ಹಾಗೆ ಮಾಡದಿರಿ.

ನಾವು ನಮ್ಮ ಹಾಗೂ ಬೇರೆಯವರ ಕುರಿತಾಗಿ ಅನಗತ್ಯ ಟೀಕೆಗೆ ತೊಡಗುತ್ತೇವೆ. ನಿಮ್ಮ ಈ ತಲೆಬಾಲವಿಲ್ಲದ ಟೀಕೆ ಟಿಪ್ಪಣಿಗಳನ್ನು ಬದಿಗೊತ್ತಿ. ಇದರಿಂದ ನಿಮಗೆ ಹಾನಿ ತಪ್ಪಿದ್ದಲ್ಲ, ಬೇರೆಯವರ ಸ್ನೇಹವನ್ನೂ ಕಳೆದುಕೊಳ್ಳುವಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ