ಕಥೆ – ಕೆ. ಪ್ರಿಯಂವದಾ
ಕಳುಹಿಸಿದವರು ಯಾರೆಂದು ತಿಳಿದಾಗ ಅಚ್ಚರಿಯೋ ಅಚ್ಚರಿ! ಹಾಗಾದರೆ ಕಳುಹಿಸಿದ್ದು ಯಾರು…?
“ಡ್ಯಾಡಿ, ಇಂದು ನೀವು ಮಮ್ಮಿಗೆ ಏನು ಗಿಫ್ಟ್ ಕೊಡುತ್ತಿದ್ದೀರಿ?” ಮೇಘನಾ ಬೆಳಗ್ಗೆ ಏಳುತ್ತಿದ್ದಂತೆ ಅತಿ ಉತ್ಸಾಹದಿಂದ ತಂದೆಯನ್ನು ಕೇಳಿದಳು.
“ಇಂದು ಏನು ವಿಶೇಷ?” ನಾನು ಹುಬ್ಬೇರಿಸಿ ಮಗಳತ್ತ ನೋಡಿದೆ.
“ನೀವು ಸರಿ ಡ್ಯಾಡಿ. ಪ್ರತಿ ವರ್ಷದ ಹಾಗೆ ಈ ಸಲ ಮರೆತುಬಿಟ್ಟಿರಾ? ಇಂದು ವ್ಯಾಲೆಂಟೈನ್ ಡೇ! ನೀವು ಪ್ರೀತಿಸುವವರಿಗೆ ಇಂದಿನ ದಿನ ಏನಾದರೂ ಉಡುಗೊರೆ ಕೊಡೋದು ಒಂದು ಪದ್ಧತಿ.”
“ಅದು ನನಗೂ ಗೊತ್ತು. ಆದರೆ ವಿದೇಶೀಯರ ಪದ್ಧತಿಯನ್ನು ನಾನೇಕೆ ಅನುಸರಿಸಬೇಕು ಅಂತೀನಿ.”
“ಡ್ಯಾಡಿ, ಇದು ಸ್ವದೇಶ ವಿದೇಶದ ವಿಷಯವಲ್ಲ, ನಮ್ಮ ಪ್ರೀತಿಯನ್ನು ವ್ಯಕ್ತಪಡಿಸೋ ರೀತಿ.”
“ನಿಜವಾದ ಪ್ರೀತಿಯನ್ನು ಪ್ರಕಟಪಡಿಸಬೇಕು ಅಂತ ನನಗೆ ಅನ್ನಿಸೋದಿಲ್ಲ. ಸೀಮಾ ಮತ್ತು ನನ್ನ ನಡುವಿನ ಪ್ರೀತಿ ಜನ್ಮಜನ್ಮಾಂತರದ್ದು.”
“ಮೇಘಾ, ಹೋಗಿ ಹೋಗಿ ನೀನು ಅವರಿಗೆ ಅರ್ಥ ಮಾಡಿಸೋಕ್ಕೆ ಪ್ರಯತ್ನಪಡುತ್ತಾ ಇದ್ದೀಯಾ?” ತಂದೆ ಮಗಳ ಮಾತಿನ ಮಧ್ಯೆ ಬಾಯಿಹಾಕುತ್ತಾ ನನ್ನ ಅರ್ಧಾಂಗಿ ಹೇಳಿದಳು, “ಹಣ ಖರ್ಚು ಮಾಡಬೇಕಾದ ವಿಷಯವನ್ನು ಇವರ ಜೊತೆ ಮಾತನಾಡೋದೇ ದಂಡ. ಇವರು 10 ರೂ.ನ ಗಿಫ್ಟ್ ಕೂಡ ನನಗೆ ತಂದು ಕೊಡೋದು ಬೇಡ.”
“ಎಂಥ ಮಾತನಾಡುತ್ತೀಯಾ ಸೀಮಾ? ನಾನು ಪ್ರತಿ ತಿಂಗಳೂ ನನ್ನ ಪೂರ್ತಿ ಸಂಬಳವೆನ್ನು ನಿನ್ನ ಕೈಗೇ ತಂದು ಕೊಡೋದಿಲ್ಲವೇನು?” ನಾನು ನೊಂದು ನುಡಿದೆ.
“ಮತ್ತೆ, ಕಾಸು ಕಾಸಿಗೂ ಲೆಕ್ಕ ಕೊಡಲಿಲ್ಲ ಅಂದರೆ ಜಗಳಕ್ಕೆ ಬರುತ್ತೀರಿ. ನನ್ನ ಸಂಬಳವಲ್ಲ ಫ್ಲಾಟ್ ಮತ್ತು ಕಾರ್‌ನ ಸಾಲದ ಕಂತು ಕಟ್ಟೋದಕ್ಕೆ ಹೊರಟು ಹೋಗುತ್ತದೆ. ನನಗೆ ಬೇಕಾದ ಹಾಗೆ ಖರ್ಚು ಮಾಡೋದಕ್ಕೆ ನೂರು ರೂಪಾಯಿ ಕೂಡ ಸಿಗೋದಿಲ್ಲ.”
“ನಿನ್ನ ಬೀರುವಿನಲ್ಲಿ ಸೀರೆಗಳ ರಾಶಿ ಇಟ್ಟುಕೊಂಡು ನನ್ನನ್ನು ದೂರುತ್ತಾ ಇದ್ದೀಯಾ? ಏನು ಕಾಲ ಬಂತಪ್ಪ, ಮಗಳ ದೃಷ್ಟಿಯಲ್ಲಿ ಗಂಡನನ್ನು ಸಣ್ಣವನನ್ನಾಗಿ ಮಾಡೋದಕ್ಕೆ ಸುಳ್ಳು ಹೇಳುತ್ತಾ ಇದ್ದೀಯಾ?”
“ಈ ನಾಟಕ ಎಲ್ಲ ಬಿಟ್ಟುಬಿಡಿ. ಬೀರುವಿನಲ್ಲಿರುನ ಸೀರೆಗಳಲ್ಲಿ ನೀವು ಕೊಡಿಸಿರೋದು ಎಷ್ಟು ಹೇಳಿ ನೋಡೋಣ. ಗೌರಿ ಹಬ್ಬಕ್ಕೆ ನನ್ನ ತವರಿನಿಂದ ಸೀರೆಗಳು ಸಿಗುತ್ತಾ ಇರೋದರಿಂದ ಸರಿ ಹೋಯಿತು. ಇಲ್ಲದಿದ್ದರೆ ನನ್ನ ಕಲೀಗ್ಸ್ ಮುಂದೆ ನಾನು ತಲೆ ತಗ್ಗಿಸಬೇಕಾಗುತ್ತಿತ್ತು.”
“ಡ್ಯಾಡಿ, ಒಂದೆರಡು ದಿನ ಮಮ್ಮಿನ ಟೂರ್ ಮಾಡಿಸಿಕೊಂಡು ಬನ್ನಿ. ಅವರಿಗೆ ಖುಷಿ ಆಗುತ್ತೆ,” ನಮ್ಮಿಬ್ಬರ ವಾದವನ್ನು ತಡೆಯುವುದಕ್ಕಾಗಿ ಮೇಘನಾ ವಿಷಯವನ್ನು ಬದಲಿಸಿದಳು.
“ನೀನು ಸುಮ್ಮನಿರು ಮೇಘಾ, ನನಗೆ ಈ ಮನೆಯ ಜಂಜಾಟದಿಂದ ಹೊರಗೆ ಹೋಗೋ ಭಾಗ್ಯ ಇಲ್ಲ ಬಿಡು,” ಸೀಮಾ ನಾಟಕೀಯವಾಗಿ ಹಣೆ ಚಚ್ಚಿಕೊಳ್ಳುತ್ತಾ ಹೇಳಿದಳು.
“ಯಾಕೆ ಸೀಮಾ, ನೀನು ಪ್ರತಿ ವರ್ಷ ಒಂದೆರಡು ವಾರ ನಿನ್ನ ತವರು ಮನೆಗೆ ಹೋಗಿ ಬರುತ್ತೀಯ ತಾನೇ?” ನಾನು ಪ್ರತಿಭಟಿಸಿದೆ.
“ಡ್ಯಾಡಿ, ನಾನು ಹೇಳುತ್ತಾ ಇರೋದು, ಯಾವುದಾದರೂ ಹಿಲ್ ಸ್ಟೇಷನ್ ಅಂದರೆ ಊಟಿ ಅಥವಾ ಮಡಿಕೇರಿ ಕಡೆ ಸುತ್ತಾಡಿ ಬರುವ ವಿಷಯ,” ಮೇಘಾ ಬಿಡಿಸಿ ಹೇಳಿದಳು.
“ಮೇಘಾ ನೀನು ನನ್ನ ಹೊಟ್ಟೆ ಉರಿಸಬೇಡ. ಬೇಸಿಗೆಯಲ್ಲಿ ನಾನು ಯಾವುದಾದರೂ ತಂಪಾದ ಸ್ಥಳಕ್ಕೆ ಹೋಗಬಹುದಲ್ವಾ ಎಂದರೆ, ನಿಮ್ಮ ಡ್ಯಾಡಿಯ ಉತ್ತರ ಏನು ಗೊತ್ತಾ? ಸ್ನಾನ ಮಾಡಿಕೊಂಡು ತಾರಸಿಯ ಮೇಲೆ ಒಣಗಿ ಹಾಕಿರುವ ಒದ್ದೆ ಬಟ್ಟೆಗಳ ಮಧ್ಯೆ ತಿರುಗಾಡಿದರೆ ಹಿಲ್ ಸ್ಟೇಷನ್‌ನಲ್ಲಿ ಸುತ್ತಾಡಿದಷ್ಟು ಮಜಾ ಸಿಗುತ್ತಂತೆ.”
“ಏಯ್, ತಮಾಷೆಗೆ ಹೇಳಿದ ಮಾತನ್ನು ಮಗಳ ಮುಂದೆ ಹೇಳಿ ಅವಳನ್ನು ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದೀಯಾ?” ನಾನು ಕೋಪದಿಂದ ಹೇಳಿದೆ.
ನನ್ನ ಕೋಪನ್ನು ಕಡೆಗಣಿಸಿ ಸೀಮಾ, ತನ್ನ ದೂರನ್ನು ಮುಂದುವರಿಸಿದಳು, “ಇವರ ಜಿಪುಣತನ ಎಷ್ಟು ಅಂದರೆ, ಎಂದಾದರೂ ಹೊರಗೆ ಊಟಕ್ಕೆ ಹೋಗೋಣ ಅಂತ ಹೇಳಿದರೆ ನನ್ನ ಕೈ ಅಡುಗೆಯನ್ನು ಹೊಗಳೋದಕ್ಕೆ ಪ್ರಾರಂಭಿಸಿಬಿಡುತ್ತಾರೆ.”
“ಮಾಮ್, ಇದು ಕಾಂಪ್ಲಿಮೆಂಟ್ ಅಲ್ವಾ?” ಮೇಘನಾ ತಾಯಿಯನ್ನು ಸಮಾಧಾನಿಸಲು ಪ್ರಯತ್ನಿಸಿದಳು. ಆದರೆ ಸೀಮಾ ತನ್ನ ದುಗುಡವನ್ನು ಹೊರಹಾಕುವ ಅವಕಾಶವನ್ನು ತಪ್ಪಿಸಿಕೊಳ್ಳಲು ಬಯಸಲಿಲ್ಲ.
“ಬರ್ತ್‌ಡೇ ಇರಲಿ ಅಥವಾ ವೆಡಿಂಗ್ ಆ್ಯನಿರ್ಸರಿ, ಇವರಿಗೆ ಸಿಹಿ ತಿಂಡಿ ಬಿಟ್ಟರೆ ಬೇರೆ ಗಿಫ್ಟ್ ಕೊಡುವ ಯೋಚನೆಯೇ ಬರೋದಿಲ್ಲ. ಪ್ರತಿಸಲ ಗುಲಾಬ್ ಜಾಮೂನ್ ಅಥವಾ ದೂಧ್ ಪೇಡಾ ತರುತ್ತಾರೆ. ಒಂದು ಪರ್ಫ್ಯೂಮ್, ಡ್ರೆಸ್, ಜ್ಯುವೆಲರಿ ಅಥವಾ ಕಡೇ ಪಕ್ಷ ಒಂದು ಬೊಕೆ, ಊಹ್ಞೂಂ…. ಅವುಗಳ ಕಡೆ ಗಮನವೇ ಇಲ್ಲ.”
“ಮೇಘಾ, ನಿನ್ನ ಮಮ್ಮಿಯ ಬಡಬಡಿಕೆಯನ್ನು ಲೆಕ್ಕಕ್ಕೆ ತಗೋಬೇಡ. ಈ ವ್ಯಾಲೆಂಟೈನ್ ಡೇ ಅನ್ನೋದು ಅವಳ ಬುದ್ಧಿಯನ್ನು ಕೆಡಿಸಿದೆ. ಒಂದು ಹೆಂಗಸಿನ ಬುದ್ಧಿ ಕೆಡಿಸೋ ಅಂತ ಡೇಯನ್ನು ನಾನು ಖಂಡಿತ ಸೆಲೆಬ್ರೇಟ್ ಮಾಡೋದಿಲ್ಲ,” ನಾನು ಕೋಪದಿಂದ ಹೇಳಿದ ಮಾತನ್ನು ಕೇಳಿ ತಾಯಿ ಮಗಳಿಬ್ಬರೂ ನನ್ನತ್ತ ದಿಟ್ಟಿಸಿದರು. ಅವರು ಏನಾದರೂ ಹೇಳಬೇಕೆನ್ನುವಷ್ಟರಲ್ಲಿ ಕರೆಗಂಟೆಯ ಸದ್ದಾಯಿತು.
ಮೇಘನಾ ಬಾಗಿಲನ್ನು ತೆರೆದಳು ಆಶ್ಚರ್ಯದಿಂದ ಕೂಗುತ್ತಾ ಒಳಬಂದಳು, “ನೋಡಿ, ಎಂತಹ ಸುಂದರ ಫ್ಲವರ್ ಬೊಕೆ ಬಂದಿದೆ!”
ಸೀಮಾ ಕೂಡಲೇ ಹತ್ತಿರ ಹೋಗಿ, “ಯಾರು ಕಳಿಸಿದ್ದಾರೆ?” ಎಂದಳು.
ಮೇಘನಾ ಅದಕ್ಕೆ ಸಿಕ್ಕಿಸಿದ್ದ ಕಾರ್ಡ್ ನೋಡುತ್ತಾ, “ಯಾರು, ಯಾರಿಗೆ ಕಳಿಸಿದ್ದಾರೆ ಎಂದೇ ತಿಳಿಯುತ್ತಿಲ್ಲವಲ್ಲ….” ಎಂದಳು.
ನಾನು ಕಾರ್ಡ್ ಮೇಲೆ ಬರೆದಿದ್ದನ್ನು ಜೋರಾಗಿ ಓದಿದೆ, “ಹ್ಯಾಪಿ ವ್ಯಾಲೆಂಟೈನ್ ಡೇ, ಮೈ ಸ್ವೀಟ್ ಹಾರ್ಟ್!”
“ಮೇಘಾ, ಇಷ್ಟು ಸುಂದರ ಬೊಕೆಯನ್ನು ನಿನಗೆ ಕಳಿಸಿರುವವರು ಯಾರು?” ಸೀಮಾ ಪ್ರೀತಿಯಿಂದ ಮಗಳನ್ನು ಕೇಳಿದಳು.
ಮೇಘನಾ ಹೂಗುಚ್ಛವನ್ನು ತಿರುಗಿಸಿ ನೋಡುತ್ತಾ, “ನನಗೇನೂ ಗೊತ್ತಾಗುತ್ತಿಲ್ಲ ಮಮ್ಮಿ,” ಎಂದಳು.
“ಇದನ್ನು ರಾಜೀವ್ ಕಳಿಸಿರಬಹುದಾ?”
“ಇಲ್ಲ…. ಇಲ್ಲ… ಇಷ್ಟು ದುಬಾರಿ ಬೆಲೆಯ ಬೊಕೆ ಅವನ ಬಜೆಟ್‌ನಲ್ಲಿ ಇಲ್ಲ ಬಿಡಿ.”
“ಮನೋಜ್…?”
“ಅವನು ಈಚೆಗೆ ರಕ್ಷಿತಾಳ ಹಿಂದೆ ಮುಂದೆ ಸುತ್ತುತ್ತಿದ್ದಾನೆ.”
“ಸಮರ್ಥ್?”
“ನೋ ಮಮ್ಮಿ, ವಿ ಡೋಂಟ್ ಲೈಕ್ ಈಚ್ ಅದರ್.”
“ಮತ್ತೆ ಇನ್ನಾರು ಕಳಿಸಿರೋಕೆ ಸಾಧ್ಯ?”
“ನೀವು ತಾಯಿ ಮಗಳು ಒಂದು ನಿಮಿಷ ಸುಮ್ಮನಿರುತ್ತೀರಾ? ಅಲ್ಲಾ, ಇಷ್ಟು ಹೊತ್ತು ನೀನು ಯಾವ ಹುಡುಗರ ಹೆಸರುಗಳನ್ನು ಹೇಳುತ್ತಿದ್ದೀಯಾ?” ಅವರ ಗಂಭೀರ ಸಂಭಾಷಣೆಯ ಮಧ್ಯೆ ನನ್ನ ಪ್ರಶ್ನೆ ತೂರಿ ಬಂತು.
“ಅವರೆಲ್ಲ ಮೇಘನಾಳ ಕಾಲೇಜ್ ಫ್ರೆಂಡ್ಸ್.”
“ಮತ್ತೆ…. ಅವರ ಹೆಸರೆಲ್ಲ ನಿನಗೆ ಹೇಗೆ ಗೊತ್ತು?” ನಾನು ಆಶ್ಚರ್ಯದಿಂದ ಕೇಳಿದೆ.
“ಮೇಘಾ, ನಾನು ಇಬ್ಬರೂ ದಿನಾ ಕಾಲೇಜಿನ ವಿಷಯಗಳ ಬಗ್ಗೆ ಮಾತನಾಡುತ್ತಾ ಇರುತ್ತೇವೆ. ನಿಮ್ಮ ಹಾಗೆ ಸದಾ ದುಡ್ಡಿನ ಲೆಕ್ಕದಲ್ಲಿ ಮುಳುಗಿರೋದಿಲ್ಲ,” ಸೀಮಾ ಜಂಭದ ಧ್ವನಿಯಲ್ಲಿ ಹೇಳಿದಳು.
“ನಾನು ದುಡ್ಡಿನ ಲೆಕ್ಕ ಇಡದೆ ಇದ್ದರೆ, ಪ್ರತಿ ತಿಂಗಳು ಯಾರ ಮುಂದೆನಾದ್ರೂ ಕೈ ಚಾಚೋ ಪರಿಸ್ಥಿತಿ ಬರುತ್ತೆ ಅಷ್ಟೆ. ಅದಿರಲಿ, ನಾವೀಗ ಮಾತನಾಡುತ್ತಾ ಇದ್ದ ವಿಷಯವೇ ಬೇರೆ…. ನೀನು ಯಾವುದೋ ಹುಡುಗರ ಹೆಸರು ಹೇಳುತ್ತಾ ಇದ್ದೆಯಲ್ಲ…..”
“ಅವರೆಲ್ಲ ಮೇಘನಾ ಜೊತೆ ಓದುತ್ತಾ ಇದ್ದಾರೆ ಮತ್ತು ಅವಳಿಗೆ ಒಳ್ಳೆಯ ಸ್ನೇಹಿತರಾಗಿದ್ದಾರೆ.”
“ಮೇಘಾ, ನೀನು ಕಾಲೇಜ್‌ನಲ್ಲಿ ವಿದ್ಯಾಭ್ಯಾಸದ ಕಡೆಗೂ ಗಮನ ಕೊಡುತ್ತಾ ಇದ್ದಿಯೋ ಅಥವಾ ನಿನ್ನ ಸೋಶಿಯಲ್ ಸರ್ಕಲ್‌ನಲ್ಲೇ ಮುಳುಗಿ ಕಾಲ ಕಳೆಯುತ್ತಿದ್ದೀಯೋ?” ನಾನು ಕೃತಕ ನಗೆಯೊಂದಿಗೆ ಅವಳತ್ತ ದಿಟ್ಟಿಸಿದೆ.
“ಡ್ಯಾಡಿ, ನನ್ನ ರಿಪೋರ್ಟ್ ಕಾರ್ಡ್ ನೋಡುತ್ತಾ ಇದ್ದೀರಲ್ಲವೇ?” ಮೇಘನಾ ಅಸಹನೆಯಿಂದ ಹೇಳಿದಳು.
“ಹಾಗಲ್ಲ ಮೇಘನಾ, ಈ ಹೂಗುಚ್ಛ ಕಳಿಸಿರಬಹುದಾದ ಯುವಕರ ಪಟ್ಟಿ ಇಷ್ಟು ಉದ್ದ ಇದೆಯಲ್ಲ, ಅದರಿಂದ ನನಗೆ ಯೋಚನೆ ಆಗುತ್ತಿದೆ.”
“ಡ್ಯಾಡಿ ಜಸ್ಟ್ ರಿಲ್ಯಾಕ್ಸ್. ಈ ಕಾಲದಲ್ಲಿ ಇದನ್ನು ಕೊಡೋದು ಒಂದು ಫಾರ್ಮಾಲಿಟಿ ಆಗಿದೆ. ಹೂವನ್ನು ಕೊಟ್ಟು, `ಐ ಲವ್ ಯೂ’ ಅಂತ ಹೇಳುತ್ತಿದ್ದ ಹಳೇ ಡೈಲಾಗ್ ಈಗ ಔಟ್ ಡೇಟೆಡ್ ಆಗಿದೆ.”
“ಅದಿರಲಿ, ಈ ಹೂಗುಚ್ಛ ಕಳಿಸಿರುವವರು ಯಾರಿರಬಹುದು ಅಂತ ಗೊತ್ತಾಯಿತಾ? ಅದು ಹೇಳು….”
“ಸಾರಿ ಡ್ಯಾಡಿ. ಇದು ನನಗೆ ಅಂತ ಅನ್ನಿಸೋದಿಲ್ಲ,” ಮೇಘನಾ ತಲೆ ಅಲುಗಾಡಿಸುತ್ತಾ ನಕಾರ ಸೂಚಿಸಿದಳು.
ಮಗಳ ಪಾಳಿ ಮುಗಿದ ನಂತರ ನಾನು ಪತ್ನಿಯ ಕಡೆ ತಿರುಗಿ ವ್ಯಂಗ್ಯವಾಗಿ ಕೇಳಿದೆ, “ನಿನ್ನನ್ನು ಇಷ್ಟಪಡುವವರು ಯಾರಿದ್ದಾರೋ ಅವರ ಹೆಸರುಗಳನ್ನು ಹೇಳುತ್ತಾ ಬಾ, ರಾಣಿ ಪದ್ಮಾವತಿ…..”
“ಈ ರಾಣಿ ಪದ್ಮಾವತಿ ಇಲ್ಲಿ ಹೇಗೆ ಬಂದಳು? ದೀಪಿಕಾ ಪಡುಕೋಣೆ ಮೂಗು ಕತ್ತರಿಸೋಕ್ಕೆ ಕೆಲವರು ಕಾಯುತ್ತಿದ್ದಾರೆ,” ಮೇಘನಾ ತುಂಟತನದ ಧ್ವನಿಯಲ್ಲಿ ಹೇಳಿದಳು.
“ನೀನು ಸುಮ್ಮನೆ ಕುಳಿತಿರುತ್ತೀಯಾ, ಮಿಸ್ ಇಂಡಿಯಾ….?” ನಾನು ಗದರಿಸುವ ಧ್ವನಿಯಲ್ಲಿ ಹೇಳಿದ ಕೂಡಲೇ ಮೇಘನಾ ತುಟಿಯ ಮೇಲೆ ಬೆರಳಿಟ್ಟಳು.
“ಸೀಮಾ, ನೀನು ಏನು ಹೇಳುತ್ತೀಯಾ?”
“ನನ್ನನ್ನು ಸುಮ್ಮನೆ ರೇಗಿಸಬೇಡಿ. ನಾನು ಅವರಿವರನ್ನು ಮರುಳು ಮಾಡೋದಕ್ಕೆ ಹೋಗಿಲ್ಲ,” ಸೀಮಾ ಹುಬ್ಬುಗಂಟಿಕ್ಕಿ ಹೇಳಿದಳು.
“ಡ್ಯಾಡಿ…. ನಾನೊಂದು ಮಾತು ಹೇಳಲಾ….?” ಮೇಘನಾಳ ಕಣ್ಣಲ್ಲಿ ತುಂಟತನದ ಛಾಪಿತ್ತು.
“ಅಬ್ಬಾ! ಈ ಹೆಣ್ಣುಮಕ್ಕಳನ್ನು ಸುಮ್ಮನೆ ಕೂರಿಸೋದಕ್ಕೆ ನಮ್ಮ ಕೈಲಿ ಆಗೋದಿಲ್ಲ. ಸರಿ, ಅದೇನು ಹೇಳು…..”
“ಡ್ಯಾಡಿ, ನಾವು ಹೋದ ವಾರ ಗಿರಿಜತ್ತೆ ಮಗಳ ಮದುವೆಗೆ ಹೋಗಿದ್ದೆವಲ್ಲ, ಅಲ್ಲಿ ನಿಮ್ಮ ಕಸಿನ್ ರವಿ ಚಿಕ್ಕಪ್ಪನ ಸ್ನೇಹಿತರು ನವೀನ್ ಅಂತ ಒಬ್ಬರು ಸಿಕ್ಕಿದ್ದರಲ್ಲ, ಅವರು ಈ ಬೊಕೆ ಕಳುಹಿಸಿರಬಹುದು.”
“ಏನು! ಆ ಮೀಸೆ ಮಾಮ ನಿನ್ನ ಮಮ್ಮಿಗೆ ಲೈನ್ ಹೊಡೆಯೊ ಪ್ರಯತ್ನ ಮಾಡಿದ್ದಾನೆ ಅಂತೀಯಾ?”
“ಮೀಸೆ ಇರಲಿಲ್ಲ ಅಂದರೆ ಅವರೂ ಸ್ಮಾರ್ಟ್ ಆಗೇ ಇದ್ದಾರೆ ಡ್ಯಾಡಿ,” ಮೇಘನಾ ತುಂಟು ನಗೆಯೊಂದಿಗೆ ಹೇಳಿದಳು.
“ನೀನೇನು ಹೇಳುತ್ತೀಯಾ ಸೀಮಾ?” ನಾನು ಕೋಪವನ್ನು ನಟಿಸುತ್ತಾ ಕೇಳಿದೆ.
“ನನ್ನನ್ನೇನು ಕೇಳುತ್ತೀರಿ? ಕೇಳೋದಿದ್ದರೆ ಆ ಮೀಸೆ ವಾಲನನ್ನೇ ಕೇಳಿ ಹೋಗಿ,” ಸೀಮಾ ಮುಖ ದುಮ್ಮಿಸಿಕೊಂಡು ಹೇಳಿದಳು.
“ಆದರೆ, ನಿನ್ನ ಕಡೆಯಿಂದ ಅವನಿಗೆ ಉತ್ತೇಜನ ಸಿಕ್ಕಿಲ್ಲ ತಾನೇ?”
“ಗಂಡಸರ ಬುದ್ಧಿನೇ ಇಷ್ಟು. ನಾವು ಯಾರ ಜೊತೆಯಲ್ಲಾದರೂ ಸ್ವಲ್ಪ ನಗುತ್ತಾ ಮಾತನಾಡಿದರೆ ಸಾಕು, ನಮ್ಮ ಮೇಲೇ ಗೂಬೆ ಕೂರಿಸೋದು,” ಸೀಮಾ ಸಿಡುಕಿದಳು.
“ಮೇಘಾ, ನನಗನಿಸುತ್ತೆ ಆ ಮೀಸೆ ಮಾಮ ನಿನ್ನ ಮಮ್ಮಿಯಿಂದ ಪ್ರಭಾವಿತನಾಗಿಲ್ಲ ಅಂತ. ಬೇರೆ ಕ್ಯಾಂಡಿಡೇಟ್ ಬಗ್ಗೆ ಯೋಚಿಸು.”
“ಮಮ್ಮಿಯ ಕಲೀಗ್ ಆದಿತ್ಯ ಅಂಕಲ್ ಇವರ ಆಫೀಸ್ ಪಾರ್ಟಿಗಳಲ್ಲಿ ಮಮ್ಮಿ ಹತ್ತಿರಾನೇ ಸುತ್ತುತ್ತಿರುತ್ತಾರೆ,” ಕೆಲವು ಕಾಲ ಯೋಚಿಸಿದ ನಂತರ ಮೇಘಾ ತನ್ನ ತಾಯಿಯ ಆಸಕ್ತರ ಪಟ್ಟಿಯ ಇನ್ನೊಂದು ಹೆಸರನ್ನು ಸೂಚಿಸಿದಳು.
“ಈ ಹೂಗುಚ್ಛವನ್ನು ಕಳಿಸೋ ಅಂಥ ವ್ಯಕ್ತಿ ಅವರಲ್ಲ ಬಿಡು,” ಮಗಳ ಮಾತಿಗೆ ನಕಾರ ಸೂಚಿಸುತ್ತಾ ನಾನು ಹೇಳಿದೆ, “ಅವರ ಪರ್ಸನಾಲಿಟಿಯಲ್ಲಿ ಉತ್ಸಾಹವೇ ಕಾಣುವುದಿಲ್ಲ. ಅಲ್ಲದೆ, ಮಾತನಾಡುವಾಗೆಲ್ಲ ಎದುರಿಗಿರುವವರ ಮೇಲೆ ಎಂಜಲು ಹಾರಿಸೋ ವ್ಯಕ್ತಿ ಆತ.”
“ನಮ್ಮ ಬೀದಿ ಕೊನೆ ಮನೆಯಲ್ಲಿರುವ ಮಹೇಶ್ ಅಂಕಲ್ ಇರಬಹುದಾ?”
“ಅವರ ಹೆಸರು ಹೇಗೆ ಲಿಸ್ಟ್ ಗೆ ಬಂತು….?”
“ಅವರಿಗೆ ಹೆಂಡತಿ ಇಲ್ಲ. ಬೆಳಗ್ಗೆ ಮಮ್ಮಿ ವಾಕಿಂಗ್ ಹೋದಾಗ ದಿನಾ ಪಾರ್ಕ್‌ನಲ್ಲಿ ಸಿಗುತ್ತಾರೆ. ಒಟ್ಟಿಗೆ ವಾಕಿಂಗ್ ಮಾಡುವಾಗ ಅವರಿಗೆ ಆಸಕ್ತಿಯೋ ಅಥವಾ ತಪ್ಪು ತಿಳಿವಳಿಕೆಯೋ ಆಗಿರಬಹುದಲ್ಲವೇ?” ಮೇಘನಾ ಲಾಯರ್ ಪಾಯಿಂಟ್ ಮುಂದಿಟ್ಟಳು.
“ಇದೀಗ ಒಪ್ಪುವಂಥ ಮಾತು ಹೇಳುತ್ತಿದ್ದೀಯಾ ಮೇಘಾ. ನಿನ್ನ ಮಾತಿನಲ್ಲಿ ಅರ್ಥ ಇದೆ,” ಮಗಳ ಮಾತಿಗೆ ನಾನು ತಲೆದೂಗಿದೆ.
“ನಿಮ್ಮ ಅರ್ಥವೆಲ್ಲ ಅನರ್ಥವೇ…,” ಸೀಮಾ ಸಿಟ್ಟಿಗೆದ್ದಳು.
“ಯಾರುಯಾರದೋ ಹೆಸರಿನ ಜೊತೆ ನನ್ನ ಹೆಸರು ಸೇರಿಸಬೇಕಿಲ್ಲ.”
ತಾಯಿ ಸಿಟ್ಟಾದುದನ್ನು ಕಂಡು ಪರಿಸ್ಥಿತಿಯನ್ನು ತಹಬಂದಿಗೆ ತರಲು ಮೇಘನಾ ಹೊಸ ಬಾಣ ಬಿಟ್ಟಳು.“ಮಮ್ಮಿ ಈ ಹೂಗುಚ್ಛವನ್ನು ಡ್ಯಾಡಿಗಾಗಿ ಯಾರಾದರೂ ಕಳುಹಿಸಿರಬಹುದಲ್ಲ!”
“ಇಂಪಾಸಿಬಲ್,” ಸೀಮಾ ತಟಕ್ಕನೆ ಉತ್ತರಿಸಿ ನನ್ನೆಡೆಗೆ ಅಣಕದಿಂದ ನೋಡಿದಳು.
“ನನಗೆ ಯಾಕಿಲ್ಲ?” ನಾನು ಜೋರಾಗಿ ಹೇಳಿದೆ, “ಈಗಲೂ ಸ್ತ್ರೀಯರು ನನ್ನ ಕಡೆ ಆಸೆಯ ದೃಷ್ಟಿಯಿಂದ ನೋಡೋದನ್ನು ಕಂಡಿದ್ದೇನೆ.”
“ಇರಬಹುದು. ಡ್ಯಾಡಿಯ ಪರ್ಸನಾಲಿಟಿ ಅಷ್ಟೇನೂ ಕೆಟ್ಟಿಲ್ಲ.”
ನನ್ನ ಪರ್ಸನಾಲಿಟಿ ಬಗ್ಗೆ ಮಾತನಾಡಿದ ಮಗಳ ಕಡೆ ಕೋಪದಿಂದ ನೋಡಿದೆ.
ಅಷ್ಟರಲ್ಲಿ ಸೀಮಾ ಹೇಳಿದಳು, “ವಿಷಯ ಪರ್ಸನಾಲಿಟಿಯದಲ್ಲ, ಇವರ ಜಿಪುಣತನದ್ದು. ಇವರು ಒಂದಿಷ್ಟು ಹಣ ಖರ್ಚು ಮಾಡಿದರೆ ತಾನೇ ಯಾರಾದರೂ ಇವರತ್ತ ಆಕರ್ಷಿತರಾಗೋದು?”
“ಹಾಗಾದರೆ ಡ್ಯಾಡಿಗೆ ಇದನ್ನು ಕಳುಹಿಸಿರಬಹುದಾದ ಯಾವ ಲೇಡಿಯೂ ಇರಲಾರರು ಅನ್ನುತ್ತೀರಾ?”
“ಖಂಡಿತಾ.”
“ಡ್ಯಾಡಿ, ನಿಮ್ಮ ಮಾರ್ಕೆಟ್ ವ್ಯಾಲ್ಯೂ ಕುಸಿದು ಹೋಗಿದೆ,” ಮಗಳು ನನಗೆ ಸಹಾನುಭೂತಿ ವ್ಯಕ್ತಪಡಿಸಿದಳು.
“ಕಮ್ಮಾರನ ಓಣಿಯಲ್ಲಿ ಸೂಜಿಗೆ ಬೆಲೆಯಿಲ್ಲ ಅಂತಾರಲ್ಲ. ಹಾಗೆ ನೀವು ನನ್ನನ್ನು ಭಾವಿಸಿದ್ದೀರಿ,” ಎಂದು ನಾನು ಗತ್ತಿನಿಂದ ಎದೆಯುಬ್ಬಿಸಿ ಕಾಲರನ್ನು ಮೇಲಕ್ಕೆಳೆದೆ. ಅದನ್ನು ನೋಡಿ ಸೀಮಾ ಜೋರಾಗಿ ನಕ್ಕಳು.
“ಸರಿ, ಈಗ ಈ ಬೊಕೆ ಕಳಿಸಿದವರು ಯಾರು ಮತ್ತು ಯಾರಿಗೆ ಅನ್ನೋದೇ ತಿಳಿಯುತ್ತಿಲ್ಲವಲ್ಲ….” ಮೇಘನಾಳ ಪ್ರಶ್ನೆಯಿಂದ ಅವಳ ತಾಯಿಯೂ ಯೋಚನಾಮಗ್ನಳಾದಳು.
ಅವರ ಮೌನ ಕೊಂಚ ಹೆಚ್ಚು ಕಾಲ ಮುಂದುವರಿದಾಗ ಅದು ಅಸಹನೀಯವಾಯಿತು. ನಾನು ನಗುಮುಖ ಮಾಡಿಕೊಂಡು ಕೇಳಿದೆ, “ಸೀಮಾ, ಪ್ರೀತಿಯನ್ನು ಪ್ರಕಟಿಸುವ ಈ ಉಡುಗೊರೆಯನ್ನು ನಾನು ನಿನಗಾಗಿ ಕಳುಹಿಸಿರಬಹುದಲ್ಲವೇ?”
“ಸಾಧ್ಯವೇ ಇಲ್ಲ ಬಿಡಿ. ಇಂಥ ವಿಷಯದಲ್ಲಿ ನಿಮ್ಮ ಜಿಪುಣತನ ಪ್ರಸಿದ್ಧವಾಗಿದೆ,” ಸೀಮಾ ನನ್ನ ಭಾವನೆಗಳಿಗೆ ಪೆಟ್ಟು ಕೊಡುವ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ನನ್ನ ಮುಖ ಸಪ್ಪೆಯಾದುದನ್ನು ಕಂಡು ನಾನು ನಾಟಕವಾಡುತ್ತಿದ್ದೇನೆಂದು ಭಾವಿಸಿ ಇಬ್ಬರೂ ನಕ್ಕರು.
“ಇಂಥ ಸುಂದರ ಉಡುಗೊರೆಯನ್ನು ನಿಮ್ಮಿಂದ ಪಡೆಯುವಂಥ ಭಾಗ್ಯ ನನಗೆಲ್ಲಿದೆ?” ಸೀಮಾ ತಾನೂ ನಾಟಕೀಯವಾಗಿ ಹೇಳಿದಳು.
“ಆ ಹೂವು ತಂದ ಹುಡುಗ ವಿಳಾಸ ಸರಿಯಾಗಿ ನೋಡದೆ ನಮ್ಮ ಮನೆಗೆ ಕೊಟ್ಟು ಹೋಗಿರಬಹುದು. ವಾಪಸ್ ತೆಗೆದುಕೊಂಡು ಹೋಗಲು ಈಗ ಬರಬಹುದು,” ಮೇಘನಾ ಹೊಸದೊಂದು ಬಾಣ ಬಿಟ್ಟಳು.
“ಈ ಚೀಟಿ ನೋಡು. ಇದರ ಮೇಲೆ ನಮ್ಮ ಮನೆಯ ವಿಳಾಸವೇ ಬರೆದಿದೆ. ಅದರಲ್ಲಿರುವ ಬರವಣಿಗೆ ಏನಾದರೂ ಗುರುತು ಸಿಗುತ್ತದೆಯಾ ನೋಡು,” ನಾನು ತಡೆಯಲಾರದೆ ಹೇಳಿದೆ.
“ಓಹ್! ಇದು ನಿಮ್ಮದೇ ಬರವಣಿಗೆ!” ಮೇಘನಾ ಅಚ್ಚರಿಯಿಂದ ಕೂಗಿದಳು. ಸೀಮಾ ಸಹ ಹತ್ತಿರ ಬಂದು ಅದನ್ನು ನೋಡಿ ವಿಸ್ಮಯಗೊಂಡಳು.
“ಆದರೆ…. ಏನಿದೆಲ್ಲ….?” ಸೀಮಾ ತೊದಲಿದಳು, “ಅಂದರೆ…. ನೀವು…..?”
“ನಾನು ನಿಮಗೆ ತಮಾಷೆ ವಸ್ತು ಆಗಿದ್ದೇನಾ? ನನ್ನಲ್ಲೂ ಪ್ರೀತಿಸುವ ಹೃದಯ ಇದೆ ಅನ್ನೋದು ನಿಮಗೆ ಅರ್ಥವಾಗಿಲ್ಲ. ನಾನು ಕಾಸು ಕಾಸಿನ ಲೆಕ್ಕ ಇಡೋದು, ಹೆಚ್ಚು ಖರ್ಚು ಮಾಡದೆ ಉಳಿಸೋದು ಎಲ್ಲ ಯಾರಿಗಾಗಿ? ನಾನು ಮಜಾ ಮಾಡೋಕೆ ಅಲ್ಲ ತಾನೇ?”
ತಾಯಿ ಮಗಳಿಬ್ಬರೂ ಓಡಿ ಬಂದು ನನ್ನನ್ನು ಅಪ್ಪಿಕೊಂಡರು.“ಐ ಆ್ಯಮ್ ಸಾರಿ ಡ್ಯಾಡಿ. ನೀವೆಷ್ಟು ಒಳ್ಳೆಯವರು,” ಮೇಘನಾ ಗದ್ಗದ ಸ್ವರದಲ್ಲಿ ನುಡಿದಳು.
“ನನ್ನನ್ನೂ ಕ್ಷಮಿಸಿ ಡಾರ್ಲಿಂಗ್. ಐ ಲವ್ ಯೂ,” ಸೀಮಾಳ ಕಣ್ಣಂಚಿನಲ್ಲಿ ನೀರು ತುಳುಕಿತು.
ನಾನು ಅವರಿಬ್ಬರ ತಲೆಯ ಮೇಲೂ ಪ್ರೀತಿಯಿಂದ ಕೈಯಾಡಿಸುತ್ತಾ, “ನೀವು ಕ್ಷಮೆ ಕೇಳುವ ಅಗತ್ಯವೇ ಇಲ್ಲ. ಇಂದಿನ ವ್ಯಾಲೆಂಟೈನ್ ದಿನದ ಘಟನೆ ನನಗೆ ಪಾಠ ಕಲಿಸಿದೆ. ಪ್ರೀತಿಯನ್ನು ಪ್ರಕಟ ಮಾಡದಿದ್ದರೆ ಅರಿವಾಗುವುದಿಲ್ಲ ಅಂತ. ಆದ್ದರಿಂದ ಇನ್ನು ಮುಂದೆ ಹೀಗೇ ನಾನು ನನ್ನ ಪ್ರೀತಿಯನ್ನು ಆಗಾಗ ಪ್ರಕಟಪಡಿಸುತ್ತೇನೆ. ಇಲ್ಲದಿದ್ದರೆ ಮುಂದೆ ಬೇರೆ ಯಾರಾದರೂ ನನ್ನ ರಾಣಿಗೆ ಹೂಗುಚ್ಛವನ್ನು ಕಳಿಸಬಾರದಲ್ಲ,” ಎಂದೆ.
“ಛೇ…! ಏನು ಹೇಳುತ್ತೀರಿ. ನೀವಲ್ಲದೆ ಬೇರೆ ಯಾರೂ ನನ್ನ ಹೃದಯದಲ್ಲಿ ಇರೋಕೆ ಸಾಧ್ಯವಿಲ್ಲ,” ಸೀಮಾ ಪ್ರೀತಿಯಿಂದ ನನ್ನತ್ತ ನೋಡಿ ನಾಚುತ್ತಾ ನನ್ನೆದೆಗೆ ಒರಗಿದಳು.
ನಾವಿಬ್ಬರೂ ಮೈಮರೆತುದನ್ನು ಕಂಡು ಮೇಘನಾ “ಆಲ್ ದಿ ಬೆಸ್ಟ್,” ಎಂದು ನಗುತ್ತಾ ರೂಮಿನಿಂದ ಹೊರಗೋಡಿದಳು.