ಮಸಾಲೆ ಬದನೆ

ಗ್ರೇವಿಯ ಸಾಮಗ್ರಿ : 500 ಗ್ರಾಂ ಹುರಿದ ಕಡಲೆಬೀಜ, 500 ಗ್ರಾಂ ಹುರಿದ ನೈಲಾನ್‌ ಎಳ್ಳು, 1 ದೊಡ್ಡ ತೆಂಗಿನಕಾಯಿಯ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಹುರಿದು ಪುಡಿ ಮಾಡಿದ ಜೀರಿಗೆ, ಅರಿಶಿನ, ಹೆಚ್ಚಿದ ಪುದೀನಾ.

ಟೆಂಪರಿಂಗ್‌ ಸಾಮಗ್ರಿ : 1 ಕಿಲೋ ಸಣ್ಣ ಗಾತ್ರದ ತಾಜಾ ಗುಂಡು ಬದನೆ, 2 ಸೌಟು ರೀಫೈಂಡ್‌ ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಮೆಂತ್ಯ, ಕರಿಬೇವು, ಉದ್ದಕ್ಕೆ ಸೀಳಿದ ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಹುಣಿಸೆ ಕಿವುಚಿದ ರಸ, ಬೆಲ್ಲ, ಶುಂಠಿ-ಬೆಳ್ಳುಳ್ಳಿ ಪೇಸ್ಟ್.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ತೆಂಗಿನ ತುರಿ ಹಾಕಿ ಹೊಂಬಣ್ಣಕ್ಕೆ ಘಮ್ಮೆಂದು ಹುರಿಯಿರಿ. ನಂತರ ಮಿಕ್ಸಿಗೆ ಇದನ್ನು ಹಾಕಿ ಜೊತೆಗೆ ಕಡಲೆಬೀಜ, ಎಳ್ಳು, ಧನಿಯಾಪುಡಿ, ಖಾರಾಪುಡಿ, ಜೀರಿಗೆ ಪುಡಿ ಎಲ್ಲಾ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಮಧ್ಯದಿಂದ 4 ಭಾಗ ಆಗುವಂತೆ ಸೀಳಿದ ಆದರೆ ತೊಟ್ಟು ಬಿಟ್ಟಿರದ ಬದನೆಗಳನ್ನು ಹಾಕಿ ಶ್ಯಾಲೋ ಫ್ರೈ ಮಾಡಿ ತೆಗೆದುಬಿಡಿ. ಅದೇ ಎಣ್ಣೆಗೆ ಒಗ್ಗರಣೆ ಕೊಡಿ. ಕರಿಬೇವು, ಹಸಿಮೆಣಸು ಹಾಕಿ ಬಾಡಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಿರಿ. ಆಮೇಲೆ ರುಬ್ಬಿದ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಕೈಯಾಡಿಸಿ. ಆಮೇಲೆ ಹುಣಿಸೇ ರಸ, ಉಪ್ಪು, ಅರಿಶಿನ ಸೇರಿಸಿ. ಕೊನೆಯಲ್ಲಿ  ಫ್ರೈ ಮಾಡಿದ ಬದನೆ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದನ್ನು ಬಿಸಿ ಬಿಸಿ ನಾನ್‌, ಕುಲ್ಚಾ, ರುಮಾಲಿ ರೋಟಿ ಜೊತೆ ಸವಿಯಲು ಕೊಡಿ.

ಹೈದರಾಬಾದೀ ವೆಜ್‌ ಬಿರಿಯಾನಿ

ಸಾಮಗ್ರಿ : ಹೆಚ್ಚಿದ ಬೀನ್ಸ್, ಕ್ಯಾರೆಟ್‌, ಆಲೂ, ನವಿಲುಕೋಸು, ಹೂಕೋಸು, ಹಸಿ ಬಟಾಣಿ (ಒಟ್ಟಾಗಿ 1 ಕಿಲೋ), 1 ಕಿಲೋ ಬಾಸುಮತಿ ಅಕ್ಕಿ, ಅರ್ಧ ಕಿಲೋ ತುಪ್ಪ, ಒಗ್ಗರಣೆಗೆ ಜೀರಿಗೆ, ಸೋಂಪು, ಚಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಪುದೀನಾ, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಸರು, ನಿಂಬೆರಸ, ಅರಿಶಿನ, ಹಾಲಲ್ಲಿ ನೆನೆಸಿದ ಕೇಸರಿ.

ವಿಧಾನ : ಮೊದಲು ಈರುಳ್ಳಿ, ಬೆಳ್ಳುಳ್ಳಿಯನ್ನು ಬಾಡಿಸಿಕೊಂಡು ಬೇರೆಯಾಗಿ ಇಡಿ. ಈಗ ಒಂದು ಬೇಸನ್ನಿಗೆ ಮಿಶ್ರ ತರಕಾರಿ ಹೋಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೊ.ಸೊಪ್ಪು, ಪುದೀನಾ, ಹಸಿಮೆಣಸಿನ ಪೇಸ್ಟ್, ಅರಿಶಿನ, ಉಪ್ಪು, ಖಾರ, ಮೊಸರು, ನಿಂಬೆರಸ, ಬಾಡಿಸಿದ ಈರುಳ್ಳಿ ಬೆಳ್ಳುಳ್ಳಿ ಹಾಕಿ ಚೆನ್ನಾಗಿ 1 ಗಂಟೆ ಕಾಲ ಮ್ಯಾರಿನೇಟ್‌ ಆಗಲು ಬಿಡಿ. ಒಂದು ದೊಡ್ಡ ಕುಕ್ಕರ್‌ನಲ್ಲಿ 2 ಸೌಟು ತುಪ್ಪ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ಇದಕ್ಕೆ ನೆನೆಸಿದ ಬಾಸುಮತಿ ಅಕ್ಕಿ, ಉಪ್ಪು, ಅಗತ್ಯವಿದಷ್ಟು ನೀರು ಹಾಕಿ ಅಕ್ಕಿ ಅರ್ಧ ಬೇಯುವಂತೆ ಮಾಡಿ. ಮೇಲು ಭಾಗದ ನೀರು ಬಸಿದುಬಿಡಿ. ಅದೇ ಒಲೆಯಲ್ಲಿ ಬಾಣಲೆ ಇಟ್ಟು ತುಸು ತುಪ್ಪ ಬಿಸಿ ಮಾಡಿ. ಇದಕ್ಕೆ ಮ್ಯಾರಿನೇಟೆಡ್‌ ತರಕಾರಿ ಹಾಕಿ ಬಾಡಿಸಿ. ಅರ್ಧದಷ್ಟು ಬೆಂದಿತೆನಿಸಿದರೆ, ಮೇಲೆ ಅರೆಬೆಂದ ಅನ್ನ ಹಾಕಿ ಬೇಗ ಬೇಗ ಕೈಯಾಡಿಸಿ. ಆಮೇಲೆ ಬಸಿದ ನೀರನ್ನು ಇದಕ್ಕೇ ಬೆರೆಸಿ, ಜೊತೆಗೆ ಕೇಸರಿ ಸಹ ಹಾಕಿಡಿ. ಇದನ್ನು ಮಧ್ಯಮ ಉರಿಯಲ್ಲಿ 4-5 ನಿಮಿಷ ಮುಚ್ಚಳವಿರಿಸಿ ಬೇಯಿಸಿ. ಕೊನೆಯಲ್ಲಿ ಇದರ ಮೇಲೆ ಬಾಡಿಸಿದ ಈರುಳ್ಳಿ ಹಾಕಿ ಬೆರೆತುಕೊಳ್ಳುವಂತೆ ಕೆದಕಿರಿ. ಬಿಸಿ ಬಿಸಿಯಾಗಿ ಇದನ್ನು ರಾಯ್ತಾ ಜೊತೆ ಸವಿಯಿರಿ.

ಏಪ್ರಿಕಾಟ್‌ ಸಜ್ಜಿಗೆ

ಸಾಮಗ್ರಿ : 1 ಕಿಲೋ ಡ್ರೈ ಏಪ್ರಿಕಾಟ್‌ (ಡ್ರೈ ಫ್ರೂಟ್ಸ್ ಅಂಗಡಿಯಲ್ಲಿ ಲಭ್ಯ), 500 ಗ್ರಾಂ ಸಕ್ಕರೆ, 300 ಗ್ರಾಂ ತುಪ್ಪ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾಗಿ 1 ಕಪ್‌), 1 ಲೀ. ಗಟ್ಟಿ ಹಾಲು, ತುಸು ಏಲಕ್ಕಿ ಪುಡಿ, ಕೇದಗೆ ಎಸೆನ್ಸ್.

ವಿಧಾನ : ಏಪ್ರಿಕಾಟ್‌ನ್ನು 2 ಗಂಟೆ ಕಾಲ ಹಾಲಲ್ಲಿ ನೆನೆಹಾಕಿಡಿ. ನಂತರ ದಪ್ಪ ತಳದ ಬಾಣಲೆಯಲ್ಲಿ ಅದೇ ಹಾಲಿನಲ್ಲಿ ಅವನ್ನು ಬೇಯಿಸಿ. ಆಮೇಲೆ ಸಕ್ಕರೆ ಹಾಕಿ ಬೆರೆತುಕೊಳ್ಳುವಂತೆ ಮಂದ ಉರಿಯಲ್ಲಿ ಕೆದಕಬೇಕು. ಮಧ್ಯೆ ಮಧ್ಯೆ ತುಪ್ಪ ಬೆರೆಸುತ್ತಾ, ತಳ ಹಿಡಿಯದಂತೆ ನೋಡಿಕೊಳ್ಳಿ. ಆಮೇಲೆ ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ, ಎಸೆನ್ಸ್ ಎಲ್ಲವನ್ನೂ ಬೆರೆಸಿ ಮತ್ತಷ್ಟು ತುಪ್ಪ ಹಾಕುತ್ತಾ ಸಜ್ಜಿಗೆ ಧಾರಾಳ ಜಿಡ್ಡಾಗಿರುವಂತೆ ಮಾಡಿ. ಕೆಳಗಿಳಿಸಿ ಮತ್ತಷ್ಟು ಬಾದಾಮಿ ಚೂರು ಹಾಕಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಮಿರ್ಚಿ ಸಾಲನ್

ಸಾಮಗ್ರಿ : 500 ಗ್ರಾಂ ಹುರಿದ ಕಡಲೆಬೀಜ, 300 ಗ್ರಾಂ ಹುರಿದ ನೈಲಾನ್‌ ಎಳ್ಳು, 1 ಗಿಟುಕು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾ ಪುಡಿ, ಹುರಿದು ಪುಡಿ ಮಾಡಿದ ಜೀರಿಗೆ, ಅರಿಶಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹುಣಿಸೇ ರಸ, ಪುಡಿ ಮಾಡಿದ ಬೆಲ್ಲ, 250 ಗ್ರಾಂ ಬಜ್ಜಿ ಮೆಣಸಿನಕಾಯಿ, ಓಮ, 2 ಸೌಟು ರೀಫೈಂಡ್‌ ಎಣ್ಣೆ.

ವಿಧಾನ : ತೆಂಗಿನ ತುರಿಯನ್ನು ತುಪ್ಪ ಹಾಕಿ ಬಾಣಲೆಯಲ್ಲಿ ಘಮ್ಮೆಂದು ಹುರಿಯಿರಿ. ಆಮೇಲೆ ಮಿಕ್ಸಿಗೆ ಇದರ ಜೊತೆ ಕಡಲೆಬೀಜ, ಎಳ್ಳು, ಉಪ್ಪು, ಖಾರ, ಧನಿಯಾಪುಡಿ, ಜೀರಿಗೆ ಪುಡಿ, ಅರಿಶಿನ, ಹುಣಿಸೇ ಕಿವುಚಿದ ರಸ, ಬೆಲ್ಲ ಎಲ್ಲಾ ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಬಜ್ಜಿ ಮೆಣಸಿನಕಾಯಿಗಳನ್ನು ಉದ್ದಕ್ಕೆ ಸೀಳಿಕೊಂಡು ಇದಕ್ಕೆ ತುಸು ಜೀರಿಗೆ ಪುಡಿ, ಉಪ್ಪು, ಓಮದ ಮಿಶ್ರಣ ತುಂಬಿಸಿ, ಬಾಣಲೆಯಲ್ಲಿ ಎಣ್ಣೆ ಹಾಕಿ ಶ್ಯಾಲೋ ಫ್ರೈ ಮಾಡಿ, ಬೇರೆಯಾಗಿಡಿ. ಅದೇ ಬಾಣಲೆಯಲ್ಲಿ ಇನ್ನಷ್ಟು ಎಣ್ಣೆ ಬಿಸಿ ಮಾಡಿ ಜೀರಿಗೆಯ ಒಗ್ಗರಣೆ ಕೊಡಿ. ಆಮೇಲೆ ಇದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ಕೆದಕಬೇಕು. ಆಮೇಲೆ ರುಬ್ಬಿದ ಮಿಶ್ರಣ, ತುಸು ಉಪ್ಪು ಹಾಕಿ ಮಂದ ಉರಿಯಲ್ಲಿ ಕೈಯಾಡಿಸುತ್ತಾ ಕುದಿಸಿರಿ. ನಂತರ ಇದಕ್ಕೆ ಬಜ್ಜಿ ಮೆಣಸಿನಕಾಯಿ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕುದಿಸಿ ಕೆಳಗಿಸಿ. ಇದೀಗ ಮಿರ್ಚಿ ಸಾಲನ್‌ ರೆಡಿ! ಬಾಯಿ ಕೆಟ್ಟಿರುವವರಿಗೆ ಇದು ಹೆಚ್ಚು ಮುದ ನೀಡುತ್ತದೆ. ಬಿಸಿ ಬಿಸಿಯಾಗಿ ಹಬೆಯಾಡುವ ಅನ್ನದ ಮೇಲೆ ತುಪ್ಪ ಹಾಕಿ ಸಾಲನ್‌ ಜೊತೆ ಸವಿಯಲು ಕೊಡಿ. ಜೊತೆಗೆ ಹಪ್ಪಳ, ಸಂಡಿಗೆ ಇರಲಿ.

ಸ್ಪೆಷಲ್ ಶ್ಯಾವಿಗೆ ಖೀರು

ಸಾಮಗ್ರಿ : 2 ಲೀ. ಗಟ್ಟಿ ಹಾಲು, 150 ಗ್ರಾಂ ಸಕ್ಕರೆ, 100 ಗ್ರಾಂ ಖೋವಾ, 150 ಗ್ರಾಂ ತುಪ್ಪ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ತಲಾ 50 ಗ್ರಾಂ), 3-4 ಹನಿ ಸೆಂಟು.

ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ, ದ್ರಾಕ್ಷಿಗಳನ್ನು ಹುರಿದು ತೆಗೆಯಿರಿ. ಅದಕ್ಕೆ ಇನ್ನಷ್ಟು ತುಪ್ಪ ಬೆರೆಸಿ ತುಂಡರಿಸಿದ ಶ್ಯಾವಿಗೆ ಹಾಕಿ ಹುರಿಯಿರಿ. ದಪ್ಪ ತಳದ ಸ್ಟೀಲ್ ‌ಪಾತ್ರೆಯಲ್ಲಿ ಹಾಲು ಕಾಯಿಸಿ. ಮಂದ ಉರಿಯಲ್ಲಿ ಇದನ್ನು ಚೆನ್ನಾಗಿ ಕುದಿಸಿ ಅರ್ಧದಷ್ಟು ಹಿಂಗಿಸಿ. ಸ್ವಲ್ಪ ಹೊತ್ತು ಬಿಟ್ಟು ಶ್ಯಾವಿಗೆ, ಸಕ್ಕರೆ, ಚೆನ್ನಾಗಿ ಮಸೆದ ಸಿಹಿ ಖೋವಾ ಸೇರಿಸಿ ಬೆರೆತುಕೊಳ್ಳುವಂತೆ ಮಾಡಿ. 10 ನಿಮಿಷ ಬಿಟ್ಟು ಗೋಡಂಬಿ, ದ್ರಾಕ್ಷಿ, ಸೆಂಟು ಸೇರಿಸಿ. ಎಲ್ಲ ಒಂದು ಹದಕ್ಕೆ ಬಂದಿದೆ ಎನಿಸಿದಾಗ ಇನ್ನಷ್ಟು ತೆಳ್ಳಗೆ ಇರಲಿ ಎನಿಸಿದರೆ ಹಾಲು ಬೆರೆಸಬಹುದು, ಇದು ನಿಮ್ಮ ಆಯ್ಕೆ. ಇದೀಗ ಸ್ಪೆಷಲ್ ಖೀರು ರೆಡಿ, ಖಾರದ ಸಾಲನ್ ಅನ್ನದ ಜೊತೆ ಬಾಯಿ ಚಪ್ಪರಿಸುವ ಈ ಖೀರನ್ನು ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಶಿಕಂಪುರಿ ಕಬಾಬ್

ಮೂಲ ಸಾಮಗ್ರಿ : 600 ಗ್ರಾಂ ಕಡಲೆಬೇಳೆ, 15-20 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರಿಶಿನ, ಚಕ್ಕೆ, ಲವಂಗ, ಏಲಕ್ಕಿ, 2 ಸೌಟು ರೀಫೈಂಡ್‌ ಎಣ್ಣೆ.

ಸ್ಟಫಿಂಗ್‌ ಸಾಮಗ್ರಿ : ಹೆಚ್ಚಿದ 3-4 ಈರುಳ್ಳಿ, ಒಂದಿಷ್ಟು ಪುದೀನಾ, ನಿಂಬೆ ರಸದ ಮಿಶ್ರಣ.

ವಿಧಾನ : 2-3 ತಾಸು ಬೇಳೆ ನೆನೆ ಹಾಕಿ ತರಿತರಿಯಾಗಿ ಇದನ್ನು ತಿರುವಿಕೊಳ್ಳಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಚಕ್ಕೆ, ಲವಂಗ, ಏಲಕ್ಕಿ ಹಾಕಿ ಚಟಪಟಾಯಿಸಿ. ಆಮೇಲೆ ಇದಕ್ಕೆ ಉದ್ದಕ್ಕೆ ಸೀಳಿದ ಹಸಿಮೆಣಸು, ಉಪ್ಪು, ಖಾರ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರಿಶಿನ ಎಲ್ಲಾ ಹಾಕಿ ಕೆದಕಬೇಕು. ಆಮೇಲೆ ಇದಕ್ಕೆ ರುಬ್ಬಿದ ಬೇಳೆ ಮಿಶ್ರಣ ಹಾಕಿ ಮಂದ ಉರಿಯಲ್ಲಿ ಬಾಡಿಸಿ ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ಇದನ್ನು ಮತ್ತೆ ಮಿಕ್ಸಿಗೆ ಹಾಕಿ (ಕನಿಷ್ಠ ನೀರಿನೊಂದಿಗೆ) ತಿರುವಿಕೊಳ್ಳಿ. ನಂತರ ಇದರಿಂದ ಸಣ್ಣ ಉಂಡೆ ಮಾಡಿ ಜಿಡ್ಡು ಸವರಿದ ಅಂಗೈ ಮೇಲೆ ತಟ್ಟಿಕೊಳ್ಳಿ. ಮಧ್ಯೆ ಟೊಳ್ಳಾಗಿಸಿ ಸ್ಟಫಿಂಗ್‌ ಮಿಶ್ರಣ ತುಂಬಿಸಿ, ಕವರ್‌ ಮಾಡಿ ದಪ್ಪ ವಡೆ ತರಹ ಮಾಡಿಕೊಳ್ಳಿ. ಇದನ್ನು ಹೆಚ್ಚು ಎಣ್ಣೆ ಹಾಕಿ ಶ್ಯಾಲೋ ಫ್ರೈ ಮಾಡಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿ ಬಿಸಿಯಾಗಿ ಕಬಾಬ್ ಸವಿಯಲು ರೆಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ