ಹಸಿ ಬಟಾಣಿ ಉಸಲಿ

ಸಾಮಗ್ರಿ : 2-3 ಕಪ್‌ ಹಸಿ ಬಟಾಣಿ, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಉದ್ದಿನಬೇಳೆ, 2 ಎಸಳು ಕರಿಬೇವು, 2-3 ಒಣ ಮೆಣಸಿನಕಾಯಿ, ಹೆಚ್ಚಿದ 3-4 ಈರುಳ್ಳಿ, 1-2 ಟೊಮೇಟೊ, 3-4 ಹಸಿಮೆಣಸು, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ತುಸು ಕೊ.ಸೊಪ್ಪು, ತೆಂಗಿನ ತುರಿ.

ವಿಧಾನ : ಹಸಿ ಬಟಾಣಿಯನ್ನು 1 ಸೀಟಿ ಬರುವಂತೆ ಬೇಯಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ, ಕರಿಬೇವು ಹಾಕಿ ಚಟಪಟಾಯಿಸಿ. ಆಮೇಲೆ ತುಂಡರಿಸಿದ ಒಣ ಮೆಣಸು ಹಾಕಿ ಮಂದ ಉರಿಯಲ್ಲಿ ಕೆದಕಿರಿ. ಆಮೇಲೆ ಹಸಿ ಮೆಣಸು, ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಬೇಕು. ಆಮೇಲೆ ಇದಕ್ಕೆ ತೆಂಗಿನತುರಿ, ಬೆಂದ ಬಟಾಣಿ, ಉಪ್ಪು, ಸಕ್ಕರೆ ಸೇರಿಸಿ ಎಲ್ಲ ಬೆರೆತುಕೊಳ್ಳುಂತೆ ಮಾಡಿ ಕೆಳಗಿಳಿಸಿ. ಇದರ ಮೇಲೆ ಕೊ.ಸೊಪ್ಪು ಉದುರಿಸಿ, ಊಟದ ಜೊತೆ ನೆಂಚಿಕೊಳ್ಳಲು ಕೊಡಿ.

ಅವಲಕ್ಕಿ ಪಾಯಸ

ಸಾಮಗ್ರಿ : 1 ಕಪ್‌ ಗಟ್ಟಿ ಅವಲಕ್ಕಿ, 1 ಲೀ. ಫುಲ್ ಕ್ರೀಂ ಗಟ್ಟಿ ಹಾಲು, 1 ಕಪ್‌ ಸಕ್ಕರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ ಚೂರು (ಒಟ್ಟಾಗಿ ಅರ್ಧ ಕಪ್‌), 2 ಚಿಟಕಿ ಏಲಕ್ಕಿ ಪುಡಿ.

ವಿಧಾನ : ಅವಲಕ್ಕಿಯನ್ನು ನೀರಿನಲ್ಲಿ ತೊಳೆದು, ಕಾದಾರಿದ ಹಾಲಲ್ಲಿ ನೆನೆಹಾಕಿಡಿ. ದಪ್ಪ ತಳದ ಸ್ಟೀಲ್ ‌ಪಾತ್ರೆಯಲ್ಲಿ ಹಾಲು ಕಾಯಿಸಿ. ಮಂದ ಉರಿ ಮಾಡಿ, ಅವಲಕ್ಕಿ ಹಾಕಿ ಕುದಿಸಿರಿ. ಇದು ಗಟ್ಟಿ ಆಗತೊಡಗಿದಂತೆ ಸಕ್ಕರೆ, ಏಲಕ್ಕಿ ಸೇರಿಸಿ ಮತ್ತಷ್ಟು ಕುದಿಸಿರಿ. ಕೊನೆಯಲ್ಲಿ ದ್ರಾಕ್ಷಿ, ಗೋಡಂಬಿ, ಪಿಸ್ತಾ ಚೂರು ಹಾಕಿ ಕೆದಕಿ ಕೆಳಗಿಳಿಸಿ. ಬಿಸಿಯಾಗಿ ಅಥವಾ ಆರಿದ ನಂತರ ಇದನ್ನು ಫ್ರಿಜ್‌ನಲ್ಲಿರಿಸಿ ಚಿಲ್ ‌ಮಾಡಿ ಸವಿಯಿರಿ.

ಕ್ಯಾರೆಟ್ಕೋಸಂಬರಿ

ಸಾಮಗ್ರಿ : ಅರ್ಧ ಕಪ್‌ ಹೆಸರುಬೇಳೆ, 2-3 ಕ್ಯಾರೆಟ್‌ (ನೀಟಾಗಿ ತುರಿದಿಡಿ), 1 ಗಿಟುಕು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ತುಸು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಒಗ್ಗರಣೆಗೆ ತುಸು ಎಣ್ಣೆ, ಸಾಸುವೆ, ಇಂಗು.

ವಿಧಾನ : ಹೆಸರುಬೇಳೆ ಶುಚಿಗೊಳಿಸಿ 2 ತಾಸು ನೆನೆಹಾಕಿಡಿ. ನಂತರ ನೀರು ಬಸಿದು ಇದನ್ನು ಒಂದು ಬೇಸನ್ನಿಗೆ ಹಾಕಿಡಿ. ಇದರ ಮೇಲೆ ತುರಿದ ಕ್ಯಾರೆಟ್‌, ತೆಂಗಿನತುರಿ, ಹಸಿಮೆಣಸು, ಕೊ.ಸೊಪ್ಪು ಉದುರಿಸಿ. ಬಡಿಸುವ ಮುನ್ನ ತುಸು ನೀರಲ್ಲಿ ಕದಡಿದ ಇಂಗು, ಉಪ್ಪು ಹಾಕಿ ನಿಂಬೆಹಣ್ಣು ಹಿಂಡಿಕೊಳ್ಳಿ. ಇದಕ್ಕೆ ಒಗ್ಗರಣೆ ಕೊಟ್ಟು, ಊಟದ ಜೊತೆ ಸವಿಯಲು ಕೊಡಿ.

ತೊಂಡೆಕಾಯಿ ಪಲ್ಯ

ಸಾಮಗ್ರಿ : 250 ಗ್ರಾಂ ತೊಂಡೆಕಾಯಿ, 1 ಕಪ್‌ ಇಡೀ ರಾತ್ರಿ ನೆನೆಸಿ ಮಾರನೇ ದಿನ ಬೇಯಿಸಿದ ಕಡಲೆಕಾಳು, 1 ಗಿಟುಕು ತೆಂಗಿನ ತುರಿ,  4-5 ಒಣ ಮೆಣಸಿನಕಾಯಿ, ಅಗತ್ಯವಿದ್ದಷ್ಟು ಎಣ್ಣೆ, ಸಾಸುವೆ, ಜೀರಿಗೆ, ಧನಿಯಾ, ಅರಿಶಿನ, ಇಂಗು, 2 ಎಸಳು ಕರಿಬೇವು, ಉಪ್ಪು, ನಿಂಬೆರಸ.

ವಿಧಾನ : ತೊಂಡೆಕಾಯಿಗಳನ್ನು 4 ಭಾಗವಾಗಿ ಉದ್ದ ಕತ್ತರಿಸಿ, ತುಸು ನೀರು ಚಿಮುಕಿಸಿ ಚಿಕ್ಕ ಕುಕ್ಕರ್‌ನಲ್ಲಿ ಆವಿಯಲ್ಲಿ ಬೇಯಿಸಿ, ಒಣ ಮೆಣಸಿನಕಾಯಿ, ಧನಿಯಾ, ಜೀರಿಗೆಯನ್ನು ಲಘುವಾಗಿ ಹುರಿದು ಪುಡಿ ಮಾಡಿಡಿ. ಆಮೇಲೆ ಇದನ್ನು ವೆಟ್‌ ಮಿಕ್ಸಿಗೆ ಹಾಕಿ ತೆಂಗಿನ ತುರಿ ಜೊತೆ (ಕನಿಷ್ಠ ನೀರು ಬಳಸಿ) ಪೇಸ್ಟ್ ಮಾಡಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ.  ಇದಕ್ಕೆ ಇಂಗು, ಕರಿಬೇವು, ಹಾಕಿ  ನಂತರ ತೊಂಡೆಕಾಯಿ, ಕಡಲೆಕಾಳು ಹಾಕಿ ಬಾಡಿಸಿ. ಆಮೇಲೆ ಉಪ್ಪು, ರುಬ್ಬಿದ ಮಸಾಲೆ, ಅರಿಶಿನ ಹಾಕಿ ಕೈಯಾಡಿಸಿ ಕೆಳಗಿಳಿಸಿ. ನಿಂಬೆರಸ ಹಿಂಡಿಕೊಂಡು, ತುಸು ಹೆಚ್ಚಿದ ಕೊ.ಸೊಪ್ಪು ಉದುರಿಸಿ. ಬಿಸಿ ಬಿಸಿ ಅನ್ನ, ಚಪಾತಿ ಜೊತೆ ಸವಿಯಲು ಕೊಡಿ.

ವೆಜ್ಕುರ್ಮಾ

ಮೂಲ ಸಾಮಗ್ರಿ : 2 ಆಲೂ, 2 ಕ್ಯಾರೆಟ್‌ (ಕ್ಯೂಬ್ಸ್ ಮಾಡಿ), ಅರ್ಧರ್ಧ ಕಪ್‌ ಹೆಚ್ಚಿದ  ಬೀನ್ಸ್, ಕ್ಯಾಪ್ಸಿಕಂ, ಹಸಿ ಬಟಾಣಿ, 1 ಕಪ್‌ಹೂಕೋಸಿನ ತುಂಡು, 2 ಈರುಳ್ಳಿ, 3-4 ಹುಳಿ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂ ಮಸಾಲ, ಹಸಿ ಮೆಣಸಿನ ಪೇಸ್ಟ್, ಟೊಮೇಟೊ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಚಿಟಕಿ ಅರಿಶಿನ, ಅರ್ಧ ಸೌಟು ರೀಫೈಂಡ್‌ ಎಣ್ಣೆ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು.

ಮಸಾಲೆಗಾಗಿ : 1 ಗಿಟುಕು ತೆಂಗಿನ ತುರಿ, 3 ದೊಡ್ಡ ಚಮಚ ಗೋಡಂಬಿ ಚೂರು, 1-2 ಚಮಚ ಗಸಗಸೆ, ಹುರಿಗಡಲೆ, 2 ಚಿಟಕಿ ಸೋಂಪು.

ವಿಧಾನ : ಮಿಕ್ಸಿಗೆ ತೆಂಗಿನ ತುರಿ, ಗಸಗಸೆ, ಸೋಂಪು,  ಗೋಡಂಬಿ, ಹುರಿಗಡಲೆ, ಹಸಿಮೆಣಸು, ಟೊಮೇಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1 ಈರುಳ್ಳಿ, ಗರಂಮಸಾಲ ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಕ್ಯಾಪ್ಸಿಕಂ ಹೊರತುಪಡಿಸಿ ಉಳಿದ ತರಕಾರಿ ಹೋಳನ್ನು ಒಟ್ಟಿಗೆ ಬೇಯಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಆಮೇಲೆ ಕ್ಯಾಪ್ಸಿಕಂ, ಟೊಮೇಟೊ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಅರಿಶಿನ ಸೇರಿಸಿ ಕೆದಕಬೇಕು. ಆಮೇಲೆ ರುಬ್ಬಿದ ಮಸಾಲೆ ಹಾಕಿ ಕೈಯಾಡಿಸಿ. ನಂತರ ಬೆಂದ ತರಕಾರಿ ಸ್ಟಾಕ್‌ ಸಮೇತ ಬೆರೆಸಿ, ಮಂದ ಉರಿಯಲ್ಲಿ ಕೆದಕಿ ಕಳಗಿಳಿಸಿ. ಕೊ.ಸೊಪ್ಪು ಉದುರಿಸಿ, ಬಿಸಿ ಇರುವಾಗಲೇ ಚಪಾತಿ ಜೊತೆ ಕೊಡಿ.

ಬೀಟ್ರೂಟ್ರಾಯ್ತಾ

ಸಾಮಗ್ರಿ : 2 ಮಧ್ಯಮ ಗಾತ್ರದ ಬೀಟ್‌ರೂಟ್‌, 2 ಕಪ್‌ ಕೆನೆ ಮೊಸರು, 3-4 ಹಸಿ ಮೆಣಸಿನಕಾಯಿ, ಒಗ್ಗರಣೆಗೆ ರೀಫೈಂಡ್‌ ಎಣ್ಣೆ, ಸಾಸುವೆ, ಜಾರಿಗೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಖಾರಾ ಬೂಂದಿ.

ವಿಧಾನ : ಬೀಟ್‌ರೂಟ್‌ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಒಂದು ನಾನ್‌ಸ್ಟಿಕ್‌ ಪ್ಯಾನ್ ನಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಅದಕ್ಕೆ ಹೆಚ್ಚಿದ ಹಸಿ ಮೆಣಸು, ಬೀಟ್‌ರೂಟ್‌ ಹಾಕಿ ಮಂದ ಉರಿಯಲ್ಲಿ ತುಸು ನೀರು ಚಿಮುಕಿಸಿ ಹದನಾಗಿ ಬಾಡಿಸಿ ಕೆಳಗಿಳಿಸಿ ಆರಲು ಬಿಡಿ. ನಂತರ ಉಪ್ಪು, ಖಾರ ಹಾಕಿ ಕೆದಕಿ, ಇದಕ್ಕೆ ಮೊಸರು ಬೆರೆಸಿ. ಇದೀಗ ಪೌಷ್ಟಿಕ ರಾಯ್ತಾ ರೆಡಿ. ಬಿಸಿ ಅನ್ನ, ರೊಟ್ಟಿ ಜೊತೆ ಸವಿಯಿರಿ.

ಸ್ವಾದಿಷ್ಟ ಹಾಗಲ ಮಸಾಲೆ

ಮೂಲ ಸಾಮಗ್ರಿ : 250 ಗ್ರಾಂ ಹಾಗಲಕಾಯಿ, 1 ತುಂಡು  ಶುಂಠಿ, 3-4 ಒಣ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ಹುಣಿಸೆ ಕಿವುಚಿದ ನೀರು, ಇಂಗು, ಒಗ್ಗರಣೆ ಸಾಮಗ್ರಿ, ಅರ್ಧ ಸೌಟು ಎಣ್ಣೆ, ಕರಿಬೇವು.

ಮಸಾಲೆ ಪುಡಿಗಾಗಿ : ಅರ್ಧ ಕಪ್‌ ಕಡಲೆಬೀಜ, 2 ಸಣ್ಣ ಚಮಚ ಧನಿಯಾ, 1 ಸಣ್ಣ ಚಮಚ ಕಾಳು ಮೆಣಸು, ತುಸು ಜೀರಿಗೆ, 1 ಗಿಟುಕು ಕೊಬ್ಬರಿ ತುರಿ.

ವಿಧಾನ : ಮೊದಲು ಮಸಾಲೆಗಾಗಿ ಎಲ್ಲಾ ಸಾಮಗ್ರಿ ಸೇರಿಸಿ ಹುರಿದು ತರಿಯಾಗಿ ಪುಡಿ ಮಾಡಿಕೊಳ್ಳಿ. ಹಾಗಲಕಾಯಿ ಬೀಜ ತೆಗೆದು ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಕರಿಬೇವಿನ ಜೊತೆ ಅತಿ ಸಣ್ಣಗೆ ಹೆಚ್ಚಿದ ಶುಂಠಿ, ತುಂಡರಿಸಿದ ಒಣ ಮೆಣಸಿನಕಾಯಿ ಸೇರಿಸಿ ಬಾಡಿಸಿ. ಆಮೇಲೆ ಹಾಗಲಕಾಯಿ, ಇಂಗು ಹಾಕಿ ಬಾಡಿಸಬೇಕು. ನಂತರ ಹುಣಿಸೆ ರಸ, ಉಪ್ಪು, ಮಸಾಲೆ ಪುಡಿ, ಬೆಲ್ಲ ಹಾಕಿ ಮಂದ ಉರಿಯಲ್ಲಿ 5 ನಿಮಿಷ ಕೈಯಾಡಿಸಿ. ನಂತರ ಕೆಳಗಿಳಿಸಿ, ಬಿಸಿಯಾಗಿ ಅನ್ನ, ಚಪಾತಿ, ದೋಸೆ ಜೊತೆ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ