ಯೋಗರ್ಟ್ ದಲಿಯಾ
ಸಾಮಗ್ರಿ : 1 ಕಪ್ ಬ್ರೋಕನ್ ವೀಟ್, 2 ಕಪ್ ಹುಳಿ ಮೊಸರು, ಅರ್ಧರ್ಧ ಕಪ್ ಹಸಿಬಟಾಣಿ, ಕ್ಯಾರೆಟ್ ತುರಿ, ಒಗ್ಗರಣೆಗೆ ಸಾಸುವೆ, ಜೀರಿಗೆ, ಇಂಗು, 8-10 ಕರಿಬೇವಿನ ಎಲೆ, ಕ/ಉ ಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ತರಿತರಿ ಕಾಳುಮೆಣಸು, 1-2 ಹಸಿಮೆಣಸು, 2-3 ಚಮಚ ತುಪ್ಪ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೊದಲು ಬ್ರೋಕನ್‌ವೀಟ್‌ನ್ನು ತುಸು ತುಪ್ಪದಲ್ಲಿ ಘಮ್ಮೆನ್ನುವಂತೆ ಹುರಿಯಿರಿ. ನಂತರ ಅರ್ಧ ಗಂಟೆ ನೀರಲ್ಲಿ ನೆನೆಹಾಕಿಡಿ. ಒಂದು ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ನಂತರ ಹೆಚ್ಚಿದ ಹಸಿ ಮೆಣಸು, ಕಾಳುಮೆಣಸು ಹಾಕಿ ಕೆದಕಬೇಕು. ಆಮೇಲೆ ಬಟಾಣಿ, ಕ್ಯಾರೆಟ್ ಹಾಕಿ ಬಾಡಿಸಿ, ನೀರು ಚಿಮುಕಿಸಿ ಬೇಯಿಸಿ. ಆಮೇಲೆ ನೆನೆದ ವೀಟ್, 1 ಲೋಟ ನೀರು, ಸೇರಿಸಿ ಬೇಯಿಸಿ. 5 ನಿಮಿಷ ಬಿಟ್ಟು ಮೊಸರು ಬೆರೆಸಿ ಚೆನ್ನಾಗಿ ಕೆದಕಿ ಬೇಯಿಸಿ. ಕೆಳಗಿಳಿಸಿದ ಮೇಲೆ ಕೊ.ಸೊಪ್ಪು ಉದುರಿಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ಓಟ್ಸ್ ಪನೀರ್ ಪರೋಟ
ಸಾಮಗ್ರಿ : 1 ಕಪ್ ಗೋದಿಹಿಟ್ಟು, 4 ಚಮಚ ತುಪ್ಪ, 5 ಚಮಚ ರೀಫೈಂಡ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್ ಮಸಾಲ, ಗರಂಮಸಾಲ, 150 ಗ್ರಾಂ ಮ್ಯಾಶ್ಡ್ ಪನೀರ್, 1 ಕಪ್ ಓಟ್ಸ್ ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಗೋದಿಹಿಟ್ಟಿಗೆ ಚಿಟಕಿ ಉಪ್ಪು, ನೀರು ಬೆರೆಸಿ ಮೃದು ಚಪಾತಿ ಹಿಟ್ಟು ಕಲಸಿ, ತುಪ್ಪ ಬೆರೆಸಿ ನಾದಿಕೊಂಡು ಚೆನ್ನಾಗಿ ನೆನೆಯಲು ಬಿಡಿ. ಒಂದು ಚಿಕ್ಕ ಬಾಣಲೆಯಲ್ಲಿ ಓಟ್ಸ್ ನ್ನು ತುಸು ತುಪ್ಪದಲ್ಲಿ ಲಘುವಾಗಿ ಹುರಿಯಿರಿ. ನಂತರ ಇದಕ್ಕೆ ಮಸೆದ ಪನೀರ್, ಉಪ್ಪು, ಖಾರ, ಕೊ.ಸೊಪ್ಪು, ಮಸಾಲ ಬೆರೆಸಿ ಕೆದಕಿ ಕೆಳಗಿಳಿಸಿ. ಇದೀಗ ಹೂರಣ ರೆಡಿ. ನೆನೆದ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ ಲಟ್ಟಿಸಿ. 2-3 ಚಮಚ ಹೂರಣ ತುಂಬಿಸಿ, ನೀಟಾಗಿ ಮಡಿಚಿ, ತುಪ್ಪ ಸವರಿ ಮತ್ತೆ ಲಟ್ಟಿಸಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಹೆಂಚಿಗೆ ಹಾಕಿ, ಎಣ್ಣೆ ಬಿಡುತ್ತಾ ಎರಡೂ ಬದಿ ಬೇಯಿಸಿ. ಈ ಬಿಸಿ ಬಿಸಿ ಪರೋಟಾವನ್ನು ಗಟ್ಟಿ ಮೊಸರಿನೊಂದಿಗೆ ಸವಿಯಲು ಕೊಡಿ.
ರಷ್ಯನ್ ಸ್ಪೆಷಲ್ ಸ್ಯಾಂಡ್‌ವಿಚ್
ಸಾಮಗ್ರಿ : 8 ಸ್ಲೈಸ್ ಬ್ರೌನ್ ಬ್ರೆಡ್, 1 ಕಪ್ ಗಟ್ಟಿ ಮೊಸರು (ಹಂಗ್ ಕರ್ಡ್), 3-4 ಚಮಚ ಫ್ರೆಶ್ ಕ್ರೀಂ, 2-3 ಚಮಚ ಕ್ಯಾರೆಟ್‌ತುರಿ, ಅರ್ಧ ಕಪ್ ಸಣ್ಣಗೆ ಹೆಚ್ಚಿದ ಎಲೆಕೋಸು, 1-1 ದೊಡ್ಡ ಚಮಚ ಹೆಚ್ಚಿದ ಹಸಿರು, ಹಳದಿ, ಕೆಂಪು ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು (ಹುರಿದು ಪುಡಿ ಮಾಡಿದ) ಸಾಸುವೆ, ಜೀರಿಗೆ, ಸೋಂಪು, ಕಾಳುಮೆಣಸು, ಪುಡಿಸಕ್ಕರೆ, ಉಪ್ಪು, ಬೆಣ್ಣೆ.
ವಿಧಾನ : ಮೊದಲು ಗಟ್ಟಿ ಮೊಸರಿನಲ್ಲಿ ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿ ಸ್ಪ್ರೆಡ್ ಸಿದ್ಧಪಡಿಸಿ. ಬ್ರೆಡ್ ಸ್ಲೈಸ್‌ಗಳನ್ನು ಲಘುವಾಗಿ ಬಿಸಿ ಮಾಡಿ, ಒಂದೊಂದು ಬದಿಗೆ ಬೆಣ್ಣೆ ಸವರಿಡಿ. ಒಂದರ ಮೇಲೆ 3-4 ಚಮಚ ಸ್ಪ್ರೆಡ್ ಹರಡಿ, ಇನ್ನೊಂದರಿಂದ ಆ ಭಾಗ ಮುಚ್ಚಬೇಕು. ನಂತರ ಚಿತ್ರದಲ್ಲಿರುವಂತೆ ತ್ರಿಕೋನಾಕಾರವಾಗಿ ಕತ್ತರಿಸಿ, ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಲೆಬನೀಸ್ ಪಫ್
ಸಾಮಗ್ರಿ : ಅರ್ಧರ್ಧ ಕಪ್ ಆಟಾ, ಮೈದಾ, ಹೆಚ್ಚಿದ ಪಾಲಕ್ ಸೊಪ್ಪು, ಎಲೆಕೋಸು, ಹೂಕೋಸು, ತುರಿದ ಕ್ಯಾರೆಟ್, ಬೇಬಿ ಕಾರ್ನ್, ಅರ್ಧ ಸೌಟು ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಶುಂಠಿ-ಬೆಳ್ಳುಳ್ಳಿ, ಹಸಿ ಮೆಣಸಿನ ಪೇಸ್ಟ್, ಚಾಟ್ ಮಸಾಲ, ಗರಂ ಮಸಾಲ.
ವಿಧಾನ : ಆಟಾ, ಮೈದಾ, ಉಪ್ಪು, ನೀರು, ಬೆರೆಸಿ ಮೃದು ಪೂರಿ ಹಿಟ್ಟಿನ ಹದಕ್ಕೆ ಕಲಸಿ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ಉಳಿದೆಲ್ಲ ಸಾಮಗ್ರಿ ಬೆರೆಸಿ ಹೂರಣ ರೆಡಿ ಮಾಡಿ. ನೆನೆದ ಹಿಟ್ಟಿನಿಂದ ಉಂಡೆ ಮಾಡಿ, ಪೂರಿ ಲಟ್ಟಿಸಿ. ಅರ್ಧ ಚಂದ್ರಾಕಾರ ಕತ್ತರಿಸಿ, ಹೂರಣ ತುಂಬಿಸಿ ಸಮೋಸಾ ತರಹ ರೆಡಿ ಮಾಡಿ. ಇದನ್ನು ಇಡ್ಲಿ ತರಹ ಆವಿಯಲ್ಲಿ ಹದನಾಗಿ ಬೇಯಿಸಿ, ಬಿಸಿಬಿಸಿಯಾಗಿ ಮೇಲೆ ತುಪ್ಪ ಹಾಕಿ ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಮಲ್ಟಿ ಗ್ರೇನ್ ತವಾ ಪಿಜ್ಜಾ
ಸಾಮಗ್ರಿ : ಗೋದಿಹಿಟ್ಟು, ರಾಗಿಹಿಟ್ಟು, ಮೈದಾ, ರವೆ, ಅಕ್ಕಿಹಿಟ್ಟು, ಕಡಲೆಹಿಟ್ಟು, ಜೋಳದ ಹಿಟ್ಟು (ತಲಾ ಅರ್ಧ ಕಪ್), 2-3 ಕಪ್‌ಹುಳಿಮೊಸರು, 1-1 ಚಮಚ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್, 2 ಈರುಳ್ಳಿ, ಸಣ್ಣಗೆ ಹೆಚ್ಚಿದ ಹಸಿರು, ಹಳದಿ, ಕೆಂಪು ಕ್ಯಾಪ್ಸಿಕಂ, (ಒಟ್ಟಾರೆ 1 ಕಪ್), 1 ದೊಡ್ಡ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಈನೋ ಫ್ರೂಟ್ ಸಾಲ್ಟ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ತುಸು ಎಣ್ಣೆ.
ವಿಧಾನ : ಲಘುವಾಗಿ ರವೆ ಹುರಿದು ಉಳಿದ ಹಿಟ್ಟು, ಮೊಸರು, ಉಪ್ಪು, ಮೆಣಸು, ಈನೋ, ತುಸು ನೀರು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ 1 ತಾಸು ಹಾಗೇ ಬಿಡಿ. ನಾನ್‌ಸ್ಟಿಕ್ ಪ್ಯಾನ್ ಮೇಲೆ ಎಣ್ಣೆ ಬಿಟ್ಟು, ಇದರಿಂದ ಪುಟ್ಟಪುಟ್ಟ ದೋಸೆ ತಯಾರಿಸಿ. ಇದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೇಟೊ, ಕ್ಯಾಪ್ಸಿಕಂ, ಕೊ.ಸೊಪ್ಪು ಉದುರಿಸಿ. ಒಂದು ಬದಿ ಬೆಂದ ನಂತರ ಎಚ್ಚರಿಕೆಯಿಂದ ತಿರುವಿ ಹಾಕಿ, ಎಣ್ಣೆ ಬಿಟ್ಟು, ಮತ್ತೊಂದು ಬದಿಯನ್ನೂ ಬೇಯಿಸಿ. ತೆಗೆಯುವ ಮುನ್ನ ಮೇಲೆ ಒಂದಿಷ್ಟು ತುರಿದ ಚೀಸ್ ಉದುರಿಸಿ. ಹೀಗೆ ಬಿಸಿಯಾಗಿ ರೆಡಿಯಾದ ತವಾ ಪಿಜ್ಜಾಗಳನ್ನು ಸಾಸ್ ಜೊತೆ ಸವಿಯಲು ಕೊಡಿ.
ಸ್ಪ್ರೌಟೆಡ್ ಕುಲ್ಚಾ
ಸಾಮಗ್ರಿ : 4-5 ಚಪಾತಿ, 100 ಗ್ರಾಂ ಬೆಣ್ಣೆ, 1 ಕಪ್ ಸಣ್ಣಗೆ ಹೆಚ್ಚಿದ ಹಸಿರು, ಹಳದಿ, ಕೆಂಪು ಕ್ಯಾಪ್ಸಿಕೆ, ಮೊಳಕೆ ಕಟ್ಟಿದ ಹೆಸರುಕಾಳು, ಕಡಲೆಕಾಳು, ಹುರುಳಿಕಾಳು (ತಲಾ 50 ಗ್ರಾಂ), 1 ದೊಡ್ಡ ಈರುಳ್ಳಿ, ತುಸು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಚಾಟ್ ಮಸಾಲ, ಪುದೀನಾ ಚಟ್ನಿ, 4 ಚಮಚ ಎಣ್ಣೆ, ತುಸು ಸಾಸುವೆ, ಜೀರಿಗೆ.
ವಿಧಾನ : ಮೊದಲು ಮೊಳಕೆ ಕಾಳನ್ನು ಬೇಯಿಸಿಡಿ. ಒಂದು ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ರೀಫೈಂಡ್ ಎಣ್ಣೆ ಬಿಸಿ ಮಾಡಿ, ಜೀರಿಗೆ ಒಗ್ಗರಣೆ ಕೊಡಿ. ಆಮೇಲೆ ಹೆಚ್ಚಿದ ಹಸಿಮೆಣಸು, ಈರುಳ್ಳಿ ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಮಸಾಲ, ಉಪ್ಪು ಹಾಕಿ ಬೆಂದ ಕಾಳು ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದೀಗ ಹೂರಣ ರೆಡಿ ಆಯ್ತು. ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ. ಪುದೀನಾ ಚಟ್ನಿಗೆ ಬೆಣ್ಣೆ ಬೆರೆಸಿ ಅದನ್ನು ಚಪಾತಿಗಳ ಒಂದು ಬದಿಗೆ ಸವರಿಡಿ. ಇದರ ಮೇಲೆ 5-6 ಚಮಚ ಹೂರಣ ಹರಡಿ, ಮತ್ತೊಂದರಿಂದ ಮುಚ್ಚಿಡಿ. ಅದರ ಮೇಲೆ ತುಸು ಬೆಣ್ಣೆ ಸವರಿ, ಟೋಸ್ಟರ್‌ನಲ್ಲಿ ಗ್ರಿಲ್ ಮಾಡಿ. 4 ಭಾಗವಾಗಿ ಕತ್ತರಿಸಿ ಸಾಸ್ ಜೊತೆ ಸವಿಯಿರಿ.
ಪಾಸ್ತಾ ಇನ್ ಟ್ಯಾಂಗಿ ಸಾಸ್
ಸಾಮಗ್ರಿ : 2 ಕಪ್ ಪಾಸ್ತಾ, ತೆಳ್ಳಗೆ ಉದ್ದಕ್ಕೆ ಹೆಚ್ಚಿದ ಕ್ಯಾರೆಟ್, ಬಣ್ಣ ಬಣ್ಣದ ಕ್ಯಾಪ್ಸಿಕಂ, ಬ್ರೋಕ್ಲಿ (ತಲಾ ಅರ್ಧ ಕಪ್), 6-8 ಹುಳಿ ಟೊಮೇಟೊ, 50 ಗ್ರಾಂ ತುರಿದ ಶುಂಠಿ, 2-3 ಚಿಟಕಿ ಏಲಕ್ಕಿಪುಡಿ, ದಾಲ್ಚಿನ್ನಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ಒಂದಿಷ್ಟು ತುಳಸಿ ಎಲೆಗಳು.
ವಿಧಾನ : ಮೊದಲು ಪಾಸ್ತಾವನ್ನು 5 ಕಪ್ ಕುದಿ ನೀರಿಗೆ ಹಾಕಿ ಚೆನ್ನಾಗಿ ಬೇಯಿಸಿ. ಈ ನೀರನ್ನು ಬಸಿದು, ಕೊಳಾಯಿ ಕೆಳಗೆ ಹಿಡಿದು ಹರಿವ ನೀರಲ್ಲಿ ತೊಳೆಯಿರಿ. ಸಾಸ್ ತಯಾರಿಸಲು, ಮೊದಲು ತುಸು ಎಣ್ಣೆಯಲ್ಲಿ ಶುಂಠಿ ತುರಿ ಬಾಡಿಸಿ, ಅದಕ್ಕೆ ಹೆಚ್ಚಿದ ಟೊಮೇಟೊ ಹಾಕಿ ಚೆನ್ನಾಗಿ ಬಾಡಿಸಿ. ಕೆಳಗಿಳಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ನುಣ್ಣಗೆ ತಿರುವಿಕೊಳ್ಳಿ. ಮತ್ತೆ ಎಣ್ಣೆ ಬಿಸಿ ಮಾಡಿ ಇದನ್ನು ಅದಕ್ಕೆ ಹಾಕಿ ಬಾಡಿಸಬೇಕು. ಇದಕ್ಕೆ ಉಪ್ಪು, ದಾಲ್ಚಿನ್ನಿ, ಏಲಕ್ಕಿ, ಮೆಣಸು, ತುಳಸಿ ಎಲೆ ಹಾಕಿ 2 ನಿಮಿಷ ಬಾಡಿಸಿ. ಬ್ರೋಕ್ಲಿ, ಕ್ಯಾರೆಟ್, ಕ್ಯಾಪ್ಸಿಕಂ ಇತ್ಯಾದಿಗಳನ್ನು ಸಾಸ್‌ಗೆ ಬೆರೆಸಿ 2 ನಿಮಿಷ ಕೈಯಾಡಿಸಿ. 10 ನಿಮಿಷ ಮುಚ್ಚಳ ಮುಚ್ಚಿರಿಸಿ ಬೇಯಲು ಬಿಡಿ. ಇದಕ್ಕೆ ಪಾಸ್ತಾ ಬೆರೆಸಿ, ಬೇಗ ಕೈಯಾಡಿಸಿ. ಬಿಸಿಯಾಗಿ ಸವಿಯಲು ಕೊಡಿ.