ರಾಜೇಶ್‌ ಕಾಲೇಜಿನಲ್ಲಿ ಬಹಳ ದಿನಗಳಿಂದ ಶೃತಿಯನ್ನು ಕಂಡಿದ್ದ. ಆದರೆ ಇವರಿಬ್ಬರ ನಡುವೆ ಯಾವ ರೀತಿಯಲ್ಲಿಯೂ ಪರಿಚಯವಿರಲಿಲ್ಲ.  ಆದರೆ ಕಾಲೇಜ್‌ ಡೇ ಕಾರ್ಯಕ್ರಮಕ್ಕೆ ನಾಟಕ ತಯಾರಿ ನಡೆಯುತ್ತಿತ್ತು. ಆಗ ಇಬ್ಬರೂ ಭೇಟಿಯಾಗುತ್ತಿದ್ಜರು. ಈ ಭೇಟಿ ಇಬ್ಬರಲ್ಲೂ ಒಂದು ರೀತಿಯ ಸ್ನೇಹವನ್ನು ಬೆಸೆಯಿತು. ದಿನಗಳು ಉರುಳಿದಂತೆ ಅವರ ನಡುವಿನ ಸ್ನೇಹ, ಪ್ರೀತಿಯಾಗಿ ಮಾರ್ಪಟ್ಟಿತು.

ದಿನಗಳು ಸರಿದವು, ರಾಜೇಶ್‌ ತನ್ನ ಎಂಬಿಎ ವ್ಯಾಸಂಗ ಪೂರೈಸಿದ. ಶೃತಿ ತನ್ನ ಪದವಿ ವ್ಯಾಸಂಗ ಮುಗಿಸಿದಳು. ಅದೊಂದು ದಿನ ಕಾಲೇಜಿನ ಹತ್ತಿರವಿದ್ದ ಕಾಫಿ ಶಾಪ್‌ನಲ್ಲಿ ಇಬ್ಬರೂ ಸಂಧಿಸಿದರು.

“ಏನಾದರೂ ಗುಡ್‌ ನ್ಯೂಸ್‌ ಇದೆಯಾ? ನಿನ್ನ ಮುಖದಲ್ಲಿ ಏನೋ ವಿಶೇಷ ಕಾಣಿಸುತ್ತಿದೆ,” ರಾಜೇಶನ ಮುಖದಲ್ಲಿನ ಸಂತೋಷವನ್ನು ಗುರುತಿಸುತ್ತಾ ಕೇಳಿದಳು ಶೃತಿ.

“ನನಗೆ ಕೆಲಸ ಸಿಕ್ಕಿದೆ,” ರಾಜೇಶ್‌ ಉಲ್ಲಾಸದಿಂದ ಉತ್ತರವಿತ್ತ.

“ಕೆಲಸ! ಎಲ್ಲಿ?”

“ಮುಂಬೈನ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ. ಇನ್ನು ಹತ್ತು ದಿನಗಳಲ್ಲಿ ಕೆಲಸಕ್ಕೆ ಹಾಜರಾಗುವಂತೆ ಕರೆದಿದ್ದಾರೆ.”

ಶೃತಿಯ ಮುಖ ನಿರಾಶೆಯಿಂದ ಕಪ್ಪಿಟ್ಟಿತು.

“ಕಂಗ್ರಾಟ್ಸ್ ರಾಜೇಶ್‌…” ಯಾಂತ್ರಿಕವಾಗಿ ಪ್ರತಿಕ್ರಿಯಿಸಿದಳು. ಅವಳ ಮುಖದಲ್ಲಿನ ಬೇಸರವನ್ನು ಗುರುತಿಸಿದ ರಾಜೇಶ್‌, “ಏನಾಯ್ತು? ಈ ಸುದ್ದಿ ಕೇಳಿ ನಿನಗೆ ಖುಷಿ ಆಗಿಲ್ಲವೇ?” ಕೇಳಿದ.

ಶೃತಿ ಮೌನವಾಗಿಯೇ ಇದ್ದಳು. ರಾಜೇಶ್‌ ಪುನಃ ಅದೇ ಪ್ರಶ್ನೆಯನ್ನು ಕೇಳಿದಾಗ, “ಇಲ್ಲೇ ಆಗಿದ್ದರೆ ನಾವು ಆಗಾಗ ಭೇಟಿಯಾಗುತ್ತಿದ್ದೆ. ನೀನು ಮುಂಬೈ ಸೇರಿದರೆ….” ವಿಷಾದದಿಂದ ನುಡಿದ ಶೃತಿ ರಾಜೇಶನತ್ತ ನಿರಾಸೆಯ ನೋಟ ಬೀರಿದಳು.

“ನಾನೂ ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಬಹಳ ಪ್ರಯತ್ನಿಸಿದೆ. ಆದರೆ ಎಲ್ಲೂ ನನಗೆ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ಇದು ನನಗೆ ಸಿಕ್ಕಿರೋ ಮೊದಲ ಕೆಲಸ. ನಾನಿದನ್ನು ಕಳೆದುಕೊಳ್ಳಲಾರೆ. ಕೆಲವು ದಿನಗಳ ಕಾಲ ಕೆಲಸ ಮಾಡಿ, ಅನುಭವ ಗಳಿಸಿಕೊಂಡಲ್ಲಿ ಮುಂದೆ ಬೆಂಗಳೂರಿನಲ್ಲಿ ಉದ್ಯೋಗ ಹಿಡಿಯೋಕೆ ನನಗೂ ಅನುಕೂಲವಾಗುತ್ತದೆ,” ಅವನು ಅವಳ ಕೈಗಳನ್ನು ತನ್ನ ಕೈಯಲ್ಲಿ ಹಿಡಿದು, “ನಾನು ಬೆಂಗಳೂರಿನಲ್ಲಿರಲಿ, ಮುಂಬೈನಲ್ಲಿರಲಿ ನನ್ನ ಮನಸ್ಸು ಪೂರ್ತಿಯಾಗಿ ನಿನ್ನ ಬಳಿಯೇ ಇರುತ್ತದೆ,” ಎಂದು ಭರವಸೆ ಇತ್ತ.

“ನನ್ನದೂ ಸಹ,” ಎಂದಳು ಶೃತಿ.

ರಾಜೇಶ್‌ ಮುಂಬೈಗೆ ತೆರಳಿದ ನಂತರ ಶೃತಿ ಏಕಾಂಗಿತನವನ್ನು ಅನುಭವಿಸುತ್ತಿದ್ದಳು. ರಾಜೇಶನಿಂದ ಫೋನ್‌ ಬಂದಾಗ ಮಾತ್ರವೇ ಅವಳ ಮುಖದಲ್ಲಿ ಕಾಂತಿ ಉಕ್ಕುತ್ತಿತ್ತು. ದಿನಗಳು ಉರುಳಿದವು. ಏನೂ ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತು ಶೃತಿಗೂ ಬೇಸರವಾಗತೊಡಗಿತು. ಅವಳು ಮುಂದೆ ಎಂ.ಸಿ.ಎ. ವ್ಯಾಸಂಗವನ್ನು ಮುಂದುವರಿಸಲು ನಿರ್ಧರಿಸಿದಳು.

ಮೂರು ವರ್ಷಗಳು ಕಳೆದವು. ಅದೊಂದು ದಿನ ರಾಜೇಶ್‌ ಬೆಳಗಿನ ಉಪಾಹಾರವನ್ನು ಮಾಡುತ್ತಿದ್ದಾಗ ಅವನ ಫೋನ್‌ ರಿಂಗಾಯಿತು. ಫೋನ್‌ ಎತ್ತಿಕೊಂಡೊಡನೆ ಅತ್ತ ಕಡೆಯಿಂದ ಅವನ ತಾಯಿ ಉದ್ವೇಗ ತುಂಬಿದ ದನಿಯಿಂದ “ಹಲೋ… ನಿನ್ನ ಅಪ್ಪಾಜಿ ಆಸ್ಪತ್ರೆಯಲ್ಲಿದ್ದಾರೆ… ಅವರು ನಿನ್ನನ್ನು ನೋಡಬೇಕೆಂದಿದ್ದಾರೆ. ಬೇಗನೆ ಹೊರಟು ಬಾ…” ಎಂದಷ್ಟೇ ಹೇಳಿ ರಿಸೀವರ್‌ಕೆಳಗಿಳಿಸಿದರು.

`ಕಳೆದ ವಾರವಷ್ಟೇ ನಾನು ಮಾತನಾಡಿದಾಗ ಅಪ್ಪಾಜಿ ಆರೋಗ್ಯದಿಂದ ಗಟ್ಟಿಮುಟ್ಟಾಗಿದ್ದರಲ್ಲ….?’ ಎಂದುಕೊಳ್ಳುತ್ತಾ ರಾಜೇಶ್‌ಸನಿಹದಲ್ಲಿದ್ದ ಕುರ್ಚಿಯಲ್ಲಿ ಕುಸಿದು ಕುಳಿತ. ಮರುದಿನ ರಾಜೇಶ್‌ ಬೆಂಗಳೂರು ತಲುಪಿದ.

“ಅಪ್ಪಾಜಿ…. ಏನಾಯ್ತು?” ರಾಜೇಶ್‌ ತಂದೆಯ ಬಳಿ ಕುಳಿತು ಅವರ ಕೈಯನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾ ಕೇಳಿದ. ಅಲ್ಲೇ ಹತ್ತಿರದಲ್ಲಿದ್ದ ಅವನ ತಾಯಿ ವಿವರಿಸತೊಡಗಿದರು, “ಅಪ್ಪಾಜಿ ಎದೆ ನೋವಿನಿಂದ ನರಳಲಾರಂಭಿಸಿದ್ದರು. ಕೂಡಲೇ ಆಸ್ಪತ್ರೆಗೆ ಸೇರಿಸಿದೆ. ಡಾಕ್ಟರ್‌ ಹದಿನೈದು ದಿನ ವಿಶ್ರಾಂತಿಗೆ ಸೂಚಿಸಿದ್ದಾರೆ…..”

ತಾಯಿ ಮಾತು ಮುಗಿಸುತ್ತಿದ್ದಂತೆಯೇ ತಂದೆ ದುರ್ಬಲ ಮಂದಹಾಸ ಬೀರುತ್ತಾ, “ನಿನ್ನನ್ನು ನೋಡಿದ ಬಳಿಕ ನನಗೀಗ ಆರಾಮವಿದೆ ಎನಿಸುತ್ತಿದೆ,” ಎಂದರು.

“ಇದನ್ನು ಕೇಳುವುದಕ್ಕೆ ನಾನೂ ಬಯಸುವುದು,” ತಂದೆಯ ಬಳಿ ಇನ್ನಷ್ಟು ಸರಿಯುತ್ತಾ ರಾಜೇಶ್‌ ಹೇಳಿದ.

ಆ ದಿನ ಸಂಜೆ ರಾಜೇಶ್‌ ತನ್ನ ತಂದೆಯ ಬಳಿಯಲ್ಲಿಯೇ ಇದ್ದ. ಗಂಭೀರ ದನಿಯಲ್ಲಿ ರಾಜೇಶನೊಂದಿಗೆ ಮಾತನಾಡಲು ಪ್ರಾರಂಭಿಸಿದ ಅವರು,  “ನಿನ್ನ ಜೀವನದ ಕುರಿತು ಕೆಲವು ವಿಚಾರಗಳನ್ನು ನಾನೀಗ ನಿನ್ನೊಡನೆ ಮಾತನಾಡಬೇಕು,” ಎನ್ನತ್ತಾ ಸನಿಹದಲ್ಲಿ ಕುಳಿತಿದ್ದ ಮಡದಿಯನ್ನೊಮ್ಮೆ ದೃಷ್ಟಿಸಿದರು.

ಮತ್ತೆ ನಿರಾಳವಾಗಿ ಉಸಿರಾಡಿದ ಬಳಿಕ ರಾಜೇಶನ ತಂದೆ ಪುನಃ ಮಾತಿಗಾರಂಭಿಸಿದರು, “ನಿನಗೆ ನೆನಪಿದೆಯಾ? ಕೆಲವು ವರ್ಷಗಳ ಹಿಂದೆ ನನ್ನ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದೆ. ಆ ಸಮಯದಲ್ಲಿ ನನ್ನ ಸ್ನೇಹಿತ ವಿಕ್ರಂ ನನಗೆ ಬಹಳ ನೆರವಾಗಿದ್ದ…..” ಮತ್ತೆ ನಿಡಿದಾಗಿ ಉಸಿರು ಬಿಟ್ಟ ಅವರು ಮುಂದುವರಿಸಿದರು, “ಇದಾದ ಬಳಿಕ ನಮ್ಮಿಬ್ಬರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ನಾವು ಪ್ರತಿ ವಾರ ಭೇಟಿ ಆಗಿ ವ್ಯವಹಾರ ಹಾಗೂ ಕುಟುಂಬದ ವಿಚಾರಗಳನ್ನು ಚರ್ಚಿಸುತ್ತಿದ್ದೆವು. ಅಂತಹ ಒಂದು ಭೇಟಿಯಲ್ಲಿ ಅವನು ನನ್ನ ಬಳಿ ಹೇಳಿದ್ದು, “ನಿನಗೊಬ್ಬ ಮಗನಿದ್ದಾನೆ…. ನನಗೂ ಒಬ್ಬ ಮಗಳಿದ್ದಾಳೆ…. ಇಬ್ಬರೂ ವಿವಾಹಯೋಗ್ಯರಾಗಿದ್ದಾರೆ,” ಎಂದು ತಣ್ಣಗೆ ನಗುತ್ತಾ, “ನಾನೆಂದೂ ನಿನ್ನ ಮಗನನ್ನು ನನ್ನ ಅಳಿಯನನ್ನಾಗಿಸಿಕೊಳ್ಳಲು ಸಂತೋಷಪಡುತ್ತೇನೆ. ಎಂದು ನನ್ನ ಪ್ರತಿಕ್ರಿಯೆಗಾಗಿ ನನ್ನತ್ತ ನೋಡಿದನು.”

“ನೀವೇನು ಹೇಳಿದಿರಿ?” ರಾಜೇಶ್‌ ಆತಂಕದಿಂದ ಕೇಳಿದ.

“ನಾನು ನನ್ನ ಸ್ನೇಹಿತನನ್ನು ಎಲ್ಲಾ ರೀತಿಯಿಂದಲೂ ಬಲ್ಲೆ…. ನಾನು ಕೂಡಲೇ ನನ್ನ ಒಪ್ಪಿಗೆ ಸೂಚಿಸಿದೆ.”

ಅದೇ ಕ್ಷಣ ರಾಜೇಶನ ತಾಯಿ ಮಾತನಾಡಿ, “ಅವಳು ಒಳ್ಳೆಯ ಶಿಕ್ಷಣ ಪಡೆದಿದ್ದಾಳೆ. ನೋಡುವುದಕ್ಕೆ ಸುಂದರವಾಗಿದ್ದಾಳೆ. ನಿನಗೆ ಒಳ್ಳೆಯ ಜೋಡಿಯಾಗುತ್ತಾಳೆ….” ಎನ್ನುತ್ತಾ ಅವನತ್ತ ಒಮ್ಮೆ ಪರೀಕ್ಷಾತ್ಮಕವಾಗಿ ನೋಡಿದರು.

ರಾಜೇಶ್‌ ಮೌನವಾಗಿದ್ದ. ಅವನ ಆ ಮೌನವನ್ನು ಕಂಡ ತಂದೆ, “ಏಕೆ ಮಾತನಾಡ್ತಾ ಇಲ್ಲ….? ನನ್ನ ಈ ತೀರ್ಮಾನ ನಿನಗಿಷ್ಟ ಆಗಿಲ್ಲವೇ?”

ರಾಜೇಶ್‌ ಸ್ವಲ್ಪ ಗಟ್ಟಿದನಿಯಲ್ಲಿ ಹೇಳಿದ, “ನನಗೆ ನಿಮ್ಮ ಹಾಗೂ ಅಮ್ಮನ ಬಗ್ಗೆ ಪ್ರೀತಿ, ಗೌರವವಿದೆ. ನಾನೆಂದಿಗೂ ನಿಮ್ಮ ಸಲಹೆ, ಮಾರ್ಗದರ್ಶನದಂತೆ ನಡೆಯುವನು. ಆದರೆ ಈ ವಿಚಾರದಲ್ಲಿ…..”

“ಈ ವಿಚಾರದಲ್ಲಿ……?” ಕೋಪ ಮಿಶ್ರಿತ ದನಿಯಲ್ಲಿ ಕೇಳಿದರು ತಂದೆ.

ರಾಜೇಶ್‌ ತುಸು ಹಿಂಜರಿಕೆಯಿಂದ ಹೇಳಿದನು, “ನಾನು ಶೃತಿಗೆ ಮಾತು ಕೊಟ್ಟಿದ್ದೀನಿ. ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದ್ದೆ. ನಾಲ್ಕು ವರ್ಷಗಳಿಂದಲೂ ನಾವಿಬ್ಬರೂ ಒಳ್ಳೆಯ ಗೆಳೆಯರಾಗಿದ್ದೇವೆ.”

“ಆದರೆ ನಿಮ್ಮ ಅಪ್ಪಾಜಿ ಅವರ ಸ್ನೇಹಿತರಿಗೆ ಮಾತು ನೀಡಿದ್ದಾರೆ. ತಮ್ಮ ಮಾತು ನೆರವೇರಿಸುವವರು ಯಾರು?” ಎಂದರು ತಾಯಿ ಸಿಟ್ಟಿನಿಂದ.

“ಆದರೆ ಈ ವಿಚಾರ ನನಗೇಕೆ ಇದುವರೆಗೂ ಹೇಳಲಿಲ್ಲ?” ಎಂದ.

“ಸಮಯ ಬಂದಾಗ ಹೇಳಬೇಕೆಂದಿದ್ದೆ. ನಿನ್ನ ಅಪ್ಪಾಜಿ ತಮ್ಮ ಮಾತನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅವರ ಮಾತನ್ನು ನಡೆಸಿಕೊಡುವುದು ನಿನ್ನ ಧರ್ಮ,” ತಾಯಿ ನಿರ್ಧಾರದ ದನಿಯಲ್ಲಿ ಹೇಳಿದರು.

ರಾಜೇಶ್‌ ತಂದೆಯ ಪಕ್ಕ ಇನ್ನಷ್ಟು ಸರಿದು ಅವರ ಕೈಯನ್ನು ಹಿಡಿದು ಮೃದುದನಿಯಲ್ಲಿ, “ಅಪ್ಪಾಜಿ…. ಶೃತಿ ನನ್ನನ್ನೇ ಮದುವೆಯಾಗುವೆನೆಂದು ಭಾವಿಸಿ, ತನ್ನನ್ನೊಪ್ಪಿ ಬಂದಿದ್ದ ಎಷ್ಟೋ ಒಳ್ಳೆಯ ಸಂಬಂಧಗಳನ್ನು ತಿರಸ್ಕರಿಸಿದ್ದಾಳೆ. ಇದೀಗ ನಾನು ಬೇರೆ ಹುಡುಗಿಯನ್ನು ಮದುವೆಯಾಗಿ ಅವಳಿಗೆ ದ್ರೋಹ ಮಾಡುವುದು ಸರಿಯಾ? ಅಲ್ಲದೆ ಈ ಮದುವೆಯಿಂದ ನನ್ನ ಮುಂದಿನ ಜೀವನ ಸಂತೋಷವಾಗಿರುತ್ತದೆ ಎಂದು ಭಾವಿಸಿದ್ದೀರಾ?” ಕೇಳಿದ.

ತಂದೆ ಮೌನವಾಗಿ ಮಲಗಿದರು. ಆದರೆ ತಾಯಿ ಮಾತ್ರ, “ನೀನು ಅವಳಿಗೆ ನಿನ್ನ ಅಪ್ಪಾಜಿಯ ಪರಿಸ್ಥಿತಿಯನ್ನು ತಿಳಿಸು. ಅವಳಿಗೆ ನಿಜವಾಗಿಯೂ ನಿನ್ನ ಬಗ್ಗೆ ಕಾಳಜಿ ಇದ್ದಲ್ಲಿ ಅವಳು ನಿನ್ನನ್ನು ನಿನ್ನ ಪಾಡಿಗಿರಲು ಬಿಡುವಳು. ನಿನ್ನ ಅಪ್ಪಾಜಿಯ ಮಾತಿನಂತೆ ನಡೆಯಲು ಅವಕಾಶ ನೀಡುವಳು…” ನಿಷ್ಠೂರವಾಗಿ ಹೇಳಿದರು.

ಹಲವು ದಿನಗಳ ಕಾಲ ತಾಯಿ ಮಗನ ನಡುವೆ ಈ ವಿಚಾರದಲ್ಲಿ ವಾದ ವಿವಾದಗಳು ನಡೆದವು. ಅದೇ ವೇಳೆ ತಂದೆಯ ಆರೋಗ್ಯ  ದಿನದಿನಕ್ಕೆ ಕ್ಷೀಣಿಸುತ್ತಲಿತ್ತು. ಅವರು ಆಗಾಗ ಪ್ರಜ್ಞಾಶೂನ್ಯರಾಗುತ್ತಿದ್ದರು.

ಆ ದಿನ ರಾಜೇಶ್‌ ತಂದೆಯ ಪಕ್ಕದಲ್ಲೇ ಕುಳಿತು ಅವರ ಕಳಾಹೀನವಾದ ಮುಖವನ್ನು ನೋಡುತ್ತಾ ತನ್ನಷ್ಟಕ್ಕೆ, `ನನ್ನ ಅಪ್ಪಾಜಿಯ ಹಿತಕ್ಕಾಗಿ ನಾನೇನು ಬೇಕಾದರೂ ಮಾಡುತ್ತೇನೆ. ಅವರ ಆಯ್ಕೆಯ ಹುಡುಗಿಯನ್ನೇ ನಾನು ಮದುವೆ ಆಗಬೇಕಾದರೆ ಹಾಗೆಯೇ ಆಗಲಿ…..’ ಎಂದುಕೊಂಡ.

ಬೆಂಗಳೂರು ಬಿಡುವ ಮುನ್ನ ರಾಜೇಶ್‌, ಶೃತಿಗೆ ತನ್ನ ತಂದೆಯ ಆರೋಗ್ಯದ ಪರಿಸ್ಥಿತಿ ಕುರಿತು ವಿವರಿಸಿ, ತಾನು ಮುಂಬೈಗೆ ಹೋದ ನಂತರ ಮತ್ತೆ ಕರೆ ಮಾಡುವುದಾಗಿ ತಿಳಿಸಿದ. ಅವಳು ಅವನ ಕರೆಗಾಗಿ ಒಂದು ವಾರ ಕಾದಳು. ಮತ್ತೆ ಮತ್ತೆ ಅವನ ನಂಬರ್‌ಗೆ ಕರೆ ಮಾಡಲು ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗಲಿಲ್ಲ.`ಅಪ್ಪಾಜಿಯೊಂದಿಗೆ ಬಿಝಿ ಆಗಿರಬೇಕು,’ ಎಂದುಕೊಂಡು ಶೃತಿ ತನ್ನನ್ನು ಸಂತೈಸಿಕೊಂಡು ನಿತ್ಯ ಜೀವನಕ್ಕೆ ಮರಳಿದಳು. ದಿನಗಳು ಸರಿದಂತೆ ಅವಳಲ್ಲಿ ಚಿಂತೆ, ಆತಂಕ ಪ್ರಾರಂಭವಾದವು. `ರಾಜೇಶ್‌ ಏಕೆ ನನಗಿಷ್ಟು ದಿನ ಕರೆ ಮಾಡಿಲ್ಲ…? ಅವನಿಗೇನಾಯಿತು…..?’ ಅವಳ ಕಣ್ಣಲ್ಲಿ ನೀರಾಡಿತು.

ಅದೊಂದು ದಿನ ಮಧ್ಯಾಹ್ನ ಎಂದಿನಂತೆ ತನ್ನ ಮೇಲ್ ಬಾಕ್ಸ್ ನೋಡುತ್ತಿದ್ದಾಗ ರಾಜೇಶನ ಪತ್ರ ಅವಳಿಗಾಗಿ ಕಾಯುತ್ತಿತ್ತು. `ಕೊನೆಗೂ ಅವನಿಗೆ ನನ್ನ ನೆನಪಾಯಿತಲ್ಲಾ….’ ಎಂದುಕೊಳ್ಳುತ್ತಾ ಖುಷಿಯಿಂದ ಪತ್ರವನ್ನು ಓದಿದಳು. ಅದರಲ್ಲಿ ಹೀಗೆ ಬರೆದಿತ್ತು.

`ಈ ಪತ್ರವನ್ನೋದಿದ ನಂತರ ನೀನು ಬಹಳ ನೊಂದುಕೊಳ್ಳುವಿ ಎಂದು ನನಗೆ ತಿಳಿದಿದೆ. ಆದರೆ ನಾನು ನಿನಗೆ ಪರಿಸ್ಥಿತಿಯನ್ನು ತಿಳಿಸಲೇಬೇಕಿದೆ. ನನ್ನ ಅಪ್ಪಾಜಿ ಅನಾರೋಗ್ಯದಿಂದಿದ್ದಾರೆ. ನನ್ನ ತಂದೆತಾಯಿಯ ಸಂತೋಷಕ್ಕಾಗಿ ಅವರು ನೋಡಿದ ಹುಡುಗಿಯನ್ನೇ ನಾನು ಮದುವೆ ಆಗಬೇಕಾಗಿದೆ. ನಿನ್ನ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಸಾಧ್ಯವಾದರೆ ನನ್ನನ್ನು ಕ್ಷಮಿಸು. ರಾಜೇಶ್‌.’

ಶೃತಿಗೆ ವಿಷಯವನ್ನು ನಂಬುವುದೇ ಕಷ್ಟವಾಗಿತ್ತು. ಯಾವುದೇ ಭಾವನೆಯನ್ನು ವ್ಯಕ್ತಪಡಿಸಲಾಗದೆ ಅವಳು ಕುಸಿದು ಕುಳಿತಳು. `ನಾಲ್ಕು ವರ್ಷಗಳ ಕಾಲದ ನಮ್ಮ ಸ್ನೇಹವನ್ನು ರಾಜೇಶ್‌ ಇಷ್ಟು ಸುಲಭದಲ್ಲಿ ಮರೆಯಲು ಹೇಗೆ ಸಾಧ್ಯ? ನಾವೇನೆಲ್ಲಾ ಯೋಚಿಸಿದ್ದೆವೋ, ಏನೇನನ್ನು ಮಾತಾಡಿದ್ದೆವೋ, ಎಲ್ಲವು ಇದೀಗ ಕೇವಲ ಕನಸು…..’  ಎಂದುಕೊಳ್ಳುತ್ತಾ ತೇವಗೊಂಡಿದ್ದ ಕಣ್ಣುಗಳನ್ನು ಒರೆಸಿಕೊಂಡಳು.

ಇದಾದ ನಂತರ ಶೃತಿ ಹೆಚ್ಚಿನ ಸಮಯವನ್ನು ತನ್ನ ಕೋಣೆಯಲ್ಲಿಯೇ ಕಳೆಯತೊಡಗಿದಳು. ಆಗೆಲ್ಲಾ ತನ್ನ ರಾಜೇಶನ ಬಗ್ಗೆಯೇ ಸತತವಾಗಿ ಚಿಂತಿಸುತ್ತಿದ್ದಳು. ಅವಳ ಈ ದುಃಖ, ಕಳಾಹೀನವಾದ ಮುಖಚರ್ಯೆಯನ್ನು ಕಂಡ ಅವಳ ತಾಯಿಗೆ ಕಳವಳವಾಯಿತು. ಆದರೆ ಆ ಕುರಿತು ಮಗಳೊಂದಿಗೆ ಪ್ರಸ್ತಾಪಿಸಲು ಹೋಗಲಿಲ್ಲ. ಒಮ್ಮೆ ಶೃತಿ ತನ್ನ ಗೆಳತಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡ ನಂತರ ಅವರ ಸಂದೇಹ ಮತ್ತಷ್ಟು ಬಲವಾಯಿತು. `ಶೃತಿಗೆ ಎಷ್ಟು ಶೀಘ್ರವೋ ಅಷ್ಟು ಬೇಗ ಮದುವೆ ಮಾಡಬೇಕು,’ ಎಂದುಕೊಂಡ ತಾಯಿ ಪತಿಯೊಂದಿಗೆ, “ನಾವು ನಮ್ಮ ಮಗಳಿಗೆ ಗಂಡನ್ನು ಹುಡುಕಲು ಪ್ರಾರಂಭಿಸಬೇಕು,” ಎಂದು ಹೇಳಿದರು.

“ನಿಂಗ್ಯಾಕೆ ಅವಳನ್ನು ಇಷ್ಟು ಬೇಗ ಇಲ್ಲಿಂದ ಕಳಿಸೋ ಯೋಚನೆ ಬಂತು?” ಓದುತ್ತಿದ್ದ ಪತ್ರಿಕೆಯನ್ನು ಬದಿಗಿಟ್ಟು ಅವರು ಕೇಳಿದರು.

“ಇಂದಲ್ಲ ನಾಳೆ ಅವಳು ಗಂಡನ ಮನೆ ಸೇರಲೇಬೇಕಾದವಳು.”

“ಇದೀಗಷ್ಟೇ ಅವಳು ಎಂಸಿಎ ಮುಗಿಸಿದ್ದಾಳೆ. ಸ್ವಲ್ಪ ಕಾಲ ಆರಾಮವಾಗಿರಲಿ ಬಿಡು…. ಕೆಲಸಕ್ಕೆ ಹೋಗಬೇಕೆನಿಸಿದರೆ ಅದಕ್ಕೂ ಸರಿ…. ಉದ್ಯೋಗಕ್ಕೆ ಸೇರಿದರೆ ಸ್ವಲ್ಪ ಅನುಭವ ಸಿಗುತ್ತೆ….”

“ಹೂಂ…. ನಿಮಗೇನು ಸರಿ ಎನಿಸುತ್ತೋ…. ಹಾಗೇ ಮಾಡಿ. ಆದರೆ ಮುಂದೇನಾದರೂ ಅವಾಂತರವಾದರೆ ನನ್ನನ್ನು ದೂರಬೇಡಿ,” ಎಂದರು.

ದಿನಗಳು ಸರಿದರೂ ಶೃತಿಗೆ ರಾಜೇಶನ ನೆನಪನ್ನು ಪೂರ್ತಿಯಾಗಿ ಅಳಿಸಲು ಆಗಲಿಲ್ಲ. ತಾನೂ ಏನಾದರೂ ಉದ್ಯೋಗಕ್ಕೆ ಸೇರಿಕೊಂಡಲ್ಲಿ ಇದರಿಂದ ಹೊರಬರಬಹುದೇನೋ ಎಂದು ನಿರ್ಧರಿಸಿ ಉದ್ಯೋಗಕ್ಕಾಗಿ ಹಲವು ಕಡೆ ಪ್ರಯತ್ನ ಮಾಡಿದಳು. ನಂತರ ಅವಳಿಗೆ ಹೈದರಾಬಾದ್‌ ಮೂಲದ ಸಾಫ್ಟ್ ವೇರ್‌ ಕಂಪನಿಯಲ್ಲಿ ಕೆಲಸ ದೊರೆಯಿತು. ಇದರಿಂದ ಅವಳ ತಂದೆ ಬಹಳ ಸಂತಸಗೊಂಡರು.

ಆದರೆ ತಾಯಿ, “ನಾವು ನಿನಗೆ ಆದಷ್ಟು ಬೇಗ ಮದುವೆ ಮಾಡಲು ಯೋಚಿಸಿದ್ದೆವು. ನೀನೀಗ ಉದ್ಯೋಗಕ್ಕೆ ಸೇರಿ ಏನು ಮಾಡಬೇಕೆಂದಿದ್ದಿ? ಅದೂ ಬಹಳ ದೂರದಲ್ಲಿ?” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಆದರೆ ಶೃತಿಯ ಮನಿಲಿ ತುಸು ಮಾತು, ಅವಳ ತಂದೆಯ ಪ್ರೋತ್ಸಾಹದ ಮುಂದೆ ತಾಯಿಯ ಆಗ್ರಹ ನಿಲ್ಲಲಿಲ್ಲ. ಕೆಲವು ಸಹೋದ್ಯೋಗಿಗಳ ನೆರವಿನಿಂದ ಶೃತಿ ತನ್ನ ಆಫೀಸಿನ ಸನಿಹದಲ್ಲೇ ಒಂದು ಬಾಡಿಗೆ ಮನೆಯನ್ನು ಹಿಡಿದಳು. ಅವಳಲ್ಲಿದ್ದ ತಾಂತ್ರಿಕ ಜ್ಞಾನ, ಪ್ರಾಮಾಣಿಕತೆ, ಶ್ರದ್ಧೆ ಅವಳನ್ನು ವೃತ್ತಿ ಜೀವನದಲ್ಲಿ ಬೇಗನೇ ಮೇಲೇರುವಂತೆ ಮಾಡಿತು. ವರ್ಷ ಉರುಳಿದಂತೆಯೇ ಶೃತಿ ತನ್ನ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್‌ ಹುದ್ದೆಗೇರಿದಳು. ಇನ್ನೂ ಕೆಲವೇ ದಿನಗಳಲ್ಲಿ ಶೃತಿ ತನ್ನದೇ ಸ್ವಂತ ಮನೆಯೊಂದನ್ನು ಖರೀದಿಸಿದಳು. ಅದರ ಗೃಹಪ್ರವೇಶಕ್ಕೆಂದು ತಂದೆತಾಯಿಯರನ್ನು ಕರೆಸಿಕೊಂಡಳು. ಸಮಾರಂಭ ಸುಸೂತ್ರವಾಗಿ ಜರುಗಿತು. ಸಮಾರಂಭಕ್ಕೆ ಬಂದಿದ್ದ ಸಂಬಂಧಿಗಳು, ಸ್ನೇಹಿತರು ಹೊರಟುಹೋದ ಮೇಲೆ ಶೃತಿಯ ತಾಯಿ ಅವಳ ಬಳಿ ಕುಳಿತು ಪ್ರೀತಿಯಿಂದ, “ನೀನೀಗ ಒಳ್ಳೆಯ ಉದ್ಯೋಗದಲ್ಲಿದ್ದೀಯ…. ಸ್ವಂತ ಮನೆ, ಕಾರು ಎಲ್ಲವೂ ಇದೆ. ಇದೀಗಾದರೂ ನಾವು ನಿನಗೊಂದು ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಬಹುದಲ್ಲವೇ?” ಕೇಳಿದರು.

“ಹೂಂ! ಶೃತಿ, ಅಮ್ಮ ಹೇಳುತ್ತಿರುವುದು ಸರಿಯಾಗಿದೆ,” ಅವಳ ತಂದೆಯೂ ಸಮ್ಮತಿ ಸೂಚಿಸಿದರು.

“ಆದರೆ ನನಗೀಗಲೇ  ಮದುವೆ ಆಗಲು ಇಷ್ಟವಿಲ್ಲ ಅಪ್ಪಾಜಿ.”

“ನಿನಗಾಗಲೇ ಮೂವತ್ತು ವರ್ಷವಾಗಿದೆ. ನೆನಪಿಟ್ಟುಕೋ ನಿನಗೆ ಒಳ್ಳೆಯ ಸಂಗಾತಿ ಸಿಗಬೇಕಾದರೆ ಆದಷ್ಟು ಬೇಗನೆ ಮದುವೆಯಾಗಲು ನಿರ್ಧರಿಸು,” ತಾಯಿ ಸಲಹೆಯಿತ್ತರು.

ಶೃತಿ ತಂದೆ, ತಾಯಿ ತಾವು ಬೆಂಗಳೂರಿಗೆ ಹಿಂದಿರುಗಿದ ನಂತರ ಮಗಳಿಗಾಗಿ ಗಂಡನ್ನು ನೋಡಲು ಉಪಕ್ರಮಿಸಿದರು. ಒಂದು ತಿಂಗಳಲ್ಲಿ ಕೆಲವು ಒಳ್ಳೆಯ ಸಂಬಂಧಗಳನ್ನು ಹುಡುಕಿ ಹುಡುಗರ ಫೋಟೋಗಳನ್ನು ಅವಳ ಒಪ್ಪಿಗೆಗೆಂದು ಕಳಿಸಿದರು. ಅದಕ್ಕೆ ಶೃತಿ ಪ್ರತಿಕ್ರಿಯೆ ನೀಡದಿರುವುದನ್ನು ನೋಡಿದ ತಾಯಿ ನಿರಾಶೆಯಿಂದ ನುಡಿದರು, “ಎಷ್ಟು ಒಳ್ಳೆಯ ಸಂಬಂಧಗಳು ಬಂದಿದ್ದವು. ಆದರೆ ಶೃತಿ ಎಲ್ಲವನ್ನೂ ತಿರಸ್ಕರಿಸಿದ್ದಾಳೆ. ಅವಳೇನು ಅಂದುಕೊಂಡಿದ್ದಾಳೆ? ಯಾವುದಾದರೂ ರಾಜಕುಮಾರ ಬಂದು ತನ್ನನ್ನೊಪ್ಪಿಕೊಳ್ಳುತ್ತಾನೆ ಎಂದೇನಾದರೂ ಅಂದುಕೊಂಡಿರುವಳೇನು?”  ಮಡದಿಯ ಮಾತಿಗೆ ಶೃತಿಯ ತಂದೆ ಮೌನ ತಳೆದರು.

ಕಾಲ ಯಾವುದೇ ಸೂಚನೆಯನ್ನು ನೀಡದೆ ಮುಂದೆ ಸಾಗುತ್ತಿತ್ತು. ಶೃತಿ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಓರ್ವ ಸಹೋದ್ಯೋಗಿ ರಾಜೀನಾಮೆ ನೀಡಿದ ಸಮಯದಲ್ಲಿ ಸುಮಾರು ಎರಡು ತಿಂಗಳ ಕಾಲ ಶೃತಿಯೇ ಆ ಕೆಲಸವನ್ನು ನಿರ್ವಹಿಸಬೇಕಾಯಿತು. ತನ್ನ ಪಾಲಿನ ಕೆಲಸಗಳೊಂದಿಗೇ ಅದನ್ನೂ ತೂಗಿಸಿಕೊಂಡು ಹೋದಳು. ಎರಡು ತಿಂಗಳ ಬಳಿಕ ಆ ಹುದ್ದೆಗೆ ಆನಂದ್‌ ಎನ್ನುವ ಸ್ಛುರದ್ರೂಪಿ ಯುವಕನ ಸೇರ್ಪಡೆಯಾಯಿತು. ಇದರಿಂದ ಶೃತಿಗೆ ಆನಂದವಾಯಿತು. ಇದುವರೆಗೂ ಮಾಡುತ್ತಿದ್ದ ಹೆಚ್ಚುವರಿ ಕೆಲಸಗಳನ್ನು ಆನಂದ್‌ ಮಾಡತೊಡಗಿದ. ಇಬ್ಬರೂ ಒಂದೇ ವಿಭಾಗದಲ್ಲಿದ್ದ ಕಾರಣ ಪ್ರತಿದಿನ ಪರಸ್ಪರ ಒಬ್ಬರನ್ನೊಬ್ಬರು ಸಂಧಿಸಬೇಕಾಗುತ್ತಿತ್ತು.

ಒಮ್ಮೆ ಮರುದಿನದ ಮೀಟಿಂಗ್‌ ನಿಮಿತ್ತ ಹಿಂದಿನ ದಿನವೇ ಇಬ್ಬರೂ ತುರ್ತಾಗಿ ತಯಾರಿ ನಡೆಸಿದ್ದರು. ಈ ಕಾರಣಕ್ಕಾಗಿ ಕಛೇರಿ ಅವಧಿಗಿಂತ ಸ್ವಲ್ಪ ತಡವಾಗಿ ಹೊರಡಬೇಕಾಯಿತು.

“ಹೊರಗೆ ಸ್ವಲ್ಪ ಕತ್ತಲಿದೆ…. ನೀವು ಬಯಸುವುದಾದರೆ ನಾನು ನಿಮ್ಮ ಮನೆವರೆಗೆ ನಿಮ್ಮನ್ನು ಡ್ರಾಪ್‌ ಮಾಡ್ತೀನಿ,” ಆನಂದ್‌ಕೇಳಿದ.

“ಇಲ್ಲ.. ನನ್ನ ಮನೆಗೆ ಕೇವಲ 10 ನಿಮಿಷಗಳಷ್ಟೇ. ನೀವೆಲ್ಲಿ ವಾಸವಾಗಿದ್ದೀರಿ…?” ಎಂದಳು ಶೃತಿ.

“ಇಲ್ಲೇ ಸಮೀಪದಲ್ಲಿ.”

“ಸರಿ ಹಾಗಾದರೆ…. ನನ್ನ ಕಾರಿನಲ್ಲೇ ನಿಮ್ಮನ್ನು ಡ್ರಾಪ್‌ ಮಾಡ್ತೀನಿ ಬನ್ನಿ….” ಎಂದು ಕರೆದಳು ಶೃತಿ.

“ನಿಮಗೇನೂ ಸಮಸ್ಯೆ ಇಲ್ಲದಿದ್ದರೆ ಮಾತ್ರ…”

“ಛೇ…. ಏನೇನೂ ಇಲ್ಲ…”

ದಿನ ಕಳೆದಂತೆಲ್ಲಾ ಆನಂದ್‌ ಶೃತಿ ಪರಸ್ಪರ ಒಳ್ಳೆಯ ಸ್ನೇಹಿತರಾದರು. ಅದೊಂದು ದಿನ ಕೆಲಸದ ಬಳಿಕ ಇಬ್ಬರೂ ಹತ್ತಿರದ ರೆಸ್ಟೋರೆಂಟ್‌ಗೆ ಕಾಫಿಗಾಗಿ ಹೋದಾಗ  ಆನಂದ್‌ ಶೃತಿಯ ತಂದೆತಾಯಿಯ ಕುರಿತು ವಿಚಾರಿಸಿದ.

“ಅವರು ಚೆನ್ನಾಗಿದ್ದಾರೆ. ಈಗ ನಿಮ್ಮ ಬಗ್ಗೆ ಹೇಳಿ…”

“ಮನೆಯಲ್ಲಿ ನನ್ನ ತಾಯಿ ಒಬ್ಬರೇ ಇರೋದು. ಅವರು ನಮ್ಮೂರಿನ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ….” ಎಂದ ಆನಂದ್‌, ಶೃತಿಯತ್ತ ನೋಡಿ ಸ್ವಲ್ಪ ಅನುಮಾನದಿಂದ ಕೇಳಿದ, “ನಿಮ್ಮ ವೈಯಕ್ತಿಕ ವಿಚಾರದ ಕುರಿತಂತೆ, ಒಂದು ಪ್ರಶ್ನೆ ಕೇಳಬಹುದೇ?”

“ಹೂಂ…..”

“ನೀವು ನೋಡಲು ಚೆನ್ನಾಗಿದ್ದೀರಿ. ಒಳ್ಳೆ ಶಿಕ್ಷಣ, ಚೆನ್ನಾಗಿರುವ ನೌಕರಿ ಎಲ್ಲಾ ಇದೆ. ನೀವೇನಾದರೂ ಮದುವೆ ಆಗೋದಾದರೆ ಒಬ್ಬ ಒಳ್ಳೆ ವರ ಸಿಗುವುದೇನೂ ಕಷ್ಟಸಾಧ್ಯವಿಲ್ಲ…” ಎನ್ನುತ್ತಾ ಆನಂದ್‌ ಶೃತಿಯತ್ತ ನೋಡಿದನು.

“ಈಗಾಗಲೇ ಆ ಪ್ರಯತ್ನ ಮಾಡಿದ್ದೇವೆ….”

“ಮದುವೆ ಆಗಬೇಕೆನ್ನುವ ಆಸೆ ಇಲ್ಲವೇ?”

“ಮ್….!”

“ಸರಿ…. ನಿಮಗೆ ಹೇಳೋದು ಇಷ್ಟವಿಲ್ಲವಾದಲ್ಲಿ ಬಿಡಿ.”

“ಹಾಗೇನಿಲ್ಲ ಆನಂದ್‌. ನಾನು ಹಾಗೇ ಯೋಚಿಸುತ್ತಿದ್ದೆ,…” ಶೃತಿ ಹಿಂಜರಿಕೆಯ ಸ್ವರದಲ್ಲಿ ಹೇಳಿದಳು. ಕೆಲವು ಕ್ಷಣಗಳ ಮೌನದ ಬಳಿಕ ಶೃತಿ, ತನ್ನ ಹಾಗೂ ರಾಜೇಶನ ಸಂಬಂಧದ ಕುರಿತು ವಿವರಿಸಿದಳು. ರಾಜೇಶ್‌ ಕೆಲಸಕ್ಕಾಗಿ ಮುಂಬೈಗೆ ಹೋದದ್ದು, ಅವನ ತಂದೆತಾಯಿ ನೋಡಿದವಳೊಂದಿಗೆ ಮದುವೆ ಆದದ್ದು, ಎಲ್ಲವನ್ನೂ ವಿವರಿಸಿದ ಶೃತಿ ಒಮ್ಮೆ ನಿಡಿದಾಗಿ ಉಸಿರೆಳೆದುಕೊಂಡು, “ಇದಾದ ಬಳಿಕ ನನ್ನ ತಂದೆ ಸಾಕಷ್ಟು ಒಳ್ಳೆ ಸಂಬಂಧಗಳನ್ನೇ ನೋಡಿದ್ದರು. ಆದರೆ ನನಗೆ ಯಾರೂ ಒಪ್ಪಿಗೆ ಎನಿಸಲಿಲ್ಲ….” ಎಂದಳು.

“ಅದೊಂದು ಘಟನೆಯಿಂದಾಗಿಯೇ?” ಆನಂದ್‌ ಪ್ರಶ್ನಿಸಿದ.

“ಸ್ವಲ್ಪ ಹಾಗೆಯೇ….”

ಆನಂದ್‌ ತುಸು ಗಂಭೀರವಾಗಿ, “ಅದೇನು ನಡೆಯಿತೋ ಅದರಲ್ಲಿ ನಿಮ್ಮ ತಪ್ಪೇನೂ ಇಲ್ಲ. ಮತ್ತೆ ಅದೇ ಹಳೆ ನೆನಪಿನಲ್ಲಿ ನಿಮ್ಮ ಜೀವನವನ್ನೇಕೆ ಹಾಳು ಮಾಡಿಕೊಳ್ಳುತ್ತೀರಿ…? ಅದೆಲ್ಲವನ್ನು ಮರೆತು ಆತ್ಮವಿಶ್ವಾಸ, ಧೈರ್ಯದಿಂದ ಬದುಕಬಹುದಲ್ಲ…..”

ಕ್ಷಣಕಾಲ ಅವನ ಮಾತುಗಳನ್ನೇ ಮೆಲುಕು ಹಾಕುತ್ತಿದ್ದ ಶೃತಿ, ನಂತರ ಕೇಳಿದಳು, “ನಿಮಗೇನಾದರೂ ಇಂತಹ ಅನುಭವ ಆಗಿದೆಯೇ ಹೇಳಿ?”

“ಹೌದು,” ಎಂದು ಆನಂದ್‌ ಶುಷ್ಕ ನಗೆ ಬೀರುತ್ತಾ, “ನನ್ನ ನೆರೆಮನೆಯಲ್ಲಿದ್ದ ಯುವತಿಯನ್ನು ಪ್ರೀತಿಸಿದ್ದೆ. ನಾವು ಆಗಾಗ ಭೇಟಿ ಆಗುತ್ತಿದ್ದೆವು. ಆಗೆಲ್ಲ ನಾವು ನಮ್ಮ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೆವು. ಆದರೆ ಅವಳ ತಂದೆ ತಾಯಿಯರಿಗೆ ತಮ್ಮ ಮಗಳು ಬೇರೆ ಜಾತಿಯ ಹುಡುಗನೊಂದಿಗೆ ಸಂಬಂಧ ಇಟ್ಟುಕೊಂಡಿರುವುದು ತಿಳಿಯಿತು……”

“ಆಮೇಲೆ……?”

“ನಾವೇನು ಮಾಡಬೇಕೆಂದು ನಿರ್ಧರಿಸುವುದಕ್ಕೂ ಮುನ್ನವೇ ಅವಳ ತಂದೆತಾಯಿ ಅವಳನ್ನು ಚಿಕ್ಕಮಗಳೂರಿನಲ್ಲಿರುವ ಅವರ ಸಂಬಂಧಿಕರ ಮನೆಗೆ ಕಳುಹಿಸಿದರು. ಅದಾಗಿ ಹದಿನೈದು ದಿನಗಳಲ್ಲಿ ದುಬೈನಲ್ಲಿರುವ ಎಂಜಿನಿಯರ್‌ ಹುಡುಗನೊಂದಿಗೆ ಅವಳ ಮದುವೆಯೂ ಆಯಿತು. ಇಷ್ಟಾದ ಬಳಿಕ ನಾನು ನಾನಾಗಿರಲಿಲ್ಲ. ಇರೋ ಕೆಲಸ ಬಿಟ್ಟು ಅಲೆಯತೊಡಗಿದೆ. ಹಲವಾರು ದಿನಗಳ ನಂತರ ಒಮ್ಮೆ ಈ ಸಂಸ್ಥೆಯ ಜಾಹೀರಾತು ನೋಡಿ, ಕೆಲಸಕ್ಕೆ ಅರ್ಜಿ ಹಾಕಿದೆ. ಮುಂದಿನದೆಲ್ಲ ನಿಮಗೆ ಗೊತ್ತಿದೆಯಲ್ಲ….”

“ಇನ್ನೊಂದು ದುರಂತ ಪ್ರೇಮಕಥೆ,” ಶೃತಿ ಸಂಕೇತಿಸಿದಳು.

ಅದೊಂದು ದಿನ ಕಛೇರಿಯಲ್ಲಿ ಕೆಲಸದಲ್ಲಿರುವಾಗಲೇ ಶೃತಿಗೆ ಸ್ವಲ್ಪ ಸುಸ್ತು ಎನಿಸತೊಡಗಿತು. ತಲೆ ಸುತ್ತುತ್ತಿರುವ ಅನುಭವವಾಗಲು ಪ್ರಾರಂಭಿಸಿತು. ಅವಳು ನೀರು ಕುಡಿಯುವ ಉದ್ದೇಶದಿಂದ ಕುರ್ಚಿಯಿಂದೆದ್ದು ಕೆಲವು ಹೆಜ್ಜೆ ಹಾಕುವಷ್ಟರಲ್ಲಿಯೇ ತಲೆ ಸುತ್ತಿ ಕೆಳಗೆ ಬಿದ್ದುಬಿಟ್ಟಳು. ಅಷ್ಟರಲ್ಲಾಗಲೇ ಕಛೇರಿ ಅವಧಿ ಮುಗಿದಿದ್ದ ಕಾರಣ ಕೆಲವು ಅನಿವಾರ್ಯ ಕೆಲಸಗಳಿದ್ದರ ಹೊರತು ಹೆಚ್ಚಿನ ಸಿಬ್ಬಂದಿ ಇರಲಿಲ್ಲ. ಅದೃಷ್ಟಶಾತ್‌ ಆನಂದ್‌ ಅದೇ ಕ್ಯಾಬಿನ್‌ ಮೂಲಕ ಹಾದುಹೋಗುವಾಗ ಶೃತಿ ಬಿದ್ದುದನ್ನು ಕಂಡು ಕೂಡಲೇ ಇತರೆ ಸಹೋದ್ಯೋಗಿಗಳ ನೆರವಿನಿಂದ ಅವಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ.

“ಅವರ ಹೃದಯ ದುರ್ಬಲಗೊಂಡಿದೆ. ನಾಡಿಮಿಡಿತ ನಿಧಾನಗತಿಯಲ್ಲಿದೆ. ಅವರಿಗೀಗ ಸಂಪೂರ್ಣ ವಿಶ್ರಾಂತಿಯ ಅಗತ್ಯವಿದೆ,” ಶೃತಿಯನ್ನು ಪರೀಕ್ಷಿಸಿದ ವೈದ್ಯರು ಹೇಳಿದರು.

“ಆಕೆಯೊಬ್ಬರನ್ನೇ ಬಿಟ್ಟು ಎಲ್ಲಿಗೂ ಹೋಗಬೇಡಿ,” ಎಂದೂ ಸೇರಿಸಿದ ವೈದ್ಯರು ತಮ್ಮ ಕೋಣೆಯತ್ತ ತೆರಳಿದರು.

`ಛೇ….. ಇಷ್ಟು ದೊಡ್ಡ ನಗರದಲ್ಲಿ ಈಕೆ ಒಂಟಿಯಾಗಿದ್ದಾರೆ. ಇವರಿಗೇನು ಸಹಾಯ ಬೇಕೋ ನಾನೇ ನೋಡಿಕೊಳ್ಳುವೆ,’ ಎಂದುಕೊಂಡ ಆನಂದ್‌ ಶೃತಿಯ ಪಕ್ಕದಲ್ಲೇ ಕುರ್ಚಿ ಹಾಕಿಕೊಂಡು ಕುಳಿತ.

ಮರದಿನ ಶೃತಿ ಕಣ್ಣು ತೆರೆದು ಒಮ್ಮೆ ಸುತ್ತಲೂ ತಿರುಗಿ ನೋಡಿ ತನ್ನ ಸನಿಹದಲ್ಲಿಯೇ ಕುಳಿತಿದ್ದ ಆನಂದ್‌ನನ್ನು ಕಂಡು ಅಚ್ಚರಿಯಿಂದ, “ಆನಂದ್‌….!” ಎಂದಳು.

“ಓಹ್‌! ಶೃತಿ… ಈಗ ಹೇಗಿದ್ದೀರಿ?”  ಆನಂದ್‌ ಶೃತಿ ಬಳಿ ಬಂದು ಕೇಳಿದ.

“ಆನಂದ್‌, ನನಗೇನಾಗಿದೆ? ನಾನೇಕೆ ಇಲ್ಲಿದ್ದೀನಿ?”

“ನೀವು ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಿರಿ. ನಾನೇ ಆಸ್ಪತ್ರೆಗೆ ಸೇರಿಸಿದೆ. ನೀವು ಬಹಳ ಒತ್ತಡದಲ್ಲಿದ್ದಿರಿ. ಈಗ ಸ್ವಲ್ಪ ಆರಾಮಾಗಿರಬಹುದು ಅಲ್ವಾ…? ಚಿಂತಿಸಬೇಡಿ…. ಆದಷ್ಟು ಬೇಗ ನೀವು ಗುಣಮುಖರಾಗ್ತೀರ…..”

“ನನಗಾಗಿ ನೀವು ರಜೆ ಹಾಕಿದ್ರಾ?”

“ಅದರ ಬಗ್ಗೆ ಯೋಚಿಸಬೇಡಿ.”

“ಥ್ಯಾಂಕ್ಯೂ ಆನಂದ್‌! ನಿಮ್ಮ ಈ ಎಲ್ಲಾ ಸಹಾಯಕ್ಕೆ ಥ್ಯಾಂಕ್ಸ್.”

“ನನಗೆ ನಿಮ್ಮ ಥ್ಯಾಂಕ್ಸ್ ಬೇಡ. ನೀವು ಮನೆಗೆ ಹೋದ ನಂತರ ನನಗೊಂದು ಒಳ್ಳೆಯ ಟ್ರೀಟ್‌ ಕೊಡಿಸಬೇಕು,” ಆನಂದ್‌ನಗುತ್ತಾ ಹೇಳಿದ.

“ಓ…. ಹಾಗೇ ಆಗಲಿ.”

ಆನಂದ್‌ ಕೋಣೆಯಿಂದ ಹೊರಗಡೆ ಹೋದ ಬಳಿಕ, `ಆನಂದ್‌ ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ನನ್ನ ಬಳಿಯೇ ಇದ್ದರು. ಅವರು ನನ್ನನ್ನು ಬಿಟ್ಟುಹೋಗಿದ್ದರೆ ನಾನು ಈ ಆಸ್ಪತ್ರೆಯಲ್ಲಿ ಒಂಟಿಯಾಗಿರುತ್ತಿದ್ದೆ,’  ಎಂದು ಯೋಚಿಸಿದಳು ಶೃತಿ. ವಾರ ಕಳೆಯಿತು. ಶೃತಿ ತಾನು ಆನಂದ್‌ಗೆ ಮಾತು ಕೊಟ್ಟಂತೆಯೇ ವಿಶೇಷ ಭೋಜನ ತಯಾರಿಸಿ ಅವನನ್ನು ಆಮಂತ್ರಿಸಿದಳು. ಟೇಬಲ್ ಮೇಲಿನ ವೈವಿಧ್ಯಮಯ ತಿನಿಸುಗಳನ್ನು ಕಂಡು ಆನಂದ್‌ ನಿಜಕ್ಕೂ ಅಚ್ಚರಿಗೊಂಡ. ತಿನಿಸುಗಳ ಸುವಾಸನೆ ಇಡೀ ಕೋಣೆಯನ್ನು ಆವರಿಸಿತು.

ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡ ಆನಂದ್‌, “ನೀವಿದನ್ನು ತಯಾರಿಸಲು ಬಹಳ ಸಮಯವನ್ನು ಅಡುಗೆಮನೆಯಲ್ಲೇ ಕಳೆದಿರಬೇಕಲ್ಲವೇ?” ಎಂದ.

“ಕೆಲವೇ ಗಂಟೆಗಳಷ್ಟೆ. ನಿಮಗಿದು ಇಷ್ಟವಾಗುವುದೊ, ಇಲ್ಲವೋ ಗೊತ್ತಿಲ್ಲ….” ಶೃತಿ ತಿನಿಸುಗಳನ್ನು ಬಡಿಸುತ್ತಾ, “ಇವನ್ನು ಮೊದಲು ರುಚಿ ನೋಡಿ….”

ಕೆಲವು ಸಿಹಿತಿಂಡಿಗಳನ್ನು ತಿಂದ ನಂತರ ಆನಂದ್‌, “ನೀವು ಕೇಲ ಕಛೇರಿ ಕೆಲಸಗಳಲ್ಲಷ್ಟೇ ನಿಸ್ಸೀಮರಾಗಿದ್ದೀರಿ ಎಂದುಕೊಂಡಿದ್ದೆ. ಆದರೆ ಈಗ ನೀವೊಬ್ಬ ಒಳ್ಳೆಯ ಪಾಕಪ್ರವೀಣೆ ಎನ್ನುವುದೂ ತಿಳಿಯಿತು,” ಆನಂದ್‌ ತನ್ನ ಮೆಚ್ಚುಗೆ ಸೂಚಿಸುತ್ತಾ, “ನಮ್ಮ ತಾಯಿ ಕೂಡ ರುಚಿಯಾಗಿ ಅಡುಗೆ ಮಾಡುತ್ತಾರೆ. ನಿಮ್ಮ ಅಡುಗೆಯ ರುಚಿ ಅವರಷ್ಟೇ ಚೆನ್ನಾಗಿದೆ.”

“ಥ್ಯಾಂಕ್ಯೂ ಆನಂದ್‌.”

ಇನ್ನೊಮ್ಮೆ ಶೃತಿ ತನ್ನೊಂದಿಗೆ ರಾತ್ರಿಯ ಊಟಕ್ಕೆ ಆನಂದ್‌ನನ್ನು ಆಮಂತ್ರಿಸಿದಳು. ರಾತ್ರಿಯ ಊಟಕ್ಕೂ ಮುನ್ನ ಕಾಫಿ ಹೀರುತ್ತಾ ಕೆಲವು ಸಮಯ ಮಾತುಕಥೆ ನಡೆಸಿದ ಶೃತಿ ಆನಂದ್‌ ಪರಸ್ಪರ ಇನ್ನಷ್ಟು ಹತ್ತಿರವಾದರು.

ಈ ರೀತಿಯ ಆಮಂತ್ರಣಗಳು ಅವರಿಬ್ಬರ ನಡುವೆ ಆಗಾಗ ನಡೆಯಲು ಪ್ರಾರಂಭವಾಯಿತು. ಹಾಗೆ ಒಮ್ಮೆ ಊಟಕ್ಕೆ ಹೊರಗಡೆ ಹೋಗಿದ್ದರು. ಊಟವಾದ ಬಳಿಕ ಆನಂದ್‌ ತಾನು ಮನೆಗೆ ಮರಳುವ ಮುನ್ನ ಅವಳಿಗೆ, “ಶೃತಿ… ನಿಮ್ಮನ್ನು ಮದುವೆಯಾಗುವವರು ಇಡೀ ಜಗತ್ತಿನಲ್ಲಿ ಅತ್ಯಂತ ಸುಖಿಯಾಗಿರಬಲ್ಲರು.” ಎಂದ.

“ನಾನು ಚೆನ್ನಾಗಿ ಅಡುಗೆ ಮಾಡುತ್ತೇನೆ ಎನ್ನುವ ಕಾರಣಕ್ಕಾ?”

“ಅಷ್ಟೇ ಅಲ್ಲ, ನಿಮ್ಮಲ್ಲಿ ಇನ್ನೂ ಕೆಲವು ವಿಶೇಷತೆಗಳಿವೆ. ಹೊಂದಾಣಿಕೆಯ ಸ್ವಭಾವ, ಅರ್ಥ ಮಾಡಿಕೊಳ್ಳುವ ಗುಣ, ತಾಳ್ಮೆ ಈ ಎಲ್ಲವೂ ಒಂದು ಯಶಸ್ವೀ ದಾಂಪತ್ಯದಲ್ಲಿ ಇರಬೇಕಾದ ಅಂಶಗಳು,” ಆನಂದ್‌ ಅವಳನ್ನು ಹೊಗಳಿದ.

“ಓಹ್‌! ಇಷ್ಟೆಲ್ಲಾ ಹೊಗಳಿಕೆಯೇ?”

“ಕೇವಲ ಹೊಗಳಿಕೆಯಲ್ಲ. ನನ್ನ ಮನಸ್ಸಿನ ಭಾವನೆಯನ್ನು ನಿಮ್ಮಂಥ ಆತ್ಮೀಯ ಗೆಳತಿಗಾಗಿ…. ಮತ್ತೂ ಏನೆಂದರೆ….” ಎನ್ನುತ್ತಾ ಶೃತಿಯತ್ತ ಗಂಭೀರವಾಗಿ ನೋಡಿದ.

“ಏನೆಂದರೆ…..?” ಶೃತಿ ತಿರುಗಿ ಕೇಳುತ್ತಾ ಅವನಲ್ಲೇ ದೃಷ್ಟಿ ನೆಟ್ಟಳು.

ಕ್ಷಣ ಕಾಲ ಇಬ್ಬರ ಕಣ್ಣುಗಳೂ ಒಂದಾದವು. ಶೃತಿ ತಕ್ಷಣ ತನ್ನ ದೃಷ್ಟಿಯನ್ನು ತಗ್ಗಿಸಿದಳು. ಅವಳನ್ನೇ ನೋಡುತ್ತಿದ್ದ ಆನಂದ್‌ ಅವಳ ಹತ್ತಿರ ಸರಿದು, “ಈ ಮೌನವೇ ಸಮ್ಮತಿ ಎಂದು ತಿಳಿಯಬಹುದೇ?” ಎಂದ.

ಲಜ್ಜೆಯಿಂದ ನಗುತ್ತಾ `ಹೌದು’ ಎಂಬಂತೆ ಶೃತಿ ಉತ್ತರಿಸಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ