ಅದನ್ನೇನು `ಲವ್ ಅಟ್ ಫಸ್ಟ್ ಸೈಟ್’ ಎನ್ನುವುದಕ್ಕೂ ಆಗುವುದಿಲ್ಲ. ಅನಿತಾ, ಆಕಾಶನನ್ನು ಇಷ್ಟಪಡುತ್ತಿದ್ದುದಕ್ಕೆ ಕಾರಣ ಅವನು ಇತರರಿಗಿಂತ ವಿಭಿನ್ನ, ಮಾತನಾಡುವವನಾದರೂ ಅಷ್ಟೇನೂ ಗಟ್ಟಿಯಾಗಿರುತ್ತಿರಲಿಲ್ಲ. ಅಲ್ಲದೆ, ಎದುರಿಗಿರುವ ವ್ಯಕ್ತಿ ಏನು ಹೇಳುತ್ತಿದ್ದಾರೆ ಎನ್ನುವುದನ್ನು ಕೇಳಿಸಿಕೊಳ್ಳುವ ತಾಳ್ಮೆ ಅವನಲ್ಲಿತ್ತು.
ಅನಿತಾಳ ಗೆಳತಿ ವಿಮಲಾ ತನ್ನ ಪ್ರಮೋಷನ್ ಸಲುವಾಗಿ ಅನಿತಾ ಹಾಗೂ ಆಕಾಶ್ ಸೇರಿದಂತೆ ಕೆಲವೇ ಮಂದಿಗೆ ಔತಣ ಕೂಟ ಏರ್ಪಡಿಸಿದ್ದಳು. ಅನಿತಾ ಮತ್ತು ವಿಮಲಾ ಅಕ್ಕಪಕ್ಕದ ಮನೆಯವರಾಗಿದ್ದು, ಶಾಲಾ ದಿನಗಳಿಂದಲೂ ಒಳ್ಳೆಯ ಸ್ನೇಹಿತರಾಗಿದ್ದರು. ನಂತರದಲ್ಲಿ ವಿಮಲಾ ಸಾಫ್ಟ್ ವೇರ್ ಎಂಜಿನಿಯರಿಂಗ್ ಸೇರಿದರೆ, ಅನಿತಾ ಫೈನಾನ್ಸ್ ನಲ್ಲಿ ಪದವಿ ಪಡೆದಳು. ಅದೇ ರೀತಿ ಆಕಾಶ್ ಮತ್ತು ಮೋಹನ್ ಚಿಕ್ಕ ವಯಸ್ಸಿನಿಂದಲೂ ಗೆಳಯರಾಗಿದ್ದು, ಒಂದೇ ವಿಷಯ ಓದಿದ್ದರು. ಅದೃಷ್ಟಕ್ಕೆ ಒಂದೇ ಸಂಸ್ಥೆಯಲ್ಲಿ ಇಬ್ಬರಿಗೂ ಕೆಲಸ ಸಿಕ್ಕಿತು. ಆಕಾಶ್ ಔತಣ ಮುಗಿಸಿ ಹೊರಡುವ ಮುನ್ನ ಅನಿತಾಗೆ `ಬೈ’ ಹೇಳಲು ತಿರುಗಿದಾಗ ಇಬ್ಬರಿಗೂ ಅಚ್ಚರಿಯಾಗಿತ್ತು. ಇದಾದ ಹದಿನೈದು ದಿನಗಳ ಬಳಿಕ ಇಬ್ಬರೂ ಊಟದ ಸಮಯದಲ್ಲಿ ಭೇಟಿಯಾದರು.
“ನಿನ್ನ ಊಟ ಆಯಿತಾ?” ಆಕಾಶ್ ಅನಿತಾಳನ್ನು ಕೇಳಿದ.
“ಇನ್ನೂ ಇಲ್ಲ.”
“ಸರಿ ನಾವಿಬ್ಬರೂ ಒಟ್ಟಿಗೇ ಊಟಕ್ಕೆ ಹೋಗಿ,, ಅಲ್ಲೇ ಮಾತನಾಡೋಣ…..”
“ಎಲ್ಲಿಯೋ ಹೊರಗೆ ಹೋಗುವುದಕ್ಕಿಂತ ಇಲ್ಲಿಯೇ ಮಾಡೋಣ. ನಾನು ಕ್ಯಾಂಟೀನ್‌ನಿಂದ ಊಟ ತರಿಸುತ್ತೇನೆ. ನಾವಿಬ್ಬರೂ ಟೆರೇಸ್ ಮೇಲೆ ಹೋಗೋಣ,” ಎಂದಳು ಅನಿತಾ.
“ನಿನ್ನ ಕ್ಯಾಬಿನ್‌ನಲ್ಲಿಯೇ ಸುರಕ್ಷತೆ ಇಲ್ಲ ಎಂದ ಮೇಲೆ ಟೆರೇಸ್‌ಗೆ ಹೋಗಿ ಮಾತನಾಡುವುದು ಅದೆಷ್ಟರ ಮಟ್ಟಿಗೆ ಸುರಕ್ಷಿತ?”
ಕೆಲವು ಕ್ಷಣಗಳ ಮಾತುಕತೆಯ ನಂತರ ಅನಿತಾ, ಆಕಾಶ್‌ನನ್ನು ಟೆರೇಸ್‌ಗೆ ಕರೆದೊಯ್ದಳು. “ನೀನೂ, ವಿಮಲಾ ಒಳ್ಳೆಯ ಗೆಳೆತಿಯರಲ್ಲವೇ? ವಿಮಲಾ ನಿಜವಾಗಿಯೂ ಮೋಹನನನ್ನು ಇಷ್ಟಪಡುತ್ತಿದ್ದಾಳೆಯೇ?” ಎಂದ ಆಕಾಶ್.
ಅನಿತಾಗೆ ಒಮ್ಮೆಲೇ ಅಚ್ಚರಿಯಾಯಿತು. ವಿಮಲಾ ಇದುವರೆಗೂ ಯಾರಿಗೂ, ತನಗೂ ತಿಳಿಸದ ವಿಚಾರ ಆಕಾಶ್‌ಗೆ ತಿಳಿದಿದ್ದಾದರೂ ಹೇಗೆ? ವಿಮಲಾಳ ವರ್ತನೆಯಿಂದ ಅವಳು ಮೋಹನ್‌ನನ್ನು ಪ್ರೀತಿಸುತ್ತಿರುವಳೆಂದು ಊಹಿಸಿದ್ದಳು. ಆ ಕ್ಷಣ ಅವಳು ಅಪ್ರಯತ್ನವಾಗಿ ಆಕಾಶ್‌ನತ್ತ ನೋಡಿದಳು.
“ಇರಬಹುದು. ನನಗೆ ಅದರ ಕುರಿತು ಏನೂ ಗೊತ್ತಿಲ್ಲ,” ಎಂದಳು.
“ಮೋಹನ್ ಕೂಡಾ ನನಗೆ ಏನೂ ಹೇಳಲಿಲ್ಲ. ಆದರೆ ಅವನು ವಿಮಲಾಳನ್ನು ಪ್ರೀತಿಸುತ್ತಿದ್ದಾನೆ. ಇಬ್ಬರೂ ಒಟ್ಟಿಗಿರುವುದನ್ನು ನಾನೇ ನೋಡಿದ್ದೇನೆ. ಮೋಹನ್ ಅವರ ಮನೆಯಲ್ಲಿ ಯಾವ ಸಮಸ್ಯೆಗಳಿಲ್ಲ. ಅವನು ವಿಮಲಾಳನ್ನು ಮದುವೆಯಾಗಲು ಯಾವ ಆತಂಕ ಇಲ್ಲ. ಆದರೆ ವಿಮಲಾ ಬಗ್ಗೆ ಹೇಗೆ…..?”
“ಅವಳ ಮನೆಯಲ್ಲಿಯೂ ಯಾವ ಸಮಸ್ಯೆ ಇಲ್ಲ. ಅವಳ ಅಮ್ಮ ಅಪ್ಪ ಉದವಾರ ಮನಸ್ಸಿನವರು. ಮೋಹನ್‌ನಂತಹ ಒಳ್ಳೆಯ ಹುಡುಗನನ್ನು ಮದುವೆಯಾಗಲು ಅವರು ಬೇಡವೆನ್ನಲಾರರು.”
“ಹೌದಾ? ಹಾಗಾದರೆ ನಾವು ಅವರಿಗೆ ನೆರವಾಗಬೇಕು. ಆಫೀಸಿನ ಹೊರಗೆ ಅವರ ಭೇಟಿಗೆ ಅವಕಾಶ ನೀಡಬೇಕು.”
“ಹೇಗೆ? ನಾವೇನು ಪ್ರತೀ ವಾರಾಂತ್ಯದಲ್ಲಿ ವಿಹಾರ ಹೋಗುವುದಿಲ್ಲವಲ್ಲ….”
“ಅದೂ ಸರಿ. ನೀನು ವಿಮಲಾ ಸಾಮಾನ್ಯವಾಗಿ ವಾರಾಂತ್ಯದಲ್ಲಿ ಏನು ಮಾಡುತ್ತೀರಿ?”
“ಶಾಪಿಂಗ್, ಸಿನಿಮಾ ಹೀಗೆ ಎಲ್ಲಾದರೂ ಹೋಗುತ್ತೇವೆ.”
“ಹಾಗಾದರೆ ನಾವೆಲ್ಲಾ ಸಿನಿಮಾಗೆ ಹೋದರೆ ಹೇಗೆ? ನಾನು ಮೋಹನನನ್ನೂ ಕರೆತರುತ್ತೇನೆ.”
“ಹಾಗೆ ಮೊದಲೇ ಟಿಕೆಟ್ ತೆಗೆದಿರಿಸಿದರೆ ವಿಮಲಾ ಸಿನಿಮಾಗೆ ಬರುವುದಿಲ್ಲ.”
“ನೀನೇ ಹಠ ಹಿಡಿದು ಅವಳನ್ನು ಸಿನಿಮಾಗೆ ಕರೆತರಬೇಕು. ನಾನು ಉಳಿದ ವ್ಯವಸ್ಥೆ ಮಾಡುತ್ತೇನೆ.”
“ಸರಿ, ಆದರೆ ಸಿನಿಮಾ ನಂತರ ಏನು?”
“ಅದನ್ನು ಅಲ್ಲೇ ನಿರ್ಧರಿಸೋಣ.”
ಮರುದಿನ ಅನಿತಾ, ವಿಮಲಾಳೊಂದಿಗೆ ಸಿನಿಮಾಗೆ ಹೋದಳು. ಅಲ್ಲಿ ಮೋಹನ್ ಹಾಗೂ ಆಕಾಶ್ ಸಹ ಇದ್ದರು. ಮೋಹನ್ ವಿಮಲಾ ಪರಸ್ಪರ ನೋಟ ಹರಿಸಿದಾಗ ಇವರಿಬ್ಬರೂ ಅರ್ಥಗರ್ಭಿತವಾಗಿ ನಸು ನಕ್ಕರು.
“ನೀವು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದಿರಾ?” ಆಕಾಶ್ ವಿಮಲಾಳನ್ನು ಕೇಳಿದ.
“ಇಲ್ಲ. ನಮಗೆ ಟಿಕೆಟ್ ಸಿಕ್ಕಿಲ್ಲ. ಅನಿತಾ ನನ್ನನ್ನು ಬಲವಂತವಾಗಿ ಎಳೆದುಕೊಂಡು ಬಂದಳು. ನೋಡಬೇಕು, ಇಲ್ಲಿ ನಮಗಾಗಿ ಯಾರಾದರೂ ಟಿಕೆಟ್ ನೀಡಬಹುದೇನೋ ಅನಿಸುತ್ತದೆ. ಹಾಗೆಂದು ಅಂತಹ ಉದಾರಿಗಳು ನೀವೇ ಎಂದುಕೊಳ್ಳಬೇಡಿ,” ವಿಮಲಾ ನಕ್ಕಳು.
“ಓ…. ಅವನೇನೂ ಉದಾರಿಯಲ್ಲ. ಅವನೊಬ್ಬ ನಿರಾಶಾವಾದಿ,” ಮೋಹನ್ ಹೇಳಿದ.
“ನಿನ್ನಂತೆಯೇ ಆಕಾಶ್ ನನ್ನನ್ನು ಸಹ ಎಳೆದುಕೊಂಡು ಬಂದ. ಈಗ ನೋಡಿದರೆ ನಾವ್ಯಾರೂ ಸಿನಿಮಾ ನೋಡುವುದೇ ಅನುಮಾನ ಎನ್ನುವಂತಿದೆ.”
“ಸಿನಿಮಾಗೆ ಹೋಗಲೇಬೇಕೇ?” ವಿಮಲಾ ಕೇಳಿದಳು.
“ಏನು ಅನಿತಾ?”
“ಇದು ಅನಿತಾಗಿಂತಲೂ ನನಗೆ ಬಹಳ ಅಗತ್ಯವಿದೆ. ಅನಿತಾ ಎಂದೂ ತನ್ನ ಕುಟುಂಬದವರೊಡನೆ ಇರುತ್ತಾಳೆ. ಆದರೆ ನಾನು ವಾರವಿಡೀ ದುಡಿದು ಕುಟುಂಬದಿಂದ ಬೇರೆಯಾಗಿರುತ್ತೇನೆ. ನನಗೆ ಇಂತಹ ಸಿನಿಮಾ ನೋಡುವಾಗ ನನ್ನ ಕುಟುಂಬದೊಡನೆ ಇದ್ದ ಭಾವನೆ ಬರುತ್ತದೆ,” ಎಂದ ಆಕಾಶ್.
“ಓಹೋ! ಈ ಭಾವನೆ ನಮ್ಮ ಮನೆಗೆ ಬಂದಾಗಲೂ ಉಂಟಾಗಿರಬಹುದಲ್ಲವೇ?” ಅನಿತಾ ಯೋಚಿಸುವುದಕ್ಕೂ ಮುನ್ನವೇ ಮಾತನಾಡಿದಳು.
“ಹೌದಾ ನಿಜವಾಗಿ? ನಿನ್ನ ಕುಟುಂಬದವರೊಡನೆ ನನ್ನನ್ನು ಸಹ ಸೇರಿಸಿಕೊಳ್ಳುತ್ತೀಯಾ?” ಆಕಾಶ್ ಅಚ್ಚರಿ ವ್ಯಕ್ತಪಡಿಸಿದ.
“ಅದು ವಿಮಲಾಳಿಂದ ಸಾಧ್ಯ. ನೀವಿಬ್ಬರೂ ಅವರ ಮನೆಯವರಿಗೆ ಮೊದಲಿನಿಂದಲೂ ಪರಿಚಯಸ್ಥರಲ್ಲವೇ? ಏನು ವಿಮಲಾ?”
“ನೀವೀಗ ನನಗೆ ಸಿನಿಮಾ ತೋರಿಸುವಿರೋ ಹೇಗೆ?”
“ನನಗೆ ಕುಟುಂಬದವರೊಡನೆ ಕಾಲ ಕಳೆಯಬೇಕೆನ್ನಿಸುತ್ತಿದೆ. ಹಾಗಾಗಿ ನಾವೆಲ್ಲರೂ ನಿಮ್ಮ ಮನೆಗೆ ಬರುತ್ತಿದ್ದೇವೆ,” ಆಕಾಶ್‌ಹೇಳುತ್ತಿದ್ದಂತೆ ಅನಿತಾ ಕೂಡ ಅದನ್ನೇ ಅನುಮೋದಿಸಿದಳು. ವಿಮಲಾಗೆ ಮೋಹನ್ ಇಷ್ಟು ಬೇಗ ತಮ್ಮ ಮನೆಗೆ ಬರುವುದು ಇಷ್ಟವಿರಲಿಲ್ಲವಾದರೂ ಎಲ್ಲರೂ ಆಗ್ರಹಪಡಿಸಿದಾಗ ಒಪ್ಪಿಕೊಂಡಳು.
ಅಂದುಕೊಂಡಂತೆಯೇ ಎಲ್ಲರೂ ವಿಮಲಾಳ ಮನೆಗೆ ಆಗಮಿಸಿದರು. ವಿಮಲಾ ತಂದೆತಾಯಿ ಮನೆಯರಲ್ಲಿರಲಿಲ್ಲ. ಕೆಲಸದವಳು ಇವರಿಗೆ ಚಹಾಗಾಗಿ ವಿಚಾರಿಸಿದಳು. ವಿಮಲಾ “ಈಗಲೇ ಬೇಡ,” ಎಂದು ಸೂಚಿಸಿದಾಗ ಆಕೆ ಹತ್ತಿರದ ಮಾರುಕಟ್ಟೆಗೆ ಹೋಗಿ ಬರುವುದಾಗಿ ಹೇಳಿ ಹೊರಟುಹೋದಳು.
ಕೆಲವು ಸಮಯದ ನಂತರ ಅನಿತಾ, ಆಕಾಶ್‌ನನ್ನು ತನ್ನ ಮನೆಗೆ ಕರೆದೊಯ್ದಳು. ಅಲ್ಲಿಂದ ಹಿಂತಿರುಗಿದಾಗಲೂ ಮೋಹನ್ ಹಾಗೂ ವಿಮಲಾ ತಮ್ಮದೇ ಮಾತುಕತೆಯಲ್ಲಿ ನಿರತರಾಗಿದ್ದರು. ಅನಿತಾ ಚಹಾ ಹಾಗೂ ಲಘು ಉಪಾಹಾರ ತಯಾರಿಸುವುದಾಗಿ ಹೇಳಿ ಒಳ ಹೋದಳು. ಅವಳ ಹಿಂದೆಯೇ ಆಕಾಶ್ ಸಹ ಅಡುಗೆಮನೆ ಸೇರಿಕೊಂಡ.
“ಎಲ್ಲ ಎಣಿಸಿದಂತೆಯೇ ಆಗುತ್ತಿದೆ,” ಅನಿತಾ ನುಡಿದಳು.
“ಹೌದು. ಸ್ವಲ್ಪ ಸಮಯದ ಬಳಿಕ ನಾನು ನನ್ನ ಕಸಿನ್ ಕರೆದನೆಂದು ಹೊರಡುತ್ತೇನೆ,” ಎಂದ ಆಕಾಶ್.
“ಮನೆಯಲ್ಲಿ ಕೆಲಸವಿದೆ ಎಂದು ಹೇಳಿ, ನಾನೂ ನಿನ್ನೊಡನೆ ಬರುತ್ತೇನೆ.”
“ಸರಿ.” ಎಲ್ಲ ಎಣಿಸಿದಂತೆಯೇ ನಡೆಯಿತು. ಮೋಹನ್ ರಾತ್ರಿಯೂ ಅವನ ಕೋಣೆಗೆ ವಾಪಸಾಗಲಿಲ್ಲ. ವಿಮಲಾ ಸಹ ಅನಿತಾಗೆ ಸಿಗಲಿಲ್ಲ. ಆಕಾಶ್‌ಗೆ ಅನಿತಾ ಕರೆ ಮಾಡಿದಾಗಲೂ ಅವನು ಸಹ ಅದನ್ನೇ ಹೇಳಿದ.
“ಇಬ್ಬರೂ ಯಾವುದಾದರೂ ಪಾರ್ಟಿಗೆ ಹೋಗಿರಬಹುದು,” ಆಕಾಶ್ ಹೇಳಿದಾಗ ಅನಿತಾಗೂ ಅದು ನಿಜವೆನಿಸಿತು.
“ನಿನಗೂ ಪಾರ್ಟಿಗಳೆಂದರೆ ಇಷ್ಟವೇ?”
“ಹೌದು. ನಾನೂ ಪಾರ್ಟಿಗಳಲ್ಲಿ ಭಾಗವಹಿಸುತ್ತೇನೆ. ಆದರೆ ಎಲ್ಲಾ ಸಾಮಾನ್ಯ ರೀತಿಯ ಪಾರ್ಟಿಗಳಿಗಿಂತಲೂ ವಿಭಿನ್ನವಾಗಿರುವ ಪಾರ್ಟಿಗಳೆಂದರೆ ನನಗೆ ಬಹಳ ಕುತೂಹಲ.”
“ರಿಯಲಿ….? ಹಾಗಿದ್ದರೆ ನಮ್ಮ ಮನೆಯ ಬಳಿ ಇರುವ ಮಹಿಳಾ ಮಂಡಲದವರು ಆಗಾಗ ವಿಭಿನ್ನ ರೀತಿಯ ಕಾರ್ಯಕ್ರಮ ನಡೆಸುತ್ತಿರುತ್ತಾರೆ. ನಮ್ಮ ತಾಯಿ ಅದರ ಖಾಯಂ ಸದಸ್ಯರಾದ ಕಾರಣ ನಮಗೂ ಆಹ್ವಾನ ಬರುತ್ತದೆ. ನಾನು ಆಗಾಗ ನನ್ನ ಗೆಳೆಯರನ್ನು ಕರೆದೊಯ್ಯುತ್ತೇನೆ. ಈ ಬಾರಿ ನಮ್ಮ ಸಹೋದ್ಯೋಗಿಗಳನ್ನು ಕರೆಯಲಿದ್ದೇನೆ. ನೀನೂ, ವಿಮಲಾ ಬಂದುಬಿಡಿ. ನಾನು ಮೋಹನನನ್ನೂ ಕರೆಯುತ್ತೇನೆ.”
“ಹಾಗೇ ಆಗಲಿ….”
ಕೆಲವು ದಿನಗಳ ನಂತರ ಆಕಾಶನಿಂದ ಅನಿತಾ, ವಿಮಲಾ ಮನೆಯವರಿಗೆ ಹಾಗೂ ಮೋಹನ್‌ಗೆ ಮಹಿಳಾ ಮಂಡಲದ ಕಾರ್ಯಕ್ರಮಕ್ಕೆ ಆಮಂತ್ರಣ ಹೋಯಿತು.
“ನಾನು ಬರುತ್ತೇನೆ. ನೀನು ಮೋಹನನನ್ನು ಕರೆಯುವೆಯಲ್ಲ?” ಅನಿತಾ ಕೇಳಿದಳು.
“ಹೌದು. ಅವನೂ ಬರುತ್ತಾನೆ.”
ಅಂದು ಎಲ್ಲರೂ ಕಾರ್ಯಕ್ರಮದ ಸ್ಥಳದಲ್ಲಿ ಸೇರಿದರು. ಮೋಹನನನ್ನು ನೋಡಿದ ಓರ್ವ ಮಹಿಳೆ, “ಈತ ನಮ್ಮವರಲ್ಲ. ಕಾರ್ಯಕ್ರಮಕ್ಕೆ ಸೇರಿಸಿದವರು ಯಾರು?” ಎಂದು ಪ್ರಶ್ನಿಸಿದರು.
ಆಗ ವಿಮಲಾಳ ತಾಯಿ, “ಮೋಹನ್ ಬೇರೆಯವನಲ್ಲ. ಅವನು ನಮ್ಮ ಕುಟುಂಬಕ್ಕೆ ಸೇರಿದವನು,” ಎನ್ನುವ ಸಮಜಾಯಿಷಿ ನೀಡಿದರು.
ವಿಮಲಾ ಮೋಹನ್, ಆಕಾಶ್ ಅನಿತಾ ಪರಸ್ಪರ ಮುಖ ನೋಡಿ ಕೊಂಡರು. ಇದೀಗ ಮೋಹನ್‌ಗೆ ಆಕಾಶ್ ಅಥವಾ ಅನಿತಾಳ ನೆರವು ಬೇಕಾಗಿರಲಿಲ್ಲ. ವಿಮಲಾ ಕುಟುಂಬದವರೇ ಮೋಹನ್‌ನನ್ನು ಮೆಚ್ಟಿಕೊಂಡಿದ್ದರಿಂದ ಮೂರನೇ ವ್ಯಕ್ತಿಗಳಿಲ್ಲದೆ ಅವರ ಪ್ರೇಮ ಗೆದ್ದಿತ್ತು. ಅದೇ ವೇಳೆ ಮೋಹನ್ ಹಾಗೂ ವಿಮಲಾ ಸಹ ಆಕಾಶ್ ಅನಿತಾರ ನಡುವಿನ ಬಾಂಧವ್ಯವನ್ನು ಕಂಡಿದ್ದರು.
ತಮ್ಮನ್ನು ಒಂದಾಗಿಸುವ ಪ್ರಯತ್ನದಲ್ಲಿ ಅನಿತಾ ಆಕಾಶ್ ತಾವು ಭಾವನಾತ್ಮಕವಾಗಿ ಒಂದಾಗಿದ್ದರು.
“ಏನು ಅನಿತಾ? ನಿನಗೂ ಆಕಾಶ್ ಮೇಲೆ ಪ್ರೀತಿ ಪ್ರಾರಂಭವಾದಂತಿದೆ..?” ವಿಮಲಾ ಛೇಡಿಸಿದಳು.
“ಹಾಂ… ನಮ್ಮಲ್ಲೂ ಲವ್‌ನ ಸೈಡ್ ಎಫೆಕ್ಟ್ಸ್ ಪ್ರಾರಂಭವಾಗಿದೆ,” ಎಂದು ನಕ್ಕಳು ಅನಿತಾ.