ಬೆಂಗಳೂರು ನಗರದಲ್ಲಿ ಪುಟ್ಟ ಮನೆಯೊಂದನ್ನು ಮಾಡುವುದು ಸುಲಭವಲ್ಲ. ನಿವೇಶನಗಳ ಬೆಲೆಗಳನ್ನು ಕೇಳಿದರೆ ಬೆಚ್ಚಿಬೀಳಬೇಕು, ಆದರೂ ಎಲ್ಲರಿಗೂ ತಮ್ಮದೇ ಆದ ಸ್ವಂತ ಮನೆಯೊಂದನ್ನು ಕಟ್ಟಬೇಕೆನ್ನುವ ಆಸೆ ಇದ್ದದ್ದೇ. ಅದರ ಜೊತೆ ಮನೆಯ ಸುತ್ತ ಹೂವಿನ ಹಾಸಿಗೆಯನ್ನು ಚೆಲ್ಲುವಂತೆ ಇರಬೇಕೆನ್ನುವ ಕನಸು, ಆದರೆ ನಗರದ ಪುಟ್ಟ ನಿವೇಶನಗಳಲ್ಲಿ ಈ ಕನಸನ್ನು ನನಸು ಮಾಡಿಕೊಳ್ಳುವುದು ನಿಜಕ್ಕೂ ಕಷ್ಟ. ಮನೆಯ ಸುತ್ತ ಹೂವಿನ ಹಾಸಿಗೆ ಇರದಿದ್ದರೇನಂತೆ, ಮನೆಯ ಮೇಲೆ ತಾರಸಿಯಲ್ಲೇ ನಾನು ಹೂವಿನ ಹಾಸಿಗೆಯನ್ನಲ್ಲದೆ ತರಕಾರಿಯನ್ನೂ ಬೆಳೆಯುವೆ ಎನ್ನುವವರು ಬಹಳ ಅಪರೂಪ, ಅಂತಹರಲ್ಲಿ ರಾಜಾಜಿನಗರದ ವಿಜಯಾ ಉರಾಳ ಅವರೂ ಒಬ್ಬರು.

ಅವರ ಮನೆಯ ತಾರಸಿಯಲ್ಲಿ ಹೂಗಳೇ ಅಲ್ಲದೆ ತರಿಕಾರಿಯನ್ನೂ ಬೆಳೆಸಿದ್ದಾರೆ. ನಾವು ತಿನ್ನುವ ಮಾರುಕಟ್ಟೆಯ ತರಕಾರಿಗಳು ವಿಷಪೂರಿತ ಆಗಿರುತ್ತವೆ. ಅವನ್ನು ಬೆಳೆಯಲು ಹೆಚ್ಚಿನ ಪ್ರಮಾಣದಲ್ಲಿ ಸಾಕಷ್ಟು ಕ್ರಿಮಿ ನಾಶಕಗಳನ್ನು ಸಿಂಪಡಿಸಿರುತ್ತಾರೆ. ಆದ್ದರಿಂದ ಸಾವಯವ ಕೃಷಿಯಿಂದ ಬೆಳೆದಂತಹ ತರಕಾರಿಗಳನ್ನು ತಿನ್ನಿ ಎಂದು ಆಹಾರ ತಜ್ಞರು ಹೇಳುತ್ತಲೇ ಇರುತ್ತಾರೆ. ಆದರೆ ವಾಸ್ತವಿಕವಾಗಿ ಅದು ಅಷ್ಟು ಸುಲಭವಲ್ಲ. ವಿಜಯಾ ತಮ್ಮ ತಾರಸಿಯಲ್ಲಿ ತರಕಾರಿಯನ್ನು ಬೆಳೆದು, ಈ ಕಷ್ಟವನ್ನೂ  ಸುಲಭವೆಂದು ತೋರಿಸಿದ್ದಾರೆ.

ಮೂಲತಃ ಮಂಗಳೂರಿನವರಾದ ಇವರ ಮನೆಯಲ್ಲೇ ತೋಟವಿತ್ತಂತೆ. ಅವರು ಬಾಲ್ಯದಲ್ಲಿ ನೆಟ್ಟ ಮಾವು ಮತ್ತು ಸೀಬೆ ಮರಗಳಲ್ಲಿ ಈಗಲೂ ಹಣ್ಣು ಬಿಡುತ್ತದೆಯಂತೆ.

“ಮದುವೆಯಾದ ನಂತರ ಪತಿ ಬ್ಯಾಂಕ್‌ ಉದ್ಯೋಗಿ. ಊರೂರು ಅಲೆಯುತ್ತಿದ್ದುದರಿಂದ ಗಿಡ ಬೆಳೆಸುವ ಆಶೆ ಕೈಗೂಡಲೇ ಇಲ್ಲ. ಆದರೆ ಬೆಂಗಳೂರಿಗೆ ಬಂದ ಮೇಲೂ ನೆಟ್ಟ ಕೆಲವು ಗಿಡಗಳನ್ನು ಹೆಗ್ಗಣ ಬರುತ್ತದೆಂದು ಸಿಮೆಂಟ್‌ ಹಾಕಿ ಮುಚ್ಚಿಸಿಬಿಟ್ಟರು. ಆದರೂ ನಾನು ಹಠ ಬಿಡದೆ ತಾರಸಿಯಲ್ಲೇ ಹೂವು ತರಕಾರಿ ಬೆಳೆಯಲು ಪ್ರಾರಂಭಿಸಿದೆ. ಈಗ ಮನೆಯ ಎಲ್ಲರ ಜೊತೆ, ಅಕ್ಕಪಕ್ಕದವರೂ ನನಗೆ ಸಹಕಾರ ನೀಡುತ್ತಾರೆ,” ಎನ್ನುತ್ತಾರೆ ವಿಜಯಾ.

ಬೆಳ್ಳಗೆ ಹೊಳೆಯುವ ಸೇವಂತಿಗೆ, ಶಾಂತಿಯ ಪ್ರತೀಕವಾದ ಗೊಂಚಲು ಗೊಂಚಲು ಶ್ವೇತ ಗುಲಾಬಿ, ಕೆಂಪನೆಯ ರೋಜಾ ಹೂ,  ಬಿಳಿಯ ಲಿಲಿ ಹೂ, ಸರಸ್ವತಿ ಬಣ್ಣದ ಡೇಲಿಯಾ, ಮಲ್ಲಿಗೆ, ಸೇವಂತಿಗೆ, ದಾಸವಾಳ, ಶಂಖಪುಷ್ಪ, ಸದಾಪುಷ್ಪ, ವಲ್ವೆಟ್‌ ಹೂ, ರುದ್ರಾಕ್ಷಿ, ತುಳಸಿ, ಒಂದೆಡೆ ಹೂಗಳ ಸಾಮ್ರಾಜ್ಯವಾದರೆ ಮತ್ತೊಂದೆಡೆ ತರಕಾರಿಗಳದು.

ಅವರು ಬೆಳೆಸಿರುವ ತರಕಾರಿ ಒಂದಕ್ಕಿಂತ ಒಂದು ಆರೋಗ್ಯಪೂರ್ಣ ಮತ್ತು ಪುಷ್ಟಿದಾಯಕವಾಗಿದೆ. ನೋಡಿದರೆ ಬಾಯಿಯಲ್ಲಿ ನೀರು ಒಸರುತ್ತದೆ. ಹಸಿರಿನ ಮಧ್ಯೆ ಮೈದುಂಬಿಕೊಂಡ ಸಿಹಿಗುಂಬಳ, ಪಕ್ಕದಲ್ಲೇ ಬೂದುಗುಂಬಳ, ಎಳಸಾದ ಬೆಂಡೆಕಾಯಿ, ಉದ್ದನೆಯ ಹಲಸಂದೆ, ಹಸಿರು ಬೀನ್ಸ್, ಶುಂಠಿ, ಅರಿಶಿನ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಗಾಂಧಾರಿ ಮೆಣಸು, ದೊಣ್ಣೆ ಮೆಣಸಿನಕಾಯಿ, ಕಲ್ಲಂಗಡಿ, ಟೊಮೇಟೊ ಎಲ್ಲವನ್ನೂ ಬೆಳೆಸಿದ್ದಾರೆ.

ದಿನಕ್ಕೆ ಒಂದು ಗಂಟೆ ಗಿಡಗಳೊಂದಿಗೆ ಕಳೆಯುತ್ತಾರೆ. ರೀ ಪಾಟಿಂಗ್‌ ಸಹ ತಾವೇ ಮಾಡುತ್ತಾರೆ. ಮೇಲಿನ ಸ್ವಲ್ಪ ಮಣ್ಣನ್ನು ತೆಗೆದು ಅದಕ್ಕೆ ಕುರಿ ಗೊಬ್ಬರ ಬೆರೆಸಿ ಮತ್ತೆ ತುಂಬಿಸುತ್ತಾರೆ. ಗಿಡಗಳಿಗೆ ನೀರುಣಿಸುವಾಗಲೂ ತರಕಾರಿ ಮತ್ತು ಅಕ್ಕಿ ತೊಳೆದ ನೀರು ಈಗಿನ ಆಧುನಿಕ ಫಿಲ್ಟರ್‌ಗಳಲ್ಲಿ ಹೊರಬರುವ ನೀರನ್ನೂ ಸಹ ಗಿಡಗಳಿಗೆ ಬಳಸುತ್ತಾರಂತೆ. ಗಿಡಗಳಿಗೆ ಅಗತ್ಯವಿರುವ ಅರ್ಧ ನೀರು ಬಳಸಿರುವುದೇ ಆಗಿರುತ್ತದೆ ಎನ್ನುತ್ತಾರೆ.

ಈ ರೀತಿ ನೀರನ್ನೂ ಪೋಲು ಮಾಡದೆ ಟೆರೇಸಿನ ತುಂಬಾ ಹೂವು ಮತ್ತು ತರಕಾರಿ ತೋಟವನ್ನು ನಿರ್ಮಿಸಿಕೊಂಡಿದ್ದಾರೆ. ನಿಜಕ್ಕೂ ಅವರು ಮಾಡುತ್ತಿರುವ ಕೆಲಸ ಅನುಕರಣೀಯ. ತಮ್ಮ ದಿನನಿತ್ಯದ ಕೆಲಸಗಳೊಂದಿಗೆ ಇಂತಹ ಒಂದು ಕಾಯಕವನ್ನು ಕೈಗೊಂಡ ವಿಜಯಾ ಮಾದರಿ ಮಹಿಳೆ. ಪ್ರತಿಯೊಬ್ಬ ಮಹಿಳೆಯೂ ತಮ್ಮ ಮನೆಯ ತಾರಸಿಯಲ್ಲಿ ಇಂತಹದೊಂದು ತೋಟದ ನಿರ್ಮಾಣ ಮಾಡಿದರೆ ದಿನನಿತ್ಯ ಆರೋಗ್ಯಕರ ತರಕಾರಿಯ ಅಡುಗೆಯನ್ನು ಉಣ್ಣಲು ಸಾಧ್ಯ.ಈ ತಾರಸಿ ತೋಟದ ಬಗ್ಗೆ ಅವರ ಮಾತಿನಲ್ಲೇ ಕೆಲವು ಟಿಪ್ಸ್ ಗಳನ್ನು ನೀಡಿದ್ದಾರೆ.

“ಗಿಡಗಳಿಗೆ ನಿತ್ಯ ನೀರುಣಿಸಬೇಕು. ತಾರಸಿ ಗಾರ್ಡನ್‌ಗೆ ಬಿಸಿಲು ಕಾಲದಲ್ಲಿ ಎರಡೂ ಹೊತ್ತೂ ನೀರುಣಿಸಬೇಕಾಗುತ್ತದೆ. ತರಕಾರಿ ಸಿಪ್ಪೆ, ಕುರಿ ಗೊಬ್ಬರನ್ನು ಗಿಡಗಳಿಗೆ ಹಾಕಿದರೆ ಒಳ್ಳೆಯ ಫಲ ಕೊಡುತ್ತದೆ.

“ಕಹಿಬೇವಿನ ಹಿಂಡಿ, ಒಂದೊಂದು ಗಿಡಕ್ಕೆ ತಲಾ ಅರ್ಧ ಚಮಚದಷ್ಟು ಹಾಕಬೇಕಾಗುತ್ತದೆ. ಕಹಿಬೇವಿನ ಎಲೆಯನ್ನು ಗಿಡಗಳಿಗೆ ಉದುರಿಸಬಹುದು. ಕರಿಬೇವಿನ ಗಿಡಗಳಿಗೆ ಟೀ ಹುಡಿ ಉತ್ತಮ ಗೊಬ್ಬರ. ಆದರೆ ನೆಲಗಡಲೆ ಹಿಂಡಿಯನ್ನು ಎಲ್ಲಾ ಗಿಡಗಳಿಗೆ ಹಾಕಬಾರದು. ಕ್ರಿಮಿ ಕೀಟಗಳು ಕಾಣಿಸಿದರೆ ಮಾತ್ರ ಗಿಡಗಳಿಗೆ `ಟಾಗಫಾರ್‌ ಮೆಡಿಸಿನ್‌’ ಸಿಂಪಡಿಸಬೇಕು.

“ತರಕಾರಿ ಬೆಳೆಗಳಲ್ಲಿ ಬೆಂಡೆ, ಹುರುಳಿಕಾಯಿಯ ಬೀಜ ಬಿತ್ತನೆ ಮಾಡಿದರೆ, ಒಂದೇ ತಿಂಗಳಲ್ಲಿ ಫಲ ಕೊಡುತ್ತದೆ. ಕುಂಬಳಕಾಯಿ, ಸೌತೆಕಾಯಿ, ಮೂರು ತಿಂಗಳಲ್ಲಿ ಫಲ ಕೊಡುತ್ತದೆ. ಚಪ್ಪರದ ಅವರೆಕಾಯಿ, ಹೀರೇಕಾಯಿ ಬಳ್ಳಿ ಹಬ್ಬಿಸಲು ಚಪ್ಪರದ ಅಗತ್ಯವಿದೆ. ಗುಲಾಬಿ, ಮಲ್ಲಿಗೆ, ಸೇವಂತಿಗೆ, ಚೆಂಡುಹೂಗಳನ್ನು ಕುಂಡಗಳಲ್ಲಿ ಬೆಳೆಸಬಹುದು. ಅವಿರತವಾಗಿ ಶ್ರಮಪಟ್ಟು ಗಿಡಗಳ ಸೇವೆ ಮಾಡಿದರೆ ಗಿಡಗಳು ಪ್ರಪ್ರಥಮವಾಗಿ ಬಿಟ್ಟ ಹೂಕಾಯಿಗಳನ್ನು ನೋಡಿದಾಕ್ಷಣ ಉಂಟಾಗುವ ಉಲ್ಲಾಸ ಹೇಳತೀರದು!”

ಮಂಜುಳಾ ರಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ