“ಮೃಣಾಲಿನಿ, ಎದ್ದೇಳು. ಶಾಲೆಗೆ ತಡವಾಗುತ್ತದೆ,” ಕುಮುದಾ ತನ್ನ ಮಗಳನ್ನು ಎಬ್ಬಿಸಿದಳು.
“ರಾತ್ರಿ ಬಹಳ ಹೊತ್ತು ಟಿ.ವಿ. ನೋಡಬೇಡ ಬೇಗನೆ ಮಲಗು ಎಂದು ಎಷ್ಟು ಹೇಳಿದರೂ ಕೇಳಲಾರಳು,” ಎನ್ನುತ್ತಾ ಅಲ್ಲೇ ಇದ್ದ ಪತಿ ಡಾ. ರಮಾಕಾಂತನತ್ತ ತಿರುಗಿ, “ನೋಡಿ, ನಿಮ್ಮ ಮಗಳು ಇನ್ನೂ ಎದ್ದಿಲ್ಲ… ಎಬ್ಬಿಸಿ ಕರೆತನ್ನಿ,” ಎಂದಾಗ ರಮಾಕಾಂತ್‌ಮಗಳ ಕೋಣೆಯತ್ತ ಹೋದ.
ಕೆಲವು ನಿಮಿಷ ಮಗಳನ್ನು ನೋಡಿದ ರಮಾಕಾಂತ್ ಅವಳನ್ನು ಹಾಗೇ ಮಲಗಲು ಬಿಟ್ಟು ಹೊರಬಂದು, “ಇಂದು ನಾನೇ ಮುದ್ದು ಮೃಣಾಲಿಯನ್ನು ಶಾಲೆಗೆ ಡ್ರಾಪ್ ಮಾಡ್ತೀನಿ. ಅವಳಿನ್ನೂ ಸ್ವಲ್ಪ ಹೊತ್ತು ಮಲಗಿರಲಿ,” ಎಂದ.
ಮೃಣಾಲಿನಿ ರಮಾಕಾಂತ್ ಕುಮುದಾರ ಮುದ್ದಿನ ಮಗಳು. ರಮಾಕಾಂತ್ ನ್ಯೂರೋ ಸರ್ಜನ್ ಆಗಿದ್ದರಿಂದ ಮಗಳೂ ಚೆನ್ನಾಗಿ ಓದಿ ಖ್ಯಾತ ವೈದ್ಯೆ ಎನಿಸಬೇಕೆಂದು ಹಂಬಲಿಸಿದ್ದನು. ಕುಟುಂಬವನ್ನು ಪ್ರೀತಿಸುತ್ತಿದ್ದ ಅವನಿಗೆ ಮಗಳ ಮೇಲೆ ಅಪಾರವಾದ ಮಮತೆ. ಮೃಣಾಲಿನಿಗೂ ಅಪ್ಪ ಎಂದರೆ ಎಲ್ಲಿಲ್ಲದ ಅಕ್ಕರೆ. ಅಮ್ಮ ಯಾವಾಗಲಾದರೊಮ್ಮೆ ಗದರುತ್ತಿದ್ದಳಾದರೂ ಅಪ್ಪ ಮಾತ್ರ ಎಂದೂ ಗಟ್ಟಿಯಾಗಿ ಗದರಿದವನಲ್ಲ. ಯಾವಾಗಲೂ ಅವಳ ಪರವಾಗಿಯೇ ಮಾತನಾಡುತ್ತಿದ್ದನು.
ಇನ್ನು ರಾತ್ರಿ ವೇಳೆ ಮೃಣಾಲಿನಿಗೆ ನಿದ್ರೆ ಬರುವವರೆಗೂ ಅವಳ ಅಪ್ಪ ಅವಳೊಂದಿಗೇ ಇರಬೇಕಾಗಿತ್ತು. ಆ ಸಮಯದಲ್ಲಿ ಅಪ್ಪ ಅವಳಿಗೆ ವಿವಿಧ ಬಗೆಯ ಕಥೆಗಳನ್ನು ಹೇಳುತ್ತಿದ್ದರು. ಅವರಲ್ಲಿ ಹಲವು ಕಥೆಗಳು ವೈದ್ಯಕೀಯ ಲೋಕದ ವಿಸ್ಮಯಗಳನ್ನು ಕುರಿತಂತೆ ಇರುತ್ತಿತ್ತು. ಇಂತಹ ಕಥೆಗಳಲ್ಲಿ ಮೃಣಾಲಿನಿಗೂ ಆಸಕ್ತಿ ಇದ್ದು ಅವಳು ತಿರುಗಿ ತಿರುಗಿ ಪ್ರಶ್ನೆ ಕೇಳಿ ತನ್ನ ಸಂದೇಹವನ್ನು ನಿವಾರಿಸಿಕೊಳ್ಳುತ್ತಿದ್ದಳು.
ಸಂಜೆ ವೇಳೆ ಅವಳು ಮನೆಯ ಹೊರಗಡೆ ಸಾಕಷ್ಟು ಚಟುವಟಿಕೆಗಳಲ್ಲಿ ನಿರತಳಾಗಿದ್ದಳು. ರಮಾಕಾಂತ್ ಮಗಳ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುವ ಸಾಕಷ್ಟು ಬಗೆಯ ಚಟುವಟಿಕೆಗಳು, ಆಟಗಳಲ್ಲಿ ಅವಳನ್ನು ತೊಡಿಗಿಸುವಂತೆ ಪ್ರೇರೇಪಿಸುತ್ತಿದ್ದ.
ಕಾಲ ಸರಿಯುತ್ತಿತ್ತು. ಮೃಣಾಲಿನಿಯೂ ಬೆಳೆದು ಲಾವಣ್ಯವತಿಯಾದಳು. ಅವಳ ದೈಹಿಕ, ಮಾನಸಿಕ ಸ್ಥಿತಿಗಳಲ್ಲಿ ಸಾಕಷ್ಟು ಬದಲಾವಣೆಗಳಾದವು. ಅವಳೀಗ ಮೊದಲಿನಂತೆ ತನ್ನ ಗಲ್ಲಿಯ ಹುಡುಗರೊಂದಿಗೆ ಆಡಲು ಹೋಗುವುದಿಲ್ಲ. ಅಪ್ಪನೊಂದಿಗೆ ಮೊದಲಿನಂತೆ ಬೆರೆಯಲಾರಳು. ಇದು ತಂದೆಗೂ ಆತಂಕವನ್ನುಂಟು ಮಾಡಿತ್ತು. ಆದರೆ ಮಗಳ ಭವಿಷ್ಯ ಉಜ್ವಲವಾಗಿರಬೇಕು ಎನ್ನುವ ಹಂಬಲವಿದ್ದುದರಿಂದ ಇವೆಲ್ಲವನ್ನೂ ಅವರಷ್ಟು ಗಮನಕ್ಕೆ ತಂದುಕೊಂಡಿರಲಿಲ್ಲ. ಆದರೂ ಕೆಲವೊಮ್ಮೆ ತಾನೆಲ್ಲಿಯೋ ಪುಟ್ಟ ಮೃಣಾಲಿನಿಯನ್ನು `ಮಿಸ್’ ಮಾಡಿಕೊಳ್ಳುತ್ತಿದ್ದೇನೇನೋ ಎನಿಸುತ್ತಿತ್ತು.
ಮೃಣಾಲಿನಿ ಎಂ.ಎ. ಮುಗಿಸಿದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಗರದ ಕಾಲೇಜು ಸೇರಿದಳು. ಅವಳ ಮನೆಯಿಂದ ಕಾಲೇಜು ಸಾಕಷ್ಟು ದೂರದಲ್ಲಿದ್ದ ಕಾರಣ ಅವಳು ಹಾಸ್ಟೆಲ್ ಸೇರಿಕೊಳ್ಳಬೇಕಾಯಿತು. ಕಾಲೇಜಿನಲ್ಲಿ ಅವಳಿಗೆ ಬಹಳಷ್ಟು ಸ್ನೇಹಿತರು ದೊರಕಿದರು. ಅವರುಗಳಲ್ಲಿ ಅವಳಿಗಿಂತ ಒಂದು ವರ್ಷ ಸೀನಿಯರ್ ಆಗಿದ್ದ ಅವಿನಾಶ್ ಕೂಡ ಒಬ್ಬ.
ಇಬ್ಬರ ನಡುವೆ ಪ್ರಾರಂಭವಾದದ್ದು ಸಾಮಾನ್ಯ ಗೆಳೆತನವಾದರೂ, ಬಲು ಬೇಗನೇ ಅದು ಪ್ರೀತಿಯಾಗಿ ಬದಲಾಯಿತು. ಇಬ್ಬರೂ ಹಲವಾರು ವಿಷಯಗಳ ಕುರಿತು ಗಂಟೆಗಳ ಕಾಲ ಮಾತನಾಡುತ್ತಿದ್ದರು.
ತನ್ನ ಪೋಷಕರೊಂದಿಗೆ ಮೃಣಾಲಿನಿ ಯಾವ ವಿಚಾರವನ್ನೂ ಮುಚ್ಚಿಟ್ಟಿರಲಿಲ್ಲ. ಹಾಗೆಯೇ ಒಮ್ಮೆ ಮನೆಗೆ ಬಂದಾಗ ತಾನು ಅವಿನಾಶ್‌ನನ್ನು ಇಷ್ಟಪಡುತ್ತಿರುವ ವಿಚಾರವನ್ನು ತಿಳಿಸಿದಳು. ಕುಮುದಾಗೆ ಇದರಿಂದ ಬಹಳ ಆಘಾತವಾಯಿತು. ಅವಳು ಕೆಲವುಮಟ್ಟಿಗೆ ಕೋಪದಿಂದ ಮಗಳನ್ನು ಗದರಿದಳು. ಆದರೆ ರಮಾಕಾಂತ್ ಮಾತ್ರ ತಾಳ್ಮೆ ಕಳೆದುಕೊಳ್ಳಲಿಲ್ಲ.
“ಎಷ್ಟು ದಿನಗಳಿಂದ ಅವನನ್ನು ನೀನು ಪ್ರೀತಿಸುತ್ತಿದ್ದಿ?” ಅಪ್ಪ ಕೇಳಿದರು.
“ಎರಡು ತಿಂಗಳಿಂದ. ಅಪ್ಪಾಜಿ, ನಾನು ನಿಮಗೆ ಬೇಸರ ಉಂಟು ಮಾಡಿದ್ದರೆ ಕ್ಷಮಿಸಿ. ಇನ್ನು ಕೆಲವು ದಿನಗಳಲ್ಲಿ ನಾನು ಅವನನ್ನು ನಿಮಗೆ ಭೇಟಿ ಮಾಡಿಸುತ್ತೇನೆ,” ಎಂದು ಎಲ್ಲವನ್ನೂ ಹೇಳಿದಳು ಮೃಣಾಲಿನಿ.
“ಆಗಲಿ. ಆದರೆ, ಇದನ್ನೇ ಮುಂದಿಟ್ಟುಕೊಂಡು ನಿನ್ನ ಸ್ಟಡೀಸ್‌ನ್ನು ಕೈಬಿಡಬೇಡ. ಹಾಂ! ನಾನು ಅವನನ್ನು ಆದಷ್ಟು ಶೀಘ್ರವಾಗಿ ಸಂಧಿಸುತ್ತೇನೆ.” ಎಂದ ರಮಾಕಾಂತ್.
ದಿನಗಳು ಉರುಳಿದಂತೆಲ್ಲ ಅವಿನಾಶ್ ಮೃಣಾಲಿನಿಯ ನಡುವಿನ ಪ್ರೀತಿ ಗಾಢವಾಗಿ ಬೆಳೆಯತೊಡಗಿತು. ಇಷ್ಟರಲ್ಲಿ ಅವಿನಾಶ್ ತನ್ನ ಪ್ರಿಯತಮೆ ಮೃಣಾಲಿನಿಯನ್ನು ಸಾಕಷ್ಟು ಬದಲಾಯಿಸಿದ್ದ. ಮಾತು, ನಡತೆ, ಅಲಂಕಾರ, ಉಡುಪುಗಳ ಆಯ್ಕೆ ಎಲ್ಲ ವಿಚಾರಗಳಲ್ಲಿಯೂ ಅವಿನಾಶ್ ಹೇಳಿದಂತೆಯೇ ಅವನ ಇಚ್ಛೆಯಂತೆ ಮೃಣಾಲಿನಿ ಬದಲಾಗಿದ್ದಳು. ಈ ಬದಲಾವಣೆ ಅವಳ ಪೋಷಕರಿಗೂ ದಂಗು ಬಡಿಸಿತ್ತು.
ಒಮ್ಮೆ ಅವಿನಾಶ್ ಮೃಣಾಲಿನಿಯನ್ನು, “ನಿನ್ನ ಪೋಷಕರು ಅದು ಹೇಗೆ ಇಷ್ಟೊಂದು ಸುಲಭದಲ್ಲಿ ನನ್ನ ನಿನ್ನ ಪ್ರೀತಿಯನ್ನು ಒಪ್ಪಿಕೊಂಡರು?” ಎಂದು ಕೇಳಿದ.
“ನನ್ನ ಪೋಷಕರಿಗೆ ನನ್ನ ಮೇಲೆ ಅಪಾರವಾದ ನಂಬಿಕೆ ಇದೆ. ನನ್ನ ಸಂತೋಷವೇ ಅವರಿಗೆ ಮುಖ್ಯ. ಹೀಗಾಗಿ ನಾನು ಏನು ಕೇಳಿದರೂ ಇಲ್ಲವೆನ್ನಲಾರರು,” ಎಂದಳು.
ಆದರೆ ಕುಮುದಾ, “ನೀನು ಕಾಲೇಜಿಗೆ ಹೋಗುವುದು ಓದುವುದಕ್ಕೇ ಹೊರತು ಸುತ್ತುವುದಕ್ಕಲ್ಲ. ನಿನ್ನ ಸ್ಟಡೀಸ್‌ನ ಗತಿ ಏನು? ನೀನಿಷ್ಟು ಬದಲಾಗಿದ್ದಿ ತಿಳಿದಿದೆಯಾ? ನಿನ್ನ ಅಪ್ಪ ನಿನ್ನ ಕುರಿತು ಎಷ್ಟು ಕಾಳಜಿ ವಹಿಸುತ್ತಾರೆಂದು ನಿನಗೆ ಗೊತ್ತಾ?” ಮೃಣಾಲಿನಿಯನ್ನು ಗದರಿಕೊಳ್ಳುತ್ತಲೇ ಇದ್ದಳು,
ಡಾ. ರಮಾಕಾಂತ್ ಮಾತ್ರ, “ಇರಲಿ ಬಿಡು, ಮುಂದಿನ ಎಗ್ಸಾಮ್ ಗಳಲ್ಲಿ ಒಳ್ಳೆಯ ಮಾರ್ಕ್ಸ್ ತೆಗೆದುಕೊಳ್ಳುತ್ತಾಳೆ. ಇದು ಕಷ್ಟಾಗಿತ್ತು ಎಂದು ಕಾಣುತ್ತದೆ,” ಎಂದು ಸಮಾಧಾನಪಡಿಸುತ್ತಿದ್ದ.
ಮೃಣಾಲಿನಿಗೆ ಮಾತುಗಳೇ ಹೊರಡಲಿಲ್ಲ. ಅವಳಿಗೆ ಅತ್ತ ಅವಿನಾಶ್‌ನನ್ನು ಬಿಡಲೂ ಆಗದೆ, ಇತ್ತ ತಂದೆಯನ್ನು ಒಪ್ಪಿಸಲೂ ಆಗದೆ ಕಷ್ಟವಾಗಿತ್ತು. ಸಮಯ ಸರಿಯಿತು. ಅವಿನಾಶ್ ಪದವಿ ಶಿಕ್ಷಣ ಪೂರೈಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ನಿರ್ಧರಿಸಿದ. ಅದಕ್ಕೂ ಮೊದಲು ಮೃಣಾಲಿನಿಗೆ, “ನಾನು ವಿದೇಶಕ್ಕೆ ಹೋಗುತ್ತಿದ್ದೇನೆ. ನೀನು ನನ್ನ ತಂದೆತಾಯಿಗೆ ಇಷ್ಟವಾಗಂತೆ ಸಾಂಪ್ರದಾಯಿಕ ಉಡುಗೆ ಧರಿಸಬೇಕು. ಇಷ್ಟು ದಿನಗಳಂತೆ ಹುಡುಗಾಟವಿಲ್ಲದೆ ಗಂಭೀರವಾಗಿರಬೇಕು. ಮುಖ್ಯವಾದ ವಿಚಾರ, ನಮ್ಮ ಮದುವೆಯ ಬಳಿಕ ನೀನು ಕೆಲಸಕ್ಕೆ ಹೋಗಬೇಕಾಗಿಲ್ಲ, ಮನೆಯಲ್ಲಿದ್ದು ಅಡುಗೆ ಮಾಡಿಕೊಂಡಿದ್ದರೆ ಸಾಕು, ನಮ್ಮ ತಂದೆತಾಯಿಗೆ ಸಂಪ್ರದಾಯಸ್ಥ ಹೆಣ್ಣುಮಗಳೇ ಸೊಸೆಯಾಗಬೇಕೆಂದು ಆಸೆ. ನೀನು ಅವರು ಇಷ್ಟಪಡುವಂತೆ ಇರಬೇಕು,” ಎಂದು ಹೇಳಿದ.
ಇದನ್ನೆಲ್ಲಾ ಕೇಳಿದ ಮೃಣಾಲಿನಿ ಭೂಮಿಗಿಳಿದು ಹೋದಳು. ಡಾ. ರಮಾಕಾಂತ್ ಮಗಳ ಶಿಕ್ಷಣಕ್ಕಾಗಿ ಸಾಲ ಮಾಡಿದ್ದರು. ಆದರೆ ಮದುವೆಯಾದ ಬಳಿಕ ಕೆಲಸಕ್ಕೆ ಹೋಗುವಂತಿಲ್ಲ…..!? ಅವಳು ಏನೇನೂ ಪ್ರತಿಕ್ರಿಯಿಸದೇ ನೇರವಾಗಿ ಮನೆಗೆ ಹೋಗಬೇಕೆಂದು ನಿರ್ಧರಿಸಿ ಹೊರಟುಹೋದಳು. ಮನೆಗೆ ಬಂದವಳೇ ತನ್ನ ಕೋಣೆಗೆ ಹೋಗಿ ಅಳತೊಡಗಿದಳು. ತಂದೆಯನ್ನು ನೋಡಬೇಕೆಂದೆನಿಸಿ ತಕ್ಷಣ ಊರಿಗೆ ಪಯಣಿಸಿದಳು. ಮನೆಗೆ ಬಂದರೂ ಸಹ ಆ ದಿನವೆಲ್ಲ ಮಂಕಾಗಿದ್ದಳು. ತಂದೆತಾಯಿ ಕೂಡ ಮಗಳ ಮುಖದಲ್ಲಿ ಬೇಸರ ಕಂಡಿದ್ದರು. ಆದರೂ ಅವರಿಬ್ಬರೂ ಏಕೆಂದು ಕೇಳಲಿಲ್ಲ. ಆ ದಿನವೆಲ್ಲ ಅವಳು ರೂಮಿನಲ್ಲೇ ಕುಳಿತು ಅತ್ತು ಅತ್ತು ಮನಸ್ಸು ಹಗುರ ಮಾಡಿಕೊಂಡಳು.
ಮರುದಿನ ಬೆಳಗ್ಗೆ ಹೊತ್ತಿಗೆ ಅವಳು ಒಂದು ನಿರ್ಧಾರಕ್ಕೆ ಬಂದಿದ್ದಳು. `ತಾನು ಓದು ಮುಂದುವರಿಸಬೇಕು. ಕೆಲಸಕ್ಕೆ ಸೇರಿ ತಂದೆಗೆ ಒಳ್ಳೆಯ ಹೆಸರು ತರಬೇಕು. ಇದಕ್ಕೆ ನಿನ್ನ ಒಪ್ಪಿಗೆ ಇದ್ದರೆ ಮಾತ್ರ ನಾನು ನಿನ್ನನ್ನು ಮದೆಯಾಗುತ್ತೇನೆ,’ ಎನ್ನುವ ಸಂದೇಶವುಳ್ಳ ಒಂದು ಮೇಲ್‌ನ್ನು ಅವಿನಾಶ್‌ಗೆ ಕಳುಹಿಸಿ ಪ್ರತಿಕ್ರಿಯೆಗಾಗಿ ಕಾದಳು.
ದಿನಗಳು, ವಾರಗಳು ಉರುಳಿದರೂ ಅವಿನಾಶ್‌ನಿಂದ ಯಾವ ಉತ್ತರ ಬರಲಿಲ್ಲ. ಕಡೆಗೊಮ್ಮೆ ಅವನ ಸ್ನೇಹಿತನನ್ನು ಭೇಟಿಯಾಗಿ ಅವನ ಬಗ್ಗೆ ವಿಚಾರಿಸಿದಳು. ಅವರು ವಿದೇಶಕ್ಕೆ ತೆರಳಿ ಆಗಲೇ 3 ವಾರಗಳಾದವು ಎಂಬ ಉತ್ತರ ಸಿಕ್ಕಿತು. ಆ ದಿನವೆಲ್ಲ ಮೃಣಾಲಿನಿಯ ಮನಸ್ಸು ಅಲ್ಲೋಲಕಲ್ಲೋಲವಾಗಿತ್ತು. `ಅಷ್ಟೊಂದು ಪ್ರೀತಿಸುತ್ತಿದ್ದೇನೆ ಎಂದಿದ್ದ ಅವಿನಾಶ್, ಒಂದು ಮಾತನ್ನೂ ಹೇಳದೆ ವಿದೇಶಕ್ಕೆ ಹಾರಿದ್ದಾದರೂ ಏಕೆ?’ ಅವಳಿಗೆ ಉತ್ತರವೇ ಸಿಗಲಿಲ್ಲ.
ಮೃಣಾಲಿನಿ ಆರಂಭದಿಂದ ಇಲ್ಲಿನವರೆಗಿನ ಎಲ್ಲವನ್ನೂ ತಂದೆಯ ಬಳಿ ಹೇಳಿಕೊಂಡ ನಂತರ ಅವಳ ಮನಸ್ಸು ಹಗುರವಾಯಿತು.
ನಂತರ ಡಾ. ರಮಾಕಾಂತ್ ಮಗಳ ಬಳಿ, “ಮೃಣಾಲಿನಿ, ಈ ಘಟನೆ ನಿನ್ನ ಜೀವನದಲ್ಲಿ ಒಂದು ದೊಡ್ಡ ಪಾಠ. ಈ ಚಿಕ್ಕ ಜೀವನದಲ್ಲಿ ನಾವು ಸಾರ್ಥಕವಾಗಿ ಬದುಕಬೇಕು. ನನಗಾಗಲೀ ನಿನ್ನ ಅಮ್ಮನಿಗಾಗಲಿ ನೀನು ಅವಿನಾಶ್‌ನನ್ನು ಪ್ರೀತಿಸುತ್ತಿದ್ದೀ ಎಂದು ಗೊತ್ತಾದಾಗ ನಿನ್ನ ಮೇಲೆ ನಮಗೆ ಸಿಟ್ಟು ಬರಲಿಲ್ಲ, ಬದಲಾಗಿ ಸ್ವಲ್ಪ ಆತಂಕವಾಗಿತ್ತು. ನೀನು ಬದಲಾದ ಬಗೆಯನ್ನು ಕಂಡು ನಾವಿಬ್ಬರೂ ಕುಸಿದುಹೋಗಿದ್ದೆವು. ನಮ್ಮ ಮಗಳು ಧೈರ್ಯಸ್ಥೆ ಮತ್ತು ಆತ್ಮಾಭಿಮಾನವುಳ್ಳವಳಾಗಿ ಇರಬೇಕೆಂದು ನಾವು ಬಯಸಿದ್ದೆವು. ಆದರೆ ಅವಿನಾಶ್‌ನನ್ನು ಪ್ರೀತಿಸಲು ಪ್ರಾರಂಭಿಸಿದ ನೀನು ಆತ್ಮಾಭಿಮಾನವನ್ನು ಬಿಟ್ಟು ಅವನು ಹೇಳಿದಂತೆಲ್ಲಾ ಬದಲಾದಿ. ಇದರಿಂದ ನಮ್ಮ ಆತಂಕ ಹೆಚ್ಚಾಯಿತು. ಆದರೆ ಈಗ ಅವನೂ ನಿನ್ನಿಂದ ದೂರಾಗಿದ್ದಾನೆ. ನೀನೂ ಅವನಿಂದ ಬೇಸರವಾಗಿ ದೂರ ಸರಿದಿರುವೆ. ಈಗ ನೀನು ಮತ್ತೆ ಮೊದಲಿನ ಮೃಣಾಲಿನಿಯಾಗಬೇಕು. ನಿನ್ನ ಓದಿನ ಕಡೆಗೆ ಮತ್ತು ಭವಿಷ್ಯದ ಕಡೆಗೆ ಗಮನ ಕೊಡು. ನೀನಂದುಕೊಂಡ ಗುರಿ ಸಾಧಿಸು. ಆಗ ಎಲ್ಲ ಒಳಿತಾಗುತ್ತದೆ,” ಎಂದರು.
“ಹೌದು ಅಪ್ಪಾಜಿ. ನಾನು ಹಾಗೆಯೇ ಮಾಡುತ್ತೇನೆ. ನಿಮ್ಮ ಮುದ್ದಿನ ಮಗಳು ಹಾಗೆಯೇ ಮಾಡುತ್ತಾಳೆ,” ಎಂದಳು.