ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಸುಮಾರು 42 ಪ್ರಯಾಣಿಕರು ಮೃತಪಟ್ಟಿದ್ದಾರೆ ಮುಂದು ಮೂಲಗಳು ತಿಳಿಸಿವೆ. ನವೆಂಬರ್ 17ರ ಮುಂಜಾನೆ 1:30ರ ಸುಮಾರಿಗೆ ಮುಫ್ರಿಹತ್‌ನಲ್ಲಿ ಈ ಭೀಕರ ಅಪಘಾತ ನಡೆದಿದೆ.
ಮೃತ ಭಾರತೀಯರ ಪೈಕಿ ಬಹುತೇಕರು ಹೈದರಾಬಾದ್ ಮೂಲದವರು ಎಂದು ತಿಳಿದು ಬಂದಿದೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಅಪಘಾತ ನಡೆದ ಸ್ಥಳ ಮದೀನಾದಿಂದ ಸುಮಾರು 160 ಕಿ.ಮೀ. ದೂರದಲ್ಲಿದೆ.
ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ತೆಲಂಗಾಣ ಸರ್ಕಾರ ತಿಳಿಸಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುವಂತೆ ಸೂಚಿಸಿದ್ದಾರೆ ಎಂದು ರಾಜ್ಯ ಸರ್ಕಾರದ ಮೂಲಗಳು ದೃಢಪಡಿಸಿವೆ.
ತೆಲಂಗಾಣ ಸರ್ಕಾರ ಕಂಟ್ರೋಲ್ ರೂಂ ತೆರೆದಿದ್ದು, ಸಂತ್ರಸ್ತ ಕುಟುಂಬದೊಂದಿಗೆ ಸಮನ್ವಯ ಸಾಧಿಸಲು ಯತ್ನಿಸುತ್ತಿದೆ. ಕಂಟ್ರೋಲ್ ರೂಂ ನಂಬರ್: +91 79979 59754 ಮತ್ತು +91 99129 19545 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
"ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದಾರೆ" ಎಂದು ತೆಲಂಗಾಣ ಸಿಎಂಒ ಹೇಳಿಕೆಯಲ್ಲಿ ತಿಳಿಸಿದೆ.
"ಮುಖ್ಯಮಂತ್ರಿ ತಕ್ಷಣವೇ ಪೂರ್ಣ ವಿವರಗಳನ್ನು ಪರಿಶೀಲಿಸುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಡಿಜಿಪಿಗೆ ಆದೇಶ ಹೊರಡಿಸಿದ್ದಾರೆ. ಮೃತರಲ್ಲಿ ತೆಲಂಗಾಣದವರು ಎಷ್ಟು ಜನರಿದ್ದಾರೆ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ಸೌದಿ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಮಾತನಾಡಲು ಅವರು ಸಲಹೆ ನೀಡಿದ್ದಾರೆ" ಎಂದು ಎಂದು ಸಿಎಂಒ ತಿಳಿಸಿದೆ.
ಹೈದರಾಬಾದ್ ಸಂಸದ ಅಸಾವುದ್ದೀನ್ ಓವೈಸಿ ಮಾತನಾಡಿ, ʼʼಭಾರತೀಯ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸೌದಿ ಅರೇಬಿಯಾದಲ್ಲಿ ಅಪಘಾತಕ್ಕೀಡಾಗಿದೆ. ಮೆಕ್ಕಾದಿಂದ ಮದೀನಾಕ್ಕೆ ಪ್ರಯಾಣಿಸುತ್ತಿದ್ದ ತೆಲಂಗಾಣದ 42 ಹಜ್ ಯಾತ್ರಿಕರು ಬೆಂಕಿಗೆ ಆಹುತಿಯಾದ ಬಸ್ಸಿನಲ್ಲಿದ್ದರು. ನಾನು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥ (ಡಿಸಿಎಂ) ಅಬು ಮಾಥೇನ್ ಜಾರ್ಜ್ ಅವರೊಂದಿಗೆ ಮಾತನಾಡಿದ್ದೇನೆ. ಈ ಬಗ್ಗೆ ಅವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಾನು ಹೈದರಾಬಾದ್ ಮೂಲದ ಎರಡು ಪ್ರಯಾಣ ಸಂಸ್ಥೆಗಳನ್ನು ಸಂಪರ್ಕಿಸಿದ್ದೇನೆ. ಪ್ರಯಾಣಿಕರ ವಿವರಗಳನ್ನು ರಿಯಾದ್ ರಾಯಭಾರ ಕಚೇರಿ ಮತ್ತು ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಹಂಚಿಕೊಂಡಿದ್ದೇನೆ. ಶವಗಳನ್ನು ಭಾರತಕ್ಕೆ ಮರಳಿ ತರುವಂತೆ ಮತ್ತು ಯಾರಾದರೂ ಗಾಯಗೊಂಡಿದ್ದರೆ, ಅವರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರವನ್ನು, ವಿಶೇಷವಾಗಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಲ್ಲಿ ಮನವಿ ಮಾಡಿದ್ದೇನೆʼʼ ಎಂದು ಹೇಳಿದ್ದಾರೆ.





