ಕಳೆದ 2-3 ದಿನಗಳ ಸತತ ಮನೆ ಸ್ವಚ್ಛತಾ ಆಂದೋಲನದಿಂದ ಸುರಭಿ ಬಲು ಸುಸ್ತಾಗಿ ಹೋಗಿದ್ದಳು. ಯುಗಾದಿ ವರ್ಷಾವಧಿಯ ಮೊದಲ ಹಬ್ಬವಾಗಿ ಬರುತ್ತಿರುವಾಗ ಎಷ್ಟೆಲ್ಲ ಮುತುವರ್ಜಿ ವಹಿಸಿ ಮನೆಯ ಸ್ವಚ್ಛತೆ, ಅಲಂಕಾರ ಮಾಡಿದರೂ ಸಾಲದು ಎನಿಸುತ್ತದೆ. ಎಷ್ಟು ಮಾಡಿದರೂ ಈ ಕೆಲಸಗಳು ಮುಗಿಯುತ್ತಲೂ ಇರಲಿಲ್ಲ.
ಅಂತೂ ಎಲ್ಲಾ ಸಿದ್ಧತೆಗಳೂ ಮುಗಿದು ಹಬ್ಬದ ದಿನ ಬಂದೇಬಿಟ್ಟಿತು! ಬೆಳಗಿನಿಂದ ಸಡಗರ, ಸಂಭ್ರಮದ ಓಡಾಟ. ಹಬ್ಬದ ಕೆಲಸಗಳು ಮುಗಿದು, ಭರ್ಜರಿ ಹೋಳಿಗೆ ಅಡುಗೆ ತಯಾರಿಸಿದ್ದೂ ಆಯ್ತು. ಹಬ್ಬದ ಹೆಚ್ಚುವರಿ ಕೆಲಸಗಳಲ್ಲಿ ಸಹಾಯ ಮಾಡಿ ಎಂದು ಹೇಳಿದರೆ ಮಕ್ಕಳಾದ ಶೋಭಾ, ಸೂರಜ್ ಕೇಳುವವರಲ್ಲ. ಇರುವುದರಲ್ಲಿ ಶೋಭಾ ವಾಸಿ, ರಂಗೋಲಿ ಹಾಕಿ, ಅಡುಗೆ ಕೆಲಸದಲ್ಲೂ ಸಹಾಯ ಮಾಡುತ್ತಿದ್ದಳು.
ಊಟಕ್ಕೆ ಇನ್ನೂ ಸಮಯವಿತ್ತು. ಅಷ್ಟರಲ್ಲಿ ಮಕ್ಕಳು ಆಡಲು ಹೊರಟುಹೋದರು. ಸುರಭಿ ಅವರಿಬ್ಬರನ್ನೂ ಕರೆದದ್ದೇ ಬಂತು. ಆದರೆ ಅವರೇನೂ ಬರುವ ಹಾಗಿರಲಿಲ್ಲ. ಅವಳು ಗಂಡನಿಗೆ ಮಕ್ಕಳನ್ನು ಕರೆಯುವ ಕೆಲಸ ಒಪ್ಪಿಸಿದಳು.
``ಆಡಿಕೊಳ್ಳಲಿ ಬಿಡು, ಅವರಿನ್ನೂ ಮಕ್ಕಳು,'' ರಾಜೀವ್ ನಗುತ್ತಾ ಹೇಳಿದ.
``ನೀವೇ ಬಂದು ನನಗೆ ಸ್ವಲ್ಪ ಸಹಾಯ ಮಾಡಿ,'' ಎಂದಾಗ, ``ಅಬ್ಬಬ್ಬಾ! ಅಡುಗೆಮನೆ ಸಹಾಯಕ್ಕೆ ಮಾತ್ರ ಎಂದೂ ನನ್ನನ್ನು ಕರೆಯಬೇಡ. ಏನೇನು ಸಾಮಗ್ರಿ ಬೇಕೋ ಎರಡಲ್ಲ ಮೂರು ಸಲ ತಂದುಕೊಡ್ತೀನಿ. ಈ ಮನೆಗೆಲಸದ ರೇಜಿಗೆ ನನಗೆ ಅಂಟಿಸಲೇಬೇಡ,'' ಎಂದು ಹೊಸ ಮೊಬೈಲ್‌ನ ಫೇಸ್ ಬುಕ್ಕಿನಲ್ಲಿ ಮುಳುಗಿಹೋದ. ಅದೂ ಬೇಸರವಾಗಲು ಟಿ.ವಿ.ಯಲ್ಲಿ ಆ್ಯಕ್ಷನ್‌ಚಿತ್ರ ವೀಕ್ಷಿಸತೊಡಗಿದ.
ಇದನ್ನೆಲ್ಲ ಗಮನಿಸುತ್ತಿದ್ದ ಸುರಭಿಗೆ ರೇಗಿಹೋಯಿತು. ತಾನು ಬೆಳಗ್ಗಿನಿಂದ ಇಷ್ಟೆಲ್ಲ ಕಷ್ಟಪಟ್ಟು ಮಾಡುತ್ತಿರುವುದು ಯಾರಿಗಾಗಿ? 2-3 ದಿನಗಳ ಕ್ಲೀನಿಂಗ್ ಕೆಲಸ, ಬೆಳಗ್ಗಿನಿಂದ ಮಕ್ಕಳಿಗೆ ಎಣ್ಣೆ ಸ್ನಾನ, ಪೂಜೆ ಪುನಸ್ಕಾರ, ಹಬ್ಬದಡುಗೆ..... ಎಲ್ಲ ಸುಲಭವಾಗಿ ಮುಗಿದುಹೋಗುವುದೇ? ಅವಳು ಎದ್ದು ಬಂದು ಟಿ.ವಿ. ಆಫ್ ಮಾಡಿ, ಅವನ ಕೈಯಿಂದ ರಿಮೋಟ್ ಪಡೆದುಕೊಂಡಳು.
``ನೀವು ನನಗೆ ಅಡುಗೆಮನೆಯಲ್ಲಿ ಸಹಾಯ ಮಾಡಲಿ ಎಂದು ಕರೆಯಲಿಲ್ಲ. ಹಬ್ಬದ ದಿನ ಹಾಯಾಗಿ ನನ್ನೊಂದಿಗೆ ನಗುನಗುತ್ತಾ 4 ಮಾತನಾಡಬೇಡೀ? ಆ ಮಕ್ಕಳು ಏನು ಮಾಡುತ್ತಿದ್ದಾರೆ ಎತ್ತ ಎಂದು ನೋಡಬೇಡೀ? ಸದಾ ನೀವಾಯ್ತು ನಿಮ್ಮ ಟಿ.ವಿ.ಯ ಕ್ರಿಕೆಟ್ ಮ್ಯಾಚ್ ಆಯ್ತು.''
``ಸುರಭಿ.... ಓಹ್, ನೀನಂತೂ ನೆಮ್ಮದಿಯಾಗಿ ನನ್ನನ್ನು ಮ್ಯಾಚ್ ನೋಡಲು ಬಿಡುವುದೇ ಇಲ್ಲ.... ಈಗೇನು? ನಡಿ, ಹಾಯಾಗಿ ಬಾಲ್ಕನಿಯಲ್ಲಿ ಕೂರೋಣ,'' ಎನ್ನುತ್ತಾ ಇಬ್ಬರಿಗೂ ಬೆತ್ತದ ಕುರ್ಚಿಗಳನ್ನು ತೆಗೆದುಕೊಂಡುಹೋಗಿ ಬಾಲ್ಕನಿಯಲ್ಲಿ ಹಾಕಿದ ರಾಜೀವ್.
``ನೋಡಿ, ಬೇರೆಯವರು ಮನೆ ಮುಂದೆ ಕಾಟಾಚಾರಕ್ಕೆ ಎರಡು ಗೆರೆ ಎಳೆದಿದ್ದಾರೆ. ನಮ್ಮ ಅಂಗಳದ ರಂಗೋಲಿ, ತಳಿರು ತೋರಣ, ಅಲಂಕಾರ ಚೆನ್ನಾಗಿದೆ ಅನಿಸುತ್ತಿಲ್ಲವೇ? ನನ್ನ ಈ ಹೊಸ ಸೀರೆ ಬಗ್ಗೆ ನೀವು ಏನೂ ಹೇಳಲೇ ಇಲ್ಲ,'' ಎಂದು ಬೇಕೆಂದೇ ಸೀರೆಯನ್ನು ಮತ್ತೊಮ್ಮೆ ಸರಿಪಡಿಸಿಕೊಂಡಳು.
``ಹೌದು..... ಹೌದು, ನೀನು ಬಿಡಿಸಿರುವ ಬಣ್ಣದ ರಂಗೋಲಿ ಅದ್ಭುತವಾಗಿದೆ. ನಿನ್ನ ಸೀರೇನೂ ಬೊಂಬಾಟ್ ಆಗಿದೆ. ಬೇವು ಬೆಲ್ಲ ಹಂಚಿದ್ದಾಯ್ತು, ಅಮ್ಮಾವರ ಹಾಗೇ `ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ....' ಹಾಡು ಹೇಳಿಬಿಟ್ಟರೆ ನಾನು ಕೇಳಿ ಧನ್ಯನಾಗ್ತೀನಿ.''