ಬೋಲ್ಡ್ ಅಂಡ್ ಬ್ಯೂಟಿಫುಲ್
ಕನ್ನಡದ ಹುಡುಗಿಯರು ಅಂದಾಕ್ಷಣ ಮೂಗು ಮುರಿಯುತ್ತಿದ್ದ ಕಾಲ ಒಂದಿತ್ತು. ಆದರೀಗ ಎಲ್ಲ ಉಲ್ಟಾ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಕನ್ನಡದ ಹುಡುಗಿಯರದೇ ದರ್ಬಾರು. ಸುಕೃತಾ ವಾಗ್ಲೆ ದಿಟ್ಟ ಬೆಡಗಿ, `ಜಟ್ಟಿ’ ಚಿತ್ರದಲ್ಲಿ ಯಾರೂ ಮಾಡದಂಥ ಪಾತ್ರ ನಿರ್ವಹಿಸಿ ಹೊಗಳಿಸಿಕೊಂಡಿದ್ದಳು. ಸುಕೃತಾಳಿಗೆ ಚಾಲೆಂಜಿಂಗ್ ಪಾತ್ರಗಳನ್ನು ಒಪ್ಪಿಕೊಳ್ಳುದರಲ್ಲಿ ಹೆಚ್ಚು ಖುಷಿಯಂತೆ. `ಕಿರಗೂರಿನ ಗಯ್ಯಾಳಿಗಳು’ ಚಿತ್ರದಲ್ಲಿ ಸುಕೃತಾ ಕಾಳಿ ಪಾತ್ರ ವಹಿಸಿ ಹಳ್ಳಿ ಹುಡುಗಿಯಾಗಿಯೂ ಬೋಲ್ಡಾಗಿ ನಟಿಸಿದ್ದಳು. ಎಲ್ಲರ ಪ್ರಶಂಸೆಗೆ ಒಳಗಾಗಿರುವ ಸುಕೃತಾಳಿಗೆ ಈ ಚಿತ್ರದ ನಂತರ ಸಾಕಷ್ಟು ಬೋಲ್ಡ್ ಪಾತ್ರಗಳು ಹರಿದು ಬಂದರೂ ಆಶ್ಚರ್ಯವಿಲ್ಲ.
ರೇ….. ಲಕ್ಕಿಯಾಯ್ತು
ಕೂರ್ಗಿ ಹುಡುಗಿ ಹರ್ಷಿಕಾ ಪೂಣಚ್ಚ ತನ್ನ ಪ್ರತಿಭೆಯನ್ನು, ಲುಕ್‌ನ್ನು ಬಂಡವಾಳವಾಗಿಟ್ಟುಕೊಂಡು ಬಂದಂಥ ಬೆಡಗಿ. ಯಾವುದೇ ಪಾತ್ರ ಕೊಡಲಿ ಅಚ್ಚುಕಟ್ಟಾಗಿ ನಿರ್ವಹಿಸುವ ಹರ್ಷಿಕಾ ಸೂಪರ್ ಮಾಡೆಲ್ ಕೂಡಾ ಆಗಿದ್ದಾಳೆ. `ತಮಸ್ಸು’ ಚಿತ್ರದಲ್ಲಿ ತಂಗಿ ಪಾತ್ರ ವಹಿಸಿದ್ದ ಹರ್ಷಿಕಾಳಿಗೆ ರಾಜ್ಯ ಪ್ರಶಸ್ತಿ ಕೂಡಾ ಸಿಕ್ಕಿತ್ತು. ಸಿನಿಮಾಗಳಲ್ಲಿ ನಟಿಸಿಕೊಂಡೇ ವಿದ್ಯಾಭ್ಯಾಸದತ್ತ ಗಮನಹರಿಸುತ್ತಿದ್ದ ಹರ್ಷಿಕಾ ಅಲ್ಲಿಯೂ ಸೈ ಎನಿಸಿಕೊಂಡಳು. ಇತ್ತೀಚೆಗೆ ತನ್ನನ್ನು ತಾನು ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಹರ್ಷಿಕಾಳಿಗೆ `ರೇ…’ ಚಿತ್ರ ಅದೃಷ್ಟ ತಂದುಕೊಟ್ಟಿತು. ಸುನೀಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಹರ್ಷಿಕಾ ಪ್ರತಿಭೆ ಇನ್ನಷ್ಟು ಬೆಳಕಿಗೆ ಬಂದಿತು. ಈಗ ಹರ್ಷಿಕಾ ಮತ್ತೆ ಬಿಝಿಯಾಗಿದ್ದಾಳೆ.
ಟ್ವಿಸ್ಟ್ ಕೊಡೋ ಕಾರು
ಸಿನಿಮಾದಲ್ಲಿ ಎಲ್ಲ ಪಾತ್ರಗಳೂ ಪ್ರಮುಖವಾಗಿರುತ್ತವೆ. ಪ್ರಾಣಿಗಳು, ವಸ್ತುಗಳು, ಹೀಗೆ ಒಂದಲ್ಲ ಒಂದು ರೀತಿ ಬಳಕೆಯಾಗುತ್ತವೆ. ಆದರೆ ನಾಲ್ಕು ಚಕ್ರದ ಕಾರು ನಾಯಕ ನಾಯಕಿಯ ಜೊತೆ ಜೊತೆಯಲ್ಲೇ ಪಾತ್ರವಾಗಿರುವುದು ಬಹಳ ವಿರಳ. ಹೀಗೊಂದು ಕಾರು ಬಳಕೆಯಾಗಿರೋದು `ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಚಿತ್ರದಲ್ಲಿ. ಕೆಂಪು ಬಣ್ಣದ ಕಾರು ಇಡೀ ಚಿತ್ರದ ತುಂಬಾ ಕಾಣಿಸಿಕೊಂಡಿರೋದು ವಿಶೇಷ. ಕಾರುಗಳನ್ನು ಕಂಡರೆ ಹುಡುಗರಿಗೆ ಎಲ್ಲಿಲ್ಲದ ಕ್ರೇಝ್. ಮಾತನಾಡದ ಈ ಕಾರು ಏನೇನು ಮಾಡುತ್ತದೆ ಎಂಬುದನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಹೆಣೆದುಕೊಟ್ಟಿದ್ದಾರೆ. ಕಾರಿಗೆ ತಕ್ಕಂತೆ ಚಿನಕುರಳಿಯಂತೆ ಮಾತನಾಡುವ ಚಿಕ್ಕ ಹುಡುಗ ಹೇಮಂತ್ ಕಾರಿನಂತೆ ವೇಗವಾಗಿ ಸಾಗುತ್ತಾನೆ. ಈ ಬಾಲನಟನಿಗೆ ಬೇಡಿಕೆ ಹೆಚ್ಚಾದರೂ ಆಶ್ಚರ್ಯವಿಲ್ಲ.
ಕಲೆಗೆ ಬೆಲೆ ಕೊಡಿ
ತುಪ್ಪದ ಹುಡುಗಿ ಎಂದೇ ಜನಪ್ರಿಯವಾಗಿರುವ ರಾಗಿಣಿ ನೃತ್ಯದಲ್ಲಿ ಜೊತೆಗಾತಿಯಾಗಿ ನರ್ತಿಸಿದ್ದ ಶೃತಿ ಹರಿಹರನ್‌ಳನ್ನು ಗುರುತಿಸಿದ್ದು ಪವನ್ ಕುಮಾರ್. `ಲೂಸಿಯಾ’ ನಂತರ ಶೃತಿಕಾಳ ಬದುಕೇ ಬದಲಾಯ್ತು. ಉತ್ತಮ ನೃತ್ಯಪಟು, ಕಲಾವಿದೆ, ವಿದ್ಯಾವಂತೆ ಆಗಿರುವ ಶೃತಿ ಒಳ್ಳೆ ಪಾತ್ರಗಳಿಗಾಗಿ ಸದಾ ಹುಡುಕಾಡುತ್ತಿರುತ್ತಾಳೆ. `ರಾಟೆ’ ಚಿತ್ರದಲ್ಲಿ ಸಹಜ ಅಭಿನಯ ನೀಡಿದ್ದ ಶೃತಿ ಈಗ `ಮಾದವ ಮತ್ತು ಮಾನಸಿ’ ಚಿತ್ರದಲ್ಲೂ ಗಮನಾರ್ಹ ಪಾತ್ರ ವಹಿಸುತ್ತಿದ್ದಾಳೆ ಕಲೆಗೆ ಬೆಲೆ ಸಿಗಬೇಕು ಎಂದು ಬಯಸುವ ಶೃತಿ ನಟಿಯಾಗುವುದರ ಜೊತೆ ಒಳ್ಳೆಯ ನೃತ್ಯ ಸಂಯೋಜಕಿಯಾಗಿಯೂ ಹೆಸರು ಮಾಡಬೇಕೆಂದು ಬಯಸುತ್ತಾಳೆ. ಶರಣ್ ಜೋಡಿಯಾಗಿ `ಜೈ ಮಾರುತಿ 800′ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ.
ವಿಭಿನ್ನತೆ ಬಯಸೋ ತಾರೆ
ಹರಿಪ್ರಿಯಾ ಇದೀಗ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ತಾರೆಗಳಲ್ಲಿ ಒಬ್ಬಳಾಗಿದ್ದಾಳೆ. `ಉಗ್ರಂ’ ನಂತರ ಅದೃಷ್ಟ ಬದಲಾಯಿಸಿತು. ಒಳ್ಳೆ ಪ್ರಾಜೆಕ್ಟ್ ಗಳು ಆಕೆಯ ಪಾಲಾಯಿತು. `ರಿಕ್ಕಿ’ ಚಿತ್ರದಲ್ಲಿನ ಅಭಿನಯಕ್ಕೆ ಹೊಗಳಿಕೆ ಮಾತುಗಳೂ ಸಿಕ್ಕಿದ. ವಿಭಿನ್ನವಾದ ಪಾತ್ರಗಳಲ್ಲಿ ತನ್ನನ್ನು ತಾನು ಕಾಣಿಸಿಕೊಳ್ಳಲು ಇಷ್ಟಪಡುವ ಹರಿಪ್ರಿಯಾಳಿಗೆ ಅಂಥದ್ದೇ ಪಾತ್ರಗಳು ಸಿಗುತ್ತಿರುವುದು ಅದೃಷ್ಟ. “ನಾನು ಮೊದಲು ನನ್ನ ವೃತ್ತಿಯನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಹಾಗಲ್ಲ, ತುಂಬಾನೆ ಸೀರಿಯಸ್ಸಾಗಿ ಕೆಲಸ ಮಾಡುತ್ತಿದ್ದೇನೆ,” ಎನ್ನುವ ಹರಿಪ್ರಿಯಾ `ನೀರ್ ದೋಸೆ’ ಚಿತ್ರದಲ್ಲಿ ಬೋಲ್ಡಾಗಿ ಕ್ಯಾಮೆರಾ ಎದುರಿಸಿದ್ದಾಳೆ. ಈ ಚಿತ್ರದಲ್ಲಿನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದ ಹರಿಪ್ರಿಯಾ ಸಿಗರೇಟ್ ಕೂಡಾ ಸೇದಿದ್ದಾಳೆ. ರಮ್ಯಾ ಪಾಲಿಗೆ ಹೋಗಿದ್ದ ಈ ಪಾತ್ರ ಆನಂತರ ಹರಿಪ್ರಿಯಾ ಪಾಲಿಗೆ ಬಂದದ್ದು ಕುತೂಹಲಕ್ಕೆ ಇನ್ನಷ್ಟು ಹಾದಿ ಮಾಡಿಕೊಟ್ಟಿದೆ.
ಗಣಿಗಾಗಿ ಚಮಕ್
ಸಿಂಪಲ್ ಸುನಿ…. ಲವ್ ಸ್ಟೋರಿಗಳಿಗೆ ಬ್ರಾಂಡ್ ಆದಂತಹ ನಿರ್ದೇಶಕ ಎಂದೇ ಎಲ್ಲರೂ ಭಾವಿಸಿರುವಾಗ ಅವರೀಗ ಹೊಸ ಸಬ್ಜೆಕ್ಟ್ ನತ್ತ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಹೇಳಿರುವಂತೆ ಶಿವರಾಜ್ ಕುಮಾರ್ ಅವರಿಗಾಗಿ `ಮನಮೋಹಕ’ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿ ವಿಶೇಷವಾಗಿ ಫೋಟೋ ಶೂಟ್ ಮಾಡಿ ಮಿಂಚಿದ್ದರು. ಸುನಿ ಈ ಚಿತ್ರದ ಜೊತೆಯಲ್ಲೇ ಗೋಲ್ಡನ್ ಸ್ಟಾರ್ ಗಣೇಶ್‌ಗಾಗಿ `ಚಮಕ್’ ಅಂತ ಚಿತ್ರ ಮಾಡಿದ್ದಾರೆ. ಟೈಟಲ್‌ಗಳು ಆಕರ್ಷಕವಾಗಿವೆ. ಚಮಕ್ ಕೊಡುವಂಥ ಡೈಲಾಗ್ಸ್ ಗಳು ಚಿತ್ರದಲ್ಲೂ ಇರಬಹುದೇ….? ಡೈಲಾಗ್ ಹೊಡೆಯೋದ್ರಲ್ಲಿ ಗಣೇಶ್ ಎಕ್ಸ್ ಪರ್ಟ್ ಆಗಿರೋದ್ರಿಂದ ಅವರಿಗಾಗಿ ಸುನಿ ಎಂಥ ಡೈಲಾಗ್ಸ್ ಬರೆಯುತ್ತಾರೋ ಕಾದು ನೋಡಬೇಕು.
ಲಂಡನ್ನಲ್ಲಿ ಸನ್ಮಾನ
ನಮ್ಮ ಕನ್ನಡ ಚಿತ್ರಗಳು ಇದೀಗ ಏಳು ಸಮುದ್ರ ದಾಟಿ ಮುನ್ನುಗ್ಗುತ್ತಿವೆ.. ಅನಿವಾಸಿ ಭಾರತೀಯರು ಕನ್ನಡ ಚಿತ್ರಗಳನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ನಟ ಶಿವರಾಜ್ ಕುಮಾರ್ ಅವರಿಗೆ ಲಂಡನ್ನಿನ ಭಾರತೀಯರು ಸನ್ಮಾನ ಸಮಾರಂಭ ಏರ್ಪಡಿಸಿದ್ದಾರೆ. `ನಿಜಕ್ಕೂ ನನಗೆ ಹೆಮ್ಮೆ ಆಗ್ತಿದೆ. `ಶಿವಲಿಂಗ’ ಚಿತ್ರ ಅಮೆರಿಕಾ, ಲಂಡನ್‌ನಲ್ಲಿ ಬಿಡುಗಡೆ ಆಗುತ್ತಿದೆ. ಒಬ್ಬ ನಟನಿಗೆ ಇದಕ್ಕಿಂತ ಇನ್ನೇನು ತಾನೇ ಬೇಕು? ನನ್ನೊಬ್ಬನದೇ ಅಲ್ಲ, ಎಲ್ಲ ಕಲಾವಿದರ ಚಿತ್ರಗಳಿಗೂ ಫಾರಿನ್‌ನಲ್ಲಿ ಭಾರಿ ಬೇಡಿಕೆ ಹುಟ್ಟಿಕೊಂಡಿದೆ. ಅವರುಗಳ ಅಭಿಮಾನ ಕಂಡು ನಾನಂತೂ ತುಂಬಾನೆ ಖುಷಿಪಡುತ್ತಿದ್ದೇನೆ. ಲಂಡನ್‌ನಲ್ಲಿ ನಡೆಯುವ ಪ್ರೀಮಿಯರ್ ಶೋನಲ್ಲಿ ಶಿವಣ್ಣ ಮತ್ತು ಶಿವಲಿಂಗ ತಂಡ ಭಾಗವಹಿಸುತ್ತಿದೆ ಎಂದು ಹೇಳುತ್ತಾರೆ.
ಮರಿ ಟೈಗರ್ ಗರ್ಜನೆ
ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ಸಾಕಷ್ಟು ಚಿತ್ರಗಳ ಮೂಲಕ ಲಾಂಚ್ ಆಗಿದ್ದರೂ ಯಾವುದೂ ಅವರಿಗೆ ಸಹಾಯವಾಗಲಿಲ್ಲ. ಎತ್ತರ ನಿಲುವಿನ, ಆಕರ್ಷಕ ತರುಣ ಆ್ಯಕ್ಷನ್ ಕಿಂಗ್ ಆಗಲು ಎಲ್ಲ ಅರ್ಹತೆ ಇದ್ದರೂ ವಿನೋದ್‌ಗೆ ತಕ್ಕನಾದ ಚಿತ್ರ ಸಿಗಬೇಕಿತ್ತು ಎನ್ನುತ್ತಿರುವಾಗಲೇ `ಟೈಸನ್’ ಚಿತ್ರ ಬಿಡುಗಡೆಯಾಯ್ತು. ಇದೇ ಅವರ ಲಾಂಚಿಂಗ್ ಸಿನಿಮಾ ಎನ್ನುವಷ್ಟು ಎಲ್ಲ ಹೊಸದಾಗಿತ್ತು. ಈ ಸಿನಿಮಾವನ್ನು ಜನ ಸ್ವೀಕರಿಸಿದ್ದಾರೆ. ಈ ಮರಿ ಟೈಗರ್‌ಗೀಗ ಡಿಮ್ಯಾಂಡೋ ಡಿಮ್ಯಾಂಡು ಎನ್ನುವಷ್ಟು ಹೊಗಳಿಕೆಗಳು ಸಂದಾಯವಾಗುತ್ತಿದೆ. `ಇದೆಲ್ಲ ನೋಡುವುದಕ್ಕೆ ನನ್ನ ತಂದೆ ಇರಬೇಕಿತ್ತು,’ ಎಂದು ಹೇಳುತ್ತಾ ವಿನೋದ್ ತಮ್ಮ ತಂದೆ ಟೈಗರ್‌ನ್ನು ಬಹಳವಾಗಿ ಮಿಸ್ ಮಾಡಿಕೊಳ್ಳುತ್ತಾರೆ.