ಇತ್ತೀಚಿನ ಮೆಟ್ರೋ ಸಂಸ್ಕೃತಿಯಿಂದಾಗಿ ಬಹಳ ಇಕ್ಕಟ್ಟಾದ ಅತೀ ಕಡಿಮೆ ಜಾಗದಲ್ಲಿ ವಾಸಿಸುವ ಅನಿವಾರ್ಯತೆ ಹಲವಾರು ಜನರಿಗಿದೆ. ಆದರೆ ಅಷ್ಟೇ ಚಿಕ್ಕದಾದ ಜಾಗದಲ್ಲಿ ತಮ್ಮದೇ ಒಂದು ಸುಂದರವಾದ ಕೈ ತೋಟ ಮಾಡುವ ಕನಸು ಕಾಣುತ್ತಾರೆ. ಹಿಂದೆ ಕೈತೋಟವೆಂದರೆ ಸಾಕಷ್ಟು ವಿಶಾಲವಾದ ಜಾಗದಲ್ಲಿ, ನಿರ್ದಿಷ್ಟ ಅಂತರದಲ್ಲಿ ಬಗೆಬಗೆಯ ಹೂ ಗಿಡಗಳನ್ನು ನೆಡುವುದು ಸಾಮಾನ್ಯವಾಗಿತ್ತು. ಆದರೆ ಕಾಲಕ್ರಮೇಣ ಮಿತಿಮೀರಿದ ಜನಸಂಖ್ಯಾ ಹೆಚ್ಚಳದಿಂದಾಗಿ ಭೂಮಿಯ ಅಭಾವ ಆರಂಭವಾಯಿತು. ದೊರಕಿರುವ ಅಷ್ಟೋ ಇಷ್ಟೋ ಜಾಗದಲ್ಲಿ ಕೈತೋಟವಾಗಿಸುವುದು ಕಷ್ಟ ಎನ್ನುವವರಿಗೆ ಈ ಹ್ಯಾಂಗಿಂಗ್‌ ಗಾರ್ಡ್‌ನ್ ವರದಾನವಾಗಿದೆ.

ಈ ಪರಿಕಲ್ಪನೆಯಲ್ಲಿ ಸಿಮೆಂಟು ಅಥವಾ ಗಾಜಿನಿಂದ ತಯಾರಿಸಲ್ಪಟ್ಟ ಕುಂಡಗಳನ್ನು ಖರೀದಿಸಿ ತಂದು ಅದರಲ್ಲಿ ವಿವಿಧ ಬಗೆಯ ಗಿಡ ನೆಡುವುದು ಈ ರೀತಿ ಕುಂಡದಲ್ಲಿ ನೇತು ಹಾಕಿ ಬೆಳೆಸುವ ಪ್ರಕ್ರಿಯೆಯನ್ನು `ಹ್ಯಾಂಗಿಂಗ್‌ ಗಾರ್ಡನ್‌’ ಎಂದು ಕರೆಯುತ್ತಾರೆ.

ಹ್ಯಾಂಗಿಂಗ್‌ ಗಾರ್ಡನ್‌ಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಯನ್ನು `ನ್ಯಾಷನಲ್ ಬ್ಯೂರೋ ಆಫ್‌ ಪ್ಲಾಂಟ್‌ ಜೆನೆಟಿಕ್ ರಿಸೋರ್ಸ್‌’ನಲ್ಲಿ ಸೀನಿಯರ್‌ ಸೈಂಟಿಸ್ಟ್ ಆಗಿರುವ ಡಾ. ಪ್ರಜ್ವಲ್ ರಂಜನ್‌ ನೀಡಿದ್ದಾರೆ.

ಹ್ಯಾಂಗಿಂಗ್‌ ಗಾರ್ಡನ್‌ ಅನ್ನೋ ಪರಿಕಲ್ಪನೆ, ಮೂಲತಃ ಬ್ಯಾಬಿಲೋನಿಯಾದಿಂದ ಬಂದಿರುವುದು. ಬ್ರಿಟಿಷರ ಮೂಲಕ ಭಾರತಕ್ಕೆ ಬಂದ ಇದು ಇಂದು ಜನಪ್ರಿಯ ತೋಟಗಾರಿಕೆ ಎಂದೆನಿಸಿದೆ. ಸಾಮಾನ್ಯವಾಗಿ ಮೆಟ್ರೋದಂತಹ ನಗರ ಪ್ರದೇಶಗಳಲ್ಲಿ ಸ್ಥಳದ ಅಭಾವ ತೀವ್ರವಾಗಿರುವುದರಿಂದ ಈ ಪರಿಕಲ್ಪನೆಯು ಕೈ ತೋಟ ಮಾಡಬಯಸುವವರಿಗೆ ವರದಾನವಾಗಿದೆ. ಅತೀ ಕಡಿಮೆ ಸ್ಥಳಾವಕಾಶದಲ್ಲಿ ಗಾರ್ಡನ್‌ ಮಾಡುವುದರ ಮೂಲಕ ತಮ್ಮ ಕನಸು ಸಾಕಾರಗೊಳಿಸಿಕೊಂಡಿದ್ದಾರೆ. ಒಂದೇ ಕುಂಡದಲ್ಲಿ ಬಿಡಿಯಾಗಿ ಅಥವಾ ಒಂದಕ್ಕಿಂತ ಹೆಚ್ಚು ಗಿಡಗಳನ್ನು ಬೆಳೆಸಿ, ಆಕರ್ಷಕ ಬಣ್ಣ ಬಣ್ಣದ ದಾರಗಳಿಂದ ತೂಗು ಹಾಕಿ ಸಂಭ್ರಮಿಸುವುದೇ ಈಗ ಹ್ಯಾಂಗಿಂಗ್‌ ಗಾರ್ಡನ್‌ನ ಹೊಸ ಟ್ರೆಂಡ್‌.

ನೀವಾಗಿ ಖುದ್ದು ಹ್ಯಾಂಗಿಂಗ್‌ ಗಾರ್ಡನ್‌ ನಿರ್ಮಿಸಬಹುದು ಇಲ್ಲಿ ನಿಮಗೆ ಸಮಯದ ಅಭಾವವಿದ್ದಲ್ಲಿ, ಮಾರುಕಟ್ಟೆಯಲ್ಲಿ ದೊರಕುವ ರೆಡಿಮೇಡ್‌ ಕುಂಡಗಳನ್ನು  ಖರೀದಿಸಿ ತಂದು ಗಾರ್ಡನ್‌ ನಿರ್ಮಿಸಬಹುದು. ಒಂದು ವೇಳೆ ನಿಮಗೆ ಸ್ವತಃ ಹ್ಯಾಂಗಿಂಗ್‌ ಗಾರ್ಡನ್ ನಿರ್ಮಿಸುವ ಬಯಕೆ, ಆಸಕ್ತಿ, ಆಲೋಚನೆಯಿದ್ದಲ್ಲಿ ಇಲ್ಲಿದೆ ನಿಮಗಾಗಿ ಒಂದಿಷ್ಟು ಪೂರಕ ಮಾಹಿತಿಗಳು.

ಆರಂಭಿಸುವ ಮುನ್ನ

ಎಲ್ಲಕ್ಕಿಂತ ಮೊದಲು ಹ್ಯಾಂಗಿಂಗ್‌ ಗಾರ್ಡನನ್ನು ಯಾವ ಜಾಗದಲ್ಲಿ ನಿರ್ಮಿಸಬೇಕು ಅನ್ನುವುದನ್ನು ನಿರ್ಧರಿಸಿ. ಅದು ಅಂಗಳ, ತೋಟ, ಬಾಲ್ಕನಿ ಅಥವಾ ಕಿಟಿಕಿಯ ಪಕ್ಕ. ನಿರ್ದಿಷ್ಟ ಜಾಗವನ್ನು ಗುರುತಿಸಿ, ದೊರಕಿರುವ ಸ್ಥಳಕ್ಕನುಗುಣವಾಗಿ ಕುಂಡಗಳನ್ನು ರಚಿಸಿ. ಕುಂಡಗಳಿಗೆ ಅನುಗುಣವಾಗಿ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಿ. ಯಾವ ಭಾಗದಲ್ಲಿ ಯಾವ ಗಿಡಗಳನ್ನು ತೂಗು ಹಾಕಿದರೆ ಉತ್ತಮ ಎನ್ನುವುದನ್ನು ನೀವೇ ನಿರ್ಧರಿಸಿ. ಉದಾಹರಣೆಗೆ ಅತಿಯಾಗಿ ಬಿಸಿಲು ಬೀಳುವ ಸ್ಥಳಗಳಲ್ಲಿ ಬೇಗನೇ ಬಾಡಿಹೋಗುವ ಅಥವಾ ಬಿಸಿಲಿನ ಅಗತ್ಯವಿಲ್ಲದಿರುವ ಗಿಡಗಳನ್ನು ಇಡಬಾರದು. ಹಾಗೇ ದೊಡ್ಡ ದೊಡ್ಡ ಗಾತ್ರದ ಕುಂಡಗಳಲ್ಲಿ  ಅತಿ ಚಿಕ್ಕ ಚಿಕ್ಕ ಗಿಡಗಳನ್ನು ತೂಗು ಹಾಕಬಾರದು. ಸೂರ್ಯರಶ್ಮಿಯ ಕೊರತೆಯಿಂದ ಅದು ಸಾಯುವ ಸಾಧ್ಯತೆ ಹೆಚ್ಚು.

ಇನ್ನು ಸುಂದರವಾದ ಹ್ಯಾಂಗಿಂಗ್‌ ಗಾರ್ಡನ್‌ಗೆ ಕುಂಡಗಳನ್ನು ತೂಗಿ ಹಾಕುವ ಬಣ್ಣದ ದಾರಗಳು ಹಾಗೂ ಅತೀ ಆಕರ್ಷಕವಾಗಿ ಕಾಣಲು ಕುಂಡಗಳಿಗೆ ಬಳಸುವ ಚಂದನೆಯ ಬಣ್ಣ ಮುಖ್ಯವಾಗಿರುತ್ತದೆ.  ಕುಂಡಗಳ ಬಣ್ಣಗಳಿಗನುಗುಣವಾಗಿ  ಗಿಡಗಳನ್ನು ಆಯ್ಕೆ ಮಾಡಿಕೊಂಡರೆ ತೋಟನ್ನು ಇನ್ನಷ್ಟು ಚಂದಗಾಣಿಸಬಹುದು.

ಸಾಮಾನ್ಯವಾಗಿ ಹ್ಯಾಂಗಿಂಗ್‌ ಗಾರ್ಡನ್‌ ಪರಿಕಲ್ಪನೆಯಲ್ಲಿ ಗಿಡಗಳನ್ನು ತೂಗುಹಾಕುವುದರಿಂದ ಚಿಕ್ಕ ಚಿಕ್ಕ ಗಿಡಗಳು, ಬಳುಕುವ ಲತೆಗಳು, ಹರಿಬಿಡುವ ಬಳ್ಳಿಗಳು ಹೆಚ್ಚು ಸೂಕ್ತವಾದ ಆಯ್ಕೆಯಾಗಿರುತ್ತದೆ. ಜೊತೆಗೆ ಎತ್ತರವಾಗಿ, ನೇರವಾಗಿ ಬೆಳೆಯುವ  ಗಿಡಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಿ. ಏಕೆಂದರೆ ಇವುಗಳು 45 ಡಿಗ್ರಿ ಆ್ಯಂಗಲ್‌ನಲ್ಲಿ ಬೆಳೆಯುವುದರಿಂದ ಅಕ್ಕಪಕ್ಕದ ಬಳ್ಳಿಗಳನ್ನು ಬಳಸಿಕೊಂಡು ಹೋಗುವುದರಿಂದ ತುಂಬಾ ಆಕರ್ಷಕವಾಗಿ ಕಾಣುತ್ತವೆ.

ಹ್ಯಾಂಗಿಂಗ್‌ ಗಾರ್ಡನ್‌ಗಾಗಿ ಆಯ್ಕೆ ಮಾಡುವ ಗಿಡಗಳಲ್ಲಿ ಫೈಂಜಾ, ಫಿಟುನೀಯ, ಬರ್ಬಿನಾ, ಗಜನೀಯ, ಡೇಸಿ, ಐಸ್‌ ಪ್ಲಾಂಟ್‌, ಸ್ವೀಟ್‌ ಅವೈಸಮ್, ಪ್ಲೆಲ್ಸ್, ಗೆವಾರಡಿಯ, ವಿಗೋನಿಯ ಹಾಗೂ ಇಂಪಕಾನ್‌ ಪ್ರಮುಖವಾದವುಗಳು. ಇನ್ನು ಕೆಲವರು ಗಿಡಮೂಲಿಕೆಗಾಗಿ ಕುಂಡಗಳಲ್ಲಿ, ತುಳಸಿ, ಲೆಮನ್‌ ಗ್ರಾಸ್‌,  ಶತವಾರಿ, ಕಾಲಮೇಘ, ದಾರುಹಳದಿ, ಪುದೀನಾ, ಗುಥಾಕುಮಾರಿ ಮುಂತಾದ ಗಿಡಗಳನ್ನು ಬೆಳೆಸಬಹುದು. ಆರೋಗ್ಯ ಹಾಗೂ ಸೌಂದರ್ಯ ಎರಡರ ದೃಷ್ಟಿಯಲ್ಲೂ ಕೂಡ ಆಕರ್ಷಕವೆನಿಸುತ್ತದೆ. ಹಾಗೇ ಅಲಂಕಾರಿಕವಾದ, ಬಣ್ಣಬಣ್ಣದ ವೆರೈಟಿಯ ಗಿಡಗಳು ಕೂಡ ದೊರಕುತ್ತವೆ. ಅವುಗಳಲ್ಲಿ ಫರ್ನ್‌, ಹೈಡ್ರಾ, ಮನಿಪ್ಲಾಂಟ್‌, ಹೋಯಾ, ಡಸ್ಟಿ ಮಿಲ್ಲರ್‌ನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.

ಹ್ಯಾಂಗಿಂಗ್‌ ಗಾರ್ಡನ್‌ ನಿರ್ಮಾಣಕ್ಕಾಗಿ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ಸುಂದರವಾದ ಬಣ್ಣಬಣ್ಣದ ಕುಂಡಗಳು ದೊರೆಯುತ್ತವೆ. ಅವುಗಳನ್ನು ಪ್ಲಾಸ್ಟಿಕ್‌, ಜೇಡಿಮಣ್ಣು, ಸೆರಾಮಿಕ್‌, ಮರಳು, ಕೇನ್‌, ಮೆಟಲ್ ಇತ್ಯಾದಿಗಳಿಂದ ನಿರ್ಮಿಸಿರುವುದು ವಿಶೇಷ.

ಇತ್ತೀಚೆಗಂತೂ ಸೀಸದಿಂದ ಮಾಡಿದ ಸಾಮಗ್ರಿಗಳಾದ ಬಾಟಲ್, ಬೋಲ್‌, ಪ್ಲೇಟ್‌, ಸಾಸರ್‌ ಅಂತಹ ಚಿಕ್ಕ ಚಿಕ್ಕ ಕುಂಡಗಳಲ್ಲಿ  ಗಿಡಗಳನ್ನು ನೇತು ಹಾಕುವುದು ವಿಶೇಷವೆನಿಸಿದೆ. ಅಲ್ಲದೆ ಹಿತ್ತಾಳೆ ಹಾಗೂ ಟೆರ್ರಾಕೋಟಾಗಳಲ್ಲಿ ನಿರ್ಮಿಸಿದ ಕುಂಡಗಳಲ್ಲಿ ಗಿಡಗಳನ್ನು ಬೆಳೆಸುವುದು ಕೂಡ ಫ್ಯಾಷನ್‌ ಎನಿಸಿದೆ. ಆದರೆ ಸುಂದರವಾಗಿ, ವಿಭಿನ್ನವಾಗಿ ಕಾಣುವ ಇಂತಹ ಕುಂಡಗಳನ್ನು ಬಿಸಿಲಲ್ಲಿಟ್ಟರೆ ಬೇಗನೆ ಕುಂಡಗಳು ಬಿಸಿಯಾಗಿ, ಗಿಡಗಳಿಗೆ ಹಾನಿಯಾಗುವ ಸಂಭವವೇ ಹೆಚ್ಚು.

ಆದ್ದರಿಂದ ಹಿತ್ತಾಳೆ ಕುಂಡಗಳಲ್ಲಿ ಗಿಡ ನೇತು ಹಾಕಬಯಸುವವರು ಕುಂಡಕ್ಕೆ ಹೆಚ್ಚು ಮಣ್ಣು ಹಾಗೂ ಸಮಾನವಾದ ನೀರನ್ನು ಹಾಕುವುದರಿಂದ ತಾಪವನ್ನು ಕಡಿಮೆಗೊಳಿಸಬಹುದು. ಹಾಗೇ ಬ್ಯಾಸ್ಕೆಟ್‌ ರೂಪದಲ್ಲಿರುವ ಕುಂಡಗಳನ್ನು ಆಯ್ಕೆ ಮಾಡಿಕೊಂಡಲ್ಲಿ, ಅದರಲ್ಲಿಡಲು ಸಾಕಷ್ಟು ಉದ್ದವಾದ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಿ.

ಅಲ್ಲದೇ ಸರಪಣಿ ಹಾಗೂ ಕೊಕ್ಕೆಗಳ ಸಹಿತ ವಿವಿಧ ವೆರೈಟಿಗಳಲ್ಲೂ ಕುಂಡಗಳು ದೊರಕುತ್ತವೆ. ಅವುಗಳನ್ನು ತೆಂಗಿನ ನಾರು, ಪ್ಲಾಸ್ಟಿಕ್‌ ದಾರ, ಕಾಟನ್‌, ಸ್ಟೀಲ್‌, ಮೆಟಲ್, ಚೈನ್‌ ಮುಂತಾದವುಗಳಿಂದ ತಯಾರಿಸಲಾಗುತ್ತದೆ. ಬೇರೆ ಕುಂಡಗಳಿಗೆ ಹೋಲಿಸಿದಲ್ಲಿ ಇವುಗಳೂ ಹೆಚ್ಚು ಆಕರ್ಷಣೀಯವಾಗಿರುತ್ತವೆ.

ನಿರ್ಮಾಣ ಹೇಗೆ?

ಹ್ಯಾಂಗಿಂಗ್‌ ಕುಂಡಗಳಲ್ಲಿ ಗಿಡಗಳನ್ನು ನೆಡುವ ಮುನ್ನ, ಕುಂಡಗಳಲ್ಲಿ ಸುಮಾರು 2 ಇಂಚು ಆಳದ ಅಳತೆಯಲ್ಲಿ, ಸಮಾನ ಅನುಪಾತದಲ್ಲಿ ಮಣ್ಣು, ರಸಗೊಬ್ಬರವನ್ನು ಹದವಾಗಿ ತುಂಬಿಸಬೇಕು. ಮಾರುಕಟ್ಟೆಯಲ್ಲಿ ಇವುಗಳು ರೆಡಿಮೇಡ್‌ ಸಿಗುತ್ತವೆ. ಮೊದಲಿಗೆ ನೀರು, ಮಣ್ಣು ಹಾಗೂ ಗೊಬ್ಬರವನ್ನು ಒಂದೇ ಅಳತೆಯಲ್ಲಿ ಮಿಕ್ಸ್ ಮಾಡಿ ತುಂಬಿಸಿ. ನಿಧಾನವಾಗಿ ಗೊಬ್ಬರ, ಮಣ್ಣು ಹಾಗೂ ನೀರು ಹದವಾಗಿ ಬೆರೆತಿದೆಯೇ ಎಂಬುದನ್ನು ಗಮನಿಸಿ. ಕೆಲವೊಮ್ಮೆ ದೊಡ್ಡ ಜಾತಿಯ ಗಿಡಗಳನ್ನು ಆಯ್ಕೆ ಮಾಡಿಕೊಂಡು, ಬೇಡವಾದ ಎಲೆ ಕೊಂಬೆಗಳನ್ನು ಕತ್ತರಿಸಿ ನೆಡಬಹುದು. ಸಾಮಾನ್ಯವಾದ ಗಿಡಗಳಿಗೆ ಅವಶ್ಯಕತೆಗೆ ತಕ್ಕಂತೆ ಮೇಲ್ಗಡೆ ಒಂದಿಷ್ಟು ಮಣ್ಣು ಹಾಕಿ ನೀರು ಸುರಿದರಾಯಿತು. ಅದೇ ಎಲೆ, ಬಳ್ಳಿಯಂಥ ಗಿಡಗಳಿಗೆ ಕುಂಡದ ಬದಿಯಲ್ಲಿ ತೆಳುವಾಗಿ ಮಣ್ಣು ಹಾಕಿ. ಹಾಗೆ ನೇರವಾಗಿ ಎತ್ತರಕ್ಕೆ ಬೆಳೆಯುವ ಗಿಡಗಳನ್ನು  ಕುಂಡದ ನಡುವೆ ಹೂತಿಟ್ಟು ಮಣ್ಣು ಹಾಕಿದರಾಯಿತು.

ಗಿಡಗಳನ್ನು ನೋಡಿಕೊಳ್ಳುವುದು

ಹ್ಯಾಂಗಿಂಗ್‌ ಗಾರ್ಡನ್‌ ನಿರ್ಮಿಸಲು ಉದ್ದೇಶಿಸಿದ್ದೀರಿ ಅಂತಾದರೆ ಸಾಧ್ಯವಾದಷ್ಟು ಆರೋಗ್ಯಪೂರ್ಣ, ತಾಜಾ ಗಿಡಗಳನ್ನು ಒಳ್ಳೆಯ ನರ್ಸರಿಗಳಿಂದ ತನ್ನಿ. ಹಾಗಾದಾಗ ಅವು ಬೇಗನೆ ಹಾನೀಗೀಡಾಗುವ ಸಂಭವ ಕಡಿಮೆ. ಇನ್ನು ಗಿಡಗಳ ಬೆಳವಣಿಗೆಯ ಹಂತದಲ್ಲಿ ಅತಿ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಆಗಾಗ್ಗೆ ಕುಂಡಗಳ ಸುತ್ತ ಜೇಡರ ಬಲೆ ಕಟ್ಟಿಕೊಂಡಿರುತ್ತದೆ. ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ಹ್ಯಾಂಗಿಂಗ್‌ ಗಾರ್ಡನ್‌ ನಿರ್ವಹಣೆ ಮಾಮೂಲು ಕೈತೋಟವನ್ನು ನಿರ್ವಹಿಸಿದಂತಲ್ಲ….! ಇದಕ್ಕೆ ಅತಿ ಹೆಚ್ಚಿನ ಕಾಳಜಿ ಅಗತ್ಯ. ಇಲ್ಲವಾದಲ್ಲಿ ಗಿಡಗಳು ಬೇಗನೇ ಬಾಡಿಹೋಗುವ, ಸತ್ತುಹೋಗುವ ಸಾಧ್ಯತೆ ಹೆಚ್ಚು.

ಕೆಲವೊಮ್ಮೆ ಹೂ ಕುಂಡಗಳನ್ನು ಅತಿ ಎತ್ತರದ ಸ್ಥಳಗಳಲ್ಲಿ ಇಡಲಾಗುತ್ತದೆ. ಆಗ ಸ್ಪ್ರೇ ಮೂಲಕ ನೀರನ್ನು ಸಿಂಪಡಿಸಬೇಕಾಗುತ್ತದೆ. ಜೊತೆಗೆ ಕಾಲಕಾಲಕ್ಕೆ ಅವುಗಳ ಎಲೆಗಳನ್ನು ನೀಟಾಗಿ ಕತ್ತರಿಸಿ ಟ್ರಿಮ್ ಮಾಡಬೇಕು. ಇದರಿಂದ ಗಿಡಗಳ ಬೆಳವಣಿಗೆ ಅನುಕೂಲವಾಗುತ್ತದೆ ಮತ್ತು ನೋಡಲು ಆಕರ್ಷಕವಾಗಿರುತ್ತದೆ. ಒಂದೇ ಕುಂಡದಲ್ಲಿ ಒಂದೆ ಗಿಡ ನೆಡುವುದು ಉತ್ತಮ. ಒಂದಕ್ಕಿಂತ ಹೆಚ್ಚು ಗಿಡಗಳನ್ನು ನೆಟ್ಟಲ್ಲಿ ಕುಂಡಗಳು ಹಾಳಾಗುವ ಸಂದರ್ಭವೇ ಹೆಚ್ಚು ಹಾಗೂ ಕ್ಲೀನಿಂಗ್‌ ಕಷ್ಟ. ಇನ್ನೊಂದು ಮುಖ್ಯ ವಿಷಯ ಏನೆಂದರೆ ಗಿಡಗಳನ್ನು ಕೀಟಗಳಿಂದ ರಕ್ಷಿಸಲು ಆಗಾಗ್ಗೆ ಬೇವಿನ ಎಣ್ಣೆ, ಅರಿಶಿನ ಪೇಸ್ಟನ್ನು ಸಿಂಪಡಿಸಬೇಕು. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಮನೆಯಿಂದ ಹೊರ ಹೋಗಬೇಕಾಗಿ ಬರುತ್ತದೆ. ಅದು ಒಂದು ವಾರ ಅಥವಾ 15 ದಿನಗಳಾಗಬಹುದು ಆಗ ಎತ್ತರದಲ್ಲಿಟ್ಟಿರುವ, ಬಿಸಿಲಿಗೆ ಮುಖ ಮಾಡಿಟ್ಟಿರುವ ಕುಂಡಗಳನ್ನು ಕೆಳಗಿಳಿಸಿ, ನೆರಳಿನಡಿ ಇಟ್ಟುಹೋಗಿ. ಕಾಲಕಾಲಕ್ಕೆ ಕುಂಡಗಳನ್ನು ಬದಲಾಯಿಸುತ್ತಿರಿ.

ಆರ್‌. ಪದ್ಮಶ್ರೀ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ