ಕಳೆದ 2-3 ದಿನಗಳ ಸತತ ಮನೆ ಸ್ವಚ್ಛತಾ ಆಂದೋಲನದಿಂದ ಸುರಭಿ ಬಲು ಸುಸ್ತಾಗಿ ಹೋಗಿದ್ದಳು. ಯುಗಾದಿ ವರ್ಷಾವಧಿಯ ಮೊದಲ ಹಬ್ಬವಾಗಿ ಬರುತ್ತಿರುವಾಗ ಎಷ್ಟೆಲ್ಲ ಮುತುವರ್ಜಿ ವಹಿಸಿ ಮನೆಯ ಸ್ವಚ್ಛತೆ, ಅಲಂಕಾರ ಮಾಡಿದರೂ ಸಾಲದು ಎನಿಸುತ್ತದೆ. ಎಷ್ಟು ಮಾಡಿದರೂ ಈ ಕೆಲಸಗಳು ಮುಗಿಯುತ್ತಲೂ ಇರಲಿಲ್ಲ.

ಅಂತೂ ಎಲ್ಲಾ ಸಿದ್ಧತೆಗಳೂ ಮುಗಿದು ಹಬ್ಬದ ದಿನ ಬಂದೇಬಿಟ್ಟಿತು! ಬೆಳಗಿನಿಂದ ಸಡಗರ, ಸಂಭ್ರಮದ ಓಡಾಟ. ಹಬ್ಬದ ಕೆಲಸಗಳು ಮುಗಿದು, ಭರ್ಜರಿ ಹೋಳಿಗೆ ಅಡುಗೆ ತಯಾರಿಸಿದ್ದೂ ಆಯ್ತು. ಹಬ್ಬದ ಹೆಚ್ಚುವರಿ ಕೆಲಸಗಳಲ್ಲಿ ಸಹಾಯ ಮಾಡಿ ಎಂದು ಹೇಳಿದರೆ ಮಕ್ಕಳಾದ ಶೋಭಾ, ಸೂರಜ್‌ ಕೇಳುವವರಲ್ಲ. ಇರುವುದರಲ್ಲಿ ಶೋಭಾ ವಾಸಿ, ರಂಗೋಲಿ ಹಾಕಿ, ಅಡುಗೆ ಕೆಲಸದಲ್ಲೂ ಸಹಾಯ ಮಾಡುತ್ತಿದ್ದಳು.

ಊಟಕ್ಕೆ ಇನ್ನೂ ಸಮಯವಿತ್ತು. ಅಷ್ಟರಲ್ಲಿ ಮಕ್ಕಳು ಆಡಲು ಹೊರಟುಹೋದರು. ಸುರಭಿ ಅವರಿಬ್ಬರನ್ನೂ ಕರೆದದ್ದೇ ಬಂತು. ಆದರೆ ಅವರೇನೂ ಬರುವ ಹಾಗಿರಲಿಲ್ಲ. ಅವಳು ಗಂಡನಿಗೆ ಮಕ್ಕಳನ್ನು ಕರೆಯುವ ಕೆಲಸ ಒಪ್ಪಿಸಿದಳು.

“ಆಡಿಕೊಳ್ಳಲಿ ಬಿಡು, ಅವರಿನ್ನೂ ಮಕ್ಕಳು,” ರಾಜೀವ್ ನಗುತ್ತಾ ಹೇಳಿದ.

“ನೀವೇ ಬಂದು ನನಗೆ ಸ್ವಲ್ಪ ಸಹಾಯ ಮಾಡಿ,” ಎಂದಾಗ, “ಅಬ್ಬಬ್ಬಾ! ಅಡುಗೆಮನೆ ಸಹಾಯಕ್ಕೆ ಮಾತ್ರ ಎಂದೂ ನನ್ನನ್ನು ಕರೆಯಬೇಡ. ಏನೇನು ಸಾಮಗ್ರಿ ಬೇಕೋ ಎರಡಲ್ಲ ಮೂರು ಸಲ ತಂದುಕೊಡ್ತೀನಿ. ಈ ಮನೆಗೆಲಸದ ರೇಜಿಗೆ ನನಗೆ ಅಂಟಿಸಲೇಬೇಡ,” ಎಂದು ಹೊಸ ಮೊಬೈಲ್‌ನ ಫೇಸ್‌ ಬುಕ್ಕಿನಲ್ಲಿ ಮುಳುಗಿಹೋದ. ಅದೂ ಬೇಸರವಾಗಲು ಟಿ.ವಿ.ಯಲ್ಲಿ ಆ್ಯಕ್ಷನ್‌ಚಿತ್ರ ವೀಕ್ಷಿಸತೊಡಗಿದ.

ಇದನ್ನೆಲ್ಲ ಗಮನಿಸುತ್ತಿದ್ದ ಸುರಭಿಗೆ ರೇಗಿಹೋಯಿತು. ತಾನು ಬೆಳಗ್ಗಿನಿಂದ ಇಷ್ಟೆಲ್ಲ ಕಷ್ಟಪಟ್ಟು ಮಾಡುತ್ತಿರುವುದು ಯಾರಿಗಾಗಿ? 2-3 ದಿನಗಳ ಕ್ಲೀನಿಂಗ್‌ ಕೆಲಸ, ಬೆಳಗ್ಗಿನಿಂದ ಮಕ್ಕಳಿಗೆ ಎಣ್ಣೆ ಸ್ನಾನ, ಪೂಜೆ ಪುನಸ್ಕಾರ, ಹಬ್ಬದಡುಗೆ….. ಎಲ್ಲ ಸುಲಭವಾಗಿ ಮುಗಿದುಹೋಗುವುದೇ? ಅವಳು ಎದ್ದು ಬಂದು ಟಿ.ವಿ. ಆಫ್‌ ಮಾಡಿ, ಅವನ ಕೈಯಿಂದ ರಿಮೋಟ್‌ ಪಡೆದುಕೊಂಡಳು.

“ನೀವು ನನಗೆ ಅಡುಗೆಮನೆಯಲ್ಲಿ ಸಹಾಯ ಮಾಡಲಿ ಎಂದು ಕರೆಯಲಿಲ್ಲ. ಹಬ್ಬದ ದಿನ ಹಾಯಾಗಿ ನನ್ನೊಂದಿಗೆ ನಗುನಗುತ್ತಾ 4 ಮಾತನಾಡಬೇಡೀ? ಆ ಮಕ್ಕಳು ಏನು ಮಾಡುತ್ತಿದ್ದಾರೆ ಎತ್ತ ಎಂದು ನೋಡಬೇಡೀ? ಸದಾ ನೀವಾಯ್ತು ನಿಮ್ಮ ಟಿ.ವಿ.ಯ ಕ್ರಿಕೆಟ್‌ ಮ್ಯಾಚ್‌ ಆಯ್ತು.”

“ಸುರಭಿ…. ಓಹ್‌, ನೀನಂತೂ ನೆಮ್ಮದಿಯಾಗಿ ನನ್ನನ್ನು ಮ್ಯಾಚ್‌ ನೋಡಲು ಬಿಡುವುದೇ ಇಲ್ಲ…. ಈಗೇನು? ನಡಿ, ಹಾಯಾಗಿ ಬಾಲ್ಕನಿಯಲ್ಲಿ ಕೂರೋಣ,” ಎನ್ನುತ್ತಾ ಇಬ್ಬರಿಗೂ ಬೆತ್ತದ ಕುರ್ಚಿಗಳನ್ನು ತೆಗೆದುಕೊಂಡುಹೋಗಿ ಬಾಲ್ಕನಿಯಲ್ಲಿ ಹಾಕಿದ ರಾಜೀವ್.

“ನೋಡಿ, ಬೇರೆಯವರು ಮನೆ ಮುಂದೆ ಕಾಟಾಚಾರಕ್ಕೆ ಎರಡು ಗೆರೆ ಎಳೆದಿದ್ದಾರೆ. ನಮ್ಮ ಅಂಗಳದ ರಂಗೋಲಿ, ತಳಿರು ತೋರಣ, ಅಲಂಕಾರ ಚೆನ್ನಾಗಿದೆ ಅನಿಸುತ್ತಿಲ್ಲವೇ? ನನ್ನ ಈ ಹೊಸ ಸೀರೆ ಬಗ್ಗೆ ನೀವು ಏನೂ ಹೇಳಲೇ ಇಲ್ಲ,” ಎಂದು ಬೇಕೆಂದೇ ಸೀರೆಯನ್ನು ಮತ್ತೊಮ್ಮೆ ಸರಿಪಡಿಸಿಕೊಂಡಳು.

“ಹೌದು….. ಹೌದು, ನೀನು ಬಿಡಿಸಿರುವ ಬಣ್ಣದ ರಂಗೋಲಿ ಅದ್ಭುತವಾಗಿದೆ. ನಿನ್ನ ಸೀರೇನೂ ಬೊಂಬಾಟ್‌ ಆಗಿದೆ. ಬೇವು ಬೆಲ್ಲ ಹಂಚಿದ್ದಾಯ್ತು, ಅಮ್ಮಾವರ ಹಾಗೇ `ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ….’ ಹಾಡು ಹೇಳಿಬಿಟ್ಟರೆ ನಾನು ಕೇಳಿ ಧನ್ಯನಾಗ್ತೀನಿ.”

ಗಂಡನ ಮನಸ್ಸು ಲಹರಿಯಲ್ಲಿರುವುದನ್ನು ಗಮನಿಸಿ ಸುರಭಿ ಮೆಲುದನಿಯಲ್ಲಿ ಹಾಡು ಹೇಳಿದಳು. ಅವಳ ಹಾಡಿನ ಶೈಲಿಗೆ ತನ್ಮಯನಾಗಿ ಅವನು ತಲೆದೂಗುತ್ತಿದ್ದ. ಮಕ್ಕಳು ಆಟ ಮುಗಿಸಿದರೆಂದು ಮೇಲೆ ಬಂದಾಗ, ಸುರಭಿ ಎಲ್ಲರನ್ನೂ ಊಟಕ್ಕೆಬ್ಬಿಸಿ ಭರ್ಜರಿ ಹೋಳಿಗೆ ಊಟ ಬಡಿಸಿದಳು.

ಊಟದ ನಂತರ ಸ್ವಲ್ಪ ಹೊತ್ತು ಟಿ.ವಿ.ಯಲ್ಲಿ ಯಾವುದೋ ಸಿನಿಮಾ ನೋಡುತ್ತಾ ಹಾಗೇ ಮಲಗಿದರು. ಸಂಜೆ ಹೊತ್ತಿಗೆ ಇವರ ಮನೆಗೆ ಆಕಸ್ಮಿಕವಾಗಿ ರಶ್ಮಿ ಮನೋಜ್‌ರ ಅಗಮನವಾದಾಗ, ಅವಳ ಮುಖದಲ್ಲಿ ಆಶ್ಚರ್ಯ ಮಿಶ್ರಿತ ಪ್ರಸನ್ನತೆ ಕಾಣಿಸಿತು.

ಹಬ್ಬದ ದಿನ ಸಾಮಾನ್ಯವಾಗಿ ಯಾರೂ ಮನೆ ಬಿಟ್ಟು ಕದಲುವುದಿಲ್ಲ. ಇಂದೇನೋ ಅಪರೂಪಕ್ಕೆ ಇವರ ಸವಾರಿ ಈ ಕಡೆ ಬಂದಿದೆ ಎನಿಸಿತು. ಅವರನ್ನು ಗಮನಿಸಿದಾಗ ಅಂಥ ಗಂಭೀರ ಸಮಾಚಾರವೇನೂ ಕಂಡುಬರಲಿಲ್ಲ.

ಹಬ್ಬದ ದಿನ ತಮ್ಮ ಮನೆಗೆ ಬಂದ ಅತಿಥಿಗಳನ್ನು ಆದರದಿಂದ ಬರಮಾಡಿಕೊಳ್ಳಲು ಸುರಭಿ ಬಾಗಿಲಿಗೆ ಬಂದು ನಿಂತಳು.

ರಶ್ಮಿ ತನ್ನ ಕೈಯಲ್ಲಿ ಹಿಡಿದಿದ್ದ ಮೈಸೂರು ಪಾಕ್‌ ಸ್ವೀಟ್‌ ಬಾಕ್ಸ್ ನ್ನು ಸುರಭಿಗೆ ನೀಡುತ್ತಾ, “ಯುಗಾದಿಯ ಶುಭಾಶಯಗಳು!” ಎಂದು ಕೈ ಕುಲುಕಿ ಹಾರ್ದಿಕಾಗಿ ಅಪ್ಪಿಕೊಂಡಳು.

“ನಿಮಗೂ ಸಹ!” ಎನ್ನುತ್ತಾ ಗೆಳತಿ ಮತ್ತು ಅವಳ ಗಂಡನನ್ನು ಒಳಗೆ ಕರೆದು ಹಾಲ್‌ನಲ್ಲಿ ಕೂರಿಸಿದಳು ಸುರಭಿ.

“ಇದೇನು ಹಬ್ಬದ ದಿನವೇ ಬಂದುಬಿಟ್ಟರು ಅಂದುಕೊಂಡ್ಯಾ? ಭಾನುವಾರದ ದಿನಗಳಲ್ಲಿ ಬಿಡುವೇ ಆಗುವುದಿಲ್ಲ. ಬಹಳ ದಿನಗಳಾಗಿತ್ತಲ್ಲ, ಹಾಗೇ ಒಂದು ರೌಂಡ್‌ ಹೋಗಿಬರೋಣ ಎಂದುಕೊಂಡೆ,” ಎಂದು ರಶ್ಮಿ ವಿವರಣೆ ನೀಡಿದಳು.

“ನೀವು ನಮ್ಮ ಮನೆಗೆ ಬರಲು ಕಾರಣ ಹುಡುಕಬೇಕೇ? ನೆನೆದಾಗ ಬರಬೇಕಪ್ಪ. ರಶ್ಮಿ, ನಮ್ಮ ಮನೆ ಅಲಂಕಾರ ಹಿಡಿಸಿತೇ?”

“ಫಸ್ಟ್ ಕ್ಲಾಸ್‌!”

“ನಿಮ್ಮ ಕೈಲೇ ಜಾದೂ ಇದ್ದ ಮೇಲೆ ಅದು ಹೇಗೆ ಫಸ್ಟ್ ಕ್ಲಾಸ್‌ ಆಗದಿರಲು ಸಾಧ್ಯ?” ಎಂದು ಮನೋಜ್‌ ಕೂಡಾ ಅವಳನ್ನು ಹೊಗಳಿದ.

“ನಿಜವಾಗಲೂ ನಾವು ನಿಮಗೆ ಬಹಳ ಆಭಾರಿಗಳು,” ಎಂದು ಕೃತಜ್ಞತೆಯಿಂದ ನುಡಿದ.

“ಇರಲಿ ಇರಲಿ, ಇದೆಲ್ಲ ಹೊಗಳಿಕೆ ಆಮೇಲೆ. ಮೊದಲು ಸಿಹಿ ಖಾಲಿ ಮಾಡಿ,” ಎಂದು ಒಳಗಿನಿಂದ ಬಂದು ಕೂರುತ್ತಾ, ಆತ್ಮೀಯತೆಯಿಂದ ಗೆಳೆಯನ ಬೆನ್ನು ತಟ್ಟಿದ ರಾಜೀವ್‌

.“ಬರಿ ಸಿಹಿ ಖಾಲಿ ಮಾಡೋದಲ್ಲ, ಬ್ಲೇಡ್‌ ಸಂಭಾಷಣೆಯಿಂದ ನಿಮ್ಮೆಲ್ಲರ ಕಿವಿ ಕೊರೆದು ಹೋಗೋಣಾಂತ ಬಂದಿದ್ದೇವೆ,” ಎಂದು ರಶ್ಮಿ ಹೇಳಿದಾಗ ಎಲ್ಲರೂ ಆತ್ಮೀಯತೆಯಿಂದ ಜೋರಾಗಿ ನಕ್ಕರು.

ಸುರಭಿ ರಶ್ಮಿಯತ್ತ ನಿಧಾನವಾಗಿ ದಿಟ್ಟಿಸಿ ನೋಡಿದಳು. ಅವಳು ಉಟ್ಟಿದ್ದ ಭಾರಿ ಕಾಂಜೀವರಂ ರೇಷ್ಮೆ ಸೀರೆಗೆ ಹೊಂದುವಂಥ  ಅಪರೂಪದ ಅನನ್ಯ ಒಡವೆ ಧರಿಸಿದ್ದಳು. ರಶ್ಮಿ ಧರಿಸಿದ್ದ ಟೆಂಪಲ್ ಸೆಟ್‌ನ ಆ ಒಡವೆ ಅವಳ ವ್ಯಕ್ತಿತ್ವಕ್ಕೆ ಒಂದು ಅಪೂರ್ವ ಶೋಭೆ ತಂದುಕೊಟ್ಟಿತ್ತು .

“ವರ್ಷದ ಮೊದಲ ಹಬ್ಬ ಈ ಮಂಗಳಕರ ಟೆಂಪಲ್ ಸೆಟ್‌ ಒಡವೆ ಧರಿಸಿದರೆ, ಇಡೀ ವರ್ಷ ನಗುನಗುತ್ತಾ, ಕಳೆಯಬಹುದು ಅನ್ನಿಸಿತು. ಸುರಭಿ, ನಿನಗೆ ಈ ದಿನದ ನೆನಪು ಇದೆಯೋ ಇಲ್ಲವೋ…. ನಮಗಂತೂ ಇದೆ,” ಎಂದು ರಶ್ಮಿ ಸುರಭಿಗೆ ಹೇಳಿದಳು.

ದಕ್ಷಿಣದ ದೇವಾಲಯಗಳ ಗೋಪುರ ಸಂಕೇತಿಸುವ ಆ ಸ್ವರ್ಣಾಭರಣ ವಿಶಿಷ್ಟ ವಿನ್ಯಾಸ ಎಂಥವರೂ ತಲೆದೂಗುವಂತೆ ಹೊಳೆಹೊಳೆಯುತ್ತಿತ್ತು. ಗೋಪುರದ ಪ್ರತಿಯೊಂದು ಬಿಡಿ ಭಾಗವನ್ನೂ ದರ್ಶಿಸುವ ಅದರ ಕಲಾತ್ಮಕತೆಯ ಚಿತ್ತಾರ ಮೋಡಿ ಮಾಡುವಂತಿತ್ತು. ಕಳೆದ ವರ್ಷ ಮನೋಜ್‌ ಕೆಲಸದ ನಿಮಿತ್ತ ಚೆನ್ನೈಗೆ ಹೋಗಿದ್ದಾಗ ಅದನ್ನು ಕೊಂಡುತಂದಿದ್ದ. ಆದರೆ ಅದರ ಜೊತೆ ಒಂದು ದುಃಖದ ಘಟನೆಯೂ ನಂಟು ಹೊಂದಿತ್ತು.

“ಕಳೆದು ಹೋದ ಕಹಿ ಪ್ರಸಂಗವನ್ನು ನೆನೆದು ಏನು ಲಾಭ?” ಸುರಭಿ ಶಾಂತಿಯುತವಾಗಿ ಹೇಳಿದಳು, “ಈ ಟೆಂಪಲ್ ಸೆಟ್‌ ನಿನಗೆ ಬಲು ಚೆನ್ನಾಗಿ ಒಪ್ಪುತ್ತಿದೆ. ಅದೇ ನನಗೆ ದೊಡ್ಡ ಖುಷಿ!”

ಹೀಗೆ ಅವರು ಸ್ವಲ್ಪ ಹೊತ್ತು ಹರಟೆ ಹೊಡೆದು ನಂತರ ಹೊರಟುಬಿಟ್ಟರು. ಅವರನ್ನು ಬೀಳ್ಕೊಡಲೆಂದು ಬಾಲ್ಕನಿಗೆ ಬಂದು ನಿಂತ ಸುರಭಿ, ಅವರಿಗೆ ಕೈ ಬೀಸುತ್ತಾ ಅಲ್ಲೇ ನಿಂತುಬಿಟ್ಟಳು. ಅವಳ ಕಂಗಳ ಮುಂದೆ ರಶ್ಮಿಯ ಆ ಟೆಂಪಲ್ ಸೆಟ್‌ ಒಡವೆ, ಮತ್ತೆ ಮತ್ತೆ ಬಂದು ತೂಗಾಡಿತು.

ರಾಜೀವ್‌ನ ಖಾಸಾ ಗೆಳೆಯ ಮನೋಜ್‌, ಯೋಗಾಯೋಗವೆಂಬಂತೆ ಸುರಭಿಯ ಗೆಳತಿ ರಶ್ಮಿಯನ್ನು ಮದುವೆಯಾಗಿದ್ದ. ಆ ಮದುವೆಗೆ ಹೋಗಿ ಬಂದ ಮೇಲೆ ಎರಡು ಕುಟುಂಬಗಳ ಆತ್ಮೀಯತೆ ಮತ್ತಷ್ಟು ಬೆಳೆಯಿತು. ಆಗಾಗ ಎರಡೂ ಮನೆಯವರು ಭಾನುವಾರಗಳಂದು ಪರಸ್ಪರ ಬಂದುಹೋಗಿ, ಇಡೀ ದಿನವನ್ನು ಆನಂದವಾಗಿ ಕಳೆಯುತ್ತಿದ್ದರು.

ಇದೇ ತರಹ ಕಳೆದ ಯುಗಾದಿಯ ಹಬ್ಬದ ಸಂದರ್ಭ. ರಾಜೀವನಿಗೆ ಗೆಳೆಯರ ಗೋಷ್ಠಿಯಲ್ಲಿ ಕಾರ್ಡ್ಸ್, ಡ್ರಿಂಕ್ಸ್ ಮಾಮೂಲಾಗಿತ್ತು. ಮದುವೆಯಾದ ನಂತರ ಸುರಭಿ ಹಠ ಹೂಡಿ ಅದಕ್ಕೆ ಕಡಿವಾಣ ಹಾಕಿಸಿದ್ದಳು. ಹಬ್ಬದ ಸಂಜೆ ಹೊರಗೆ ಹೋಗಿಬರುತ್ತೇನೆಂದು ಗೆಳೆಯರ ಗುಂಪಿನ ಜೊತೆ ಸೇರಿಕೊಂಡ ರಾಜೀವ್‌, ರಾತ್ರಿ 11 ಗಂಟೆಯಾದರೂ ಇನ್ನೂ ಮನೆಗೆ ಬಂದಿರಲಿಲ್ಲ.

ಗಾಬರಿಗೊಂಡ ಸುರಭಿ 2-3 ಸಲ ಅವನ ಮೊಬೈಲ್‌ಗೆ ರಿಂಗ್‌ ಮಾಡಿದ್ದಳು. ನಾಟ್‌ ರೀಚೆಬಲ್ ಎಂದು ಪ್ರತಿ ಸಲ ಕಾಲ್‌ತುಂಡರಿಸುತ್ತಿತ್ತು. ಅವಳು ಹೀಗೆ ಆತಂಕದಿಂದ ಅವನ ಕರೆಗಾಗಿ ಕಾದಿದ್ದಾಗ, ರಶ್ಮಿ ಮನೆಯಿಂದ ಕರೆ ಬಂದಿತು. ರಾಜೀವ್ ‌ಈಗ ತಾನೇ ನಮ್ಮ ಮನೆಯಿಂದ ಹೊರಟಿದ್ದಾರೆ. ಇನ್ನೇನು ಸ್ವಲ್ಪ ಹೊತ್ತಿಗೆ ನಿಮ್ಮ ಮನೆಗೆ ತಲುಪಬಹುದು, ಗಾಬರಿ ಆಗಬೇಡಿ ಎಂದು ರಶ್ಮಿ ಮತ್ತು ಮನೋಜ್‌ ಇಬ್ಬರೂ ಫೋನ್‌ ಮಾಡಿದ್ದರು.

ಸುಮಾರು 11.30ರ ಹೊತ್ತಿಗೆ ರಾಜೀವ್ ‌ಮನೆಗೆ ಬಂದ. ಅವನ ಮಾತಿನ ವರಸೆ, ಹಾವಭಾವಗಳಿಂದ ರಾಜೀವ್ ‌ಕುಡಿದು ಬಂದಿದ್ದಾನೆನ್ನುವ ವಿಷಯ ತಿಳಿಯಿತು. ಎಂದಾದರೂ ಗೆಳೆಯರ ಜೊತೆ ಪಾರ್ಟಿ ನಡೆಸಿದಾಗ, ರಾಜೀವ್ ಹೀಗೆ ಬರುವುದು ಅವಳಿಗೆ ಗೊತ್ತಿದ್ದ ವಿಚಾರ. ರಾಜೀವ್ ‌ಬಂದು ನೇರವಾಗಿ ಸೋಫಾದಲ್ಲಿ ಕುಳಿತು, ಎದುರಿನ ಟೀಪಾಯಿ ಮೇಲೆ ಹೊಳೆಯುವ ಸುನ್ನೇರಿ ಕಾಗದದಲ್ಲಿ ಪ್ಯಾಕ್‌ ಮಾಡಲಾಗಿದ್ದ ಒಂದು ಬಾಕ್ಸ್ ಇರಿಸಿದ.

“ಮಕ್ಕಳೆಲ್ಲ ಮಲಗಿದರೆ….” ಎಂದು ವಿಚಾರಿಸಿಕೊಂಡ.

ರಾಜೀವ್ ನಿಧಾನವಾಗಿ ಆ ಬಾಕ್ಸ್ ಬಿಡಿಸಿದಾಗ, ಅದರಲ್ಲಿ ಹೊಳೆಹೊಳೆಯುವ ಟೆಂಪಲ್ ಡಿಸೈನಿನ ಒಂದು ಅದ್ಭುತ ಸ್ವರ್ಣಾಭರಣವಿತ್ತು! ಅದರ ಹೊಳಪು ಎಂಥವರ ಕಣ್ಣೂ ಕುಕ್ಕುವಂತಿತ್ತು. ಇಂಥದೇ ಒಂದು ಸೆಟ್‌ನ್ನು ಇತ್ತೀಚೆಗೆ ಮನೋಜ್‌ಚೆನ್ನೈನಿಂದ ಕೊಂಡುತಂದದ್ದರ ಬಗ್ಗೆ ಬಹಳ ಸಲ ಚರ್ಚೆಗಳಾಗಿದ್ದವು.

“ಅದು ಸರಿ…. ಇಷ್ಟು ಹೊತ್ತಲ್ಲಿ ಇದ್ದಕ್ಕಿದ್ದಂತೆ ಈ ಒಡವೆ ಖರೀದಿ…?” ಸುರಭಿಯ ಕಂಠದಲ್ಲಿ ಆತಂಕವಿತ್ತು, “ಮತ್ತೆ…. ಇದು ಮನೋಜ್‌ ಖರೀದಿಸಿದ್ದ ಅದೇ ಸೆಟ್‌ ಅಲ್ಲ ತಾನೇ?”

“ಸ್ವಲ್ಪ ಮೆಲ್ಲಗೆ ಮಾತನಾಡು…. ಮಕ್ಕಳು ಮಲಗಿದ್ದಾರೆ….” ತೊದಲುತ್ತಾ ಹೇಳಿದ ರಾಜೀವ್, “ನೀನು ಊಹಿಸಿದ್ದು ಸರಿಯಾಗಿದೆ. ಇದು ಮನೋಜ್‌ ಕೊಂಡುತಂದದ್ದೇ. ಆದರೆ ಇದೀಗ ನಮ್ಮದು! ಹೇಗೆ ಅಂದ್ರೆ ನಾನು ಇದನ್ನು ಅವನಿಂದ ಖರೀದಿಸಿದೆ.”

“ಆದರೆ ನಿಮ್ಮ ಬಳಿ ಇದ್ದಕ್ಕಿದ್ದಂತೆ ಇಷ್ಟೊಂದು ಹಣ ಹೇಗೆ…. ಇವತ್ತಿನ ಹಬ್ಬದ ಖರ್ಚು ಅಂತಾನೇ ಎಲ್ಲರಿಗೂ ಬಟ್ಟೆಬರೆ, ಉಡುಗೊರೆ ತಗೊಳ್ಳೋದೇ ದೊಡ್ಡ ಬಜೆಟ್‌ ಆಯ್ತು. ಹಾಗಿರುವಾಗ…. ನಾನಂತೂ ಯಾವತ್ತೂ ನಿಮ್ಮನ್ನು ಒಡವೆ ಬೇಕೆಂದು ಕೇಳಿದವಳಲ್ಲ…. ಮತ್ತೆ ಇದೇನು?” ಮಾತು ಮುಗಿಸುವಷ್ಟರಲ್ಲಿ ಅವಳಿಗೆ ಕೋಪವೇ ಬಂದಿತ್ತು, “ಇಂಥ ಯಾವ ಒಡವೆ ವಸ್ತ್ರದ ಮೇಲೂ ನನಗೆ ಷೋಕಿ ಇಲ್ಲ ಎಂದು ನಿಮಗೆ ಗೊತ್ತಿದೆ ತಾನೇ?”

“ಇಂಥ ಒಳ್ಳೆ ಗ್ರಾಂಡ್‌ ಒಡವೆ ನಿನಗೆ ಬೇಕು ಅನಿಸುತ್ತಿಲ್ಲವೇ?” ರಾಜೀವ್ ‌ಮಾತು ಬದಲಿಸುತ್ತಾ ಹೇಳಿದ, “ಸ್ವಲ್ಪ ಈ ಟೆಂಪಲ್ ಡಿಸೈನ್‌ನ ಚಿತ್ತಾರವನ್ನು ಗಮನವಿಟ್ಟು ನೋಡು…. ಇಂಥ ಸ್ಪೆಷಲ್ ಡಿಸೈನಿನ ಒಡವೆ ಯಾರ ಬಳಿಯೂ ಇರಲಿಕ್ಕಿಲ್ಲ.”

“ಅದಲ್ಲ ಮುಖ್ಯ, ಇಂದು ಇಂಥ ದುಬಾರಿ ಒಡವೆ ಕೊಳ್ಳಲು ನಿಮ್ಮ ಬಳಿ ಇದ್ದಕ್ಕಿದ್ದಂತೆ ಹಣ ಎಲ್ಲಿಂದ ಬಂತು? ನೋಡಿದ ತಕ್ಷಣ ಕೊಳ್ಳಲು ಅದೇನು ಅಗ್ಗದ ವಸ್ತುವೇ?”

“ಇವತ್ತು ಯುಗಾದಿ ಅಲ್ಲವೇ…. ಇದು ಕಾರ್ಡ್ಸ್ ಸೀಸನ್‌ ಅಂತ ನಿನಗೆ ಗೊತ್ತೇ ಇದೆ. ಫ್ರೆಂಡ್ಸ್ ಎಲ್ಲಾ ಸೇರಿದ್ದೆವು. 7-8 ರೌಂಡ್ಸ್ ಆಟ ಮುಗಿಸುವಷ್ಟರಲ್ಲಿ ನಾನು ಬೇಕಾದಷ್ಟು ಕಮಾಯಿಸಿದ್ದೆ. ಅದರಿಂದಲೇ ಇದನ್ನು ಕೊಂಡುಕೊಂಡದ್ದು.”

“ಏನಂದ್ರಿ….?” ಒಮ್ಮೆಲೇ ಅವಳ ಮುಖದ ಮೇಲೆ ತಣ್ಣೀರೆರಚಿದಂತೆ ಆಗಿತ್ತು.

“ಇಷ್ಟು ಹಣ ಜೂಜಾಡಿ ಗೆದ್ದದ್ದೇ? ಅಂದರೆ ನಿಮ್ಮ ಹೆಂಡತಿಗಾಗಿ ನೀವು ಕೊಂಡುತಂದ ಈ ಒಡವೆ ನಿಮ್ಮ ಶ್ರಮದ ದುಡಿಮೆಯದಲ್ಲ, ಜೂಜಿನ ಹಣ ಅಂತಾಯ್ತು….. ಅದೂ ಮನೋಜ್‌ ಜೂಜಿನಲ್ಲಿ ಸೋತ ಹಣಕ್ಕೆ ಬದಲಾಗಿ….”

ಸುರಭಿ ಅದರ ಕಡೆ ತಿರುಗಿಯೂ ನೋಡದೆ ಮತ್ತೆ ಹಿಂದಿನಂತೆಯೇ ಅದನ್ನು ಪ್ಯಾಕ್‌ ಮಾಡಿಟ್ಟಳು. ಅದನ್ನು ರಾಜೀನ ಕೈಗೆ ಕೊಟ್ಟು ಏನೂ ಮಾತನಾಡದೆ ಮಂಚದ ತುದಿಯಲ್ಲಿ ಮುಖ ತಿರುಗಿಸಿ ಮಲಗಿಬಿಟ್ಟಳು.

ಆ ರಾತ್ರಿಯಿಡೀ ಅವಳಿಗೆ ನಿದ್ದೆಯೇ ಬರಲಿಲ್ಲ. ಮಗ್ಗಲು ಬದಲಿಸುತ್ತಾ ರಾಜೀವ್ ‌ಮಾಡಿದ ಕೆಲಸದ ಬಗ್ಗೆಯೇ ಯೋಚಿಸತೊಡಗಿದಳು. ಮನೋಜ್‌ ಬದಲಿಗೆ ರಾಜೀವ್ ತಾನೇ ಜೂಜಿನಲ್ಲಿ ಈ ದೊಡ್ಡ ಮೊತ್ತ ಕಳೆದುಕೊಂಡಿದ್ದರೆ ಎಲ್ಲಿಂದ ಹಣ ತಂದು ಆ ನಷ್ಟ ತುಂಬುವುದು? ತಮ್ಮಂಥ ಮಧ್ಯಮ ವರ್ಗದವರಿಗೆ ಇದೆಲ್ಲ ಬೇಕೇ? `ಆಡಿ ಕೆಟ್ಟ ನಳ… ಮತ್ತಾಡಿ ಕೆಟ್ಟ ಧರ್ಮಜ…’ ಎಂಬ ಮಾತು ಅವಳ ಕಿವಿಯಲ್ಲಿ ಮತ್ತೆ ಮತ್ತೆ ಮೊಳಗಿತು. ಅಂದಿನಿಂದ ಇಂದಿನವರೆಗೂ ಯಾರಾದರೂ ಜೂಜಾಡಿ ಉದ್ಧಾರ ಆದವರುಂಟೇ? ಅನ್ಯಾಯವಾಗಿ ಸಂಪಾದಿಸಿ ತಂದ ಸಿರಿಯನ್ನು ಮನೆಯಲ್ಲಿ ಇರಿಸಿಕೊಳ್ಳಬೇಕೇ? ಈಗ ಲಾಭ ಆಯ್ತೆಂದು ಇಂಥದ್ದಕ್ಕೆ ಉತ್ತೇಜನ ಕೊಟ್ಟರೆ ಮುಂದೊಂದು ದಿನ ರಾಜೀವ್ ‌ಆ ನೆಪದಿಂದಲೇ ಮುಳುಗಿಹೋದರೆ? ತಮ್ಮ ಸಂಸಾರ ದಿವಾಳಿಯಾಗಿ ನಡುರಸ್ತೆಗೆ ಬಂದುಬಿಟ್ಟರೆ?

ಮಾರನೇ ಬೆಳಗ್ಗೆ  ಕಾಫಿ ಆಗುತ್ತಲೇ ಪೇಪರ್‌ ಓದುತ್ತಿದ್ದ ಗಂಡನನ್ನು ಇದೇ ಪ್ರಶ್ನೆ ಕೇಳಿದಳು. ಆದರೆ ಇಂಥ ಪ್ರಶ್ನೆಗಳಿಗೆ ರಾಜೀವ್ ಬಳಿ ನೇರ ಉತ್ತರವಿರಲಿಲ್ಲ. ಸುರಭಿ ಸತತ ಇಂಥದೇ ಪ್ರಶ್ನೆ ಕೇಳತೊಡಗಿದಾಗ ರೋಸಿಹೋದ ಅವನು, “ಅಪರೂಪಕ್ಕೆ ಒಂದಷ್ಟು ಫ್ರೆಂಡ್ಸ್ ಒಟ್ಟಿಗೆ ಮನೋಜ್‌ ಮನೆಯಲ್ಲಿ ಸೇರಿದ್ದೆವು. ಯುಗಾದಿ ಸೀಸನ್‌ ಅಂತ ಕಾರ್ಡ್ಸ್ ಆಡಲು ಶುರು ಹಚ್ಚಿಕೊಂಡೆವು. ಸಮಯ ಹೋದದ್ದೇ ಗೊತ್ತಾಗಲಿಲ್ಲ. ಆದರೆ… ಇಷ್ಟಕ್ಕೆ ಬಿಟ್ಟುಬಿಡು, ನಾನೇನು ದಿನೇದಿನೇ ಕ್ಲಬ್ಬುಗಳಿಗೆ ಹೋಗಿ ಜೂಜಾಡುವವನೇ? ಮುಂದೆ ಎಂದೂ ಹೀಗೆ ಆಡಲ್ಲ,” ಎಂದ.

“ನಿಮ್ಮ ಮಾತು ನಿಜ ಎಂದು ತಿಳಿಯಲೇ?”

“ನಿನ್ನಾಣೆ ನಿಜ! ನಮ್ಮ ಮಕ್ಕಳಾಣೆ ಸತ್ಯ!”

“ಹಾಗಿದ್ದರೆ ಕೂಡಲೇ ಮನೋಜ್‌ ಮನೆಗೆ ಹೋಗಿ ಈ ಒಡವೆಯನ್ನು ಕೊಟ್ಟು ಬನ್ನಿ,” ಸುರಭಿ ದೃಢವಾಗಿ ಹೇಳಿದಳು.

“ಇದರಲ್ಲಿ ನಿಮ್ಮ ಪರಿಶ್ರಮದ ಸಂಪಾದನೆ ಏನೇನೂ ಇಲ್ಲ. ಹಾಗಿರುವಾಗ ಮನೋಜ್‌ ಎಷ್ಟೋ ವರ್ಷ ಕಷ್ಟಪಟ್ಟು ಕೊಂಡ ಒಡವೆ ಅವರ ಬಳಿಯೇ ಇರಲಿ.”

“ಆದರೆ ಇದರಿಂದ ನಿನಗೆ ಬೇಸರ ಆಗುದಿಲ್ಲವೇ? ಮನೆಗೆ ಬಂದ ಐಶ್ವರ್ಯವನ್ನು ಏಕ್‌ದಂ ನಿರಾಕರಿಸುತ್ತಾರೆಯೇ?”

“ಇಂಥ ಘೋರ ಉಡುಗೊರೆ ಎಂದೂ ನಮಗೆ ಒಳ್ಳೆಯದು ಮಾಡದು. ನಿಮ್ಮ ಕಷ್ಟ ಸಂಪಾದನೆಯ 2 ಮೊಳ ಹೂ ನನಗೆ ಲಕ್ಷ ರೂ.ಗಳಿಗೆ ಸಮಾನ. ಒಬ್ಬರು ನೊಂದು ನಿಟ್ಟುಸಿರಿಟ್ಟು ಕೊಟ್ಟ ವಸ್ತು ನಮಗೆ ಶ್ರೇಯಸ್ಕರವಲ್ಲ. ಖಂಡಿತಾ ರಶ್ಮಿ-ಮನೋಜ್‌ ಬಹಳ ಕುಗ್ಗಿ ಹೋಗಿರುತ್ತಾರೆ. ಮೊದಲು ಅವರಿಗೆ ಇದನ್ನು ಕೊಟ್ಟು ಬನ್ನಿ.”

ಸುರಭಿಯ ಹಠದ ಮುಂದೆ ಅವಳನ್ನು ಅಪಾರ ಪ್ರೀತಿಸುತ್ತಿದ್ದ ರಾಜೀವ್ ‌ಸೋಲಲೇ ಬೇಕಾಯಿತು. ಒಲ್ಲದ ಮನದಿಂದಲೇ ಅದನ್ನು ಅವರಿಗೆ ಒಪ್ಪಿಸಿ ಬಂದ. ಆಗ ರಶ್ಮಿಯ ಕಂಗಳಲ್ಲಿ ಕಂಡುಬಂದ ಕೃತಜ್ಞತೆಯ ಕಣ್ಣೀರನ್ನು ಅವನು ತನ್ನ ಜನ್ಮಪೂರ್ತಿ ಮರೆಯಲಾರ. ಅವನ ಕಾಲಿಗೆರಗಿ ರಶ್ಮಿ ಧನ್ಯವಾದ ಸಲ್ಲಿಸಿದ್ದಳು.

ಹಿಂದಿನ ಆ ಪ್ರಸಂಗವನ್ನು ನೆನೆಯುತ್ತಾ ಬಾಲ್ಕನಿಯಲ್ಲಿ ನಿಂತಿದ್ದ ಮಡದಿಯ ಬಳಿ ಬಂದ ರಾಜೀವ್, “ಅಂದು ನಿನ್ನ ಮಾತು ಕೇಳಿದ್ದರಿಂದ ಇಂದು ನಮ್ಮದೆಷ್ಟು ಆದರ್ಶ ಕುಟುಂಬ ಎಂದು ಹೆಮ್ಮೆಯಾಗುತ್ತಿದೆ,” ಎಂದವನ ಎದೆಗೊರಗಿ ತೃಪ್ತಿಯ ನಗು ನಕ್ಕಳು ಸುರಭಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ