ಸತೀಶ : ಹೆಂಡತಿಗೆ ತಿಳಿಹೇಳುವುದು ಕಷ್ಟ ಅಂತಾರೆ, ಅದೇಕೆ ಹಾಗೆ?
ಮಹೇಶ : ನಿನ್ನಂಥ ಬ್ಯಾಚುಲರ್‌ಗೆ ಅದು ಗೊತ್ತಾಗೋಲ್ಲ ಬಿಡು. ನಿನ್ನ ಐ.ಟಿ. ಭಾಷೆಯಲ್ಲಿ ಹೇಳಬೇಕೆಂದರೆ, ವಿಡಿಯೋ ಡೌನ್‌ಲೋಡ್ ಮಾಡಲು ಕುಳಿತಾಗ, ಡೌನ್ ಲೋಡ್ ಆದನಂತರ ಎರರ್ ತೋರಿಸಿದಷ್ಟೇ ಕಷ್ಟಕರ ಅಂದುಕೋ!
ಪತ್ನಿ : ರೀ, ನಿಜವಾಗ್ಲೂ ನೀವು ತುಂಬಾ ಅಮಾಯಕರು. ಯಾರು ಬೇಕಾದರೂ ಸುಲಭವಾಗಿ ನಿಮ್ಮನ್ನು ಏಮಾರಿಸಬಹುದು.
ಪತಿ : ನಿಮ್ಮಪ್ಪ ಮಾಡಿದ್ದು ಅದೇ ಕೆಲಸ ತಾನೇ?
ಮಹೇಶ : ನಿನಗೆ ಗೊತ್ತೇ, ಆಟಂಬಾಂಬಿಗಿಂತಲೂ ಭಯಂಕರವಾದ 2 ವಸ್ತುಗಳಿವೆ ಅಂತ….!
ಸುರೇಶ್ : ಅದೇನಪ್ಪ ಅಂಥದ್ದು?
ಮಹೇಶ : ಮೊದಲನೆಯದು ಹೆಂಡತಿಯ ಕಣ್ಣೀರು, ಎರಡನೆಯದು, ನೆರೆಮನೆಯವಳ ಮಂದಹಾಸ.
ಸುಬ್ಬ ಸುಬ್ಬಿ ಒಂದು ಅಪಘಾತದ ದುರಂತದಲ್ಲಿ ಅಕಾಲ ಮರಣಕ್ಕೆ ತುತ್ತಾದರು. ಅದಾದ ಮೇಲೆ ಸುಬ್ಬ ದೆವ್ವವಾದ, ಸುಬ್ಬಿ ಪಿಶಾಚಿಯಾದಳು.
ಸುಬ್ಬಿ : ಅಬ್ಬಾ! ಸತ್ತ ಮೇಲೆ ನಿನ್ನ ರೂಪ ಎಷ್ಟು ಭಯಂಕರವಾಗಿದೆ, ಒಳ್ಳೆ ದೆವ್ವದ ತರಹ ಕಾಣಿಸ್ತಿದ್ದಿ!
ಸುಬ್ಬ : ಆದರೆ…. ಸತ್ತ ಮೇಲೂ ನೀನು ಬದಲಾಗಿಲ್ಲ ಅನ್ನೋದಂತೂ ನಿಜ. ಮೊದಲೂ ಪಿಶಾಚಿಯಂತಿದ್ದೆ, ಈಗಲೂ ಹಾಗೇ ಇರುವೆ. ನನ್ನನ್ನು ಗೋಳು ಹೊಯ್ದುಕೊಳ್ಳುವುದು ಮಾತ್ರ ಬಿಟ್ಟಿಲ್ಲ.
ನಿಂಗ : ಅಯ್ಯೋ ಸುಬ್ಬಾ…. ಅಲ್ಲಿ ನೋಡು! ನಿನ್ನ ಹೆಂಡತಿಯನ್ನು ಹಾವು ಕಚ್ಚುತ್ತಿದ್ದೆ….
ಸುಬ್ಬ : ಏ, ನೀನು ಕನ್‌ಫ್ಯೂಸ್ ಆಗಿದ್ದೀಯ. ಹಾವಿನ ವಿಷ ಖಾಲಿ ಆಗಿದೆ ಅನ್ಸುತ್ತೆ, ಅದು ರೀಚಾರ್ಜ್ ಮಾಡಿಕೊಳ್ಳಲು ಇವಳ ಹತ್ತಿರ ಬಂದಿರಬೇಕು.
ಪತ್ನಿ : ನಾನು ಶಾಪಿಂಗ್‌ಗೆ ಬಂದಿದ್ದೀನಿ. ಈಗ ನೀವೆಲಿದ್ದೀರಿ? ಆಫೀಸ್‌ನಲ್ಲಿ ಇಲ್ಲಾಂತ ಗೊತ್ತಾಯ್ತು. ಸರಿಯಾಗಿ ಹೇಳಿ.
ಪತಿ : ಬ್ಯಾಂಕ್‌ನಲ್ಲಿದ್ದೀನಿ….
ಪತ್ನಿ : ಸರಿ, ನನ್ನ ಹೊಸ ಫೋನ್‌ಗಾಗಿ 42 ಸಾವಿರ, ರೇಷ್ಮೆ ಸೀರೆಗಾಗಿ 25 ಸಾವಿರ ಬೇಕು.
ಪತಿ : ಬ್ಲಡ್ ಬ್ಯಾಂಕ್‌ನಲ್ಲಿದ್ದೀನಿ. ಹಣದ ಸುಲಿಗೆ ಬದಲು ರಕ್ತಾನೇ ಕುಡ್ಕೋ!
ಅನಿಲ್ : ಮೀಡಿಯಾಗೂ, ಮನೆಯಲ್ಲಿರುವ ಹೆಂಡತಿಗೂ ಸಮಾನತೆ ಇದೆ ಅಂತೀಯಾ?
ಸುನೀಲ್ : ಯಾಕಿಲ್ಲ? ಒಂದೇ ವಿಷಯವನ್ನು ಇಬ್ಬರಿಗೂ 10 ಸಲ ಹೇಳದಿದ್ದರೆ ಸಮಾಧಾನ ಆಗೋಲ್ಲ.
ವಿನಯ್ : ಮದುವೆಯನ್ನು ಯಾವುದಕ್ಕೆ ಹೋಲಿಸಬಹುದು?
ನವೀನ್ : ಮದುವೆ ಅನ್ನೋದು ಬಬ್ಬಲ್ ಗಮ್ ಇದ್ದಂತೆ, ಆರಂಭದಲ್ಲಿ ತುಸು ಸಿಹಿ ಅನ್ಸುತ್ತೆ. ಆಮೇಲೆ ಎಷ್ಟು ಅಗಿದರೂ ನಿಸ್ಸಾರವೇ!
ಪೊಲೀಸ್ : ಏನ್ರಿ ಪಾಟೀಲರೆ, ನಿಮ್ಮ ಮನೇಲಿ ವಿಸ್ಛೋಟಕ ವಸ್ತುಗಳು ಅಡಗಿವೆ ಅಂತ ನಮಗೆ ಸುದ್ದಿ ಬಂದಿದೆ. ಈಗಲೇ ನಿಮ್ಮ ಮನೆಯನ್ನು ತಲಾಶ್ ಮಾಡಬೇಕು.
ಪಾಟೀಲ್ : ಸರ….. ಖಬರ್ ಖರೇ ಐತ್ರೀ… ಆದ್ರೆ ಆಕಿ ಮನೀಲಿಲ್ರಿ… ತವ್ರಿಗೆ ಹೋಗ್ಯಾಳ…
ರವಿ : ನಿನ್ನೆ ರಾತ್ರಿ ನಿನ್ನ ಹೆಂಡತಿ ಯಾಕೆ ಅಷ್ಟು ಜೋರಾಗಿ ಜಗಳ ಆಡುತ್ತಿದ್ದಳು? 3 ಬೀದಿಗೆ ಕೇಳಿಸುತ್ತಿತ್ತು ಮಾರಾಯ ಅವಳ ಕಂಠ!
ಶಶಿ : ಅದೇನಿಲ್ಲ… ಅದೇನೂ ದೊಡ್ಡ ವಿಶೇಷವಲ್ಲ. ಅವಳ ಫೋಟೋ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಆಗುವ ಬದಲು ಓಎಲ್ಎಕ್ಸ್ ನಲ್ಲಿ ಆಯ್ತಲ್ವಾ….!?
ಮಹೇಶ ತನ್ನ ಹೆಂಡತಿ ಮೋಹಿನಿಯನ್ನು ಒಂದು ಡಿಸ್ಕೋಗೆ ಕರೆದುಕೊಂಡು ಹೋದ. ಅಲ್ಲಿ ಒಬ್ಬ ವ್ಯಕ್ತಿ ತಲೆ ಕೂದಲು ಓಲಾಡಿಸುತ್ತಾ ಹುಚ್ಚನಂತೆ ಎಗರೆಗರಿ ಕುಣಿಯುತ್ತಿದ್ದ.
ಮಾಧವಿ : ನೋಡ್ರಿ, ಈ ಫೇಮಸ್ ಡ್ಯಾನ್ಸರ್ ಒಂದು ಕಾಲದಲ್ಲಿ ಅಂದ್ರೆ 20 ವರ್ಷಗಳ ಹಿಂದೆ ನನಗೆ ಪ್ರಪೋಸ್ ಮಾಡಿದ್ದ. ನಾನೇ ಆಗಲ್ಲ ಅಂತ ರಿಜೆಕ್ಟ್ ಮಾಡಿಬಿಟ್ಟಿದ್ದೆ…
ಮಹೇಶ : ಇಷ್ಟು ವರ್ಷಗಳಾದರೂ ಆ ಖುಷಿಯನ್ನು ಇನ್ನೂ ಸೆಲೆಬ್ರೇಟ್ ಮಾಡುತ್ತಿದ್ದಾನೆ ಅನ್ನು!
ರೀಟಾ : ಏನಾಯ್ತೆ…. ಇತ್ತೀಚೆಗೆ ಸದಾ ಟೆನ್ಶನ್‌ನಲ್ಲೇ ಒದ್ದಾಡುತ್ತಿರುತ್ತೀಯಾ…..?
ಪ್ರೀತಾ : ಅದೇನೋ ಗೊತ್ತಿಲ್ಲ… ಆದರೆ ನನ್ನ ಪತಿ ಮನೆಯನ್ನು ಸ್ವರ್ಗ ಮಾಡೋಣ ಅಂದಾಗೆಲ್ಲ, ಅವರು ನನಗೆ ಡೈವೋರ್ಸ್‌ಕೊಡುವ ಬಗ್ಗೆ ಯೋಚಿಸುತ್ತಿದ್ದಾರೇನೋ ಅಂತ ಅಂದುಕೊಳ್ತೀನಿ.
ಪತಿ : ಮಗು ಆಗಿನಿಂದ ಒಂದೇ ಸಮ ಅಳ್ತಿದೆ, ಅದು ಕೇಳಿದ್ದನ್ನು ಕೊಡಬಾರದೇ?
ಪತ್ನಿ : ಕೇಳಿದ್ದನ್ನು ಕೊಟ್ಟಿದ್ದಕ್ಕೇ ಈ ಪಾಡು.
ಪತಿ : ಅದು ಕೇಳಿದ್ದಾದರೂ ಏನು?
ಪತ್ನಿ : ಅದಾ… ಮೆಣಸಿನಕಾಯಿ ಬಜ್ಜಿ!
ಪತಿ : ನಿನ್ನೆ ನನ್ನ ಕನಸಲ್ಲಿ ಒಬ್ಬ ಹುಡುಗಿ ಬಂದಿದ್ದಳು, ಆಹಾ…. ಎಂಥ ಗ್ಲಾಮರಸ್ ಅಂತೀಯಾ!
ಪತ್ನಿ : ಬಹುಶಃ ಅವಳು ಒಂಟಿಯಾಗಿ ಬಂದಿರಬೇಕು, ಅಲ್ಲವೇ?
ಪತಿ : ನಿನಗೆ ಹೇಗೆ ಗೊತ್ತಾಯ್ತು?
ಪತ್ನಿ : ಏಕೆಂದರೆ ಅವಳ ಬಾಯ್‌ಫ್ರೆಂಡ್ ನನ್ನ ಕನಸಲ್ಲಿ ಬಂದಿದ್ದ, ಎಂಥ ಹ್ಯಾಂಡ್‌ಸಮ್ ಗೊತ್ತಾ?
ಗಿರೀಶ್ : ಅದು ಸರಿ, ನಿನ್ನೆ ಫೇಸ್‌ಬುಕ್‌ನಲ್ಲಿ ಅಷ್ಟೊಂದು ಆಳವಾಗಿ ಮುಳುಗಿ ಹೋಗಿದ್ದೆಯಲ್ಲ…. ಅದೇಕೆ?
ಸತೀಶ : ನನ್ನ ಹೆಂಡತಿ ತನ್ನ ಸಮ ಯಾರೂ ಇಲ್ಲ ಅಂತ ಸದಾ ವಟಗುಟ್ಟುತ್ತಿರುತ್ತಾಳೆ. ಅದಕ್ಕೆ ಫೇಸ್‌ಬುಕ್‌ನಲ್ಲಿ ಸರ್ಚ್
ಕೊಟ್ಟಾಗ ಅವಳ ತರಹ 517 ಮಂದಿ ಹೆಂಗಸರು ಸಿಕ್ಕಿದರು!
ಪೂಜಾ : ನನ್ನ ಪತಿ ರೋಮ್ ನಲ್ಲಿ ನೆಲೆಸಿದ್ದಾರೆ ಗೊತ್ತಾ?
ಸ್ನೇಹಾ : ನನ್ನ ಪತಿ ನನ್ನ ರೋಮ ರೋಮದಲ್ಲೂ ನೆಲೆಸಿದ್ದಾರೆ…. ಗೊತ್ತಾ?
ಸುದ್ದಿ : ಆಧುನಿಕ ಶ್ರವಣಕುಮಾರರು ಇಂದಿಗೂ ಇದ್ದಾರೆ. “ಅಯ್ಯೋ, ಅದೇನು ಕೇಳ್ತೀಯಾ…. ನಮ್ಮ ಮನೆಯವರಿಗೆ ಶ್ರವಣ್ ಅಂತ ಹೆಸರಿಟ್ಟಿದ್ದೇ ಬಂತು, ಈ ಮನೆಯಲ್ಲಿ ಅವರಮ್ಮನ್ನ ಬಿಟ್ಟರೆ ಬೇರೆ ಯಾರೂ ಇಲ್ಲ ಅಂದುಕೊಂಡಿದ್ದಾರೆ, ಇನ್ನು ಅತ್ತೆ ವಿರುದ್ಧ ಎತ್ತಿಕಟ್ಟೋದೇನು ಬಂತು?”