ಪತ್ನಿ : ಏನ್ರಿ..... ನಿಮ್ಮ ತಲೆಯ ಕೂದಲು ಹೀಗೆ ಉದುರುತ್ತಾ ಹೋದರೆ ಒಂದು ದಿನ ತಲೆ ತಾಮ್ರದ ಚೊಂಬಾಗುತ್ತೆ. ಆಗ ನಾನು ನಿಮಗೆ ಡೈವೋರ್ಸ್ ಕೊಟ್ಟು ಹೋಗಿಬಿಡ್ತೀನಷ್ಟೆ.....
ಪತಿ : ಅಯ್ಯೋ ಹೌದಾ....? ಇದನ್ನು ಮೊದಲೇ ಹೇಳಬಾರದೇ? ನಾನು ಹುಚ್ಚನಂತೆ ತಲೆಯ ಮೇಲಿನ ಕೂದಲು ಉಳಿಸಿಕೊಳ್ಳಲು ಸಾವಿರಾರು ರೂ. ಖರ್ಚು ಮಾಡಿ ಚಿಕಿತ್ಸೆ ಪಡೆಯುತ್ತಿದ್ದೇನೆ.
ಹೊಸದಾಗಿ ಮದುವೆಯಾಗಿದ್ದ ಮಗಳು ತಾಯಿಗೆ ಫೋನ್ ಮಾಡಿ, ``ಅಮ್ಮಾ, ನಾನು ಇವರೊಂದಿಗೆ ಸಿಕ್ಕಾಪಟ್ಟೆ ಜಗಳ ಆಡಿಬಿಟ್ಟೆ! ಅದಕ್ಕೆ ಗಂಟುಮೂಟೆ ಕಟ್ಟಿಕೊಂಡು 3-4 ತಿಂಗಳು ನಮ್ಮ ಮನೆಗೇ ಬಂದುಬಿಡೋಣ ಅಂತಿದ್ದೀನಿ...'' ಎಂದಳು.
ಅದಕ್ಕೆ ತಕ್ಷಣ ಅವಳ ತಾಯಿ ಹೇಳಿದರು, ``ಇರು ಇರು.... ಜಗಳ ಶುರು ಮಾಡಿದನು ಅವನು. ಅಂದಮೇಲೆ, ಅವನಿಗೇ ತಾನೇ ಶಿಕ್ಷೆ ಆಗಬೇಕು? 5-6 ತಿಂಗಳು ನಾನು ಅಲ್ಲೇ ಬಂದು ಇದ್ದುಬಿಡ್ತೀನಿ ತಾಳು....'' ಎನ್ನುವುದೇ?
ಟೀನಾ : ನಾನು ಯಾವುದೇ ಪಾರ್ಟಿಗೆ ಹೋಗಲಿ, ಇವತ್ತಿನವರೆಗೂ ಯಾರಿಗೂ ನನ್ನ ವಯಸ್ಸು ಎಷ್ಟು ಎಂದು ನಿಖರವಾಗಿ ಹೇಳಲಾಗುವುದಿಲ್ಲ ಗೊತ್ತೇ? ಕೆಲವರು 20 ಅಂತಾರೆ, ಮತ್ತೆ ಕೆಲವರು 22 ಇರಬಹುದೇನೋ ಅಂತಾರೆ.
ರೀನಾ : ಅಯ್ಯೋ... ಅಪ್ಪಿತಪ್ಪಿ ನೀನೇ ಎಲ್ಲಾದರೂ ಬಾಯಿ ಬಿಟ್ಟೀಯ, ಮೊದಲೇ ಪಾರ್ಟಿ ಮೂಡ್‌ನಲ್ಲಿ ಇರ್ತೀಯ.
ಟೀನಾ : ನನ್ನನ್ನೇನು ಅಂಥ ಗುಗ್ಗು ಅಂದ್ಕೊಂಡಿದ್ದೀಯಾ? ಯಾವ ಗುಟ್ಟನ್ನು ನಾನು ಕಳೆದ 40 ವರ್ಷಗಳಿಂದ ಬಿಟ್ಟುಕೊಡಲಿಲ್ಲವೋ ಅದನ್ನು ಅಷ್ಟು ಸುಲಭವಾಗಿ ಹೇಳಿಬಿಡ್ತೀನಾ?
ಮಾಡರ್ನ್ ಮಾಲತಿಯ ಮದುವೆ ಗ್ರಾಂಡಾಗಿ ನಡೆಯುತ್ತಿತ್ತು. ಆಗ ಡಿ.ಜೆ. ಡ್ಯಾನ್ಸ್ ಬಗ್ಗೆ ಘೋಷಣೆ ಮಾಡುತ್ತಾ, ``ಯಾರಿಗೆ ಡ್ಯಾನ್ಸ್ ಬರುವುದಿಲ್ಲವೋ ಅವರು ತಮ್ಮ ಎಮ್ಮೆಗಳನ್ನು ಮೇಯಿಸಲು ಹೋಗಬಹುದು....'' ಎಂದು ಹಾಸ್ಯ ಮಾಡಿದ.
ತಕ್ಷಣ ಪುಟ್ನಂಜ ಹೆಂಡತಿಗೆ ಹೇಳಿದ, ``ನಡಿ ಕಣಮ್ಮಿ, ಬೇಗ ಬಫೆ ಊಟಕ್ಕೆ ಹೋಗೋಣ....''
ಶೀಲಾ : ಹೆಂಡತಿ ಅಂದರೆ ಹೇಗಿರಬೇಕು?
ಲೋಲಾ : ಪೇಪರ್ ವೆಯ್ಟ್ ತರಹ ಇರಬೇಕು. ಪೇಪರ್ ಪಟಪಟನೆ ಹೊಡೆದುಕೊಳ್ಳುವಂತೆ ಗಂಡನನ್ನು ಒದ್ದಾಡಿಸುತ್ತಾಳೆಯೇ ವಿನಾ, ಹಾರಿ ಹೋಗಲು ಬಿಡುವುದಿಲ್ಲ.
ಸುರೇಶ್ : ನನಗೆ ಇನ್ನೂ ಅರ್ಥವಾಗದ ವಿಷಯ ಅಂದ್ರೆ, ವಾಟ್ಸ್ಆ್ಯಪ್‌ನಿಂದ ದೊಡ್ಡ ಲಾಭವೇನು ಅಂತ?
ಮಹೇಶ್ : ಅದೇ.... ಹೆಂಗಸರು ಗುಸುಗುಸು ಅಂತ ಗುಟ್ಟು ಹಂಚಿಕೊಳ್ಳುತ್ತಲೇ ಇರುತ್ತಾರೆ, ಆದರೆ ಒಂದಿಷ್ಟೂ ಸದ್ದು ಹೊರಗೆ ಬರಲ್ಲವಲ್ಲ... ಹಾಗೇ!
ಪತಿ : ಇವತ್ತಿನ ಡಿನ್ನರ್‌ಗೆ ಬಿಗ್ ಚಾಯ್ಸ್ ಇದೆ ಅಂತ ಹೇಳ್ತಿದ್ದೆ... ಇಲ್ಲಿ ನೋಡಿದರೆ ರೊಟ್ಟಿಗೆ ಒಂದೇ ಒಂದು ಪಲ್ಯ ಇದೆಯಲ್ಲ....?
ಪತ್ನಿ : ಈಗಲೂ ಚಾಯ್ಸ್ ಇದ್ದೇ ಇದೆ... ಬೇಕಾದರೆ ತಿನ್ನೋದು, ಬೇಡಾದ್ರೆ ಬಿಡೋದು!
ಶಂಕ್ರು : ಹೆಂಡತಿ ಅನ್ನೋಳು ಮಾಫಿಯಾಗಿಂತ ಹೆಚ್ಚು ಅಪಾಯಕಾರಿ.... ಗೊತ್ತಾ?
ಸುಂದ್ರು : ಅದು ಹೇಗೆ?
ಶಂಕ್ರು : ಮಾಫಿಯಾಗೆ ಕೇವಲ ನಿಮ್ಮ ಆಸ್ತಿ ಅಥವಾ ಪ್ರಾಣ ಎರಡಲ್ಲೊಂದು ಮಾತ್ರ ಬೇಕಾಗುತ್ತೆ. ಆದರೆ ಹೆಂಡತಿ ಹಾಗಲ್ಲ, ಅವಳು ಗಂಡನ ಆಸ್ತಿ ಎಗರಿಸಿ ಪ್ರಾಣ ತೆಗೆಯುವವರೆಗೂ ಬಿಡಲ್ಲ!