ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆ ಜಿ. ರಾಜಲಕ್ಷ್ಮಿ ಶ್ರೀಧರ್ ಅವರದು ಸಂಗೀತ ಮನೆತನ. ಇವರ ತಂದೆ ದಿವಂಗತ ವಿದ್ವಾನ್ ಟಿ.ಆರ್. ಗೋಪಾಲನ್ ನಮ್ಮ ನಾಡಿನ ಶ್ರೇಷ್ಠ ಸಂಗೀತಾಗಾರರು. ಇವರು ಕೀರ್ತಿಶೇಷ ಮೈಸೂರು ಬಿ.ಕೆ. ಪದ್ಮನಾಭರಾಯರ ಪ್ರಮುಖ ಶಿಷ್ಯರು. ಅವರು ಮೈಸೂರು ವಾಸುದೇವಾಚಾರ್ಯರ ಶಿಷ್ಯರು. ಈ ಕಾರಣದಿಂದ ಜಿ. ರಾಜಲಕ್ಷ್ಮಿ ಶ್ರೀಧರ್ ಸಂಗೀತ ಕಲಾನಿಧಿ ಮೈಸೂರು ವಾಸುದೇವಾಚಾರ್ಯರ ಸಂಗೀತ ಪರಂಪರೆಗೆ ಸೇರಿದ್ದಾರೆ. ಜಿ. ರಾಜಲಕ್ಷ್ಮಿಯವರಿಗೆ ಬಾಲ್ಯದಿಂದಲೇ ತಂದೆಯವರಿಂದ ಕ್ರಮಬದ್ಧ ಸಂಗೀತ ಪಾಠ ಆಗಿದೆ.
ಈಕೆ ಆಕಾಶವಾಣಿ ಹಾಗೂ ದೂರದರ್ಶನದ ಉನ್ನತ ದರ್ಜೆ ಕಲಾವಿದೆ. ಇವರ ಸಂಗೀತ ಕಾರ್ಯಕ್ರಮಗಳು ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಮೂಡಿ ಬರುತ್ತಿರುತ್ತವೆ. ತಮ್ಮ 8ನೇ ವಯಸ್ಸಿನಲ್ಲಿ ಬೆಂಗಳೂರಿನ ಬಳೇಪೇಟೆಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಸಂಗೀತ ಕಚೇರಿ ನೀಡಿದ್ದಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿನ ಹಲವಾರು ಪ್ರತಿಷ್ಠಿತ ಸಂಗೀತ ಸಭೆಗಳು, ಉತ್ಸವಗಳಲ್ಲಿ ಇವರು ಅಮೋಘವಾಗಿ ಸಂಗೀತ ಕಚೇರಿಗಳನ್ನು ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು :
ಇವರು ಸಂಗೀತ ಸ್ನಾತಕೋತ್ತರ ಪದವಿಯ ವ್ಯಾಸಂಗದಲ್ಲಿದ್ದಾಗ, ಕೀರ್ತಿಶೇಷರಾದ ಆವನೂರು ಎಸ್. ರಾಮಕೃಷ್ಣ ಮತ್ತು ಬೆಂಗಳೂರು ಕೆ. ವೆಂಕಟರಾಮರಾಯರ ನಿರ್ದೇಶನದಲ್ಲಿ ವಿಶೇಷ ಪಲ್ಲವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮ ಅತ್ಯಂತ ವೈಶಿಷ್ಟ್ಯಪೂರ್ಣವಾಗಿದ್ದು, ಕಾರ್ಯಕ್ರಮಕ್ಕೆ ಸಂಗೀತ ದಿಗ್ಗಜರಾದ ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೈಯವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದರು. ಅವರು ರಾಜಲಕ್ಷ್ಮಿಯವರ ಗಾಯನವನ್ನು ಮೆಚ್ಚಿ 101/ ರೂ.ಗಳನ್ನು ಆಶೀರ್ವಾದಪೂರ್ವಕವಾಗಿ ನೀಡಿರುವುದು ನಿಜಕ್ಕೂ ಪ್ರಶಂಸನೀಯ!
ಇವರು ರಾಗ, ತಾಳ, ಪಲ್ಲವಿ ಹಾಡುಗಾರಿಕೆಗೆ ಅತ್ಯಂತ ಹೆಸರುವಾಸಿ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಆಶ್ರಯದಲ್ಲಿ ಬೆಂಗಳೂರಿನ `ಯವನಿಕಾ’ದಲ್ಲಿ ನಡೆದ ವಿಶೇಷ ಪಲ್ಲವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯಂತ ಕ್ಲಿಷ್ಟವಾದ `ಅಧಾನ’ ಪಲ್ಲವಿಯನ್ನು ಹಾಡಿ ಅನೇಕ ಘನ ವಿದ್ವಾಂಸರಿಂದ, ಸಭಿಕರಿಂದ ಶಹಭಾಸ್‌ಗಿರಿಯನ್ನು ಪಡೆದರು. ಸಂಗೀತಾಸಕ್ತರು ಒನ್ಸ್ ಮೋರ್ ಎಂದು ಕೂಗಿ ಮತ್ತೊಮ್ಮೆ ಇವರಿಂದ ಪಲ್ಲವಿ ಹಾಡಿಸಿದರು.
ಈ ಕಾರ್ಯಕ್ರಮಕ್ಕೆ ಅಧಾನ ಪಲ್ಲವಿ ಹಾಡುವುದರಲ್ಲಿ ಅತ್ಯಂತ ಖ್ಯಾತನಾಮರಾಗಿದ್ದ ಪಲ್ಲವಿ ಚಂದ್ರಪ್ಪನವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದು ವಿಶೇಷವೆನ್ನಬಹುದು.
ನಮ್ಮ ನಾಡಿನ ಪ್ರಖ್ಯಾತ ವೀಣಾ ವಿದ್ವಾಂಸರಾಗಿದ್ದ ಕೀರ್ತಿಶೇಷರಾದ ಡಾ. ವಿ. ದೊರೆಸ್ವಾಮಿ ಅಯ್ಯಂಗಾರ್ ಮತ್ತು ವಯೋಲಿನ್ ವಿದ್ಯಾಂಸರಾಗಿದ್ದ ಆವನೂರು ಎಸ್. ರಾಮಕೃಷ್ಣರ ಸಂಗೀತ ನಿರ್ದೇಶನ ಹಾಗೂ ಕಲಾ ವಿಮರ್ಶಕರಾಗಿದ್ದ ಕೀರ್ತಿಶೇಷ ಬಿ.ವಿ.ಕೆ. ಶಾಸ್ತ್ರೀಯವರ ವ್ಯಾಖ್ಯಾನದಲ್ಲಿ ಚೆನ್ನೈನ ಮ್ಯೂಸಿಕಲ್ ಅಕಾಡೆಮಿಯಲ್ಲಿ ಡಿ.ವಿ.ಜಿ.ಯವರ ಸುಪ್ರಸಿದ್ಧ ಅಂತಃಪುರ ಗೀತೆಗಳನ್ನು ಹಾಡಲು ವಿದ್ಯಾರ್ಥಿಗಳನ್ನು ಆಡಿಷನ್ ಮಾಡಿ ಆರಿಸಲಾಯಿತು. ಅದರಲ್ಲಿ ಜಿ. ರಾಜಲಕ್ಷ್ಮಿ ಶ್ರೀಧರ್ ಕೂಡ ಒಬ್ಬರು. ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಂಗೀತ ದಿಗ್ಗಜರಾದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಎಂ.ಡಿ. ರಾಮನಾಥನ್, ಡಿ.ಕೆ. ಜಯರಾಮನ್ ಮುಂತಾದವರೆಲ್ಲರೂ ಆಗಮಿಸಿದ್ದು, ಎಲ್ಲರೂ ಈ ಕಾರ್ಯಕ್ರಮವನ್ನು ಮೆಚ್ಚಿದ್ದರು. ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ಇವರಿಗೆ ಮೆರಿಟ್ ಸ್ಕಾಲರ್‌ಶಿಪ್ ಲಭಿಸಿದ್ದು, ಅಂದಿನ ಮಂತ್ರಿಗಳಾಗಿದ್ದ ಸ್ಪೀಕರ್ ನಾಗರತ್ನಮ್ಮನವರು ಇದನ್ನು ಪೊಡ ಮಾಡಿದರು.
ಪ್ರಮುಖ ಸಂಗೀತ ಕಚೇರಿಗಳು
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕಾರ್ಕಳದಲ್ಲಿ ಸಂಗೀತ ಕಾರ್ಯಕ್ರಮ, ಸುನಾದ ಸಂಗೀತ ಕಲಾ ಶಾಲೆ, ಪುತ್ತೂರು, ದಕ್ಷಿಣ ಕನ್ನಡ, ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ, ಬಪ್ಪನಾಡು, ದಕ್ಷಿಣ ಕನ್ನಡ, ಬೆಂಗಳೂರಿನ ರಾಜಾಜಿನಗರ ಇನ್‌ಸ್ಟಿಟ್ಯೂಟ್‌ಆಫ್ ಮ್ಯೂಸಿಕ್, ಶ್ರೀ ತ್ಯಾಗರಾಜ ಸಂಗೀತ ಸಭಾ, ಮೈಸೂರು ಹಾಗೂ ಬೆಂಗಳೂರು, ಜೆ.ಎಸ್‌ಎಸ್. ಸಂಗೀತ ಸಭಾ ಟ್ರಸ್ಟ್, ಮೈಸೂರು, (ಮೈಸೂರು ವಾಸುದೇವಾಚಾರ್ಯರ ಅಪರೂಪದ ರಚನೆಗಳು ಹಾಗೂ ಪಂಚನಡೆ ಪಲ್ಲವಿ), ಕರ್ನಾಟಕ ಗಾನಕಲಾ ಪರಿಷತ್ ಬೆಂಗಳೂರು, ಬೆಂಗಳೂರು ಗಾಯನ ಸಮಾಜ, ಮೈಸೂರಿನ ಎನ್.ಐ.ಇ. ಕಾಲೇಜು, ಗಾನಭಾರತಿ, ನಾದಮಂದಿರ, ಅರಮನೆ ಸಂಗೀತೋತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ದಸರಾ ಮಹೋತ್ಸವ (ವೀಣೆ ಶೇಷಣ್ಣ ಭವನದಲ್ಲಿ) ತಲಕಾಡು ಉತ್ಸವ, ವಾದಿರಾಜರ ಆರಾಧನಾ, ವಾದಿರಾಜ ವಿರಚಿತ ಮ್ಯೂಸಿಕ್ ಓಪೇರಾ `ಭ್ರಮರ ಗೀತಂ’ ಪರಿಕಲ್ಪನೆ, ರಚನೆ, ಸಂಗೀತ ನಿರ್ದೇಶನ, ಹಾಡುಗಾರಿಕೆ, ಪ್ರೊ. ಆರ್. ವಿಶ್ವೇಶ್ವರನ್ ಮುಂತಾಗಿ ಇನ್ನೂ ಅಸಂಖ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮ ನೀಡಿದ್ದಾರೆ.
ವೃತ್ತಿ ಜೀವನದ ಅನುಭವ
ಇವರು ಆಕಾಶವಾಣಿಯಲ್ಲಿ ಸಹಾಯಕ ನಿರ್ದೇಶಕರಾಗಿ ದೀರ್ಘ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಸಂಗೀತ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಾರ್ಯಕ್ರಮಗಳನ್ನು ಅತ್ಯುತ್ತಮವಾಗಿ ನೀಡಿದ್ದಾರೆ. ಯು.ಪಿ.ಎಸ್.ಸಿ.ಯ ಸ್ಪರ್ಧಾತ್ಮಕ ಸಂದರ್ಶನದಲ್ಲಿ ಇರುವ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಪ್ರೋಗ್ರಾಮ್ ಎಗ್ಸಿಕ್ಯುಟಿವ್ ಆಗಿ ಆಯ್ಕೆ ಆಗಿದ್ದು, ಇವರ ಪ್ರತಿಭೆಗೆ ಸಾಕ್ಷಿ. ಮೈಸೂರು ಆಕಾಶವಾಣಿಯ ಕಾಫಿ ತಿಂಡಿ ಕಾರ್ಯಕ್ರಮದಲ್ಲಿ ಹಲಲವಾರು ಕ್ಷೇತ್ರಗಳ ದಿಗ್ಗಜರನ್ನು ಮಾತನಾಡಿಸಿದ ಹೆಗ್ಗಳಿಕೆ ಇವರದು. ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್, ಡಾ. ರಂಗನಾಥ್, ಪ್ರೊ. ಆರ್. ವಿಶ್ವೇಶ್ವರನ್, ಎಸ್.ಕೆ. ಸುಮತಿ, ಅಂದಿನ ಸಚಿವೆ ಶೋಭಾ ಕರಂದ್ಲಾಜೆ ಮುಂತಾಗಿ ಇನ್ನೂ ಅನೇಕ ಗಣ್ಯರ ಸಂದರ್ಶನ ಮಾಡಿ ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ನಡೆಸಿಕೊಡುತ್ತಿದ್ದ `ನವಿಲುಗರಿ’ ಕಾರ್ಯಕ್ರಮ ಬಹಳ ಪರಿಣಾಮಕಾರಿಯಾಗಿತ್ತು. ಶಾಸ್ತ್ರೀಯ ಸಂಗೀತದ ಬಗ್ಗೆ ಒಲವು ಮೂಡಿಸಲು `ನವಿಲುಗರಿ’ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು. ಸುಮಾರು 69 ರಾಗಗಳ ಬಗ್ಗೆ ಕೇಳುಗರಿಗೆ ಮಾಹಿತಿ ನೀಡಿದ್ದಾರೆ. ಇವರು ಸಂಗೀತದ ಬಗ್ಗೆ ನಡೆಸುತ್ತಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಭಾಗವಹಿಸುತ್ತಿದ್ದುದು ವಿಶೇಷ. ಹಾಗಾಗಿ ಇವರು `ರೇಡಿಯೋ ಸಂಗೀತದ ಗುರು’ಗಳೆಂದೇ ಪ್ರಖ್ಯಾತರು. ಆಕಾಶವಾಣಿಯಲ್ಲಿ ಬ್ರಿಟನ್ನಿನ ಎಕ್ಸ್ ಮೇಯರ್ ಕನ್ನಡಿಗ ನೀರಜ್ ಪಾಟೀಲ್‌ರ ಸಂದರ್ಶನ ಮಾಡಿದ ಹೆಗ್ಗಳಿಕೆ ಕೂಡ ಇವರದು.
ಇವರು ನಿರ್ಮಿಸಿದ ಸೃಜನಶೀಲ ಕಾರ್ಯಕ್ರಮಗಳಾದ ನಿಸರ್ಗ ವಂದನ 2002 ಹಾಗೂ ವಚನಗಳಿಗೆ ಪದ ವೈದ್ಯ 2008 ಗಳಿಗೆ ಎರಡು ಬಾರಿ ರಾಜ್ಯಮಟ್ಟದ ಆಕಾಶವಾಣಿ ವಾರ್ಷಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ.
ಅಲ್ಲದೆ, `ಆಹತ ಅನಾಹತ’ ಎಂಬ ಸಂಗೀತ ರೂಪಕ ಮತ್ತು `ವಚನ ಪದ ವೈದ್ಯ’ದ ನಾಲ್ಕು ಕಾರ್ಯಕ್ರಮಗಳಿಗೆ ಪತ್ರಿಕೆಗಳಲ್ಲಿ ಸಾಕಷ್ಟು ಪ್ರಚಾರ ಸಿಕ್ಕಿದೆ. ಡಾ. ಸಿ. ನಾಗಣ್ಣ ಅವರಂತಹ ಪ್ರಖ್ಯಾತ ಪ್ರೊಫೆಸರ್ ಈ ಕಾರ್ಯಕ್ರಮ ಮೆಚ್ಚಿದ್ದಾರೆ.
ಈಚೆಗೆ ಹಾಸನ ಆಕಾಶವಾಣಿ ವತಿಯಿಂದ ಹಾಸನದ ಎಸ್.ಆರ್.ಎಸ್. ಚೌಲ್ಟ್ರಿಯಲ್ಲಿ ನಾಡಿನ ಸುವಿಖ್ಯಾತ ಸಂಗೀತ ಕಲಾವಿದೆ ಡಾ. ಸುಕನ್ಯಾ ಪ್ರಭಾಕರ್ ಅವರ ನಿರ್ದೇಶನದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ಜಿ. ರಾಯಲಕ್ಷ್ಮಿ ಶ್ರೀಧರ್‌ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿಯೇ ಸರಿ. ಈ ಕಾರ್ಯಕ್ರಮದ ಪರಿಕಲ್ಪನೆ ಹಾಗೂ ನಿರ್ಮಾಣ ಕೂಡ ಇವರದ್ದೇ. ಮೊಟ್ಟ ಮೊದಲ ಬಾರಿಗೆ ಮೈಸೂರು ಆಕಾಶವಾಣಿಯ `ರಾಗೋಲ್ಲಾಸ’ ಕಾರ್ಯಕ್ರಮದಲ್ಲಿ `ಮೇಳ ರಾಗೋಲ್ಲಾಸ’ ಕಾರ್ಯಕ್ರಮವನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಕಾರ್ಯಕ್ರಮಗಳನ್ನು ಕೇಳಿದ ಪ್ರೊ. ಜಿ.ಟಿ. ನಾರಾಯಣರಾವ್, ದೂರವಾಣಿ ಕರೆ ಮೂಲಕ, ಈ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡು, ಪುನಃ ಪ್ರಸಾರ ಮಾಡಬೇಕೆಂದೂ, ಅದರಿಂದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತಿದೆ ಎಂದರು.
ಕಾರ್ಯಕ್ರಮಗಳ ನಿರೂಪಕಿಯಾಗಿ ನಿರೂಪಣೆ ಇವರ ಅತ್ಯಂತ ಪ್ರಿಯ ಕ್ಷೇತ್ರ. ಉತ್ಸಾಹಭರಿತ, ಚೇತೋಹಾರಿ, ಸ್ಪಷ್ಟ ಮಧುರ ಧ್ವನಿಯಲ್ಲಿ ಮೂಡಿಬರುವ ನಿರೂಪಣೆ ಎಂತಹವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅನೇಕ ಪ್ರತಿಷ್ಠಿತ ಸಂಘಸಂಸ್ಥೆಗಳ ಕಾರ್ಯಕ್ರಮಗಳಿಗೆ ನಿರೂಪಣೆ ನೀಡಿದ್ದಾರೆ.
ಗಾನ ಗಾರುಡಿಗ ಡಾ. ಪಿ.ಬಿ. ಶ್ರೀನಿವಾಸ್ ಅವರ ಸಂಸ್ಮರಣೆಯಲ್ಲಿ ಕೊಳ್ಳೇಗಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದರ ನಿರೂಪಣೆ ಮಾಡಿ ಚಿತ್ರಗೀತೆ ಹಾಡಿರುವುದು ವಿಶೇಷ.
ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ `ರಾಗ ತರಂಗ’ ಏರ್ಪಡಿಸಿದ್ದ `ಭಾವ ಮಂಥನ’ ಕಾರ್ಯಕ್ರಮಕ್ಕೆ ಕಂಠದಾನ ಮಾಡಿದ್ದಾರೆ. ಭಾಸಂಗೆ ಬಳಗ, ಮೈಸೂರು ಇವರು ಮೈಸೂರಿನ ನಾದಬ್ರಹ್ಮ ಸಂಗೀತ ಸಭೆಯಲ್ಲಿ ನಡೆಸಿದ `ವಸಂತಗಾನ’ ಕಾರ್ಯಕ್ರಮದ ನಿರೂಪಣೆ ಅಪಾರ ಮೆಚ್ಚುಗೆ ಗಳಿಸಿತ್ತು. ಪ್ರಖ್ಯಾತ ಇ.ಎನ್.ಟಿ. ವೈದ್ಯ ಡಾ. ಎಂ.ಎಸ್. ನಟ ಶೇಖರ್ ಅವರು ಹೊರತಂದ `ವಚನ ಗಾಯನ ಗಂಗಾ’ ಸಿ.ಡಿ. ಕಾರ್ಯಕ್ರಮಕ್ಕೆ ಹಾಗೂ ಡಾ. ಎ.ಎಲ್. ಹೇಮಲತಾ ಅವರ ಹಾಡುಗಳ ಸಿ.ಡಿ. ಬಿಡುಗಡೆ ಕಾರ್ಯಕ್ರಮದಲ್ಲೂ ರಾಜಲಕ್ಷ್ಮೀ ಶ್ರೀಧರ್ ಅವರದ್ದೇ ಅಚ್ಚುಕಟ್ಟಾದ ನಿರೂಪಣೆ ಇತ್ತು.
ಬಹುಮಾನ ಪ್ರಶಸ್ತಿ ಸನ್ಮಾನ
ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರಿಂದ ಪ್ರಥಮ ಬಹುಮಾನ ಸ್ವೀಕರಿಸಿದ್ದಾರೆ. ರೋಟರಿ ಸಂಸ್ಥೆ ನಡೆಸಿದ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಬೆಳ್ಳಿ ಪದಕ, ಬೆಂಗಳೂರು ಗಾಯನ ಸಮಾಜದ ಜೂನಿಯರ್ ವಿಭಾಗದ ಸಂಗೀತ ಕಚೇರಿಗಾಗಿ ಮೆರಿಟ್‌ಸರ್ಟಿಫಿಕೇಟ್, ವಿಕ್ರಮ್ ಆಸ್ಪತ್ರೆಯ ಡಾ. ಎಚ್.ವಿ. ಸತೀಶ್ ಅವರಿಂದ ಪ್ರಶಂಸಾ ಪತ್ರ, ವಿಕ್ರಮ್ ಆಸ್ಪತ್ರೆಯ ಡಾ. ವಿಕ್ರಮ್ ನಿರ್ಮಿಸಿದ `ವಿಕ್ರಮ್ ರೇಡಿಯೋ ಡಾಕ್ಟರ್’ ಸರಣಿ ಕಾರ್ಯಕ್ರಮಗಳಿಗೆ, ಕ್ಯಾನ್ಸರ್ ಬಗ್ಗೆ ಇವರೇ ನಿರೂಪಣೆ ಮಾಡಿದ 26 ಸರಣಿ ಕಾರ್ಯಕ್ರಮಗಳಿಗೆ ಶ್ರೋತೃಗಳಿಂದ, ಬರವಣಿಗೆ ತಜ್ಞ ಎಸ್. ನಾರಾಯಣ್‌ರಿಂದ, ಪ್ರೊ. ಆರ್. ವಿಶ್ವೇಶ್ವರನ್‌ರಿಂದ ಆರೋಗ್ಯ ಕಾರ್ಯಕ್ರಮಗಳಿಗೆ, ಖ್ಯಾತ ಸಂಗೀತ ವಿದ್ವಾನ್ ಟಿ.ಪಿ. ವೈದ್ಯನಾಥನ್‌ರಿಂದ ಸಂಗೀತ ಕಾರ್ಯಕ್ರಮಕ್ಕೆ ಪ್ರಶಂಸಾಪತ್ರಗಳು ದೊರಕಿವೆ.
2015-16ನೇ ಸಾಲಿನ ಅಕಾಡೆಮಿಯ `ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಗಾನ ಸೌರಭ ಕಲಾ ಕೇಂದ್ರದ ವತಿಯಿಂದ ಗಾನ ಕಲಾಕೌಸ್ತುಭ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ 2011ರಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಹಾಗೂ ಸಮರ್ಪಣಾ ಸಂಸ್ಥೆ ವತಿಯಿಂದ, 2011ರಲ್ಲಿ ಜೆ.ಎಸ್.ಎಸ್. ಸಂಗೀತ ಸಭೆಯ 18ನೇ ಸಂಗೀತ ಸಮ್ಮೇಳನದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ , 2009ರಲ್ಲಿ ವೀಣಾ ಶಾಮಣ್ಣ ಪ್ರತಿಷ್ಠಾನದಿಂದ, 2013ರಲ್ಲಿ ಸಮುದ್ಯತಾ ಶ್ರೋತೃ ಸಂಘದಿಂದ, ಸೋರಟ್ ಅಶ್ವಥ್ ಸಂಗೀತ ಶಾಲೆಯಿಂದ, ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ, ಮೈಸೂರಿನ ವಾಗ್ದೇವಿ ಕಲಾ ಸಂಘದಿಂದ ಸನ್ಮಾನಗಳು ಸಂದಿವೆ. ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಣೆ ಗಾನವಾಣಿ, ಮೈಸೂರು (2008)
ಮೈಸೂರು ದಸರಾ ಮಹೋತ್ಸ (2009)
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವಿದ್ಯಾರ್ಥಿಗಳಿಗೆ ಪೊಡ ಮಾಡು ವಿದ್ಯಾರ್ಥಿ ವೇತನಕ್ಕೆ ತೀರ್ಪುಗಾರರು.
ಆಕಾಶವಾಣಿಯ ಲೋಕಲ್ ಆಡಿಷನ್ ಕಮಿಟಿಯಲ್ಲಿ ತೀರ್ಪುಗಾರರು.
ಸಾಂಗ್ಸ್ ಡ್ರಾಮಾ ಡಿವಿಷನ್ ಕಲಾ ತಂಡಗಳ ಆಯ್ಕೆಗೆ ನಡೆಸುವ ಧ್ವನಿ ಪರೀಕ್ಷೆಗೆ ತೀರ್ಪುಗಾರರಾಗಿ ಸೇಲೆ ಸಲ್ಲಿಸಿದ್ದಾರೆ.
ಹಲವಾರು ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಅಲ್ಲದೆ, ಅಸಂಖ್ಯ ಕಾರ್ಯಕ್ರಮಗಳು, ಉಪನ್ಯಾಸಗಳಲ್ಲಿ, ಪ್ರಾತ್ಯಕ್ಷಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಸಹೃದಯವಂತೆ ರಾಜಲಕ್ಷ್ಮಿ ಶ್ರೀಧರ್ ಅವರು ಸಂಗೀತ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿದ್ದರೂ ನಿಗರ್ವಿ. ಸಾಧನೆಗೆ ಕೊನೆಯೇ ಇಲ್ಲ, ಸಾಧಿಸಬೇಕಾದದ್ದು ಇನ್ನೂ ಬಹಳ ಇದೆ ಎಂದು ವಿನಮ್ರರಾಗಿ ಹೇಳುತ್ತಾರೆ.
– ಬಿ. ಬಸವರಾಜು