ಈಗೆಲ್ಲ ನಮ್ಮ ಲೈಫ್ ಬಹಳ ಅವ್ಯವಸ್ಥಿತಗೊಂಡಿದೆ. ಹೀಗಿರುವಾಗ ನೀವು ಹರ್ಬಲ್ ಬಾಥ್ ಅಥವಾ ರಾಯಲ್ ಬಾಥ್‌ಗೆ ತೊಡಗಿದಾಗ ಮಾತ್ರ ನಿಮಗೆ ಅದ್ಭುತ ತಾಜಾತನದ ಅನುಭವ ಸಿಗಲು ಸಾಧ್ಯ. ಹೀಗಾಗಿ ಇಂಥ ಲಕ್ಷುರಿ ಬಾಥ್ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ?
ಕ್ಲಿಯೋಪಾತ್ರಾ ಬಾಡಿ ಪಾಲಿಶಿಂಗ್
ಇತಿಹಾಸದ ಅತಿ ಸುಂದರ ಮಹಿಳೆಯರಲ್ಲಿ ಈಜಿಪ್ಟ್ ನ ಮಹಾರಾಣಿ ಕ್ಲಿಯೋಪಾತ್ರಾ ತನ್ನ ಸೌಂದರ್ಯ ಉಳಿಸಿಕೊಳ್ಳಲು ಶುದ್ಧ ಹಾಲಿನಿಂದ ಸ್ನಾನ ಮಾಡುತ್ತಿದ್ದಳಂತೆ! ತುರ್ಕಿಯ ಅಧ್ಯಯನಗಳ ಪ್ರಕಾರ ಈ ಮಹಾರಾಣಿ ತನ್ನ ಚಿರಯೌವನ ಉಳಿಸಿಕೊಳ್ಳಲೆಂದು ಕತ್ತೆ ಹಾಲಿನಲ್ಲೇ ಸ್ನಾನ ಮಾಡುತ್ತಿದ್ದಳಂತೆ. ಹೀಗೆ ತಮ್ಮ ಸೌಂದರ್ಯ ಸಂವರ್ಧನೆಗಾಗಿ ವಿಚಿತ್ರ ಹವ್ಯಾಸ ಬೆಳೆಸಿಕೊಂಡರಲ್ಲಿ ಈಕೆ ಒಬ್ಬಳೇ ಅಲ್ಲ. ಇದರಿಂದ ತಿಳಿದುಬರುವ ಅಂಶವೆಂದರೆ, ಹಸುವಿನ ಹಾಲಿಗಿಂತ ಕತ್ತೆಯ ಹಾಲಿನಲ್ಲಿ ಜಿಡ್ಡಿನಂಶ ಕಡಿಮೆ ಎಂಬುದು ಖಾತ್ರಿಯಾಯ್ತು.
ನೀವು ಸಹ ನಿಮ್ಮ ಸೌಂದರ್ಯ ಉಳಿಸಿಕೊಳ್ಳಲು ಹಾಲಿನ ಸ್ನಾನ ಮಾಡಲು ಬಯಸುವಿರಾ? `ಕ್ಲಿಯೋಪಾತ್ರಾ ಬಾಡಿ ಮಸಾಜ್’ ಎಂದರೆ ಬಾಡಿ ಪಾಲಿಶಿಂಗ್ ಎಂದರ್ಥ, ಇಲ್ಲಿ ಕ್ಷೀರಾಭಿಷೇಕವೇ ಪ್ರಧಾನ.
ಇದಕ್ಕಾಗಿ ಸೌಂದರ್ಯ ತಜ್ಞೆಯರು ಮೊದಲು ಮಖಮಲ್ ಬಟ್ಟೆಯಲ್ಲಿ ಹಲವಾರು ಬಗೆಯ ಗಿಡಮೂಲಿಕೆ ಬೆರೆಸಿ ಮಿಶ್ರಣ ತಯಾರಿಸಿಕೊಂಡು, ಆ ಗಂಟನ್ನು ಬೆಚ್ಚಗಿನ ಹಾಲಿನಲ್ಲಿ ಅದ್ದಿ, ರಾಯಲ್ ಬಾಥ್‌ಗಾಗಿ ಬಂದವರ ದೇಹದ ಮೇಲೆ ಉಜ್ಜಿ ಮಸಾಜ್‌ಮಾಡುತ್ತಾರೆ. ಈ ರೀತಿ 10 ನಿಮಿಷ ಸತತ ಮಸಾಜ್ ಮಾಡಿದ ನಂತರ, ತಮ್ಮ ಕೈಗಳಿಂದ ಅದುಮುತ್ತಾ ಮಸಾಜ್ ಮಾಡುತ್ತಾರೆ. ಇಂಥ ಮಸಾಜ್‌ನಿಂದ ಬಾಡಿಯ ಡೆಡ್ ಸ್ಕಿನ್‌ತೊಲಗಿಹೋಗುತ್ತದೆ ಹಾಗೂ ಟ್ಯಾನಿಂಗ್ ಸಹ ದೂರಾಗುತ್ತದೆ. ಈ ಗಂಟಿನಲ್ಲಿನ ಮಿಶ್ರಣವನ್ನು (ಸ್ಕ್ರಬ್) ನೈಸರ್ಗಿಕವಾಗಿ ತಯಾರಿಸಲಾಗಿದೆ. ಇದು ಒಂದು ಪ್ರಾಕೃತಿಕ ಚಿಕಿತ್ಸೆಯಾಗಿದೆ. ಇದಕ್ಕೆ ಯಾವುದೇ ಸೈಡ್ ಎಫೆಕ್ಟ್ಸ್ ಇರುವುದಿಲ್ಲ. ಈ ನ್ಯಾಚುರಲ್ ಮಸಾಜ್ ಆದ 1-2 ವಾರ, ಕೆಮಿಕಲ್ ಮಸಾಜ್‌ಮಾಡಿಸಬಾರದೆಂಬುದನ್ನು ಗಮನಿಸಿ. ಈ ಮಿಲ್ಕ್ ಮಸಾಜ್‌ನ ಮುಖ್ಯ ಲಾಭ ಎಂದರೆ, ಇದು ತ್ವಚೆಯ ಡೆಡ್ ಸ್ಕಿನ್‌ನ್ನು ಬೇಗ ತೊಲಗಿಸುತ್ತದೆ ಹಾಗೂ ಟ್ಯಾನಿಂಗ್ ಕೊನೆಗೊಳಿಸುತ್ತದೆ. ಇದರಿಂದ ಚರ್ಮ ಅತಿ ಮೃದುವಾಗುತ್ತದೆ.
ಈ ಮಿಶ್ರಣದಲ್ಲಿ ಬೆರೆತ ಹರ್ಬಲ್ ಅಂಶಗಳಲ್ಲೇ ಚರ್ಮವನ್ನು ಶುದ್ಧೀಕರಿಸಿ ಕಾಂತಿ ಹೆಚ್ಚಿಸುವ ಅಂಶ ಬೆರೆತಿರುತ್ತದೆ. ಇದನ್ನು ಹಾಲಿನಲ್ಲಿ ಮತ್ತೆ ಮತ್ತೆ ಅದ್ದಿ ಮಸಾಜ್ ಮಾಡುವುದರಿಂದ ಚರ್ಮಕ್ಕೆ ಕೋಮಲತೆ, ಸೌಂದರ್ಯ ತಂತಾನೇ ಒದಗುತ್ತದೆ. ಹಾಲಿನ ಮಸಾಜ್‌ನಿಂದ ಚರ್ಮ ಅಂಟಂಟಾಗುವುದಿಲ್ಲ. ಈ ಮಿಶ್ರಣದಲ್ಲೇ ಅಂಥ ಉನ್ನತ ಅಂಶಗಳು ಅಡಗಿದ್ದು, ಚರ್ಮವನ್ನು ಎಲ್ಲಾ ವಿಧದಲ್ಲೂ ಕಾಪಾಡುತ್ತದೆ.
ಬಿಸಿ ನೀರು ಅಥವಾ ಬೆಚ್ಚಗಿನ ಹಾಲಿನಲ್ಲಿ ಸ್ನಾನ ಮಾಡುವುದರಿಂದ ದೇಹದ ಮಾಂಸಖಂಡಗಳಿಗೆ ಎಷ್ಟೋ ಹಿತವೆನಿಸುತ್ತದೆ. ಅಷ್ಟು ಮಾತ್ರವಲ್ಲದೆ, ಚರ್ಮದ ರೋಮರಂಧ್ರಗಳು ತೆರೆದುಕೊಳ್ಳುತ್ತವೆ. ಇದರಿಂದ ಹೊರಗಿನ ಗಾಳಿ ಒಳಹೊಕ್ಕು, ಒಳಗಿನ ಬೆವರು ಹೊರಬಂದು, ದೇಹದ ತಾಪಮಾನ ಬ್ಯಾಲೆನ್ಸ್ ಆಗುತ್ತದೆ. ಬಾಥ್ ಟಬ್‌ನಲ್ಲಿ ತುಂಬಿರುವ ಬಿಸಿ ನೀರಲ್ಲಿ ದೇಹವನ್ನು ಮುಳುಗಿಸಿ ಸ್ನಾನ ಮಾಡುವುದರಿಂದ ದೇಹದ ಪ್ರತಿ ಭಾಗಕ್ಕೂ ಹಿತವೆನಿಸುತ್ತದೆ. ಆದರೆ ನೀರು ಹೆಚ್ಚು ಬಿಸಿ ಆಗಿರಬಾರದು.
ರಾಯಲ್ ಥಾಯ್ ಮಸಾಜ್
ರಾಯಲ್ ಥಾಯ್ ಮಸಾಜ್ ಎಂದರೆ ತೈಲ ರಹಿತ ಡ್ರೈ ಮಸಾಜ್. ಇದರಲ್ಲಿ ಹಸ್ತ, ಮೊಣಕೈ, ಕಾಲುಗಳ ಮೇಲೆ ಒತ್ತಡ ಹೇರಿ ಮಸಾಜ್ ಮಾಡಲಾಗುತ್ತದೆ. ರಾಯಲ್ ಥಾಯ್ ಮಸಾಜ್‌ನಲ್ಲಿ ಹರ್ಬಲ್ ಮಿಶ್ರಣದಿಂದ ಮೃದುವಾಗಿ ಮಾಲಿಶ್ ಮಾಡಲಾಗುತ್ತದೆ. ಇದರಿಂದ ಆಸ್ತಮಾ, ಮೈಗ್ರೇನ್, ಉಳುಕು, ಉದ್ವಿಗ್ನತೆ ಇತ್ಯಾದಿಗಳನ್ನು ದೂರವಿಡಬಹುದಾಗಿದೆ. ಇದು ಮಾಂಸಖಂಡಗಳನ್ನು ಹಗುರಗೊಳಿಸಿ, ಅದರಲ್ಲಿ ರಕ್ತಸಂಚಾರ ಹೆಚ್ಚಿಸುತ್ತದೆ. ಮುಖ್ಯವಾಗಿ ಕ್ರೀಡಾಪಟುಗಳಿಗೆ ಇದು ಹೆಚ್ಚು ಲಾಭಕರ. ಯಾರಿಗೆ ತೈಲದ ಮಸಾಜ್ ಅಲರ್ಜಿಯೋ ಅವರಿಗೆ ಇದು ಬಲು ಲಾಭಕರ.
ರಿಪುಂಜೆ ಫೇಶಿಯ್ (ಹರ್ಬಲ್)
ಎಲ್ಲಕ್ಕೂ ಮೊದಲು ಮುಖವನ್ನು ಗುಲಾಬಿ ಜಲದಿಂದ ನಿಧಾನವಾಗಿ ತೊಳೆಯಿರಿ. ನಂತರ ಬಾದಾಮ್ ರೋಗನ್‌ನ (ರೆಡಿಮೇಡ್) ಕೆಲವು ಹನಿಗಳನ್ನು ಕೈಗೆ ಹಾಕಿಕೊಂಡು ಮುಖಕ್ಕೆ ತೀಡಿ ಮಸಾಜ್ ಮಾಡಿ. ಇದರಲ್ಲಿ ನೀರನ್ನು ಬಳಸುವುದಿಲ್ಲ. ಹೀಗೆ 10 ನಿಮಿಷ ಮಾಡಬೇಕು. ತಜ್ಞರಿಗೆ ಹೇಳಿ, ನೀವು ಎಷ್ಟು ಒತ್ತಡ ಸಹಿಸಬಹುದೋ ಅಷ್ಟೇ ಒತ್ತಡ ಹೇರಲು ತಿಳಿಸಿ. ಈಗ ಈ ಮಿಶ್ರಣದ (ನೈಸರ್ಗಿಕ ಅಂಶಗಳ ಹರ್ಬಲ್ ಮಿಶ್ರಣ) ಗಂಟನ್ನು ಬೆಚ್ಚಗಿನ ಹಾಲಲ್ಲಿ ಅದ್ದಿ ಮುಖದ ಮೇಲೆ 5-6 ನಿಮಿಷ ಮಸಾಜ್ ಮಾಡಿ. ನಂತರ 5 ನಿಮಿಷ ಬರಿಗೈನಿಂದ ಮಸಾಜ್ ಮಾಡಿ. ಆಮೇಲೆ ಒಮ್ಮೆ ಗಂಟಿನಿಂದ, ಒಮ್ಮೆ ಕೈಗಳಿಂದ ಬದಲಿಸಿ ಬದಲಿಸಿ ಮಸಾಜ್ ಮಾಡಿ. ಹೀಗೆ ಮುಖದ ಮೇಲೆ ಹಾಲು ಒಣಗುವವರೆಗೂ ಮಾಡಿ. ಕೊನೆಯಲ್ಲಿ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ. ಮತ್ತೆ ಹರ್ಬಲ್ ನೀಮ್ ಪ್ಯಾಕ್ ಬಳಸಿ, ಒಣಗಿದ ನಂತರ ನೀರಿನಿಂದ ತೊಳೆದು ಮುಕ್ತಾಯಗೊಳಿಸಿ.
ಪೇನ್ ರಿಲೀಫ್ ಪ್ಯಾಕೆಟ್
ಈ ಮಸಾಜ್‌ನಿಂದ ರಕ್ತ ಪ್ರವಾಹ ಸರಾಗ ಆಗುವುದಲ್ಲದೆ, ಇತರ ಅನೇಕ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸಿ, ಚರ್ಮ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ.
ಹರ್ಬಲ್ ಗಂಟಿನ ಬಳಕೆ
ಮೊದಲು ಈ ಹರ್ಬಲ್ ಗಂಟಿನಿಂದ ಮಾಂಸಖಂಡಗಳಿಗೆ ಲಘುವಾಗಿ ಮಸಾಜ್ ಮಾಡಿ. ಪೇನ್ ರಿಲೀಫ್ ಹರ್ಬಲ್ ಪ್ಯಾಕೆಟ್‌ನ್ನು ಹಾಟ್ ಪ್ಲೇಟ್ ಮೇಲಿರಿಸಿ, ತುಸು ಎಣ್ಣೆ ಅಥವಾ ಬೆಚ್ಚಗಿನ ಹಾಲಿನಲ್ಲಿ ಇದನ್ನು ಅದ್ದುತ್ತಾ, ಇಡೀ ದೇಹಕ್ಕೆ ಮಸಾಜ್ ಒದಗಿಸಿ. ಇದನ್ನು ಯಾವಾಗ ಬಳಸಬಾರದು?
ಚರ್ಮದಲ್ಲಿ ಅಲ್ಲಲ್ಲಿ ಗಂಟುಗಳಿದ್ದರೆ ಅಥವಾ ಚರ್ಮದಲ್ಲಿ ಯಾವುದೇ ರೀತಿಯ ಉರಿ ಇದ್ದರೆ, ಬೇರಾವುದೇ ಚರ್ಮ ರೋಗಗಳಿದ್ದರೆ ಈ ಬಗೆಯ ಹರ್ಬಲ್ ಪ್ಯಾಕೆಟ್ ಬಳಸಬಾರದು.
ಹರ್ಬಲ್ ಮಿಲ್ಕ್ ಬಾಥ್
ಬಾಡಿ ಮಸಾಜ್ ಆದನಂತರ ಮಿಲ್ಕ್ ಬಾಥ್ ಮಾಡುವುದು ಅಗತ್ಯವಾಗುತ್ತದೆ. ಇದನ್ನು ಎಲಿಝಬೆತ್ ಸ್ಟೈಲ್ ಎಂದೂ ಹೇಳುತ್ತಾರೆ. ಈ ಬಾಥ್ ಸಹ ಶಾರೀರಿಕ ಸುಸ್ತು, ನೋವು, ಟ್ಯಾನಿಂಗ್ ಇತ್ಯಾದಿಗಳನ್ನು ತೊಲಗಿಸಿ, ಇಡಿ ದೇಹದ ಚರ್ಮ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ. ಈ ಸ್ನಾನದಿಂದ ಬಹಳ ಕೂಲ್ ಆದಂತೆ ಅನಿಸುತ್ತದೆ. 4 ಲೀ. ಹಾಲಿಗೆ ಅರ್ಧ ಚಮಚ ರುಬ್ಬಿದ ಹಸಿ ಅರಿಶಿನದ ಪೇಸ್ಟ್, 2 ಸಣ್ಣ ಚಮಚ ಜೇಷ್ಠಮಧು (ಲಿಕರೈಸ್) ಪುಡಿ, ಒಂದಿಷ್ಟು ಅಮ್ತಾಸ್ ಚೂರ್ಣ, ಅರ್ಧ ಚಮಚ ಗಂಧಕದ ಪುಡಿ, ಅರ್ಧ ಚಮಚ ಸೊಗದೆ ಬೇರಿನ ಚೂರ್ಣ, ಅರ್ಧ ಚಮಚ ರಕ್ತಾಂಗಿ ಚೂರ್ಣ, ಒಂದಿಷ್ಟು ಗುಲಾಬಿ ದಳಗಳು, 1 ಚಮಚ ರಕ್ತ ಚಂದನದ ಚೂರ್ಣ ಇತ್ಯಾದಿಗಳೆಲ್ಲವನ್ನೂ ಹಾಲಿನಲ್ಲಿ ಬೆರೆಸಿ ಹಾಲು ಚೆನ್ನಾಗಿ ಕುದ್ದು ಅರ್ಧದಷ್ಟು ಹಿಂಗುವಂತೆ ಮಾಡಿ. ಹೀಗೆ ಸಿದ್ಧಗೊಂಡ ದ್ರಾವಣವನ್ನು ಸಂಗ್ರಹಿಸಿಟ್ಟು ಅದಕ್ಕೆ ಇನ್ನಷ್ಟು ಗುಲಾಬಿ ದಳಗಳನ್ನು ಸೇರಿಸಿ, ದೇಹಕ್ಕೆ ಬಾದಾಮಿ ಎಣ್ಣೆಯ ಮಸಾಜ್ ಮಾಡಿದ ನಂತರ, ಇದನ್ನು ನಿಧಾನವಾಗಿ ಧಾರೆ ಹರಿಸುತ್ತಾ ಮಸಾಜ್ ಮಾಡಬೇಕು. ನಂತರ ತಣ್ಣೀರಿನಲ್ಲಿ ಸ್ನಾನ ಮಾಡಿ.
– ಗೀತಾಂಜಲಿ
ನಿಮಗಿದು ಗೊತ್ತೇ?
ರಾಣಿ ಕ್ಲಿಯೋಪಾತ್ರಾಳ ಅನುಪಮ ಸೌಂದರ್ಯದ ರಹಸ್ಯ ಎಂದರೆ ಕತ್ತೆ ಹಾಲಿನ ಸ್ನಾನ.
ಹೂವು, ಹಣ್ಣು ಹಾಗೂ ಸುಗಂಧಿತ ತೈಲಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಅದು ಸೌಂದರ್ಯ ಸಂವರ್ಧನೆಗೆ ಹೆಚ್ಚು ಪೂರಕ.
ವ್ಯಾಕ್ಸಿಂಗ್ ಮಾಡಿಸಿದ ನಂತರ ಮೈಮೇಲೆ ಗುಳ್ಳೆಗಳಾದರೆ, ಅದರ ಮೇಲೆ ತಕ್ಷಣ ಐಸ್‌ನಿಂದ ಮಸಾಜ್ ಮಾಡಿ, ನಂತರ ಅದರ ಮೇಲೆ ಮಾಯಿಶ್ಚರೈಸಿಂಗ್ ಲೋಶನ್ ಹಚ್ಚಿರಿ.
ಮೊಣಕೈ, ಮಂಡಿಗಳ ಬಳಿ ಚರ್ಮ ಕಪ್ಪಾಗಿದೆ ಅನಿಸಿದರೆ, ಸಕ್ಕರೆ ಮೆತ್ತಿದ ನಿಂಬೆ ಸಿಪ್ಪೆಯಿಂದ ಚೆನ್ನಾಗಿ ಉಜ್ಜಬೇಕು.
ನಿಮ್ಮ ಕಂಕುಳದ ಭಾಗ ಕಪ್ಪಾಗಿದೆ ಅನಿಸಿದರೆ, ಸಕ್ಕರೆ ಬೆರೆತ ಮೊಸರನ್ನು ಅಲ್ಲಿ ತಿಕ್ಕಿ ಮಸಾಜ್ ಮಾಡಿ.
ಆಯ್ಲಿ ಸ್ಕಿನ್ ಆಗಿದ್ದರೆ ಮೊಸರು, ಜೇನುತುಪ್ಪ, ಕಡಲೆಹಿಟ್ಟು ಬೆರೆಸಿ ಚರ್ಮಕ್ಕೆ ಹಚ್ಚಿ ಮಸಾಜ್ ಮಾಡಿ 10 ನಿಮಿಷ ಹಾಗೇ ಬಿಡಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.