ಸುಗಂಧ ಅಥವಾ ಸುವಾಸನೆ ಎಂತಹ ಒಂದು ಅನುಭೂತಿಯೆಂದರೆ, ಅದು ಎಂಥರವನ್ನೂ ಆಕರ್ಷಿಸುತ್ತದೆ. ಸುವಾಸನೆ ಬೀರುವ ಮನೆ ಯಾವುದೇ ಒಬ್ಬ ಮಹಿಳೆಯ ಸುವ್ಯವಸ್ಥೆಯನ್ನು ಪ್ರದರ್ಶಿಸುತ್ತದಲ್ಲದೆ, ಇದರಿಂದ ಆಕೆಯ ಆಸಕ್ತಿ ಮತ್ತು ಸ್ಟೈಲ್ ಕೂಡ ತಿಳಿದುಬರುತ್ತದೆ.
ಯಾವುದೇ ಒಂದು ಮನೆ ಯಾವಾಗ ಸಂಪೂರ್ಣ ಎನಿಸುತ್ತದೆ ಎಂದರೆ, ಎಲ್ಲ ಇಂಟೀರಿಯರ್ ಜೊತೆ ಜೊತೆಗೆ ಅದು ಚೆನ್ನಾಗಿ ಘಮಘಮಿಸುವಂತಿರಬೇಕು. ಯಾರಾದರೂ ಮನೆಗೆ ಬಂದರೆ, ಅವರನ್ನು ಈರುಳ್ಳಿ-ಬೆಳ್ಳುಳ್ಳಿಯ ವಾಸನೆಯಿಂದ ಸ್ವಾಗತಿಸಲು ಆಗುತ್ತದೆಯೇ? ಅಂದಹಾಗೆ, ಪ್ರತಿಯೊಂದು ಮನೆಗೆ ಒಂದೊಂದು ರೀತಿಯ ವಾಸನೆ ಇರುತ್ತದೆ. ಅದು ಸುವಾಸನೆಯಿಂದ ಕೂಡಿದ್ದರೆ, ಮನೆಗೆ ಬರುವವರನ್ನು ಸಮ್ಮೋಹಿತಗೊಳಿಸುತ್ತದೆ. ಇದರಿಂದ ಬರುವ ವ್ಯಕ್ತಿ ಒತ್ತಡರಹಿತ ಹಾಗೂ ಫ್ರೆಶ್ ಆಗುತ್ತಾರೆ. ಆದರೆ ಅದೇ ಒದ್ದೆ ಬಟ್ಟೆ, ಬೆಳ್ಳುಳ್ಳಿ-ಈರುಳ್ಳಿಯ ವಾಸನೆ ಬರುತ್ತಿದ್ದಲ್ಲಿ ಮನೆಗೆ ಬಂದ ಅತಿಥಿ ಹೆಚ್ಚು ಹೊತ್ತು ಇರುವುದಿಲ್ಲ. ಬಹುಬೇಗ ಅಲ್ಲಿಂದ ಕಾಲು ಕೀಳಲು ನೋಡುತ್ತಾರೆ. ಮನೆಯಿಂದ ಸುವಾಸನೆ ಸೂಸುವ ಪದ್ಧತಿ ಬಹಳ ಹಿಂದಿನಿಂದಲೇ ಆರಂಭವಾಗಿದೆ. ಈ ಪದ್ಧತಿಯನ್ನು ಆರಂಭಿಸುವುದರ ಹಿಂದಿನ ಉದ್ದೇಶ ಮನೆಯಿಂದ ಹೊರಬರುವ ದುರ್ವಾಸನೆಯನ್ನು ಕಡಿಮೆಗೊಳಿಸುವುದಾಗಿತ್ತು.
ಹಿಂದಿನ ಕಾಲದಲ್ಲಿ ಜನರು ತಮ್ಮ ಮನೆ ಮುಂದೆ ಬಗೆಬಗೆಯ ಸುಗಂಧ ಸೂಸುವ ಗಿಡಮೂಲಿಕೆಗಳ ಸಸಿಗಳನ್ನು ನೆಡುತ್ತಿದ್ದರು. ಆದರೆ ಕಾಲ ಬದಲಾಗುತ್ತ ಹೋದಂತೆ, ಅಂತಹ ಬಳ್ಳಿ, ಸಸಿಗಳನ್ನು ನೆಡಲು ಜಾಗದ ಕೊರತೆ ಉಂಟಾಗತೊಡಗಿತು. ಹೀಗಾಗಿ ಜನರು ಸುವಾಸನೆ ಬೀರುವ ಕೃತಕ ವಿಧಾನಗಳನ್ನು ಅನುಸರಿಸತೊಡಗಿದರು.
ಹಲವು ಬಗೆಯ ಹೋಮ್ ಫ್ರೆಶನರ್ಗಳು
ಮನೆಯಲ್ಲಿ ಬರುವ ದುರ್ವಾಸನೆಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಅನೇಕ ಬಗೆಯ ರೂಮ್ ಫ್ರೆಶನರ್‌ಗಳು ಲಭ್ಯವಿವೆ. ನೀವು ನಿಮ್ಮ ಆಸಕ್ತಿ ಹಾಗೂ ಸುಗಂಧ ದ್ರವ್ಯಕ್ಕನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಗಂಧದ ಕಡ್ಡಿಗಳು : ಮನೆಯನ್ನು ಸುಗಂಧಿತಗೊಳಿಸಲು ಗಂಧದ ಕಡ್ಡಿಗಳನ್ನು ಮೊದಲಿನಿಂದಲೇ ಬಳಸಿಕೊಂಡು ಬರಲಾಗುತ್ತಿದೆ. ಆದರೆ ಈಗ ಗಂಧದ ಕಡ್ಡಿಗಳಲ್ಲಿ ಬಗೆಬಗೆಯ ಸುಗಂಧ ದೊರೆಯುತ್ತವೆ. ಅನ್ನುವ ಅತ್ಯುತ್ತಮ ಹೋಮ್ ಫ್ರ್ಯಾಗ್ರೆನ್ಸ್ ರೂಪದಲ್ಲಿ ಬಳಸಲಾಗುತ್ತಿದೆ. ನ್ಯಾಚುರಲ್ ಫ್ರ್ಯಾಗ್ರೆನ್ಸ್ ರೂಪದಲ್ಲಿ ಜ್ಯಾಸ್ಮಿನ್, ಚಂದನ, ಗುಲಾಬಿ, ದೇವದಾರು ಮುಂತಾದವುಗಳ ಸುವಾಸನೆ ಬೀರುವ ಅನೇಕ ಗಂಧದಕಡ್ಡಿಗಳಿವೆ.
ಮಾರುಕಟ್ಟೆಯಲ್ಲಿ 2 ಬಗೆಯ ಗಂಧದ ಕಡ್ಡಿಗಳು ಲಭ್ಯವಾಗುತ್ತವೆ. ಅವನ್ನು ನೀವು ನಿಮ್ಮ ಅಗತ್ಯ ಹಾಗೂ ಸೌಲಭ್ಯಕ್ಕನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ಮೊದಲನೆಯದು ನೇರವಾಗಿ ಉರಿಯುವಂಥದು. ಅದರಿಂದ ಸುಗಂದ ನೇರವಾಗಿ ಗಾಳಿಯಲ್ಲಿ ಪಸರಿಸುತ್ತದೆ. ಎರಡನೆಯದು, `ಇನ್‌ಡೈರೆಕ್ಟ್ ಬರ್ನ್' ಅದರಲ್ಲಿ ಫ್ರ್ಯಾಗ್ರೆನ್ಸ್ ಮೆಟೇರಿಯಲ್‌ನ್ನು ಮೆಟಲ್‌ನ ಹಾಟ್ ಪ್ಲೇಟ್ ಮೇಲೆ ಇಡಲಾಗುತ್ತದೆ. ಅದರಿಂದ ಇಡೀ ಮನೆಯಲ್ಲಿ ಸುವಾಸನೆ ಪಸರಿಸುತ್ತದಲ್ಲದೆ, ಮನೆಯಲ್ಲಿನ ಸೊಳ್ಳೆ ನೊಣಗಳು ಕೂಡ ಹೊರಹೋಗುತ್ತವೆ.
ಫ್ರ್ಯಾಗ್ರೆನ್ಸ್ ಕ್ಯಾಂಡಲ್ಸ್ : ಕ್ಯಾಂಡಲ್‌ಗಳನ್ನು ಕೇವಲ ದೀಪಾವಳಿ ಹಬ್ಬದಲ್ಲಿ ಮನೆಯನ್ನು ಝಗಮಗಗೊಳಿಸಲು ಬಳಸುವುದರ ಜೊತೆಗೆ, ಮನೆಯನ್ನು ಸುಗಂಧಭರಿತಗೊಳಿಸಲು ಕೂಡ ಬಳಸಬಹುದಾಗಿದೆ. ಬಣ್ಣ ಬಣ್ಣದ, ಆಕರ್ಷಕ ಡಿಸೈನಿನ ವಿಭಿನ್ನ ಸುವಾಸನೆಯ ಕ್ಯಾಂಡಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವನ್ನು ಬಳಸುವುದರ ಮೂಲಕ ನೀವು ಮನೆಯನ್ನು ಸುವಾಸನೆಭರಿತಗೊಳಿಸಬಹುದು. ಇದರಿಂದ ಈರುಳ್ಳಿ-ಬೆಳ್ಳುಳ್ಳಿ ಹಾಗೂ ಇತರ ಕಮಟು ವಾಸನೆ ಬರಲಾರದು.