ಎಲ್ಲರ ಬಾಯಲ್ಲೂ…. `ನೀರ್ ದೋಸೆ‘
`ನೀರ್ ದೋಸೆ’ ಚಿತ್ರ ಶುರುವಾದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತವೇ ಇದೆ. ಮೊದಲಿಗೆ ರಮ್ಯಾ ಈ ಚಿತ್ರದಿಂದ ಆಚೆ ಹೋದದ್ದು, ಆ ಸ್ಥಾನಕ್ಕೆ ಹರಿಪ್ರಿಯಾ ಸೆಲೆಕ್ಟ್ ಆಗಿದ್ದು. ಈಗ ಈ ಚಿತ್ರದ ಟೀಸರ್ ಎಲ್ಲ ಕಡೆ ಸಂಚಲನ ಉಂಟು ಮಾಡಿದೆ. ಡೈಲಾಗ್‌ಗಳು ಡಬ್ಬಲ್ ಮೀನಿಂಗ್ ಅಲ್ಲ ಸ್ಟ್ರೇಟ್ ಅಂತ ಹೇಳುತ್ತಲೇ ನಿರ್ದೇಶಕರು ಅರ್ಧ ಯಶಸ್ಸನ್ನು ಬಿಡುಗಡೆ ಮೊದಲೇ ಗಿಟ್ಟಿಸಿದ್ದಾರೆ. ಚಿತ್ರದ ಕೇಂದ್ರಬಿಂದು ಹರಿಪ್ರಿಯಾ ಬೋಲ್ಡಾಗಿ ನಟಿಸಿರುವುದಲ್ಲದೆ, ಸಿಗರೇಟ್ ಸೇದಿದ್ದಾಳೆ. ಬೆಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ತುಂಡುಡುಗೆ ಧರಿಸಿದ್ದಾಳೆ. ಪಾತ್ರಕ್ಕೆ ತಕ್ಕಂತೆ ತನ್ನನ್ನು ಸಿದ್ಧಪಡಿಸಿಕೊಂಡಿರುವ ಹರಿಪ್ರಿಯಾ ಚಿತ್ರದಲ್ಲಿನ ಒಂದು ಹಾಡಿನ ಸಲುವಾಗಿ ಒಂದೇ ದಿನದಲ್ಲಿ ಬೆಲ್ಲಿ ಡ್ಯಾನ್ಸ್ ಕಲಿತು ಅಚ್ಚರಿ ಮೂಡಿಸಿದ್ದಾಳೆ!
ಲಕ್ಕಿ ನಕ್ಷತ್ರ
`ಅಶ್ವಿನಿ ನಕ್ಷತ್ರ’ ಎಂದ ಕೂಡಲೇ ಥಟ್ಟನೆ ನೆನಪಾಗೋದು ನಟಿ ಮಯೂರಿ. ಕಿರುತೆರೆಯಿಂದ ದೊಡ್ಡ ಪರದೆಗೆ ಬಂದಾಗಿನಿಂದ ಮಯೂರಿ ನಟಿಸಿದ ಚಿತ್ರಗಳು ಯಶಸ್ಸು ಕಾಣುತ್ತಿವೆ. `ಕೃಷ್ಣಲೀಲ’ ಹಿಟ್ ಆಯ್ತು. `ಇಷ್ಟಕಾಮ್ಯ’ ಚಿತ್ರದ ಮೂಲಕ ಉತ್ತಮ ನಟಿ ಅನಿಸಿಕೊಂಡಳು. ಇದೀಗ ಮಯೂರಿ `ನಟರಾಜ ಸರ್ವೀಸ್’ ಚಿತ್ರದಲ್ಲಿ ನಾಯಕ ಶರಣ್ ಜೊತೆ ಕಾಣಿಸಿಕೊಳ್ಳುತ್ತಿದ್ದಾಳೆ. ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಮುಗಿಸಿ ಬಂದ ಈ ಅಪರೂಪದ ಪ್ರತಿಭೆಗೆ ಸ್ಯಾಂಡಲ್‌ವುಡ್ ಕೈಬೀಸಿ ಕರೆದಿದೆ. ಮೊದಲ ಚಿತ್ರ `ಕೃಷ್ಣಲೀಲ’ ನೂರು ದಿನ ಓಡಿತು. ಬಿಡುಗಡೆಗೆ ರೆಡಿಯಾಗಿರುವ `ನಟರಾಜ ಸರ್ವೀಸ್’ ಚಿತ್ರದಲ್ಲೂ ಮಯೂರಿಗೆ ಗಮನಾರ್ಹ ಪಾತ್ರವಿದೆಯಂತೆ. ಈ ಚಿತ್ರ ಪುನೀತ್ ರಾಜ್‌ಕುಮಾರ್ ಬ್ಯಾನರಿನಡಿ ನಿರ್ಮಾಣವಾಗುತ್ತಿರುವುದು ಕೂಡಾ ಹೆಗ್ಗಳಿಕೆಯ ಸಂಗತಿ.
ಮುಂಗಾರು ಮಳೆ-2
`ಮುಂಗಾರು ಮಳೆ’ ಚಿತ್ರ ಬಂದು ಹತ್ತು ವರ್ಷ ಕಳೆದಿದೆ. ಇಂದಿಗೂ ಆ ಸಿನಿಮಾವನ್ನು ಯಾರೂ ಮರೆತಿಲ್ಲ. ಚಿತ್ರದ ಪ್ರಮುಖ ಆಕರ್ಷಣೆ, ಚಿತ್ರದ ಹಾಡುಗಳು ಮ್ಯೂಸಿಕಲಿ ಹಿಟ್ ಆದಂಥ ಚಿತ್ರವದು. ಪರಭಾಷೆಯವರು ಸಹ ಕನ್ನಡ ಚಿತ್ರಗೀತೆ ಕೇಳುವಂತೆ ಮಾಡಿತ್ತು. ಇದೀಗ `ಮುಂಗಾರು ಮಳೆ-2′ ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ಈ ಚಿತ್ರಕ್ಕೆ ಅರ್ಜುನ್‌ಜನ್ಯ ಸಂಗೀತ ನೀಡಿದ್ದಾರೆ. ಶಶಾಂಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ರವಿಚಂದ್ರನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಚಿತ್ರದ ಹಾಡುಗಳು ಹಿಟ್ ಆಗಿವೆ. ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ (`ರಾಯ್’ ಚಿತ್ರ) ಅರ್ಮಾನ್ ಮಲ್ಲಿಕ್ ಈ ಚಿತ್ರಕ್ಕಾಗಿ ಹಾಡಿರೋದು ವಿಶೇಷ. ಸರಿಯಾಗಿ ನೆನೆಪಿದೆ ನನಗೆ…. ಮತ್ತು ನೀ ಎದೆಯೊಳಗೆ ಬಂದ ಮೇಲೆ….. ಹಾಡುಗಳನ್ನು ಹಾಡಿರುವ ಅರ್ಮಾನ್ ಮಲ್ಲಿಕ್ ಸಾಕಷ್ಟು ಮಿಂಚಿಬಿಟ್ಟಿದ್ದಾರೆ. `ಮುಂಗಾರು ಮಳೆ’ಯಲ್ಲಿ ಸೋನು ಜಾದೂ ಮಾಡಿದ್ದರು. `ಮುಂಗಾರು ಮಳೆ -2′ ಚಿತ್ರದ ಮೂಲಕ ಅರ್ಮಾನ್ ಜಾದೂ ಮಾಡಬಲ್ಲರೇ…..?
ಕಿಚ್ಚನ ಫ್ಯಾನ್ಸ್
ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳನ್ನು ತುಂಬಾನೆ ಇಷ್ಟಪಡುತ್ತಾರೆ. ಅವರು ಒಳ್ಳೆ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸುತ್ತಾರೆ. ಸೋಶಿಯಲ್ ನೆಟ್‌ವರ್ಕ್‌ನಲ್ಲಿ ಕಿಚ್ಚನ ಅಭಿಮಾನಿಗಳು ಸಾಕಷ್ಟಿದ್ದಾರೆ. ಇತ್ತೀಚೆಗೆ `ಕೋಟಿಗೊಬ್ಬ-2′ ಬಿಡುಗಡೆ ಸಡಗರದಲ್ಲಿ ಅಭಿಮಾನಿಗಳು ಕಿಚ್ಚನ ಡೈಲಾಗ್‌ನ್ನು ಹೇಳುವುದರ ಮೂಲಕ `ಡಬಲ್ ಸ್ಮ್ಯಾಶ್’ ಮಾಡಿ ತಮ್ಮ ಮೆಚ್ಚಿನ ನಟನಿಗೆ ಕಳಿಸಿದ್ದಾರೆ. ಸುದೀಪ್ ಬಿಡುವು ಮಾಡಿಕೊಂಡು ಅವರೆಲ್ಲರ ಟ್ವೀಟ್‌ನ್ನು ತಾಳ್ಮೆಯಿಂದ ನೋಡಿ ಉತ್ತರಿಸಿದ್ದಾರೆ. ಅಭಿಮಾನಿಗಳ ಜೊತೆ ನೇರವಾಗಿ ಸ್ಪಂದಿಸುವ ಸುದೀಪ್ ದೊಡ್ಡತನವನ್ನು ಅಭಿಮಾನಿಗಳು ಇನ್ನಷ್ಟು ಅವರನ್ನು ಪ್ರೀತಿಸುವಂತೆ ಮಾಡಿದೆ. ಹಿರಿಯರಿರಲಿ, ಕಿರಿಯರಿರಲಿ, ಪುಟ್ಟ ಮಕ್ಕಳಿರಲಿ ಎಲ್ಲರಿಗೂ ಉತ್ತರಿಸುವ ಕಿಚ್ಚ ಕೋಟಿಗೊಬ್ಬ ಎಂದೆನಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಶರಣ್ ಕಮಾಲ್
ಕನ್ನಡ ಚಿತ್ರರಂಗದಲ್ಲಿ ಎಲ್ಲ ತರಹದ ಪಾತ್ರ ಮಾಡಿಕೊಂಡು ಬಂದಿರುವ ನಟ ಶರಣ್ ಮುಂದೊಂದು ದಿನ ತಾನು ಜನಪ್ರಿಯ ಹೀರೊ ಆಗ್ತೀನಿ ಅಂತ ಖಂಡಿತ ಅಂದುಕೊಂಡಿರಲಿಲ್ಲ ಅನಿಸುತ್ತೆ. ಆದರೆ ಅವರಲ್ಲಿ ಅಂಥ ಪ್ರತಿಭೆ ಇತ್ತು. ಲೇಟಾಗಿ ಬಂದರೂ ಸೇಟೆಸ್ಟಾಗಿಯೇ ಬಂದು ಶರಣ್ ಮಾಡಿದ ಎಲ್ಲ ಚಿತ್ರಗಳು ಹಿಟ್ ಆಗಿವೆ. ಇಂದು ಶರಣ್ ಯಶಸ್ವಿ ಹೀರೋ ಅನಿಸಿಕೊಂಡಿದ್ದಾರೆ. ಶರಣ್ ವಿಭಿನ್ನ ಕಥಾಸ್ತುವನ್ನು ಆರಿಸಿಕೊಳ್ಳುವುದರಿಂದ ಅವರ ಚಿತ್ರವನ್ನು ನೋಡುವ ಪ್ರೇಕ್ಷಕರಿಗೆ ಕೊಟ್ಟ ಕಾಣಿಕೆ ಮೋಸವಾಗುವುದಿಲ್ಲ. ಇಷ್ಟು ದಿನ ಶೃತಿ ತಮ್ಮ ಅನಿಸಿಕೊಳ್ಳುತ್ತಿದ್ದ ಶರಣ್ ಇಂದು ತಮ್ಮ ಸ್ವಸಾಮರ್ಥ್ಯದಿಂದ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಸ್ಥಾನವನ್ನು ಸೃಷ್ಟಿಸಿಕೊಂಡಿದ್ದಾರೆ. ಶರಣ್ ಒಬ್ಬ ಒಳ್ಳೆಯ ಕಲಾವಿದರಾಗಿರೋದ್ರಿಂದ ಎಂಥ ಪಾತ್ರ ಕೊಟ್ಟರೂ ನಿಭಾಯಿಸಬಲ್ಲರು. `ನಟರಾಜ ಸರ್ವೀಸ್’ ಬಗ್ಗೆ ತುಂಬಾನೆ ನಿರೀಕ್ಷೆ ಇಡಲಾಗಿದೆ.
ಹ್ಯಾಪಿ ಬರ್ತ್ಡೇ
ಸ್ಯಾಂಡಲ್‌ವುಡ್‌ನ ಗ್ಲಾಮರಸ್ ತಾರೆ ಸಂಜನಾಳನ್ನು ಇತ್ತೀಚೆಗೆ `ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲಿ ನೋಡಿದವರೆಲ್ಲರೂ ತುಂಬಾನೆ ಪ್ರಶಂಸಿಸಿದ್ದಾರೆ. ವಿಭಿನ್ನ ಪಾತ್ರದಲ್ಲೂ ಮಿಂಚಿರುವ ಸಂಜನಾ `ದಂಡುಪಾಳ್ಯ-2′ ಚಿತ್ರದಲ್ಲೂ ಗ್ಲಾಮರ್ ರಹಿತ ಪಾತ್ರ ಮಾಡುತ್ತಿದ್ದಾಳೆ. ತೆಲುಗು ಚಿತ್ರರಂಗದಲ್ಲೂ ಚಿರಪರಿಚಿತಳಾಗಿರುವ ಸಂಜನಾ `ಹ್ಯಾಪಿ ಬರ್ತ್‌ಡೇ’ ಎನ್ನುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಪವನ್ ಕಲ್ಯಾಣ್ ಜೋಡಿಯಾಗಿ `ಸರ್ದಾರ್ ಗಬ್ಬರ್ ಸಿಂಗ್’ ಚಿತ್ರದಲ್ಲೂ ನಟಿಸಿರುವ ಈ ಬೆಡಗಿ ಮಾಡೆಲ್ ಲೋಕದಲ್ಲೂ ಸಹ ಸದಾ ಬಿಜಿ. ತನ್ನದೇ ಆದ ಯೋಗ ಕೇಂದ್ರ ಸ್ಥಾಪಿಸಿರುವ ಈ ನಟಿ ಇತ್ತೀಚೆಗೆ ಅಂಗವಿಕಲ ಮಕ್ಕಳಿಗಾಗಿಯೂ ಕೂಡಾ ಉಚಿತವಾಗಿ ಶಿಬಿರ ಏರ್ಪಡಿಸಿ ಅವರಲ್ಲೂ ಯೋಗದ ಬಗ್ಗೆ ಉತ್ಸಾಹ ತುಂಬಿ ಒಂದೊಳ್ಳೆ ಕೆಲಸ ಮಾಡಿದ್ದಾಳೆ. ಒಟ್ಟಿನಲ್ಲಿ ಏನಾದರೊಂದು ಕೆಲಸ ಮಾಡುತ್ತ ಸುದ್ದಿಯಲ್ಲಿರುವ ಸಂಜನಾ ಸದ್ಯಕ್ಕಂತೂ ಸಿಕ್ಕಾಪಟ್ಟೆ ಬಿಜಿ. ನಾನು ಮತ್ತು ವರಲಕ್ಷ್ಮಿಹೌದು, ಇದೊಂದು ಹೊಸ ಚಿತ್ರದ ಹೆಸರು. ಪ್ರೀತಮ್ ಗುಬ್ಬಿ ನಿರ್ದೇಶಿಸಿರುವ `ನಾನು ಮತ್ತು ವರಲಕ್ಷ್ಮಿ’ ಚಿತ್ರದ ಟೀಸರ್ ಈಗಾಗಲೇ ಜನಮನ ಗೆದ್ದಿದೆ. ಆರಡಿ ಎತ್ತರದ ಹುಡುಗ ಪೃಥ್ವಿ. ಫಸ್ಟ್ ಲುಕ್‌ನಲ್ಲೇ ಭರವಸೆ ಮೂಡಿಸಿದ್ದಾರೆ. ಈ ಪೃಥ್ವಿ ಮತ್ತಾರಲ್ಲದೇ ಖ್ಯಾತ ಸಂಗೀತ ಸಂಯೋಜಕ ಜಿ.ಕೆ. ವೆಂಕಟೇಶ್ ಅವರ ಮೊಮ್ಮಗ. ಪೃಥ್ವಿ ತಂದೆ ಮಂಜುನಾಥ್ ಅವರೇ ಚಿತ್ರವನ್ನು ನಿರ್ಮಿಸಿದ್ದಾರೆ. `ನಾನು ಮತ್ತು ವರಲಕ್ಷ್ಮಿ’ ಚಿತ್ರದ ಟ್ರೇಲರ್ ನೋಡಿದರೆ ಸಖತ್ ರಿಸ್ಕ್ ತಗೊಂಡು ಬೈಕ್ ರೇಸ್‌ನ್ನು ಶೂಟ್ ಮಾಡಲಾಗಿದೆ. ಬೈಕ್ ರೇಸಿಂಗ್ ಕುರಿತು ಚಿತ್ರವಾಗಿರೋದ್ರಿಂದ ಪೃಥ್ವಿಗಾಗಿ ವಿಶೇಷವಾಗಿ ತಯಾರು ಮಾಡಲಾಗಿದೆಯಂತೆ. ಮಲೆಯಾಳಿ ಬೆಡಗಿ ಮಾಳವಿಕಾ ಮೋಹನ್ ನಾಯಕಿ ಪಾತ್ರ ವಹಿಸಿದ್ದಾಳೆ. ಪ್ರಕಾಶ್‌ರೈ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರೋದು ವಿಶೇಷ.
ತಾರೆಯರ ಫೇವರಿಟ್
`ಗೋವಿಂದಾಯ ನಮಃ’ ಚಿತ್ರದ ಮೂಲಕ ನಿರ್ದೇಶನದ ಅಖಾಡಕ್ಕಿಳಿದ ಪವನ್ ಒಡೆಯರ್ ಭಟ್ಟರ ಶಿಷ್ಯ. ಮೊದಲ ಚಿತ್ರದಲ್ಲೇ ಗಮನಸೆಳೆದ ಪವನ್ ಕೈಗೆ ಸಾಕಷ್ಟು ಚಿತ್ರಗಳು ಸಿಕ್ಕ. ಪುನೀತ್ ಅಭಿನಯದ `ರಣವಿಕ್ರಮ’ ಒಳ್ಳೆ ಹೆಸರು ತಂದುಕೊಟ್ಟಿತು. ಯಶ್‌ಗಾಗಿ `ಗೂಗ್ಲಿ’ ಮಾಡಿದರು. ಧನಂಜಯ್‌ಗೆ `ಜೆಸ್ಸಿ.’ ಇದೀಗ ಶರಣ್‌ಗಾಗಿ `ನಟರಾಜ ಸರ್ವೀಸ್.’ ಈ ಚಿತ್ರ ಇವರಿಬ್ಬರ ಮೊದಲ ಚಿತ್ರವಾಗಬೇಕಿತ್ತಂತೆ. ಶರಣ್‌ಗೆ ಬಹಳ ಹಿಂದೆಯೇ ಈ ಚಿತ್ರದ ಕಥೆ ಹೇಳಿದ್ದರಂತೆ. ಶರಣ್ ನಾಯಕ ನಟರಾಗಿ ಮಿಂಚಿದರು. ಇತ್ತ ಪವನ್ ಕೂಡಾ ಬಿಜಿಯಾದರು. ಇಬ್ಬರೂ ಎತ್ತರಕ್ಕೆ ಬೆಳೆದು ನಿಂತರೂ `ನಟರಾಜ ಸರ್ವೀಸ್’ನ್ನು ಮರೆತಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ವಿಭಿನ್ನ ಕಥಾವಸ್ತು ಹೊಂದಿರುವ ಈ ಚಿತ್ರಕ್ಕಾಗಿ ಪುನೀತ್ ಹಾಡನ್ನು ಹಾಡಿದ್ದಾರೆ. ಪವನ್ ಮೇಲಿನ ಪ್ರೀತಿಗಾಗಿ ಚಿತ್ರದ ಬಗ್ಗೆ ಪುನೀತ್ ಸಾಕಷ್ಟು ಪ್ರಮೋಷನ್ ಕೂಡಾ ಮಾಡಿದ್ದಾರೆ.