ಸಂಧ್ಯಾಳ ಕಣ್ಣಲ್ಲಿ ಆವರಿಸಿಕೊಂಡಿದ್ದ ನಿದ್ದೆ ಹಾರಿ ಹೋಗಿತ್ತು. ಹಾಸಿಗೆಯಲ್ಲಿ ಹೊರಳಾಡುತ್ತಿದ್ದರೂ ದೃಷ್ಟಿ ಮಾತ್ರ ನೇರವಾಗಿ, ಛಾವಣಿಯತ್ತ ನೆಟ್ಟಿತ್ತು. ಮನದಲ್ಲಿ ಬೇರು ಬಿಟ್ಟ ದುಗುಡ, ಪದೇಪದೇ ಕಾಡುವ ಅಭದ್ರತೆ, ವಿಚಿತ್ರ ಭಯ, ಯಾರಲ್ಲೂ ಹೇಳಿಕೊಳ್ಳಲಾಗದ ಅಸಹನೀಯ ಪರಿಸ್ಥಿತಿ….! ಮುಂದೇನಾಗಬಹುದೆಂಬ ಆತಂಕ…. ಒಂದು ವೇಳೆ ಪರಿಸ್ಥಿತಿ ಕೈ ಮೀರಿ ಹೋದಲ್ಲಿ, ಫಲಿತಾಂಶ ಮಾತ್ರ ಅತ್ಯಂತ ಕೆಟ್ಟದ್ದಾಗಿರುತ್ತೆ ಅನ್ನೋ ಸಂಕಟ. ಇಡೀ ದೇಹವೇ ಕಂಪಿಸಿ ನೂರು ಗಾಲಿಯಲ್ಲಿ ಹಾಕಿ ತಿರುಗಿಸಿದ ಅನುಭವ.

ಇದೆಂತಹ  ಇಕ್ಕಟ್ಟಿನಲ್ಲಿ ಸಿಲುಕಿಬಿಟ್ಟೆ…..? ನನ್ನ ಅಜಾಗ್ರತೆಯಿಂದಾಗಿ ಅನ್ಯಾಯವಾಗಿ ಆಕಾಶ್‌ನ ಕಪಿಮುಷ್ಟಿಯಲ್ಲಿ ಸಿಲುಕಿ ಸುಲಭವಾಗಿ ಬ್ಲ್ಯಾಕ್‌ಮೇಲ್‌ಗೆ ಒಳಗಾಗುವಂತಾಯಿತಲ್ಲ ಅನ್ನೋ ನೋವು ಕಾಡಲಾರಂಭಿಸಿತು. ಎಲ್ಲೆಲ್ಲೂ ಶೂನ್ಯತೆ, ತಾನೇನೂ ಮಾಡಲಾಗದ ಅಸಹಾಯಕತೆ ಅವಳನ್ನು ಆವರಿಸಿಕೊಂಡಿತು. ತಪ್ಪು ತನ್ನದೇ ಆದರೂ ಅನ್ಯಾಯವಾಗಿ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡುವಂತಹ ಅವಕಾಶ ಆಕಾಶ್‌ಗೆ ಮಾಡಿಕೊಟ್ಟೆನಲ್ಲಾ ಎನ್ನುತ್ತಾ  ಪರಿತಪಿಸಿದಳು. ಅವಕಾಶ ಸಿಕ್ಕಿದಾಗೆಲ್ಲ ಆಕಾಶ್‌ ಕೆಟ್ಟದಾಗಿ ಕೈ ಸನ್ನೆ ಮಾಡಿ ಸರಸಕ್ಕೆ ಕರೆಯುತ್ತಿದ್ದ. ಜೊತೆಗೆ ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸುತ್ತಿದ್ದ. ಒಟ್ಟಾರೆ  ಸಂಧ್ಯಾಳ ಬದುಕು ನೀರಿನಿಂದ ತೆಗೆದ ಮೀನಿನಂತಾಗಿತ್ತು.

ಈ ಆಕಾಶ್‌ ಬೇರಾರೂ ಅಲ್ಲ. ಅವಳ ಪತಿಯ ತಮ್ಮ ಅಂದರೆ ಖಾಸಾ ಮೈದುನ. ಒಂದೇ ಮನೆ ಒಂದೇ ಛಾವಣಿಯಡಿಯಲ್ಲಿ ಒಟ್ಟಾಗಿ ಬದುಕುವ ಇಂತಹ ಸೌಜನ್ಯಯುತ, ಸಂಸ್ಕಾರವಂತ ಕುಟುಂಬದಲ್ಲಿ ಆಕಾಶ್‌ ಎಂಬ ಈ ವಿಕೃತ ಮನುಷ್ಯ ಹೇಗೆ ಹುಟ್ಟಿಕೊಂಡ? ಎಂದು ಯೋಚಿಸುತ್ತಿದ್ದ ಸಂಧ್ಯಾಳಿಗೆ ಕನಸಿನಲ್ಲೂ ಊಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದಿನ ಬೆಳಗಾದರೆ ಸಂಧ್ಯಾಳನ್ನು ಕಾಡುತ್ತಿದ್ದ. ಇವನ ಕಾಟವನ್ನು ತಪ್ಪಿಸಿಕೊಳ್ಳಲಾಗದೆ ಅಸಹಾಯಕತೆಯಿಂದ ಹೈರಾಣಾಗಿದ್ದಳು.

ಇದು ತೀರಾ ಹಳೆಯ ವಿಚಾರವೇನಲ್ಲ. ಎರಡು ತಿಂಗಳ ಹಿಂದೆ ಸಂಧ್ಯಾ ತನ್ನ ಪತಿ ಸುನೀಲ್ ಜೊತೆ ಯೂರೋಪ್‌ ಟ್ರಿಪ್‌ಗೆ ಹೋಗಿದ್ದಳು. ಸುಮಾರು 50 ಜನರಿದ್ದ ತಂಡ ಬೆಂಗಳೂರಿನಿಂದ ಹೊರಟಿತ್ತು. ಅದರಲ್ಲಿ ಸಂಧ್ಯಾ ದಂಪತಿಯೂ ಇದ್ದರು. ಹದಿನೈದು ದಿನದ ಪ್ರವಾಸವಾಗಿದ್ದರಿಂದ ಯೂರೋಪಿನಲ್ಲಿ ಒಬ್ಬರಿಗೊಬ್ಬರು ಪರಿಚಯವಾಗಿ, ಆತ್ಮೀಯರಾದರು. ಆ ತಂಡದಲ್ಲಿದ್ದ ಅಷ್ಟೂ ಜನರಲ್ಲಿ ತೀರಾ ಇತ್ತೀಚೆಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿದ್ದ ನವಿವಾಹಿತೆ ಭಾಗ್ಯಾ ಎಲ್ಲರಿಗಿಂತಲೂ ಚುರುಕಾಗಿದ್ದು, ಆಕರ್ಷಕವಾಗಿದ್ದಳು. ನೇರ ಮಾತು, ಸದಾ ನಗುತ್ತಿದ್ದ ಭಾಗ್ಯಾ, ಸಂಧ್ಯಾಳ ಆತ್ಮೀಯ ಸ್ನೇಹಿತೆಯಾಗಿ ತೀರಾ ಹತ್ತಿರವಾದಳು. ಭಾಗ್ಯಾಳ ಪತಿ ದಿವಾಕರ್‌ ಕೂಡ ಶಿಸ್ತಿನ ವ್ಯಕ್ತಿ. ಸದಾ ಏನಾದರೊಂದು ಕುತೂಹಲಕಾರಿ ವಿಚಾರಗಳನ್ನು ಹೇಳುತ್ತಾ ಎಲ್ಲರ ಮುಖದಲ್ಲೂ ವಿಸ್ಮಯ ಭಾವನೆಯನ್ನು ಮೂಡಿಸುತ್ತಿದ್ದ. ಜೊತೆಗೆ ಪುಟ್ಟ ಪುಟ್ಟ ಜೋಕುಗಳನ್ನು ಸಿಡಿಸುತ್ತಾ ಎಲ್ಲರನ್ನೂ ನಗಿಸುತ್ತಿದ್ದ. ಒಟ್ಟಾರೆ ಜಾಲಿ ಟೈಪ್‌ ವ್ಯಕ್ತಿಯಾಗಿದ್ದ. ಆ ದಂಪತಿಗಳು ಅದೆಷ್ಟು ಅನ್ಯೋನ್ಯವಾಗಿದ್ದರೆಂದರೆ ಜನರನ್ನು ನಗಿಸುವಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿದ್ದರು. ಈ ನವದಂಪತಿಗಳ ಉಲ್ಲಾಸ, ಸಂಭ್ರಮ ಹಾಗೂ ಉಕ್ಕಿ ಹರಿಯು ಜೀವನಪ್ರೀತಿ ಕಂಡು ಅದರಿಂದ ಸಂಧ್ಯಾ ತುಂಬಾ ಪ್ರಭಾವಿತಳಾಗಿ, `ಬದುಕಿದರೆ ಹೀಗೆ ಬದುಕಬೇಕು. ಇದ್ದರೆ ಇವರಂತೆ ಇರಬೇಕು,’ ಅನ್ನುವಷ್ಟರ ಮಟ್ಟಿಗೆ ಆ ದಂಪತಿಗಳು ಸಂಧ್ಯಾಳ ಹೃದಯಕ್ಕೆ ಹತ್ತಿರವಾಗಿದ್ದರು. ಇವರೊಂದಿಗೆ ಸಂಧ್ಯಾ ಸುನೀಲ್‌ರ ನಡುವೆ ಈ ತರಹ ತಮಾಷೆ, ಕಚಗುಳಿ ಎಲ್ಲಾ ಸಾಮಾನ್ಯವಾಗಿತ್ತು. ಆದರೆ ಈ ಜೋಡಿಯ ಮುಂದೆ ಅವಳಿಗೆ ತಮ್ಮದೇನೂ ಅಲ್ಲ ಎಂದೆನಿಸಿತು.

ಕೆಲವೊಂದು ವಿಚಾರದಲ್ಲಿ ಸುನೀಲ್ ‌ಸ್ವಲ್ಪ ಗಂಭೀರವಾಗಿರುತ್ತಿದ್ದ. ಆದರೆ ಸಂಧ್ಯಾ ತುಸು ವಿಚಾರವಾದಿ. ಆದರೆ ದಿವಾಕರ್‌ `ಜಾಲಿ’ ಮನುಷ್ಯ. ತಾನೂ ನಕ್ಕು, ತನ್ನ ಸುತ್ತಲಿನ ಎಲ್ಲರನ್ನೂ ನಗಿಸುವ ಅವನ ವ್ಯಕ್ತಿತ್ವ ಎಂಥವರನ್ನಾದರೂ ಆಕರ್ಷಿಸುವಂಥದ್ದು. ತಾನಿರುವ ಸ್ಥಳ ಯಾವಾಗಲೂ ಸದಾ ಸಂತಸದಿಂದಿರಬೇಕು ಅನ್ನುವ ಮನೋಭಾವ ಮೆಚ್ಚುವಂಥದ್ದು.

ಯೂರೋಪ್‌ ಪ್ರವಾಸದಿಂದಾಗಿ ಅದ್ಭುತವೆನ್ನುವ ಸ್ನೇಹಿತರು ದೊರಕಿದ್ದು ನಮ್ಮ ಅದೃಷ್ಟ ಎಂದು ತಿಳಿದ ಸಂಧ್ಯಾ ದಂಪತಿಗಳು ಮನದಲ್ಲೇ ಅವರಿಗೆ ನಮಿಸಿದರು. ಸೈಟ್‌ ಸೀಯಿಂಗ್‌, ಸ್ಕೈ ಡ್ರೈವ್‌, ಹೊರಾಂಗಣ ಓಡಾಟವೆಲ್ಲಾ ಮುಗಿದ ನಂತರ, ಹೋಟೆಲ್ ರೂಮಿಗೆ ಬಂದಾಗಲೂ ಕೂಡ ಇವರ ತಮಾಷೆ, ತುಂಟಾಟ ರೇಗಿಸುವುದು ಎಲ್ಲ ಮಾಮೂಲಾಗಿತ್ತು. ಈಗಂತೂ ಒಂದು ಕ್ಷಣ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆತ್ಮೀಯರಾಗಿಬಿಟ್ಟರು. ಮತ್ತೆ ಮತ್ತೆ ಭೇಟಿ ಮಾಡಿ ಇನ್ನಷ್ಟು ಹೊತ್ತು ಅವರ ಜೊತೇಲಿ ಕಳೀಬೇಕು ಅನ್ನೋ ಆಸೆಯಿಂದ ಸಂಧ್ಯಾ, ಸುನೀಲನ ಕೈ ಹಿಡಿದು ಎಳೆದು, ರೂಮಿನಿಂದ ಕರೆದುಕೊಂಡು ಬರುತ್ತಿದ್ದಳು.

“ರೂಮಿನಲ್ಲಾದರೂ ಅವರನ್ನು ನೆಮ್ಮದಿಯಾಗಿ ಇರೋಕೆ ಬಿಡು. ಇಷ್ಟು ಹೊತ್ತು ಮಾತನಾಡಿದ್ದು, ಹರಟಿದ್ದು ಸಾಕಾಗಿಲ್ವಾ? ನಾವು ಕೂಡ ಸ್ವಲ್ಪ ರೆಸ್ಟ್ ತಗೊಳ್ಳೋಣಾ. ರಾತ್ರಿ ಬಹಳ ಹೊತ್ತಾಗಿದೆ. ಬೆಳಗ್ಗೆ ಬೇಗನೆ ರೆಡಿಯಾಗುವೆತೆ ಗ್ರೂಪ್‌ ಲೀಡರ್ ಹೇಳಿದ್ದಾರೆ. ಬಾ ಹೋಗೋಣ…,” ಎನ್ನುತ್ತಾ ಸಂಧ್ಯಾಳನ್ನು ಪ್ರೀತಿಯಿಂದ ದರದರನೇ ತಳ್ಳಿಕೊಂಡು ಹೋದ.

ಆದರೆ ಸಂಧ್ಯಾ ಅಷ್ಟಕ್ಕೆ ತೃಪ್ತಳಾಗಲಿಲ್ಲ. ರೂಮಿಗೆ ಬಂದ ಮೇಲೂ ಮೊಬೈಲ್ ‌ಕೈಗೆತ್ತಿಕೊಂಡು ಭಾಗ್ಯಾಳೊಂದಿಗೆ ವಾಟ್ಸ್ಆ್ಯಪ್‌ನಲ್ಲಿ ಮತ್ತೆ ಚಾಟ್‌, ಜೋಕ್‌, ಕಾಮೆಂಟ್‌ ಮಾಡಲು ಶುರು ಮಾಡಿದಳು. ಭಾಗ್ಯಾ ಸಂಧ್ಯಾಳ ಫೇಸ್‌ಬುಕ್‌ಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದರೆ, ಸಂಧ್ಯಾ ತಕ್ಷಣವೇ ಸ್ವೀಕಾರ ಮಾಡಿಕೊಳ್ಳುತ್ತಿದ್ದಳು. ತಾವು ಓಡಾಡಿದ ಸ್ಥಳದ ಫೋಟೋ ರಮಣೀಯ ದೃಶ್ಯಗಳ ವೀಡಿಯೋಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಖುಷಿಪಡುತ್ತಿದ್ದರು.

ಅದರಲ್ಲೂ ಪದೇ ಪದೇ ತೆಗೆದುಕೊಳ್ಳುವ ಸೆಲ್ಛಿ ಫೋಟೋಗಳನ್ನು ವಾಟ್ಸ್ಆ್ಯಪ್‌ ಮೂಲಕ ಪರಸ್ಪರ ಶೇರ್‌ ಮಾಡಿಕೊಂಡು ಸಂಭ್ರಮಿಸಿದರು. ಜೊತೆಗೆ ಫೋಟೋಗಳ ಜೊತೆಗೆ ಸಾಲುಸಾಲು ಕಾಮೆಂಟ್ಸ್ ಗಳನ್ನು ಮಾಡುತ್ತ ತಮ್ಮ ಚತುರತೆಯನ್ನು ಪ್ರದರ್ಶಿಸುತ್ತಿದ್ದರು. ಸಂಧ್ಯಾ ಹಾಗೂ ಭಾಗ್ಯಾರ ನಡುವೆ ಹಗಲುರಾತ್ರಿಗಳೆನ್ನದೆ ಸುಲಲಿತ ಸಂಭಾಷಣೆ ನಿರಂತರವಾಗಿ ಸಾಗುತ್ತಲೇ ಇತ್ತು. ಇದರ ನಡುವೆ ಊರುಕೇರಿ ಸಮಾಚಾರ, ಬಂಧುಗಳು, ಸ್ನೇಹಿತರು, ಸಾಮಾಜಿಕ, ರಾಜಕೀಯ, ಸಿನಿಮಾ….. ಹೀಗೆ ಹತ್ತು ಹಲವಾರು ಸ್ತರಗಳಲ್ಲಿ ಮಾತುಕತೆ ನಡೆಯುತ್ತಾ ಸಾಗಿತ್ತು. ಹಾಗೆಯೇ ಮಾತನಾಡುತ್ತಾ ಅವರ ಮಾತೂ ಎಲ್ಲಿಯವರೆಗೆ ಮುಟ್ಟಿತೆಂದರೆ  ತಂತಮ್ಮ ವೈಯಕ್ತಿಕ ವಿಚಾರಗಳ ವಿಶ್ಲೇಷಣೆಗೆ ಬರಲಾರಂಭಿಸಿದವು. ಮೊದ ಮೊದಲು ಕೇವಲ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದರೆ ನಂತರ ತಮ್ಮ ಆಯ್ಕೆ, ಅಭಿರುಚಿ, ಇಷ್ಟ ಕಳೆದುಹೋದ ಬಾಲ್ಯ, ಶಾಲಾಕಾಲೇಜು ದಿನಗಳ ಬಗ್ಗೆಯೂ ಕೂಡ ಮಾತುಕತೆ ವಿಸ್ತಾರ ಪಡೆದುಕೊಂಡಿತು. ಸಂಧ್ಯಾ ಅದೆಷ್ಟೋ ಬಾರಿ, `ನನ್ನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ಭಾಗ್ಯಾಳೊಂದಿಗೆ ನನ್ನ ಕಳೆದುಹೋದ ಸಿಹಿ ನೆನಪುಗಳನ್ನು ಹಂಚಿಕೊಳ್ಳ ಬೇಕೆಂಬ ಉತ್ಕಟ ಅಭಿಲಾಷೆ ಇದೆ. ಇಂದು ಎಲ್ಲವನ್ನೂ ಹೇಳಿಕೊಂಡುಬಿಡಬೇಕು….’ ಎಂದುಕೊಳ್ಳುತ್ತಾ ಅಂದು ರಾತ್ರಿ ಸಂಧ್ಯಾ, ಇಷ್ಟು ದಿನ ತನ್ನ ಹೃದಯದಲ್ಲಿ ಬಚ್ಚಿಟ್ಟುಕೊಂಡಿದ್ದ ಸತ್ಯವನ್ನು ಹೇಳಬೇಕು ಅನ್ನುವಷ್ಟರಲ್ಲಿ ಭಾಗ್ಯಾ ತನ್ನ ವೈಯಕ್ತಿಕ ವಿಚಾರವನ್ನು ಸಂಧ್ಯಾಳ ಎದುರು ಮುಕ್ತವಾಗಿ ತೆರೆದಿಟ್ಟಳು. ಅದು ಎಂದೂ ಮಾಸದ ಅವಳ ಮದುವೆ ನೆನಪು, ಮದುವೆಗೂ ಮುಂಚಿನ ಪ್ರೇಮದ ಸೆಳೆತ, ಪ್ರೀತಿಯ ಪುಳಕದೊಂದಿಗೆ ಓಡಾಡಿದ ಕ್ಷಣದಿಂದ ಆರಂಭಗೊಂಡು ಮದುವೆ ಆಗುವವರೆಗಿನ ಎಲ್ಲಾ ವಿವರಗಳನ್ನು ರಮ್ಯವಾಗಿ ವರ್ಣಿಸತೊಡಗಿದಳು.

ಮದುವೆಗೂ ಮುಂಚೆಯೇ ಭಾಗ್ಯಾಳ ಬದುಕಿನಲ್ಲಿ ದಿವಾಕರನ ಪ್ರವೇಶವಾಗಿತ್ತು. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರ ಕುಟುಂಬದವರು ಬೇರೆ ಬೇರೆ ಜಾತಿ ಹಾಗೂ ಧರ್ಮದವರಾಗಿದ್ದರು. ಇದರಿಂದ ಇವರ ಪ್ರೀತಿಗೆ ಜಾತಿಧರ್ಮವೇ ಕಂಟಕವಾಗಿ ಪರಿಣಮಿಸಿತ್ತು.  ಮದುವೆ ವಿಚಾರದಲ್ಲಿ ಎರಡೂ ಕುಟುಂಬಗಳ ನಡುವೆ ತಕರಾರು ನಡೆದು ನಿಂತುಹೋಗಿತ್ತು. ಆದರೆ ಕೊನೆಗೊಮ್ಮೆ ದಿವಾಕರ ಹಾಗೂ ಭಾಗ್ಯಾ ತಮ್ಮ ಕುಟುಂಬದವರ ಮನವೊಲಿಸುವಲ್ಲಿ ಸಫಲರಾದರು. ಅಂತೂ ಇಂತೂ ದಿವಾಕರ ಭಾಗ್ಯಾರ ಮದುವೆ ಸುಸೂತ್ರವಾಗಿ ನಡೆದುಹೋಯಿತು.

ವಾಟ್ಸ್ಆ್ಯಪ್‌ನಲ್ಲಿ ಭಾಗ್ಯಾಳ ಪ್ರೇಮಕಥೆಯನ್ನು ಓದಿದ ಮೇಲೆ ಸಂಧ್ಯಾಳ ಹೃದಯದಲ್ಲಿ ಅಲ್ಲೋಲಕಲ್ಲೋಲ ಉಂಟಾಯಿತು. ಕಳೆದುಹೋದ ಸಿಹಿ ನೆನಪುಗಳು ಮರುಕಳಿಸಿ ಮನಸ್ಸು ಹಕ್ಕಿಯಂತೆ ಹಾರಾಡತೊಡಗಿತು. ಅಂದು ರಾತ್ರಿ ಇಡೀ ವಿಶ್ವವೇ ಸುಂದರವಾಗಿ ಕಂಡಿತು. ಇದೇ ಗುಂಗಿನಲ್ಲಿ ತನ್ನ ಬದುಕಿನಲ್ಲೂ ನಡೆದುಹೋದ ಪ್ರೇಮಕಥೆಯನ್ನು ಭಾಗ್ಯಾಳಿಗೆ ಹೇಳಬೇಕೆಂದರೂ, ಧೈರ್ಯ ಸಾಕಾಗುತ್ತಿರಲಿಲ್ಲ. ಈಗಷ್ಟೇ ಪರಿಚಿತಳಾಗಿರೋ ಸ್ನೇಹಿತೆ ಬಳಿ ಇದನ್ನೆಲ್ಲಾ ಹೇಳುವುದು ಎಷ್ಟು ಸರಿ? ತನ್ನ ಮಾಜಿ ಪ್ರಿಯಕರನ ಮುಖವನ್ನು ನೋಡಿರದ ಭಾಗ್ಯಾ ನನ್ನ ಬಗ್ಗೆ ಏನೆಂದುಕೊಂಡಾಳು? ಮುಂತಾದ ಹಲವಾರು ಗೊಂದಲಗಳ ನಡುವೆ ಹಾಗೆಯೇ ನಿದ್ದೆಹೋದಳು. ಮರುದಿನ ಬೆಳಗ್ಗೆ ಸಂಧ್ಯಾಳಿಗೆ ತನ್ನ ಪ್ರೇಮಕಥೆಯನ್ನು ಬಚ್ಚಿಟ್ಟುಕೊಳ್ಳುವುದು ಸಾಧ್ಯವಾಗಲಿಲ್ಲ. ಪ್ರತಿದಿನದಂತೆ ಇಂದೂ ಕೂಡ ವಾಟ್ಸ್ಆ್ಯಪ್‌ನಲ್ಲಿ ಮಾತುಕತೆ ನಡೆಯುತ್ತಿತ್ತು. ಹಾಗೆಯೇ ಸಾಗಿದ ಮಾತುಕತೆಯ ನಡುವೆ, ಸರಿಯಾದ ಸಂದರ್ಭ ನೋಡಿಕೊಂಡು ಸಂಧ್ಯಾ, ತನ್ನ ಮನದ ಗೂಡಿನಲ್ಲಿ ಬಚ್ಚಿಟ್ಟುಕೊಂಡಿದ್ದ `ಪ್ರೇಮ್ ಕಹಾನಿ’ಯನ್ನು ನಿಧಾನವಾಗಿ ಟೈಪ್‌ ಮಾಡಲಾರಂಭಿಸಿದಳು.

`ಡಿಯರ್‌ ಭಾಗ್ಯಾ….. ಹಿಂದೊಮ್ಮೆ  ನಾನೂ ಕೂಡ ಈ ಪ್ರೇಮದ ಬಲೆಯಲ್ಲಿ ಬಿದ್ದಿದ್ದೆ. ಆದರೆ ದುರಾದೃಷ್ಟವಶಾತ್‌ ಆ ಪ್ರೀತಿ ನನ್ನ ಪಾಲಿಗೆ ದಕ್ಕಲಿಲ್ಲ….’

ಭಾಗ್ಯಾ ತಕ್ಷಣವೇ ಆಶ್ಚರ್ಯಭರಿತ ಚಿಹ್ನೆಯನ್ನು ಕಳುಹಿಸಿ, `ಯಾರವನು ನಿನ್ನ ಹೃದಯ ಕದ್ದಿದ್ದ ಚೋರ? ಹೇಳೆ ಪ್ಲೀಸ್‌…. ನಿನ್ನ ಲವ್ ಸ್ಟೋರಿನಾ ನನ್ನ ಜೊತೆ ಹೇಳಬಾರದಾ?’ ಎನ್ನುತ್ತಾ  ಕುತೂಹಲಭರಿತಳಾಗಿ ಒತ್ತಾಯಿಸಿದಳು. ಆಗ ಸಂಧ್ಯಾ ಲವಲವಿಕೆಯಿಂದ ಬೇಗಬೇಗನೇ ಟೈಪ್‌ ಮಾಡುತ್ತಾ, ತನ್ನ ಪ್ರೇಮಕಥೆಯನ್ನು ಬಿಚ್ಚಿಟ್ಟಳು.

`ಹಾಂ… ಭಾಗ್ಯಾ, ನಾನು ಓದುತ್ತಿದ್ದ ಕಾಲೇಜಿನಲ್ಲೇ ಅವನು ಓದುತ್ತಿದ್ದ. ಹೆಸರು ಸಂಜಯ್‌ ಅಂತ. ಕಣ್ಣಿನಲ್ಲೇ ಆರಂಭವಾದ ಪ್ರೀತಿ ಹೃದಯಕ್ಕೆ ಸೇರುವಷ್ಟರಲ್ಲಿ ಒಬ್ಬರನ್ನೊಬ್ಬರು ಒಪ್ಪಿಕೊಂಡಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾದೆವು. ನಗು, ಮಾತು, ಕುಡಿನೋಟ, ಸ್ಪರ್ಶ….. ಎಲ್ಲ ಆಪ್ತವಾದ ಕ್ಷಣಗಳಾಗಿ ಹೋದವು. `ಒಲವೇ ಜೀವನ ಸಾಕ್ಷಾತ್ಕಾರ’ ಎನ್ನುವಷ್ಟು ನಮ್ಮ ಪ್ರೀತಿ ಬೆಳೆದಿತ್ತು. ಮೊಬೈಲ್‌ನಲ್ಲಿ ಮಾತು ಆರಂಭಿಸಿದರೆ, ಗಂಟೆಗಳೇ ಸಾಕಾಗುತ್ತಿರಲಿಲ್ಲ. ಪ್ರತಿ ಮಾತುಗಳು ಪೋಣಿಸಿದ ಮುತ್ತಿನಂತೆ ಸೊಗಸಾಗಿತ್ತು. ಪ್ರತಿಕ್ಷಣ ಚೇತೋಹಾರಿಯಾಗಿತ್ತು. `ಅರ್ಥವಾಗದ ಅದೆಷ್ಟೋ ಪ್ರಶ್ನೆಗಳು… ಮನದ ಮರೆಯಲ್ಲಿ ಏಕಾಂತದ ಪಯಣ, ಪ್ರೀತಿ ಇಲ್ಲದ ಬದುಕು ಅದೆಷ್ಟು ನೀರಸ ಎನಿಸುತ್ತಿತ್ತು. ಬದುಕು ಎಷ್ಟು ಚಿರನೂತನ ಅಲ್ಲವೇ? ಒಮ್ಮೊಮ್ಮೆ ತುಂಬಾ ರೊಮ್ಯಾಂಟಿಕ್‌ ಆಗಿ ಮಾತನಾಡುತ್ತಿದ್ದರೆ, ಕೆಲವೊಮ್ಮೆ ಚಿಕ್ಕಪುಟ್ಟ ವಿಚಾರಗಳಿಗೆಲ್ಲಾ ಕಿತ್ತಾಡುತ್ತಿದ್ದೆವು ಗೊತ್ತಾ….? ಅದೆಷ್ಟೋ ಬಾರಿ ಪ್ರಾಪಂಚಿಕ ಇರುವನ್ನೇ ಮರೆತು ನಮ್ಮದೇ ಪ್ರೇಮಲೋಕದಲ್ಲಿ ಕಳೆದುಹೋಗುತ್ತಿದ್ದೆವು. ಅಷ್ಟರಮಟ್ಟಿಗೆ ನಮ್ಮ ಎಲ್ಲಾ ಮಿತಿಯನ್ನು ಮೀರಿದ ಸಂಬಂಧವಾಗಿ ಬೆಳೆದಿತ್ತು. ಮನೆಯಲ್ಲಿ ನಮ್ಮ ಮದುವೆಗೆ ಒಪ್ಪಿಗೆ ಸಿಕ್ಕೇ ಸಿಗುತ್ತದೆ ಅನ್ನುವ ನಂಬಿಕೆಯಿಂದ ನನ್ನನ್ನು ನಾನೇ ಸಂಪೂರ್ಣವಾಗಿ ಸಂಜಯ್‌ಗೆ ಸಮರ್ಪಿಸಿಕೊಂಡೆ……’

ಸಂಧ್ಯಾ ವಾಟ್ಸ್ಆ್ಯಪ್‌ನಲ್ಲಿ ಹಾಗೆಯೇ ಟೈಪ್‌ ಮಾಡುತ್ತಾ ಹೋದಳು, `ಅವತ್ತು ನಮ್ಮ ತಂದೆ ನನ್ನೊಂದಿಗೆ ಮಾತನಾಡುತ್ತಾ, `ಸಂಧ್ಯಾ, ನಿನ್ನ ಕಾಲೇಜು ಮುಗಿಯಿತು. ಇನ್ನು ಏನಿದ್ದರೂ ನಿನ್ನ ಮದುವೆ ವಿಚಾರ. ಈಗ ನಿನಗೆ ಮದುವೆ ಕಾಲ ಕೂಡಿ ಬಂದಿದೆ. ಒಳ್ಳೆಯ ಹುಡುಗನನ್ನು ನೋಡಿ ಆದಷ್ಟು ಬೇಗ ನಿನಗೆ ಮದುವೆ ಮಾಡಬೇಕು ಅಂತ ನಿರ್ಧರಿಸಿದ್ದೀವಿ, ನಿನ್ನ ಅಭಿಪ್ರಾಯ ಏನು….?’ ಎಂದರು.

`ಅನಿರೀಕ್ಷಿತವಾಗಿ ತಂದೆಯಿಂದ ಎದುರಾದ ಪ್ರಶ್ನೆಗೆ ಉತ್ತರಿಸಲಾಗದೆ ಕ್ಷಣಕಾಲ ಕಕ್ಕಾಬಿಕ್ಕಿಯಾಗಿಬಿಟ್ಟೆ. ನಂತರ ಸಾವರಿಸಿಕೊಂಡು ನಿಧಾನವಾಗಿ, `ಅಪ್ಪಾಜಿ…. ನನಗೆ ಈಗಲೇ ಮದುವೆ ಬೇಡ…. ನನಗೆ ಇನ್ನೂ ಓದಬೇಕು ಅಂತ ಆಸೆಯಿದೆ. ಅರ್ಜೆಂಟಾಗಿ ಮದುವೆ ಮಾಡುವುದಕ್ಕೆ ನನಗೀಗ ಅಂಥ ವಯಸ್ಸೇನಾಗಿದೆ….’ ಎಂದೆ.

`ತಂದೆ ಸಾವಧಾನವಾಗಿ, `ವಯಸ್ಸು ಈಗಾಗೀ 25ರ ಆಸುಪಾಸಿನಲ್ಲಿದೆ, ವಯಸ್ಸು ಚಿಕ್ಕದಾಗಿದ್ದಾಗಲೇ ಮದುವೆ ಆಗಿ ಬಿಡಬೇಕು.’ ಅಂದಾಗ ನಾನು ಹೇಳಿದೆ, `ಇಲ್ಲಾ ಅಪ್ಪಾಜಿ…. ನನಗೆ ಈಗ ಮದುವೆ ಬೇಡ, ಅಂದಾಕ್ಷಣ ಅಪ್ಪಾಜಿ ನಗುತ್ತಾ ನಿಜವಾಗಲೂ ನೀನು ಪುಟ್ಟ ಪಾಪೂನೇ….’ ಎಂದರು.

`ಇದೆಲ್ಲದರ ನಡುವೆ ನಾನು ತಂದೆಯವರ ನಿರ್ಧಾರವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಅವರು ಮಾತ್ರ ನನ್ನ ಮದುವೆ ಮಾಡಿ ಮುಗಿಸಲೇಬೇಕೆಂಬ ಜಿದ್ದಿನಲ್ಲಿದ್ದರು. ಅಲ್ಲದೆ, ಆಗಲೇ ಒಬ್ಬ ಹುಡುಗನನ್ನು ನೋಡಿಯೂ ಇದ್ದರು.

`ಸಂಧ್ಯಾ… ನಿನಗೆ ಅನುರೂಪವಾಗಿರೋ ಹುಡುಗನನ್ನು ನೋಡಿದೀನಿ. ಒಳ್ಳೆಯ ಸುಸಂಸ್ಕೃತ ಕುಟುಂಬದಿಂದ ಬಂದಂತಹ ಸಭ್ಯ ಹುಡುಗ, ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿದ್ದಾನೆ. ವರ್ಷಕ್ಕೆ 25 ಲಕ್ಷ ಸಂಬಳದ ಪ್ಯಾಕೇಜ್‌. ಮುಂದಿನ ವಾರವೇ ನಿನ್ನನ್ನು ನೋಡೋಕೆ ಅವರು ನಮ್ಮ ಮನೆಗೆ ಬರುತ್ತಾರೆ,’ ಎಂದರು.

`ತಂದೆಯ ಮಾತು ಕೇಳಿ ಅವಾಕ್ಕಾದೆ. ಏನು ಮಾಡಬೇಕೆಂದು ದಿಕ್ಕೇ ತೋಚದಂತಾಯಿತು. ಇನ್ನೂ ಸುಮ್ಮನಿದ್ದರೆ ಸರಿ ಇರಲ್ಲ ಎಂದು ಭಾವಿಸಿ, ಯಾವುದೋ ಧೈರ್ಯ ತಂದುಕೊಂಡು `ಅಪ್ಪಾಜಿ, ನಾನು… ನಾನೂ ಒಬ್ಬ ಹುಡುಗನನ್ನು ಪ್ರೀತಿಸಿದ್ದೀನಿ. ನೀವು ಆ ಹುಡುಗನ ಜೊತೆ ಮದುವೆಯ ಮಾತುಕತೆ ಮಾಡಿ…. ಎಂದೆ.

`ತಂದೆ ಆಶ್ಚರ್ಯಚಕಿತರಾಗಿ ನನ್ನ ಮುಖನ್ನೊಮ್ಮೆ ದಿಟ್ಟಿಸಿ ನೋಡಿದರು. ನನ್ನ ಈ ನಿಲುವು ಅವರನ್ನು ಗಲಿಬಿಲಿಗೊಳಿಸಿತ್ತು. ಏಕೆಂದರೆ ಇಲ್ಲಿಯವರೆಗೂ ಅವರ ದೃಷ್ಟಿಯಲ್ಲಿ ನಾನು ಒಬ್ಬ ಮುಗ್ಧೆ, ಸೀದಾಸಾದಾ ಹುಡುಗಿಯಾಗಿದ್ದವಳು. ಈ ಪ್ರೀತಿ, ಪ್ರೇಮ ಅಂತೆಲ್ಲಾ ಓಡಾಡಿಕೊಂಡಿರುವುದು ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

`ಆ ಹುಡುಗ ಯಾರು….?’ ತಂದೆ ಗಡಸು ದನಿಯಲ್ಲಿ ಕೇಳಿದರು. `ಸಂಜಯ್‌ ಅಂತ. ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದ್ತಾ ಇದ್ದೀವಿ,’ ಎನ್ನುತ್ತಾ ಅವನ ಮನೆ ವಿಳಾಸವನ್ನು ನೀಡಿದೆ. ಆಗಲೇ ತಂದೆ ಸಿಟ್ಟು ನೆತ್ತಿಗೇರಿ ಕೂಗಾಡಲಾರಂಭಿಸಿದರು.

`ಈ ಮದುವೆ ಸಾಧ್ಯೀ ಇಲ್ಲ. ಈ ಸಂಬಂಧ ನಮಗೆ ಬೇಡ ಎಂದಾಕ್ಷಣ ನಾನು ನಿಂತಲ್ಲೇ ಕುಸಿದುಹೋದೆ. ನನ್ನ ಕನಸಿನ ಸೌಧ ಒಂದೇ ಸಮನೆ ಕುಸಿದು ಧರೆಗುರುಳಿದಂತೆ ಭಾಸವಾಯಿತು. ಮನೆಯವರು ಈ ಮದುವೆಗೆ ಒಪ್ಪುತ್ತಾರೆ ಅನ್ನೋ ವಿಶ್ವಾಸದಲ್ಲಿ ನಾನು ಈಗಾಗಲೇ ಸಂಜಯ್‌ಗೆ ನನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದೆ. ನಿಂತ ನೆಲವೇ ಕಂಪಿಸಿದಂತೆ ಭಾಸವಾಯಿತು. ಒಂದೆರಡು ದಿನಗಳು ಕಳೆಯುತ್ತಿದ್ದಂತೆ ತಂದೆಯವರೊಡನೆ ಮನೆಯವರೆಲ್ಲರೂ ಸೇರಿ ಅಂತಿಮ ನಿರ್ಧಾರ ತೆಗೆದುಕೊಂಡು ಯಾವುದೇ ಪರಿಸ್ಥಿತಿಯಲ್ಲೂ ಕೂಡ ನನ್ನ ಹಾಗೂ ಸಂಜಯ್‌ ಮದುವೆ ನಡೆಯಲೇಬಾರದು ಎಂದು ತೀರ್ಮಾನ ತೆಗೆದುಕೊಂಡರು. ತಮ್ಮ ನಿರ್ಧಾರವೇ ಅಂತಿಮ ನಿರ್ಧಾರವೆಂದು ಘೋಷಣೆ ಮಾಡಿದ ತಂದೆ, ವಿಷಮ ಸ್ಥಿತಿಯನ್ನು ಸೃಷ್ಟಿಸಿದರು.

`ವಾರಾಂತ್ಯದಲ್ಲಿ ನನ್ನನ್ನು ನೋಡಲು ಸುನೀಲ್ ಹಾಗೂ ಅವರ ಮನೆಯವರು ಆಗಮಿಸಿದರು. ಎಲ್ಲಾ ಔಪಚಾರಿಕ ಮಾತುಕತೆ ಮುಗಿದು ನಾನು ಅವರಿಗೆ ಹಿಡಿಸಿದೆ. ಸಂಬಂಧ ಗಟ್ಟಿ ಮಾಡಿದರು. ನಡೆದುದೆಲ್ಲಾ ಒಂದು ಕೆಟ್ಟ ಕನಸೆಂದು ತಿಳಿದು ಎಲ್ಲವನ್ನೂ ಮರೆತುಬಿಡು ಎಂದು ತಂದೆ ಬುದ್ಧಿಮಾತು ಹೇಳಿ ನನ್ನನ್ನು ಒಪ್ಪಿಸಿದರು. ಹೀಗೆ ಬಲವಂತದ `ಮಾಘಸ್ನಾನ’ ಎಂಬಂತೆ ನನ್ನ ಹಾಗೂ ಸುನೀಲ್ ‌ಮದುವೆ ನಡೆದುಹೋಯಿತು.

`ಬದುಕಿನಲ್ಲಿ ನಾವು ಅಂದುಕೊಂಡಿದ್ದು ಯಾವುದೂ ನಡೆಯೋಲ್ಲ ಎನ್ನುವ ಸತ್ಯವನ್ನು ಸಾಬೀತುಪಡಿಸಿತ್ತು. ದಿನಗಳೆದಂತೆ ನಾನೂ ನಿಧಾನವಾಗಿ ಎಲ್ಲವನ್ನೂ ಮರೆತು, ಅಚ್ಚುಕಟ್ಟಾಗಿ ಮನೆಯನ್ನು ನೋಡಿಕೊಂಡು ಹಾಯಾಗಿ ಉಳಿದೆ. ಅಂತೂ ಇಂತೂ ಮದುವೆ ಆಗಿ 2 ವರ್ಷಗಳು ಕಳೆದುಹೋದವು.’

ಸಂಧ್ಯಾ ತನ್ನ ಗತಿಸಿಹೋದ ಪ್ರೇಮ ಕಥೆಯನ್ನು ವಾಟ್ಸ್ಆ್ಯಪ್‌ ಮೂಲಕ ಭಾಗ್ಯಾಳಿಗೆ ಕಳುಹಿಸಿದಳು. ಜೊತೆಗೆ ಫೇಸ್‌ಬುಕ್‌ನಿಂದ ಡೌನ್‌ ಲೋಡ್‌ ಮಾಡಿದ ಸಂಜಯ್‌ನ ಫೋಟೋವನ್ನೂ ಕೂಡ ಕಳುಹಿಸಿದಳು.

ಪತ್ರವನ್ನು ಓದಿದ ಭಾಗ್ಯಾ, “ಮೇಡಂ, ನೀವು ಬದುಕನ್ನು ಎಷ್ಟು ಜಾಣ್ಮೆಯಿಂದ ನಿಭಾಯಿಸಿದಿರಿ. ಹ್ಯಾಟ್ಸಾಫ್‌ ಟು ಯೂ….!” ಎಂದು ಪ್ರತಿಕ್ರಿಯಿಸಿದಳು. ಹೀಗೆ ತಮಾಷೆ, ಚೆಲ್ಲಾಟಾ, ಖುಷಿ, ಚರ್ಚೆ, ವಿಶ್ಲೇಷಣೆ, ವಿನೋದ, ವಿಹಾರದೊಂದಿಗೆ ಯೂರೋಪ್ ಪ್ರವಾಸ ಪ್ರಯಾಸವಿಲ್ಲದೆ ಮುಗಿದು ಹೋಗಿತ್ತು.

ಟೂರ್‌ ಮುಗಿಸಿ ಬಂದ ಸುನೀಲ್ ‌ಹಾಗೂ ಸಂಧ್ಯಾ ಬಹಳ ಸುಸ್ತಾಗಿ ಬಳಲಿದ್ದರು. ರಾತ್ರಿ ಎರಡು ಗಂಟೆಯಾಗಿತ್ತು. ಬೆಳಗ್ಗೆ ಲೇಟಾಗಿ ಎದ್ದರಾಯಿತು ಅಂದುಕೊಂಡು ಮಲಗಿದರು. ಅತ್ತೆ ಬಾಗಿಲು ಬಡಿದು, “ಸುನೀಲ್, ಸಂಧ್ಯಾ ಎದ್ದೇಳಿ…. ಈಗಾಗಲೇ ಗಂಟೆ ಹನ್ನೊಂದಾಯಿತು. ಸ್ನಾನ ಮಾಡಿ ತಿಂಡಿ ತಿನ್ನಿ,” ಅಂದಾಗಲೇ ಎಚ್ಚರವಾಯಿತು. ಲಗುಬಗೆಯಿಂದ ಎದ್ದ ಸಂಧ್ಯಾ ಬೇಗ ಬೇಗನೆ ಸ್ನಾನ ಮಾಡಿ, ಅಡುಗೆ ಮನೆಗೆ ಬಂದು ತಿಂಡಿಯನ್ನು ಡೈನಿಂಗ್‌ ಟೇಬಲ್ ಮೇಲೆ ತಂದಿಟ್ಟಳು. ಅಷ್ಟರಲ್ಲಿ ಸುನೀಲ್ ‌ಫ್ರೆಶ್‌ ಆಗಿ ತಿಂಡಿ ತಿನ್ನಲು ಬಂದ. ತಿಂಡಿ ತಿನ್ನುವಾಗ ಸಂಧ್ಯಾಳಿಗೆ ತನ್ನ ಮೊಬೈಲ್ ಎಲ್ಲೋ ಇಟ್ಟಿರುವುದು ನೆನಪಾಯಿತು. ಆ ಕಡೆ ಈ ಕಡೆ ನೋಡಿದಳು. ಎಲ್ಲೂ ಮೊಬೈಲ್ ಸುಳಿವಿಲ್ಲ. ಕೊನೆಗೆ ಮೊಬೈಲ್ ಎಲ್ಲಿ ಎಂದು ಯೋಚಿಸುತ್ತಿರುವಾಗ ರಾತ್ರಿ ತಡವಾಗಿ ಬಂದಾಗ ಟೇಬಲ್ ಮೇಲಿಟ್ಟಿದ್ದು ಜ್ಞಾಪಕವಾಯಿತು.

“ಸಂಧ್ಯಾ, ನಾನು ಆಫೀಸಿಗೆ ಹೋಗ್ತಾ ಇದೀನಿ. ಇವತ್ತು ಬಾಸ್‌ ಬರ್ತಿದ್ದಾರೆ. 3-4 ಗಂಟೆ ಅವರ ಜೊತೆ ಮೀಟಿಂಗ್‌ನಲ್ಲಿರುತ್ತೀನಿ,” ಎನ್ನುತ್ತಾ ಸುನೀಲ್ ಮನೆಯಿಂದ ಹೊರಟ.

ಸುನೀಲ್ ‌ಆಫೀಸಿಗೆ ಹೊರಟ ಮೇಲೆ ಸಂಧ್ಯಾ ಮೊಬೈಲ್ ‌ಹುಡುಕುವುದರಲ್ಲಿ ಬಿಝಿಯಾದಳು. ಎಲ್ಲಾ ಕಡೆ ಹುಡುಕಾಡಿದಳು. ಆದರೆ ಮೊಬೈಲ್ ‌ಎಲ್ಲೂ ಕಾಣಿಸಲಿಲ್ಲ. ಕೊನೆಗೆ ಉಳಿದದ್ದು ಆಕಾಶ್‌ ರೂಮ್ ಒಂದೇ. ಅಲ್ಲೂ ಕೂಡ ನೋಡೇಬಿಡೋಣ ಅಂತ ಸಂಧ್ಯಾ ಮೈದುನ ಆಕಾಶನ ರೂಮಿಗೆ ಹೋದಳು.

ಸಂಧ್ಯಾಳ ಮೊಬೈಲ್ ಆಕಾಶ್‌ ಕೈಯಲ್ಲಿತ್ತು. ಮುಸಿ ಮುಸಿ ನಗುತ್ತಾ ವಾಟ್ಸ್ಆ್ಯಪ್‌ ಮೆಸೇಜ್‌ ಓದುತ್ತಿದ್ದ. ಸಂಧ್ಯಾ, ಭಾಗ್ಯಾಳಿಗೆ ಕಳುಹಿಸಿದ ಮೆಸೇಜ್‌ ಅದರಲ್ಲಿ ಇತ್ತು. ಎಲ್ಲಾ ವಿವರಗಳನ್ನೂ ಪೂರ್ಣವಾಗಿ ಓದಿ ಮೊಬೈಲ್‌ನ್ನು ಟೇಬಲ್ ಮೇಲೆ ಇಟ್ಟ.

“ಆಕಾಶ್‌ ಏನು ನೋಡ್ತಾ ಇದೀಯಾ? ನನ್ನ ಮೊಬೈಲ್ ನಿನ್ನ ಹತ್ರ ಹೇಗೆ ಬಂತು…?” ಎಂದಳು.

ಚಪಲಚಿತ್ತ ಆಕಾಶನ ತುಟಿಯ ಮೇಲೆ ಕುಟಿಲ ನಗುವೊಂದು ತೇಲಿಹೋಯಿತು.

“ಏನಿಲ್ಲ ಅತ್ತಿಗೆ…. ನಿಮ್ಮ ಕಳೆದುಹೋದ ಸುಂದರ ಪ್ರೇಮಕಥೆ ಐ ಮೀನ್‌ ನಿಮ್ಮ ಲವ್ ಸ್ಟೋರಿ ಓದ್ತಾ ಇದ್ದೆ. ನಿಮ್ಮ ಪ್ರಿಯಕರನ ಭಾವಚಿತ್ರ ಕೂಡ ನೋಡ್ದೆ…. ತುಂಬಾ ಸ್ಮಾರ್ಟ್‌ ಆಗಿದ್ದಾನೆ. ಅವನ ಹೆಸರೇನು?  ಹಾಂ…. ಸಂಜಯ್‌,” ಎನ್ನುತ್ತಾ ವ್ಯಂಗ್ಯ ನಗೆ ನಗುತ್ತಿದ್ದಂತೆ ಸಂಧ್ಯಾಳ ಕಣ್ಣಲ್ಲಿ ಕತ್ತಲೆ ಆವರಿಸಿದಂತಾಯಿತು.

“ಅದೆಲ್ಲಾ ಏನೂ ಇಲ್ಲ… ಸುಮ್ನೆ ತಮಾಷೆಗೋಸ್ಕರ ನಾನೇ ಸೃಷ್ಟಿ ಮಾಡಿದ ಕಥೆ ಅದು,” ಎನ್ನುತ್ತ ಭಯದಿಂದಲೇ ಹೇಳಿದಳು. ಆಕಾಶ್‌ ಸಂಧ್ಯಾಳ ಬಳಿ ಬಂದು ಕಿವಿಯಲ್ಲಿ, “ಈ ತಮಾಷೆಯ ಕಥೆ ಅಣ್ಣಂಗೆ ಗೊತ್ತಾದರೆ….?” ಎನ್ನುತ್ತಾ ಸಂಧ್ಯಾಳನ್ನು ಆಸೆಯ ಕಂಗಳಿಂದ ನೋಡಿದ. ಆಕಾಶ್‌ ನಡವಳಿಕೆಯಿಂದಲೇ ಸಂಧ್ಯಾಳಿಗೆ ಎಲ್ಲ ಅರ್ಥವಾಗಿ ಹೋಗಿತ್ತು. ತನ್ನ ಅಜಾಗರೂಕತೆಯಿಂದ ಮೂರನೇ ವ್ಯಕ್ತಿ ಜೊತೆ ಚಾಟ್‌ ಮಾಡಿದ ಮೆಸೇಜ್‌ನ್ನು ಡಿಲಿಟ್‌ ಮಾಡದೇ ಹಾಗೇ ಉಳಿಸಿಕೊಂಡಿದ್ದು ದೊಡ್ಡ ಪ್ರಮಾದವಾಗಿದ್ದಕ್ಕೆ ಪಶ್ಚಾತ್ತಾಪಟ್ಟಳು.

“ನೀನು… ಹಾಗೆಲ್ಲ ಮಾಡಕೂಡದು. ಈ ತಮಾಷೆ ನಿನಗೆ ಚೆನ್ನಾಗಿರಲ್ಲ,” ಎಂದು ಸಂಧ್ಯಾ ಗಂಭೀರವಾಗಿ ಹೇಳಿದಳು.

ತಕ್ಷಣ ಅವಳ ಬಳಿ ಬಂದ ಆಕಾಶ್‌, “ನನ್ನ ಪ್ರೀತಿಯ ಅತ್ತಿಗೆ, ಯಾಕೆ ಇಷ್ಟೊಂದು ಗಾಬರಿಯಾಗಿದ್ದೀರೀ? ನೀವು ಭಯಪಡುವಂತಹ ಯಾವ ಕೆಲಸವನ್ನೂ ನಾನು ಮಾಡಲ್ಲ. ಆದರೆ ಒಂದೇ ಒಂದು ಸಲ ಈ ನಿಮ್ಮ ಮೈದುನನನ್ನು ಖುಷಿಪಡಿಸಿ….”

ಸಿಟ್ಟಿನಿಂದ ಕೆಂಪೇರಿದ ಸಂಧ್ಯಾ, “ಅದಕ್ಕೆ ನಾನು ಏನು ಮಾಡಬೇಕು….? ನೀನು ನನ್ನಿಂದ ಏನು ಬಯಸುತ್ತೀಯಾ?”

“ಕಮಾನ್‌ ಅತ್ತಿಗೆ… ಇದನ್ನೆಲ್ಲಾ ನಾನು ನಿಮಗೆ ಹೇಳಬೇಕಾ…? ನೀವು ಮದುವೆ ಆಗಿರೋ ಅನುಭವಿ ಹೆಣ್ಣು. ಏನು ಮಾಡಬೇಕು ಅಂತ ನಿಮಗೇ ಗೊತ್ತಿರುತ್ತೆ. ಅದೂ ಅಲ್ಲದೆ, ಮದುವೆ ಮುಂಚೇನೆ ನೀವು ಬೇಕಾದಷ್ಟು ಅನುಭವ ಪಡೆದಿರೋರು….” ಎನ್ನುತ್ತಾ ಆಕಾಶ್‌ ಸ್ವಲ್ಪ ಅಳುಕಿಲ್ಲದೆ ಹೇಳಿದ. ಸಂಧ್ಯಾಗೆ ತಾನು ಬಹುದೊಡ್ಡ ಮೋಸದ ಬಲೆಯಲ್ಲಿ ಸಿಕ್ಕಿಬಿದ್ದಿರುವುದು ಅರಿವಾಯಿತು. ಈಗಲೇ ಇದಕ್ಕೆ ಸರಿಯಾದ ಮಾರ್ಗ ಹುಡುಕಬೇಕೆಂದು ಕೊಂಡಳು. ಅಷ್ಟರಲ್ಲಿ ಆಕಾಶ್‌, ಅತ್ತಿಗೆ ಎನ್ನುವ ಗೌರವವನ್ನು ಬಿಟ್ಟು ಏಕವಚನದಿಂದ, “ಏನ್‌ ಯೋಚನೆ ಮಾಡ್ತಾ ಇದೀಯಾ ಮೈ ಡಿಯರ್‌ ಸಂಧ್ಯಾ,” ಎಂದು ಹೆಸರಿಡಿದು ಮಾತಾಡಿದ.

“ನನಗೆ ಯೋಚಿಸಲು ಸ್ವಲ್ಪ ಸಮಯ ಕೊಡು ಆಕಾಶ್‌,” ಎಂದಳು ಸಂಧ್ಯಾ.

“ಓ.ಕೆ. ನೋ ಪ್ರಾಬ್ಲಂ…. ನಿನಗೆ ಹೇಗೆ ಅನಿಸುತ್ತೋ ಹಾಗೇ ಮಾಡು ಆದರೆ…. ಒಂದು ವಿಚಾರ ಜ್ಞಾಪಕದಲ್ಲಿಟ್ಟುಕೋ. ನಿನ್ನ ಭವಿಷ್ಯ ಬದುಕು ಎಲ್ಲಾ ಈಗ ನನ್ನ ಕೈಯಲಿದೆ. ಒಂದು ವೇಳೆ ಈ ವಿಚಾರವನ್ನು ಅಣ್ಣನ ಕಿವಿಗೆ ಹಾಕಿದ್ರೆ ನಿನ್ನನ್ನು ಕತ್ತುಹಿಡಿದು ಮನೆಯಿಂದ ಆಚೆ ತಳ್ಳುತ್ತಾನೆ. ನೆನಪಿರಲಿ ಹುಷಾರ್‌…..”

“ನನಗೆ ಗೊತ್ತು. ಎಲ್ಲಿಯವರೆಗೂ ನೀನು ನಿನ್ನ ನೀಚಗುಣವನ್ನು ತೋರಿಸುತ್ತೀಯೋ ಅಂತ ನಾನು ನೋಡ್ತೀನಿ….” ಎಂದು ಸವಾಲಿನ ದನಿಯಲ್ಲಿ ಹೇಳಿ ಹೊರಬಂದಳು.

ಸಂಧ್ಯಾಳಿಗೆ ಈಗ ಬೆಂಕಿಯಲ್ಲಿ ಬಿದ್ದ ಹುಳುವಿನಂಥ ಪರಿಸ್ಥಿತಿ ಆಗಿತ್ತು. ಮುಂದೇನು ಮಾಡಲಿ? ಎನ್ನುವ ಪ್ರಶ್ನೆ ಎದುರಾಗಿ ಚಡಪಡಿಸತೊಡಗಿದಳು. `ಎಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ನನ್ನನ್ನು ಸಿಕ್ಕಿಸಿಬಿಟ್ಟನಲ್ಲ ಈ ಆಕಾಶ್‌…. ಬೆನ್ನಿಗೆ ಬಿದ್ದ ಬೇತಾಳದಂತೆ ಆಡುತ್ತಿದ್ದಾನಲ್ಲ. ಅತ್ತಿಗೆ ಎನ್ನುವ ಗೌರವವಿಲ್ಲದೆ, ಅತ್ತಿಗೆ ಮೈದುನನ ಪವಿತ್ರವಾದ ಸಂಬಂಧಕ್ಕೆ ಕಳಂಕ ತಂದುಬಿಟ್ಟನಲ್ಲ…..’ ಎಂದು ಯೋಚಿಸಿದಳು. ಅವಕಾಶ ಸಿಕ್ಕಿದಾಗಿಲ್ಲ ಆಕಾಶ್‌ ಸಂಧ್ಯಾಳನ್ನು ಅಡ್ಡಗಟ್ಟಿ, “ಏನು ಯೋಚನೆ ಮಾಡಿದೆ ಮೈ ಡಾರ್ಲಿಂಗ್‌….?” ಎನ್ನುತ್ತಾ ಕಿರುಕುಳ ನೀಡಲಾರಂಭಿಸಿದ. ಅಷ್ಟು ಸಾಲದೆಂಬಂತೆ ಮೊಬೈಲ್‌ನಲ್ಲಿ ಪದೇ ಪದೇ ಕರೆ ಮಾಡಿ, “ಎಷ್ಟೊಂದು ದಿನಗಳಾಯ್ತು…. ಇಲ್ಲಿಯವರೆಗೂ  ಯೋಚನೆ ಮಾಡಿಲ್ವಾ…? ಯಾಕೆ ಇಷ್ಟೊಂದು ಡಿಲೇ ಮಾಡ್ತಾ ಇದೀಯಾ?” ಎಂದು ಒತ್ತಡ ಹೇರಲಾರಂಭಿಸಿದ.

ಅವನ ಒತ್ತಡ ಅತಿಯಾದಾಗ ಬದುಕು ಅಸಹನೀಯವಾಗಿ ಹೋಯಿತು. ಈ ಒದ್ದಾಟದಲ್ಲಿ ದೈನಂದಿನ ಕೆಲಸ ಕಾರ್ಯಗಳು ಏರುಪೇರಾದವು. ನೆಮ್ಮದಿಯಿಂದ ನಿದ್ದೆ ಮಾಡದೆ ಹಲವು ದಿನಗಳಾಗಿ ಹೋಗಿದ್ದವು. ಅಂದು ನಿದ್ದೆ ಬಾರದೆ ಹೊರಳಾಡುತ್ತಾ, ಅವಳು ತೀರ್ಮಾನ ಮಾಡಿದಳು. ಮುಂಜಾನೆ ಸೂರ್ಯ ಉದಯಿಸುವುದರೊಳಗೆ ಏನಾದರೊಂದು ನಿರ್ಧಾರಕ್ಕೆ ಬರಬೇಕೆಂದು ತೀರ್ಮಾನಿಸಿದಳು. ಅವಳ ಮುಂದೆ ಎರಡು ಕ್ಲಿಷ್ಟಕರವಾದ ದಾರಿಗಳಿದ್ದವು. ಒಂದು, ಸಂಧ್ಯಾ ಈ ವಿಲಕ್ಷಣ ಘಟನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಅಥವಾ ಈ ಪಾಪಿಷ್ಟ ಮೈದುನನಿಂದಾಗಿ ಸಂಭವಿಸಬಹುದಾದ ಕೌಟುಂಬಿಕ ಸ್ಛೋಟವನ್ನು ತಪ್ಪಿಸುವುದು. ಹೇಗಾದರೂ ಮಾಡಿ ಈ ಘಟನೆ ಮನೆಯ ಇತರ ಸದಸ್ಯರ ಕಿವಿ ತಲುಪದಂತೆ ತಡೆಯಲು ಆಕಾಶನ ಮನವೊಲಿಸಲು ಬಯಸಿದಳು. ಆದರೆ ಅದು ಅಷ್ಟು ಸುಲಭವಲ್ಲ ಎನ್ನುವ ಸತ್ಯ ಗೊತ್ತಿತ್ತು. ಯೋಚನಾ ಲಹರಿ ವೇಗವಾಗಿ ಸಾಗುತ್ತಿದ್ದಂತೆ ದಿಢೀರ್‌ ಎಂದು ಒಂದು ಉಪಾಯ ಹೊಳೆಯಿತು.

`ಹೌದು….! ಹೀಗೆ ಮಾಡಿದರೆ ಮಾತ್ರ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ಸಿಗುತ್ತದೆ,’ ಎಂದು ಯೋಚಿಸುತ್ತಾ ಹಾಗೇ ನಿದ್ದೆಗೆ ಜಾರಿದಳು. ಮರುದಿನ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಮನೆಗೆಲಸಗಳನ್ನೆಲ್ಲಾ ಲಗುಬಗೆಯಿಂದ ಮುಗಿಸಿ ಅತ್ತೆಗೆ, “ಅಮ್ಮ…. ನಾನಿತ್ತು ಸ್ವಲ್ಪ ಬೇಗ ಮಾರ್ಕೆಟ್‌ಗೆ ಹೋಗಿ ಬರ್ತೀನಿ. ಮನೆಗೆ ಬೇಕಿರೋ ಸಾಮಾನುಗಳನ್ನು ತರಬೇಕು. ಬೇಗ ಹೋಗಿ ಒಂದು ಗಂಟೆಯಲ್ಲಿ ವಾಪಸ್ಸು ಬರ್ತೀನಿ….” ಎನ್ನುತ್ತಾ ಬೇಗ ಬೇಗ ಹೊರಟ ಸಂಧ್ಯಾಳ ಮುಖದಲ್ಲಿ ಯಾವುದೇ ಚಿಂತೆಯ ಛಾಯೆ ಕಾಣಿಸಲಿಲ್ಲ. ಯುದ್ಧ ಗೆದ್ದ ಉತ್ಸಾಹ ಹಾಗೂ ಹುಮ್ಮಸ್ಸು ಅವಳ ಮುಖದಲ್ಲಿ ರಾರಾಜಿಸುತ್ತಿತ್ತು. ರಾಕ್ಷಸರನ್ನು ಸಂಹರಿಸಲು `ಮಾಯಾವಿ’ ರೂಪ ಧರಿಸುವುದು ಅನಿವಾರ್ಯ ಎಂದು ಅವಳಿಗೆ ಎಲ್ಲೋ ಓದಿದ ನೆನಪು. ಈಗ ಅದೇ ಅಸ್ತ್ರವನ್ನು ಉಪಯೋಗಿಸಿ, ಆಕಾಶನನ್ನು ಸಂಹರಿಸಲು ನಿರ್ಧರಿಸಿದಳು. ಮಾರ್ಕೆಟ್‌ನಿಂದ ರೆಕಾರ್ಡ್‌ ಸಿಸ್ಟಂ ಖರೀದಿಸಿ ತಂದಳು.

ಆಕಾಶ್‌ ಕರೆ ಮಾಡುವ ಸಮಯ ಹತ್ತಿರ ಬರುತ್ತಿದ್ದಂತೆ ರೆಕಾರ್ಡ್‌ ಸಿಸ್ಟಂನ್ನು ಮೊಬೈಲ್‌ಗೆ ಅಳವಡಿಸಿಟ್ಟುಕೊಂಡು, ಆಕಾಶ್‌ ಕರೆ ಮಾಡಿದ ಕೂಡಲೇ ಎಲ್ಲಾ ಮಾತುಗಳು ಸ್ಪಷ್ಟವಾಗಿ ರೆಕಾರ್ಡ್‌ ಆಗೋ ಹಾಗೆ ವ್ಯವಸ್ಥೆ ಮಾಡಿಕೊಂಡಳು. ಸ್ವಲ್ಪ ಸಮಯದಲ್ಲೇ ಆಕಾಶ್‌ ಸಂಧ್ಯಾಳ ಮೊಬೈಲ್‌ಗೆ ಕರೆ ಮಾಡಿ, “ಹಲೋ ಸಂಧ್ಯಾ…. ನಾನು ಕೇಳಿದ ವಿಚಾರದ ಬಗ್ಗೆ ಏನು ಯೋಚನೆ ಮಾಡಿದೆ…?” ಎಂದ.

“ಈಗ ನಾನು ಏನು ಮಾಡಬೇಕು….?” ಸಂಧ್ಯಾ ಅಳುಕಿನಿಂದ ಕೇಳಿದಳು.

“ಏನೂ ಇಲ್ಲ… ಅದೇ ಹೇಳಿದೆನಲ್ಲ…. ಅದನ್ನೆಲ್ಲಾ ಬಾಯಿಬಿಟ್ಟು ಹೇಳಬೇಕಾ ನಿನಗೆ…..?”

“ಹೌದು…. ನೀನೇ ಬಾಯಿಬಿಟ್ಟು ಹೇಳಬೇಕು. ನಿನಗೆ ನನ್ನಿಂದ ಏನು ಬೇಕು ಅಂತ ತಿಳಿಬೇಕಲ್ಲ. ಇಲ್ಲಾಂದ್ರೆ ನಿನಗೆ ಏನು ಬೇಕು ಅಂತ ನನಗೆ ಹೇಗೆ ಗೊತ್ತಾಗಬೇಕು?”

“ನೀನು…. ನನ್ನ ಜೊತೆ ಒಂದೇ ಒಂದು ಸಾರಿ……(?)” ಎನ್ನುತ್ತಾ, ಎಲ್ಲವನ್ನೂ ರಸಿಕತೆಯಿಂದ ರೋಚಕವಾಗಿ ವಿವರಿಸಿದ ಆಕಾಶ್‌, ಎಲ್ಲಿ? ಯಾವಾಗ? ಏನು ಮಾಡಬೇಕು? ಎಲ್ಲವನ್ನೂ ರೊಮ್ಯಾಂಟಿಕ್‌ ಆಗಿ ವರ್ಣಿಸಿದ.

ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಸಂಧ್ಯಾ ತಕ್ಷಣ ಏನೋ ಹೊಳೆದವಳಂತೆ, “ಒಂದು ವೇಳೆ ನಾನೇವಾದರೂ ಸಾಧ್ಯವಿಲ್ಲ ಅಂತ ತಿರಸ್ಕರಿಸಿದರೆ ಆಗ ನೀನೇನು ಮಾಡ್ತೀಯಾ?” ಕುತೂಹಲದಿಂದ ಕೇಳಿದಳು.

“ಹಾಗೇನಾದರೂ ಆದರೆ….. ನಿನ್ನ ಲವ್ ಸ್ಟೋರಿನಾ ಎಲ್ಲರಿಗೂ ಹೇಳಿಕೊಂಡು ಬರ್ತೀನಿ,” ಎಂದ.

ಸಂಧ್ಯಾ ಕೋಪದಿಂದ, “ಹೋಗೋ ಎಲ್ಲರಿಗೂ ಹೇಳಿಕೊಂಡು ಬಾ. ಆದರೆ ಒಂದು ವಿಚಾರನ ಜ್ಞಾಪಕದಲ್ಲಿಟ್ಟುಕೋ. ನಿನ್ನ ಈ ಬ್ಲ್ಯಾಕ್‌ಮೇಲ್ ವಿಚಾರವಾಗಿ ನಾನು ನೇರವಾಗಿ ಪೊಲೀಸ್‌ ಠಾಣೆಗೆ ನೀಡಿ ಕಂಪ್ಲೇಂಟ್‌ ದಾಖಲಿಸ್ತೀನಿ… ನಿನಗೆ ಎಂತಹ ಸ್ಥಿತಿಯನ್ನು ತರ್ತೀನಿ ಅಂದ್ರೆ ಇದನ್ನು ಇನ್ನೊಂದು ಜನ್ಮದಲ್ಲೂ ಕೂಡ ನೆನಪಿಸಿಕೊಳ್ಳಬೇಕು….” ಎಂದು ಕಿರುಚಾಡಿದಳು.

“ಇದನ್ನೆಲ್ಲಾ ಹೇಗೆ ಮಾಡ್ತೀಯಾ? ಅಷ್ಟಕ್ಕೂ ಇದನ್ನೆಲ್ಲಾ ಸಾಬೀತುಪಡಿಸುವುದಕ್ಕೆ ನಿನ್ನ ಹತ್ತಿರ ಸಾಕ್ಷಿ ಏನಿದೆ?” ಎಂದ ಆಕಾಶ್‌.

“ಮನೆಗೆ ಬಂದು ನೋಡು. ಹೇಡಿ ತರಹ ಮನೆಯಿಂದ ಹೊರಗೆ ಹೋಗಿ ಏನು ಮಾತಾಡ್ತಿದ್ದೀಯಾ?” ಸಂಧ್ಯಾಳ ಸಿಟ್ಟು ಇನ್ನಷ್ಟು ಕೆರಳಿತ್ತು.

ಸಂಜೆ ಆಕಾಶ್‌ ಮನೆಗೆ ಬಂದ. ಎಲ್ಲವನ್ನೂ ಸಿದ್ಧಪಡಿಸಿಕೊಂಡಿದ್ದ ಸಂಧ್ಯಾ ಈಗ ಸಿಗುವ ಅವಕಾಶ ಮಿಸ್‌ ಮಾಡಿಕೊಳ್ಳಬಾರದೆಂದು ಮನದಲ್ಲೇ ನಿರ್ಧರಿಸಿ ಸ್ವಲ್ಪ ಗಂಭೀರವಾಗಿ ಗತ್ತಿನಿಂದ ಆಕಾಶ್‌ ಎದುರು ನಿಂತು, “ಹಲೋ ಮಿ. ಆಕಾಶ್‌, ಸಾಕ್ಷಿ ಈಗಲೇ ತೋರಿಸಲಾ….? ಅಥವಾ ನೀನಾಗೇ ನಿನ್ನ ತಪ್ಪನ್ನು ಒಪ್ಪಿಕೊಳ್ತೀಯಾ? ಅಂದಹಾಗೆ ನೀನು ನನ್ನ ಜೊತೆ ಮಾತಾಡಿರುವುದೆಲ್ಲಾ ಈ ಮೊಬೈಲ್‌ನಲ್ಲಿ ರೆಕಾರ್ಡ್‌ ಆಗಿದೆ. ಅಲ್ಲದೆ ಇದರ ಸಿಡಿಯನ್ನು ನಾನು ಭದ್ರ ಮಾಡಿಟಿದ್ದೀನಿ,” ಎಂದಳು.

ಆಕಾಶ್‌ ಒಂದು ಕ್ಷಣ ತಬ್ಬಿಬ್ಬಾಗಿ ಹೋದ. ಸಂಧ್ಯಾ ಈ ರೀತಿ ತನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಾಳೆ ಎಂದು ಅವನು ಊಹಿಸಿಯೂ ಇರಲಿಲ್ಲ. ಏನೂ ಮಾತನಾಡದೆ ಮೌನವಾಗಿ ತನ್ನ ರೂಮಿಗೆ ಹೊರಟುಹೋದ. ಸಂಧ್ಯಾ ತಾನು ಹೆಣೆದ ಬಲೆಗೆ ಸಿಕ್ಕಿಬಿದ್ದ ಆಕಾಶ್‌ನನ್ನು ನೋಡಿ ಮುಸಿ ಮುಸಿ ನಕ್ಕಳು.

ತಾನು ಪ್ರತೀಕಾರ ತೀರಿಸಿಕೊಂಡ ಬಗ್ಗೆ ಹೆಮ್ಮೆಯಿಂದ ಸಂಭ್ರಮಿಸಿದಳು. ಯಾವ ಮೊಬೈಲ್ ವಾಟ್ಸ್ಆ್ಯಪ್‌ ಮೆಸೇಜ್‌ನಿಂದ ಮಾನಸಿಕ ಹಿಂಸೆ ಅನುಭವಿಸಿದ್ದಳೋ ಅದೇ ಮೊಬೈಲ್‌ನಿಂದಲೇ ಆ ಹಿಂಸೆಗೆ ಶಾಶ್ವತ ಪರಿಹಾರ ಕಂಡುಕೊಂಡಿದ್ದಳು ಸಂಧ್ಯಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ