ನಗರದಲ್ಲಿ ಮಳೆಗಾಲ ಬಂತೆಂದರೆ ಎಷ್ಟೋ ಜನರಿಗೆ ತೊಂದರೆಯಾಗುವುದು ಸಾಮಾನ್ಯ ಸಂಗತಿ. ಆದರೆ ನಾನು ಮಾತ್ರ ಮಳೆಗಾಲ ಬರಲೆಂದು ಹಾರೈಸುತ್ತೇನೆ. ಬೇಸಿಗೆಯ ವಿಪರೀತವಾದ ತಾಪಮಾನದಿಂದ ಬೇಸತ್ತು ಎಲ್ಲಾ ದಿನಗಳೂ ಮಳೆ ಬಂದರೆ ಉತ್ತಮ. ಹವಾಮಾನ ತಂಪಾಗಿ ವಾತಾರಣ ಹಿತವಾಗಿರುತ್ತದೆ ಎನ್ನುವುದು ನನ್ನ ಹಾರೈಕೆಗೆ ಕಾರಣ.
ಅಂತೂ ನನ್ನ ಹಾರೈಕೆ ಫಲಿಸಿತ್ತು. ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿತ್ತು. ಬೆಳಗಿನ ಜಾವಕ್ಕೆ ಸ್ವಲ್ಪ ಬಿಡುವು ಕೊಟ್ಟಿತ್ತಾದರೂ ಬೀಸುತ್ತಿದ್ದ ತಂಗಾಳಿಯಿಂದ ವಾತಾವರಣ ಹಿತಕರವಾಗಿತ್ತು. ನಾನು ಬೆಳಗಿನ ಸ್ನಾನಾದಿಗಳನ್ನು ಮುಗಿಸಿ ಕಾಫಿ ಕುಡಿಯುತ್ತಾ ಪತ್ರಿಕೆಯನ್ನು ತಿರುವಿ ಹಾಕುತ್ತಿದ್ದೆ. ಅಷ್ಟರಲ್ಲಿ ನಮ್ಮ ಮನೆಗೆಲಸದಾಕೆ ಶ್ಯಾಮಲಾ ಒಳಬಂದಳು. ಅವಳು ನಮ್ಮ ವಠಾರ ಮತ್ತು ಅದರ ಎದುರಿನ ಬೀದಿಯಲ್ಲಿ ಏನೇ ನಡೆದರೂ ಅದನ್ನು ಪ್ರತಿಯೊಬ್ಬರಿಗೂ ತಿಳಿಸುತ್ತಿದ್ದುದರಿಂದ ಅವಳನ್ನು ಈ ವಠಾರದ `ಲೋಕಲ್ ನ್ಯೂಸ್ ಚಾನೆಲ್’ ಎನ್ನುತ್ತಿದ್ದೆ.
ಇವರ ಮನೆ ಸಮಾಚಾರ ಅವರ ಮನೆಗೆ, ಅವರ ಮನೆ ಸಮಾಚಾರ ಇವರ ಮನೆಗೂ ತಲುಪಿಸುತ್ತಿದ್ದ ಈಕೆಯ ಎಲ್ಲಾ ಮಾತನ್ನೂ ಸಂಪೂರ್ಣ ನಂಬಲು ಸಾಧ್ಯವಿರಲಿಲ್ಲವಾದರೂ ಎಲ್ಲೋ ಒಂದಂಶ ಸತ್ಯ ಇತ್ತು.
ಇಂದು ಕೂಡ ನಮ್ಮ ಮನೆಗೆ ಬಂದವಳೇ ನನ್ನತ್ತ ತಿರುಗಿ, “ನಿಮ್ಮ ಮನೆ ಎದುರಿನ ಬೀದಿಯಲ್ಲಿದ್ದವಳಲ್ಲ ಒಬ್ಬ ಹುಚ್ಚಿ ಮುದುಕಿ ಅವಳ ಮೇಲೆ ನಿನ್ನೆ ರಾತ್ರಿ ಅತ್ಯಾಚಾರ ಆಗಿದ್ಯಂತೆ. ಇಂದು ಬೆಳಗಿನ ಜಾವ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದ ಅವಳನ್ನು ಪೊಲೀಸರು ಆ್ಯಂಬುಲೆನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆ ಸೇರಿಸಿದರಂತೆ,” ಎಂದಳು.
“ಹಾಂ! ಹೌದಾ?”
ನನಗಿದು ನಿಜಕ್ಕೂ ದಿಗ್ಭ್ರಾಂತಿಯನ್ನು ಉಂಟು ಮಾಡಿತ್ತು.
ನಾನು ಕಂಡಂತೆ ಅವಳು ಬಡ ಹೆಂಗಸು. ಮೇಲಾಗಿ ಹುಚ್ಚಿ. ಕಳೆದ ಮೂರು ನಾಲ್ಕು ವರ್ಷಗಳಿಂದಲೂ ಅವಳು ನಮ್ಮ ಮನೆ ಎದುರಿನ ರಸ್ತೆಯಲ್ಲೇ ವಾಸವಿದ್ದಳು. ಸುಮಾರು 70 ಪ್ರಾಯದ ಅವಳ ಬಳಿ ಇದ್ದ ಚೀಲದಲ್ಲಿ ನಾಲ್ಕಾರು ಜೊತೆ ಬಟ್ಟೆ, ಎರಡು ಪ್ಲಾಸ್ಟಿಕ್ ಬಾಟಲಿಗಳು, ಹಳೆಯ ಮಾಸಲು ಬಣ್ಣದ ಶಾಲಿನಂಥ ವಸ್ತ್ರ ಮಾತ್ರ ಇದ್ದವು.
ಅವಳು ಹುಚ್ಚಿಯಾದರೂ ತಾನಾಗಿ ಯಾರೊಬ್ಬರಿಗೂ ಕಿರುಕುಳ ನೀಡಿದವಳಲ್ಲ. ಭಿಕ್ಷೆ ಬೇಡುತ್ತಿರಲಿಲ್ಲ. ಹತ್ತಿರದಲ್ಲಿದ್ದ ಮನೆಯವರು ನೀಡುತ್ತಿದ್ದ ಬ್ರೆಡ್, ಹಣ್ಣುಗಳನ್ನು ತಿಂದು ಜೀವನ ಮಾಡುತ್ತಿದ್ದಳು. ಕೆಲವೊಮ್ಮೆ ಮನೋವಿಕಾರ ಹೆಚ್ಚಿದಾಗ ಮಾತ್ರ ರಸ್ತೆಯಲ್ಲಿ ಆಡುತ್ತಿದ್ದ ಮಕ್ಕಳನ್ನು ಗದರಿಸುತ್ತಾ ಅಟ್ಟಿಸಿಕೊಂಡು ಹೋಗುತ್ತಿದ್ದಳು.
ಒಮ್ಮೆ ದೀಪಾವಳಿಯ ಸಮಯದಲ್ಲಿ ಮಕ್ಕಳು ರಸ್ತೆ ಪಕ್ಕದಲ್ಲಿ ಪಟಾಕಿ ಸಿಡುಸುತ್ತಿದ್ದರು. ಅಲ್ಲೇ ಇದ್ದ ಆ ಮುದುಕಿ ಒಂದೇ ಸಮನೆ ರೇಗಿಕೊಳ್ಳುತ್ತ ಆ ಮಕ್ಕಳತ್ತ ಕಲ್ಲು ಬೀರಲು ತೊಡಗಿದ್ದಳು. ಬಹುಶಃ ಈ ಪಟಾಕಿ ಶಬ್ದದಿಂದ ಅವಳಿಗೆ ಹಿಂಸೆಯಾಗುತ್ತಿತ್ತೇನೋ? ನಂತರ ಎರಡು ದಿನಗಳಲ್ಲಿ ಪೊಲೀಸ್ ಜೀಪೊಂದು ಅವಳಿದ್ದಲ್ಲಿಗೆ ಬಂದು ಈ ಬೀದಿ ಬಿಟ್ಟು ಹೋಗಲು ಹೇಳಿ ಕೆಲವು ಮಾರು ದೂರ ಕರೆದೊಯ್ದು ಬಿಟ್ಟಿದ್ದೂ ಆಗಿತ್ತು. ಆದರೆ ಇದಾದ ಮತ್ತೆರಡು ದಿನಗಳಲ್ಲಿ ಅವಳು ಪುನಃ ಹಳೆಯ ಜಾಗಕ್ಕೆ ಬಂದು ಕುಳಿತಿದ್ದನ್ನು ನಾನು ಗಮನಿಸಿದ್ದೆ.
ಆದರೆ ನಿನ್ನೆ ರಾತ್ರಿ ಸುರಿದ ಮಳೆಯಿಂದ ರಕ್ಷಿಸಿಕೊಳ್ಳಲು ಅಲ್ಲೇ ರಸ್ತೆ ಬದಿಯ ಚಿಕ್ಕ ಶೆಡ್‌ನಂತಹ ಜಾಗದಲ್ಲಿ ಮಲಗಿದ್ದವಳ ಮೇಲೆ ಅದ್ಯಾರು ಏನು ಹಲ್ಲೇ ನಡೆಸಿದ್ದರೋ ಏನೋ ಹೀಗೆ ನಾನು ಮನಸ್ಸಿನಲ್ಲೇ ಚಿಂತಿಸುತ್ತಿರುವಾಗ ಶ್ಯಾಮಲಾ, “ನನ್ನ ಕೆಲಸಗಳೆಲ್ಲ ಮುಗಿಯಿತು. ನಾನಿನ್ನು ಹೊರಡಲೇ?” ಎಂದಳು. ಅವಳು ಹೇಳಿದ್ದನ್ನು ಕೇಳಿಸಿಕೊಳ್ಳುವುದಕ್ಕೂ ನನ್ನ ಯೋಚನೆ ಬಿಟ್ಟಿರಲಿಲ್ಲ. “ಸರಿ ಹೊರಡು,” ಎಂದಷ್ಟೇ ಹೇಳಿದೆ. ಅವಳು ಮತ್ತೆರಡು ಕ್ಷಣ ನನ್ನತ್ತ ನೋಡಿ ಹೊರಟುಹೋದಳು. ಇನ್ನೇನು ಎರಡು ದಿನಗಳು ಇತ್ತ ಕಾಣುವುದು ಅನುಮಾನ…..ಹೊತ್ತು ಕಳೆದ ನಂತರ ನಾನು ನನ್ನ ನೆರೆಮನೆಯ ಸುಶೀಲಾರೊಡನೆ ಮಾತನಾಡಲು ಕುಳಿತೆ. ಆಗ ಮತ್ತೆ ಆ ಹುಚ್ಚಿಯ ಪ್ರಸ್ತಾಪ ಬಂದಿತು.
“ಅವಳು ನಿಮಗೂ ಗೊತ್ತಲ್ಲ….. ಆ ಮುದುಕಿ ನಿನ್ನೆವರೆಗೂ ನಮ್ಮ ಎದುರು ಬೀದಿಯಲ್ಲಿದ್ದಳು. ಅವಳು ಪೊಲೀಸ್‌ಗೂಢಚಾರಿಣಿಯಂತೆ?! ನಮ್ಮ ಬೀದಿಯಲ್ಲಿರುವ ರಘುನಂದನ್ ಮನೆಯ ಮೇಲೆ ಕಣ್ಣಿಟ್ಟಿದ್ದಳಂತೆ. ಅವರು ಕಳೆದ ವರ್ಷವಷ್ಟೇ ಎರಡು ದುಬಾರಿ ಕಾರುಗಳನ್ನು ಕೊಂಡಿದ್ದರಲ್ಲ. ಅವರ ಮನೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಹಣ ಇದೆಯಂತೆ! ಇಂತಹ ಕುಳಗಳನ್ನು ಹಿಡಿಯುವುದಕ್ಕಾಗಿಯೇ ಸರ್ಕಾರ ಗುಟ್ಟಾಗಿ ಅವಳನ್ನು ಇಲ್ಲಿರಿಸಿದ್ದಾರಂತೆ…….” ಹೀಗೆ ಏನೇನೋ ಹೇಳುತ್ತಾ ಹೋದಾಗ ನನಗೆ ಇದನ್ನೆಲ್ಲ ಕೇಳಿಸಿಕೊಳ್ಳುವ ಮನಸ್ಸಾಗದೆ ಹೊರಟುಬಂದೆ.
ಮರುದಿನ ಮನೆ ಬಳಕೆಯ ವಸ್ತುಗಳನ್ನು ತರುವ ಸಲುವಾಗಿ ಸಮೀಪದ ಅಂಗಡಿಗೆ ಹೋಗಿದ್ದೆ. ಹಿಂತಿರುಗುವ ಸಮಯದಲ್ಲಿ ನನ್ನವರಿಗೆ ಅಗತ್ಯವಾದ ಕೆಲವು ಮಾತ್ರೆಗಳನ್ನು ತರಲು ಪರಿಚಯದ ಮೆಡಿಕಲ್ ಶಾಪ್‌ಗೆ ಹೋದೆ. ಅಲ್ಲಿ ಅಂಗಡಿಯವನು ಅದೇ ಹುಚ್ಚಿ ಮುದುಕಿಯ ಕುರಿತು ಇನ್ನೊಬ್ಬ ಗ್ರಾಹಕರೊಂದಿಗೆ ಮಾತನಾಡುತ್ತಿದ್ದ. ನಾನೂ ಕುತೂಹಲದಿಂದ ಕೇಳಿಸಿಕೊಳ್ಳತೊಡಗಿದೆ.
“ಅಯ್ಯೋ…. ಅವಳೆಂತಹವಳೆಂದು ಗೊತ್ತಾ? ನೋಡು ಏನೂ ಇಲ್ಲದವಳಂತೆ ಇದ್ದಳಲ್ಲ, ಅವಳ ಆ ಚೀಲದಲ್ಲಿ ಲಕ್ಷಗಟ್ಟಲೆ ದುಡ್ಡು ಸಿಕ್ಕಿತಂತೆ! ಅವಳಿಗೆ ಕಲಬುರುಗಿಯ ಹಳ್ಳವೊಂದರಲ್ಲಿ ಜಮೀನು ಸಹ ಇದೆ ಎಂದು ಗುಸುಗುಸು ಉಂಟು. ನಾವೆಲ್ಲ ಅವಳೇನೊ ಪಾಪ, ಬಡವಳು ಮೇಲಾಗಿ ಮಾನಸಿಕ ಅಸ್ವಸ್ಥೆ ಎಂದೆಲ್ಲ ಅಂದುಕೊಂಡಿದ್ದೆವಲ್ಲ ಸುಳ್ಳು…..?! ಅವಳು ನಾವಂದುಕೊಂಡಂತೆ ಸಾಧಾರಣ ಹೆಂಗಸಲ್ಲ. ಭಾರೀ ಶ್ರೀಮಂತ ಕುಳ……,”
“ಸಾಕು ನಿಲ್ಲಿಸಿ!!” ನನಗೆ ಅವರ ಕಥೆ ಕೇಳಲಾಗದೆ ಹೋಯಿತು. ಸ್ವಲ್ಪ ಜೋರಾಗಿಯೇ ಕಿರುಚಿದ್ದೆ. ಜೊತೆಗೆ ಮಾತ್ರೆ ತರುವುದನ್ನು ಮರೆತು ನೇರವಾಗಿ ಮನೆಗೆ ಹಿಂತಿರುಗಿದೆ.
ನನಗೆ ನಿಜಕ್ಕೂ ಬೇಸರವಾಗಿತ್ತು. ಆ ನಿರ್ಗತಿಕ ಮುದುಕಿಗೆ ಇಂತಹ ಕಷ್ಟ ಒದಗಿ ಬಂದಾಗ ಸಹಾನುಭೂತಿ ತೋರಿಸುವುದನ್ನು ಬಿಟ್ಟು ಜನ ತಲೆಗೊಂದರಂತೆ ಕಥೆ ಕಟ್ಟುತ್ತಿದ್ದಾರಲ್ಲ ಎಂದು ನೋವಾಗಿತ್ತು.
ಎರಡು ದಿನಗಳು ಕಳೆದವು.
ಎಂದಿನಂತೆ ಬಂದ ಶ್ಯಾಮಲಾ, “ಅಮ್ಮಾ, ಆ ಹುಚ್ಚಿಯನ್ನು ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವಳು ಸತ್ತೇ ಹೋದಳಂತೆ,” ಎಂದಳು.
“ಓ… ಹೌದಾ….!” ಕ್ಷಣಕಾಲ ನೋವಾದಂತೆ ಕಂಡರೂ ಕಡೆಗೂ ಈ ಹುಚ್ಚು ಹಿಡಿದ ಜಗತ್ತಿನಿಂದ ಆಕೆಗೆ ಬಿಡುಗಡೆ ದೊರಕಿತಲ್ಲ ಎನ್ನುವ ಸಣ್ಣ ಸಮಾಧಾನವೊಂದು ಮೂಡಿತು.