ಬ್ಯೂಟಿ ಮತ್ತು ಫ್ಯಾಷನ್‌ನ  ಹೆಚ್ಚುತ್ತಿರುವ ಮಾರುಕಟ್ಟೆ ಹೇಗೆ ಹಬ್ಬಗಳು ಮತ್ತು ಅವನ್ನು ಆಚರಿಸುವ ವಿಧಾನಗಳನ್ನು ಬದಲಾಯಿಸಿದೆ ಎನ್ನುವುದನ್ನು ಅಗತ್ಯವಾಗಿ ತಿಳಿದುಕೊಳ್ಳಿ.

ಫೆಸ್ಟಿವಲ್ ಅಂದರೆ ಹಬ್ಬಗಳು ಈಗ ಮೊದಲಿನಂತಿಲ್ಲ. ಅವನ್ನು ಆಚರಿಸುವ ವಿಧಾನ ಈಗ ಬದಲಾಗಿದೆ. ಹಿಂದೆ ಮನೆಯವರಿಗೆ 1 ಜೋಡಿ ಹೊಸ ಡ್ರೆಸ್‌ ಖರೀದಿಸುವುದು, ಮನೆಯನ್ನು ಸ್ವಚ್ಛಗೊಳಿಸುವುದು, ಹಬ್ಬದಂದು ಕೆಲವು ಭಕ್ಷ್ಯಗಳನ್ನು ತಯಾರಿಸುವುದು….. ಅಲ್ಲಿಗೆ ಹಬ್ಬ ಮುಗಿಯಿತು. ಆದರೆ ಸಮಯ ಸರಿದಂತೆ ಹಬ್ಬ ಆಚರಿಸುವ ಕಲ್ಚರ್‌ ಕೂಡ ಬದಲಾಗಿದೆ. ಈ ಬದಲಾವಣೆ ಮಹಿಳೆಯರು ಮತ್ತು ಪುರುಷರು ಇಬ್ಬರಲ್ಲೂ ಕಂಡುಬರುತ್ತದೆ.

ಹಿಂದೆ ಹಬ್ಬಗಳಲ್ಲಿ ಮಹಿಳೆಯರು ಮನೆ ಅಲಂಕರಿಸಲು ಹಾಗೂ ಅಡುಗೆ ಮಾಡಲು ತೊಡಗಿರುತ್ತಿದ್ದರು. ಈಗ ಅವರು ಹೆಚ್ಚು ಪ್ರಭಾವಿಗಳಾಗಿ ಹಬ್ಬದ ಆನಂದ ಪಡೆಯುತ್ತಿದ್ದಾರೆ. ಫ್ಯಾಷನೆಬಲ್ ಬಟ್ಟೆಗಳಿಂದ ಹಿಡಿದು ಮೇಕಪ್‌ ಮತ್ತು ಖರೀದಿಯವರೆಗೆ ಅವರ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿರುತ್ತದೆ. ಹೀಗಾಗಿ ಹಬ್ಬ ಬರುತ್ತಲೇ ಎಲ್ಲ ಕಡೆ ಕಾಂತಿ ಬರುತ್ತದೆ. ಅಕ್ಟೋಬರ್‌ನಿಂದ ಹಿಡಿದು ಜನವರಿಯವರೆಗೆ ಹಬ್ಬದ ಸೀಸನ್‌ ಇರುತ್ತದೆ. ಮೊದಲು ದಸರಾ, ದೀಪಾವಳಿ ನಂತರ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸೆಲೆಬ್ರೇಷನ್‌ ಅಂದರೆ ಅಕ್ಟೋಬರ್‌ತಿಂಗಳು ಶುರುವಾಗುತ್ತಲೇ ಮಾರುಕಟ್ಟೆಗಳಲ್ಲಿ ಹೊಳಪು ಮೂಡುತ್ತದೆ.

ಹಲವಾರು ವ್ಯಾಪಾರಿಗಳ ಬಳಿ ಮಾತುಕಥೆ ನಡೆಸಿದಾಗ ಅವರು, ಇಡೀ ವರ್ಷದಲ್ಲಿ ಎಷ್ಟು ಸಂಪಾದಿಸುತ್ತಾರೋ ಅಷ್ಟನ್ನು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಸಂಪಾದಿಸುತ್ತೇವೆಂದು ಹೇಳಿದರು. ಹಬ್ಬಗಳಲ್ಲಿ ಫ್ಯಾಷನ್‌ ಮತ್ತು ಬ್ಯೂಟಿ ಮಾರುಕಟ್ಟೆಗಳದೇ ಪ್ರಧಾನ ಪಾತ್ರ. ಹಿಂದೆ ಜನ ಡಿಸೈನರ್‌ ಬಟ್ಟೆಗಳನ್ನು ಅಷ್ಟಾಗಿ ತೊಡುತ್ತಿರಲಿಲ್ಲ. ಕಾರಣ ಅವು ಬಹಳ ದುಬಾರಿಯಾಗಿದ್ದವು. ಅದಕ್ಕೆ ಕಾರಣ ಅವು ಕೈಯಿಂದ ತಯಾರಾಗುತ್ತಿದ್ದವು. ನಂತರ ಡಿಸೈನರ್‌ಗಳಿಗೆ ಬಟ್ಟೆಗಳು ಅಗ್ಗವಾಗುವವರೆಗೆ ಹೆಚ್ಚು ಜನ ಇನ್ನು ಖರೀದಿಸುವುದಿಲ್ಲವೆಂದು ತಿಳಿಯಿತು. ಈ ಕಾರಣದಿಂದಾಗಿ ಈಗ ಡಿಸೈನರ್‌ಗಳು ಬಟ್ಟೆಗಳನ್ನು ಮೆಷಿನ್‌ನಿಂದ ತಯಾರಿಸುತ್ತಿದ್ದಾರೆ. ಅದರಿಂದ ಅವು ಅಗ್ಗವಾಗಿ ಜನಸಾಮಾನ್ಯರಿಗೂ ತಲುಪುವಂತಾಯಿತು.

ಬರೀ ಒಳ್ಳೆಯ ಡ್ರೆಸ್‌ ಧರಿಸುವುದರಿಂದ ಏನೂ ಆಗುವುದಿಲ್ಲ. ನೀವು ಸುಂದರವಾಗಿ ಕಾಣಿಸುವುದು ಅಗತ್ಯ. ಆದ್ದರಿಂದ ಫ್ಯಾಷನ್ ಜೊತೆ ಜೊತೆಗೆ ಬ್ಯೂಟಿ ಮಾರುಕಟ್ಟೆಯೂ ಬೆಳೆಯಿತು. ಆದರೆ ಅಲಂಕರಿಸಿಕೊಂಡು ಮನೆಯಲ್ಲೂ ಕೂರಲಾಗುವುದಿಲ್ಲ. ಹೀಗಾಗಿ ಶಾಪಿಂಗ್‌ ಕೂಡ ಚೆನ್ನಾಗಿ ಆಗತೊಡಗಿತು.

ಫ್ಯಾಷನ್‌ ಬಣ್ಣಗಳಲ್ಲಿ ಮಿಂದೆದ್ದ ಹಬ್ಬ ಫೆಸ್ಟಿವಲ್ ಸೀಸನ್‌ನ ವಿಷಯ ಬಂದಕೂಡಲೇ ಎಲ್ಲಕ್ಕೂ ಮೊದಲು ಹೊಸ ಫ್ಯಾಷನ್‌ ಟ್ರೆಂಡ್ ಏನು ಎಂದು ಯೋಚಿಸಲಾಗುತ್ತದೆ. ಫ್ಯಾಷನ್‌ ಡಿಸೈನರ್‌ ಅದಿತಿ ಹೀಗೆ ಹೇಳುತ್ತಾರೆ, “ಹಬ್ಬಗಳಲ್ಲಿ ಹಿಂದೆ ಬರೀ ಸೀರೆಗಳ ಖರೀದಿ ಇರುತ್ತಿತ್ತು. ಕಾಲ ಬದಲಾದಂತೆ ಡಿಸೈನರ್‌ ಸಲ್ವಾರ್‌ ಸೂಟ್‌ಗಳ ಖರೀದಿ ಹೆಚ್ಚಾಯಿತು. ಈಗಂತೂ ಎಂಬ್ರಾಯಿಡರಿ ಇರುವ ಫ್ಲೋರ್‌ ಲೆಂತ್‌ ಗೌನ್‌, ಎಂಬ್ರಾಯಿಡರಿ ಇರುವ ಸ್ಕರ್ಟ್‌ ಟಾಪ್‌, ಲಂಗ ರವಿಕೆ, ಲಾಂಗ್‌ ಸ್ಕರ್ಟ್‌, ಶಾರ್ಟ್‌ ಕುರ್ತಾ ಇತ್ಯಾದಿ ಹಬ್ಬಗಳಲ್ಲಿ ಧರಿಸಲಾಗುತ್ತಿದೆ. ಡಿಸೈನರ್‌ ಸಲ್ವಾರ್‌ ಸೂಟ್‌ ಬಹಳಷ್ಟು ಡಿಸೈನ್‌ಗಳಲ್ಲೇ ಬರುತ್ತದೆ. ವಿಶೇಷವೆಂದರೆ ಎಲ್ಲ ನಿಮ್ಮ ಬಜೆಟ್‌ನೊಳಗೇ ಸಿಗುತ್ತದೆ. ಅದಕ್ಕೆ ದೊಡ್ಡ ನಗರಕ್ಕೆ ಹೋಗುವ ಅಗತ್ಯವಿಲ್ಲ. ಎಲ್ಲ ನಿಮ್ಮ ಊರಿನಲ್ಲಿಯೇ ಸಿಗುತ್ತದೆ.”

ಆನ್ಲೈನ್ಶಾಪಿಂಗ್

ಪೆಸ್ಟಿವಲ್ ಶಾಪಿಂಗ್‌ನ್ನು ಇನ್ನಷ್ಟು ಸುಲಭವಾಗಿಸಿದೆ. ಆನ್‌ಲೈನ್‌ ಶಾಪಿಂಗ್‌ನಲ್ಲಿ ಮಹಿಳೆಯರು ಹೆಚ್ಚಾಗಿ ತಮ್ಮ ಡ್ರೆಸ್‌ಗಳನ್ನು ಖರೀದಿಸುತ್ತಾರೆ. ಖರೀದಿಗಾಗಿ ಈಗ ಅವರು ಮಾರುಕಟ್ಟೆಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲಿ ಕುಳಿತೇ ತಮಗೆ ಇಷ್ಟವಾದ ಉಡುಪುಗಳನ್ನು ಖರೀದಿಸಬಹುದು. ಒಂದಕ್ಕಿಂತ ಒಂದು ಚಂದದ ಡಿಸೈನರ್‌ ಡ್ರೆಸ್‌ಗಳನ್ನು ಮನೆಯಲ್ಲಿ ಕುಳಿತೇ ತರಿಸಬಹುದು.

ಅದರ ಬಗ್ಗೆ ನೇಹಾ ಹೀಗೆ ಹೇಳುತ್ತಾರೆ, “ಡಿಸೈನರ್‌ ಡ್ರೆಸ್‌ ಬಹಳ ಅಗ್ಗವಾಗಿ ಆನ್‌ಲೈನ್‌ನಲ್ಲಿ ಸಿಗುತ್ತದೆ. ಫೆಸ್ಟವಲ್ ಸೀಸನ್‌ನಲ್ಲಿ ಅನೇಕ ಆಫರ್‌ಗಳನ್ನು ಕೊಡುತ್ತಾರೆ. ಪದಾರ್ಥಗಳನ್ನು ಡೆಲಿವರಿ ಮಾಡುವಾಗ ಹಣ ಕೊಡಬೇಕಾಗುತ್ತದೆ. ಡ್ರೆಸ್‌ ಇಷ್ಟವಾಗದಿದ್ದರೆ ಅದನ್ನು ವಾಪಸ್‌ಮಾಡುವುದೂ ಸುಲಭ. ಈಗ ಮಹಿಳೆಯರು ಫ್ಯಾಷನೆಬಲ್ ಡ್ರೆಸ್‌ಗಳನ್ನಷ್ಟೇ ಅಲ್ಲ ಲಿಂಜರಿಯವರೆಗೆ ಆನ್‌ಲೈನ್‌ಖರೀದಿ ಮಾಡುತ್ತಿದ್ದಾರೆ.”

ಡಿಸೈನರ್‌ ಅದಿತಿ ಹೀಗೆ ಹೇಳುತ್ತಾರೆ, “ಹಿಂದೆ, ಒಂದು ಡ್ರೆಸ್‌ನಲ್ಲಿ ಇಡೀ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ ಈಗ ಫ್ಯಾಷನ್ನಿನ ಟ್ರೆಂಡ್‌ ಬದಲಾಗಿದೆ. ಫೆಸ್ಟಿವಸ್ ಸೀಸನ್‌ನಲ್ಲಿ ಪ್ರತಿ ದಿನ ಹೊಸ ಡ್ರೆಸ್‌ ಧರಿಸಿ ಹಬ್ಬ ಆಚರಿಸಲಾಗುತ್ತಿದೆ. ಹೀಗಿರುವಾಗ ಬರೀ ಸೀರೆಯಷ್ಟೇ ಅಲ್ಲ, ಎಲ್ಲ ರೀತಿಯ ಡ್ರೆಸ್‌ಗಳನ್ನು ಧರಿಸಲಾಗುತ್ತಿದೆ. ವಿವಿಧ ಬಗೆಯ ಫ್ಯಾಷನೆಬಲ್ ಡ್ರೆಸ್‌ಗಳು ಹಬ್ಬಗಳು ಬರುವ ಮೊದಲೇ ಮಾರುಕಟ್ಟೆಗೆ ಬರುತ್ತವೆ. ಕೆಲವರು ಡಿಸೈನರ್‌ ಶಾಪ್ಸ್ ಡಿಸೈನರ್‌ ಸ್ಟುಡಿಯೋಗಳಿಂದ ತಮಗಾಗಿ ಬೇರೆ ಬೇರೆ ರೀತಿಯ ಡ್ರೆಸ್‌ಗಳನ್ನು ತಯಾರಿಸುತ್ತಿದ್ದಾರೆ.

ನಿಮ್ಮನ್ನು ಸಿಂಗರಿಸಿಕೊಳ್ಳಿ

ನೀವು ಸ್ವತಃ ಅಲಂಕರಿಸಿಕೊಂಡಿದ್ದರೆ ನಿಮಗೆ ಯಾವ ಡ್ರೆಸ್‌ ಆದರೂ ಚೆನ್ನಾಗಿರುತ್ತದೆ. ಫೆಸ್ಟಿವಲ್ ‌ಸೀಸನ್‌ನಲ್ಲಿ ಫ್ಯಾಷನ್‌ನೊಂದಿಗೆ ಬ್ಯೂಟಿ ಮಾರ್ಕೆಟ್‌ ಕೂಡ ಹೆಚ್ಚುತ್ತದೆ. ಬ್ಯೂಟಿ ಮಾರ್ಕೆಟ್‌ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ. ಸಣ್ಣ ಪಟ್ಟಣಗಳಲ್ಲಿ ಬ್ರ್ಯಾಂಡೆಡ್‌ ಬ್ಯೂಟಿ ಸಲೂನ್‌ ಶುರುವಾಗುತ್ತಿದೆ. ಅವು ವೇಗವಾಗಿ ಹೆಚ್ಚುತ್ತಿರುವ ಬ್ಯೂಟಿಯ ಅಸಲಿ ಪದಾರ್ಥಗಳನ್ನೇ ಉಪಯೋಗಿಸಬೇಕೆಂದು ಜನಕ್ಕೆ ಅರ್ಥವಾಗುತ್ತಿದೆ. ನಕಲಿ ಬ್ಯೂಟಿ ಪ್ಪಾಡಕ್ಟ್ ಉಪಯೋಗಿಸುವ ಬ್ಯೂಟಿ ಪಾರ್ಲರ್‌ಗೆ ಮಹಿಳೆಯರು ಹೋಗುವುದನ್ನು ನಿಲ್ಲಿಸುತ್ತಾರೆ. ನಕಲಿ ಮತ್ತು ಸಾಧಾರಣ ಗುಣಮಟ್ಟದ ಬ್ಯೂಟಿ ಪ್ರಾಡಕ್ಟ್ಸ್ ಕೇವಲ ಸಣ್ಣ ಊರುಗಳು ಹಾಗೂ ಹಳ್ಳಿಗಳಿಗೆ ಸೀಮಿತವಾಗಿದೆ.

ಬ್ಯೂಟಿ ಎಕ್ಸ್ ಪರ್ಟ್‌ ಅನಿತಾ ಹೀಗೆ ಹೇಳುತ್ತಾರೆ, “ನೀವು ಫೆಸ್ಟಿವಲ್‌ಗೆ ಕೆಲವು ದಿನಗಳ ಮುಂಚಿನಿಂದಲೇ ನಿಮ್ಮ ಬಗ್ಗೆ ಕೇರ್‌ತೆಗೆದುಕೊಂಡರೆ ಮೇಕಪ್‌ ಉತ್ತಮ ಪರಿಣಾಮ ಬೀರುತ್ತದೆ. ಸ್ಕಿನ್‌ ಮತ್ತು ಹೇರ್‌ನ್ನು ಚೆನ್ನಾಗಿ ತೋರಿಸಲು ಅವುಗಳ ಟ್ರೀಟ್‌ಮೆಂಟ್‌ ಅಗತ್ಯ. ಇದು ಅರರ ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಯಾರಿಗೆ ಹೆಚ್ಚು ಅಗತ್ಯ ಇದೆಯೋ ಅವರು ಸ್ವಲ್ಪ ಮುಂಚಿನಿಂದಲೇ ಕೇರ್‌ ತೆಗೆದುಕೊಳ್ಳಬೇಕು.”

ಮೇಕಪ್‌ ಮತ್ತು ಡ್ರೆಸ್‌ಗೆ ತಕ್ಕಂತೆಯೇ ಹೇರ್‌ಸ್ಟೈಲ್ ‌ಮಾಡಿಸಬೇಕು. ಅನಿತಾ ಹೀಗೆ ಹೇಳುತ್ತಾರೆ, “ಡ್ರೆಸ್‌ ಮೇಕಪ್‌, ಹೇರ್‌ಸ್ಟೈಲ್ ‌ನಡುವೆ ಉತ್ತಮ ಹೊಂದಾಣಿಕೆ ಇದ್ದಾಗ ಬ್ಯೂಟಿ ಮತ್ತು ಪರ್ಫೆಕ್ಟ್ ಪಿಕ್ಚರ್‌ ಇರುತ್ತದೆ. ಡಯೆಟ್‌ ಮತ್ತು ಸ್ಕಿನ್‌ ಕೇರ್‌ ದೇಹವನ್ನು ಒಳಗಿನಿಂದ ಸುಂದರವಾಗಿ ಮಾಡುತ್ತದೆ. ಅದರಿಂದ ಮೇಕಪ್‌ನ ರಿಸ್ಟ್‌ ಇನ್ನೂ ಚೆನ್ನಾಗಿರುತ್ತದೆ. ಅನೇಕ ಬಾರಿ ದೇಹದ ಪೋಷಣೆ ಸರಿಯಾಗಿ ಆಗದಿದ್ದರೆ ಒಳ್ಳೆಯ ಡ್ರೆಸ್‌ ಹಾಗೂ ಸುಂದರ ಮೇಕಪ್‌ ಕೂಡ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಪೌಷ್ಟಿಕ ಡಯೆಟ್‌ ಅಗತ್ಯವಾಗಿ ತೆಗೆದುಕೊಳ್ಳಿ.”

ಫೆಸ್ಟಿವಲ್‌ನಲ್ಲಿನ ಕೊಬ್ಬಿನ ಆಹಾರ ಸೇವನೆ ಹೆಚ್ಚು. ಅದನ್ನು ನಿಯಂತ್ರಿಸಿ ಅದು ಬ್ಯೂಟಿಗೆ ಒಳ್ಳೆಯದಲ್ಲ. ಬಾಡಿ ಪಾಲಿಶಿಂಗ್‌ ಮತ್ತು ಮಸಾಜ್‌ನಿಂದ ದೇಹವನ್ನು ಸುಂದರಗೊಳಿಸಬಹುದು.

ಫಿಟ್ನೆಸ್ಅಗತ್ಯ

ಯಾವುದೇ ಡ್ರೆಸ್‌ನ್ನು ಸರಿಯಾದ ರೀತಿಯಲ್ಲಿ ಧರಿಸಲು ಶರೀರ ಫಿಟ್‌ ಆಗಿರಬೇಕು. ನೀವು ಫಿಟ್‌ ಆಗಿದ್ದರೆ ಇಡೀ ಫೆಸ್ಟಿವಲ್ ‌ಸೀಸನ್‌ನ ಸಂತೋಷ ಅನುಭವಿಸಬಹುದು. ನಿಮ್ಮ ಫಿಟ್ನೆಸ್‌ ನಿಮ್ಮನ್ನು ಕಾಯಿಲೆಯಿಂದ ದೂರವಿರಿಸುತ್ತದೆ. ಫಿಟ್‌ ಬಾಡಿಯ ಬಗ್ಗೆ ಮಾತನಾಡುವಾಗ ನೀವು ಫಿಲ್ಮ್ ಹೀರೋಯಿನ್‌ನಂತೆ ಝೀರೋ ಸೈಜ್‌ ಆಗಿರುವುದು ಅಗತ್ಯವೇನಲ್ಲ. ಫಿಟ್ನೆಸ್‌ ಅಂದರೆ ಡುಮ್ಮಗೆ ಕಾಣಬಾರದು. ನಿಮ್ಮ ಫಿಗರ್‌ ಅಷ್ಟು ಚೆನ್ನಾಗಿಲ್ಲದಿದ್ದರೆ ಅದಕ್ಕೆ ತಕ್ಕಂತೆ ಡ್ರೆಸ್‌ ಧರಿಸಿ. ಬರೀ ಆಹಾರ ಮತ್ತು ಎಕ್ಸರ್‌ಸೈಜ್‌ನಿಂದ 6-7 ತಿಂಗಳಲ್ಲಿ 8-10 ಕೆ.ಜಿ. ತೂಕ ಕಡಿಮೆ ಮಾಡಬಹುದು. ತೂಕ ಕರಗಿಸಲು ಹಾರ್ಡ್‌ ಡಯೆಟಿಂಗ್‌ಮಾಡಬೇಡಿ. ಅದು ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ವೇಗವಾಗಿ ತೂಕ ಕಡಿಮೆಯಾದರೆ ತ್ವಚೆಯಲ್ಲಿ ನೆರಿಗೆಗಳು ಬೀಳುತ್ತವೆ. ನಿಧಾನವಾಗಿ ತೂಕ ಕಡಿಮೆಯಾಗುವುದು ಶರೀರಕ್ಕೆ ಒಳ್ಳೆಯದು. ರುಟೀನ್‌ ಎಕ್ಸರ್‌ಸೈಜ್‌ನಿಂದ ಶರೀರ ಫಿಟ್‌ ಆಗಿರುತ್ತದೆ. ಅದರಿಂದ ಶರೀರ ಎಲ್ಲ ರೀತಿಯ ಕಾಯಿಲೆಗಳಿಂದ ದೂರವಿರುತ್ತದೆ.

ಜ್ಯೂವೆಲರಿ ಮತ್ತು ಫುಟ್ವೇರ್ವಿಶೇಷ

ಫೆಸ್ಟಿವಲ್‌ನಲ್ಲಿ ನಿಮ್ಮ ಜ್ಯೂವೆಲರಿ ಮತ್ತು ಫುಟ್‌ವೇರ್‌ ಕೂಡ ಸ್ಟೈಲಿಶ್‌ ಆಗಿರಲಿ. ಈಗ ಹಲವಾರು ರೀತಿಯ ಆರ್ಟಿಫಿಶಿಯಲ್ ಜ್ಯೂವೆಲರಿ ಧರಿಸಲಾಗುತ್ತದೆ. ಅವು ಚಿನ್ನ, ವಜ್ರ, ಬೆಳ್ಳಿ ಮತ್ತು ಮುತ್ತಿನಿಂದ ತಯಾರಾಗಿರುತ್ತವೆ. ಟ್ರೆಡಿಶನಲ್ ಆಗಿ ಕಾಣುವ ಈ ಜ್ಯೂವೆಲರಿ ಫೆಸ್ಟಿವಲ್‌ನಲ್ಲಿ ಬಹಳ ಚೆನ್ನಾಗಿರುತ್ತವೆ. ಈಗ ಹೆಚ್ಚು ಬದಲಾವಣೆ ಫುಟ್‌ವೇರ್‌ ಮಾರುಕಟ್ಟೆಯಲ್ಲಿ ಆಗಿದೆ. ಈಗ ಬಹಳ ಅಗ್ಗವಾದ ಡಿಸೈನರ್‌ ಫುಟ್‌ವೇರ್‌ ಸಿಗುತ್ತಿದೆ. ಅವು ಬಾಳಿಕೆಯೂ ಬರುತ್ತವೆ. ಅನೇಕರು ಫೆಸ್ಟಿವಲ್‌ನಲ್ಲಿಯೇ ಬಿಸ್‌ನೆಸ್‌ಮಾಡುತ್ತಾರೆ. ಅಂತಹರಲ್ಲಿ ಸಂಜಯ್‌ ಒಬ್ಬರು. ಅವರು ಹೀಗೆ ಹೇಳುತ್ತಾರೆ, “ಫೆಸ್ಟಿವಲ್ ಬರುತ್ತಲೇ ಮಾರುಕಟ್ಟೆಯ ಮೂಡ್ ಅರಳುತ್ತದೆ. ನಾನು ಪ್ರೈವೇಟ್‌ ನೌಕರಿ ಮಾಡುತ್ತೇನೆ. ಫೆಸ್ಟಿವಲ್ ‌ಸೀಸನ್‌ ಶುರುವಾಗುವ ಮೊದಲು ದೆಹಲಿ ಅಥವಾ ಬಾಂಬೆಗೆ ಹೋಗಿ ಸಗಟು ಮಾರುಕಟ್ಟೆಯಿಂದ  ಡಿಸೈನರ್‌ ಬಟ್ಟೆ ತರುತ್ತೇನೆ. ಅವನ್ನು ಲೋಕಲ್ ಮಾರುಕಟ್ಟೆಗಳಲ್ಲಿ ಮಾರಿ ಲಾಭ ಸಂಪಾದಿಸುತ್ತೇನೆ. ಹಬ್ಬಗಳಲ್ಲಿ ಬಟ್ಟೆಗಳಷ್ಟೇ ಅಲ್ಲ, ಜ್ಯೂವೆಲರಿ, ಫುಟ್‌ವೇರ್‌ಮತ್ತು ಕಾಸ್ಮೆಟಿಕ್ಸ್ ನ ಬಿಸ್‌ನೆಸ್‌ ಕೂಡ ಹೆಚ್ಚಾಗುತ್ತದೆ. ಬಹಳಷ್ಟು ಜನ ಫೆಸ್ಟಿವಲ್ ‌ಸೀಸನ್‌ ಬರುವುದನ್ನೇ ಕಾಯುತ್ತಿರುತ್ತಾರೆ. ಈಗ ಜನ ಪೂಜಾದ್ರವ್ಯಗಳ ಬದಲಾಗಿ ಮನೆಯ ಅಲಂಕಾರದ ವಸ್ತುಗಳನ್ನು ಹೆಚ್ಚಾಗಿ ಕೊಳ್ಳುತ್ತಿದ್ದಾರೆ.”

ಲೇಟೆಸ್ಟ್ ಫೆಸ್ಟಿವಲ್ ಫ್ಯಾಷನ್ಟ್ರೆಂಡ್

ಘಾಘ್ರಾ ವಿತ್‌ ಟಾಪ್‌ ವೆಸ್ಟರ್ನ್‌ ಮತ್ತು ಇಂಡಿಯನ್‌ ಡ್ರೆಸ್‌ನಿಂದ ತಯಾರಿಸಿದ ಫ್ಯೂಷನ್‌ ಟ್ರೆಂಡ್‌ ಆಗಿದೆ. ಘಾಘ್ರಾ ಫೆಸ್ಟಿವಲ್ ಲುಕ್ ತೋರುತ್ತದೆ. ಘಾಘ್ರಾದೊಂದಿಗೆ ಫಿಟಿಂಗ್‌ ಇರುವ ಟಾಪ್‌ನ್ನೇ ಇಷ್ಟಪಡುತ್ತಾರೆ. ಅದರ ಮೇಲೆ ಶಾರ್ಟ್‌ ಕಸೂತಿ ಮಾಡಿದ ಕುರ್ತಿ ಉಪಯೋಗಿಸಿದರೆ ಕಡಿಮೆ ಖರ್ಚಿನಲ್ಲಿ ಇನ್ನೊಂದು ಡ್ರೆಸ್‌ ತಯಾರಾಗುತ್ತದೆ.

ಟ್ರೆಡಿಶನಲ್ ಉಡುಪುಗಳಲ್ಲಿ ಪೇಸ್ಟಲ್ ಕಲರ್ಸ್‌ ಈ ದಿನಗಳಲ್ಲಿ ಚಾಲನೆಯಲ್ಲಿದೆ. 3 ಬೇರೆ ಬೇರೆ ಬಣ್ಣಗಳಲ್ಲಿ ಘಾಘ್ರಾ, ರವಿಕೆ ಮತ್ತು ದುಪಟ್ಟಾ ಫೆಸ್ಟಿವಲ್ ಲುಕ್‌ನ್ನು ಇನ್ನೂ ಹೆಚ್ಚಿಸುತ್ತದೆ. ಘಾಘ್ರಾ ಮತ್ತು ರವಿಕೆ ಫೆಸ್ಟಿವಲ್‌ನಲ್ಲಿ ಅತ್ಯಂತ ಹೆಚ್ಚು ಇಷ್ಟವಾಗುತ್ತದೆ. ಮೇಕಪ್‌ ಮೂಲಕ ಇದನ್ನು ವಿಶೇಷವಾಗಿಸಬಹುದು. ಈ ಡ್ರೆಸ್‌ನೊಂದಿಗೆ ಹೇರ್‌ಸ್ಟೈಲ್ ಕೂಡ ಕೊಂಚ ವಿಶೇಷವಾಗಿರಬೇಕು. ಕೊಂಚ ಕೂದಲು ಮುಖದ ಮೇಲೆ ಲಾಸ್ಯವಾಡುತ್ತಿದ್ದರೆ ಇನ್ನೂ ಚೆನ್ನಾಗಿರುತ್ತದೆ.

ಬದಲಾದ ರೂಪದಲ್ಲಿ ಗೌನ್‌ ಕೂಡ ಈಗ ಫೆಸ್ಟಿವಲ್ ‌ಡ್ರೆಸ್‌ ಆಗಿಬಿಟ್ಟಿದೆ. ಫ್ಲೋರ್‌ ಲೆಂತ್‌ ಗೌನ್‌ ಕೂಡ ಈಗ ಫೆಸ್ಟಿವಲ್ ಡ್ರೆಸ್ ಟ್ರೆಂಡ್‌ನ ಭಾಗವಾಗಿದೆ. ಅದರೊಂದಿಗೆ ಕಡಿಮೆ ಜ್ಯೂವೆಲರಿ ಧರಿಸಿ. ಏಕೆಂದರೆ ಹೆಚ್ಚು ಜ್ಯೂವೆಲರಿ ಅದರೊಂದಿಗೆ ಚೆನ್ನಾಗಿರುವುದಿಲ್ಲ. ಈ ಡ್ರೆಸ್‌ನೊಂದಿಗೆ ವಿಶೇಷವೆಂದರೆ ಹೇರ್‌ಸ್ಟೈಲ್ ಮಾಡಬೇಕಿಲ್ಲ. ತಾಜಾ ಹೂಗಳಿಂದ ತಯಾರಿಸಿದ ಕಿರೀಟವನ್ನು ಕೂದಲಿಗೆ ಹಾಕಿ ಹೊಸ ಲುಕ್‌ ಕೊಡಬಹುದು.

ಫೆಸ್ಟಿವಲ್ ‌ಸೀಸನ್‌ನಲ್ಲಿ ಡೆನಿಮ್ ಡ್ರೆಸ್‌ ಕೂಡಾ ಟ್ರೈ ಮಾಡಬಹುದು. ಡೆನಿಮ್ ನಿಂದ ತಯಾರಿಸಿದ ಬ್ಲೌಸ್‌ನೊಂದಿಗೆ ಲಂಗ ಧರಿಸಬಹುದು. ಅದರಲ್ಲಿ ಡೆನಿಮ್ ನಿಂದ ವಿಶೇಷ ಡಿಸೈನಿನ ಬ್ಲೌಸ್‌ಹೊಲಿಸಬಹುದು. ಲಂಗ ಪ್ಲೇನ್‌ ಬಟ್ಟೆಯದಾಗಿರಲಿ. ಅದರಲ್ಲಿ ಹಲವಾರು ಬಣ್ಣಗಳ ಬಟ್ಟೆಯನ್ನು ಉಪಯೋಗಿಸಲಾಗುತ್ತದೆ. ಅದರೊಂದಿಗೆ ಧರಿಸುವ ಜ್ಯೂವೆಲರಿ ಕಲರ್ಡ್‌ ಆಗಿರಬಹುದು. ಮೇಕಪ್‌ ಸರಳವಾಗಿರಲಿ, ಐ ಮೇಕಪ್‌ನ್ನು ಹೆಚ್ಚು ಉತ್ತೇಜಿಸಬಹುದು.

ಶೈಲಜಾ ರಾವ್

ಸ್ಮೈಲ್‌‌ನಿಂದ ಸೌಂದರ್ಯ ಹೆಚ್ಚಿಸಿ

“ಫ್ಯಾಷನೆಬಲ್ ಡ್ರೆಸ್‌ ಮತ್ತು ಮೇಕಪ್‌ನೊಂದಿಗೆ ನಿಮ್ಮ ಸ್ಮೈಲ್ ‌ಕೂಡ ಚೆನ್ನಾಗಿರುವುದು ಅಗತ್ಯ. ಅದಕ್ಕಾಗಿ ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಗಮನಿಸಿಕೊಳ್ಳಿ. ಅನೇಕ ಬಾರಿ ಉಸಿರಿನ ದುರ್ವಾಸನೆ ನಿಮ್ಮ ಉಳಿದ ಕೆಲಸಗಳಿಗೆ ತಣ್ಣೀರು ಎರಚುತ್ತದೆ. ಸ್ಮೈಲ್‌ನ್ನು ಸುಂದರಗೊಳಿಸಲು ಹಲ್ಲುಗಳ ಸ್ಕೇಲಿಂಗ್‌, ಪಾಲಿಶಿಂಗ್‌ ಮತ್ತು ಬ್ಲೀಚಿಂಗ್‌ನ ಜೊತೆ ಜೊತೆಗೆ ಡೆಂಟಲರ್‌ಜ್ಯೂವೆಲರಿಯನ್ನು ಉಪಯೋಗಿಸಬಹುದು. ಸುಂದರ ಸ್ಮೈಲ್‌, ಹೊಳೆಯುವ ದಂತ ಮತ್ತು ದುರ್ವಾಸನೆಯಿಲ್ಲದ ಉಸಿರು ನಿಮ್ಮ ವ್ಯಕ್ತಿತ್ವವನ್ನು ಹೊಳೆಯುವಂತೆ ಮಾಡುತ್ತದೆ.”

ಡಾ. ಅರ್ಪಿತಾ, ರಿಯಲ್ ಟೂಥ್ ಓನರ್

ಪಾರ್ಟಿಯ ವೈಭವವಾಗಿರಿ

“ಕೇವಲ ಸೀರೆ, ಬ್ಲೌಸ್‌ ಧರಿಸಿದರೆ ಫೆಸ್ಟಿವ್ ಸೀಸನ್‌ ಪೂರ್ಣವಾಗುವುದಿಲ್ಲ. ಪ್ರತಿ ಪಾರ್ಟಿಯಲ್ಲಿ ವಿಭಿನ್ನ ಡ್ರೆಸ್‌ನ ಬೇಡಿಕೆ ಇರುತ್ತದೆ. ನಿಮ್ಮ ಪಾರ್ಟಿಗೆ ತಕ್ಕಂತೆ ಡ್ರೆಸ್‌ ಇರಬೇಕು ಮತ್ತು ಆ್ಯಕ್ಸೆಸರೀಸ್‌ ಧರಿಸಿ. ನೀವು ಭೇಟಿಯಾಗುವವರ ಮೇಲೆ ಪ್ರಭಾವ ಬೀರುವಂತಿರಬೇಕು. ಒಳ್ಳೆಯ ಡ್ರೆಸ್‌ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ಅದಿತಿ ಜೆ. ಫ್ಯಾಷನ್ಡಿಸೈನರ್

ಮೇಕಪ್ನಲ್ಲಿ ಕೊಂಚ ವಿಶೇಷತೆ

ಬ್ಯೂಟಿ ಎಕ್ಸ್ ಪರ್ಟ್‌ ಅನಿತಾ ಹೀಗೆ ಹೇಳುತ್ತಾರೆ, “ಫೆಸ್ಟಿವಲ್ ‌ಮೇಕಪ್‌ ವಿಶೇಷವಾಗಿರಬೇಕು. ಫೆಸ್ಟಿವಲ್‌ಗೆ 15-20 ದಿನಗಳ ಮೊದಲೇ ಇದಕ್ಕಾಗಿ ತಯಾರಿ ನಡೆಸಬೇಕು. ಮೊದಲು ಸ್ಕಿನ್‌ ಕೇರ್‌ ಮಾಡಿ. ಕ್ಲೆನ್ಸಿಂಗ್‌ನಿಂದ ಆರಂಭಿಸಿ ನಂತರ ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್‌ ಮಾಡಿ. ತ್ವಚೆಯಲ್ಲಿ ಪಿಗ್ಮೆಂಟೇಶನ್‌ ಸಮಸ್ಯೆಯಿದ್ದರೆ ಸೀರಮ್ ಉಪಯೋಗಿಸಿ. ಫೆಸ್ಟಿವಲ್ ‌ಸೀಸನ್‌ನಲ್ಲಿ ಹವಾಮಾನ ಬದಲಾಗುತ್ತಿರುತ್ತದೆ. ಆಗ ಮಾಯಿಶ್ಚರೈಸರ್‌ಅಗತ್ಯವಿದೆ. ಪ್ರೈಮರ್‌ನಿಂದ ಮೇಕಪ್‌ ಆರಂಭಿಸಿ. ಕ್ರೀಮ್ ಯುಕ್ತ ಫೌಂಡೇಶನ್‌ ಕೂಡ ಉಪಯುಕ್ತ. ಫೆಸ್ಟಿವಲ್‌ನಲ್ಲಿ ಐ ಮೇಕಪ್‌ನ್ನು ಗಮನಿಸಬೇಕು. ಬ್ರಾಂಝ್ ಸ್ಮೋಕಿ ಮತ್ತು ಬ್ಲೂ ಐ ಮೇಕಪ್‌ನ್ನು ಹೆಚ್ಚು ಇಷ್ಟಪಡಲಾಗುತ್ತದೆ.

ಐ ಮೇಕಪ್‌ ಬ್ರೈಟ್‌ ಮಾಡಬೇಕಿದ್ದರೆ ಲಿಪ್ಸ್ ಕಲರ್‌ನ್ನು ಸ್ಕಿನ್‌ಗೆ ಹೊಂದುವಂತೆ ಮಾಡಿ. ಮೇಕಪ್‌ನಲ್ಲಿ ರಿಚ್‌ ಅಂಡ್‌ ಡೀಪ್‌ ಶೇಡ್ಸ್ ಹೆಚ್ಚು ಇಷ್ಟಪಡಲಾಗುತ್ತದೆ. ಮೇಕಪ್‌ ಮಾಡಿಕೊಳ್ಳುವಾಗ ಹಗಲು ಮತ್ತು ರಾತ್ರಿಯ ಬಗ್ಗೆ ಗಮನಿಸಿ. ರಾತ್ರಿಯ ಮೇಕಪ್‌ ಬ್ರೆಟ್‌ಆಗಿರುತ್ತದೆ. ಮೇಕಪ್‌ನಲ್ಲಿ ಐಸ್‌, ಫೇಸ್‌ ಮತ್ತು ಲಿಪ್ಸ್ ಗಳನ್ನು ಬ್ಯಾಲೆನ್ಸ್ ಮಾಡಿ. ಇದರಿಂದ ಇಡೀ ಮುಖ ಒಂದೇ ಎಂಬಂತಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ