ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ರಾಯಚೂರು ಹಾಗೂ ವಿಜಾಪುರ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನು ಹೊಂದಿದ ಜಿಲ್ಲಾ ಕೇಂದ್ರ. ಮುಂದೆ ವಿಜಾಪುರ ಜಿಲ್ಲೆಯಲ್ಲಿದ್ದ ಬಾಗಲಕೋಟೆಯು 1997ರ ಆಗಸ್ಟ್ 15 ರಿಂದ ಹುನಗುಂದ, ಬೀಳಗಿ, ಜಮಖಂಡಿ, ಮುಧೋಳ, ಬಾದಾಮಿ, ಬಾಗಲಕೋಟೆಗಳನ್ನು ಸೇರಿಸಿ ನೂತನ ಜಿಲ್ಲೆಯಾಯಿತು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಈ ಊರಿಗೆ ಬಾಗಡಿಗೆ ಎಂಬ ಹೆಸರಿತ್ತು. ಸಿಂದ್‌ ವಂಶದ ಮಹಾಮಂಡೀಶ್ವರರು ಈ ಪ್ರಾಂತ್ಯವನ್ನು ಆಳುತ್ತಿದ್ದರು. ಮುಂದೆ ವಿಜಾಪುರದ ಆದಿಲ್ ‌ಷಾಹಿ ಅರಸರ ಆಡಳಿತಕ್ಕೆ ಒಳಪಟ್ಟಾಗ ಅವರು ಇದನ್ನು ಬಾಂಗಡಿಕೋಟ ಎಂದು ಕರೆದರು. ವಿಜಾಪುರದ ಸುಲ್ತಾನನು ತನ್ನ ಮಗಳಾದ ಬಲಿಮ್ ಷಾ ಬೀಬಿಗೆ ಇದನ್ನು ಉಡುಗೊರೆಯಾಗಿ ನೀಡಿದನೆಂದು, ಈ ಉಡುಗೊರೆಯು ತನ್ನ ಮಗಳ ಬಳೆಗಳ ವೆಚ್ಚಕ್ಕಾಗಿ ನೀಡಿದ ಕಾರಣ ಬಾಂದಡಿಕೋಟಾ ಎಂದು ಕರೆದನೆಂದು ಹೇಳುವರು. ಅದು ಕ್ರಮೇಣ ರೂಪಾಂತರವಾಗಿ ಬಾಗಲಕೋಟೆ ಎಂದಾಯಿತು.

ಹಲವಾರು ರಾಜಮನೆತನಗಳ ಆಳ್ವಿಕೆ ಕಂಡ ಬಾಗಲಕೋಟೆ 18ನೇ ಶತಮಾನದಲ್ಲಿ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟಿತು. ನಂತರ ಹೈದರಾಲಿ ವಶವಾಯಿತು. ಟಿಪ್ಪುವಿನ ಮರಣಾನಂತರ ಮತ್ತೆ ಮರಾಠರ ವಶವಾಯಿತು. 1818ರಲ್ಲಿ ನಡೆದ ಬ್ರಿಟಿಷ್‌ ಮರಾಠರ ಯುದ್ಧದಲ್ಲಿ ಸರ್‌ ಥಾಮಸ್‌ ಮನ್ರೋ ಮರಾಠರಿಂದ ವಶಪಡಿಸಿಕೊಂಡನು. 1884ರಲ್ಲಿ ಇದು ವಿಜಾಪುರ ಜಿಲ್ಲೆಗೆ ಸೇರಿತು. 1997ರಲ್ಲಿ ನೂತನ ಜಿಲ್ಲೆಯಾಯಿತು.

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಆಲಮಟ್ಟಿ ಅಣೆಕಟ್ಟು ನಿರ್ಮಾಣದಿಂದ ಬಾಗಲಕೋಟೆ ಮುಳಗಡೆ ಪ್ರದೇಶವಾಗುವ ಮೂಲಕ ನವನಗರ ರೂಪುತಾಳಿತು. ಹಳೆಯ ಬಾಗಲಕೋಟೆಯಲ್ಲಿ ಪ್ರಸಿದ್ಧ ವಾಡೆಗಳಿದ್ದವು. ನೂತನ ನನಗರ ಕೂಡ ಸುಂದರ ತಾಣ. ಇಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದ್ದು, ಜನಪರ ಮ್ಯೂಝಿಯಂ.

ಜನಪದ ವಸ್ತುಸಂಗ್ರಹಾಲಯ ಬಾಗಲಕೋಟೆಯ ನವನಗರದ 19ನೇ ಸೆಕ್ಟರ್‌ನಲ್ಲಿದ್ದು, ಇದು 2006ರಲ್ಲಿ ಲೋಕಾರ್ಪಣೆಗೊಂಡಿದೆ. ಪ್ರತಿದಿನ ಬೆಳಗ್ಗೆ 10.30 ರಿಂದ ಸಂಜೆ 5.30 ಇದರ ಕೆಲಸದ ಅವಧಿ. ಪ್ರತಿದಿನ ನೂರಾರು ಪ್ರವಾಸಿಗರು ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ಕೊಡುವರು. ಅಂದಹಾಗೆ ಇದಕ್ಕೆ ರಜಾ ದಿನಗಳು ಕೂಡ ಅಪರೂಪ. ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿದರೆ ವರ್ಷವಿಡೀ ಯಾವುದೇ ಸಂದರ್ಭದಲ್ಲೂ ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಆಲಮಟ್ಟಿ ಅಣೆಕಟ್ಟಿನ ನಿರ್ಮಾಣದಿಂದಾಗಿ ಬಹುತೇಕ ಹಳೆಯ ಪಟ್ಟಣ ಮುಳುಗಿಹೋಗಿ ನವನಗರ ನಿರ್ಮಾಣವಾಯಿತು. ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಿದ ಹಳ್ಳಿಗಳು ಅಲ್ಲಿನ ಹಳ್ಳಿಯ ಜೀವನಶೈಲಿ ಅಂದಿನ ಹಳ್ಳಿಗಳು ಹೇಗಿರುತ್ತಿದ್ದವು, ಆ ಜನರ ಜೀವನಶೈಲಿ, ಅಲ್ಲಿನ ಸಂಸ್ಕೃತಿ ಇತ್ಯಾದಿ ಜನಪದ ವಸ್ತು ಸಂಗ್ರಹಾಲಯದ ಕಲಾಕೃತಿಗಳಲ್ಲಿ ರೂಪಿಸಲಾಗಿದೆ. ಅಷ್ಟೇ ಅಲ್ಲ, ಆಲಮಟ್ಟಿ ಯೋಜನೆಯ ಸಂಪೂರ್ಣ ಮಾಹಿತಿ ನೀಡುವ ಛಾಯಾಚಿತ್ರಗಳ ಗ್ಯಾಲರಿ ಕೂಡ ಇಲ್ಲಿದ್ದು ಬಾಗಲಕೋಟೆಗೆ ಬಂದವರು ಇದನ್ನು ನೋಡಿಯೇ ಬರಬೇಕು, ಅಂಥ ವೈಶಿಷ್ಟ್ಯತೆಯನ್ನು ಹೊಂದಿದೆ.

ವಿಶಿಷ್ಟ ವಿನ್ಯಾಸ

ಟಿಕೆಟ್‌ ಪಡೆದು ಒಳ ಪ್ರವೇಶಿಸಿ ಎಡಗಡೆಯಲ್ಲಿ ಹೊರಟರೆ ಗೋಡೆಯಲ್ಲಿ ಬಣ್ಣದ ಚಿತ್ತಾರದಿಂದ ಕಂಗೊಳಿಸುವ ಚಿತ್ರಗಳು ಗಮನ ಸೆಳೆಯುತ್ತವೆ. ಹಳ್ಳಿ ಜನರ ಆಚರಣೆಯ ಹಬ್ಬಗಳಾದ ನಾಗಪಂಚಮಿ, ಗಣೇಶ ಚತುರ್ಥಿ, ಜೋಕುಮಾರನ ಹಬ್ಬ, ವಿಜಯದಶಮಿ, ಎಳ್ಳಮಾವಾಸ್ಯೆಯ ಚರಗ, ದೀಪಾವಳಿ, ಕಾರ್ತೀಕ, ಹೋಳಿ ಹುಣ್ಣಿಮೆ, ಮೊಹರಂ ಹಬ್ಬಗಳನ್ನು ಆಚರಿಸುವ ದೃಶ್ಯಗಳು ಅಂದು ಹೇಗಿದ್ದವು ಎಂಬುದನ್ನು ಪೇಂಟಿಂಗ್‌ ಮೂಲಕ ಚಿತ್ರ ಚಿತ್ರಿಸಿರುವರಲ್ಲದೇ ಅವುಗಳ ವಿವರಣೆಯ ಫಲಕಗಳನ್ನು ಪ್ರತಿ ಚಿತ್ರಗಳ ಪಕ್ಕದಲ್ಲಿ ಅಳವಡಿಸಿದ್ದು ಜನಪದ ಹಬ್ಬಗಳ ಕಿರು ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಗಮನಿಸಬಹುದಾಗಿದೆ.

ಹಾಗೆಯೇ ಬಂದರೆ ಮುಂದೆ ಕಾಣುವುದು ಹಳ್ಳಿ. ಜನ ಬಾವಿಯಿಂದ ನೀರನ್ನು ತರುತ್ತಿರುವ ದೃಶ್ಯ. ನಿಜವಾಗಿ ಮನುಷ್ಯರೇ ಕೊಡ ಹೊತ್ತು ಬಾವಿ ದಡದಲ್ಲಿ ನೀರು ಸೇದುತ್ತಿರುವರೇನೋ ಎಂಬಂತೆ ಇಲ್ಲಿನ ಕಲಾಕೃತಿಗಳು ನೋಡುಗರನ್ನು ಬೆರಗಾಗಿಸುತ್ತವೆ. ತದನಂತರ ಕುರಿಗಾಹಿಯೊಬ್ಬ ತನ್ನ ಕುರಿಗಳನ್ನು ಕಾಯುತ್ತಿರುವುದು. ಹೀಗೆ ನೋಡುತ್ತ ಮುಂದೆ ಸಾಗಿದರೆ ಅಂದಿನ ಹಳ್ಳಿ ಜನರ ಸೋಮಾರಿ ಕಟ್ಟೆಯೊಂದು ಗಮನ ಸೆಳೆಯುತ್ತದೆ. ಸೋಮಾರಿಗಳಾದವರ ಚಟುವಟಿಕೆಗಳು ಹಳ್ಳಿಯಲ್ಲಿ ಹೇಗಿರುತ್ತಿದ್ದವು ಎಂಬುದನ್ನು ಈ ಕಲಾಕೃತಿ ಗಮನ ಸೆಳೆಯುತ್ತದೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಛಾಯಾಚಿತ್ರ ಪ್ರದರ್ಶನಾಲಯವಂತೂ ಅದ್ಭುತ. ಇದು ಕೃಷ್ಣಾ ನದಿ ಯೋಜನೆ ಆರಂಭಗೊಂಡ ನಂತರ ಮುಳುಗಡೆಯಾದ ಸ್ಥಳಗಳ ಮಾಹಿತಿ ಜೊತೆಗೆ ಅದರಿಂದ ಒಳಗೊಂಡ ಪ್ರದೇಶಗಳು, ಕಾಲುವೆಗಳು, ನೀರಾವರಿ ಪ್ರದೇಶ, ನೀರಾವರಿ ಅಲ್ಲದೇ ಮತ್ತಿತರ ಸೌಲಭ್ಯಕ್ಕಾಗಿ ಕೃಷ್ಣಾ ನದಿ ಬಳಕೆಯಾಗುತ್ತಿರುವ ಸಂಪೂರ್ಣ ಚಿತ್ರಗಳನ್ನು ಗ್ಯಾಲರಿ ಕೊಠಡಿ ಒಳಗೊಂಡಿದೆ.

ಅದರ ಪಕ್ಕದಲ್ಲಿ ವೈಷ್ಣವ ಶಿಲ್ಪಕಲಾ ಗ್ಯಾಲರಿ ಇದ್ದು ಅಂದು ದೊರೆತ ವೈಷ್ಣವ ಶಿಲ್ಪಕಲೆಯ ಮೂರ್ತಿಗಳನ್ನು ಅವುಗಳ ಸಮಗ್ರ ಮಾಹಿತಿಯನ್ನು ನೀಡಲಾಗಿದೆ. ಇದರ ಪಕ್ಕದ ಕೊಠಡಿಯೇ ಶೈವ ಶಿಲ್ಪಕಲಾ ಗ್ಯಾಲರಿ. ಶಿಲ್ಪಕಲೆಯ ಸಮಗ್ರ ಮಾಹಿತಿ ವಿವಿಧ ಮೂರ್ತಿಗಳನ್ನೊಳಗೊಂಡು ನೀಡಿದ್ದು ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಮತ್ತೊಂದೆಡೆ ಜೈನ ಶಿಲ್ಪಕಲಾ ಗ್ಯಾಲರಿ ಬಾಗಲಕೋಟೆಯನ್ನು ಆಳಿದ ವಿವಿಧ ರಾಜವಂಶಗಳ ಕಾಲಕ್ಕೆ ಆಗಿರುವ ಶಿಲ್ಪಕಲಾ ವೈವಿಧ್ಯತೆಯನ್ನು ಈ ಮೂವರು ಶೈವ, ವೈಷ್ಣವ, ಜೈನ ಶಿಲ್ಪಕಲಾ ಗ್ಯಾಲರಿಗಳು ತಿಳಿಸಿಕೊಡುತ್ತವೆ.

ಗ್ರಾಮೀಣ ಜನ ಚಿತ್ರಣ

ಇನ್ನು ಮುಂದೆ ಬರುವುದು ಗ್ರಾಮೀಣ ಜನರ ವೃತ್ತಿ ಕಸುಬುಗಳ ಕುರಿತ ಗ್ಯಾಲರಿ. ಇಲ್ಲಿ ಕಮ್ಮಾರ, ಕುಂಬಾರ, ಅಕ್ಕಸಾಲಿಗ, ಗಾಣಿಗ, ಮೇದಾರ, ನೇಕಾರ, ಕ್ಷೌರಿಕ ಎಲ್ಲರೂ ಮೂರ್ತ ಸ್ವರೂಪದಲ್ಲಿ ಮೈದಳೆದು ನಿಂತಿದ್ದಾರೆ. ಹಳ್ಳಿಯ ಜೀವನದಲ್ಲಿ ಇವರೆಲ್ಲ ಯಾವ ರೀತಿ ಇರುತ್ತಿದ್ದರು ಎಂಬುದನ್ನು ಇಲ್ಲಿನ ಪ್ರತಿಕೃತಿಗಳನ್ನು ನೋಡಿ ತಿಳಿಯಬಹುದಾಗಿದೆ. ಇದನ್ನೆಲ್ಲ ನೋಡಿ ಮುಂದೆ ಬಂದರೆ ಕಾಣುವುದು ಹಳ್ಳಿ ಗೌಡರ ಮನೆ.

ಹಳ್ಳಿಗೌಡರ ಮನೆ ಹೊಕ್ಕರಂತೂ ಮುಗಿಯಿತು. ಅಂದಿನ ಗೌಡರ ಮನೆ ಹೇಗಿರುತ್ತಿದ್ದವೋ ಅದೆಲ್ಲ ಅಲ್ಲಿದೆ. ಬಾಗಿಲಿನ ಮುಂದೆ ಒಂದು ಛಾವಣಿಯಲ್ಲಿ ಇಬ್ಬರು ಹುಡುಗಿಯರು ಕುಂಟಾಬಿಲ್ಲೆ ಆಟವಾಡುತ್ತಿದ್ದರೆ, ಮತ್ತೊಂದು ಛಾವಣಿಯಲ್ಲಿ ಒಬ್ಬ ಬಾಲಕ ನಾಯಿಯೊಡನೆ ನಿಂತಿರುವ ದೃಶ್ಯ. ಗೌಡರ ಮನೆಯ ಗತ್ತು ಬಾಗಿಲ ಒಂದು ಬದಿ ಮನೆಯ ಆಳು, ಎಮ್ಮೆ ತೊಳೆಯುತ್ತಿರುವ ದೃಶ್ಯ…. ಹೀಗೆ ಹಲವು ದೃಶ್ಯಗಳ ಪ್ರತಿಕೃತಿಗಳನ್ನು ನೋಡಿ ಒಳ ಪ್ರವೇಶಿಸಿದರೆ ಸಾಕು ಒಂದು ಬದಿ ಗೌಡರ ಆಕಳು, ಎಮ್ಮೆ, ಜಾನುವಾರುಗಳ ಮಧ್ಯೆ ಹಾಲು ಕರೆಯುತ್ತಿರುವ ಮಹಿಳೆ, ಮತ್ತೊಂದೆಡೆ ಗೌಡರ ಎತ್ತುಗಳು, ಅಟ್ಟದ ಮೇಲೆ ಹೊಲದಲ್ಲಿ ಬಳಕೆಯಾಗುವ ನೇಗಿಲು, ರೆಂಟೆ, ವ್ಯವಸಾಯ ಬಳಕೆಯ ವಸ್ತುಗಳು. ಮನೆಯ ಮೆಟ್ಟಿಲು ಹತ್ತಿ ಬಂದರೆ ಸಾಕು ಇಬ್ಬರು ಮಹಿಳೆಯರು ಖಾರ ಕುಟ್ಟುತ್ತಿರುವ, ಹಿಟ್ಟು ಬೀಸುತ್ತಿರುವ, ಒಬ್ಬ ಮನುಷ್ಯ ಮಕ್ಕಳಿಗೆ ಊಟ ಮಾಡಿಸುತ್ತಿರುವ, ಪಕ್ಕದಲ್ಲಿ ಮಕ್ಕಳು ಓದುತ್ತ ಕುಳಿತಿರುವ ಪ್ರತಿಕೃತಿಗಳು ಅಚ್ಚರಿ ಮೂಡಿಸುತ್ತವೆ. ಗೌಡರ ಅಡುಗೆಮನೆಗೆ ಹೋದರೆ ಅಲ್ಲಿ ರೊಟ್ಟಿ ಮಾಡುತ್ತಿರುವ ಮಹಿಳೆ, ಮಜ್ಜಿಗೆ ಕಡೆಯುತ್ತಿರುವ ಮಹಿಳೆ, ದೇವರ ಕೋಣೆಯಲ್ಲಿ ಪೂಜೆಗೈಯುತ್ತಿರುವ ದೃಶ್ಯ ಇತ್ಯಾದಿ. ಮತ್ತೊಂದು ಕೊಠಡಿಯಲ್ಲಿ ಗೌಡರ ಸೊಸೆ, ಬಾಣಂತಿಯರು ಇರುವ ದೃಶ್ಯ…. ಇವೆಲ್ಲ ಮೂರ್ತ ಸ್ವರೂಪದಲ್ಲಿ ಕಾಣಸಿಗುತ್ತವೆ.

ಇಷ್ಟೆಲ್ಲವನ್ನೂ ಜನಪದ ಹಿನ್ನೆಲೆಯಲ್ಲಿ  ಕಲ್ಪಿಸಿಕೊಂಡರೆ, ಅಂದಿನ ಗೌಡರ ಜೀವನ ಹೇಗಿರುತ್ತಿತ್ತು ಎಂಬುದನ್ನು ಗಮನಿಸಬಹುದಾಗಿದೆ.

ಇತಿಹಾಸದ ಮೇಲೆ ಬೆಳಕು

ಗೌಡರ ಮನೆ ನೋಡಿ ಹೊರ ಬಂದು ಆವರಣದಲ್ಲಿ ಹಳ್ಳಿ ಸಂಪ್ರದಾಯದ ಕೋಲಾಟ, ಡೊಳ್ಳು, ವಾಲಗದವರು ಗಮನ ಸೆಳೆಯುತ್ತಾರೆ. ಹಾಗೆಯೇ ಮುಂದೆ ಬಂದರೆ ಬಾಗಲಕೋಟೆ ಜಿಲ್ಲೆಯ ವಿವಿಧ ಶಾಸನಗಳ ಪ್ರತಿರೂಪವನ್ನು ಕಾಣಬಹುದಾಗಿದೆ. ಇವೆಲ್ಲವನ್ನೂ ಕಣ್ತುಂಬಿಕೊಳ್ಳ ಬೇಕಾದರೆ ಕನಿಷ್ಠ ಎಡಡೂವರೆ ತಾಸು ಸಮಯ ಬೇಕಾಗಬಹುದು. ಇದು ಸಾರ್ಥಕ ಪ್ರಯತ್ನ ಕೂಡ. ಹೆಸರು ಜನಪದ ವಸ್ತು ಸಂಗ್ರಹಾಲಯವಿದ್ದರೂ ಕೂಡ ಇತಿಹಾಸದ ಮೇಲೆ ಬೆಳಕು ಚೆಲ್ಲು ಮಾಹಿತಿಯನ್ನೊಳಗೊಂಡು ಆಧುನಿಕ ಯುಗದ ಅಣೆಕಟ್ಟುಗಳ ಮಾಹಿತಿ ಅವುಗಳ ಪ್ರಯೋಜನ ಇತ್ಯಾದಿ ಸಮಗ್ರ ವಿವರಣೆಯನ್ನು ಜನಪದ ಬದುಕಿನೊಂದಿಗೆ ಈ ವಸ್ತು ಸಂಗ್ರಹಾಲಯ ಕಟ್ಟಿಕೊಡುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಬಾಗಲಕೋಟೆಗೆ ಬಂದವರು ತಪ್ಪದೇ ಈ ವಸ್ತು ಸಂಗ್ರಹಾಲಯವನ್ನು ನೋಡಿಯೇ ಹೋಗಬೇಕು. ಅದರಲ್ಲಿ ಮಕ್ಕಳನ್ನು ಕರೆದುಕೊಂಡು ಬಂದರಂತೂ ಮೊದಲು ಇಲ್ಲಿಗೆ ಬನ್ನಿ. ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಿದ ಹಳ್ಳಿಗಳು ನೂರಾರು. ಹಳ್ಳಿ ಜಲದಲ್ಲಿ ಮುಳಗಿದ ಕುರಿತು ಮಾಹಿತಿಯೊಡನೆ ಈ ಜಲ ಈಗ ಯಾವ ರೀತಿ ಬಳಕೆಯಾಗುತ್ತಿದೆ, ಅಣೆಕಟ್ಟುಗಳ ಮಹತ್ವದೊಂದಿಗೆ ಇತಿಹಾಸವನ್ನು ಅರಿಯುವಂತೆ ಮಾಡುವಲ್ಲಿ ಈ ವಸ್ತುಸಂಗ್ರಹಾಲಯ ಅತಿ ಮಹತ್ವದ್ದಾಗಿದೆ.

ಎಲ್ಲಿಂದ ಎಷ್ಟು ದೂರ?

ಬಾಗಲಕೋಟೆ ನಗರ ಸುತ್ತಲಿನ  ಸ್ಥಳಗಳಿಂದ ಇರುವ ಅಂತರ ಬೆಂಗಳೂರಿನಿಂದ 534 ಕಿ.ಮೀ. ಹುಬ್ಬಳ್ಳಿಯಿಂದ 131 ಕಿ.ಮೀ., ಬೆಳಗಾವಿಯಿಂದ 141 ಕಿ.ಮೀ., ವಿಜಯಪುರ ದಿಂದ 84 ಕಿ.ಮೀ., ಗದಗದಿಂದ 80 ಕಿ.ಮೀ., ಕೊಪ್ಪಳದಿಂದ 105 ಕಿ.ಮೀ. ಅಂತರದಲ್ಲಿದ್ದು, ರಸ್ತೆ ಮತ್ತು ರೈಲು ಮೂಲಕ ಸುಲಭವಾಗಿ ತಲುಪಬಹುದಾದ ಸ್ಥಳವಾಗಿದ್ದು, ವಸತಿ ವ್ಯವಸ್ಥೆಗೂ ಕೂಡ ಸಾಕಷ್ಟು ವಸತಿ ಗೃಹಗಳು ಸರಕಾರಿ ಹಾಗೂ ಖಾಸಗಿ ಒಡೆತನದಲ್ಲಿವೆ. ಜೊತೆಗೆ ಬಾಗಲಕೋಟೆಯಿಂದ ಬಾದಾಮಿ 32 ಕಿ.ಮೀ., ಐಹೊಳೆ 31 ಕಿ.ಮೀ, ಪಟ್ಟದಕಲ್ಲು 55 ಕಿ.ಮೀ., ಮಹಾಕೂಟ 45 ಕಿ.ಮೀ., ಕೂಡಲ ಸಂಗಮ 59 ಕಿ.ಮೀ., ಆಲಮಟ್ಟಿ ಡ್ಯಾಂ 59 ಕಿ.ಮೀ., ಅಂತರದಲ್ಲಿದ್ದು ಬಾಗಲಕೋಟೆ ಮೂಲಕ ವಿವಿಧ ಪ್ರವಾಸವೇ ತಾಣಗಳನ್ನು ಕೂಡ ಸುಲಭವಾಗಿ ತಲುಪಿ ವೀಕ್ಷಿಸಬಹುದಾಗಿದೆ. ಒಂದು ವಾರದ ಪ್ರವಾಸ ಯೋಜನೆ ಹಾಕಿಕೊಂಡು ಬಂದರಂತೂ ಉತ್ತಮ. ವಸತಿ ವ್ಯವಸ್ಥೆ ಅನುಕೂಲ ಮಾಡಿಕೊಂಡು ಪ್ರವಾಸದ ಅನುಭವ ಸವಿಯಬಹುದಾಗಿದೆ.

ವೈ.ಬಿ. ಕಡಕೋಳ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ