ನನ್ನ ಹಳೆಯ ಗೆಳತಿ ಗೀತಾ ಪ್ರೌಢಶಾಲೆಗೆ ಹೋಗುವ ಇಬ್ಬರು ಮಕ್ಕಳ ತಾಯಿ. ಆಕೆಯನ್ನು ಈ ಕುರಿತು ಕೇಳಿದರೆ, ತನ್ನ ಮಕ್ಕಳು ಮಾಡಿದ ಸಂಕಲ್ಪವನ್ನು ಮುರಿಯದಂತೆ ನೋಡಿಕೊಳ್ಳುವುದೇ ಅವಳ ಸಂಕಲ್ಪ ಎನ್ನುವುದೇ!
ಹೊಸ ವರ್ಷ ಬಂದೊಡನೆ ಎಲ್ಲರೂ ಸಂಕಲ್ಪಗಳ ಕುರಿತು ಮಾತನಾಡುವುದು ಸಹಜ. ಹೀಗಾಗಿ ಈ ನೂತನ ವರ್ಷ 2015ಕ್ಕಾಗಿ ಏನೆಲ್ಲ ಸಂಕಲ್ಪ ಮಾಡಿಕೊಳ್ಳುವುದು? ಅದಿರಲಿ, ಈ ಸಂಕಲ್ಪಗಳನ್ನು ಉಳಿಸಿಕೊಳ್ಳಬೇಕೇ ಅಥವಾ ಬೇಕಾದಾಗ ಬ್ರೇಕ್ ಮಾಡಬಹುದೇ? ಇದಕ್ಕಾಗಿ ಹಿಂದಿನ ವರ್ಷಗಳ ಸಂಕಲ್ಪಗಳು ಹಾಗೂ ಅವು ಎಷ್ಟು ಮಾತ್ರ ನೆರವೇರಿತು ಎಂಬುದರ ಪರಾಮರ್ಶೆ ಅಗತ್ಯ.
ನನ್ನ ಹತ್ತಿರದ ಒಬ್ಬ ಗೆಳತಿ ಪದ್ಮಾ, ಹಳೆಯ ವಿಚಾರಗಳು, ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ರೂಢಿಸಿಕೊಂಡಿರುವ ಗೃಹಿಣಿ. ಆಕೆ ಈ ಹೊಸ ವರ್ಷಕ್ಕಾಗಿ ಮಾಡಿದ ಸಂಕಲ್ಪವೆಂದರೆ, “ಈ ವರ್ಷ ನಾನೆಂದೂ ಕೋಪ ಮಾಡಿಕೊಳ್ಳುವುದೇ ಇಲ್ಲ!”
“ಇದೇನೋ ದಿಢೀರ್ ಎಂದು ಕೈಗೊಂಡ ನಿರ್ಧಾರದಂತಿದೆ, ಯೋಚಿಸಿ ಪ್ಲ್ಯಾನ್ ಮಾಡಿದ್ದಲ್ಲವೇನೋ….” ಎಂದು ನಾನು ರಾಗವೆಳೆದೆ. ಅದಕ್ಕೆ ಅವಳು ನಸುನಗುತ್ತಾ, “ಹೂಂ, ನಮ್ಮವರ ಮಾತುಗಳು ನನ್ನನ್ನು ತಕ್ಷಣ ಈ ಸಂಕಲ್ಪ ಕೈಗೊಳ್ಳಲು ಪ್ರೇರೇಪಿಸಿತು,” ಎಂದಳು.
“ಅದೇನೆಂದು ವಿವರಿಸುವವಳಾಗು ಸಖಿ,” ಎಂದು ನಾನು ನಾಟಕೀಯವಾಗಿ ಕೇಳಿದೆ.
“ಯುಗಾದಿ ನಮ್ಮ ಹೊಸ ವರ್ಷದ ಮೊದಲ ದಿನ. ಹೀಗಾಗಿ ಆ ದಿನ ಹಬ್ಬದ ಇತರ ಕೆಲಸ, ಪೂಜೆ ಪುನಸ್ಕಾರ ಮುಗಿದು ಹಿರಿಯರಿಂದ ಆಶೀರ್ವಾದ ಪಡೆದ ಮೇಲೆ ಗಂಡನ ಕಾಲಿಗೆ ನಮಸ್ಕರಿಸಿ ಬೇವುಬೆಲ್ಲ ಸೇವಿಸಬೇಕೆಂಬ ಸಂಪ್ರದಾಯವಿದೆ. ಈ ಸಲ ಹಾಗಾದಾಗ, ಅವರು ಎಂದಿನಂತೆ `ಸುಖೀಭವ’ ಅಥವಾ `ದೀರ್ಘ ಸುಮಂಗಲೀಭವ’ ಎನ್ನುವ ಬದಲು `ಸದಾ ಶಾಂತ ಸ್ವರೂಪಿಣಿ ಭವ!’ ಎಂದುಬಿಡುವುದೇ? ಅವರು ನನ್ನಿಂದ ಏನನ್ನು ಅಪೇಕ್ಷಿಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡು ನಾನು ತಕ್ಷಣ ಈ ಸಂಕಲ್ಪ ಕೈಗೊಂಡೆ,” ಎಂದು ವಿವರಿಸಿದಳು ಪದ್ಮಾ.
ನಂತರ ನನ್ನ ಮತ್ತೊಬ್ಬ ಗೆಳತಿ ಸುಮಾಳನ್ನು ಈ ಕುರಿತು ಪ್ರಶ್ನಿಸಿದಾಗ, ಎಲ್ಲಾ ಪತ್ರಿಕೆಗಳಿಗೂ ಫ್ರ್ಯೀಲಾನ್ಲ್ ಬರಹಗಾರ್ತಿಯಾಗಿ ಲೇಖನ ಕಳುಹಿಸುವ ಆಕೆ, “ಸಂಕಲ್ಪವೇ? ಓ…. ಅದಾಗಲೇ ಮತ್ತೊಂದು ಹೊಸ ವರ್ಷ ಬಂದಾಯ್ತು ಅನ್ನು, ನಾನಂತೂ ಆ ಬಗ್ಗೆ ಇನ್ನು ಏನೂ ನಿರ್ಧರಿಸಿಲ್ಲ….” ಎಂದು ಸ್ವಲ್ಪ ಯೋಚಿಸಿದ ಅವಳು, “ಏನಾದರೂ ಒಂದು ನಿರ್ಧಾರ ಕೈಗೊಂಡು ಆ ಸಂಕಲ್ಪಕ್ಕೆ ದೃಢವಾಗಿ ಅಂಟಿಕೊಳ್ಳಬೇಕೆಂಬುದೇ ನನ್ನ ಹೊಸ ಸಂಕಲ್ಪ!” ಎಂದಳು. ಈ ಬರಹಗಾರರು ತಮ್ಮ ಚಾಣಾಕ್ಷ ಮಾತುಗಳಿಂದ ಏನೋ ಒಂದು ಮೋಡಿ ಮಾಡುತ್ತಾರೆ ಎಂಬುದಂತೂ ನಿಜ.
ನಂತರ ಒಂದು ಖ್ಯಾತ ಖಾಸಗಿ ಕಂಪನಿಯಲ್ಲಿ ಡಿಜಿಎಂ ಆಗಿರುವ ನನ್ನ ಗೆಳತಿ ವಿಶಾಲಾಕ್ಷಿಯನ್ನು ಈ ಬಗ್ಗೆ ವಿಚಾರಿಸಿದೆ.
“ಈ ಹೊಸ ವರ್ಷದಿಂದ ಏನಾದರೂ ಮಾಡಿ ಬೇಗ ಆಫೀಸ್‌ನಿಂದ ಮನೆಗೆ ಹೊರಟು ಫ್ಯಾಮಿಲಿ ಜೊತೆ ಹೆಚ್ಚು ಹೊತ್ತು ಕಳೆಯಬೇಕೆಂಬುದೇ ನನ್ನ ಸಂಕಲ್ಪ,” ಎಂದು ನುಡಿದಳು.
ಒಂದೇ ಸಮ ಹೊತ್ತು ಗೊತ್ತಿಲ್ಲದೆ ದುಡಿಯುವ ಉದ್ಯೋಗಸ್ಥ ವನಿತೆಯಾದ ಆಕೆ, ಸದಾ ತನ್ನ ಕುಟುಂಬದ ಸಾಂಗತ್ಯ ಬಯಸುವುದು ಸಹಜ.
“ಅದು ಸರಿ…. ಆಫೀಸ್‌ನಿಂದ ಬೇಗ ಹೊರಡುವುದೆಂದರೆ….” ಅದಕ್ಕೆ ಥಟ್ಟನೆ ಉತ್ತರಿಸಿದಳು,
“ವಾವ್… ಸಂಜೆ 7 ಗಂಟೆ ಅಥವಾ 7.30….. 8.00!”
“ನೀನಂತೂ ಪಕ್ಕಾ ವರ್ಕೋಹಾಲಿಕ್ ಬಿಡು,” ಎಂದು ಅವಳನ್ನು ಸಂತೈಸಿ ಸಂಕಲ್ಪ ಮರೆಯಬೇಡ, ಮುರಿಯಲೂಬೇಡ ಎಂದು ನೆನಪಿಸಿದೆ.
ಅದಾದ ಮೇಲೆ ನನ್ನ ಬಾಲ್ಯ ಗೆಳತಿ ಗೀತಾ ಸಿಕ್ಕಿದಳು. ಪ್ರೌಢಶಾಲೆಯಲ್ಲಿ ಓದುವ ಇಬ್ಬರು ಮಕ್ಕಳ ತಾಯಿಯಾದ ಆಕೆಯನ್ನು ಈ ಕುರಿತು ಕೇಳಿದಾಗ, “ನನ್ನ ಮಕ್ಕಳು ತಮ್ಮ ಸಂಕಲ್ಪ ಮುರಿಯುತ್ತಿಲ್ಲ ತಾನೇ ಎಂದು ಅವರನ್ನು ಕಾಯುವುದೇ ನನ್ನ ಸಂಕಲ್ಪ!” ಎನ್ನುವುದೇ?
“ನೀನು ಅಕ್ಷರಶಃ ಅಮ್ಮನ ಡೈಲಾಗ್ ಹೊಡೆಯುತ್ತಿದ್ದಿ. ನೀನು ಸ್ವಲ್ಪ ನಿನ್ನ ಮಾತೆಯ ಅವತಾರ ಬದಿಗೊತ್ತಿ ಒಬ್ಬ ವ್ಯಕ್ತಿಯಾಗಿ ನಿನ್ನ ಕುರಿತು ನೀನು ಆಲೋಚಿಸಿ ನಂತರ ಉತ್ತರಿಸು,” ಎಂದೆ. ನನ್ನ ಭಾಷಣ ಮುಂದುವರಿಯಲು ಬಿಡದೆ ಅವಳು ಹೇಳಿದಳು,
“ಹೂಂ…. ಬಹುಶಃ ನನ್ನ ಸಂಕಲ್ಪ ಎಂದರೆ…. ಆದಷ್ಟೂ ಪ್ಲಾಸ್ಟಿಕ್ ಬಳಸದೇ ಇರುವುದು. ಅಂದರೆ ಅದು ಪ್ಲಾಸ್ಟಿಕ್ ಕವರ್, ಚೀಲ, ಮಗ್, ಪ್ಲೇಟ್ ಏನೇ ಇರಲಿ…. ಅದೇ ತರಹ ಆದಷ್ಟೂ ಕಾಗದ ಹಾಳು ಮಾಡದಿರುವುದು.”
“ವಾಹ್! ನಿಜಕ್ಕೂ ಇದು ಆದರ್ಶ ಸಂಕಲ್ಪ!” ಎಂದು ಅವಳನ್ನು ಹುರಿದುಂಬಿಸಿ ಅಲ್ಲಿಂದ ಹೊರಟೆ.
ಕೊನೆಗೆ ನಾನು ನನ್ನ ಫ್ರೆಂಡ್ ಶೋಭಾಳನ್ನು ಭೇಟಿಯಾದೆ. ಇಡೀ ದಿನ ಮೊಬೈಲ್‌ನಲ್ಲಿ ಆಕೆಯನ್ನು ಸಂಪರ್ಕಿಸಲು ಯತ್ನಿಸಿದಷ್ಟೂ ಕಷ್ಟವಾಗುತ್ತಿತ್ತು. ಅವಳಿಗಿರುವ ಒಂದು ಕೆಟ್ಟ ಐಡಿಯಾ ಎಂದರೆ, ಮನೆಯಲ್ಲಿರುವಾಗ ಎಲ್ಲೆಂದರಲ್ಲಿ ಮೊಬೈಲ್‌ನ್ನು ಬಿಸಾಡಿ, ಅದರ ಸುಳಿವನ್ನು ಸಂಪೂರ್ಣ ಮರೆತುಬಿಡುವುದು. ನಂತರ ತನ್ನ ಮುಗಿಯದ ಮನೆಗೆಲಸಗಳಲ್ಲಿ ಮುಳುಗಿಹೋದರೆ ಈ ಹೊರಪ್ರಪಂಚದ ಜ್ಞಾನವಾದರೂ ಅವಳಿಗೆ ಎಲ್ಲಿಂದ ಬರಬೇಕು? ಅಂತೂ ಸಂಜೆ ಯಾವಾಗಲೋ ಆ ಫೋನ್ ಅವಳ ಕೈಗೆ ಸಿಕ್ಕಿ, ಅದರ ಬಾಯಿ ಬಿಡಿಸಿದರೆ, ತಾನು ಮಿಸ್ ಮಾಡಿಕೊಂಡ ಎಷ್ಟೋ ಕ್ಲಾಸ್ ಗಳನ್ನು ಕಂಡು ಹೌಹಾರುತ್ತಿದ್ದಳು.
ನಂತರ ಅವಳು ಸರಸರನೆ ಒಬ್ಬೊಬ್ಬರಿಗೂ ಫೋನ್ ಮಾಡಿ ವಿವರ ಕೇಳುತ್ತಿದ್ದಳು. ಹಾಗೆಯೇ ನನಗೂ ಮಾಡಿದಾಗ, ತಕ್ಷಣ ನಾನು ಹೇಳಿದೆ, “ಶೋಭಾ, ನಾನು ಎಲ್ಲರನ್ನೂ ಹೊಸ ವರ್ಷದ ಸಂಕಲ್ಪಗಳ ಬಗ್ಗೆ ವಿಚಾರಿಸುತ್ತಿದ್ದೇನೆ. ಈ ವರ್ಷದಿಂದ ನೀನು ಸ್ವಲ್ಪ ಫ್ರೀಯಾಗಿ ಎಲ್ಲರಿಗೂ ಸಿಗುವ ಹಾಗೆ ಮತ್ತು ನಿನ್ನ ಮೊಬೈಲ್‌ನ್ನು ಸದಾ ನಿನ್ನ ಕುತ್ತಿಗೆಗೆ ನೇತುಹಾಕಿಕೊಂಡು, ಬಂದ ಕ್ಲಾಸ್ ಅಟೆಂಡ್ ಮಾಡು. ಸುಮ್ಮನೇ ಔಟ್ ಕ್ಲಾಸ್ ಮಾಡಿ ದುಡ್ಡು ದಂಡ ಮಾಡಬೇಡ. ಇದೇ ನಿನ್ನ ಸಂಕಲ್ಪ ಆಗಿರಲಿ. ಏನಂತೀಯಾ?” ಎಂದಾಗ, “ನೀನು ನನಗೆ ಒಳ್ಳೆ ಸಲಹೆ ಕೊಟ್ಟಿದ್ದಿ ನೋಡು. ಖಂಡಿತಾ ಹಾಗೇ ಮಾಡ್ತೀನಿ,” ಎಂದಳು.
ಎಲ್ಲರಿಗೂ ಹೇಳಿದ ನಾನು ಎಂಥ ಸಂಕಲ್ಪ ಕೈಗೊಳ್ಳಲಿ? ಆದಷ್ಟೂ ಪಿಜ್ಜಾ, ಬರ್ಗರ್, ಚಿಪ್ಸ್, ಐಸ್‌ಕ್ರೀಂ ಹಾಗೂ ಸ್ವೀಟ್ಸ್ ನಿಂದ ದೂರ ಉಳಿದು ದಿನೇದಿನೇ ಹೆಚ್ಚುತ್ತಿರುವ ನನ್ನ ತೂಕವನ್ನು ಕಟ್ ಮಾಡಲೇಬೇಕೆಂದು ನಿರ್ಧರಿಸಿದೆ. ಅದರಲ್ಲೂ ಅದ್ಭುತ ವಸ್ತುಗಳಾದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ತುಂಬಿದ ಸಿಹಿ ಖಾದ್ಯ ತ್ಯಜಿಸುವುದು ಹೇಗೆ? ಆದರೆ ಅದರಿಂದ ದಿನೇದಿನೇ ಏರುತ್ತಿರು ಕ್ಯಾಲೋರೀಸ್‌ನಿಂದಾಗಿ ಬದಲಾಗುತ್ತಿರುವ ನನ್ನ ಆಕಾರವನ್ನು ಕಂಟ್ರೋಲ್ ಮಾಡಲೇಬೇಕು ಎಂದು ನಿರ್ಧರಿಸಿ, ಅವನ್ನು ತ್ಯಜಿಸುವ ಸಂಕಲ್ಪ ಕೈಗೊಂಡೆ.
ಓದುಗರಾದ ನೀವು ಅಷ್ಟೆ, ಏನೋ ಒಂದು ಸಂಕಲ್ಪ ಮಾಡಲೇಬೇಕು ಎಂದು ನಿರ್ಧರಿಸಿ. ಆದಷ್ಟೂ ಅದನ್ನು ಮುರಿಯದೇ ಇರುವ ಹಾಗೆ ನೋಡಿಕೊಳ್ಳಿ. ಅದರಿಂದ ಸಾಧ್ಯವಾದಷ್ಟೂ ನಿಮ್ಮ ವ್ಯಕ್ತಿತ್ವಕ್ಕೆ ಒಟ್ಟಾರೆ ಲಾಭ ಆಗುವಂತಾಗಲಿ. ಏನೂ ಸಂಕಲ್ಪ ಮಾಡದಿರುವುದೇ ನನ್ನ ಸಂಕಲ್ಪ ಎಂದಿರಾ? ಛೇ! ಛೇ!
– ಕಾಂಚನಾ ರಾವ್