ಭಾರತ ಹಬ್ಬಗಳಿಗೆ ತವರೂರು ಎಂದರೆ ಉತ್ಪ್ರೇಕ್ಷೆಯಲ್ಲ. ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ನಮ್ಮಲ್ಲಿ ಲೆಕ್ಕವಿಲ್ಲದಷ್ಟು ಹಬ್ಬಗಳಿವೆಯಾದರೂ ದೀಪಾವಳಿ, ನವರಾತ್ರಿ, ಗೌರಿ, ಗಣೇಶ, ಯುಗಾದಿ ಹಾಗೂ ಸಂಕ್ರಾಂತಿ ಪ್ರಮುಖ್ಯವಾದವು.

ದೀಪಾವಳಿ ದೀಪಗಳನ್ನು ಬೆಳಗುವ ಹಬ್ಬವಾಗಿರುವಂತೆ, ಸಂಕ್ರಾಂತಿ ಬೆಳೆ ಪೈರಿನ, ಕಾಳು ಕಡ್ಡಿ, ದವಸ ಧಾನ್ಯಗಳ ಸಮೃದ್ಧಿಯ ಹಬ್ಬವಾಗಿದೆ. ದೀಪಾವಳಿ ಪೇಟೆ ಮಂದಿಯ ಹಬ್ಬ ಎನಿಸಿದರೆ, ಸಂಕ್ರಾಂತಿ ರೈತಾಪಿ ಜನರ, ಹಳ್ಳಿಯ ಹೆಂಗಸರ ಪ್ರಮುಖ ಹಬ್ಬವಾಗಿದೆ. ಎಲ್ಲೆಲ್ಲೂ ಕೊಯ್ಲಿಗೆ ಸಿದ್ಧವಾಗಿ ನಿಂತಿರುವ ಹೊಲಗದ್ದೆಗಳು, ತುಂಬಿ ತುಳುಕುವ ಕಂಗು ತೆಂಗಿನ ಸಾಲುಗಳು, ಬಾಳೆ ಕಬ್ಬಿನ ರಮ್ಯ ತೋಟಗಳು, ಆಲೆಮನೆಯ ಚೇತೋಹಾರಿ ಬೆಲ್ಲದ ಗಡಿಗೆಗಳು, ಸಿಂಗಾರ ಮಾಡಿಕೊಂಡಿರುವ ಕಮಾನುಗಳು, ಗೆಜ್ಜೆ ಕಟ್ಟಿದ ಎತ್ತು ಹಸುಗಳ ಗೊರಸಿನ ನಿನಾದ, ಕಡಲೆಕಾಯಿ, ಎಲಚಿಹಣ್ಣಿನ ರಾಶಿ ಚೆಲ್ಲಾಟವಾಡಿಕೊಂಡು ಆಡುವ ಮಕ್ಕಳು, ಹೊಸ ದಾವಣಿ ಉಟ್ಟು ರಂಗೋಲಿ ಇಡುತ್ತಾ ಸೋಬಾನೆ ಹಾಡುವ ತರುಣಿಯರು, ಅವರ ಮನ ಗೆಲ್ಲಲೆಂದು ಹುರಿ ಮೀಸೆ ತಿರುವುತ್ತ ಹೊಸ ಪಂಚೆ ಕಟ್ಟಿರುವ ಹಳ್ಳಿಹೈದರು, ವಾಹ್‌ ಸಂಕ್ರಾಂತಿಯ ಸುಗ್ಗಿಯನ್ನು ಹಳ್ಳಿಯಲ್ಲಿ ಸವಿಯುವುದೇ ಚೆನ್ನ!

ಸಾಧಾರಣವಾಗಿ ಜನವರಿ ತಿಂಗಳ 14 ರಂದು ಸಂಕ್ರಾಂತಿ ಬರುತ್ತದೆ. `ಭೋಗಿಯೊಂದಿಗೆ ಶುರುವಾಗುವ ಸಂಕ್ರಾಂತಿ ಮಾರನೆಯ ದಿನ ಮುಂದುವರಿದು, ಊರ ಹಬ್ಬದೊಂದಿಗೆ ಮುಗಿಯುತ್ತದೆ. ಉತ್ತರಾಯಣ ಪುಣ್ಯಕಾಲದ ಈ ದಿನದಂದು, ಸೂರ್ಯ ದಿಕ್ಕು ಬದಾಯಿಸುತ್ತಾನೆ ಎಂಬುದು ಪ್ರತೀತಿ. ಚಿರಂಜೀವಿಗಳಾದ ಭೀಷ್ಮರು ಈ ದಿನಕ್ಕಾಗಿಯೇ ಕಾದಿದ್ದು ಆನಂತರ ಇಹಲೋಕ ತ್ಯಜಿಸಿದರು ಎಂಬುದನ್ನು ವ್ಯಾಸರ ಮಹಾಭಾರತದಲ್ಲಿ ಗುಮನಿಸುತ್ತೇವೆ.

ವರ್ಷವೆಲ್ಲಾ ಕಷ್ಟಪಟ್ಟು ಬೆವರು ಸುರಿಸಿ, ಹೊಲವನ್ನು ಉತ್ತು, ಬೆಳೆ ಬೆಳೆಯುವ ರೈತಾಪಿ ಜನ, ಈ ದಿನ ಕೊಯ್ಲು ಮಾಡಿ ನಂತರ ಧಾನ್ಯಲಕ್ಷ್ಮಿಗೆ ಪೂಜೆ ಸಲ್ಲಿಸುತ್ತಾರೆ. ಮಾರನೆಯ ದಿನ ತಮ್ಮೊದಿಗೆ ಜೀವಿತಾಂತ್ಯ ಜೊತೆ ಜೊತೆಯಾಗಿ ದುಡಿಯುವ ಎತ್ತು ಹಸುಗಳನ್ನು ಆದರಣೀಯವಾಗಿ ಕಾಣಬೇಕೆಂದು, ಅವುಗಳನ್ನು ಶುಭ್ರವಾಗಿ ತೊಳೆದು, ಕೊಂಬುಗಳಿಗೆ ಬಣ್ಣ ಬಳಿದು, ಸಿಂಗಾರ ಮಾಡಿ ಸಾಯಂಕಾಲ `ಬೆಂಕಿ ಹೊಂಡ’ ದಾಟಿಸುವ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ವ್ಯವಸಾಯದಲ್ಲಿ ಸದಾ ನೆರವಾಗುವ ಈ ಮೂಕಜೀವಿಗಳು ಈ ದಿನದಂದು ಎಲ್ಲಿಲ್ಲದ ಪ್ರಾಮುಖ್ಯತೆ ಗಳಿಸಿಕೊಳ್ಳುತ್ತವೆ.

ಭೋಗಿ ಸಮೃದ್ಧಿಯ ಸಂಕೇತ

ಭೋಗಿ ಹಬ್ಬ ಸಮೃದ್ಧಿಯ ಸಂಕೇತವಾಗಿದೆ. ವರ್ಷವೆಲ್ಲಾ ಕಷ್ಟಪಟ್ಟು ಬೆಳೆದ ಬೆಳೆಯನ್ನು ತಮ್ಮ ಮನೆಯ ದೊಡ್ಡ ದೊಡ್ಡ ಕಣಜಗಳಲ್ಲಿ ತುಂಬಿಟ್ಟು, `ಮನೆ ಸದಾ ಸಮೃದ್ಧಿಯಿಂದ ತುಂಬಿರಲಿ’ ಎಂದು ಪರಸ್ಪರ ಶುಭ ಕೋರಿ, ಆನಂದದಿಂದ ಹಬ್ಬ ಆಚರಿಸುತ್ತಾರೆ.

ಹಬ್ಬಕ್ಕೆ ಇನ್ನೂ ಕೆಲವು ದಿನಗಳಿವೆ ಎನ್ನುವಾಗಲೇ ಮನೆಯ ಮಾಡು ಸರಿಪಡಿಸಿ, ಹೊಸ ಹೆಂಚು ಹೊದಿಸಿ, ಸಾರಣೆ ಪಾರಣೆ ಮಾಡಿ, ಮನೆಗೆ ಸುಣ್ಣ ಬಣ್ಣಗಳ ಮೆರುಗು ಕೊಟ್ಟು, ಹೊಸ ಎತ್ತಿನ ಗಾಡಿಗಳನ್ನು ಕೊಂಡು ಹಬ್ಬದ ತಯಾರಿ ನಡೆಸುತ್ತಾರೆ. ಹಳ್ಳಿಯ ಪರಿಸರವೇ ಆಗಲಿ, ನಗರದ ಬೀದಿಗಳೇ ಆಗಲಿ, ಸಂಕ್ರಾಂತಿಯ ದಿನದಂದು ಎಲ್ಲೆಲ್ಲೂ ಹೊಚ್ಚ ಹೊಸತನ ತುಂಬಿಕೊಂಡು ಕಳೆಕಳೆಯಾಗಿ ಇರುತ್ತವೆ.

ಎಲ್ಲೆಲ್ಲೂ ಕಬ್ಬಿನ ಬೆಳೆ ತುಂಬಿ ಬಂದಿರುತ್ತದೆ. ಕಡಲೆಕಾಯಿ, ಕುಂಬಳಕಾಯಿ, ಸಿಹಿಗೆಣಸುಗಳು ರಾಶಿ ರಾಶಿಯಾಗಿ ಕಂಡುಬರುತ್ತದೆ. ಬಗೆಬಗೆಯ ಹೂವಿನ ರಾಶಿ ಎಲ್ಲೆಲ್ಲೂ ಸುರಿದಿರುತ್ತದೆ. ಹಳ್ಳಿಯ ಸಂತೆಗಳಲ್ಲಿ ಇವುಗಳನ್ನು ಕಣ್ತುಂಬ ನೋಡವುದೇ ಒಂದು ರಮಣೀಯ ಅನುಭವ!

ಮನೆಯನ್ನು ಹಬ್ಬಕ್ಕಾಗಿ ಸಿದ್ಧಗೊಳಿಸಿದ ನಂತರ, ಅಂಗಳದ ಅಲಂಕಾರ ಅರಂಭವಾಗುತ್ತದೆ. ಹಳ್ಳಿಗಳಲ್ಲಿ ಈಗಲೂ ಕೆಲವು ಮನೆಗಳಲ್ಲಿ ನೆಲ ಪೂರ್ತಿ ಮಣ್ಣಿನಿಂದಲೇ ಮಾಡಲ್ಪಟ್ಟಿರುತ್ತದೆ. ಮನೆಯ ನೆಲವನ್ನು ಸಾರಿಸಿದ ನಂತರ, ಮುಂದಿನ ಅಂಗಳ ಸಗಣಿಯಿಂದ ಹೊಸ ರೂಪ ಪಡೆಯುತ್ತದೆ. ಮೊದಲೇ ತಂದಿಟ್ಟುಕೊಂಡಿದ್ದ ರಂಗೋಲಿ ಮುದ್ದೆಗಳನ್ನು ಪುಡಿ ಮಾಡಿ, ಎಳೆ ಎಳೆಯಾದ ರಂಗೋಲಿ ಬಿಡಿಸುತ್ತಾರೆ.

ಅನಂತರ ಇದಕ್ಕೆ ಬಣ್ಣದ ಪುಡಿಯಿಂದ ಹೆಚ್ಚಿನ ಮೆರುಗು ಕೊಡಲಾಗುತ್ತದೆ. ಬೆಳಗ್ಗೆ ಸಾರಣೆ ಎಲ್ಲ ಆರಿದ ನಂತರ, ಸುದ್ದೆ ಕೆಮ್ಮಣ್ಣು ಹಚ್ಚಿ ಇನ್ನಷ್ಟು ಚೆಂದ ಮಾಡುತ್ತಾರೆ. ಹೊಸಲಿಗೆ ಅರಿಶಿನ ಕುಂಕುಮ ಹಚ್ಚುವುದು ವಾಡಿಕೆ. ಸಂಕ್ರಾಂತಿಯ ರಂಗೋಲಿಯ ಮಧ್ಯೆ ಸ್ವಲ್ಪ ಸಗಣಿ ಇಟ್ಟು, ಅದಕ್ಕೆ ಕುಂಬಳ ಅಥವಾ ದಾಸವಾಳದ ಹೂಗಳನ್ನು ಸಿಗಿಸಿಡುವುದು ಸಂಪ್ರದಾಯ. ಸುತ್ತಲೂ ಇತರ ಹೂಗಳನ್ನು ಅಲಂಕಾರಕ್ಕಾಗಿ ಇಡುತ್ತಾರೆ.

ಹೆಣ್ಣುಮಕ್ಕಳು ಮಿಂದು, ಹೊಸ ಬಟ್ಟೆಯುಟ್ಟು, ಹೊಸ ಗಾಜಿನ ಬಳೆಗಳನ್ನು ತೊಟ್ಟು ನಕ್ಕು ನಲಿಯುತ್ತಾರೆ. ಮನೆಯ ತುಂಬ ವಿವಿಧ ಬಗೆಯ ದವಸ ಧಾನ್ಯಗಳು ಬೆಳೆದು ತುಂಬಿರುತ್ತವೆ. ಇಂಥ ವಿವಿಧ ಬಗೆಯ ಕಾಳು ಗೆಣಸನ್ನು ಬಳಸಿ ರುಚಿರುಚಿಯಾದ ಹಬ್ಬದಡುಗೆ ತಯಾರಾಗುತ್ತದೆ. ಆ ದಿನ `ಹುಗ್ಗಿ’ ತಯಾರಿಕೆ ಇನ್ನೊಂದು ಪ್ರಮುಖ ವಿಶೇಷ. ಹುಗ್ಗಿ ಪ್ರಮುಖವಾಗಿ ಹೆಸರುಬೇಳೆ ಮತ್ತು ಅಕ್ಕಿಯೊಂದಿಗೆ ತಯಾರಾಗುವ ಖಾದ್ಯ, ಹೊಸದಾಗಿ ಬೆಳೆದು ಬಂದ ಭತ್ತನ್ನು ಕುಟ್ಟಿ, ನೆಲ್ಲು ಅಕ್ಕಿಯನ್ನು ಹಸನುಗೊಳಿಸಿ, ಆ ವರ್ಷದ ಹೊಸ ಬೆಳೆಯಿಂದಲೇ ಹಬ್ಬದ ಅಡುಗೆಯನ್ನು ತಯಾರಿಸುವುದು ಸಂಪ್ರದಾಯ.

ಹೊಸ ಒಲೆಯನ್ನು ಹೂಡಿದ ನಂತರ (ಕೆಲವರು ಹಬ್ಬದ ದಿನ ಅಡುಗೆಯನ್ನು ನಡುಮನೆಯಲ್ಲಿ ಮಾಡುವುದು ಪದ್ಧತಿ), ಹೊಸ ಮಡಕೆಯನ್ನು ಸಿಂಗರಿಸಲಾಗುತ್ತದೆ. ಮಡಕೆಯ ಕಂಠಕ್ಕೆ ಹಸಿ ಅರಿಶಿನ ಕೊಂಬಿನೊಂದಿಗೆ ಕಬ್ಬಿನ ಕೆಲವು ತುಂಡುಗಳನ್ನು ಸೇರಿಸಿ ಕಟ್ಟಲಾಗುತ್ತದೆ. ಮಡಕೆಯಲ್ಲಿ ಹಸುವಿನ ಹಾಲು ತುಂಬಿಸಿ, ಅದನ್ನು ಒಲೆಯ ಮೇಲಿರಿಸಿ ಉಕ್ಕಿಸಲಾಗುತ್ತದೆ.

ಈ ರೀತಿಯ ಹಾಲುಕ್ಕುವಿಕೆ ಮನೆಯ ಕಣಜ ಸದಾ ತುಂಬಿರಲಿ, ಆ ಮನೆಯಲ್ಲಿ ಸಂತೋಷ ತೃಪ್ತಿ ಉಕ್ಕಿ ಹರಿಯಲಿ ಎಂಬುದರ ಸಂಕೇತವಾಗಿದೆ. ಹೆಸರುಬೇಳೆ ಹಾಗೂ ಅಕ್ಕಿಯನ್ನು ಒಟ್ಟಿಗೆ ಬೇಯಿಸಲಾಗುತ್ತದೆ. ಇದು ಭಾವೈಕ್ಯತೆಯ ಚಿಹ್ನೆ. ಹುಗ್ಗಿಯಲ್ಲಿ 2 ವಿಧ. ಒಂದು ಉಪ್ಪು, ಶುಂಠಿ, ಮೆಣಸಿನದಾದರೆ, ಇನ್ನೊಂದು ಸಿಹಿ ಬೆಲ್ಲದ್ದು. ಎರಡರಲ್ಲೂ ಅಕ್ಕಿ, ಹೆಸರುಬೇಳೆ, ಕೊಬ್ಬರಿ, ತುಪ್ಪ, ಗೋಡಂಬಿಗಳು ಹೇರಳವಾಗಿರುತ್ತವೆ. ಮೇಲೆ ಹೇಳಲಾದ ಸಿಹಿ ಖಾರದ ಹುಗ್ಗಿಗೂ ಕೆಲವರು ಅವರೆಕಾಳು ಬೆರೆಸುವುದುಂಟು.

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ

ಮಧ್ಯಾಹ್ನ ಹಬ್ಬದ ಭರ್ಜರಿ ಊಟವಾದ ನಂತರ, ಸಾಯಂಕಾಲ ಹಬ್ಬದ ಸಂಭ್ರಮದ ಇನ್ನೊಂದು ಸ್ವರೂಪ ಆರಂಭವಾಗುತ್ತದೆ. ಅದುವೇ `ಎಳ್ಳು ಬೆಲ್ಲ’ದ ವಿನಿಯೋಗ ಕಾರ್ಯಕ್ರಮ.

ಹಬ್ಬಕ್ಕೆ 2 ದಿನಗಳ ಮೊದಲಿನಿಂದಲೇ ಬಿಳಿಯ ಅಚ್ಚು ಬೆಲ್ಲವನ್ನು ಪುಟ್ಟ ಪುಟ್ಟದಾಗಿ ಅಂದವಾಗಿ ಕತ್ತರಿಸಿಕೊಂಡು, ಒಣ ಕೊಬ್ಬರಿಯ ಮೇಲ್ಭಾಗದ ಸಿಪ್ಪೆ ಹೆರೆದು, ಸಣ್ಣದಾಗಿ ಹೆಚ್ಚಿಕೊಂಡು, ಕಡಲೆಬೀಜವನ್ನು ಹುರಿದು ಹಸನು ಮಾಡಿಟ್ಟುಕೊಳ್ಳಲಾಗುತ್ತದೆ.

ಇದಕ್ಕೆ ಹಬ್ಬದ ದಿನ ಹುರಿಗಡಲೆ,  ನೈಲಾನ್‌ ಅಥವಾ ಬಿಳಿ ಎಳ್ಳನ್ನು ಹುರಿದು ಸೇರಿಸಿ, ಜೊತೆಗೆ ಬಣ್ಣ ಕಟ್ಟಿದ ಜೀರಿಗೆ, ಕುಸುರಿ ಕಾಳು, ಕಲ್ಯಾಣಸೇವೆ ಇತ್ಯಾದಿಗಳನ್ನು ಬೆರೆಸಲಾಗುತ್ತದೆ.  ಹೀಗೆ ವಿವಿಧ ಜನರು ಸ್ವಭಾವದಲ್ಲಿ ಬೇರೆ ಬೇರೆಯಾಗಿದ್ದರೂ, ಎಲ್ಲರೂ ಬೆರೆತು ಪರಸ್ಪರರಿಗೆ ಹೊಂದಿಕೊಂಡಿದ್ದರೆ, ಕುಟುಂಬದ ಐಕ್ಯತೆ ಹೆಚ್ಚುತ್ತದೆ ಎಂಬುದರ ಸಂಕೇತವಾಗಿದೆ ಎಳ್ಳು ಬೆಲ್ಲ.

ನೆರೆಹೊರೆಯವರಿಗೆ ಮಾತ್ರವಲ್ಲದೆ, ಇದನ್ನು ದೂರದ ಸಂಬಂಧಿಗಳಿಗೂ ಹಂಚಿ ಬರುವ ಕ್ರಮವನ್ನು ಹೆಂಗಳೆಯರು ಇಂದಿಗೂ ಉಳಿಸಿಕೊಂಡಿದ್ದಾರೆ. ಇದನ್ನು ವಿಜಯದಶಮಿಯಂದು ಬನ್ನಿ ಕೊಟ್ಟು `ಬಂಗಾರವಾಗಿ ಬಾಳಿ’ ಎಂಬಂತೆ, ಎಳ್ಳು ಬೆಲ್ಲ ಕೊಟ್ಟು `ಒಳ್ಳೆಯ ಮಾತನಾಡಿ, ಸ್ನೇಹದಿಂದಿರಿ’ ಎಂದು ಹೇಳುವ ರೂಢಿಯೂ ಉಂಟು. ವಿವಿಧತೆಯಲ್ಲಿ ಐಕ್ಯತೆಯನ್ನು ಸಾರುವ ನಮ್ಮ ಭಾರತೀಯ ಸಂಸ್ಕೃತಿಗೆ `ಎಳ್ಳು ಬೆಲ್ಲ’ ಹಂಚುವ ಕ್ರಮ ಪೂರಕವಾಗಿದೆ.

ಎಳ್ಳಿನ ಜೊತೆಗೆ ಸಕ್ಕರೆ ಅಚ್ಚನ್ನು ತಯಾರಿಸುವುದು ಇನ್ನೊಂದು ವಿಶೇಷ. ಸಕ್ಕರೆಯನ್ನು ಕುದಿಸಿ, ಹದವಾಗಿ ಪಾಕ ತಯಾರಿಸಿಕೊಂಡು, ಅದಕ್ಕೆ ವಿವಿಧ ಬಣ್ಣಗಳನ್ನು ಬೆರೆಸಿ, ಬೇಕಾದ ಅಚ್ಚುಗಳಲ್ಲಿ ವಿಭಿನ್ನ ಬಗೆಯ ಸಕ್ಕರೆ ಅಚ್ಚುಗಳನ್ನು ತಯಾರಿಸುತ್ತಾರೆ. ಮುತ್ತೈದೆಯರು ಫಲ ತಾಂಬೂಲವನ್ನು ಕೊಡುವಾಗ ಎಳ್ಳು ಬೆಲ್ಲದೊಂದಿಗೆ ಸಕ್ಕರೆ ಅಚ್ಚನ್ನು ಕೊಡುವುದು ವಾಡಿಕೆ. ಇಂದಿನ ನಗರದ ಯಾಂತ್ರೀಕೃತ ಬದುಕಿನಲ್ಲಿ ಸಕ್ಕರೆ ಅಚ್ಚಿರಲಿ, ಮನೆಯಲ್ಲಿ ಎಳ್ಳು ಬೆಲ್ಲ ಮಾಡಿಕೊಳ್ಳುವುದೂ ಎಷ್ಟೋ ಜನರಿಗೆ ಸಮಯಾಭಾವದಿಂದ ಕಷ್ಟವಾಗಿದೆ. ಅಂಥವರ ನೆರವಿಗೆಂದೇ ಮಾರುಕಟ್ಟೆಯಲ್ಲಿ, ಕೈಗೆಟುಕುವ ಬೆಲೆಗಳಲ್ಲಿ, ಎಳ್ಳು ಬೆಲ್ಲ ಹಾಗೂ ಸಕ್ಕರೆ ಅಚ್ಚುಗಳು ಸುಲಭವಾಗಿ ಸಿಗುತ್ತವೆ. ಇತ್ತೀಚೆಗೆ ಜನ ಇವುಗಳನ್ನು ಹೆಚ್ಚು ಹೆಚ್ಚಾಗಿ ಕೊಳ್ಳುತ್ತಾರೆ.

ಹಬ್ಬದ ದಿನ ಸಾಯಂಕಾಲ ಮಕ್ಕಳಿಗೆಂದೇ ವಿಶಿಷ್ಟ ಆರತಿಯ ಕಾರ್ಯಕ್ರಮವಿದೆ. ಹಬ್ಬದ ಹೊಸ ಬಟ್ಟೆಗಳನ್ನು ಧರಿಸಿದ ಚಿಣ್ಣರನ್ನು ನಡುಮನೆಯಲ್ಲಿ ಹೊಸ ಮಣೆಗಳ ಮೇಲೆ ಕೂರಿಸಿ ಆರತಿ ಬೆಳಗಲಾಗುತ್ತದೆ. ಆ ದಿನ ಮಕ್ಕಳ ಗೆಳೆಯರೆಲ್ಲಾ ನೆರೆದಿರುತ್ತಾರೆ. ಒಂದು ಅಳೆಯುವ ಸೇರಿಗೆ ಅರಿಶಿನದ ದಾರ ಕಟ್ಟಿ, ಅದರಲ್ಲಿ ಕಬ್ಬಿನ ತುಂಡುಗಳು, ಎಲಚಿಹಣ್ಣು, ಎಳ್ಳು ಬೆಲ್ಲ, ಕಲ್ಲುಸಕ್ಕರೆ ಹಾಗೂ ಹಲವಾರು ನಾಣ್ಯಗಳನ್ನು ಸೇರಿಸಿ, ಹಿರಿಯ ಮುತ್ತೈದೆಯರು ಆರತಿ ಬೆಳಗಿದ ನಂತರ, ಈ ಸಾಮಗ್ರಿ ತುಂಬಿದ ಸೇರನ್ನು ಮಕ್ಕಳ ತಲೆಯ ಮೇಲೆ ಸುರಿಯುತ್ತಾರೆ. ಅಲ್ಲಿ ನೆರೆದ ಹುಡುಗರು ತಮಗೆ ಸಿಕ್ಕಿದ ನಾಣ್ಯ ತೆಗೆದುಕೊಂಡು `ಹೋ’ ಎಂದು ಹುಯಿಲೆಬ್ಬಿಸುತ್ತಾರೆ. ಅವರಿಗೆ ಬಣ್ಣದ ಬೊಂಬೆ, ಆಟಿಕೆಗಳ ಕಾಣಿಕೆಯೂ ಉಂಟು.

ನೆರೆ ರಾಜ್ಯಗಳಲ್ಲಿ ಆಚರಣೆ

ನಮ್ಮ ರಾಜ್ಯದಲ್ಲಿ ಸಂಕ್ರಾಂತಿ ಹೇಗೆ ಪ್ರಮುಖ ಹಬ್ಬವಾಗಿದೆಯೋ ಅದೇ ರೀತಿ, ನಮ್ಮ ನೆರೆ ರಾಜ್ಯಗಳಲ್ಲೂ ಈ ಹಬ್ಬ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಉತ್ತರ ಭಾರತದ ಕೃಷಿ ಪ್ರಧಾನವಾದ ಪಂಜಾಬ್‌ ಮುಂತಾದ ರಾಜ್ಯಗಳಲ್ಲಿ ಇದು ಲೋಹರಿ ಎಂಬ ಹೆಸರಿನಿಂದ ಕರೆಯಲ್ಪಟ್ಟರೆ, ಮಹಾರಾಷ್ಟ್ರದಲ್ಲಿ ಇದು ಬೆಳೆಯವ ಹಬ್ಬದ ಜೊತೆಗೆ ಸ್ನೇಹ ಭಾವೈಕ್ಯತೆಯ ಸಂಕೇತವೂ ಹೌದು.

ಆಂಧ್ರಪ್ರದೇಶದಲ್ಲಿ ಇದು ನಮ್ಮಲ್ಲಿರುಂತೆಯೇ ಸಂಕ್ರಾಂತಿ ಎಂಬ ಹೆಸರಿನಿಂದಲೇ ಪ್ರಖ್ಯಾತವಾಗಿದೆ. ಅಲ್ಲಿ ಎಳ್ಳು ಬೆಲ್ಲಕ್ಕೆ ಬದಲಾಗಿ, ಕಡಲೆ ಉಸುಲಿಯನ್ನು ತಾಂಬೂಲದೊಂದಿಗೆ ಹಂಚುವ ಸಂಪ್ರದಾಯವಿದೆ.

ತಮಿಳುನಾಡಿನಲ್ಲಿ ಸಂಕ್ರಾಂತಿ `ಪೊಂಗಲ್’ ಎಂಬ ಹೆಸರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ನಮ್ಮಲ್ಲಿ ನವರಾತ್ರಿ ನಾಡಹಬ್ಬವಾಗಿರುವಂತೆ, ಅಲ್ಲಿ ಪೊಂಗಲ್ ನಾಡಹಬ್ಬವೆನಿಸುತ್ತದೆ. ಮೂರು ದಿನಗಳ ಈ ಹಬ್ಬ ಮೊದಲು `ಭೋಗಿ’ಯಿಂದ ಶುರುವಾಗಿ, `ಸೂರ್ಯ ಪೊಂಗಲ್’ ಹಾಗೂ ಮೂರನೇ ದಿನ `ಮಾಟ್ಟು ಪೊಂಗಲ್’ ಎಂಬ ಹೆಸರಿನಲ್ಲಿ ಮುಂದುವರಿಯುತ್ತದೆ. ಹಳೆಯ ತ್ಯಾಜ್ಯಗಳು, ಮನಸ್ಸಿನಲ್ಲಿ ಮಡುವುಗಟ್ಟಿದ ದ್ವೇಷ ಇತ್ಯಾದಿ ಅನಗತ್ಯ ಭಾವಗಳನ್ನು ತ್ಯಜಿಸುವ ಸಂಕೇತ `ಭೋಗಿ.’ ಆ ದಿನ ಹಳೆಯ ಬಟ್ಟೆ ಕಸಕಡ್ಡಿಗಳನ್ನು ಹೊಲದ ಬಳಿ ಸುಡುವುದು ವಾಡಿಕೆ.

`ಸೂರ್ಯ ಪೊಂಗಲ್’ ದಿನ ನಡುಮನೆಯಲ್ಲಿ ಹೊಸ ಗಡಿಗೆಯಿಟ್ಟು ಸಕ್ಕರೆ ಪೊಂಗಲ್ ಅಥವಾ ಹುಗ್ಗಿ ತಯಾರಿಸುತ್ತಾರೆ. ನಮ್ಮಲ್ಲಿನ ಎಳ್ಳು ಬೆಲ್ಲ ಅಲ್ಲಿಲ್ಲ. ಕೊನೆಯ ದಿನ ಇಲ್ಲಿ ಆಕಳನ್ನು ಹೊಂಡ ಹಾಯಿಸುವಂತೆಯೇ, ಅಲ್ಲೂ ದನಕರುಗಳನ್ನು ವಿಶೇಷವಾಗಿ ಅಲಂಕರಿಸಿ, ಪೂಜಿಸಿ, ಹೊಂಡ ಹಾಯಿಸುತ್ತಾರೆ. `ಜಲ್ಲಿ ಕಟ್ಟು’ ಹೆಸರಿನಲ್ಲಿ ಹೋರಿಗಳನ್ನು ಬಯಲಲ್ಲಿ ಓಡಿಸಿ, ಪಳಗಿಸಿ ಹಿಡಿಯುವ ಪಂದ್ಯ ಅಲ್ಲಿ ಹೆಚ್ಚು ಜನಪ್ರಿಯ. ಈ ದಿನ ಅಣ್ಣ ತಂಗಿಯರ ವಾತ್ಯಲ್ಯದ ಹಬ್ಬವೂ ಹೌದು.

ಈ ರೀತಿ ಸಂಕ್ರಾಂತಿ ಇಡೀ ರಾಷ್ಟ್ರದಲ್ಲೇ ಅತ್ಯಂತ ಪ್ರಮುಖ ಹಬ್ಬವೆನಿಸಿದೆ. ಎಲ್ಲರೂ ಎಳ್ಳು ಬೆಲ್ಲ ಸವಿಯುವ ಈ ಹಬ್ಬದ  ಸಂತಸದ ಸಮಯದಲ್ಲಿ `ಗೃಹಶೋಭಾ’ ಓದುಗರೆಲ್ಲರಿಗೂ ಸಂಕ್ರಾಂತಿಯ ಶುಭಾಶಯ ಕೋರುತ್ತಾಳೆ!

ರುಕ್ಮಿಣಿ ಪಾರ್ಥಸಾರಥಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ