ಬೆಳಗಿನ ತಂಪು ಗಾಳಿ ಹಿತವಾಗಿ ಹರಡಿ, ಹೊಂಬಿಸಿಲು ಸುಖೋಷ್ಣವಾಗಿತ್ತು. ಮಾವಧ ರಾಯರು ಕಿಟಕಿಯಿಂದ ತೂರಿಬರುತ್ತಿದ್ದ ಈ ಆನಂದ ಅನುಭವಿಸುತ್ತಾ ಬೆಳಗಿನ ಕಾಫಿ ಹೀರುತ್ತಿದ್ದರು. ಆಗ ಅವರ ತಾಯಿ ವಿಶಾಲಾಕ್ಷಮ್ಮ ಕೆಮ್ಮುತ್ತಾ ಒಳಗಿನಿಂದ ಅಲ್ಲಿಗೆ ಬಂದರು. ಯಾವ ಚಿಂತೆಯೂ ಇಲ್ಲದೆ ಹಾಯಾಗಿ ಕಾಫಿ ಹೀರುತ್ತಿದ್ದ ಮಗನನ್ನು ಕಂಡು ಆಕೆ, “ಏನು ಹೇಳೋ ಮಾಧು, ಈಗಾದರೂ ತುಸು ಗಾಂಭೀರ್ಯ ಕಲಿತಕೋ. ನಿನ್ನನ್ನು ನೋಡಿದರೆ ಇವತ್ತು ನೀನು ನಾಲ್ಕನೇ ಹೆಣ್ಣುಮಗುವಿನ ತಂದೆ ಆಗಿದ್ದಿ ಅನಿಸೋದೇ ಇಲ್ಲ…. ಇನ್ನು ಹುಡುಗಾಟಿಕೆಯ ನಗು ಬೀರುತ್ತಿದ್ದಿ….”

“ಇನ್ನೂ ಗಂಭೀರ ಆಗುವಂಥದ್ದು ಏನಿದೆಯಮ್ಮ? ನಾಲ್ಕನೇ ಸಲ ತಂದೆ ಆಗಿದ್ದೀನಿ, ನಿಜ. ಇದು ನಿಜಕ್ಕೂ ಸಂತೋಷದ ವಿಷಯವಲ್ಲವೇ?” ಎಂದು ಅಮ್ಮನ ಕಡೆ ತಿರುಗುತ್ತಾ ಹೇಳಿದರು.

“ಹೂಂ…..ಹೂಂ…… ಆದರೆ ನಾಲ್ಕೂ ಹೆಣ್ಣುಮಕ್ಕಳೇ ಅನ್ನೋದು ನೆನಪಿರಲಿ! ಈ ಬಾರಿಯಾದರೂ ಮೊಮ್ಮಗನ ಮುಖ ನೋಡಬಹುದೇನೋ ಅಂತ ಆಸೆಯಿಂದ ಕಾದಿದ್ದೇ ಆಯ್ತು. ಕಂಡ ಕಂಡ ದೇವರುಗಳಿಗೆಲ್ಲ ಕೈ ಮುಗಿದಿದ್ದೇ ಬಂತು. ಸೊಸೆ ಕೈಲಿ ಬೇಕಾದಷ್ಟು ವ್ರತ, ನೇಮ, ತೀರ್ಥಯಾತ್ರೆ, ಪೂಜೆಗಳೆಲ್ಲ ಮಾಡಿಸಿದ್ದಾಯ್ತು. ಅದೇನು ಆ ದೇವರಿಗೆ ಕಣ್ಣಿಲ್ಲೇ ಏನೋ….. ನಮ್ಮ ವಂಶ ಮುಂದುವರಿಯುವುದಾದರೂ ಹೇಗೆ? ಪಿತೃಗಳಿಗೆ ಸದ್ಗತಿ ದೊರಕುವುದು ಹೇಗೆ….?”

ವಿಶಾಲಾಕ್ಷಮ್ಮ ಓತಪ್ರೋತವಾಗಿ ಮುಂದುವರಿಸುತ್ತಲೇ ಇದ್ದರು. ಅಷ್ಟರಲ್ಲಿ ರಾಯರಿಗೆ ಸಿಟ್ಟು ಬಂದು ಹೆಚ್ಚು ಕಡಿಮೆ ಕಿರುಚುವಂತೆ, “ಸಾಕು…. ಸಾಕಮ್ಮ! ಅದೆಷ್ಟು ಕಹಿ ಮಾತುಗಳು ನಿನ್ನ ಮನದಲ್ಲಿ ತುಂಬಿಕೊಂಡಿದೆ….. ಯಾವಾಗ ನೋಡಿದರೂ ಅದೇ ರಾಗ ಅದೇ ಹಾಡು. ಸದಾ ಮೊಮ್ಮಗ, ವಂಶೋದ್ಧಾರಕ, ಕುಲದೀಪಕ ಅಂತ ಗಂಡು ಮಗುವಿನ ವರಾತೀ ಆಗಿಹೋಯ್ತು.

“ನಿನ್ನ ಈ ಮೂಢನಂಬಿಕೆಯ ಮಾತುಗಳಿಂದ ನಾನು ಪ್ರತಿ ಸಲ ಮಗಳು ಹುಟ್ಟಿದಾಗಲೂ ಆ ಸಂತೋಷವನ್ನು ಅನುಭವಿಸುವ ಹಾಗೇ ಇಲ್ಲ. ಇಡೀ ಮನೆಯ ಸಂತಸದ ವಾತಾವರಣ ನಿನ್ನ ಈ ಕಟು ಮಾತುಗಳಿಂದ ಮರುಭೂಮಿ ಆಗಿಹೋಗುತ್ತದೆ. ಇಂಥ ಮನನೋಯಿಸುವ ಮಾತುಗಳಿಂದ ಯಾಕಾದರೂ ಹೀಗೆ ಕುಟುಕುತ್ತಿಯೋ? ಮೊಮ್ಮಗ ಬೇಕಾಗಿತ್ತು ಸರಿ, ಆಗಲಿಲ್ಲ. ಏನು ಮಾಡುವುದು? ಮೊಮ್ಮಗಳನ್ನೇ ದೇವರು ಕೊಟ್ಟ ವರ ಅಂದುಕೊಳ್ಳಬಾರದೇ?”

ಆದರೆ ವಿಶಾಲಾಕ್ಷಮ್ಮನ ಮೇಲೆ ಈ ಮಾತುಗಳು ಯಾವ ಪ್ರಭಾವವನ್ನೂ ಬೀರುತ್ತಿರಲಿಲ್ಲ. ಅವರು ಇನ್ನಷ್ಟು ತಾರಕ ಸ್ವರದಲ್ಲಿ, “ಏ…. ನಿನ್ನಂಥ ನಾಸ್ತಿಕನಿಗೆ ಈ ಮಾತುಗಳೆಲ್ಲ ಎಲ್ಲಿಂದ ಅರ್ಥವಾಗಬೇಕು? ಪುರಾಣ, ಹರಿಕಥೆ ಕೇಳಲು ನನ್ನ ಸಮಯಸ್ಕರು ಬರುತ್ತಾರಲ್ಲ, ಅವರೆಲ್ಲ ಎಷ್ಟು ಆಡಿಕೊಳ್ಳುತ್ತಾರೆ ಗೊತ್ತಾ? ಎಲ್ಲರಿಗೂ ಒಬ್ಬೊಬ್ಬ ಮೊಮ್ಮಗ, ಮರಿಮಗ ಇದ್ದೇ ಇದ್ದಾನೆ. ನನಗಿರೋನು ನೀನೊಬ್ಬನೇ ಮಗ, ನಿನ್ನೊಂದಿಗೆ ಈ ವಂಶ ಹೀಗೆ ನಿಂತುಹೋಗಬೇಕೇ….?”

“ಅಮ್ಮ….. ಸಾಕು ಮಾಡು ಅಂತ ಎಷ್ಟು ಸಲ ಹೇಳುವುದು? ಇವತ್ತು ನಿಜಕ್ಕೂ ಸಂತೋಷದ ದಿನ. ಕನಿಷ್ಠ ಇತ್ತೊಂದು ದಿನವಾದರೂ ನನ್ನ ತಲೆ ಕೆಡಿಸದಿರು. ಮತ್ತೆ ನಿನ್ನ ಹತ್ತಿರ ಬೇಡದ ಕಂತೆ ಪುರಾಣ ಮಾತನಾಡುತ್ತಾರಲ್ಲ ಆ ನಿನ್ನ ಫ್ರೆಂಡ್ಸು… ಧೈರ್ಯವಿದ್ದರೆ ನನ್ನೆದುರಿಗೆ ಬಂದು ಆ ಮಾತುಗಳನ್ನಾಡಲಿ. ಅವರಿಗೆ ತಕ್ಕ ಶಾಸ್ತಿ ಮಾಡಿ ಕಳುಹಿಸುತ್ತೀನಿ. ಈ ಹೆಣ್ಣುಮಕ್ಕಳ ಜವಾಬ್ದಾರಿ ನನ್ನದು, ಅದರಿಂದ ಅವರಿಗೇನು ತೊಂದರೆ?”

ಅಷ್ಟರಲ್ಲಿ ಅವರ ದೊಡ್ಡ ಮಗಳು ತುಳಸಿ ಹೇಳಿದಳು, “ಅಜ್ಜಿ, ನಾನು ಶಾಲೆಯಲ್ಲಿ ನನ್ನ ಎಲ್ಲಾ ಗೆಳತಿಯರಿಗೂ ನನಗೆ ಮತ್ತೊಬ್ಬ ತಂಗಿ ಹುಟ್ಟಿದ್ದಾಳೆ ಅಂತ ಹೇಳಿದ್ದೀನಿ. ನಾನೀಗ ಮೂವರು ತಂಗಿಯರ ಅಕ್ಕಾ , ಗೊತ್ತಾ?” ಎಂದು ಹೆಮ್ಮೆಯಿಂದ ಹೇಳಿದಳು.

“ಹೌದಮ್ಮ ಹೌದು, ನೀವು ಮೂವರೂ ಇನ್ನು ಮುಂದೆ ಪಾವು ಅಚ್ಚೇರು ಹಾಲು ಕುಡಿಯಬಹುದು. ಹೋಗು, ನಿಮ್ಮಮ್ಮನ ಹೆತ್ತೊಟ್ಟೆ ತಣ್ಣಗಿರಲಿ!” ಎಂದು ಅಜ್ಜಿ ಸಿಡುಕಿದರು.

“ಅಮ್ಮ….. ಮಕ್ಕಳೆದುರು ಏನೂಂತ ಹೀಗೆ ಮಾತನಾಡ್ತೀಯಾ?” ಎಂದು ಕೋಪದಿಂದ ಅರ್ಧ ಕಾಫಿ ಮುಗಿಸಿದ್ದ ಲೋಟವನ್ನು ಅಲ್ಲೇ ಕುಕ್ಕಿ, ಮಗಳ ಕೈಹಿಡಿದುಕೊಂಡು ಹೊರಟುಹೋದರು. ಅವರು ನೇರವಾಗಿ ತಮ್ಮ ಪತ್ನಿ ರಾಧಾ ಬಳಿ ಹೋಗಿ ಕುಳಿತರು. ಎಳೆ ಕೂಸನ್ನು ಮಡಿಲಿಗೆ ಹಾಕಿಕೊಂಡು ಆಕೆ ಬಿಕ್ಕಳಿಸುತ್ತಿದ್ದರು.

“ಇದೇನು ರಾಧಾ? ವಿದ್ಯಾವಂತಳಾಗಿ ನೀನೂ ಕೂಡ ಹಳೆ ಕಾಲದ ಕಂದಾಚಾರಕ್ಕೆ ಗಂಟುಬಿದ್ದವಳಂತೆ ಅಳುವುದೇ? ಈ ಸಲ ಹೆಣ್ಣು ಹುಟ್ಟಿದರೆ ಅಮ್ಮ ಹೀಗೆ ಮಾತನಾಡುವುದು ಅಂತ ನಿನಗೆ ಗೊತ್ತಿತ್ತು ತಾನೇ? ನೀನು ಇಂಥದ್ದನ್ನು ಕೇಳಿಸಿಕೊಳ್ಳಲು ಮಾನಸಿಕವಾಗಿ ಸಿದ್ಧಳಿರಬೇಕಷ್ಟೆ. ಮೊದಲು ನಿನ್ನ ಕಣ್ಣೀರು ಒರೆಸಿಕೊಂಡು ಒಂದಿಷ್ಟು ನಗು ಮಾರಾಯ್ತಿ,” ಎಂದು ಅವರನ್ನು ಸಮಾಧಾನಪಡಿಸಿದರು.

“ನಾನಂತೂ ನಿಮಗೆ ಒಂದಿಷ್ಟೂ ಸಂತೋಷ ತರಲಿಲ್ಲ. ನಿಮಗೂ ಅಷ್ಟೇ, ಅತ್ತೆಗೂ ಅಷ್ಟೆ…. ಒಂದೇ ಒಂದು ಗಂಡುಮಗು ಹೆತ್ತು ಕೊಡದೇ ಇದ್ದ ಮೇಲೆ ಈ ನನ್ನ ಜನ್ಮ ಇದ್ದರೆಷ್ಟು ಹೋದರೆಷ್ಟು?”

“ಛೇ….ಛೇ….. ಇದೆಂಥ ಮಾತುಗಳು ನಿನ್ನವು, ನಾನೆಂದಾದರೂ ನಿನಗೆ ಗಂಡು ಮಗುವೇ ಬೇಕು ಅಂತ ಹೇಳಿದ್ದೀನೇನು? ನಾವು ಬರೇ ಹೆಣ್ಣುಮಕ್ಕಳ ಹೆತ್ತವರು ಅಂತ ಆಡಿಕೊಳ್ಳುತ್ತಾರಲ್ಲ, ಅವರ ಬಾಯಿಗೆ ಬೀಗ ಹಾಕ್ತೀನಿ ನೋಡ್ತಿರು. ಮುಂದೆ ಒಂದು ದಿನ ಇವರೆಲ್ಲ ತಮ್ಮ ಈ ಕುಹಕದ ಮಾತುಗಳಿಗೆ ಖಂಡಿತಾ ಪಶ್ಚಾತ್ತಾಪಪಡುತ್ತಾರೆ. ನೀನು ನೋಡ್ತಿರು ರಾಧಾ, ನಾನು ನನ್ನ ಹೆಣ್ಣುಮಕ್ಕಳನ್ನು ಹೇಗೆ ಸಾಕ್ತೀನಿ ಅಂತ…. ಅವರ ಶಿಕ್ಷಣ, ಸಂಸ್ಕಾರ, ವ್ಯವಹಾರ ಎಲ್ಲ ಫಸ್ಟ್ ಕ್ಲಾಸ್‌ ಆಗಿರಬೇಕು. ನಮ್ಮ ಸಂಬಂಧೀಕರು, ಪರಿಚಿತರು ಯಾರೇ ನಿನಗೆ ಕಟಕಿಯಾಡಲಿ, ಅವರೇ ಮುಂದೆ ನಮ್ಮ ಮಕ್ಕಳ ಉದಾಹರಣೆ ಕೊಟ್ಟು ಬೇರೆಯವರನ್ನು ತಿದ್ದಬೇಕು…. ಹಾಗೆ ಮಾಡ್ತೀನಿ.”

“ನೀವು ಹೇಳ್ತಿರೋದು ನಿಜ ತಾನೇ?”

“ಹೌದು, ಖಂಡಿತಾ.”

“ಅದಿರಲಿ, ಈ ಮಗುವಿಗೆ ಏನಾದರೂ ಹೆಸರು ಯೋಚಿಸಿದಿರಾ?”

“ಹ್ಞೂಂ, ಇವಳು ಹುಟ್ಟುವ ಮೊದಲೇ ಅಂದುಕೊಂಡಿದ್ದೆ….”

“ಅದೇನು ಅಂದುಕೊಂಡಿದ್ರಿ?”

“ಪ್ರೀತಿ! ಒಳ್ಳೆಯ ಹೆಸರಲ್ವಾ…..? ತುಳಸಿ, ಧಾರಿಣಿ, ನಳಿನಿ, ಈಗ ಎಲ್ಲರ ಬಾಂಧವ್ಯ ಹೆಚ್ಚಿಸಲು ಪ್ರೀತಿ! ಚೆನ್ನಾಗಿದೆ ಅಲ್ವಾ?”

“ಹ್ಞೂಂ, ನೀವು ಆರಿಸಿದ ಮೇಲೆ ಖಂಡಿತಾ ಚೆನ್ನಾಗಿರುತ್ತದೆ,” ಎಂದು ಅವರ ಎದೆಗೊರಗಿದರು.

ಯಾರಿಗೂ ಕಾಯದೇ ಕಾಲ ಉರುಳುತ್ತಿತ್ತು. ರಾಧಾ ಮತ್ತು ಮಾಧವ ರಾಯರು ತಮ್ಮ ಮಕ್ಕಳನ್ನು ಅತಿ ಅಕ್ಕರೆಯಿಂದ ಸಾಕುತ್ತಿದ್ದರು. ನಾಲ್ವರು ಹುಡುಗಿಯರೂ ಕಲಿಕೆಯಲ್ಲಿ ಮುಂದಿದ್ದು, ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು, ಹಾಡುಹಸೆ, ಕಸೂತಿ ರಂಗೋಲಿ, ಆಧುನಿಕ ಜೀವನಶೈಲಿಗೆ ತಕ್ಕಂತೆ ಸ್ಕೂಟರ್‌ ಓಡಿಸುವುದು, ಕಂಪ್ಯೂಟರ್‌ ಇಂಟರ್‌ನೆಟ್‌ ಇತ್ಯಾದಿ ಎಲ್ಲದರಲ್ಲೂ ಪಳಗಿದರು. ಅಕ್ಕ ತಂಗಿಯರು ಯಾವಾಗಲೂ ಮುಂದಿನ ಭವಿಷ್ಯದ ಕುರಿತು ಚರ್ಚಿಸುತ್ತಿದ್ದರು. ತಾವೆಲ್ಲ ಮದುವೆಯಾಗಿ ಹೊರಟುಹೋದರೆ ಅಮ್ಮ ಅಪ್ಪನನ್ನು ನೋಡಿಕೊಳ್ಳುವವರು ಯಾರು….? ಹೀಗಾಗಿ ಮದುವೆಯೇ ಬೇಡ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಹಾಗೆ ಮಾಡುವಂತಿಲ್ಲ, ಹೆಣ್ಣುಮಕ್ಕಳು ಶಾಶ್ವತವಾಗಿ ತವರಿನಲ್ಲಿ ಉಳಿಯುವ ಬದಲು ಮದುವೆ ಆಗಿ ಗಂಡನ ಮನೆ ಬೆಳಗಬೇಕು ಎಂದು ಹಿರಿಯರು ಅವರ ಮನ ಒಲಿಸಿದರು. ಹಾಗಿರುವಾಗ ಮದುವೆ ಆದ ಮೇಲೆ ಅವರನ್ನು ತಮ್ಮೊಂದಿಗೇ ಇರಿಸಿಕೊಳ್ಳಬೇಕು ಎಂದು ನಾನು ತಾನೆಂದು ಮತ್ತೆ ವಾಗ್ವಾದ ಶುರು ಮಾಡಿದರು.

ತುಳಸಿ ಹೇಳಿದಳು? “ನಾನು ದೊಡ್ಡವಳು. ಹೀಗಾಗಿ ಅಮ್ಮ ಅಪ್ಪನ ಜವಾಬ್ದಾರಿ ನನಗೇ ಇರಲಿ. ವೃದ್ಧಾಪ್ಯದಲ್ಲಿ ನಾನು ಅವರಿಗೆ ಸಹಾಯ ಮಾಡುತ್ತೇನೆ. ನೀವು ಮೂವರೂ ಈ ವಿಷಯದಲ್ಲಿ ತಲೆ ಕೆಡಿಸಿಕೊಳ್ಳಬೇಡಿ, ಆಯ್ತಾ?”

ಆದರೆ ತಂಗಿಯರು ಆ ಮಾತನ್ನು ಒಪ್ಪಲಿಲ್ಲ. “ಅಮ್ಮ, ಅಪ್ಪ ಕೇವಲ ನಿನಗೆ ಮಾತ್ರ ಸೇರಿದವರೇನು? ನಾವು ಅವರಿಗೇನೂ ಅಲ್ಲವೇ? ನಮಗೂ ಅವರ ಜವಾಬ್ದಾರಿ ಬೇಕೇ ಬೇಕು,” ಎಂದು ಇದೇ ವಿಷಯವಾಗಿ ಆಗಾಗ ಚರ್ಚೆ ಮಾಡುತ್ತಿದ್ದರು. ಅವರ ಜವಾಬ್ದಾರಿ ತಮಗೇ ಇರಬೇಕು ಎಂದು ಹುಸಿಜಗಳ ಆಡುತ್ತಿದ್ದರು. ಕೊನೆಗೆ ಮಾಧವ ರಾಯರು ಇವರ ವ್ಯಾಜ್ಯಕ್ಕೇ ತಾವೇ ಒಂದು ತೀರ್ಪು ನೀಡಿದರು.

“ನೋಡ್ರಮ್ಮ, ಈ ವಿಷಯವಾಗಿ ನೀವು ಯಾರೂ ಬೇಜಾರು ಮಾಡಿಕೊಳ್ಳುವುದು ಬೇಡ. ಆ ಕಾಲಕ್ಕೆ ಹೇಗೆ ಆಗಬೇಕೋ ಹಾಗೆ ಆಗುತ್ತದೆ, ಆದರೂ ನಾವು ನಿಮ್ಮ ಜೊತೆ ಇರಲೇಬೇಕು ಅನ್ನುವುದಾದರೆ, ಪ್ರತಿಯೊಬ್ಬ ಮಗಳ ಮನೆಯಲ್ಲೂ 3-3 ತಿಂಗಳು ಇದ್ದರಾಯ್ತು, ಸಲೀಸಾಗಿ 1 ವರ್ಷ ಕಳೆದುಹೋಗುತ್ತದೆ. ಯಾರ ಮನೆಯಲ್ಲೂ ಹೆಚ್ಚು ಅಥವಾ ಕಡಿಮೆ ಎಂದಾಗುವುದಿಲ್ಲ. ಈಗ ಸರಿಹೋಯ್ತು ತಾನೇ?” ಎಂದಾಗ, “ಹ್ಞೂಂ, ಈಗ ಸರಿಹೋಯ್ತು,” ಎಂದು ಅಕ್ಕತಂಗಿಯರು ಸಮಾಧಾನ ಹೊಂದಿದರು.

ಈ ಮಕ್ಕಳು ತಮ್ಮ ಜವಾಬ್ದಾರಿ ವಹಿಸಿಕೊಳ್ಳಲು ಪರಸ್ಪರ ಹುಸಿಜಗಳ ಆಡುತ್ತಿರುವುದನ್ನು ಕಂಡು ಹೆತ್ತವರಿಗೆ ಹೆಮ್ಮೆ ಎನಿಸಿತು. ಆಗ ಮಾಧವರಾಯರು ತಾಯಿಗೆ ಹೇಳಿದರು, “ಅಮ್ಮ ನೋಡಿದ್ಯಾ? ಎಲ್ಲಾದರೂ ಗಂಡು ಮಕ್ಕಳು ಹೆತ್ತವರ ಜವಾಬ್ದಾರಿ ತಮಗೇ ಇರಲಿ ಎಂದು ಹೀಗೆ ವಾದಾಡುವುದನ್ನು ಕೇಳಿದ್ದೀಯಾ? ಅಪ್ಪ ಮಾಡಿದ ಆಸ್ತಿ ತನಗೇ ಇರಲಿ ಎಂದು ಹೊಡೆದಾಡುತ್ತಾರಷ್ಟೆ. ಹೆತ್ತವರ ಕುರಿತು ಹೆಣ್ಣುಮಕ್ಕಳ ಕರುಳು ಯಾವಾಗಲೂ ಮಿಡಿಯುತ್ತಿರುತ್ತದೆ….”

ವಿಶಾಲಾಕ್ಷಮ್ಮ ಆಳವಾದ ನಿಟ್ಟುಸಿರಿಟ್ಟು ಹೇಳಿದರು, “ಇರಬಹುದೇನೋಪ್ಪ….. ಮುಂದೆ ಏನಾಗುತ್ತೋ ಏನೋ ಈಗಲೇ ಹೇಳಲಾಗದು. ನೋಡಪ್ಪ, ನೀನು ಸಂತೋಷವಾಗಿದ್ದಿ…. ನನಗಷ್ಟೇ ಸಾಕು. ಈ ಹೆಣ್ಣುಮಕ್ಕಳು ಹೇಳುತ್ತಿರುವ ಹಾಗೆಯೇ ನಡೆದುಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ನಾನು ಇನ್ನೆಷ್ಟು ದಿನದವಳು….. ಮುಂದೆಯೂ ನೀನು ಹೀಗೆ ನಗುನಗುತ್ತಾ ಇರಬೇಕೆಂಬುದೇ ನನ್ನಾಸೆ. ಆದರೆ ಮುಂದೆ ಏನೇ ಬರಲಿ, ಬಂದದ್ದನ್ನು ಎದುರಿಸುವ ಎದೆಗಾರಿಕೆ ನಿನಗಿರಲಿ.”

ಅದಾದ 2-3 ವರ್ಷಗಳ ನಂತರ ವಿಶಾಲಾಕ್ಷಮ್ಮ ಬಚ್ಚಲಲ್ಲಿ ಜಾರಿ ಬಿದ್ದದ್ದೇ ನೆಪವಾಗಿ, 2 ತಿಂಗಳು ಹಾಸಿಗೆ ಹಿಡಿದರು, ಮೊಮ್ಮಗನ ಕನಸು ಕಾಣುತ್ತಲೇ ಹೋಗಿಬಿಟ್ಟರು. ಅವರು ಇಬ್ಬರು ಹಿರಿಯ ಮೊಮ್ಮಕ್ಕಳ ಮದುವೆ ಮಾತ್ರ ನೋಡಿದ್ದರು. ಅದಾಗಿ 2 ವರ್ಷಗಳಲ್ಲಿ ಕೊನೆಯವರಾದ ನಳಿನಿ, ಪ್ರೀತಿಯರ ಮದುವೆಯೂ ನಡೆಯಿತು. ರಾಯರು ತಮ್ಮ ಶಕ್ತಿಮೀರಿ ನಾಲ್ವರು ಹೆಣ್ಣುಮಕ್ಕಳ ಮದುವೆಗೆ ಖರ್ಚು ಮಾಡಿದ್ದರು. ಮನೆಯನ್ನು ಮಾರಿ, ಸಾಲದ ಹೊರೆ ಹೊತ್ತು ನಿಧಾನವಾಗಿ ತೀರಿಸತೊಡಗಿದರು. ಅದಾಗಿ 1 ವರ್ಷದಲ್ಲಿ ರಾಧಾ ಕ್ಯಾನ್ಸರ್‌ಗೆ ತುತ್ತಾದರು. ಆಕೆಯನ್ನು ಆಸ್ಪತ್ರೆಗೆ ಸೇರಿಸಿದ ರಾಯರು ಮನೆಗೂ, ಆಸ್ಪತ್ರೆಗೂ ಓಡಾಡುತ್ತಾ ಹೈರಾಣಾದರು. ಇವರನ್ನು ಹೆಚ್ಚು ದಿನ ಸತಾಯಿಸದೆ ರಾಧಾ ಒಂದೇ ತಿಂಗಳಲ್ಲಿ  ತೀರಿಕೊಂಡಾಗ, ಮಾಧವ ರಾಯರು ನಿಜಕ್ಕೂ ಏಕಾಂಗಿಗಳಾಗಿ ಕಂಗಾಲಾದರು. ತಾಯಿಯ ಸಾವಿಗೆ ಬಂದ ಹೆಣ್ಣುಮಕ್ಕಳು, ಕಾರ್ಯ ಕರ್ಮಾಂತರ ಮುಗಿಸಿಕೊಂಡು ಹೊರಟುಬಿಟ್ಟರು. ಮದುವೆಗಳು, ಆಸ್ಪತ್ರೆ ಖರ್ಚು, ತಿಥಿ ಕರ್ಮಾಂತರಗಳನ್ನು ಪೂರೈಸುವಷ್ಟರಲ್ಲಿ ರಾಯರು ಅಕ್ಷರಶಃ ಬರಿಗೈ ದಾಸರಾಗಿದ್ದರು. 6 ತಿಂಗಳು ಕಳೆಯುವಷ್ಟರಲ್ಲಿ ಅವರಿಗೆ ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟಂತಾಗಿತ್ತು. ಖಾಸಗಿ ಕಂಪನಿಯಲ್ಲಿ ಗುಮಾಸ್ತರಾಗಿದ್ದ ಅವರಿಗೆ, ನಿವೃತ್ತರಾದಾಗ ಕೈಗೆ ಬಂದ ಹಣವಷ್ಟೇ ಭವಿಷ್ಯಕ್ಕೆ ಆಧಾರವಾಗಿತ್ತು. ಯಾವುದೇ ಪೆನ್ಶನ್‌ ವ್ಯವಸ್ಥೆ ಸಹ ಇರಲಿಲ್ಲ. ಇರುವ ಹಣವನ್ನು ಸಾಲದ ಮೊತ್ತ, ಆಸ್ಪತ್ರೆಗೆ ಖರ್ಚು ಮಾಡಿದ ರಾಯರು, ಈಗ 1-1 ರೂ. ಖರ್ಚು ಮಾಡಲಿಕ್ಕೂ ಹತ್ತು ಸಲ ಚಿಂತಿಸಬೇಕಿತ್ತು. ಅನಾರೋಗ್ಯದ ಕಾರಣ ಅವರಿಗೆ ಎಲ್ಲೂ ಪಾರ್ಟ್‌ ಟೈಂ ಕೆಲಸ ಸಹ ಮಾಡಲಾಗಲಿಲ್ಲ. ಮುಂದೆ ಭವಿಷ್ಯ ಕಳೆಯುವುದು ಹೇಗೆ? ಇದೇ ಯೋಚನೆಯಲ್ಲಿ ಅವರು ಕೊರಗಿ ಕೃಶರಾಗಿ ಹೋದರು. ಆಗ ಹಿಂದೆ ತಮ್ಮ ಮಕ್ಕಳು ಹೇಳುತ್ತಿದ್ದ ಮಾತುಗಳು ನೆನಪಾಗಿ ಅವರ ಸಹಾಯ ಪಡೆಯೋಣವೆಂದು ಯೋಚಿಸಿದರು.

ಮೊದಲು ಹಿರಿಯ ಮಗಳು ತುಳಸಿಯ ಮನೆಗೆ ಹೋದರು. 1 ವಾರ ಕಳೆಯುವಷ್ಟರಲ್ಲಿ ಅವಳ ಅತ್ತೆ, ವಾರಗಿತ್ತಿಯರು ವ್ಯಂಗ್ಯದ ಚುಚ್ಚುನುಡಿಗಳನ್ನು ಶುರುಮಾಡಿಕೊಂಡಿದ್ದರು. ಬೆಳಗ್ಗೆ ರಾಯರು ಉಪ್ಪಿಟ್ಟು ತಿನ್ನುತ್ತಾ ವರಾಂಡದಲ್ಲಿ ಕುಳಿತಿದ್ದರು. ಅಷ್ಟರಲ್ಲಿ  ಒಳಗಿನ ಡೈನಿಂಗ್‌ ಟೇಬಲ್ ಬಳಿಯಿಂದ ತುಳಸಿಯ ಅತ್ತೆ ವನಜಾಕ್ಷಮ್ಮ ಗುಡುಗುತ್ತಿದ್ದರು, “ಛೇ….ಛೇ…. ಎಂತೆಂಥ ಜನ ಇರ್ತಾರಪ್ಪ! ಒಂದು ಕಡೆ ಬಂದು ಝಾಂಡಾ ಊರಿಬಿಟ್ರೆ  ಅಲ್ಲಿಂದ ಕಾಲು ಕೀಳುವ ಮಾತೇ ಇಲ್ಲ. ಹ್ಞೂಂ, ಹೊತ್ತು ಹೊತ್ತಿಗೆ ಕಾಫಿ, ತಿಂಡಿ, ಊಟ ಅಂತ ಕುಳಿತ ಜಾಗಕ್ಕೆ ಮಗಳು ಪೂರೈಸುತ್ತಿದ್ದರೆ ಯಾರಿಗೆ ಇಲ್ಲಿಂದ ಹೊರಡುವ ಮನಸ್ಸು ಬಂದೀತು? ಏನೋ ಮಗಳ ಮನೆಗೆ ಬಂದೆವಲ್ಲ, ಅವಳ ಯೋಗಕ್ಷೇಮ ವಿಚಾರಿಸಿ 2-3 ದಿನ ಜೊತೆಗಿದ್ದು ಹೊರಟರೆ ಅದು ಮರ್ಯಾದಸ್ಥರ ಲಕ್ಷಣ. ಅದನ್ನು ಬಿಟ್ಟು ಇದೇನು ನಾಚಿಗ್ಗೇಡು? ಎಲ್ಲೂ ಕಂಡಿಲ್ಲ, ಕೇಳಿಲ್ಲ ಬಿಡಮ್ಮ…..”

ಅವರು ಯಾರ ಕುರಿತಾಗಿ ಹೇಳುತ್ತಿದ್ದಾರೆ ಎಂದು ಮನೆಯ ಎಲ್ಲರಿಗೂ ಸ್ಪಷ್ಟವಾಗಿ ಅರ್ಥವಾಗಿತ್ತು. ರಾಯರಿಗಂತೂ ತಿನ್ನುತ್ತಿದ್ದ ತುತ್ತು ತಟ್ಟೆಗೆ ಬಿತ್ತು. ಅಷ್ಟರಲ್ಲಿ ತುಳಸಿಯ ಹಿರಿ ವಾರಗಿತ್ತಿ ಸುನಂದಾ ಅತ್ತೆಯ ಮಾತಿಗೆ ಶೃತಿ ಸೇರಿಸುತ್ತಾ, “ಅದಂತೂ ನಿಜ ಅತ್ತೆ. ಅಲ್ಲ, ಈ ಜನಕ್ಕೆ ಮಗಳ ಅತ್ತೆಮನೆಯಲ್ಲಿ ಅದು ಹೇಗೆ ತಿಂದನ್ನ ಜೀರ್ಣವಾಗುತ್ತೋ ಏನೋಪ್ಪ? ನನ್ನ ತಂದೆ ಸಹ ಎಂದೋ ಒಮ್ಮೆ ಬರ್ತಾರೆ. ಸ್ವಲ್ಪ ಕಾಫಿ ತಿಂಡಿ ತಗೋಳೋದಿಕ್ಕೂ ಎಷ್ಟು ಸಂಕೋಚಪಡ್ತಾರೆ ಗೊತ್ತಾ…. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಅಂತ. ಹಾಗಿರೋವಾಗ ಮಗಳ ಮನೆಯಲ್ಲಿ ನೀರು ಹೇಗೆ ಕುಡಿಯಲಮ್ಮ ಅಂತಾರೆ.

“ಹಾಗೂ ನನ್ನ ಬಲವಂತಕ್ಕೆ ಏನಾದರೂ ಕಾಫಿತಿಂಡಿ ತಗೊಂಡರೂ, ಅದಕ್ಕೆ 2 ಪಟ್ಟು ಉಡುಗೊರೆ ರೂಪದಲ್ಲಿ ಹಣ, ಒಡವೆ ವಸ್ತ್ರ ಅಂತ ಹೊರಡುವಾಗ ಮರೆಯದೆ ಕೊಟ್ಟುಹೋಗ್ತಾರೆ. ಅವರು ಕನಸು ಮನಸ್ಸಿನಲ್ಲೂ ಹೀಗೆಲ್ಲ ಮಗಳ ಮನೆಯಲ್ಲಿ ಉಳಯುವರಲ್ಲ ಬಿಡಿ…..”

ಅವಳ ಮುಂದಿನ ಮಾತುಗಳನ್ನು ಕೇಳಿಸಿಕೊಳ್ಳಲಾಗದೆ ಮಾಧವ ರಾಯರು ಹಿತ್ತಲಿಗೆ ಹೋಗಿ ತಟ್ಟೆಯಲ್ಲಿದ್ದುದನ್ನು ನಾಯಿಗೆಸೆದು ಕೈ ತೊಳೆದು ಬಂದು ಮುಂದಿನ ವರಾಂಡದಲ್ಲಿ ಕುಳಿತುಬಿಟ್ಟರು. ಅವರ ಮುಂದೆ ತುಳಸಿ ಕಣ್ಣೀರಿಡುತ್ತಾ ನಿಂತಿದ್ದಳು. ಅವಳ ಕೈಯಲ್ಲಿ ತಂದೆಯ ಬಟ್ಟೆಗಳಿದ್ದ ಬ್ಯಾಗಿತ್ತು. ಅದನ್ನು ಅವರ ಕೈಗೆ ಕೊಡುತ್ತಾ, “ಅಪ್ಪಾ, ಇನ್ನು ಮುಂದೂ ನಿಮಗಾಗುತ್ತಿರುವ ಈ ಅವಮಾನ ನೋಡಿಕೊಂಡಿರಲು ನನ್ನಿಂದ ಸಾಧ್ಯವಿಲ್ಲ. ದಯವಿಟ್ಟು ಇಲ್ಲಿಂದ ಹೊರಟುಬಿಡಿ. ನಾನು ಕೆಲಸಕ್ಕೆ ಸೇರಿ ನನ್ನ ಸ್ವಂತ ಕಾಲ ಮೇಲೆ ನಿಂತ ನಂತರ ನಿಮ್ಮನ್ನು ನನ್ನ ಮನೆಗೆ ಕರೆಸುತ್ತೇನೆ, ಆಗ ಬರುವಿರಂತೆ…. ಈಗ ದಯವಿಟ್ಟು ಹೊರಟುಬಿಡಿ. ಅಪ್ಪ, ನಾನು ಧಾರಿಣಿಗೆ ಫೋನ್‌ ಮಾಡಿದ್ದೀನಿ. ನೀವು ಅವಳ ಮನೆಗೇ ಹೊರಟುಬಿಡಿ….” ಎಂದು ಬಿಕ್ಕಿಬಿಕ್ಕಿ ಅತ್ತುಬಿಟ್ಟಳು.

ಹತಾಶರಾಗಿ ಏನೂ ಹೇಳಲಾಗದ ಮಾಧವ ರಾಯರು, “ಸದಾ ಸೌಭಾಗ್ಯವತಿಯಾಗಿ ಗಂಡ, ಮಗು ಜೊತೆ ಸುಖವಾಗಿರಮ್ಮ,” ಎಂದು ಹಾರೈಸಿ ದುರ್ದಾನ ಪಡೆದವರಂತೆ ಅಲ್ಲಿಂದ ಸರಸರ ಹೊರಟುಬಿಟ್ಟರು.

ಅಲ್ಲಿಂದ ಅವರು ಧಾರಿಣಿಯ ಮನೆಗೆ ಬಂದಾಗ ಮೊದಲ ದಿನ ಎಲ್ಲವೂ ಚೆನ್ನಾಗಿತ್ತು. ಮಾರನೇ ದಿನ ಧಾರಿಣಿಯ ಮಾವ ಅಂಗಳದಲ್ಲಿ ನಿಂತು ಪಾರಿವಾಳಗಳಿಗೆ ಒಂದಿಷ್ಟು ಕಡಲೆಪುರಿ ಎರಚುತ್ತಿದ್ದರು. ಅಷ್ಟರಲ್ಲಿ ಧಾರಿಣಿಯ ಅತ್ತೆ ಅಡುಗೆಮನೆಯಿಂದ ಕಿರುಚಾಟ ಶುರು ಮಾಡಿದ್ದರು. “ಈಗಿನ ಕಾಲದಲ್ಲಿ ಅಕ್ಕಿ ಬೆಲೆ ಎಷ್ಟು ದುಬಾರಿ ಆಗಿದೆ ಅಂತ ನಿಮಗೆ ಗೊತ್ತು ತಾನೇ? ದುಡಿಯೋನು ಒಬ್ಬ ಮಗ, ಅದನ್ನು ನಂಬಿಕೊಂಡು ಬಾಳುತ್ತಿರುವವರು ನಾಲ್ಕು ಜನ….. ಬೇರೆ ಯಾವ ವರಮಾನ ಇಲ್ಲ ಅನ್ನೋದು ನೆನಪಿರಲಿ. ದಿನೇದಿನೇ ಹೆಚ್ಚುತ್ತಿರುವ ಬೆಲೆಯೇರಿಕೆಯ ಈ ಕಾಲದಲ್ಲಿ, ಒಂದೊಂದು ರೂಪಾಯಿಗೂ ಎಷ್ಟು ಮಹತ್ವ ಇದೆ ಗೊತ್ತಾ? ಹೋಗಲಿ ಅಂದ್ರೆ ಒಬ್ಬ ಕೆಲಸದವಳನ್ನು ಇಟ್ಟುಕೊಳ್ಳಲಿಕ್ಕೂ ಯೋಗ್ಯತೆ ಇಲ್ಲವಾಗಿದೆ.

“ಎಲ್ಲ ಕೆಲಸವನ್ನೂ ನಾನೇ ಮಾಡಿಕೊಳ್ಳ ಬೇಕಿದೆ. ಸೊಸೆ ಬಂದು ಏನೋ ಉದ್ಧಾರ ಮಾಡ್ತಾಳೆ ಅಂದ್ರೆ ಏನೂ ಕಾಣೆ…. ಬರೀ ಖಾಲಿ! ಅತ್ಲಾಗೆ ಕೆಲಸಕ್ಕಾದ್ರೂ ಹೋಗೋ ಹುಡುಗಿ ಆಗಿದ್ರೆ ಮನೆಗೆ 4 ಕಾಸು ಬಂದಿರೋದು. `ನೀವು ತಂದ್ಹಾಕೋ ಗಂಡ ನಾನು ತಿಂದ್ಹಾಕ್ತೀನಿ’ ಅಂತ ಸುಮ್ಮನಿದ್ದುಬಿಟ್ಟಿದ್ದಾಳೆ….” ಎಂದು ಏನೇನೋ ಗೊಣಗುತ್ತಾ ಪಡಸಾಲೆಗೆ ಬಂದರು ಅಲ್ಲಿ ಮಾಧವ ರಾಯರು ಪೇಪರ್‌ ಓದುತ್ತಿರುವುದನ್ನು ಕಂಡು ಕೃತಕ ನಗು ಬೀರಿದರು.

“ಓ….. ಇಲ್ಲೇ ಇದ್ದೀರಾ? ನೋಡಿ ನಿಮ್ಮ ಬೀಗರು ಮಾಡುತ್ತಿರುವ ಕಿತಾಪತಿ…. ಬರೀ ಖರ್ಚಿಗೆ ದಾರಿ ಹುಡುಕುವುದೇ ಆಯ್ತು. ನಾನಂತೂ ಒಂದೊಂದು ರೂ. ಉಳಿಸಲು ಹಗಲೂ ರಾತ್ರಿ ಯೋಚನೆ ಮಾಡ್ತೀನಿ. ಇವರು ನೋಡಿದ್ರೆ ಎಲ್ಲವನ್ನೂ ಹಾಳು ಮಾಡೋದ್ರಲ್ಲೇ ಇರ್ತಾರೆ.

“ಇಂದಿನ ದುಬಾರಿ ಖರ್ಚು ವೆಚ್ಚದ ಮಧ್ಯೆ ಇವರನ್ನು ಕಡಲೆಪುರಿ ಕೊಂಡು ಪಾರಿವಾಳಕ್ಕೆ ಹಂಚಿ, ಅಂತ ಹೇಳಿದವರು ಯಾರಂತೆ? ಆ ದುಡ್ಡಲ್ಲಿ ಒಂದಿಷ್ಟು ಸೊಪ್ಪು ಕೊಂಡಿದ್ರೆ ಒಂದು ಹೊತ್ತಿನ ಅಡುಗೆಗೆ ಆಗ್ತಿತ್ತು. ನಮ್ಮ ಪರಿಸ್ಥಿತಿ ಎಷ್ಟು ಕೆಟ್ಟಿದೆ ಅಂತೀರಾ….? ಯಾರಾದ್ರೂ ಅತಿಥಿಗಳು ಬಂದು 2 ದಿನ ತಂಗಿದ್ರೆ ಹೇಗಪ್ಪ ಅವರನ್ನು ಸುಧಾರಿಸುವುದು ಅಂತ ಕಣ್ಣು ಕಣ್ಣು ಬಿಡುವ ಹಾಗಾಗುತ್ತೆ. ಅದರ ಮಧ್ಯೆ ಇವರಿಗೆ ದಾನಧರ್ಮದ ಬುದ್ಧಿ ಬೇರೆ…..” ಎಂದು ಆಕೆ ಒಂದೇ ಸಮ ಗೊಣಗುತ್ತಿದ್ದರು. ಮಾಧವ ರಾಯರು ಅವಾಕ್ಕಾದರು. ಯಾರೋ ತಮ್ಮ ಮುಖಕ್ಕೆ ಬೀಸಿ ಹೊಡೆದಂತಾಯ್ತು.

ಬೆಳಗಿನ 10 ಘಂಟೆ ಆಗಿರಬಹುದು, ತಿಂಡಿ ಇರಲಿ, ಇದುವರೆಗೂ 1 ಕಪ್‌ ಕಾಫಿ ಸಹ ಸಿಕ್ಕಿರಲಿಲ್ಲ. ಅವರ ಯೋಚನೆ ಮುಂದುವರಿದಂತೆ, ಬೀಗಿತ್ತಿ ನೇರವಾಗಿ ಕೇಳಿಯೇಬಿಟ್ಟರು, “ಅದು ಸರಿ, ನೀವು ಇನ್ನೂ ಎಷ್ಟು ದಿನ ಇರ್ತೀರಿ? ಅಡುಗೆ ವ್ಯವಸ್ಥೆ ಆಗಬೇಕಲ್ಲ….?” ಮಾಧವ ರಾಯರು ಕಕ್ಕಾಬಿಕ್ಕಿಯಾದರು. ಆ ಮನೆಯ ತರಹ ಇಲ್ಲಿ ಅವಮಾನ ಆಗುವ ಮೊದಲೇ ಹೊರಟುಬಿಡಬೇಕು ಎಂದು ತಕ್ಷಣ ನಿರ್ಧರಿಸಿ, “ಇಲ್ಲ….ಇಲ್ಲ…. ಹಾಗೇನಿಲ್ಲ, ನಾನು ಇಲ್ಲಿ 2 ದಿನ ಇರಲು ಬಂದವನಲ್ಲ. ತುಳಸಿ ಮನೆಗೆ ಬಂದಿದ್ದೆ….. ಹಾಗೆ ಧಾರಿಣಿಯನ್ನು ನೋಡಿ ಮಾತನಾಡಿಸಿಕೊಂಡು ಹೋಗೋಣಾಂತ ಅಷ್ಟೆ, ಸಂಜೆ ಬಸ್ಸು ಮಿಸ್‌ಆಯ್ತಲ್ಲ….. ಹಾಗಾಗಿ ರಾತ್ರಿ ಉಳಿಯುವ ಹಾಗಾಯ್ತು. ಇಗೋ ಈಗಲೇ ಹೊರಟೆ,” ಎಂದು ತಮ್ಮ ಬ್ಯಾಗ್‌ ತೆಗೆದುಕೊಂಡರು.

“ಓ ಹೌದೇ…. ಹಾಗಿದ್ರೆ ಸರಿ. ಬರ್ತಾ ಇರಿ ಆಗಾಗ.. ಎಷ್ಟಾದರೂ ಇದು ಮಗಳು ಅಳಿಯನ ಮನೆ ಅಲ್ವೇ?” ಎಂದು ದೇಶಾವರಿ ನಗೆಬೀರಿ ಒಳಗೆ ಹೊರಟರು. ಈಗ ಆಕೆಯ ಮಾತಲ್ಲಿ ತುಸು ಮೃದುತ್ವ ಬಂದಹಾಗಿತ್ತು.

ಸೊಸೆಯನ್ನು ಕರೆದು ಬಾಯಿತುಂಬಾ ಹೇಳಿದರು, “ನೋಡಮ್ಮ, ನಿಮ್ಮ ತಂದೆ ಊರಿಗೆ ಹೊರಟಿದ್ದಾರಂತೆ. ಈಗಲೇ 10 ಘಂಟೆ ಆಯ್ತು. ಬೇಗ ಅವರಿಗೆ ತಿಂಡಿ, ಕಾಫಿ ಕೊಡು. 11 ಘಂಟೆ ಬಸ್‌ ಮಿಸ್‌ ಆಗಬಾರದಲ್ವೇ? ಹಾಗೇ ಮಧ್ಯಾಹ್ನಕ್ಕೆ ಒಂದಿಷ್ಟು ಮೊಸರನ್ನು ಕಲಸಿ ಪ್ಯಾಕ್‌ ಮಾಡಿಕೊಡು. ಬಿಸಿಲಲ್ಲಿ ಬಸ್ಸಿಳಿದು ಹೋಟೆಲ್ ಹುಡುಕುವುದು ತಪ್ಪುತ್ತದೆ. ಊರಿಗೆ ಹೋಗುವಷ್ಟರಲ್ಲಿ ಸಂಜೆ ಆಗುತ್ತೋ ಏನೋ?”

`ಎಲ್ಲಿಗೆ ಹೋದರೂ ಈ ಹೆಂಗಸರ ಬಾಯಿ ಮಾತಿಗೆ  ಸಿಕ್ಕಿಹಾಕಿಕೊಳ್ಳುವುದೇ ಆಯಿತಲ್ಲ? ತುಳಸಿಯ ಅತ್ತೆ ನೇರವಾಗಿ ಮುಖದ ಮೇಲೆ ಹೊಡೆದಂತೆ ಹೇಳಿದರೆ ಈಕೆ ಸುತ್ತಿಬಳಸಿ ಹೊರಡಲು ಹೇಳುತ್ತಿದ್ದಾರೆ….’ ಮಾಧವ ರಾಯರ ಯೋಚನೆ ಹೀಗೆ ಮುಂದುವರಿದಿತ್ತು.

ಆ ಮನೆಯ ಚಾಕರಿ ಮಾಡಿ ಸೋತು ಸೊಪ್ಪಾಗಿದ್ದ ಧಾರಿಣಿ ತಂದೆಗೆ ಒಂದು ದೊಡ್ಡ ಲೋಟದಲ್ಲಿ ನೀರು ತಂದುಕೊಟ್ಟು, “ಇದನ್ನು ಕುಡಿಯಿರಿ ಅಪ್ಪ. ಈಗಲೇ ಒಗ್ಗರಣೆ ಅವಲಕ್ಕಿ ತಂದುಕೊಡ್ತೀನಿ. ಹಾಗೆ ಮೊಸರನ್ನ ತೆಗೆದುಕೊಂಡು ಹೊರಡುವಿರಂತೆ….” ಮಾತು ಮುಂದುರಿಸುವಷ್ಟರಲ್ಲಿ ಅವಳ ಕಂಠ ತುಂಬಿ ಬಂದಿತ್ತು. ಅವರ ಅಂಗೈ ಮೇಲೆ ಅವಳ ಕಣ್ಣೀರು ತುಳುಕಿತು.

“ಅದೆಲ್ಲ ಏನೂ ಬೇಡಮ್ಮ. ನಿನ್ನನ್ನು ನೋಡಬೇಕೆನಿಸಿತು, ನೋಡಿದ್ದಾಯ್ತು. 1 ದಿನ ಉಳಿದದ್ದೂ ಆಯ್ತು. ಇದೋ ಈಗಲೇ ಹೊರಟೆ. ಸದಾ ಸೌಭಾಗ್ಯವತಿಯಾಗಿ ಸುಖವಾಗಿರಮ್ಮ. ಈ ಆಶೀರ್ವಾದ ಬಿಟ್ಟರೆ ನಿನಗೆ ಕೊಡಲು ನನ್ನ ಬಳಿ ಬೇರೇನಿಲ್ಲ,” ಎಂದು ತಮ್ಮ ಕಣ್ಣೀರು ಕಾಣಿಸದಂತೆ ಒರೆಸಿಕೊಳ್ಳುತ್ತಾ, ಬ್ಯಾಗ್‌ ತೆಗೆದುಕೊಂಡು ಹೊರಟೇಬಿಟ್ಟರು. ಅವರು ಬಾಗಿಲಿನಿಂದ ಗೇಟ್‌ತಲುಪುವಷ್ಟರಲ್ಲಿ ಬೀಗಿತ್ತಿ ಇವರ ಬೀಗರಿಗೆ, “ಸ್ವಲ್ಪ ಒಳಗೆ ಬಂದು ತಿಂಡಿ ತಗೊಳ್ತೀರ….” ಎಂದು ಕರೆದದ್ದಲ್ಲದೆ,  ಇವರು ಗೇಟು ದಾಟುವಷ್ಟರಲ್ಲಿ ರಪ್‌ ಎಂದು ಬಾಗಿಲು ಹಾಕಿಕೊಂಡದ್ದು ರಾಯರಿಗೆ ಸ್ಪಷ್ಟವಾಗಿ ಕೇಳಿಸಿತು. ಬರಿಗೈ ಪುರಂದರನಾಗಿ ಎಂದೂ ಹೆಣ್ಣುಮಕ್ಕಳ ಮನೆಗೆ ಹೋಗಲೇಬಾರದು ಎಂದು ನೊಂದುಕೊಳ್ಳುತ್ತಾ ನಿಟ್ಟುಸಿರಿಟ್ಟರು.

ಅಂತೂ ಅವರು ಸಂಜೆ ಹೊತ್ತಿಗೆ ಹೇಗೋ ಬಸ್ಸು ಹಿಡಿದು ಮೂರನೇ ಮಗಳು ನಳಿನಿ ಮನೆ ತಲುಪಿದರು. ಅಲ್ಲಿ ನೋಡಿದರೆ ಎಲ್ಲರೂ ಎಲ್ಲಿಗೋ ಸಂಭ್ರಮದಿಂದ ಸೂಟ್‌ಕೇಸ್‌ ಹಿಡಿದು ಪ್ರವಾಸಕ್ಕೆ ಹೊರಟವಂತಿತ್ತು. ಇದ್ದಕ್ಕಿದ್ದಂತೆ ತಂದೆ ಬಂದು ಇಳಿದದ್ದು ಕಂಡು ನಳಿನಿಗೆ ಬಹಳ ಕಸಿವಿಸಿ ಆಯ್ತು. ಇವರನ್ನು ಗಮನಿಸಿದವಳೇ ನಳಿನಿ ಹೆಚ್ಚುಕಡಿಮೆ ಅವರನ್ನು ದರದರನೆ ತನ್ನ ಕೋಣೆಗೆ ಎಳೆದೊಯ್ದಳು.

“ಇದೇನಪ್ಪ ದಿಢೀರ್‌ ಅಂತ ಇಲ್ಲಿ ಪ್ರತ್ಯಕ್ಷ ಆಗಿಬಿಟ್ಟಿರಿ? ಏನು ವಿಷಯ?”

“ಏನೂ ಇಲ್ಲಮ್ಮ….. ಹೀಗೇ ನಿನ್ನನ್ನು ನೋಡಿ ಬಹಳ ದಿನ ಆಯ್ತಲ್ಲ ಅಂತ ಹೊರಟುಬಂದೆ. 2 ದಿನ ನಿನ್ನ ಜೊತೆ ಇಲ್ಲಿರೋಣಾಂತ….. ಅದಿರಲಿ, ನೀವೆಲ್ಲ ಎಲ್ಲಿಗೋ ಪ್ರಯಾಣ ಹೊರಟ ಹಾಗಿದೆ?”

“ಹೂಂನಪ್ಪ, ನಾವು ರಾತ್ರಿ 8 ಗಂಟೆ ಫ್ಲೈಟಿಗೆ ಮುಂಬೈಗೆ ಹೊರಟು 11 ಗಂಟೆಗೆ ಅಲ್ಲಿಂದ ಅಮೆರಿಕಾಗೆ ಹೊರಟಿದ್ದೇವೆ. ಅಲ್ಲಿ ನನ್ನ ನಾದಿನಿಯ ಮದುವೆ ಇದೆ, ಹುಡುಗ ಎನ್‌ಆರ್‌ಐ, ಅಲ್ಲೇ ಮದುವೆ ಮಾಡಿಕೊಡಿ ರಜೆಯಲ್ಲಿ ಬರಲು ಆಗುವುದಿಲ್ಲ ಅನ್ನೋದು ಅವರ ಬೇಡಿಕೆ. ನಾ ಹೋಗಿಬರಲು ಹೇಗೂ 3 ವಾರ ಆಗುತ್ತದೆ. ನೀವು ಯಾವುದಕ್ಕೂ ಒಂದು ಸಲ ಫೋನ್‌ ಮಾಡಿ ಬಂದಿದ್ದರೆ ಚೆನ್ನಾಗಿತ್ತು. ನಿಮಗೆ ಬೇರೆ ಎಲ್ಲಾದರೂ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದೆ. ಈಗ ನೀವು ಎಲ್ಲಿರ್ತೀರಿ….? ನಾವು ಸ್ವಲ್ಪ ಹೊತ್ತಿಗೆ ಏರ್‌ಪೋರ್ಟ್‌ಗೆ ಹೊರಡಲೇಬೇಕು.”

“ಇರಲಿ ಬಿಡಮ್ಮ, ನೀವು ಹಾಯಾಗಿ ಹೋಗಿಬನ್ನಿ, ಎಂಜಾಯ್‌ ಮಾಡಿ. ನಾನು ನಿಮ್ಮ ಮನೆಯಲ್ಲೇ ಇದ್ದು ಮನೆ ನೋಡಿಕೊಳ್ತೀನಿ.”

“ಅದು ಹಾಗಲ್ಲ…. ಅಪ್ಪ…. ಹಾಗೇ ಹೇಗಾಗುತ್ತೆ? ಇಷ್ಟು ದೊಡ್ಡ ಮನೆ, ಮೇಂಟೆನೆನ್ಸ್ ಕಷ್ಟ. ಒಂದಕ್ಕಿಂತ ಒಂದು ದುಬಾರಿ ವಸ್ತುಗಳು. ನಿಮಗೆ ಗೊತ್ತೇ…. ಈ ಮನೆಯ ಒಂದೊಂದು ಫರ್ನೀಚರ್‌, ಡೆಕೋರೇಟಿವ್ ‌ಐಟಂ 50-60 ಸಾವಿರ ಆಗುತ್ತೆ. ಇಲ್ಲಿ ಮೆಯ್ನ್ ಹಾಲ್‌ನಲ್ಲಿ ಇರುವ ಪೇಂಟಿಂಗ್‌ ಇದೆಯಲ್ಲ, ಲಕ್ಷಾಂತರ ರೂ. ಬೆಲೆ ಬಾಳುವಂಥದ್ದು. ಪ್ರತಿ ಸಲ ಸೌರ್‌ ಅದನ್ನು ತಮ್ಮ ಕೈಗಳಿಂದಲೇ ಶುಚಿಗೊಳಿಸುತ್ತಾರೆ, ಆಳುಗಳ ಮೇಲೆ ಬಿಡುದೇ ಇಲ್ಲ.

“ಇನ್ನೊಂದು ವಿಷಯ ಅಂದ್ರೆ ಈ ಏರಿಯಾದಲ್ಲಿ ಕಳ್ಳತನ, ಡಕಾಯಿತಿ ಮಾಮೂಲಿ ವಿಷಯ. ನೀವೋ ಮೊದಲೇ ವಯಸ್ಸಾದರು. ಒಬ್ಬರೇ ಇದ್ದೀರ ಅಂತ ತಿಳಿದುಕೊಂಡು 3-4 ಜನ ಒಟ್ಟಿಗೆ ಮುತ್ತಿಗೆ ಹಾಕಿದರೆ ಏನು ಮಾಡ್ತೀರಿ? ಆಸ್ತಿಯೂ ಹೋಗುತ್ತೆ, ನಿಮ್ಮ ಪ್ರಾಣಕ್ಕೂ ಸಂಚಕಾರ. ಆದ್ದರಿಂದ ಈ ರಾದ್ಧಾಂತವೇ ಬೇಡ. ಮನೆಬಾಗಿಲಿಗೆ ಬೀಗ ಹಾಕಿ, ಮುಂದೆ ಶಟರ್ಸ್ ಗೂ ಡಬಲ್ ಲಾಕ್ ಮಾಡುವುದೇ ಸರಿ. ಹೇಗೂ 3-4 ವಾರಗಳು ನಾವು ಅಲ್ಲೇ ಇರ್ತೀವಿ, ನೀವು ಅಲ್ಲಿಯವರೆಗೂ ಪ್ರೀತಿ ಮನೇಲಿ ಇದ್ದು ಬನ್ನಿ. ನಾನು ವಾಪಸ್ಸು ಬಂದ ಮೇಲೆ ನಿಮ್ಮನ್ನು ಇಲ್ಲಿಗೇ ಕರೆಸಿಕೊಳ್ತೀನಿ.”

ಇದನ್ನು ಕೇಳಿ ಮಾಧವ ರಾಯರ ತಲೆ ಗಿರ್ರೆಂದಿತು. ಎಲ್ಲರಿಗಿಂತ ಹೆಚ್ಚಾಗಿ ಜಗಳಾಡುತ್ತಾ ಅಮ್ಮ ಅಪ್ಪನನ್ನು ತನ್ನ ಬಳಿಯೇ ಇರಿಸಿಕೊಳ್ಳುತ್ತೇನೆ ಎನ್ನುತ್ತಿದ್ದ ನಳಿನಿ ಇವಳೇನಾ…..? ನನ್ನ ಮನೆ ದೊಡ್ಡದಿರಲಿ, ಚಿಕ್ಕದಿರಲಿ, ಅಮ್ಮ ಅಪ್ಪನಿಗೆ ಒಂದು ಕೋಣೆ ಅಗತ್ಯವಾಗಿ ಬಿಟ್ಟುಕೊಡ್ತೀನಿ ಅಂದವಳು ಇವಳೇನಾ? ಇಂದು ಮನೆಯಲ್ಲಿರುವ ಎಲ್ಲಾ ನಿರ್ಜೀವ ವಸ್ತುಗಳೂ ತಂದೆಗಿಂತ ಬಹು ಅಮೂಲ್ಯ ಎನಿಸತೊಡಗಿದೆ. ಇದೇ ನಳಿನಿಯ ಮದುವೆಗಾಗಿ ಮನೆಯನ್ನು ಮಾರುವ ಪರಿಸ್ಥಿತಿ ಎದುರಾಗಿತ್ತು. ಏನೇ ಆದರೂ ಎಂಜಿನಿಯರ್‌ ಗಂಡನೇ ಬೇಕೆಂದ ಅವಳ ಬಯಕೆ ಪೂರೈಸುವಷ್ಟರಲ್ಲಿ ಇವರಿಗೆ ಜೀವ ಬಾಯಿಗೆ ಬಂದಿತ್ತು. ಮಗಳ ಮಾತನ್ನು ಜೀರ್ಣಿಸಿಕೊಳ್ಳಲಾಗದೆ ಅವರು ತಡಬಡಾಯಿಸುತ್ತಾ ಹೊರಗೆ ಬಂದರು.

ಅಲ್ಲಿಂದ ಬಸ್ಸು ಹಿಡಿದು ಕೊನೆಯ ಮಗಳ ಊರಿಗೆ ಬರುವಷ್ಟರಲ್ಲಿ ಮಾರನೇ ದಿನ ಬೆಳಕು ಹರಿದಿತ್ತು. ಅಂತೂ 7 ಘಂಟೆ ಹೊತ್ತಿಗೆ ಪ್ರೀತಿಯ ಮನೆಯ ಕದ ತಟ್ಟಿದರು. ಎಂದಿನ ಕುಶಲೋಪರಿ ವಿಚಾರಿಸಿ ಪ್ರೀತಿ ತಂದೆಗೆ ಕಾಫಿ ನೀಡಿದಳು. ಕೊನೆಯ ಅಳಿಯ ವಿವೇಕ್‌ ಬೆಳಗ್ಗೆ ಬೇಗನೇ ಆಫೀಸ್‌ಗೆ ಹೊರಟುಬಿಟ್ಟಿದ್ದ. ಈ ಮಗಳು ತಮಗೆ ನಿರಾಸೆ ಮಾಡಲಾರಳೆಂದೇ ಇವರು ಭಾವಿಸಿದ್ದರು. ವಿವರ ತಿಳಿದ ಮಗಳು ಮೆಲ್ಲಗೆ ಹೇಳಿದಳು, “ಅಪ್ಪ, ನೀವು ಎಷ್ಟು ದಿನಾದರೂ ಇಲ್ಲಿರಬಹುದು….. ಆದರೆ ನೀವು ಇಲ್ಲಿದ್ದರೆ ವಿವೇಕ್‌ ಇಲ್ಲಿರೋದಿಲ್ಲ ಅಷ್ಟೆ.”

ರಾಯರಿಗೆ ಏನೂ ಅರ್ಥವಾಗಲಿಲ್ಲ. “ಯಾಕಮ್ಮ…. ಏನಾಯ್ತು?”

“ಅಪ್ಪ, ಹಿಂದೆ ನಮ್ಮ ಮದುವೆಯ ಸಂದರ್ಭದಲ್ಲಿ ನೀವು ಅವರಿಗೆ ಅವಮಾನ ಮಾಡಿದ್ದನ್ನು ಅವರು ಇನ್ನೂ ಮರೆತಿಲ್ಲ ಬಿಡಿ.”

ಆಗ ರಾಯರಿಗೆ ಹಿಂದಿನ ಘಟನೆ ನೆನಪಾಯಿತು. ಪ್ರೀತಿ ತಾನು ಮೆಚ್ಚಿಕೊಂಡ ಹುಡುಗನನ್ನೇ ಪ್ರೇಮ ವಿವಾಹ ಆಗಿದ್ದಳು. ಅದನ್ನು ರಾಧಾ ಮಾಧವ ರಾಯರು ಮೊದಲಿನಿಂದಲೂ ವಿರೋಧಿಸಿದ್ದರು. ಆದರೂ ಮಗಳ ಹಠವೇ ಗೆದ್ದಿತ್ತು. ತಾನು ಉಪವಾಸ ಕುಳಿತು ತಾಯಿ ತಂದೆಯರನ್ನು ಒಪ್ಪಿಸಿದ್ದಳು. ಮದುವೆ ಮಾಡಿಕೊಟ್ಟ ನಂತರ ಇವರು ಎಂದೂ ಮಗಳ ಮನೆಗೆ ಬಂದಿರಲಿಲ್ಲ, ಅವಳೂ ಸಹ ತವರಿನ ಕಡೆ ತಿರುಗಿ ನೋಡಿರಲಿಲ್ಲ. ಅಂದಿನಿಂದ ಆ ಅಳಿಯನಿಗೆ ಇವರ ಮೇಲೆ ಸಿಟ್ಟಿತ್ತು.

ಎಲ್ಲವನ್ನೂ ಅರ್ಥ ಮಾಡಿಕೊಂಡ ರಾಯರು ನೋವಿನ ನಿಟ್ಟುಸಿರಿಟ್ಟು, “ಸರಿಯಮ್ಮ, ನಾನು ಹೊರಟೆ. ನಾನು ಇಲ್ಲಿದ್ದು ನಿಮ್ಮಿಬ್ಬರ ಮಧ್ಯೆ ಟೆನ್ಶನ್‌ ತಂದಿಡಲು ಬಯಸುವುದಿಲ್ಲ. ಹಿಂದೆ ಒಂದು ಕಾಲವಿತ್ತಮ್ಮ….. ನನ್ನ ನಾಲ್ವರು ಮಕ್ಕಳೂ ತಾಯಿ ತಂದೆಯರನ್ನು ತಮ್ಮ ಬಳಿಯೇ ಇರಿಸಿಕೊಳ್ಳುವುದಾಗಿ ಹಠ ಹಿಡಿಯುತ್ತಿದ್ದರು, ವೃದ್ಧಾಪ್ಯದಲ್ಲಿ ಊರುಗೋಲು ಆಗುತ್ತೇವೆಂದು ಹೇಳುತ್ತಿದ್ದರು. ಆದರೆ ಇಂದು ಆ ನಾಲ್ವರಲ್ಲಿ ಒಬ್ಬರಿಗೂ ಈ ವಯಸ್ಸಾದ ಮುದುಕನನ್ನು ಇರಿಸಿಕೊಳ್ಳಲು ಆಗುತ್ತಿಲ್ಲ….”

ಪ್ರೀತಿ ಈ ಮಾತಿಗೆ ಬಹಳ ದಿನಗಳಿಂದ ತಡೆಹಿಡಿದಿದ್ದ ಉತ್ತರವನ್ನು ನೀಡಿದಳು, “ಅಪ್ಪ, ಮಾತು ಮಾತಿಗೆ ನೀವು ಹೆಣ್ಣುಮಕ್ಕಳ ಮದುವೆಯನ್ನು ಅದ್ಧೂರಿಯಿಂದ ಹಾಗೆ ಮಾಡ್ತೀನಿ ಹೀಗೆ ಮಾಡ್ತೀನಿ ಅಂತೆಲ್ಲ ಹೇಳುತ್ತಿದ್ದಿರಿ. ಆದರೆ ಪ್ರಾಕ್ಟಿಕಲ್ ಆಗಿ ಹಾಗೆಲ್ಲ ಮಾಡಲು ಸಾಧ್ಯವಾಯಿತೇ? ಕಾರಿನಲ್ಲಿ ಮಗಳು, ಅಳಿಯನನ್ನು ಕಳುಹಿಸಿಕೊಡುತ್ತೇನೆ, ದೊಡ್ಡ ಶ್ರೀಮಂತರ ಮನೆಗೆ ಸೊಸೆಯಾಗಿ ಕಳುಹಿಸುತ್ತೇನೆ ಅಂತೆಲ್ಲ ಹೇಳುತ್ತಿದ್ದಿರಿ. ಅದೆಲ್ಲ ಸಾಧ್ಯವಾಯಿತೇನು?

“ನಳಿನಿಗೆ ಮದುವೆ ಮಾಡಿದಾಗ ಎಲ್ಲಕ್ಕೂ ಹೆಚ್ಚಾಗಿ ವರದಕ್ಷಿಣೆ ಕೊಟ್ಟಿರಿ, ಅವಳು ನಿಮ್ಮನ್ನು ಇರಿಸಿಕೊಳ್ಳಲು ಸಾಧ್ಯವಾಯಿತೇ? ಎಲ್ಲ ಹೇಳಿದಷ್ಟು ಸುಲಭವಾಗಿ ನಡೆದುಕೊಳ್ಳಲಾಗದು ಎಂದು ನೀವೇ ತೋರಿಸಿಕೊಟ್ಟಿರಿ. ಬಾಲ್ಯದ ಹುಡುಗಾಟಿಕೆಯ ಸ್ವಭಾವದಲ್ಲಿ ಚಿಕ್ಕ ಮಕ್ಕಳು ಹೇಳಿದ್ದನ್ನೇ ಇಂದು ದೊಡ್ಡದಾಗಿ ತೆಗೆದುಕೊಂಡರೆ ಆಗುತ್ತದೆಯೇ?

“ನನ್ನದೇನೋ ಲವ್ ಮ್ಯಾರೇಜ್‌ ಆಯ್ತು, ಹೇಗೋ ನಿಮ್ಮದು ಬರಿಗೈ ಆಗಿದ್ದರೂ ಖರ್ಚೇನಿಲ್ಲದೆ ಸರಳವಾಗಿ ಮದುವೆ ಆಯ್ತು. ನಿಮ್ಮಿಂದ ವರದಕ್ಷಿಣೆ ಎದುರುನೋಡುತ್ತಿದ್ದರೆ ದೊಡ್ಡಕ್ಕ, ಧಾರಿಣಿಯರ ತರಹ ಯಾವುದೋ ತುಂಬಿದ ಮನೆಗೆ ಸೇರಿಕೊಂಡು ನಾನೂ ದಿನಾ ಕಣ್ಣೀರಿನಲ್ಲಿ ಕೈ ತೊಳೆಯಬೇಕಾಗಿತ್ತು. ಈಗ ಬಂದಿದ್ದೀರಿ ಊಟ ಮುಗಿಸಿಕೊಂಡು ಸಂಜೆ ಹೊರಟುಬಿಡಿ,” ಎಂದು ನಿಷ್ಠೂರವಾಗಿ ಹೇಳಿದಾಗ, ಮಾತನಾಡಲು ಪದಗಳೇ ಇಲ್ಲದಂತೆ ಅವರು ಸುಮ್ಮನಾದರು.

“ನೀನು ಸದಾ ಸೌಭಾಗ್ಯವತಿಯಾಗಿ ಸುಖವಾಗಿರಮ್ಮ,” ಎಂದು ಮಗಳಿಗೆ ಹರಸಿ ಕೂಡಲೇ ಅಲ್ಲಿಂದ ಹೊರಟುಬಿಟ್ಟರು.

ದಾರಿಯಲ್ಲಿ ನಡೆದು ಹೋಗುವಾಗ ಅವರಿಗೆ ಎಲ್ಲಿಗೆ ಹೋಗುವುದೋ ಅರ್ಥವಾಗಲಿಲ್ಲ. ಇಂಥ ದುರ್ದಿನ ಕಾಣಲು ರಾಧಾ ಬದುಕಿಲ್ಲದೇ ಇದ್ದುದ್ದೇ ಒಳ್ಳೆಯದಾಯ್ತೆಂದು ಹೆಂಡತಿಯನ್ನು ನೆನೆದು ಕಂಬನಿ ಮಿಡಿದರು. ತಮ್ಮ ಮುಂದೆ ದೊಡ್ಡ ಅಂಧಕಾರದ ಹಳ್ಳ ಹರಡಿರುವಂತೆ, ಅದರ ಆಳಕ್ಕಿಳಿದ ತಾವು ಅಲ್ಲಿಂದ ಎದ್ದು ಬರಲಾಗದಂತೆ ಚಡಪಡಿಸಿದರು. ಭವಿಷ್ಯ ಹೇಗೋ ಏನೋ ಎಂದು ನಿಟ್ಟುಸಿರಿಟ್ಟರು. ಇಷ್ಟು ದಿನ ತಾವು ಯಾವುದನ್ನು ನಂಬಿಕೊಂಡು ಬದುಕುತ್ತಿದ್ದರೋ ಅದು ಕೈಗೆಟುಕಲಾರದ ಮರೀಚಿಕೆಯಾಯ್ತು ಎಂಬ ವಾಸ್ತವ ಕಟುಸತ್ಯದ ಅರಿವಾಗುತ್ತಿದ್ದಂತೆ ಗಾಬರಿಯಲ್ಲಿ ಅವರಿಗೆ ತಲೆ ಸುತ್ತಿ ಬಂದು ರಸ್ತೆ ಮಧ್ಯೆ ಬಿದ್ದುಬಿಟ್ಟರು.

ಅದನ್ನು ಗಮನಿಸಿದ ಯಾರೋ ಅವರನ್ನು ರಸ್ತೆ ಬದಿ ಮಲಗಿಸಿ, ಮುಖಕ್ಕೆ ನೀರು ಚಿಮುಕಿಸಿದರು. ಸ್ವಲ್ಪ ಹೊತ್ತಿಗೆ ಅವರಿಗೆ ಪ್ರಜ್ಞೆ ಬಂದಾಗ ಯಾರೋ ಕೇಳಿದರು, “ಇದೇನು ಸ್ವಾಮಿ, ವಯಸ್ಸಾದರು ರಸ್ತೆ ಮಧ್ಯೆ ಒಬ್ಬರೇ ಹೀಗೆ ಬಂದುಬಿಟ್ಟಿದ್ದೀರಿ…. ಎಲ್ಲಿಗೆ ಹೋಗಬೇಕು ಹೇಳಿ?”

“ದಯವಿಟ್ಟು ನನ್ನನ್ನು ಹತ್ತಿರದ ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗ್ತೀರಾ?” ರಾಯರನ್ನು ಆಟೋದಲ್ಲಿ ಕೂರಿಸಿಕೊಂಡು ಅವರು ಮುಂದುವರಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ