ಈ ವಯಸ್ಸಿನಲ್ಲಿ ಭಾವನೆಗಳು ಅವಳೊಡನೆ ಈ ರೀತಿ ಕಣ್ಣುಮುಚ್ಚಾಲೆ ಆಡುತ್ತವೆಂದು ಅವಳು ಕನಸಿನಲ್ಲಿಯೂ ಊಹಿಸಿರಲಿಲ್ಲ. ಮುಷ್ಟಿಯೊಳಗಿನಿಂದ ಮರಳು ಸೋರಿ ಹೋಗುವಂತೆ ಅವಳ ಮನಸ್ಸು ಅವಳ ವಶದಿಂದ ಜಾರಿಹೋಗುತ್ತಿದ್ದರೆ, ಅವಳು ಅಸಹಾಯಕಳಂತೆ ನಿಂತು ನೋಡುತ್ತಲೇ ಇದ್ದಾಳೆ. ಅವಳೇಕೆ ಅದನ್ನು ತಡೆಯಬೇಕು? ದೀರ್ಘಕಾಲದ ನಂತರ ಪಂಜರದಲ್ಲಿದ್ದ ಪಕ್ಷಿಗೆ ಸ್ವಚ್ಛಂದವಾಗಿ ವಿಹರಿಸುವ ಅವಕಾಶ ದೊರೆತಿರುವಾಗ, ಅದರ ರೆಕ್ಕೆಗಳನ್ನು ನಿರ್ದಯವಾಗಿ ಕತ್ತರಿಸಿ, ಮತ್ತೆ ಅದನ್ನು ನಿರಾಶೆಯ ರಾಡಿ ಹಾಗೂ ಉಸಿರುಗಟ್ಟಿಸುವ ಜವುಗು ತುಂಬಿದ ಪಂಜರದಲ್ಲಿ ಖೈದು ಮಾಡಲು ಅವಳಿಗೆ ಏನು ಅಧಿಕಾರವಿದೆ? ಇಲ್ಲ, ಇಲ್ಲ ಅವಳೆಂದೂ ಹೀಗೆ ಮಾಡಲಾರಳು. ಅವಳು ಆ ಪಕ್ಷಿಯನ್ನು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡಲು ಬಿಟ್ಟುಬಿಡುತ್ತಾಳೆ. ಮುಂದೆ ಆ ಪಕ್ಷಿ ಹಸಿರು ಮರದ ಆಸರೆಯನ್ನಾದರೂ ಪಡೆಯಲಿ, ಇಲ್ಲ ಮುಳ್ಳು ಪೊದೆಯ ಆಸರೆಯನ್ನಾದರೂ ಪಡೆಯಲಿ…..
ತನಗೆ ಬೇಕಾದಂತೆ ಮನದಲ್ಲೇ ತರ್ಕಿಸುತ್ತಿದ್ದ ಅವಳಿಗೆ ಈಗ ನೆಮ್ಮದಿ ಎನಿಸಿತು. ಮರುಕ್ಷಣವೇ ಅವಳು ಡ್ರೆಸಿಂಗ್ ಟೇಬಲಿನ ಮುಂದೆ ಬಂದು ಕುಳಿತಳು. ಎಷ್ಟೋ ವರ್ಷಗಳ ನಂತರ ಮತ್ತೆ ಶೃಂಗರಿಸಿಕೊಳ್ಳಲು ಅವಳ ಮನ ಹಾತೊರೆಯಿತು. ಅವಳ ಕುಶಲ ಕೈಗಳ ಚಮತ್ಕಾರದಿಂದ ಕೆಲವೇ ಕ್ಷಣಗಳಲ್ಲಿ ಅವಳ ಸೊಬಗಿನ ರೂಪು ಆಕರ್ಷಕವಾಗಿ ಎದ್ದು ಕಾಣಿಸಿತು. ಕನ್ನಡಿಯಲ್ಲಿ ಕಾಣಿಸಿದ ಹೆಣ್ಣಿಗೆ ಅಷ್ಟು ವಯಸ್ಸಾಗಿದೆ ಎಂದು ಯಾರೂ ಹೇಳುವಂತಿರಲಿಲ್ಲ. 38 ವರ್ಷದ ಬದುಕಿನ ತಗ್ಗು ದಿಣ್ಣೆಯ ಹಾದಿಯಲ್ಲಿ ನಡೆಯುತ್ತಾ ಬಸವಳಿದ ಅವಳಿಗೆ ಹದಿಹರೆಯದ ಕಿಶೋರಿಯ ರೆಕ್ಕೆ ಮೂಡಿದಂತೆನಿಸಿತು. ಕಾಲ್ಗೆಜ್ಜೆ ಧರಿಸದಿದ್ದರೂ, ಅವಳು ಕುಣಿಯುವ ಹೆಜ್ಜೆ ಹಾಕುತ್ತಾ ಮನೆಯ ಮುಂದಿನ ತೋಟಕ್ಕೆ ಬಂದು ಮುಡಿದುಕೊಳ್ಳಲು ಹಳದಿ ಗುಲಾಬಿಯ ಒಂದು ಮೊಗ್ಗನ್ನು ಕಿತ್ತಳು. ಅದನ್ನೆತ್ತಿ ತನ್ನ ಜಡೆಗೆ ಸಿಕ್ಕಿಸಿಕೊಳ್ಳುವಷ್ಟರಲ್ಲಿ ಬಲಿಷ್ಠ ಹಸ್ತವೊಂದು ಅವಳ ಕೆಲಸವನ್ನು ಪೂರೈಸಿತು.
“ಓಹ್…..ನೀವಾ….” ಮಾನಸಿ ಹಿಂದಿರುಗಿ ನೋಡಿದಳು.
ಸುಧಾಕರ್ ಕಣ್ಣುಗಳಲ್ಲಿ ಮೆಚ್ಚುಗೆ ತುಂಬಿಕೊಂಡು, ತುಟಿಗಳ ಮೇಲೆ ತುಂಟ ನಗೆ ಹರಿಸುತ್ತಾ ಅವಳನ್ನು ನೋಡುತ್ತಿದ್ದ. ಅವಳಿಗೆ ನಾಚಿಕೆಯಾಯಿತು. ಕೋಣೆಯಲ್ಲಿ ಕೂಡಿ ಹಾಕಿದ ಹಠಮಾರಿ ಹುಡುಗಿಯಂತೆ ಅವಳ ಹೃದಯ ಜೋರಾಗಿ ಡವಗುಟ್ಟತೊಡಗಿತು. ಅದು ಸುಧಾಕರನಿಗೇನಾದರೂ ಕೇಳಿಸೀತೆಂದು ಹೆದರಿದ ಅವಳು, “ಬನ್ನಿ, ಒಳಗೆ ಹೋಗೋಣ,” ಎಂದು ಕರೆದಳು.
“ಈಗ ಕುಳಿತುಕೊಳ್ಳುಷ್ಟು ಸಮಯವಿಲ್ಲ. ಆಹ್ವಾನಿತರೆಲ್ಲ ಬರತೊಡಗಿದ್ದಾರೆ. ಹೇಗೋ ಮಾಡಿ ನಿಮ್ಮನ್ನು ಕರ್ಕೊಂಡು ಹೋಗಲು ಬಂದೆ,” ಸುಧಾಕರ್ ಬಲಗೈಗೆ ಕಟ್ಟಿದ್ದ ಬಂಗಾರದ ಗಡಿಯಾರದತ್ತ ಕಣ್ಣು ಹಾಯಿಸಿ ಹೇಳಿದ.
“ಸರಿ ಹಾಗಾದರೆ, ನೀವು ಕಾರು ಸ್ಟಾರ್ಟ್ ಮಾಡಿ ನಾನು ಇದೀಗ ಬಂದೆ,” ಎನ್ನುತ್ತಾ ಅವಳು ಆತುರದಿಂದ ಒಳಹೊಕ್ಕಳು. ಮುಂಬಾಗಿಲಿಗೆ ಬೀಗ ಹಾಕುವಾಗ ಅಕ್ಕಪಕ್ಕದ ಮನೆಗಳ ಜನರು ವ್ಯಂಗ್ಯದ ನಗೆ ಬೀರುತ್ತಾ ತನ್ನೆಡೆಗೆ ಇಣುಕಿ ನೋಡುತ್ತಿದ್ದಾರೆಂದು ಅವಳಿಗೆ ಭಾಸವಾಯಿತು.
ವೇಗಾಗಿ ಚಲಿಸುತ್ತಿದ್ದ ಕಾರಿನಲ್ಲಿ ಸುಧಾಕರನ ಪಕ್ಕ ಕುಳಿತಿದ್ದ ಮಾನಸಿಯನ್ನು, ಅವರ ಆ ವ್ಯಂಗ್ಯದ ಮೊನಚು ಬಾಣ ಚುಚ್ಚಿ ನೋಯಿಸಿತು. ಅವಳು ಮಾಡುತ್ತಿರುವ ಕೆಲಸ ಸರಿಯಾದುದೇ? ಗಂಡ ಇಲ್ಲದಿರುವಾಗ, ಪರಪುರುಷನೊಡನೆ ಹೀಗೆ ಹೋಗುವುದು ಉಚಿತವೇ? ಹದಿಹರೆಯದ ಇಬ್ಬರು ಮಕ್ಕಳ ತಾಯಿಯಾಗಿ ಅವಳೇಕೆ ಹೀಗೆ ವಿದ್ರೋಹ ಮಾಡಲು ಹೊರಟಿದ್ದಾಳೆ? ವರ್ಷಗಳಿಂದ ಕಲ್ಲಾಗಿದ್ದ ಮನಸ್ಸಿನಲ್ಲಿ ಇದ್ದಕ್ಕಿದ್ದಂತೆ ಕಾರಂಜಿ ಪುಟಿದೆದ್ದಿದೆಯೇ? ಗಂಡನಲ್ಲದ ಪುರುಷನ ಬಗ್ಗೆ ಅನುರಾಗ ಏಕೆ ಮೊಳೆಯುತ್ತಿದೆ? `ಗಾಡಿ ನಿಲ್ಲಿಸಿ, ನಾನು ನಿಮ್ಮ ಜೊತೆ ಎಲ್ಲಿಗೂ ಬರುವುದಿಲ್ಲ,’ ಎಂದು ಕೂಗಿ ಹೇಳಬೇಕೆಂದು ಅವಳು ಪಕ್ಕಕ್ಕೆ ತಿರುಗಿದಳು. ಆದರೆ ಸುಧಾಕರನನ್ನು ನೋಡುತ್ತಲೇ ಅವಳ ಮನಸ್ಸಿನ ಕೋಲಾಹಲ ಕೂಡಲೇ ಮರೆಯಾಯಿತು.
“ಏನು ಯೋಚನೆಯಲ್ಲಿ ಮುಳುಗಿದ್ದೀರಿ?” ಕಾರು ನಿಲ್ಲಿಸಿ ಸುಧಾಕರ್ ಪ್ರಶ್ನಿಸಿದಾಗ, ಅವಳು ಬೆಚ್ಚಿಬಿದ್ದಳು, “ಇಲ್ಲವಲ್ಲ…..” ಮಾನಸಿಯ ತುಟಿಗಳ ಮೇಲಿನ ಮುಗುಳ್ನಗೆ ಅವಳು ಉಟ್ಟಿದ್ದ ಸೀರೆಗಿಂತ ಹೆಚ್ಚು ಮೋಹಕವಾಗಿತ್ತು.
“ಆಹಾ! ಮನೆಯಿಂದ ಹೊರಟಾಗಿನಿಂದಲೂ ನಿಮ್ಮದೇ ಯೋಚನೆಯಲ್ಲಿ ಮುಳುಗಿದ್ದೀರಿ. ಈ ಗುಲಾಮ ನಿಮ್ಮ ಜೊತೆ ಇದ್ದಾನೆ ಅನ್ನೋದನ್ನೂ ಮರೆತಿದ್ದೀರಿ,” ಸುಧಾಕರ್ ಕಾರಿನಿಂದಿಳಿದು ಬಂದು, ಮಾನಸಿಯ ಕಡೆಯ ಬಾಗಿಲು ತೆರೆದು ಅವಳ ಕೈ ಹಿಡಿದು ಕೆಳಗಿಳಿಸಿದ.
“ಹಾಗೇನಿಲ್ಲ. ಮೊದಲನೆ ಬಾರಿ ಮಕ್ಕಳನ್ನು ಬಿಟ್ಟಿದ್ದೀನಲ್ಲ, ಅದಕ್ಕೇ ಅವರ ನೆನಪಾಯಿತು ಅಷ್ಟೇ,” ಆದರೆ ಮಾನಸಿ ಸುಳ್ಳು ಪೋಣಿಸಿ ಹೇಳುವುದು ಸುಧಾಕರನ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸಿತು. ಅವನು ಅವಳ ತೋಳು ಹಿಡಿದು, ಮನೆಯ ಮುಂದಿನ ದೀಪದ ಬೆಳಕಿನಲ್ಲಿ ಅವಳ ಕಣ್ಣುಗಳಲ್ಲಿ ಇಣುಕಿ, “ಇಲ್ಲಿಗೆ ಬಂದಿದ್ದು ನಿಮಗೆ ಇಷ್ಟವಾಗಲಿಲ್ಲವೇ?” ಎಂದು ಗಂಭೀರ ಸ್ವರದಲ್ಲಿ ಕೇಳಿದ.
“ನಾನು ಬಂದಿದ್ದು ನಿಮಗೆ ಇಷ್ಟವಾಗಲಿಲ್ಲಾಂತ ಕಾಣುತ್ತೆ. ಅದಕ್ಕೇ ಇಷ್ಟು ಹೊತ್ತು ಹೊರಗೇ ನಿಲ್ಲಿಸಿ ಮಾತಾಡ್ತಿದ್ದೀರ. ಒಳಗೆ ಹೋಗಿ ಇಲ್ಲಾಂದ್ರೆ ಬಂದವರೆಲ್ರೂ ನನ್ನನ್ನೇ ಬೈತಾರೆ ಅಷ್ಟೆ,” ಮಾನಸಿ ತನ್ನ ಮನಸ್ಸಿನ ಆಂದೋಲನನ್ನು ಹತ್ತಿಕ್ಕುತ್ತಾ, ಗೆಲುವು ತುಂಬಿದ ದನಿಯಲ್ಲಿ ಹೇಳಿದಳು. ಇಬ್ಬರೂ ಜೋರಾಗಿ ನಕ್ಕು ಒಳಹೊಕ್ಕರು.
ಸುಧಾಕರ್ ಹೊಸ ವರ್ಷದ ಮುನ್ನಾ ದಿನದಂದು ತನ್ನ ಸ್ನೇಹಿತರನ್ನೆಲ್ಲಾ ಪಾರ್ಟಿಗೆ ಕರೆದಿದ್ದ. ಮನೆಯನ್ನು ಬಣ್ಣ ಬಣ್ಣದ ದೀಪಗಳಿಂದ, ಸುಗಂಧ ಬೀರುವ ಹೂಗಳಿಂದ ಅಲಂಕರಿಸಲಾಗಿತ್ತು. ವಿದೇಶಿ ಸಂಗೀತ ಅಲೆ ಅಲೆಯಾಗಿ ತೇಲಿ ಬರುತ್ತಿತ್ತು. ವಾತಾವರಣದಲ್ಲಿ ಒಂದು ರೀತಿಯ ಮಾದಕತೆ ತುಂಬಿತ್ತು.
“ಇವರು ಕ್ಯಾಪ್ಟನ್ ಜಯರಾಜ್, ಮಿಸೆಸ್ ಜಯರಾಜ್, ಇವರು ನನ್ನ ಗೆಳತಿ ಮಾನಸಿ. ಹಲೋ ಡಾ. ದಯಾನಂದ್, ನಿಮ್ಮ ಶ್ರೀಮತಿಯರೆಲ್ಲಿ? ಹಾಂ…. ನಮಸ್ಕಾರ, ಇವರು ಮಿಸ್ಟರ್ ಭಾಸ್ಕರ್ ಮತ್ತು ಮಿಸೆಸ್ ಭಾಸ್ಕರ್….” ಅಲ್ಲಿಗೆ ಗಂಡ ಹೆಂಡತಿ ಜೊತೆ ಜೊತೆಯಾಗಿಯೇ ಬಂದಿದ್ದರು. ಮಾನಸಿಗೆ ಇದ್ದಕ್ಕಿದ್ದಂತೆ ಒಂಟಿತನ ಕಾಡಿದಂತಾಯಿತು. ಆ ಜನಜಂಗುಳಿಯಲ್ಲಿ ಅವಳಿಗೆ ಉಸಿರು ಕಟ್ಟಿದಂತಾಯಿತು. ತನ್ನ ಸ್ನೇಹಿತರ ಪರಿಚಯ ಮಾಡಿಸುತ್ತಿದ್ದ ಸುಧಾಕರನ ಮುಷ್ಟಿಯಿಂದ ತನ್ನ ಕೈಯನ್ನು ಎಳೆದು ಬಿಡಿಸಿಕೊಂಡಳು.
“ಸುಧಾಕರ್….. ನೀವು ಅವರನ್ನು ಮಾತನಾಡಿಸುತ್ತಿರಿ. ನಾನು ಇದೀಗ ಬಂದೆ….” ಅವಳು ಮೆಲ್ಲನೆ ಅವನಿಗೆ ಮಾತ್ರಾ ಕೇಳಿಸುವಂತೆ ಪಿಸುಗುಟ್ಟಿದಳು.
“ಯಾಕೆ? ಏನಾಯಿತು? ಹುಷಾರಾಗಿದ್ದೀರಲ್ಲ….?” ಗುಲಾಬಿಯಂತಿದ್ದ ಅವಳ ಮುಖ ಹತ್ತಿಯಂತೆ ಬಿಳಿಚಿಕೊಂಡಿದ್ದನ್ನು ನೋಡಿ ಸುಧಾಕರ್ ಆತಂಕಗೊಂಡ.
“ಅಯ್ಯೋ…. ಅದೇನಿಲ್ಲ. ಸ್ವಲ್ಪ ಹೊತ್ತು ತೋಟದಲ್ಲಿದ್ದು ಬರ್ತೀನಿ,” ತನ್ನ ಒಣಗಿಹೋದ ತುಟಿಗಳನ್ನು ನಾಲಿಗೆಯಿಂದ ಒಮ್ಮೆ ಸರಿಕೊಳ್ಳುತ್ತಾ ಮಾನಸಿ ಹೇಳಿದಳು.
“ನಡೀರಿ, ನಾನೂ ನಿಮ್ಮ ಜೊತೆ ಬರ್ತೀನಿ,” ಸುಧಾಕರನ ಬಿಸಿ ಅಂಗೈಯ ಕಾವು ತಗುಲುವ ಭಯದಿಂದಲೇ ಮಾನಸಿಯ ಕೈ ಕೊರೆಯತೊಡಗಿತು.
“ಸುಧಾಕರ್, ಪ್ಲೀಸ್! ನೀವು ಅತಿಥಿಗಳನ್ನು ಸತ್ಕರಿಸುತ್ತಿರಿ. ನಾನು 2 ನಿಮಿಷದಲ್ಲೇ ಬಂದೆ,” ಕಣ್ಣುಗಳಲ್ಲಿ ಯಾಚನೆ ತುಂಬಿ, ಅವನತ್ತ ನೋಡಿದ ಮಾನಸಿ ವೇಗವಾಗಿ ಹೊರಗೆ ಬಂದುಬಿಟ್ಟಳು. ಅದನ್ನು ಅರ್ಥ ಮಾಡಿಕೊಂಡ ಸುಧಾಕರ್ ಅವಳನ್ನು ಹಿಂಬಾಲಿಸುವ ಗೋಜಿಗೆ ಹೋಗಲಿಲ್ಲ.
ಹೊರಗಿನ ಕೊರೆಯುವ ಗಾಳಿಯಿಂದ ಮಾನಸಿಗೆ ನಡುಕವೇ ಉಂಟಾಯಿತು. ಅವಳು ಸೀರೆಯ ಸೆರಗನ್ನು ಮೈತುಂಬಾ ಹೊದ್ದುಕೊಂಡಳು. ಒಳಗಿನ ಉಸಿರುಗಟ್ಟಿಸುವ ವಾತಾವರಣಕ್ಕಿಂತ ಹೊರಗಿನ ಚಳಿ ಅವಳಿಗೆ ಹಿತವೆನಿಸಿತು. ಪೋರ್ಟಿಕೊ ಮತ್ತು ಮನೆಯ ಹೊರಗೆ ಎಷ್ಟೋ ಕಾರು, ಸ್ಕೂಟರ್‌ಗಳು ನಿಂತಿದ್ದರೂ, ಅಲ್ಲಿ ನಿಶ್ಶಬ್ದ ನೆಲೆಸಿತ್ತು. ಮಾನಸಿಗೆ ಈಗ ಇಂಥ ಪ್ರಶಾಂತ ಏಕಾಂತವೇ ಬೇಕಿತ್ತು.
ಕಾಂಪೌಂಡಿನ ಉದ್ದಕ್ಕೂ ಕೊಂಚ ಕೊಂಚ ದೂರದಲ್ಲಿ ನಿಂತಿದ್ದ ಅಶೋಕ ಮರಗಳು ರಾತ್ರಿಯ ಬೆಳಕಿನಲ್ಲಿ ತೊನೆದಾಡುವುದು ಕಾಣುತ್ತಿತ್ತು. ಮಾನಸಿಗೆ ತನ್ನ ಅಸ್ತಿತ್ವ ಈ ಅಶೋಕ ಮರಗಳಂತೆಯೇ ಎಂದು ಭಾಸವಾಯಿತು. ಅವಳ ಗೃಹಸ್ಥ ಜೀವನ ಗಂಡನ ಜೊತೆ ಗಾಳಿಯಷ್ಟು ವೇಗವಾಗಿ ಹರಿದುಹೋಗುತ್ತಿತ್ತು. ಇಷ್ಟು ದಿನ ಆ ಚಲನೆಗೆ ಯಾವುದೇ ಅಡ್ಡಿಯೂ ಎದುರಾಗಿರಲಿಲ್ಲ. ತನ್ನ ಸ್ವಂತದ ಇಷ್ಟಕಷ್ಟಗಳಿಗೆ ಅವಳು ವಿಶೇಷ ಗಮನಕೊಟ್ಟಿರಲಿಲ್ಲ.
ಮದುವೆಗೆ ಮುಂಚೆ ಹರೆಯದ ಆಸೆ ಆಕಾಂಕ್ಷೆಗಳಿಂದ ತುಂಬಿದ್ದ ಮರ, 20 ವರ್ಷಗಳ ವೈವಾಹಿಕ ಜೀವನದಲ್ಲಿ ಪ್ರೀತಿ, ಸ್ನೇಹ, ಆತ್ಮೀಯತೆಗಳ ನೀರು, ಗೊಬ್ಬರಗಳಿಲ್ಲದೆ ಒಣಗಿ ಕಡ್ಡಿಯಾಗುತ್ತಾ ಕೋಮಲವಾದ ಕಲ್ಪನೆಗಳ ಸುಂದರ ಲತೆಯನ್ನು ಜಾಲಿಯ ಮರಕ್ಕೆ ಹಬ್ಬಿಸಲಾಗಿತ್ತು. ಅಲ್ಲಿ ದೈಹಿಕ ಅಗತ್ಯಗಳಿಗೆ ಮಾತ್ರ ಸ್ಥಾನವಿತ್ತು. ಮಾನಸಿಕ ಸ್ಪಂದನೆಗಳಿಗೆ, ಭಾವುಕತೆಗೆ, ಸಂವೇದನೆಗಳಿಗೆ ಕಾಸಿನ ಬೆಲೆಯೂ ಇರಲಿಲ್ಲ. ಆ ಸಂವೇದನೆಗಳಿಲ್ಲದ ಪುರುಷನೊಡನೆ ಬಾಳುತ್ತಾ, ಅವಳ ಮನಸ್ಸು ನಿರ್ಜೀವವಾಗಿಬಿಟ್ಟಿತ್ತು. ಹರೆಯದ ಹೃದಯ ರೂಪಿಸಿಕೊಂಡಿದ್ದ ಬದುಕಿನ ಜೊತೆಗಾರನ ಸುಮಧುರ ಕಲ್ಪನೆಗಳು ವಾಸ್ತವಿಕತೆಯ ಜ್ವಾಲೆಗೆ ಸಿಕ್ಕಿ ಕರಕಲಾಗಿದ್ದ. ಈಗಂತೂ ಅವಳು ತನ್ನ 17 ವರ್ಷದ ಮಗಳು ಪೂಜಾ ಮತ್ತು 15 ವರ್ಷದ ಮಗ ಪ್ರವೀಣ್‌ರನ್ನೇ ತನ್ನೆಲ್ಲ ಆಸೆ ಆಕಾಂಕ್ಷೆಗಳ ಕೇಂದ್ರವನ್ನಾಗಿ ಮಾಡಿಕೊಂಡಿದ್ದಳು.
ಮಕ್ಕಳ ನೆನಪಾಗುತ್ತಲೇ ಅವಳಿಗೆ ದುಃಖ ಉಕ್ಕಿ ಬಂದಿತು. ಜೀವನದಲ್ಲಿ ಮೊದಲ ಬಾರಿಗೆ ಅವಳು ಅವರಿಂದ ದೂರವಾಗಿದ್ದಳು. ಅವಳ ತಂಗಿ ಎಷ್ಟೋ ವರ್ಷಗಳಿಂದ ಮಕ್ಕಳನ್ನು ಹೈದರಾಬಾದಿಗೆ ಕಳಿಸುವಂತೆ ಕೇಳುತ್ತಿದ್ದಳು. ಆದರೆ ಈ ಬಾರಿ ಅವಳು ತಾನೇ ಬಂದು ಶಾಲಾ ಕಾಲೇಜುಗಳಿಗೆ ರಜೆಯಿದ್ದ ಕಾರಣ, ಮಕ್ಕಳನ್ನು ತನ್ನೊಡನೆ ಕರೆದೊಯ್ದಿದ್ದಳು. ಅವಳು ಮಾನಸಿಯನ್ನೂ ತನ್ನೊಡನೆ ಬರುವಂತೆ ಆಹ್ವಾನಿಸಿದ್ದಳು. ಆದರೆ ಗಂಡನಿಗೆ ಕಷ್ಟವಾಗುತ್ತದೆಂದು ಮಾನಸಿ ಹೋಗಿರಲಿಲ್ಲ.
ಮಕ್ಕಳು ಊರಿಗೆ ಹೋದಾಗ ಸುಧಾಕರನನ್ನು ಕಾಣುವ ಆಸೆಯನ್ನು ಹತ್ತಿಕ್ಕಲು ಅವಳಿಂದ ಆಗಿರಲಿಲ್ಲ. ಸುಧಾಕರನ ನೆನಪಾಗುತ್ತಲೇ ತಾವಾಗಿ ನಗೆಯಿಂದ ಬಿರಿದಿದ್ದ ಅವಳ ಚೆಂದುಟಿಗಳು ಮತ್ತೆ ಮುದುಡಿಕೊಂಡವು. ಇಷ್ಟು ವರ್ಷಗಳ ನಂತರ ಅವಳ ಹೃದಯ ಬರಿದಾಗಿಯೇ ಇತ್ತು. ಈಗ ಸುಧಾಕರ್ ನೇರವಾಗಿ ಅಲ್ಲಿಗೇ ಹೋಗಿ ನೆಲೆಸಿಬಿಟ್ಟಿದ್ದ. ತನಗೆ ಮಾತನಾಡಲೂ ಬರುತ್ತದೆ ಎಂಬುದನ್ನೇ ಮರೆತುಬಿಟ್ಟಿದ್ದ ಮನಸ್ಸು ಮತ್ತೊಮ್ಮೆ ಕಲಕಲ ಮಾತನಾಡತೊಡಗಿತ್ತು. ಹಿಂದಿರುಗಿ ಬಣ್ಣ ಬಣ್ಣದ ದೀಪಗಳಿಂದ ಮಿನುಗುತ್ತಿದ್ದ ಮನೆಯನ್ನು ನೋಡಿದಾಗ, ಮಾನಸಿಗೆ ತಾನು ಈ ಮನೆಯಲ್ಲಿ ಮೊದಲ ಬಾರಿಗೆ ಕಾಲಿಟ್ಟ ದಿನ ನೆನಪಾಯಿತು.
ಜಯನಗರದ ನಾದಿನಿಯ ಮನೆಯಿಂದ ಅವಳು ಹಿಂದಿರುಗಿ ಬರುತ್ತಿದ್ದಳು. ಆಟೋದವನು ಕುಡಿದಿದ್ದನೋ ಅಥವಾ ತನ್ನ ಹೆಂಡತಿಯ ಕನಸು ಕಾಣುತ್ತಿದ್ದನೋ, ಅಕ್ಕಪಕ್ಕ ನೋಡದೆ ಆಟೋ ನಡೆಸುತ್ತಿದ್ದ. ಅವಳಿಗೆ ಭಯವಾಗಿತ್ತು. ಕೊನೆಗೂ ಅವಳು ನೆನಿಸಿದಂತೆಯೇ ಆಟೋ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಕಾರು ಚಾಲಕನ ನೈಪುಣ್ಯತೆಯಿಂದ ಯಾರಿಗೂ ಏನೂ ಪ್ರಾಣಾಪಾಯ ಉಂಟಾಗಲಿಲ್ಲ. ಆದರೆ ಕೆಳಗೆ ಇದ್ದ ಮಾನಸಿಯ ಕಾಲಿಗೆ ಪೆಟ್ಟಾಗಿ, ಅದು ಕ್ಷಣದಲ್ಲೇ ದಪ್ಪಗೆ ಊದಿಕೊಂಡಿತ್ತು. ಗಾಯ ಆಗಿ ರಕ್ತ ಸುರಿಯುತ್ತಿತ್ತು.
ಕಾರಿನ ಚಾಲಕ ಸಹೃದಯಿ. ಕಾರಿನಿಂದ ಇಳಿದು ಅವಳ ಬಳಿ ಬಂದು, “ಐ ಆಮ್ ಸಾರಿ…. ನಾನೆಷ್ಟೇ ಪ್ರಯತ್ನಿಸಿದರೂ ಅಪಘಾತ ತಪ್ಪಿಸಲು ಸಾಧ್ಯವಾಗಲಿಲ್ಲ,” ಎಂದ.
“ಛೇ! ಇದರಲ್ಲಿ ನಿಮ್ಮದೇನು ತಪ್ಪು? ಆಟೋ ಡ್ರೈವರ್ ಬಹಳ ವೇಗವಾಗಿ….” ಮಾನಸಿಯ ಮುಖ ನೋವಿನಿಂದ ವಿವರ್ಣಗೊಂಡಿತು.
“ಬನ್ನಿ….. ಯಾರಾದರೂ ಡಾಕ್ಟರ್ ಹತ್ತಿರ ನಿಮ್ಮ ಕಾಲಿಗೆ ಔಷಧಿ ಹಾಕಿಸುತ್ತೇನೆ,” ಅವನು ಮಾನಸಿಯ ಕೈ ಹಿಡಿದು ಎಬ್ಬಿಸಲು ನೋಡಿದ.
“ನಾನೇ ಹೋಗುತ್ತೇನೆ…. ಅಯ್ಯೋ….” ಮಾನಸಿಗೆ ನೋವು ತಾಳಲಾಗಲಿಲ್ಲ.
“ನೀವು ಒಬ್ಬರೇ ಹೋಗುವ ಸ್ಥಿತಿಯಲ್ಲ ಇಲ್ಲ, ಸಂಕೋಚ ಪಟ್ಟುಕೊಳ್ಳಬೇಡಿ. ಹೆದರಬೇಡಿ, ನಾನೇನೂ ಪುಂಡನಲ್ಲ,” ಮಾನಸಿಯ ಕಾಲಿನ ಗಾಯಕ್ಕೆ ತನ್ನ ಬಿಳಿಯ ಕರ್ಚೀಫನ್ನು ಕಟ್ಟಿ, ಕೊನೆಯ ಮಾತನ್ನು ತುಂಟನಂತೆ ಮೆಲ್ಲನೆಯ ದನಿಯಲ್ಲಿ ಹೇಳಿದ.
ತನ್ನ ಅಸಹಾಯಕ ಸ್ಥಿತಿ ಮತ್ತು ಸುತ್ತ ಜನ ನೆರೆಯುತ್ತಿರುವುದನ್ನು ಕಂಡು ಮಾನಸಿ ಅವನೊಡನೆ ಹೋಗುವುದೇ ಒಳ್ಳೆಯದೆಂದು ನಿರ್ಧರಿಸಿದಳು. ಕಾರಿನ ಹಿಂದಿನ ಸೀಟಿನಲ್ಲಿ ಒರಗಿ ಕುಳಿತು, ಹೆಚ್ಚುತ್ತಲೇ ಇದ್ದ ನೋವಿನಿಂದ ಕಣ್ಣು ಮುಚ್ಚಿದಳು. ಅವಳಿಗೆ ಎಚ್ಚರವಾದಾಗ, ಒಂದು ದೊಡ್ಡ ಸುಸಜ್ಜಿತ ಕೋಣೆಯಲ್ಲಿ ಮೃದುವಾದ ಹಾಸಿಗೆಯ ಮೇಲೆ ಮಲಗಿದ್ದಳು. ಅವಳ ಕಾಲಿನ ಬಳಿ ನಿಂತಿದ್ದ ಆ ಕಾರಿನ ಚಾಲಕ ತಣ್ಣೀರಿನ ಪಟ್ಟಿಯನ್ನು ಕಾಲಿಗೆ ಸುತ್ತುತ್ತಿದ್ದ. ಎಚ್ಚರವಾದೊಡನೆ ಅವಳಿಗೆ ನೋವು ಮರುಕಳಿಸಿತು. ಅವಳ ಆರ್ತನಾದ ಕೇಳಿ ಅವನು ಅವಳ ಸನಿಹಕ್ಕೆ ಬಂದ.
“ತುಂಬಾ ನೋವಿದೆಯೇ?” ಆತ್ಮೀಯತೆ ವ್ಯಕ್ತಪಡಿಸುವ ಪುರುಷ ಧ್ವನಿಯನ್ನು ಮಾನಸಿ ಮರೆತು ವರ್ಷಗಳೇ ಉಳಿದಿದ್ದವು. ತನ್ನ ಬಗ್ಗೆ ಕಾಳಜಿ ವಹಿಸಿದ್ದ ವ್ಯಕ್ತಿಯ ಚಿಂತೆಯಿಂದ ತುಂಬಿದ ದನಿ ಕೇಳಿ ಅವಳು ರೋಮಾಂಚಿತಳಾದಳು. ಅವಳ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿತು. ಆ ವ್ಯಕ್ತಿ ತಟ್ಟನೆ ಮೇಜಿನ ಬಳಿಗೆ ಹೋಗಿ ಒಂದು ಮಾತ್ರೆ ಹಾಗೂ ನೀರು ತುಂಬಿದ ಲೋಟ ಹಿಡಿದು ಬಂದ. ಅದನ್ನು ಅವಳಿಗೆ ಕೊಡುತ್ತಾ, “ಈ ಮಾತ್ರೆ ತಗೊಳ್ಳಿ. ನೋವು ಕಡಿಮೆಯಾಗುತ್ತೆ,” ಎಂದ.
ಮಾನಸಿ ಕಣ್ಣು ತೆರೆದು ಆ ವಿಶಾಲ ಕೋಣೆಯನ್ನೂ, ಅದರ ಒಡೆಯನನ್ನೂ ನೋಡುತ್ತಿದ್ದಳು. ಆ ವ್ಯಕ್ತಿ ಸುಸಂಸ್ಕೃತ, ಸೌಂದರ್ಯ ಪ್ರಿಯನೆಂಬುದನ್ನು ಆ ಕೋಣೆಯ ಅಲಂಕಾರವೇ ಸಾರುತ್ತಿತ್ತು. ಎದುರಿಗಿದ್ದ 42-45 ವಯಸ್ಸಿನ ವ್ಯಕ್ತಿ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ.
ಆದರೆ ಯಾರೋ ಅಪರಿಚಿತನ ಮನೆಯಲ್ಲಿ ಏಕಾಂಗಿಯಾಗಿ ಕಾಲಿಗೆ ಪೆಟ್ಟು ಮಾಡಿಕೊಂಡು ಮಲಗಿದ್ದ ಮಾನಸಿಯ ಮನೋಪಟಲದಲ್ಲಿ ಎಲ್ಲಿಯೋ ಓದಿ, ಕೇಳಿದ ಘಟನೆಗಳು ಮೂಡಿದವು. ಎದುರು ನಿಂತಿದ್ದ ಆತ ಅವುಗಳನ್ನು ತಕ್ಷಣ ಗುರುತಿಸಿ ಆಶ್ವಾಸನೆ ತುಂಬಿದ ಗಂಭೀರ ಧ್ವನಿಯಲ್ಲಿ “ಹೆದರಬೇಡಿ, ಇದು ನನ್ನ ಮನೆ. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಯಾವ ಡಾಕ್ಟರ್ ಶಾಪೂ ತೆಗೆದಿರೋಲ್ಲ. ನಿಮ್ಮ ಕಾಲಿನಿಂದ ಹರಿಯುತ್ತಿದ್ದ ರಕ್ತ ನಿಲ್ಲಿಸಲು ಇಲ್ಲಿಗೆ ಕರೆತರವುದು ಒಳ್ಳೆಯದೆಂದು ತೋರಿತು,” ಎಂದ.
ಒಂದು ಕ್ಷಣ ನಿಲ್ಲಿಸಿ ಮತ್ತೆ, “ನನ್ನ ಹೆಸರು ಸುಧಾಕರ್. ಶ್ರೀಮತಿ ನರ್ಸಿಂಗ್ ಹೋಮ್ ನಲ್ಲಿ ಡಾಕ್ಟರ್ ಆಗಿದ್ದೀನಿ. ಒಂದು ಕ್ಲಿನಿಕ್ ಬೇರೆ ಇದೆ,” ಎಂದ.
ಅವನ ಕೊನೆಯ ಮಾತು ಕೇಳಿ ಮಾನಸಿಯ ಅನುಮಾನಗಳೆಲ್ಲ ದೂರವಾದವು. ಅವಳು ಆ ಮಾತ್ರೆ ತೆಗೆದುಕೊಂಡು ನೀರು ಕುಡಿದು ಹೇಳಿದಳು, “ನನ್ನ ಹೆಸರು ಮಾನಸಿ.”
ಸುಧಾಕರ್ ಅವಳ ಕಾಲಿಗೆ ಬ್ಯಾಂಡೇಜ್ ಕಟ್ಟಿದ. ಈಗ ಮಾನಸಿಗೆ ನೋವು ಎಷ್ಟೋ ಕಡಿಮೆಯಾಗಿತ್ತು. ಗೋಡೆಯ ಮೇಲಿದ್ದ ಗಡಿಯಾರ ಮಧುರವಾಗಿ ಸಂಗೀತಮಯ ಸ್ವರ ಹೊರಡಿಸಿದಾಗ ಮಾನಸಿ ಯಾಂತ್ರಿಕವಾಗಿ ಎದ್ದು ಕುಳಿತಳು. 4 ಗಂಟೆ ಆಗಿತ್ತು. ಮಕ್ಕಳು ಮನೆಗೆ ಹಿಂದಿರುಗುವ ಹೊತ್ತಾಗುತ್ತಿತ್ತು. ಮನೆಯ ಬೀಗದ ಕೈ ಅವಳ ಹತ್ತಿರ ಇತ್ತು.
“ಅರೆ, ಇನ್ನೂ ಸ್ವಲ್ಪ ಹೊತ್ತು ಮಲಗಿರಿ,” ಅವಳ ಮುಖದ ಮೇಲೆ ನೋವಿನ ರೇಖೆಗಳನ್ನು ನೋಡಿ ಸುಧಾಕರ್ ಹೇಳಿದ.
“5 ಗಂಟೆಗೆ ಮಕ್ಕಳು ಮನೆಗೆ ಬರ್ತಾರೆ. ಬೀಗದ ಕೈ ನನ್ನ ಹತ್ತಿರವೇ ಇದೆ…. ನಾನು ಹೊರಡಲೇ ಬೇಕು. ನಿಮಗೆ ಬಹಳ ಕಷ್ಟ ಕೊಟ್ಟೆ. ಹೇಗೆ ಧನ್ಯವಾದ ತಿಳಿಸಬೇಕೆಂದೇ ತಿಳಿಯುತ್ತಿಲ್ಲ,” ಅವಳ ಸ್ವರ ಆಯಾಸದಿಂದ ಕೂಡಿತ್ತು.
“ಧನ್ಯವಾದ ಏತಕ್ಕೆ? ಇದು ನನ್ನ ಕರ್ತವ್ಯ. ನಿಮ್ಮನ್ನು ನಾನೇ ಮನೆಗೆ ಕರ್ಕೊಂಡು ಹೋಗ್ತೀನಿ. ಬನ್ನಿ,” ದಾರಿಯಲ್ಲಿ ಒಂದು ಎಕ್ಸ್-ರೇ ಕ್ಲಿನಿಕ್‌ನಲ್ಲಿ ಸುಧಾಕರ್ ಮಾನಸಿಯ ಕಾಲಿನ ಎಕ್ಸ್-ರೇ ತೆಗೆಸಿದ. ಮೂಳೆ ಮುರಿದಿರಲಿಲ್ಲ. ಸಾಧಾರಣ ಪೆಟ್ಟಾಗಿತ್ತು ಅಷ್ಟೆ. ಮಾನಸಿ ಒತ್ತಾಯಿಸಿದರೂ ಸುಧಾಕರ ತಾನೇ ಎಕ್ಸ್-ರೇ ಬಿಲ್ ತೆತ್ತ.
ಮನೆಯ ಬಳಿ ಇಳಿದಾಗ, ಶಿಷ್ಟಾಚಾರಕ್ಕಾಗಿ ಮಾನಸಿ ಅವನನ್ನು ಒಳಗೆ ಬರುವಂತೆ ಆಹ್ವಾನಿಸಿದಳು. `ಇಂದು ಬೇಡ, ಬೇರೆಂದಾದರೂ ಬರುತ್ತೇನೆ,’ ಎಂದು ಹೇಳಿ ಸುಧಾಕರ್ ಕೂಡಲೇ ಹೊರಟುಹೋದ.
ಮಕ್ಕಳಿಗೆ ಮಾನಸಿಯ ಅವಸ್ಥೆ ನೋಡಿ ನೋವಾಗಿದ್ದೇನೋ ನಿಜ. ಆದರೆ ಕೊಂಚ ಹೊತ್ತಿನಲ್ಲೇ ಅವರು ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು. ಅವಳ ಗಂಡ 2-3 ಪ್ರಶ್ನೆಗಳನ್ನು ಕೇಳಿ, ತನ್ನ ಕರ್ತವ್ಯ ಪಾಲಿಸಿದ್ದ.
ಮರುದಿನ ತಾಯಿ ನೋವಿನಿಂದ ಒದ್ದಾಡುವುದನ್ನು ಕಂಡು ಪೂಜಾ ಕಾಲೇಜಿಗೆ ರಜೆ ಹಾಕಿದ್ದಳು. ಆದರೆ ಮಾರನೆಯ ದಿನ ಅವಳಿಗೆ ಟೆಸ್ಟ್ ಇತ್ತು. ತಪ್ಪಿಸಿಕೊಳ್ಳುವಂತಿರಲಿಲ್ಲ. ಕೆಲಸದವಳ ನೆರವಿನಿಂದ ಮಾನಸಿ ಮೇಲೆ ಏಳಲೇ ಬೇಕಾಯಿತು. ಆದರೆ ಅಕಸ್ಮಾತ್ ಕಾಲು ಮಂಚಕ್ಕೆ ತಗುಲಿ, ಕಡಿಮೆಯಾಗುತ್ತಿದ್ದ ನೋವು ದ್ವಿಗುಣಗೊಂಡಿತು. ನೋವು ತಾಳಲಾಗದೆ ಸನಿಹದ ಡಾಕ್ಟರ್ ಬಳಿಗೆ ಹೋಗಲೆಂದು ಮಾನಸಿ ಹೊರಟಳು.
ಗೇಟನ್ನು ತೆರೆಯುತ್ತಲೇ ಸುಧಾಕರನ ಕಾರಿನ ಮೇಲೆ ಅವಳ ದೃಷ್ಟಿ ಹರಿಯಿತು. ಅತ್ತ ಕಡೆ ಎಲ್ಲಿಗೋ ಹೋಗಿದ್ದ ಸುಧಾಕರ್ ಅವಳನ್ನು ನೋಡಿಕೊಂಡು ಹೋಗಲೆಂದು ಆಗತಾನೇ ಬಂದಿದ್ದ.
“ಈಗ ಹೇಗಿದ್ದೀರಿ?” ಕಾರಿನಿಂದ ಇಳಿಯುತ್ತ ಅವಳನ್ನು ನೋಡಿ ಅವನು ಪ್ರಶ್ನಿಸಿದ.“ಕಾಲು ಮಂಚಕ್ಕೆ ತಗುಲಿ ತುಂಬಾ ನೋಯ್ತಾ ಇದೆ. ಅದಕ್ಕೆ ಡಾಕ್ಟರ್ ಹತ್ತಿರ ಹೊರಟಿದ್ದೆ….” ಮಾನಸಿ ನೋಟ ತಗ್ಗಿಸಿ, ಮೆಲ್ಲನೆಯ ಧ್ವನಿಯಲ್ಲಿ ನುಡಿದಳು.
“ಬನ್ನಿ, ನಾನು ಕರೆದುಕೊಂಡು ಹೋಗ್ತೀನಿ,” ಸುಧಾಕರ್ ಅಧಿಕಾರಯುತವಾಗಿ ಹೇಳಿದಾಗ, ಮಾನಸಿಗೆ ನಿರಾಕರಿಸಲು ಸಾಧ್ಯವಾಗಲಿಲ್ಲ.
ಸುಧಾಕರ್ ಅವಳನ್ನು ತನ್ನ ಕ್ಲಿನಿಕ್‌ಗೇ ಕರೆದುಕೊಂಡು ಹೋದ. ಕಾಲಿಗೆ ಮದ್ದು ಸವರಿ, ಬ್ಯಾಂಡೇಜ್ ಕಟ್ಟಿ, ಒಂದು ಇಂಜೆಕ್ಷನ್ ಕೊಟ್ಟ. ನೋವು ಶಮನಗೊಳ್ಳಲು ಮಾತ್ರೆಯನ್ನು ಕೊಟ್ಟ. ರೋಗಿಗಳೆಲ್ಲರನ್ನೂ ನೋಡಿ ಮುಗಿಸಿದ ಮೇಲೆ, ಮಾನಸಿಯನ್ನು ಮನೆಗೆ ಕರೆದುಕೊಂಡು ಹೋಗುವಾಗ, ಸುಧಾಕರ್ ಹೋಟೆಲೊಂದರಲ್ಲಿ ಕಾಫಿ ಕುಡಿಯುವ ಪ್ರಸ್ತಾಪ ಮಾಡಿದ. ಮಾನಸಿಗೆ ನಿರಾಕರಿಸಲು ಆಗಲಿಲ್ಲ. ಹೋಟೆಲ್ ಮೌರ್ಯದ ವಿಶಾಲವಾದ ಹಾಲಿನ ಒಂದು ಮೂಲೆಯ ಟೇಬಲ್ಲಿನ ಮುಂದೆ ಎದುರೆದುರಾಗಿ ಕುಳಿತು ಇಬ್ಬರೂ ಕಾಫಿ ಕುಡಿದರು. 2 ಗಂಟೆ ಅದು ಹೇಗೆ ಕಳೆಯಿತೋ ಮಾನಸಿಗೆ ಗೊತ್ತಾಗಲಿಲ್ಲ. ಸುಧಾಕರ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಅವಳಿಗೆ ಹೇಳುತ್ತಿದ್ದ. ಅವಳು ಮಂತ್ರಮುಗ್ಧಳಂತೆ ಕುಳಿತು ಕೇಳುತ್ತಿದ್ದಳು. ಸುಧಾಕರ್ ಒಬ್ಬಳನ್ನು ಪ್ರೀತಿಸಿ, ಮದುವೆಯಾಗಲೂ ಆಶಿಸಿದ್ದ. ಆದರೆ ಅವಳು ಅವನಿಗೆ ಮೋಸ ಮಾಡಿದ್ದಳು. ಮುಂದೆ ಸುಧಾಕರನಿಗೆ ಮದುವೆಯ ಹೆಸರೆತ್ತಿದರೇ ಮೈ ಉರಿಯುತ್ತಿತ್ತು.
ಕೊನೆಗೆ ಸುಧಾಕರ್ ನಗುತ್ತಾ, “ಮಾನಸಿ, ನಾನು ಸುಮ್ಮನೆ ಬಡಬಡಿಸುತ್ತಾ ಇದ್ದೀನಿ. ನೀವು ಮಾತೇ ಅಡ್ತಿಲ್ಲವಲ್ಲ?” ಎಂದ. ಮೊದಲ ಬಾರಿಗೆ ಸುಧಾಕರ್ ಅವಳ ಹೆಸರು ಹಿಡಿದು ಕರೆದಾಗ, ಮಾನಸಿಯ ಹೃದಯದ ಬೇಗೆ ಆರಿ ತಂಪಾಯಿತು.
“ಮಾನಸೀ…..” ಅವಳ ಹೃದಯವಲ್ಲರಿ ದಿಢೀರನೆ ಹೂಗಳರಲಿ ನಳನಳಿಸಿತು.
“ಬೇಸರವಾಯಿತೇ….? ನಾನು ಹದ್ದು ಮೀರಿ ವರ್ತಿಸಿದೆನೇ?”
“ಇದುವರೆಗೂ ಇಲ್ಲ,” ಎನ್ನುತ್ತ ಮಾನಸಿ ಮುಕ್ತವಾಗಿ ನಕ್ಕುಬಿಟ್ಟಳು.ಇದಾದನಂತರ ಅವರಿಬ್ಬರೂ ಆಗೀಗ ಭೇಟಿ ಆಗುತ್ತಿದ್ದರು. ಮಾನಸಿ ಅವನನ್ನು ಮನೆಗೆ ಕರೆದು ತನ್ನ ಗಂಡ, ಮಕ್ಕಳ ಪರಿಚಯ ಮಾಡಿಕೊಟ್ಟಳು. ಮಕ್ಕಳು ಸುಧಾಕರನ ಅಂತಸ್ತು, ಸ್ನೇಹಶೀಲ ಸ್ವಭಾವದಿಂದ ಪ್ರಭಾವಿತಗೊಂಡರು. ಆದರೆ ಅವಳ ಗಂಡನಿಗೆ ಮಾತ್ರ ಏನೂ ಅನ್ನಿಸಿರಲಿಲ್ಲ. ಆ ಅಪರಿಚಿತನ ಪರಿಚಯ ಮಾಡಿಸುವಾಗ ಅವಳ ಕಣ್ಣುಗಳು ಸ್ನೇಹದಿಂದ ಮಿನುಗಿದರೂ, ಅವಳ ಹೃದಯಹೀನ ಗಂಡನ ಮನಸ್ಸಿನಲ್ಲಿ ಈರ್ಷ್ಯೆ ಮೊಳೆತಿರಲಿಲ್ಲ. ತನ್ನ ಗಂಡನ ಈ ನಡತೆ ಅವನ ವಿಶಾಲ ಹೃದಯದ ಸಂಕೇತವಲ್ಲ. ತನ್ನ ಬಗ್ಗೆ ಅವನ ಮನದಲ್ಲಿನ ಪ್ರೇಮದ ಅಭಾವವೇ ಅದಕ್ಕೆ ಕಾರಣವೆಂದು ಮಾನಸಿಗೆ ತಿಳಿದಿತ್ತು.
ಬದುಕಿನ ಪುಸ್ತಕದ ಮುಚ್ಚಿಟ್ಟ ಪುಟಗಳು ತಾನಾಗಿ ತೆರೆದುಕೊಂಡವು. ಏಕಾಂತದ ಸಮಯ ಸುಧಾಕರನ ನಿರೀಕ್ಷೆಯಿಂದ ರಂಗುರಂಗಾಯಿತು. ಮಾನಸಿಯ ವೈವಾಹಿಕ ಜೀವನದ ನೀರವತೆ ಸುಧಾಕರನ ಅನುಭವವೇ ಕಣ್ಣುಗಳಿಂದ ಮರೆಯಾಗಿರಲಿಲ್ಲ. ಆದರೆ ಅವನೆಂದೂ ಆ ನೋವಿನಿಂದ ಮಿಡಿಯುವ ನಾಡಿಯ ಮೇಲೆ ಕೈ ಇರಿಸಿರಲಿಲ್ಲ.
ಆ ದಿನ ಹೋಟೆಲಿನಲ್ಲಿ ಕಾಫಿ ಕುಡಿಯುವಾಗ, ಸುಧಾಕರ್ ಅವಳ ಕಣ್ಣುಗಳಲ್ಲಿ ಇಣುಕಿ ಕೇಳಿದ್ದ, “ನಿಮ್ಮ ಮೌನ ನೋಡಿದರೆ ಜ್ವಾಲಾಮುಖಿಯನ್ನು ಹೃದಯದಲ್ಲಿ ಅಡಗಿಸಿಕೊಂಡಿರುವಂತೆ ಕಾಣುತ್ತದೆ. ನಿಮ್ಮ ವೇದನೆಯನ್ನೇಕೆ ಹೊರ ಚೆಲ್ಲಬಾರದು? ನಿಮ್ಮ ದುಃಖ ಏನೆಂದು ನನಗೂ ತಿಳಿಸಿ. ನಾನೇನಾದರೂ ಪರಿಹಾರ ಸೂಚಿಸಬಲ್ಲೆ.”
`ಸುಧಾಕರ್, ನಾನು ಯೌವನದ ಹೊಸ್ತಿಲು ಮೆಟ್ಟಿದಾಗ ನಿಮ್ಮ ಪರಿಚಯವಾಗಿದ್ದರೆ ಎಷ್ಟು ಚೆನ್ನಾಗಿತ್ತು! ಈ 20 ಸುದೀರ್ಘ ವರ್ಷಗಳಲ್ಲಿ ನಾನು ಅನುಭವಿಸಿದ ಯಾವ ಯಾತನೆಯ ನೋವನ್ನು ಹಂಚಿಕೊಂಡು ನಿಮ್ಮನ್ನೂ ದುಃಖಿಯನ್ನಾಗಿ ಮಾಡಲಿ? ಗಂಡನ ಮುಂಗೋಪ ಹಾಗೂ ಸ್ವಾರ್ಥವನ್ನು ಬಣ್ಣಿಸಲೇ? ಹೆಂಡತಿಗೆ ಪ್ರವೇಶವಿಲ್ಲದ ಅವನ ಸ್ವಂತದ ವರ್ಣಮಯ ಜಗತ್ತಿನ ಪರಿಚಯ ಮಾಡಿಕೊಡಲೇ?’ ಇದನ್ನೆಲ್ಲ ಹೇಳಬೇಕೆಂದು ಮಾನಸಿಯ ಮನ ತುಡಿಯಿತು. ಆದರೆ ಅವಳು, “ಎಲ್ಲ ರೂಢಿಯಾಗಿ ಹೋಗಿದೆ. ಅದನ್ನು ಈಗ ಹೇಳುವುದೂ ಒಂದೇ, ಬಿಡುವುದೂ ಒಂದೇ.” ಎಂದು ಮಾತು ಹಾರಿಸಿದ್ದಳು.
ಆದರೆ ಸಮಯ ಸರಿದಂತೆ ಅವಳ ಮೌನಕ್ಕೆ ಮಾತು ಬಂದಿತ್ತು. ಅವಳ ಸ್ನೇಹದ ಬೆಸುಗೆ ಬಲಗೊಳ್ಳುತ್ತಾ ಹೋಯಿತು. ಆದರೆ ಈ ಸ್ನೇಹದ ಮರೆಯಲ್ಲಿ ಚಿಗುರತೊಡಗಿದ ಪ್ರೇಮವನ್ನು ಹದಿಹರೆಯದ ಪೂಜಾ ತಕ್ಷಣ ಗಮನಿಸಿದಳು. ಹೈದರಾಬಾದಿಗೆ ಹೋಗುವ ಮೊದಲು ಅವಳು ವಿಚಿತ್ರವಾಗಿ ಮಾತನಾಡಿದ್ದಳು, “ನೀವು ಬರೋದಿಲ್ಲಾಂತ ನನಗೆ ಗೊತ್ತೇ ಇತ್ತು. ಇನ್ನೆರಡು ದಿನ ಬಿಟ್ಟು ಅಪ್ಪಾಜಿ ಟೂರ್ ಹೋಗ್ತಾರೆ. ನಿಮಗೆ ಒಳ್ಳೆ ಏಕಾಂತ ಸಿಗುತ್ತೆ,” ಮಗಳು ತನ್ನ ಕೆನ್ನೆಗೆ ಜೋರಾಗಿ ಬೀಸಿ ಹೊಡೆದಂತೆ ಮಾನಸಿಗೆ ಭಾಸವಾಗಿತ್ತು. ಪೂಜಾಳ ತುಟಿಗಳ ಅಂಚಿನಲ್ಲಿದ್ದ ಕೊಂಕು ನಗೆ ಅವಳ ಕಿವಿಗಳಿಗೆ ಕಾದ ಸೀಸ ಸುರಿದಂತಿತ್ತು. ಮಗಳ ಆಕ್ಷೇಪಣೆಯಿಂದ ಹೃದಯ ಹಿಂಡಿದಂತಾಗಿ ಮಾನಸಿ, “ಹೌದು, ನನಗೂ ಸ್ವಲ್ಪ ಏಕಾಂತ ಬೇಕು. ನಿಮ್ಮೆಲ್ಲರ ಚಾಕರಿ ಮಾಡಿ ನನಗೂ ಬಹಳ ಆಯಾಸವಾಗಿದೆ,” ಎಂದಳು. ಆದರೆ ಮಕ್ಕಳು ಹೊರಟುಹೋದ ಮೇಲೆ ಮಗಳ ಮಾತು ತೀಕ್ಷ್ಣ ಬಾಣದಂತೆ ಅವಳನ್ನು ಪದೇ ಪದೇ ಘಾತಿಸುತ್ತಿತ್ತು.
ತಂದೆ, ತಾಯಿಯ ಬಗ್ಗೆ ತೋರುವ ಉಪೇಕ್ಷೆ ಪೂಜಾಳಿಗೆ ಸ್ವಲ್ಪ ಹಿಡಿಸಿರಲಿಲ್ಲ. ಆದರೆ ಬದುಕಿನಲ್ಲಿ ಬಸವಳಿದು ಹೋಗಿದ್ದ ತಾಯಿಗೆ ಬೇರೆ ಯಾರೋ ಸಾಂತ್ವನದ ಎರಡು ನುಡಿಗಳನ್ನು ಹೇಳುವುದೂ ಅವಳಿಗೆ ಸಹ್ಯವೆನಿಸುತ್ತಿರಲಿಲ್ಲ. ಮಾನಸಿ ಆತ್ಮಗ್ಲಾನಿಯಿಂದ ಪರಿತಪಿಸಿದಳು. ತನ್ನ ಮಕ್ಕಳ ದೃಷ್ಟಿಯಲ್ಲಿ ಕೀಳಾಗಿ ಅವಳು ಹೊಸದೊಂದು ಅಧ್ಯಾಯವನ್ನು ತೆರೆಯಲಾರಳು. ಈ ಪ್ರಸಂಗವನ್ನು ಹೇಗಾದರೂ ಮುಗಿಸಲೇಬೇಕು.
“ನೀವಿನ್ನೂ ಚಳಿಯಲ್ಲಿ ಇಲ್ಲೇ ನಿಂತಿದ್ದೀರಲ್ಲ? ನಾನು ನಿನ್ನನ್ನು ಒಳಗೆಲ್ಲಾ ಹುಡುಕಾಡ್ತಿದ್ದೆ.” ಸುಧಾಕರನ ದನಿ ಕೇಳಿ ಅವಳು ಬೆಚ್ಚಿಬಿದ್ದಳು.
“ಒಳಗೆ ಬನ್ನಿ. ಊಟ ಮಾಡೋಣವಂತೆ.”
ಬಂದ ಅತಿಥಿಗಳೆಲ್ಲ ಹಿಂದಿರುಗಿದ ಮೇಲೆ ಮಾನಸಿಯನ್ನು ಮನೆಗೆ ಕರೆದುಕೊಂಡು ಹೋಗುವಾಗ ಸುಧಾಕರ್ ಕೇಳಿದ, “ಏನು ಸಮಾಚಾರ? ಯಾಕೆ ಮೌನವಾಗಿದ್ದೀರಿ? ಯಾವ ಚಿಂತೆಯಲ್ಲಿ ಮುಳುಗಿದ್ದೀರಿ?”
“ಇಲ್ಲವಲ್ಲ….. ” ಮಾನಸಿ ತಡವರಿಸಿದಳು. ಬ್ರೇಕ್ ಹಾಕಿದ ಸದ್ದು ಕೇಳಿಸಿತು. ಕಿರ್ ಎಂದು ಸದ್ದು ಮಾಡುತ್ತಾ ಕಾರು ನಿರ್ಜನ ರಸ್ತೆಯಲ್ಲಿ ನಿಂತಿತು.
“ಮಾನಸಿ, ನಿಜ ಹೇಳಿ. ನನ್ನಿಂದೇನಾದರೂ ತಪ್ಪು….?” ಪುಟ್ಟ ಮಗುವಿನಂತೆ ಸುಧಾಕರ್ ಕೇಳಿದ.
“ಇಲ್ಲ, ಸುಧಾಕರ್. ಅಂಥದ್ದೇನಿಲ್ಲ. ನಿಮ್ಮಂಥ ವ್ಯಕ್ತಿಯ ಪರಿಚಯಾಗಿದ್ದೇ ನನ್ನ ಸುದೈವ,” ಅಂತರಂಗದ ಭಾವನೆಗಳ ಮಂಥನದಲ್ಲಿ ಸಿಲುಕಿ ಮಾನಸಿಯ ಆತ್ಮ ಚೀರಿತು.
“ಮಾನಸಿ, ಕರ್ತವ್ಯ ಮತ್ತು ಭಾವುಕತೆಯ ನಡುವೆ ಓಲಾಡುತ್ತಿರುವ ನಿಮ್ಮ ಮನಸ್ಥಿತಿ ನನಗೆ ಚೆನ್ನಾಗಿ ಗೊತ್ತಿದೆ. ಬದುಕಿನ ಇಷ್ಟು ವರ್ಷಗಳನ್ನು ಒಂಟಿಯಾಗಿ ಕಳೆದಾಗ, ನನಗೆಂದೂ ಜೊತೆಗಾತಿ ಬೇಕೆಂದೇ ತೋರಿಲ್ಲ. ಆ ದಿನ ನಿಮ್ಮನ್ನು ಕೇವಲ ಚಿಕಿತ್ಸೆ ನೀಡುವ ಉದ್ದೇಶದಿಂದಲೇ ಮನೆಗೆ ಕರೆದೊಯ್ದೆ. ಆಗ ನನ್ನ ಮನೆಯಲ್ಲಷ್ಟೇ ಅಲ್ಲ, ನನ್ನ ಮನದಲ್ಲೂ ಅಸಂಖ್ಯ ದೀಪಗಳು ಬೆಳಗಿದಂತೆ ಭಾಸವಾಯಿತು. ಆ ದಿನದ ನಂತರ ನಾನೆಂದೂ ಒಂಟಿಯಾಗಿಲ್ಲ. ಪ್ರತಿ ಕ್ಷಣ ನನ್ನ ಮನಸ್ಸಿನಲ್ಲಿ ನೀವು ನನ್ನ ಜೊತೆಗಾರ್ತಿಯಾಗಿ ಸುಳಿದಾಡುತ್ತಿದ್ದೀರಿ,” ಸುಧಾಕರನ ಸ್ವರದಲ್ಲಿ ಭಾವುಕತೆ ಕಾಣಿಸಿತ್ತು.
“ಮಾನಸಿ, ನಾನು ನಿಮ್ಮ ವೈವಾಹಿಕ ಜೀವನದಲ್ಲಿ ಮುಳ್ಳಾಗಲು ಬಯಸುವುದಿಲ್ಲ. ನಿಮ್ಮನ್ನು ನಾನು ಕೆಟ್ಟ ದಾರಿಗೆ ಎಳೆಯುತ್ತಿಲ್ಲ…. ನಿಮ್ಮ ದೇಹ ಮತ್ತು ಮನಸ್ಸುಗಳ ಮೇಲೆ ನನಗೆ ಯಾವ ಅಧಿಕಾರ ಇಲ್ಲ.
“ಅವೆಲ್ಲ ನಿಮ್ಮ ಗಂಡನ ಸ್ವತ್ತು….. ಆದರೆ ಸ್ನೇಹದ ಅಧಿಕಾರವನ್ನಾದರೂ ನನಗೆ ಕೊಡುವಿರಾ? ನಿಮ್ಮ ಸ್ನೇಹದ ಮೇಲೂ ಈ ಪರದೇಶಿಗೆ ಅಧಿಕಾರವಿಲ್ಲವೇ?” ಸುಧಾಕರನ ನೋವು ತುಂಬಿದ ಧ್ವನಿ ಕೇಳಿ ಮಾನಸಿ ವಿಹ್ವಲಗೊಂಡಳು. ಇದುವರೆಗೆ ಅವಳು ಬಂಧಿಸಿಟ್ಟುಕೊಂಡಿದ್ದ ಧೈರ್ಯ ಉಡುಗಿಹೋಯಿತು.
ಸುಧಾಕರನ ಹರವಾದ ಎದೆಗೆ ಒರಗಿ ಅವಳು ಮಗುವಿನಂತೆ ಎಷ್ಟೋ ಹೊತ್ತಿನವರೆಗೆ ಅಳುತ್ತಿದ್ದಳು. ಸುಧಾಕರ್ ಕಣ್ಣೀರಿನಿಂದ ತುಂಬಿದ್ದ ಅವಳ ಸುಂದರ ಮುಖವನ್ನು ಮೇಲೆತ್ತಿ ಹಿಡಿದು, ಅವಳ ಹಣೆಗೆ ಮೃದುವಾಗಿ ಚುಂಬನವಿತ್ತಾಗ, ಸ್ತ್ರೀ ಸಹಜ ಕಾಮನೆಗಳು ತುಂಬಿದ್ದ ಅವಳ ಶರೀರ ಹನಿ ಹನಿಯಾಗಿ ಕರಗತೊಡಗಿತು. ಅವಳ ಶರೀರದ ಅಣುಅಣು ಜೋರಾಗಿ ಕೂಗಿ ಕರೆದವು. `ಸುಧಾಕರ್, ನಾನು ನಿಮ್ಮವಳು, ನನ್ನನ್ನು ಸ್ವೀಕರಿಸಿ. ನನ್ನ ಮೇಲೆ ನನ್ನ ಗಂಡನಿಗಿದ್ದ ಸಮಸ್ತ ಅಧಿಕಾರವನ್ನೂ ಅವರಿಗೆ ಯಾವಾಗಲೋ ನೀಡಿಬಿಟ್ಟಿದ್ದೇನೆ. ಈಗ ಉಳಿದಿರುವುದೆಲ್ಲ ನಿಮ್ಮದೇ, ಕೇವಲ ನಿಮ್ಮದೇ!’ ಆದರೆ ವಿವೇಕದ ಒತ್ತಡಕ್ಕೆ ಸಿಲುಕಿ ಅವಳ ಧ್ವನಿ ಮೌನಾಗಿಬಿಟ್ಟಿತ್ತು.
ಮನೆ ತಲುಪಿ, ರಾತ್ರಿಯ ನೀರವತೆಯಲ್ಲಿ ಹಾಸಿಗೆಯ ಮೇಲೆ ಮಲಗಿದ ಮಾನಸಿ ಇಡೀ ರಾತ್ರಿ ಮಗ್ಗುಲು ಬದಲಾಯಿಸುತ್ತ ಕಳೆದಳು. ಟೂರಿಗೆಂದು ಹೋಗಿದ್ದ ಗಂಡ ಇನ್ನೂ ಹಿಂದಿರುಗಿರಲಿಲ್ಲ. ಅವಳ ಖಾಲಿ ತಲೆ ತರ್ಕ ವಿತರ್ಕಗಳ ಕುರುಕ್ಷೇತ್ರವಾಗಿತ್ತು. ಅವಳ ವಯಸ್ಸು ನಾಲ್ಕನೇ ದಶಕದ ಬಳಿಸಾರುತ್ತಿದೆ. ಆದರೆ ಅವಳ ಮನಸ್ಸೇಕೆ ಹಿಂದೆ ಸರಿಯುತ್ತಿದೆ? ಮನದಲ್ಲಿ ಏಳುತ್ತಿರುವ ಭಾವನೆಗಳ ಪ್ರಬಲ ವೇಗಕ್ಕೆ ವಿವೇಕದ ಕಡಿವಾಣ ಕಿತ್ತುಹೋಗುತ್ತಿದೆಯೇ? ಅವಳು ಇಷ್ಟೇಕೆ ಉತ್ಸುಕಳಾಗಿದ್ದಾಳೆ? ಗಂಡನೊಡನೆ ದೇಹ ಸಂಬಂಧ ಬೆಳೆಸುತ್ತಿದ್ದ ಆತ್ಮೀಯವಾದ ಕ್ಷಣಗಳಲ್ಲೂ ಅವಳು ಮಾನಸಿಕವಾಗಿ ದೂರವೇ ಉಳಿಯುತ್ತಿದ್ದಳು. ಅಂಥ ಶೀತಲ ಶಿಲೆಯಲ್ಲೂ ಸುಧಾಕರನ ಸ್ಪರ್ಶದಿಂದ ಉಜ್ವಲ ಕಿಡಿಗಳು ಹುಟ್ಟಿದ್ದವು. ಛೀ….. ಇದು ತಪ್ಪು…. ಅವಳ ಬಲಹೀನ ಮನಸ್ಸಿಗೆ ಜೋತುಬಿದ್ದವು, ಯಾವುದಾದರೂ ಭಾವುಕ ಕ್ಷಣದಲ್ಲಿ ಸುಧಾಕರನ ಸಂಯಮ ಸಡಿಲಗೊಂಡರೆ, ಅವಳು ಸ್ವಯಂ ತನ್ನನ್ನು ತಾನು ಎಂದೂ ಕ್ಷಮಿಸಲಾರಳು. ಮಕ್ಕಳೆದುರು ಆತ್ಮನಿಂದನೆಯ ಭಾರದಿಂದ ಅವಳು ಚಡಪಡಿಸಿ ಸಾಯಬೇಕಾಗುತ್ತದೆ….. ತನ್ನ ಜೀವಮಾನದ ತಪಸ್ಸನ್ನು ಅವಳು ಹೀಗೆ ವ್ಯರ್ಥಗೊಳಿಸಲಾಗದು. ಸುಧಾಕರನ ಪ್ರವಿತ್ರ ಸ್ನೇಹದಲ್ಲಿ ಮುಳುಗಿ ಅವಳ ಆತ್ಮ ಸಂತೃಪ್ತಿಗೊಂಡಿದೆ. ಇದಕ್ಕಿಂತ ಹೆಚ್ಚಿನ ಅತಿಯಾಸೆ ಪಡುವುದೇಕೆ?
ಸಂಜೆ ಆರು ಗಂಟೆಗೆ ಅವಳು ಸುಧಾಕರನ ಮನೆಗೆ ಬಂದಳು. ಅವನೂ ಅದೀಗ ತಾನೇ ಹಿಂದಿರುಗಿ ಬಂದಿದ್ದ. ಮಾನಸಿಯನ್ನು ಕಂಡೊಡನೆ ಅವನ ಆಯಾಸವೆಲ್ಲಾ ಮಾಯವಾಗಿ, ಉಲ್ಲಾಸ ಮೂಡಿತು. “ಅರೆ, ಇಡೀ ಜಗತ್ತೇ ನನ್ನದಾಗಬೇಕೆಂದು ನಾನಿಂದು ಆಶಿಸಿದರೂ, ತಕ್ಷಣ ಈಡೇರುತ್ತದೆಂದು ಕಾಣುತ್ತೆ.”
“ಹಾಗೆಂದರೆ ಏನರ್ಥ?” ಮಾನಸಿ ಡ್ರಾಯಿಂಗ್ ರೂಮಿನ ಸೋಫಾ ಮೇಲೆ ಕುಳಿತುಕೊಂಡಳು.
“ಮನೆಗೆ ಬರೋವಾಗ ನಾನು ನಿಮ್ಮನ್ನೇ ನೆನೆಸಿಕೊಳ್ತಿದ್ದೆ. ಬರ್ತಿದ್ದ ಹಾಗೆ ನೀವು ಸಿಕ್ಕಿಬಿಟ್ರಿ!” ಸುಧಾಕರ್ ತನ್ನ ಟೈ ಗಂಟನ್ನು ಸಡಿಲಿಸುತ್ತ ಹೇಳಿದ. ಅಡುಗೆಯವನು ಕಾಫಿ ತಿಂಡಿಯನ್ನು ತಂದಿರಿಸಿ ಹೋದ.
“ಮಾನಸಿ, ಅನೇಕ ದಿನಗಳಿಂದ ಚಿಂತೆಯಲ್ಲಿ ಮುಳುಗಿದಂತೆ ಕಾಣುತ್ತಿದ್ದೀರಿ. ನಾನು ಎಷ್ಟೋ ಬಾರಿ ಈ ಬಗ್ಗೆ ಕೇಳಿದರೂ, ನೀವು ಮಾತು ಹಾರಿಸುತ್ತಿದ್ರಿ. ನಿಮ್ಮ ಚಿಂತೆಗೇನು ಕಾರಣ ಅಂತ ನನಗೆ ತಿಳಿಸೋದಿಲ್ಲವೇ?” ಮಾನಸಿಯ ಬಾಡಿ ಹೋದ ಮುಖ ನೋಡುತ್ತ, ಸುಧಾಕರ್ ಕಾಫಿ ಕಪ್ಪನ್ನು ಹಿಡಿದುಕೊಂಡು ಅವಳ ಪಕ್ಕ ಬಂದು ಕುಳಿತ. ಅವನ ಸಾಮೀಪ್ಯ ತನ್ನ ನಿರ್ಧಾರವನ್ನು ಬುಡಮೇಲು ಮಾಡೀತೆಂದು ಹೆದರಿ ಅವಳು ತಕ್ಷಣ ಹೇಳಿಬಿಟ್ಟಳು.
“ಹೌದು. ನನ್ನ ಚಿಂತೆಯನ್ನು ನಿಮ್ಮಿಂದ ಮುಚ್ಚಿಡಲಾರೆ. ನನ್ನ ಬದುಕಿನ ಪುಸ್ತಕದ ಪ್ರತಿಯೊಂದು ಪುಟವನ್ನೂ ಓದಿ ಅರ್ಥ ಮಾಡಿಕೊಂಡವರು ನೀವೊಬ್ಬರೇ. ಸುಧಾಕರ್, ಈಗ ನನ್ನ ಬಾಳಿನ ಹಾದಿ ಎರಡು ಕವಲಾಗಿ ಒಡೆದಿದೆ. ಒಂದು ಕರ್ತವ್ಯದತ್ತ ಸಾಗಿದೆ, ಮತ್ತೊಂದು ನನ್ನ ಜೀವನದ ಅಮೂಲ್ಯ ನಿಧಿಯಾದ ನಿಮ್ಮ ಸ್ನೇಹದತ್ತ ಸಾಗಿದೆ. ಆದರೆ ಗುರಿಯಿಲ್ಲದ ದಾರಿಯನ್ನು ನನ್ನ ಸುಖದ ಸಲುವಾಗಿ ಆರಿಸಿಕೊಳ್ಳಲಾರೆ.”
“ಒಗಟು ಬಿಡಿಸಿ ಹೇಳಿ. ನನ್ನ ಸ್ನೇಹದಲ್ಲಿ ನಿಮಗೇನಾದರೂ ಕುಂದು….?”
“ಹಾಗೆನ್ನಬೇಡಿ. ಈ ಸ್ನೇಹವೇ ನನ್ನ ಜೀವನದ ಸಂಪತ್ತು,” ಮಾನಸಿ ಸುಧಾಕರನ ಕೈ ಹಿಡಿದುಕೊಂಡಳು.
“ಆದರೆ…. ನಾವಿರುವ ಸಮಾಜ ಇಂಥ ಸ್ನೇಹವನ್ನು ಒಪ್ಪುವುದಿಲ್ಲ. ಸಮಾಜವಾಗಲಿ, ಸಂಸಾರದವರಾಗಲಿ ನಮ್ಮ ಈ ಪವಿತ್ರ ಸ್ನೇಹದ ಮೇಲೆ ಸಂಶಯದ ರಾಡಿಯ ಒಂದು ಹನಿ ಎರಚುವುದನ್ನೂ ನಾನು ಸಹಿಸಲಾರೆ. ಸುಧಾಕರ್, ಹಸಿವಿನಿಂದ ಕಂಗಾಲಾಗಿರುವ ವ್ಯಕ್ತಿಯ ಎದುರು ಭಕ್ಷ್ಯ ಭೋಜನ ತುಂಬಿದ ತಟ್ಟೆ ಇಟ್ಟರೆ, ಅಜೀರ್ಣದ ಭಯದಿಂದ ಆತ ಏನೊಂದನ್ನೂ ಮುಟ್ಟಲಾರನೆಂದರೆ, ಅವನ ಪರಿಸ್ಥಿತಿ ಹೇಗಿರುತ್ತದೆಂಬುದನ್ನು ಊಹಿಸಿ! ಈಗ ನನ್ನದೂ ಅದೇ ಪರಿಸ್ಥಿತಿಯಾಗಿದೆ. ನನ್ನ ಎರಡೂ ಕೈಗಳಲ್ಲಿ ಎಷ್ಟು ಸುಖವನ್ನು ಬಾಚಿಕೊಳ್ಳಬಲ್ಲೇ? ಸಿಕ್ಕಿದಷ್ಟು ಸುಖೀ ನನ್ನ ಪಾಲಿಗೆ ಲಭ್ಯ. ಅದರ ಆಸರೆಯಲ್ಲಿಯೇ ಜೀವನದ ಉಳಿದ ದಿನಗಳನ್ನು ಕಳೆಯುತ್ತೇನೆ. ಸುಧಾಕರ್, ಈ ನನ್ನ ಹಾಳು ಜೀವನದಲ್ಲಿ ನೀವು ಸುಗಂಧದ ಅಲೆಯಾಗಿ ತೇಲಿ ಬಂದಿರಿ. ನನ್ನ ಚಿಂದಿಯಾದ ಸೆರಗಿನಲ್ಲಿ ನಾನು ನಿಮ್ಮನ್ನು ಬಚ್ಚಿಟ್ಟುಕೊಳ್ಳಲಾರೆ.” ಮಾನಸಿಯ ಕಣ್ಣುರೆಪ್ಪೆಗಳು ಕಣ್ಣೀರಿನಿಂದ ಒದ್ದೆಯಾದವು.
ಸ್ವಲ್ಪ ಹೊತ್ತು ಮೌನವಾಗಿ ಕುಳಿತಿದ್ದ ಸುಧಾಕರ್ ಹೇಳಿದ, “ಮಾನಸಿ, ನಿಮ್ಮನ್ನು ಭೇಟಿಯಾದ ನಂತರದ ಈ ಒಂದು ವರ್ಷ ಕೇವಲ ನಿಮ್ಮ ಪಾಲಿಗೆ ಮಾತ್ರವೇ ಅಲ್ಲ, ನನ್ನ ಪಾಲಿಗೂ ಅವಿಸ್ಮರಣೀಯವೇ ಆಗಿದೆ. ನಿಮ್ಮೊಡನೆ ಕಳೆದ ಒಂದೊಂದು ಕ್ಷಣವನ್ನೂ ನಾನು ನನ್ನ ಹೃದಯದಲ್ಲಿ ಮುಚ್ಚಿಟ್ಟುಕೊಂಡಿದ್ದೇನೆ. ನನಗೆ ಇದಕ್ಕಿಂತ ಹೆಚ್ಚಿನ ಅಧಿಕಾರವಿಲ್ಲ. ಆದರೆ ಜೀವನದ ಮಾರ್ಗದಲ್ಲಿ ಇನ್ನು ಮುಂದೆ ನಾನು ಒಬ್ಬಂಟಿ ಪ್ರಯಾಣಿಕನಾಗಿರುವುದಿಲ್ಲ ಎಂಬ ನಂಬಿಕೆ ನನಗಿದೆ. ಪ್ರಭೆಯಿಂದ ಬೆಳಗುವ ನಿಮ್ಮ ನೆನಪಿನ ದೀಪ ಯಾವಾಗಲೂ ನನ್ನ ಒಡನಾಡಿ ಆಗಿರುತ್ತದೆ.”
ಆರಿಹೋದ ಹಣತೆಯ ಜ್ಯೋತಿಯಂತೆ ಬಾಡಿ ಹೋದ ಸುಧಾಕರನ ಮುಖ, ಮಾನಸಿಯ ಹೃದಯವನ್ನು ಹಿಂಡಿತು. ಭಾವನೆಗಳ ತೀವ್ರ ಎಳೆದಾಟದಲ್ಲಿ ವಿಚಲಿತಳಾದ ಮಾನಸಿಯನ್ನು ಕರ್ತವ್ಯದ ಸರಪಳಿಗಳು ಹಿಡಿದು ನಿಲ್ಲಿಸಿದವು. ಆದರೆ ತುಟಿಗಳಿಂದ ಹೊರಟ ಸ್ವರ ಆಕ್ರಂದನದಂತಿತ್ತು, “ಇನ್ನು ಮುಂದೆ ನಾನೆಂದೂ ನಿಮ್ಮನ್ನು ಭೇಟಿಯಾಗಲು ಬರುವುದಿಲ್ಲ….. ನೀವು…..” ಉಳಿದ ಮಾತುಗಳು ಕಣ್ಣೀರಿನ ಮಹಾಪೂರದಲ್ಲಿ ಕೊಚ್ಚಿಕೊಂಡುಹೋದವು. ಅವಳು ಸುಧಾಕರನಿಗೆ ಬೆನ್ನು ಮಾಡಿ ನಿಂತು ಕಣ್ಣೊರೆಸಿಕೊಂಡಳು.
“ಕರ್ತವ್ಯ ನಿಭಾಯಿಸಲು ಹೊರಟಾಗ ದುಃಖಿಸುವುದೇಕೆ ಮಾನಸಿ?” ಸುಧಾಕರ್ ಮುಂದೆ ಬಂದು ಅವಳ ಭುಜದ ಮೇಲೆ ಕೈಯಿರಿಸಿದ. ಮತ್ತೊಂದು ಬಾರಿ ಮುಳುಗುವವಳಿಗೆ ಆಸರೆ ಸಿಕ್ಕಂತಾಯಿತು.
“ಮಾನಸಿ, ನಾವಿಬ್ಬರೂ ಕೇವಲ ಒಂದು ರಾತ್ರಿ ಸಮುದ್ರದಲ್ಲಿ ಅಕ್ಕಪಕ್ಕ ತೇಲಾಡಿ ಬೇರೆ ಬೇರೆ ದಾರಿ ಹಿಡಿದು ಹೋದ ದೋಣಿಗಳು. ಆದರೆ ನಿಮಗೆ ಅವಶ್ಯಕತೆ ಬಿದ್ದಾಗ ಕಿಂಚಿತ್ತೂ ಹಿಂಜರಿಯದೆ ನನ್ನ ಬಳಿ ಬನ್ನಿ. ನಾನು ಯಾವಾಗಲೂ ನಿಮ್ಮನ್ನೇ ನಿರೀಕ್ಷಿಸುತ್ತಿರುತ್ತೇನೆ,” ಸುಧಾಕರ್ ತನ್ನ ಜೇಬಿನಿಂದ ಕರ್ಚೀಫ್ ತೆಗೆದು ಮಾನಸಿಯ ಮುಖವನ್ನು ಕೋಮಲವಾಗಿ ಒತ್ತಿ, ಕಣ್ಣೀರು ಒರೆಸಿದ.
“ಈಗ ಒಳ್ಳೆ ಹುಡುಗಿಯ ಹಾಗೆ ಅಳೋದನ್ನು ನಿಲ್ಲಿಸಿ ಮಾನಸಿ,” ಸುಧಾಕರ್ ನಗುವ ಪ್ರಯತ್ನ ಮಾಡಿದ,
“ಬನ್ನಿ, ನಿಮ್ಮನ್ನು ಮನೆಗೆ ಬಿಡ್ತೀನಿ. ಒಂದು ದಿನ ನಿಮ್ಮನ್ನು ಕೇಳದೆ, ಇಲ್ಲಿಗೆ ಕರೆತಂದಿದ್ದೆ. ಈ ದಿನ ನಿಮ್ಮ ಆಶಯದಂತೆ ನಿಮ್ಮನ್ನು ವಾಪಸ್ ಕರೆದುಕೊಂಡು ಹೋಗುತ್ತಿದ್ದೀನಿ,” ಸುಧಾಕರ್ ನಗುತ್ತಲೇ ಹೇಳಿದರೂ, ಅದರಲ್ಲಿ ನೋವು ತುಂಬಿತ್ತು.
ಹಿಂದಿರುಗುವಾಗ ಇಬ್ಬರ ನಡುವೆ ಮೌನದ ಗೋಡೆಯಿತ್ತು. ಮನೆಯ ಮುಂದೆ ಕಾರು ನಿಲ್ಲಿಸಿದ ಸುಧಾಕರ್ ಕುಳಿತಲ್ಲಿಂದ ಇಳಿಯಲಿಲ್ಲ. ಭಾರವಾದ ಹೆಜ್ಜೆಗಳನ್ನು ಇರಿಸುತ್ತಾ ಕಾರಿನಿಂದ ಇಳಿದ ಮಾನಸಿಯ ತಲೆಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಅಕ್ಕಪಕ್ಕದ ಮನೆಗಳ ಅರೆತೆರೆದ ಕಿಟಕಿಗಳಿಂದ ಇಣುಕಿ ನೋಡಿದ ಕಣ್ಣುಗಳತ್ತ ದೃಷ್ಟಿ ಹರಿಸಿದ ಅವಳಿಗೆ ಜೋರಾಗಿ ಕಿರುಚುತ್ತಾ ಸುಧಾಕರನ ತೆಕ್ಕೆಗೆ ಬೀಳಬೇಕೆನಿಸಿತು.
“ನಾನು ಯಾರಿಗೂ ಹೆದರೋಲ್ಲ, ಸುಧಾಕರ್….. ನನ್ನನ್ನೂ ಕರೆದುಕೊಂಡು ಹೋಗಿ. ನಾನು ನಿಮ್ಮವಳು, ಕೇವಲ ನಿಮ್ಮವಳು… ಸುಧಾಕರ್…”
ಆದರೆ ಅಷ್ಟರೊಳಗೆ, “ನಾನಿನ್ನು ಹೋಗುತ್ತೇನೆ ಮಾನಸಿ,” ಎಂದು ಹೇಳಿ ಸುಧಾಕರ್ ಕಾರನ್ನು ವೇಗವಾಗಿ ನಡೆಸುತ್ತಾ ಹೊರಟುಹೋದ. ಮಾನಸಿಯ ಹೃದಯದಲ್ಲಿ ಮೂಡಿದ ತೀವ್ರವಾದ ನೋವು ಕಣ್ಣೀರಾಗಿ ಹೊಮ್ಮಿತು. ಮರುದಿನ ಮಾನಸಿ, `ಮಕ್ಕಳನ್ನು ಕೂಡಲೇ ಕಳಿಸು. ಒಂಟಿತನ ಕಾಡುತ್ತಿದೆ,’ ಎಂದು ಹೈದರಾಬಾದಿನ ತಂಗಿಗೆ ಫೋನ್ ಮಾಡಿದಳು. ಆದರೆ ಅವಳು ನಿಜವಾಗಿ ಒಂಟಿಯಾಗಿರಲಿಲ್ಲ. ಸುಧಾಕರನ ನೆನಪು ಅವಳ ಹೃದಯದ ಪ್ರತಿಯೊಂದು ಬಡಿತದೊಡನೆ ಬೆರೆತುಹೋಗಿತ್ತು.