ಮನಸ್ಸೆಂಬುದು ಎಂಥಾ ಮರ್ಕಟ! ನಾನು ಇರುವ ಕಡೆ ನನ್ನ ಮನಸ್ಸಿರುವುದಿಲ್ಲ. ನಾನು ಇಲ್ಲದಿರುವ ಕಡೆಯಲ್ಲೇ ನನ್ನ ಮನಸ್ಸು ಸದಾ ಸುತ್ತುತ್ತಿರುತ್ತದೆ. ಮನೆಗೆ ಬಂದರೆ ಮನಸ್ಸು ಆಫೀಸಿನಲ್ಲಿ ಪ್ರಶಾಂತರೊಡನೆ ಇರುತ್ತದೆ. ಆಫೀಸಿನಲ್ಲಿದ್ದರೆ ಮನಸ್ಸು ಗಂಡ ಮಹೇಶ, ಮಕ್ಕಳ ಮತ್ತು ಪರಿವಾರದ ಬೇಕು ಬೇಡಗಳ ಸಮಸ್ಯೆಯಲ್ಲಿ ಸಿಲುಕಿಕೊಂಡಿರುತ್ತದೆ.

ನಾನು ಇರುವ ಕಡೆಗೆ ನನ್ನ ಮನಸ್ಸನ್ನೂ ಎಳೆದುತಂದು, ಮಾಡುವ ಕೆಲಸವನ್ನು ಮನಸ್ಸಿಟ್ಟು ಮಾಡಬೇಕೆಂದು ಅದೆಷ್ಟು ಪ್ರಯತ್ನಿಸುತ್ತೇನೋ? ಆದರೆ ಬರಿಯ ಹಂಬಲದಿಂದ ಏನಾಗುತ್ತದೆ? ಅಲೆದಾಡುವ ಮನಸ್ಸಿನ ಕುದುರೆಗಳ ಲಗಾಮನ್ನು ಕೆಲವು ಕಾಲ ಬಿಗಿಹಿಡಿಯುತ್ತೇನೆ. ಆದರೆ ಬಹು ಬೇಗ ಲಗಾಮಿನ ಹಿಡಿತ ಸಡಿಲವಾಗಿಬಿಡುತ್ತದೆ. ಕೂಡಲೇ ನಿಯಂತ್ರಣಕ್ಕೆ ಒಳಪಡದೆ ಮನಸ್ಸು ಲಗಾಮಿಲ್ಲದ ಕುದುರೆಯಂತೆ ದಿಕ್ಕು ದಿಶೆ ಅರಿಯದೆ, ಎಲ್ಲಿಂದೆಲ್ಲಿಗೋ ಓಡತೊಡಗುತ್ತದೆ. ಇದೊಂದು ಮರೀಚಿಕೆ ಎಂದು ನನಗೆ ಗೊತ್ತಿದೆ. ಮನಸ್ಸು ಆಶಾಂತಗೊಳ್ಳುವುದರ ಹೊರತಾಗಿ ಇದರಿಂದ ಬೇರೇನೂ ದೊರೆಯುವುದಿಲ್ಲವೆಂದೂ ಅರಿತಿದ್ದೇನೆ.

ಆದರೆ ಅಯ್ಯೋ! ಈ ಕಷ್ಟ ಇಲ್ಲದಿದ್ದರೆ ಎಷ್ಟು ಸುಖವಾಗಿರಬಹುದಾಗಿತ್ತು, ಆ ಸೌಲಭ್ಯ ಇದ್ದಿದ್ದರೆ ಎಷ್ಟು ಸಂತೋಷವಾಗಿ ಇರಬಹುದಾಗಿತ್ತು ಎಂದು ಯಾವಾಗಲೂ ಇಲ್ಲದಿರುವುದನ್ನೇ ಬಯಸುತ್ತಾ, ಅಭಾವಗಳ ಪೂರೈಕೆಗಾಗಿ ನೋವಿನಿಂದ ಮಿಡಿಯುವ ಈ ಮನಸ್ಸನ್ನು ಏನು ಮಾಡುವುದು….?

ನಾನು ಪೆದ್ದಿಯೋ, ಕುರೂಪಿಯೋ ಅಥವಾ ನೈಪುಣ್ಯ ಇಲ್ಲದವಳಾಗಿದ್ದರೆ ಈ ಆಫೀಸಿನಲ್ಲಿ ಇಷ್ಟೊಂದು ವರ್ಷ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದ್ದೆನೇ? ಪ್ರಶಾಂತ್‌ ಯಾವಾಗಲೋ ನನ್ನನ್ನು ಕೆಲಸದಿಂದ ಕಿತ್ತುಹಾಕುತ್ತಿದ್ದರು, ಅಷ್ಟೇ. ಇದು ಖಾಸಗಿ ಕಂಪನಿ, ಕೆಲಸ ಮಾಡದೆಯೂ ಸಂಬಳ ಎಣಿಸಿಕೊಂಡು ಹೋಗುಬಹುದಾದ ಸರ್ಕಾರಿ ಕೆಲಸ ಏನೂ ಅಲ್ಲ. ಪ್ರಶಾಂತ್‌ ಕೇವಲ ನನ್ನ ಕೆಲಸವನ್ನಷ್ಟೇ ಅಲ್ಲ, ನನ್ನನ್ನೂ ಮೆಚ್ಚಿಕೊಂಡಿದ್ದಾರೆ ಎಂಬುದು ಬೇರೆ ವಿಷಯ. ನಾನು ಯಾವುದೇ ಕೆಲಸದ ಮೇಲೆ ಅವರ ಕ್ಯಾಬಿನ್ನಿಗೆ ಹೋದರೂ ಅವರು ಅದೆಷ್ಟು ಮೋಹಕ ಮುಗುಳ್ನಗೆ ಸೂಸುತ್ತಾರೆ! ಇಂದಿನವರೆಗೂ ಅವರು ನನ್ನ ಯಾವುದೇ ತಪ್ಪಿಗೂ ಒರಟಾಗಿ ಮಾತನಾಡಿಲ್ಲ. ತಪ್ಪನ್ನೂ ಮೃದುವಾಗಿಯೇ ತೋರಿಸಿಕೊಟ್ಟಿದ್ದಾರೆ, ಸದಾ ಪ್ರೋತ್ಸಾಹವನ್ನೇ ನೀಡುತ್ತಾ ಬಂದಿದ್ದಾರೆ.

ಎಂದಾದರೂ ನಾನು ಯಾವುದೇ ಕೆಲಸವಿಲ್ಲದ ಕಾರಣ ಅವರ ಕ್ಯಾಬಿನ್ನಿಗೆ ಹೋಗದಿದ್ದರೆ, ಅಂದು ಸಂಜೆಯೊಳಗೆ  ಅವರು ಏನೋ ಒಂದು ನೆಪದಿಂದ ನನ್ನನ್ನು ತಮ್ಮ ಕ್ಯಾಬಿನ್ನಿಗೆ ಕರೆಸಿಕೊಳ್ಳುತ್ತಾರೆ ಎಂಬುದನ್ನೂ ನಾನು ಗಮನಿಸಿದ್ದೆ. ನಾನು ಪ್ರಶಾಂತರ ಕ್ಯಾಬಿನ್ನಿಗೆ ಹೋಗಿ ಅವರಿಗೆ ನಮಸ್ಕರಿಸುತ್ತಿರುವಂತೆಯೇ, ಅವರು ಮೇಜಿನ ಮೇಲಿನ ಪೇಪರ್‌ ವೆಯ್ಟ್ ನ್ನು ಗಿರ್ರನೆ ತಿರುಗಿಸುತ್ತ, “ಯಾಕಿಷ್ಟೊಂದು ಕೋಪ ಗೀತಾ? ನೀವು ಈ ಕಡೆ ತಿರುಗಿಯೂ ನೋಡಬಾರದಷ್ಟು ಕುರೂಪಿ ನಾನಲ್ಲ ತಾನೇ?” ಎಂದು ಕೇಳುತ್ತಿದ್ದರು.

“ಕ್ಷಮಿಸಿ ಸರ್‌, ಇವತ್ತು ಬಹಳ ಕೆಲಸ ಇತ್ತು ಅದರಲ್ಲಿ ಮುಳುಗಿದ್ದೆ,” ನಾನು ನಗುತ್ತಾ ಉತ್ತರಿಸುತ್ತಿದ್ದೆ.

“ಅದೆಂಥ ಕೆಲಸಾರೀ. ನೀವು….” ಅವರು ಮಾತು ಪೂರೈಸುತ್ತಿರಲಿಲ್ಲ. ಮುಗುಳ್ನಕ್ಕು ಮಾತು ಬದಲಾಯಿಸುತ್ತಿದ್ದರು, “ಮನೆಯಲ್ಲಿ ಎಲ್ಲರೂ ಆರೋಗ್ಯ ತಾನೇ? ನಿನ್ನೆ ರಾಹುಲನಿಗೆ ಜ್ವರ ಎಂದಿದ್ದಿರಲ್ಲ…. ಜ್ವರ ಬಿಟ್ಟಿದೆ ತಾನೇ? ಡಾಕ್ಟರಿಗೆ ತೋರಿಸಿದಿರಾ? ಮಹೇಶ್‌ ಕೂಡಾ ಮನೆಯ ಕಡೆ ಸ್ವಲ್ಪ ಗಮನ ಕೊಡುತ್ತಾರೋ, ಇಲ್ಲ ನೀವೋಬ್ಬರೇ ಎಲ್ಲ ನೋಡಿಕೊಳ್ಳಬೇಕೋ?”

ಪ್ರಶಾಂತ್‌ ಇಂಥ ಮಾತುಕತೆಗಳಿಂದ ನನ್ನ ಅಸಂತೋಷದ ವೀಣೆಯ ತಂತಿಗಳನ್ನು ಮಿಡಿಯುತ್ತಿದ್ದಾರೆ ಎಂದು ನನಗೆ ಚೆನ್ನಾಗಿ ಗೊತ್ತಾಗಿದೆ. ಆದರೆ ಬೇಡವೆಂದರೂ ನನ್ನ ಅಸಂತೋಷವನ್ನು ಅದುಮಿಟ್ಟುಕೊಳ್ಳಲು ಸಾಧ್ಯವೇ ಆಗುವುದಿಲ್ಲ.

“ಎಲ್ಲಿ ಸರ್‌? ಅವರಿಂದಾಗಿ ನಾಳೆ ಬರಬೇಕಾದ ಸಮಸ್ಯೆ ನಮ್ಮನ್ನು ಇಂದೇ ಕಾಡುತ್ತದೆ. ಅವರಿಗೆ ಮನೆ ಮಕ್ಕಳ ಚಿಂತೆಯೂ ಇಲ್ಲ. ನನ್ನ ಕಷ್ಟಸುಖಗಳ ಪರಿವೆಯೂ ಇಲ್ಲ. ಆದರೆ ಅವರಿಗೆ ಮಾತ್ರ ಯಾವ ರೀತಿಯ ತೊಂದರೆಯೂ ಆಗುವಂತಿಲ್ಲ. ಒಂದು ಚೂರು ಕುಂದುಕೊರತೆಯನ್ನೂ ಅವರು ಸಹಿಸುವುದಿಲ್ಲ.”

ಇದೆಂಥ ಅಸಹನೀಯ ಪರಿಸ್ಥಿತಿ. ಅವರು ನನ್ನ ಅಸಂತೋಷದ ವೀಣೆಯ ತಂತಿಗಳನ್ನು ಸಾವಧಾನವಾಗಿ ತಮ್ಮ ಬೆರಳುಗಳಿಂದ ಮೀಟಿ ಬಿಡುತ್ತಾರೆ. ನಾನೂ ಅದಕ್ಕೆ ಅವಕಾಶ ಕೊಡುತ್ತೇನೆ. ಮಹೇಶ್‌ರನ್ನು ನಿಂದಿಸುವುದರಿಂದ ನನಗೆ ವಿಲಕ್ಷಣವಾದ ಸುಖ ಲಭಿಸುತ್ತಿರಬಹುದೇ? ಮನೆಯಲ್ಲಿ ಸದಾ ನನ್ನ ಉಸಿರುಗಟ್ಟಿಸುವ, ನನ್ನನ್ನು ರೊಚ್ಚಿಗೇಳಿಸುವ ಅವರ ಕುಂದು ಕೊರೆತಗಳ ಬಗ್ಗೆ ಪದೇಪದೇ ಮನದಲ್ಲೇ ಗೊಣಗಾಡುತ್ತಲೇ ಇರುತ್ತೇನೆ. ಪ್ರಶಾಂತರು ಸಹಾನುಭೂತಿಯಿಂದ ಪ್ರಶ್ನಿಸಿದೊಡನೆ ವಿವಶಳಾಗಿ ಅದುಮಿಟ್ಟ ಭಾವನೆಗಳನ್ನು ಸ್ವಚ್ಛಂದಾಗಿ ಹರಿಯಬಿಡುತ್ತೇನೆ. ಕೆಲವೊಮ್ಮೆಯಂತೂ ಭುಸುಗುಟ್ಟುವ ನಾಗಿಣಿಯಂತೆ ಹೆಡೆ ಎತ್ತಿ ಅಲ್ಲಿ ಅರ್ಥಹೀನ ಮಾತುಗಳನ್ನಾಡಿಬಿಡುತ್ತೇನೆ. ನನ್ನ ಮನೆಯ ಪರಿಸ್ಥಿತಿಯನ್ನು ಪ್ರಶಾಂತ್‌ ಬದಲಿಸಲಾರರು ಎಂದೂ ನನಗೆ ಗೊತ್ತಿದೆ. ಅವರು ಮಹೇಶರಿಗೆ ಬುದ್ಧಿಯನ್ನೂ ಹೇಳಲಾರರು. ಅವರ ಸ್ವಭಾವದ ಗುಣದೋಷಗಳನ್ನೂ ಬದಲಿಸಲಾರರು. ಮಹೇಶರನ್ನು ಅವರು ಯಾವುದೇ ರೀತಿಯಲ್ಲಿ ಸುಧಾರಿಸಲಾರರು ಎಂದ ಮೇಲೆ ಅವರೆದುರು ನಾನು ಮತಿಹೀನಳಂತೆ ನನ್ನ ಭಾವನೆಗಳನ್ನು ಪದರ ಪದರವಾಗಿ ಎತ್ತಿ ತೋರುವುದರಿಂದ ನನಗೆ ಯಾವ ಲಾಭವಿದೆ? ಇದರಿಂದ ನನಗೇನು ದೊರೆಯುತ್ತದೆ? ಆದರೆ ಈ ನನ್ನ ಮನಸ್ಸನ್ನು ಏನು ಮಾಡಲಿ?

ಮಹೇಶ್‌ರಲ್ಲಿ ಒಂದು ಕೊರತೆ ಇದೆ ಎಂದರೆ ಎತ್ತಿ ತೋರಬಹುದು. ಅವರಲ್ಲಿ ಕೊರತೆಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಅವರ ಮೈಬಣ್ಣ ಕಪ್ಪು, ಮನಸ್ಸು ಅದಕ್ಕಿಂತಲೂ ಕಡುಗಪ್ಪು. ನಾನು ಸುಂದರಿ ಎಂದು ಅವರಿಗೆ ಮೊದಲಿನಿಂದಲೂ ನನ್ನ ಬಗ್ಗೆ ಅನುಮಾನ, ಈರ್ಷ್ಯೆ. ಮದುವೆಯ ರಾತ್ರಿಯೇ ಅವರು ತಮ್ಮ ಹೀನ ಸ್ವಭಾವವನ್ನು ತೋರಿಸಿಬಿಟ್ಟರು. “ನೀನೋ ಸುರಸುದಂರಿ, ಕಾಲೇಜಿನಿಂದ ಹಿಡಿದು ನಿನ್ನ ಮನೆಯ ಬೀದಿಯವರೆಗೆ ನಿನಗೆ ಮರುಳಾಗಿದ್ದ ಹುಡುಗರು ನಿನ್ನ ಹಿಂದೆ ಮುಂದೆ ಸುತ್ತಾಡುತ್ತಿದ್ದಿರಬೇಕಲ್ಲ….. ಅವರಲ್ಲಿ ಯಾರನ್ನಾದರೂ ನೀನು ನಿನ್ನ ಮನದನ್ನನನ್ನಾಗಿ ಮಾಡಿಕೊಂಡಿದ್ದೆಯಾ? ಏನೇ ಇದ್ದರೂ ಅವರ ಹೆಸರನ್ನು ಇಂದೇ ತಿಳಿಸಿಬಿಡು. ನನಗೆ ಅನಂತರ ತಿಳಿದು ಬಂದರೆ ಸರಿಯಾಗೋಲ್ಲ ನೋಡಿಕೋ. ಇಂದಲ್ಲ ನಾಳೆ ನನಗೆ ನಿನ್ನ ಗೆಳೆಯನ ಬಗ್ಗೆ ಗೊತ್ತಾಗಿಯೇ ಆಗುತ್ತದೆ.”

ವಿವಾಹದ ಪ್ರಥಮ ರಾತ್ರಿಯಂದು ಅವರ ಈ ಮಾತು ಕೇಳಿ ನನಗೆ ಅಪಾರ ಕೋಪ ಬಂದಿತ್ತು. ಆದರೆ ಆ ಸಮಯದಲ್ಲಿ ಸ್ವನಿಯಂತ್ರಣ ಸಾಧಿಸುವುದೇ ಉಚಿತ ಎಂದು ತಿಳಿದೆ. ಹೃದಯದ ಮೇಲೆ ಬಂಡೆಯನ್ನು ಹೇರಿಕೊಂಡು ಹೇಗೋ ಮುಗುಳ್ನಗಲು ಪ್ರಯತ್ನಿಸಿದೆ.

“ಊರಿನ ಸುಂದರ ಹುಡುಗಿಯರೆಲ್ಲರೂ ವೇಶ್ಯೆಯರಲ್ಲ ಸ್ವಾಮಿ, ಅವರೂ ಒಬ್ಬರ ಮಗಳು, ಸೋದರಿ ಮತ್ತು ಅನಂತರ ಹೆಂಡತಿ ಆಗುತ್ತಾರೆ. ತಮ್ಮ ಮಕ್ಕಳ ಆದರ್ಶ ಮಾತೆಯಾಗಿ ನಿಷ್ಕಳಂಕ ಜೀವನ ಸಾಗಿಸುತ್ತಾರೆ.”

“ಗೀತಾ, ನಾನು ಹೇಳಿದ್ದು ಹಾಗಲ್ಲ,” ಅವರು ಹಲ್ಲುಕಿರಿದು ನಗತೊಡಗಿದರು.

“ನಿಜ ಹೇಳಬೇಕೆಂದರೆ ನಾನು ಕಾಲೇಜಿನಲ್ಲಿ ಯಾವುದೇ ಸುಂದರ ಹುಡುಗಿಯನ್ನೂ ಚುಡಾಯಿಸದೆ ಬಿಡುತ್ತಿರಲಿಲ್ಲ. ಈ ಹುಡುಗಾಟದಲ್ಲಿ ನನ್ನ ಅನೇಕ ಗೆಳೆಯರು ಕೆಲವು ಚೆಲುವೆಯರನ್ನು ತಮ್ಮ ಬಲೆಗೆ ಬೀಳಿಸಿಕೊಂಡಿದ್ದರು.”

“ಕೆಲವರನ್ನು ಮಾತ್ರವೇ ತಾನೇ? ಊರಿನ ಚೆಲುವೆಯರೆಲ್ಲರನ್ನೂ ನಿಮ್ಮ ಗೆಳೆಯರು ತಮ್ಮ ಬಲೆಗೆ ಬೀಳಿಸಿಕೊಂಡಿರಲಿಲ್ಲವಲ್ಲ?” ಆದರೆ ನಾನು ಹೇಳಬೇಕೆಂದಿದ್ದುದೇ ಬೇರೆ, `ಚೆಲುವೆಯೇ ಏಕೆ, ಸಾಧಾರಣ ತರುಣಿಯೂ ನಿಮ್ಮ ಮುಖಕ್ಕೆ ಉಗಿಯಲೂ ಇಷ್ಟಪಡಲಾರಳು. ನನ್ನ ಅಪ್ಪಅಮ್ಮನಿಗೆ ಎಲ್ಲೋ ಕಣ್ಣು ಕುರುಡಾಗಿರಬೇಕು. ಅದಕ್ಕೇ ಹಿಂದೆ ಮುಂದೆ ಯೋಚಿಸದೆ ನನ್ನಂಥ ರೂಪಸಿಯನ್ನು ನಿನ್ನಂಥ ಅಂದಗೇಡಿಗೆ ಕಟ್ಟಿಹಾಕಿದರು,’ ನನ್ನ ಅಂತರಾಳದಿಂದ ಮೊದಲ ಬಾರಿಗೆ ತಿರಸ್ಕಾರದ ಬುಗ್ಗೆ ಉಕ್ಕಿ, ವಾಕರಿಕೆ ಬರುವಂತಾಯಿತು.

ದಾಂಪತ್ಯ ಜೀವನದ ಪ್ರಥಮ ರಾತ್ರಿಯಂದೇ ಗಂಡನ ಬಗ್ಗೆ ಈ ರೀತಿ ತಿರಸ್ಕಾರ ಮೂಡಿಸಿಕೊಂಡ ಹೆಣ್ಣು ಆ ಮೃಗೀಯ ಸ್ವಭಾವದ ವ್ಯಕ್ತಿಯೊಡನೆ ತನ್ನ ವೈವಾಹಿಕ  ಜೀವನದ 10 ವರ್ಷಗಳನ್ನು ಹೇಗೆ ಕಳೆದಿರಬಹುದೆಂದು ಯಾರೇ ಆದರೂ ಸುಲಭವಾಗಿ ಊಹಿಸಬಹುದು.  ಪ್ರಶಾಂತ್‌ ತನ್ನ ಮನಸ್ಸಿನ ಅಸಂತೋಷವನ್ನು ಅರಿತು ಕ್ರಮೇಣ ಮುಂದುರಿಯುತ್ತಿದ್ದರೆ, ಅದರಲ್ಲೇನು ಆಶ್ಚರ್ಯ?

ನನ್ನ ಗೆಳತಿಯರೆಲ್ಲ ಎಷ್ಟೋ ಬಾರಿ ನೊಂದುಕೊಂಡು ಹೇಳುತ್ತಿದ್ದರು, “ನಿನ್ನ ಅಪ್ಪ ಅಮ್ಮ ಮಹೇಶರಲ್ಲಿ ಅದೇನು ಅಂದ ಕಂಡರೋ….?”

ಮಕ್ಕಳು ಅಂದಚಂದದಲ್ಲಿ ನನ್ನನ್ನು ಹೋಲುತ್ತಿದ್ದರು ಎಂಬುದೇ ಸಂತೋಷದ ವಿಷಯ. ಅವರೂ ಅವರ ಅಪ್ಪನಂತೆಯೇ ಕಪ್ಪಾಗಿ, ಕುರೂಪಿಗಳಾಗಿ ಹುಟ್ಟಿದ್ದರೆ ನಾನು ವಿಷ ನುಂಗಿ ಆತ್ಮಹತ್ಯೆ ಮಾಡಿಕೊಂಡುಬಿಡುತ್ತಿದ್ದೆ. ಮಕ್ಕಳು ಚೆಲುವಿನಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತಿದ್ದರು. ಅವರನ್ನೇ ಎದೆಗೊತ್ತಿಕೊಂಡು ಮನಸಾರೆ ಮುದ್ದಿಸಿ ನನ್ನ ಸೌಂದರ್ಯ ಲಾಲಸೆಯನ್ನು ಪೂರೈಸಿಕೊಳ್ಳುತ್ತೇನೆ. ಆದರೆ ಕಛೇರಿಯಲ್ಲಿ ಅತ್ಯಂತ ಆಕರ್ಷಕ ವ್ಯಕ್ತಿತ್ವದ ಚೆಲುವಾಂತ ಚೆನ್ನಿಗ, ಪ್ರಶಾಂತರ ಮೃದು ಮಂದಹಾಸ ಮತ್ತು ನೋಟವನ್ನು ಎದುರಿಸಬೇಕಾದಾಗ ಏನು ಮಾಡುವುದು? ಅಂಥ ಸಮಯದಲ್ಲಂತೂ ನನಗೆ ಪ್ರಾಪ್ತಿ ಇಲ್ಲವಲ್ಲ ಎಂಬ ಯೋಚನೆ ನನಗೆ ಬಹಳ ಘಾಸಿ ಉಂಟುಮಾಡುತ್ತದೆ, ನೋವಿನಿಂದ ಚಡಪಡಿಸುವಂತಾಗುತ್ತದೆ.

ಮದುವೆ ಆದಾಗ ನಾನಿನ್ನೂ 21 ವರ್ಷದ ನತರುಣಿ. ಅಮ್ಮನ ಬಳಿ ಗೋಗರೆದುಕೊಂಡಿದ್ದಿದೆ, “ಈಗಲೇ ಮದುವೆಗೆ ಏನು ಆತುರ? ಬಿ.ಎ. ಮಾಡಿದ್ದೇನೆ. ಇಂಗ್ಲಿಷ್‌ ಎಂ.ಎ. ಮಾಡುವ ಆಸೆ ಇದೆ. ಅದು ಮುಗಿದ ಮೇಲೆ ಮದುವೆ ಮಾಡಬಹುದು.”

ಆದರೆ ಅಮ್ಮನೂ ನನ್ನ ಮಾತು ಕೇಳಲಿಲ್ಲ. ಅಪ್ಪನೂ ಕೇಳಲಿಲ್ಲ. “ಇಂಥ ಹುಡುಗ ಮತ್ತೆ ಸಿಗುತ್ತಾನೋ ಇಲ್ಲವೋ…..? ಅವರಿಗೆ ವರದಕ್ಷಿಣೆಯೂ ಬೇಕಿಲ್ಲ. ಬಿ.ಎ. ಮಾಡಿಕೊಂಡ ಸುಂದರ ಹುಡುಗಿ ಆದರೆ ಸಾಕು ಎನ್ನುತ್ತಾರೆ. ಅವಶ್ಯಕತೆ ಇದ್ದರೆ ಅವರೇ ಓದಿಸುತ್ತಾರೆ. ಖಂಡಿತ ಕೆಲಸಕ್ಕೆ ಕಳಿಸ್ತಾರೆ. ಅದರಿಂದ ಬರೋ ಸಂಪಾದನೆಯನ್ನೇ ವರದಕ್ಷಿಣೆ ಎಂದುಕೊಳ್ತಾರೆ. ಹುಡುಗ ದೊಡ್ಡ ಪಟ್ಟಣದಲ್ಲಿ ಬ್ಯಾಂಕಿನಲ್ಲಿದ್ದಾನೆ. ಹುಡುಗಿ ಅವನ ಜೊತೆ ಸುಖವಾಗಿರುತ್ತಾಳೆ.”

ಇದೆಂಥ ವಿಡಂಬನೆ? ಗಂಡು ಕೋತಿಮರಿಯೇ ಆಗಿರಲಿ, ಗೊರಿಲ್ಲಾನೇ ಆಗಿರಲಿ, ತನ್ನ ಹೆಂಡತಿಯಾಗುವವಳು ಅಪ್ಸರೆಯಂತೆಯೇ ಇರಬೇಕೆಂದು ಬಯಸುತ್ತಾನೆ. ಅಪ್ಪನ ಹತ್ತಿರ ಕೊಳ್ಳೆಹೋಗುವಷ್ಟು ದುಡ್ಡಿರಲಿಲ್ಲ. ಅವರು ಇನ್ನೊಂದು ವರ್ಷದಲ್ಲಿ ನಿವೃತ್ತರಾಗಲಿದ್ದರು. ಅವರು ಒಂದು ಸೈಟು ಖರೀದಿಸಿದ್ದರು. ಇಷ್ಟು ದಿನ ಅಂತೂ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ  ಹೇಗೋ  ಜೀವನ ಸಾಗಿಸಿದ್ದರು. ಈಗ ಸ್ವಂತಕ್ಕಾಗಿ ಹೇಗಾದರೂ ಎರಡು ರೂಮಿನ ಪುಟ್ಟ ಮನೆ ಕಟ್ಟಿಕೊಳ್ಳುವ ಚಿಂತೆಯಲ್ಲೇ ಇದ್ದರು. ಆದ್ದರಿಂದ ಹೆಚ್ಚು ವರದಕ್ಷಿಣೆ ಕೊಟ್ಟು ನನ್ನ ಮದುವೆ ಮಾಡಲು ಅವರು ಸಿದ್ಧರಾಗಿರಲಿಲ್ಲ. ಅಲ್ಪಸ್ವಲ್ಪ ದುಡ್ಡು ಮಿಗಿಸಿ ಮನೆ ನಿರ್ಮಿಸುವ ಹುನ್ನಾರದಲ್ಲಿದ್ದರು. ಇಷ್ಟು ವರ್ಷ ಪ್ರಾಮಾಣಿಕವಾಗಿ ದುಡಿದಿದ್ದರು. ಸಂಬಳದ ಹೊರತಾಗಿ ಅವರಿಗೆ ಮೇಲು ಸಂಪಾದನೆ ಏನೂ ದೊರೆಯುತ್ತಿರಲಿಲ್ಲ. ಬರಿಯ ಸಂಬಳದಲ್ಲಿ ಎರಡು ಹೊತ್ತಿನ ಊಟ ಸಿಗುವುದು ದುಸ್ತರ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.

ಈ ಪರಿಸ್ಥಿತಿಗಳ ಒತ್ತಡಕ್ಕೆ ಸಿಲುಕಿಯೇ ಅಪ್ಪ ಅಮ್ಮ ಈ ಹುಡುಗನನ್ನು ನನಗೆ ಗೊತ್ತುಪಡಿಸಬೇಕಾಯಿತು. ಅವರು ವಧು ಪರೀಕ್ಷೆಗೆ ಬಂದಾಗ, ಹುಡುಗನನ್ನು ನೋಡಿ ನನಗೆ ಹೃದಯವೇ ಬಾಯಿಗೆ ಬಂದಂತಾಯಿತು. ಅವರಂತೂ ನನ್ನನ್ನು ಕಂಡು ಒಪ್ಪಿಗೆ ಸೂಚಿಸಿದರು. ಆದರೆ ನಾನಂತೂ ರಾತ್ರಿಯೆಲ್ಲಾ ಅಳುತ್ತಲೇ ಕಳೆದೆ. ಎಲ್ಲ ಹುಡುಗಿಯರಂತೆ ನನಗೂ ನನ್ನದೇ ಆದ ಕಲ್ಪನೆಗಳಿದ್ದವು. ಭಾವೀ ಗಂಡನ ಬಗೆಗಿನ ನನ್ನ ಸುಂದರ ಕಲ್ಪನೆಗಳೆಲ್ಲ ಗಾಜಿನ ಮನೆಯಂತೆ ಒಂದು ಅಸಹ್ಯವಾದ ಕಪ್ಪು ಕಲ್ಲಿನಿಂದಾಗಿ ಚೂರು ಚೂರಾಯಿತು. ಎಷ್ಟೇ ವಿರೋಧಿಸಿದರೂ ಮದುವೆಯನ್ನು ನಿಲ್ಲಿಸಲು ನನ್ನಿಂದ ಸಾಧ್ಯವಾಗಲಿಲ್ಲ. ನಾನೆಂದೂ ಮನೆಯ ಪರಿಸ್ಥಿತಿ ಅರಿಯದವಳಾಗಿರಲಿಲ್ಲ. ಅದರಿಂದ ಹೆಚ್ಚು ವರದಕ್ಷಿಣೆ ನೀಡಿ ಬೇರೆ ಸುಂದರ ವರನನ್ನು ಹುಡುಕಿ ಎಂದು ನಾನು ಅಪ್ಪನನ್ನು ಬಲಾತ್ಕರಿಸಲಿಲ್ಲ.

ಹುಡುಗ ನಿರುದ್ಯೋಗಿಯಲ್ಲ, ಬ್ಯಾಂಕಿನಲ್ಲಿ ಕೆಲಸದಲ್ಲಿದ್ದಾನೆ. ಪಟ್ಟಣದಲ್ಲಿ ಅವನದೇ ಆದ ಮನೆ ಇದೆ ಎಂದುಕೊಂಡು ಸಂತೋಷಪಟ್ಟುಕೊಳ್ಳಬೇಕಾಯಿತು. ಎಲ್ಲಾದರೂ ಪ್ರಯತ್ನಪಟ್ಟು ನನಗೂ ಅಲ್ಲೇ ಕೆಲಸ ಕೊಡಿಸಿಯಾರು. ಇಬ್ಬರೂ ಕೆಲಸ ಮಾಡಿ ಹಾಯಾಗಿರಬಹುದು. ಆದರೆ ಜೀವನವೆಲ್ಲ ಹಾಯಾಗಿ ಕಳೆದೆನೇ?

ಕಳೆದ 10 ವರ್ಷಗಳ ವೈವಾಹಿಕ ಜೀವನದತ್ತ ತಿರುಗಿ ನೋಡಿದಾಗ ಎಲ್ಲ ರೀತಿಯ ಕುಂದುಕೊರತೆಗಳು, ಒದ್ದಾಟ, ಮನಸ್ಸು ಹಿಂಡಿಹಾಕುತ್ತಿದ್ದವು. ನಾನು ಬಿಸಿ ಮರಳಿನ ಮೇಲೆ ಬಿದ್ದ ಮೀನಿನಂತೆ ಹಾಸಿಗೆಯ ಮೇಲೆ ಚಡಪಡಿಸುತ್ತ ದಿನ ಕಳೆದಿದ್ದಿ. ಇವರೊಡನೆ ನನಗೆ ದೊರೆತ ಭಾಗ್ಯವಾದರೂ ಏನು? ಮನಶ್ಶಾಂತಿಯಾಗಲಿ, ತೃಪ್ತಿಯಾಗಲಿ, ಸುಖಸಂತೋಷಾಗಲಿ ಯಾವುದೂ ಸಿಗಲಿಲ್ಲ. ಒಟ್ಟಿಗೆ ಸುತ್ತಾಡಲು ಹೋಗುವುದೆಂದರೆ ಅಪಮಾನ ಎನಿಸುತ್ತಿತ್ತು. ಜನರು ನಗುತ್ತಾ ಸಣ್ಣ ದನಿಯಲ್ಲಿ ಅಣಕವಾಡುತ್ತಿದ್ದರು, `ಮಂಗನ ಕೈಗೆ ಮಾಣಿಕ್ಯ ಸಿಕ್ಕಿದೆ!’

ಮಹೇಶ ತಮ್ಮ ಶಿಫಾರಸಿನಿಂದ ನನಗೆ ಒಂದು ಕಛೇರಿಯಲ್ಲಿ ಕೆಲಸ ಕೊಡಿಸಿದರು. ಆದರೆ ಅಲ್ಲಿಯ ಜನರಲ್ ಮ್ಯಾನೇಜರ್ ನನ್ನೊಡನೆ ಅಸಭ್ಯವಾಗಿ ವರ್ತಿಸತೊಡಗಿದಾಗ, ನಾನು ಮಹೇಶರಿಗೆ ಸ್ಪಷ್ಟವಾಗಿ ಹೇಳಿಬಿಟ್ಟೆ, “ನಾನು ಅಲ್ಲಿ ಕೆಲಸ ಮಾಡೋದಿಲ್ಲ. ಇಲ್ಲಾಂದರೆ ಮರ್ಯಾದೆಯಿಂದ ನಡೆದುಕೊಳ್ಳುವಂತೆ ನಿಮ್ಮ ಗೆಳೆಯನಿಗೆ ಹೇಳಿಬಿಡಿ. ಹೆಂಗಸರೆಲ್ಲರೂ ಚೆಲ್ಲಾಟವಾಡಲೆಂದೇ ಕೆಲಸ ಮಾಡೋದಿಲ್ಲ. ಆಪ್ತ ಸಹಾಯಕಳನ್ನು ಇರಿಸಿಕೊಳ್ಳೋದು ಎಂದರೆ ಅವಳನ್ನು ತನ್ನ ಆಪ್ತಳನ್ನಾಗಿ ಮಾಡಿಕೊಳ್ಳುವುದು ಎಂದು ಅರ್ಥವಲ್ಲ. ಅವಳನ್ನು ಮನಬಂದಂತೆ ನಡೆಸಿಕೊಳ್ಳುವ ಸ್ವಾತಂತ್ರ್ಯ ಅವನಿಗಿಲ್ಲ.”

ಒಂದು ದಿನ ಆ ಜನರಲ್ ಮ್ಯಾನೇಜರ್‌ ನನ್ನೊಡನೆ ಅತ್ಯಂತ ಕೆಟ್ಟದಾಗಿ ವರ್ತಿಸಿದ. ನಾನು ಕೂಡಲೇ ನನ್ನ ಲೆಟರ್‌ ಪ್ಯಾಡನ್ನು ಅವನ ಮೇಜಿನ ಮೇಲೆ ಎಸೆದು ಅವನ ಚೇಂಬರಿನಿಂದ ಹೊರಬಂದು ನನ್ನ ಚೀಲ ಎತ್ತಿಕೊಂಡು ತಕ್ಷಣ ಮನೆಗೆ ಬಂದುಬಿಟ್ಟೆ. ನಂತರ ನಡೆದ ವಿಷಯವನ್ನು ಗಂಡನಿಗೆ ತಿಳಿಸಿದೆ. ಅವರು ಎಲ್ಲವನ್ನೂ ಮೌನವಾಗಿ ಕೇಳಿ ಕಹಿಯಾಗಿ ನಕ್ಕು, “ಅಡುಗೆ ಮನೆಗೆ ಹೋಗೋಣ ಬಾ,” ಎಂದರು.

ನಾನು ಅವರೊಡನೆ ಅಡುಗೆಮನೆಗೆ ಹೋದೆ. ಅವರು ಗ್ಯಾಸ್‌ ಹೊತ್ತಿಸಿ, ಅದರ ಉರಿಯ ಮೇಲೆ ನೀಳವಾಗಿದ್ದ ಇಕ್ಕಳ ಇಟ್ಟು ಕಾಯಿಸತೊಡಗಿದರು, “ಗೀತಾ, ನಿಜವಾದ ದೋಷ ಗಂಡಸರದಲ್ಲ. ಎಲ್ಲ ನಿನ್ನ ಸುಂದರವಾದ ಮುಖದ ದೋಷ. ಅದರ ಮೇಲೆ ಕಲೆ ಮಾಡಿಬಿಟ್ಟಿರೆ ಎಲ್ಲ ಸರಿಹೋಗುತ್ತದೆ. ನಿನ್ನ ಮುಖದ ಮೇಲೆ ಬಿಸಿಯಾದ ಇಕ್ಕಳದಿಂದ  ಬರೆ ಎಳೆದರೆ ಯಾರೂ ನಿನ್ನನ್ನು ಕಂಡು ಅಶ್ಲೀಲವಾಗಿ ಮಾತನಾಡುವ ಸಾಹಸ ಮಾಡುವುದಿಲ್ಲ…..”

“ಮಹೇಶ್‌!” ನಾನು ಸಿಟ್ಟಿನಿಂದ ಹುಚ್ಚಳೇ ಆದೆ. “ನಿಮಗೇನು ಹುಚ್ಚು ಹಿಡಿಯಿತೇ? ಏನೆಂದುಕೊಂಡಿದ್ದೀರಿ? ನಿಮ್ಮ ಈ ಕುಚೇಷ್ಟೆಗಳನ್ನೆಲ್ಲ ಸಹಿಸಿಕೊಂಡು ಹೋಗುತ್ತೇನೆಂದುಕೊಂಡಿರಾ? ನಿಮ್ಮಂಥ ನೀಚ ಗಂಡನೊಡನೆ ಸಂಸಾರ ಸಾಗಿಸ್ತಿದ್ದೀನಿ ಅಂದರೆ ಅಮಾನುಷ ಅತ್ಯಾಚಾರವನ್ನು ಸಹಿಸುತ್ತೇನೆ ಎಂದು ಅರ್ಥಲ್ಲ.”

ಮಹೇಶ ಕಹಿಯಾಗಿ ಮುಗುಳ್ನಗುತ್ತಾ ಮತ್ತೆ ಇಕ್ಕಳನ್ನು ಕಾಯಿಸುತ್ತಲೇ, “ಹಾಗಾದರೆ ಈಗ ಏನು ಮಾಡಬಲ್ಲೆ ಹೇಳು?” ಎಂದರು.

“ನಿಮ್ಮನ್ನು ನಿಮ್ಮ ಮಕ್ಕಳನ್ನೂ ಬಿಟ್ಟು ಮನೆಯಿಂದ ಹೊರಟುಹೋಗುತ್ತೇನೆ. ನನ್ನನ್ನು ಮೂಕಪಶುವೆಂದು ಭಾವಿಸಬೇಡಿ. ಹೇಳಿಬಿಟ್ಟಿದ್ದೀನಿ ನೋಡಿ. ಅಯ್ಯೋ, ಗಂಡನನ್ನು ಬಿಟ್ಟು ಹೇಗೆ ಬದುಕಲಿ? ನನ್ನ ಗತಿ ಏನಾದೀತು? ಎನ್ನಲಿಕ್ಕೆ, ಎಲ್ಲ ಅತ್ಯಾಚಾರವನ್ನೂ ಸಹಿಸಿಕೊಂಡು ಹೋಗು ಅವಿದ್ಯಾಂತ, ಹಳ್ಳಿ ಹುಡುಗಿ ಅಲ್ಲವಲ್ಲ ನಾನು. ನನ್ನ ಅಪ್ಪ ನನ್ನನ್ನು ಓದಿಸಿ ವಿದ್ಯಾವಂತಳನ್ನಾಗಿ ಮಾಡಿದ್ದಾರೆ. ಕೆಲಸ ಮಾಡಿ ಈಗ ನಾನೊಬ್ಬಳೇ ಒಂಟಿಯಾಗಿ ಬದುಕಬಲ್ಲೆ ಎಂಬ ಆತ್ಮವಿಶ್ವಾಸ ಬಂದಿದೆ.”

“ಹಾಗಾದರೆ ಆ ಜನರಲ್ ಮ್ಯಾನೇಜರ್‌ ಬಗ್ಗೆ ನನ್ನ ಬಳಿ ದೂರು ಹೇಳಿದ್ದೇಕೆ?” ಮಹೇಶ್‌ ಕೋಪದಿಂದ ಬಿಸಿಯಾದ ಇಕ್ಕಳನ್ನು ಒಂದು ಮೂಲೆಗೆ ಬಿಸಾಡಿ ನನ್ನ ಕಡೆ ಕೆಂಗಣ್ಣಿನ ದೃಷ್ಟಿ ಬೀರಿದರು.

“ನನಗೆ ನನ್ನ ಮರ್ಯಾದೆ ಬಹು ಮುಖ್ಯ. ನಾನು ಬೇರೆಯವರಂತೆ ಮಾನಗೇಡಿಯಲ್ಲ, ಸೂಳೆಯೂ ಅಲ್ಲ. ನಾನೊಬ್ಬ ಸರ್ವ ಸಾಧಾರಣ ಗೃಹಿಣಿಯಂತೆ ಕೆಲಸ ಮಾಡಬಯಸುತ್ತೇನೆ. ಮನೆಮಠದ ಮರ್ಯಾದೆಯನ್ನೂ ಕಾಪಾಡಿಕೊಳ್ಳ ಬಯಸುತ್ತೇನೆ.” ನಾನೂ ಕೋಪದಿಂದ ಕೂಗಾಡಿದೆ.

“ಇಲ್ಲಿ ಕೇಳಿ! ಇಂದಿನಿಂದ ನನ್ನನ್ನು ಮರ್ಯಾದೆಯಿಂದಲೇ ನಡೆಸಿಕೊಳ್ಳಬೇಕು. ನನ್ನನ್ನು ನಿಮ್ಮ ಕಾಲಕಸದಂತೇನಾದರೂ ಕಂಡಿರಾದರೆ, ಹಳಹಳಿಸಬೇಕಾಗುತ್ತದೆ. ಎಲ್ಲ ಬಿಟ್ಟು ಹೊರಟುಹೋಗ್ತೀನಿ ಅಷ್ಟೇ. ನಮ್ಮಪ್ಪ ನನ್ನನ್ನು ನಿಮಗೆ ಗಂಟು ಹಾಕಿದ್ದಾರೆ ಅನ್ನೋ ಕಾರಣಕ್ಕಾಗಿ ಮತ್ತು ನನಗೆ ನಮ್ಮ ಅಪ್ಪ ಅಮ್ಮನ ಮರ್ಯಾದೆಯ ಪರಿವೆ ಇರೋದ್ರಿಂದಾಗಿ ನಿಮ್ಮಂಥ ಕೋಡಂಗಿ ಜೊತೆ ವಿವಶಳಾಗಿ ಸಂಸಾರ ಸಾಗಿಸ್ತಿದ್ದೀನಿ. ನೀವು ನಿಮ್ಮ ಸೀಮೆಯನ್ನು ಉಲ್ಲಂಘಿಸಿದರೆ, ಎರಡು ತುತ್ತು ಅನ್ನಕ್ಕಾಗಿ ನಿಮ್ಮ ಮನೆಯ ಚಾಕರಿ ಮಾಡಿಕೊಂಡಿರೋದಿಲ್ಲ. ನೀವು ಎರಡು ತುತ್ತು ಅನ್ನ ಹಾಕದಿದ್ದರೆ ನಾನೇನೂ ಸತ್ತೂ ಹೋಗಲ್ಲ. ನನ್ನ ಅನ್ನ ಸಂಪಾದಿಸಿಕೊಳ್ಳುವಷ್ಟು ಶಕ್ತಿ ಇಲ್ಲದ ಹೆಣ್ಣಲ್ಲ ನಾನು.”

ಅಂದಿನಿಂದ ಮಹೇಶ್‌ ಮತ್ತೆಂದೂ ನನ್ನೊಡನೆ ಹಾಗೆ ನಡೆದುಕೊಳ್ಳಲಿಲ್ಲ. ಬೇರೆ ಹೆಂಗಸರಂತೆ ನಾನೂ ಅವರ ಅತ್ಯಾಚಾರಗಳನ್ನು ಸಹಿಸಿಕೊಂಡಿರುವವಳಲ್ಲ ಎಂದು ಅವರಿಗೆ ಅರ್ಥವಾಗಿಹೋಯಿತು. ತಮ್ಮ ಸೀಮೆಯಲ್ಲೇ ಇದ್ದರೆ ಮಾತ್ರ ಅವರನ್ನು ಗಂಡನೆಂದು ಅಂಗೀಕರಿಸುತ್ತೇನೆ. ಅವರೇನಾದರೂ ತಮ್ಮ ಸೀಮೆಯನ್ನು ಉಲ್ಲಂಘಿಸಿದರೆ ನಾನು ಸುಮ್ಮನಿರುವವಳಲ್ಲ. ನನ್ನ ಅಪ್ಪ ನನ್ನನ್ನು ಅವರ ಮನೆಯ ಗೂಟಕ್ಕೆ ಕಟ್ಟಿಬಂದರೆಂದು ಅವರ ಅತ್ಯಾಚಾರಗಳನ್ನೆಲ್ಲ ಸಹಿಸಿಕೊಂಡು ಬಿದ್ದಿರುವ ಮೂಕ ಪಶುವಲ್ಲ ನಾನು. ಗಂಡ ಹೆಂಡತಿಯನ್ನು ಹೇಗೆ ನಡೆಸಿಕೊಂಡರೂ, ಆ ಗೂಟಕ್ಕೇ ಕಟ್ಟುಬಿದ್ದು ಅಳುತ್ತ ಮನಸ್ಸು ಹಗುರ ಮಾಡಿಕೊಂಡು ಬಾಳು ನಡೆಸಬೇಕಾದುದು  ಭಾರತೀಯ ಹೆಣ್ಣಿನ ಕರ್ತವ್ಯವಂತೆ…. ಇಂಥ ಗಂಡ ಹಾಳಾಗಲಿ, ಅವನ ಇಡೀ ವಂಶ ನಿರ್ವಂಶವಾಗಲಿ!

ನನ್ನ ದೃಢ ನಿಶ್ಚಯನ್ನು ಅರ್ಥಮಾಡಿಕೊಂಡ ಮಹೇಶ್‌ ಒಳಗೊಳಗೇ ಹೆದರಿದರು. ಆದರೆ ಮೇಲೆ ಮಾತ್ರ ಕೋಪ ಬಂದವರಂತೆ ಎಗರಾಡುತ್ತಿದ್ದರು. ಆದರೆ ಬಾಣ ಗುರಿ ಮುಟ್ಟಿದೆ ಎಂದು ನನಗೆ ಅರ್ಥವಾಯಿತು. ಇನ್ನೆಂದೂ ಅವರು ತಮ್ಮ ಮಿತಿಯನ್ನು ಮೀರಲಾರರು. ಇದನ್ನೇ ನಾನೂ ಬಯಸಿದ್ದೆ. ಮನೆ ಮಠವನ್ನಾಗಲಿ, ಗಂಡ ಮತ್ತು ಮಕ್ಕಳನ್ನಾಗಲಿ ತೊರೆದು ಹೋಗುವ ಉದ್ದೇಶ ನನ್ನದಾಗಿರಲಿಲ್ಲ. ಆದರೆ ಅನ್ಯಾಯವನ್ನೂ ನಾನು ಮೌನವಾಗಿ ಸಹಿಸಲಾರದವಳಾಗಿದ್ದೆ. ಈ ದಿನ ನೆರವಿಗೆ ಬಂದ ನನ್ನ ಅಂತರಗದಶಕ್ತಿ ಅನಂತರ ನನಗೆ ನೆರವಾಯಿತು. ಮಹೇಶ್‌ ಯಾವಾಗಲಾದರೂ ಕೋಪ ಮಾಡಿಕೊಂಡರೂ, ಕೂಗಾಡಿ ಸುಮ್ಮನಾಗುತ್ತಿದ್ದರು, ನನ್ನ ಮೇಲೆಂದೂ ಕೈ ಮಾಡುವ ಸಾಹಸ ಮಾಡಲಿಲ್ಲ.

ಬೇರೆ ಕೆಲಸ ಹುಡುಕುವುದರಲ್ಲಿ ಮಹೇಶ್‌ ನನಗೆ ನೆರವಾಗಲಿಲ್ಲ. ಐದು ತಿಂಗಳ ಕಾಲ ನಾನು ನಿರುದ್ಯೋಗಿಯಾಗಿದ್ದೆ. ಮಹೇಶ್ ಗೊಣಗಾಡುತ್ತ ನನಗೆ ಶಾಪ ಹಾಕುತ್ತಿದ್ದರು. ಆದನೆ ನಾನು ಸುಮ್ಮನೆ ಕೆಲಸ ಹುಡುಕುವುದನ್ನು ಮುಂದುವರಿಸಿದೆ. ಅವರಿಗೆ ಕೋಪ ಬಂದು ಕೆಲಸದವಳನ್ನೂ, ಅಡುಗೆಯವಳನ್ನೂ ಬಿಡಿಸಿಬಿಟ್ಟರು. ಮನೆಯ ಕೆಲಸಗಳನ್ನೆಲ್ಲ ನಾನೇ ಮಾಡಬೇಕಾಗಿ ಬಂದರೂ ನಾನು ಕೆಲಸಕ್ಕಾಗಿ ಪ್ರಯತ್ನಿಸುತ್ತಲೇ ಇದ್ದೆ. ನಾನು ಸೋಲೊಪ್ಪಲು ಸಿದ್ಧಳಿರಲಿಲ್ಲ.

ಈ ನಡುವೆ ಚಿಕ್ಕ ವಿಷಯಗಳಿಗೂ ಮಹೇಶ್‌ ಕೆಂಡಾಮಂಡಲರಾಗುತ್ತಿದ್ದರು. ಖರ್ಚು ಹೆಚ್ಚುತ್ತಿದೆಯೆಂದು ಕೂಗಾಡಿದರು. ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲವೆಂದೂ ಹಾರಾಡಿದರು. ಆದರೆ ನಾನು ಮೌನವಹಿಸಿದ್ದೆ. ಅವರಿಗೆ ಏನೆಂದು ಉತ್ತರಿಸುವುದು? ಆ ನೌಕರಿಯನ್ನು ನಾನು ಬೇಕೆಂದೇನೂ ಬಿಟ್ಟಿರಲಿಲ್ಲ. ಅದರ ಕಾರಣವನ್ನು ಸ್ಪಷ್ಟವಾಗಿ ತಿಳಿಸಿದ್ದೆ. ಬೇರೆ ಯಾರಾದರೂ ಆಗಿದ್ದರೆ, ನನ್ನ ಮಾತು ಕೇಳಿ ಸಂತೋಷಪಟ್ಟು,  ನನ್ನ ಪ್ರಶಂಸೆ ಮಾಡುತ್ತಿದ್ದರು. ಆದರೆ ಮಹೇಶ್‌ ಎಷ್ಟು ನೀಚರಾಗಿದ್ದರೆಂದರೆ, ಪ್ರಯತ್ನಪಟ್ಟರೂ ಅವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಿದ್ಧರಾಗಿರಲಿಲ್ಲ.

ಈ ಕಛೇರಿಯಲ್ಲಿ ನನ್ನ ಪ್ರಯತ್ನದಿಂದಲೇ ನನಗೆ ಕೆಲಸ ದೊರೆತಿತ್ತು. ಮನೆಯಲ್ಲಿ ಎಲ್ಲ ಮತ್ತೆ ಮೊದಲಿನಂತೆ ನಡೆಯತೊಡಗಿತು. ಆದರೆ ಮಹೇಶರ ಉಗ್ರ ಸ್ವಭಾವ ಮಾತ್ರ ಬದಲಾಗಲಿಲ್ಲ. ಅವರು ಈಗಲೂ ಬೈಗುಳ ಸುರಿಸುತ್ತಲೇ ಮಾತಿಗೆ ತೊಡಗುತ್ತಾರೆ. ಅವರ ಸ್ವರದಲ್ಲಿ ವ್ಯಂಗ್ಯ ಮತ್ತು ಕಹಿ ಭಾವ ಇಣುಕುವುದು ಸಾಧಾರಣವಾಗಿಬಿಟ್ಟಿದೆ. ಅದರಿಂದಾಗಿ ನನ್ನ ಮನದಲ್ಲಿ ಈಗ ಅವರ ಬಗ್ಗೆ ದ್ವೇಷ ಮೂಡಲಾರಂಭಿಸಿದೆ. ಇವರೆಂಥ ಮನುಷ್ಯ? ಈ ಕಾಡುಪಾಪನನ್ನು ನಾನೇಕೆ ಸಹಿಸಿಕೊಳ್ಳಬೇಕು? ಕೆಲವೊಮ್ಮೆಯಂತೂ ಅದುಮಿಡಲಾಗದಷ್ಟು ಕೋಪ ಉಕ್ಕಿ ಬರುತ್ತದೆ. ಎಲ್ಲ ಬಿಟ್ಟು ಪ್ರಶಾಂತರ ಬಳಿಗೆ ಓಡಿಹೋಗುವ ಮನಸ್ಸಾಗುತ್ತದೆ. ಪ್ರಶಾಂತರಂಥ ಮೃದು ಸ್ವಭಾವದ ದಯಾಳು ಎಲ್ಲಿ? ಮಹೇಶ್‌ರಂಥ ಅನಾಗರಿಕ ಮೂರ್ಖ ಎಲ್ಲಿ?

ಆದರೆ ಕೋಪದಲ್ಲೂ ನನ್ನ ಮೇಲೆ ನನಗೆ ಪೂರ್ಣ ನಿಯಂತ್ರಣವಿತ್ತು. ಆದರೆ ಮನಸ್ಸು ಒಳ್ಳೆಯ ವ್ಯಕ್ತಿಯೊಬ್ಬನ ಸ್ಪರ್ಶ ಸುಖಕ್ಕಾಗಿ ಹಂಬಲಿಸುತ್ತಿತ್ತು. ಯಾರದಾದರೂ ಹರವಾದ ಎದೆಯ ಮೇಲೆ ತಲೆಯಿರಿಸಿ, ಮನಬಿಚ್ಚಿ ಮಾತನಾಡುವ, ಯಾರ ತೋಳುಗಳಲ್ಲಾದರೂ ಹುದುಗಿ ನನ್ನನ್ನು ಸಮರ್ಪಿಸಿಕೊಂಡು, ಸಂತೃಪ್ತಿಯಿಂದ ಮಲಗುವ ಇಚ್ಛೆಯಾಗುತ್ತಿತ್ತು. ಮಹೇಶ್‌ಯಾವಾಗಲೂ ನನಗೆ ಅಂತಹ ಗಂಡ ಎನಿಸಲೇ ಇಲ್ಲ. ನನ್ನ ಮಾನ ಮರ್ಯಾದೆಯ ಪರಿವೆ ನನಗಿದ್ದುದರಿಂದಲೇ ನಾನು ಪ್ರಶಾಂತರಂಥ ಆಕರ್ಷಕ ವ್ಯಕ್ತಿತ್ವ ಪಡೆದ ಪುರುಷನ ಕಡೆ ಹೋಗುವ ಸಾಹಸ ಮಾಡಲಾರದಾದೆ. ಏತಕ್ಕಾಗಿ?

ಒಂದು ದಿನ ಕಛೇರಿಯ ಕೆಲಸ ಮಾಡಿ ಪೂರೈಸುವ ವೇಳೆಗೆ ಸಾಕಷ್ಟು ತಡವಾಗಿತ್ತು. ಬಹಳ ಜನ ಹೊರಟುಹೋಗಿದ್ದರು. ಕಛೇರಿಯಿಂದ ಹೊರ ಬರುವ ವೇಳೆಗೆ ಸರಿಯಾಗಿ ಮಳೆ ಸುರಿಯತೊಡಗಿತು. ಅದೇ ಸಮಯಕ್ಕೆ ಸರಿಯಾಗಿ ಪ್ರಶಾಂತ್‌ ಕೂಡ  ಅಲ್ಲಿಗೆ ಬಂದರು.

“ಅರೆ ಗೀತಾ, ನೀವಿನ್ನೂ ಮನೆಗೆ ಹೊಗಲಿಲ್ಲವೇ?” ಅವರು ನನ್ನ ಕಡೆ ನೋಡಿ ಕೇಳಿದರು.

“ಕೆಲಸ ಸ್ವಲ್ಪ ಜಾಸ್ತಿ ಇತ್ತು ಸರ್‌. ಅದನ್ನೆಲ್ಲ ಮುಗಿಸಿಯೇ ಮನೆಗೆ ಹೋಗೋಣ ಎಂದುಕೊಂಡೆ. ಆದರೆ ಈಗ ನೋಡಿದ್ರೆ ಮಳೆ ಬರ್ತಾ ಇದೆ. ಬಸ್‌ಸ್ಟಾಪ್‌ಗೆ ಹೋಗೋದ್ರಲ್ಲೇ ಒದ್ದೆಯಾಗಿಬಿಡ್ತೀನಿ. ಮಳೆಯಲ್ಲಿ ನೆನೆದರೆ ನನ್ನ ಮೈಗಾಗೋಲ್ಲ,” ನಾನು ವ್ಯಾಕುಲತೆಯಿಂದ ಆಕಾಶದ ಕಡೆ ನೋಡಿದೆ. ದಟ್ಟವಾದ ಕಪ್ಪು ಮೋಡಗಳು ಆಕಾಶದಲ್ಲಿ ತುಂಬಿದ್ದವು.

ಪ್ರಶಾಂತ್‌ ಸ್ವಲ್ಪ ಹೊತ್ತಿನಲ್ಲಿ ತಮ್ಮ ಕಾರನ್ನು ತೆಗೆದುಕೊಂಡು ಕಿಟಕಿ ತೆರೆದು, “ಬನ್ನಿ ಗೀತಾ, ನಿಮ್ಮನ್ನು ಮನೆಗೆ ಬಿಡ್ತೀನಿ,” ಎಂದರು.

“ಥ್ಯಾಂಕ್‌ ಯೂ ಸರ್‌. ನನ್ನ ಜೊತೆಯವರೆಲ್ಲ ಇನ್ನೂ ಇಲ್ಲೇ ಇದ್ದಾರೆ. ಜನ ಸಂಚಾರ ಇದೆ. ಮಳೆ ನಿಂತ ಮೇಲೆ ಹೊರಡ್ತೀನಿ.”

ಆದರೆ ನನ್ನ ಜೊತೆ ಇದ್ದವರು ಹೇಳಿದರು, “ಗೀತಾ, ನೀವು ನಮಗಾಗಿ ಚಿಂತಿಸಬೇಡಿ. ನಾವು ತಡವಾಗಿ ಹೋದರೂ ಏನೂ ತೊಂದರೆಯಿಲ್ಲ. ಆದರೆ ನೀವು ನಿಮ್ಮವರ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸಬೇಕು,” ಅವರೆಲ್ಲ ಕಿಸಿಕಿಸಿ ನಕ್ಕಾಗ ನನ್ನ ಹೃದಯವೇ ಬಿರಿದಂತಾಯಿತು.

ನಾನು ಮತ್ತೇನೂ ಮಾತನಾಡದೆ ಕಾರಿನಲ್ಲಿ ಹೋಗಿ ಕುಳಿತೆ. ಪ್ರಶಾಂತ್‌ ಮೌನವಾಗಿಯೇ ಕಾರನ್ನು ನಡೆಸುತ್ತಿದ್ದರು. ನಾನೂ ಮೌನವಾಗಿಯೇ ಕುಳಿತಿದ್ದೆ. ಅವರು ಒಂದು ಹೋಟೆಲಿನ ಮುಂದೆ ಕಾರನ್ನು ನಿಲ್ಲಿಸಿದರು. “ಬನ್ನಿ ಗೀತಾ, ಒಂದು ಕಪ್‌ ಕಾಫಿ ಕುಡಿದು ಬರೋಣ.”

ನನಗೆ ಬೇಡವೆನ್ನಲಾಗಲಿಲ್ಲ. ಅವರೊಡನೆ ಮಸುಕು ಬೆಳಕಿದ್ದ ಹೋಟೆಲಿನ ಒಂದು ಏಕಾಂತವಾಗಿದ್ದ ಮೂಲೆಗೆ ಹೋಗಿ ಕುಳಿತೆ. ಪ್ರಶಾಂತ್‌ ಏನನ್ನೋ ಹೇಳಬಯಸುತ್ತಾರೆ ಎಂಬುದು ಸ್ಪಷ್ಟವಾಗಿತ್ತು. ಆದರೆ ತಲೆ ತಗ್ಗಿಸಿ, ಮೌನವಾಗಿ ಕುಳಿತ ನನ್ನನ್ನು ನೋಡಿ ಅವರಿಗೆ ತಮ್ಮ ಮಾತನ್ನು ಹೇಳಲು ಸಾಧ್ಯವಾಗಲಿಲ್ಲವೋ ಏನೋ ಅಥವಾ ತಮ್ಮ ಶಿಷ್ಟಾಚಾರದ ಮುಸುಕನ್ನು ಸರಿಸುವುದು ಅವರಿಗೆ ಬೇಕಿರಲಿಲ್ಲವೋ ಏನೋ…… ನಾನು ಕೂಡ ನನ್ನ ಮರ್ಯಾದೆಯ ಸೀಮೆಯನ್ನು ಉಲ್ಲಂಘಿಸಲು ಬಯಸಲಿಲ್ಲ.

ಅಸಂತೋಷ ಮತ್ತು ಅತೃಪ್ತಿ ಎಂದರೆ ಮನಸ್ಸಿನ ಮರೀಚಿಕೆಗಾಗಿ ಸ್ವೇಚ್ಛೆಯಿಂದ ವರ್ತಿಸುವುದು, ಏನು ಬೇಕಾದರೂ ಮಾಡಬಹುದು ಎಂದು ಅರ್ಥವಲ್ಲ. ಒಂದು ಬಾರಿ ಕಾಲು ಜಾರಿದರೆ ಸಾಕು. ಜೀವಮಾನವೆಲ್ಲ ಅದು ಬೆಂಬಿಡದ ಭೂತವಾಗಿ ಕಾಡುತ್ತದೆ ಎಂದ ಮೇಲೆ ಕೊನೆಯಿಲ್ಲದ ಈ ಓಟಕ್ಕೆ ನಾನೇಕೆ ತೊಡಗಲಿ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ