ಬಾಲಿವುಡ್‌ನಲ್ಲಿ ತಮ್ಮ ಮೊದಲ ಚಿತ್ರ `ದೇವ್ ಡೀ’ಯಿಂದ ಕೆರಿಯರ್ ಆರಂಭಿಸಿದ ಕಲ್ಕಿ, ಅದರಲ್ಲಿ ಆಧುನಿಕ ಚಂದ್ರಮುಖಿಯ ಪಾತ್ರದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಳು. ನಂತರ `ಝಿಂದಗಿ ನ ಮಿಲೇಗಿ ದೋಬಾರಾ’ ಚಿತ್ರದಲ್ಲಿ ಒಂದು ಶ್ರೀಮಂತ ಮನೆತನದ ತಲೆಕೆಟ್ಟ ಹುಡುಗಿಯಾಗಿ, ವಿಭಿನ್ನ ಗೆಟಪ್‌ನಲ್ಲಿ ರಂಜಿಸಿ ಸೈ ಎನಿಸಿದ್ದಳು. `ಶಾಂಫೈ’ ಚಿತ್ರದಲ್ಲಿ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿ ಪಾತ್ರ ವಹಿಸಿದ್ದಳು. ಇದಾದ ನಂತರ `ಹ್ಯಾಪಿ ಎಂಡಿಂಗ್’ ಚಿತ್ರದಲ್ಲಿ ಪ್ರೇಮಿಯ ಪ್ರೀತಿಗಾಗಿ ಹುಚ್ಚಳಂತಾಡುವ ಹುಡುಗಿಯಾಗಿ ಕಾಣಿಸಿಕೊಂಡಳು. ವಿಡಂಬನೆ ಎಂದರೆ ವಾಸ್ತವ ಜೀವನದಲ್ಲೂ ಈಕೆ ನಿರ್ದೇಶಕ ಅನುರಾಗ್‌ಕಶ್ಯಪ್‌ರನ್ನು ಮದುವೆಯಾಗಿ, ಮುರಿದ ದಾಂಪತ್ಯದಿಂದ ನೊಂದು ಬೇರಾಗಿ, `ಹ್ಯಾಪಿ ಎಂಡಿಂಗ್’ ಚಿತ್ರದ ವಿಶಾಖಾಳಂತೆಯೇ ಒದ್ದಾಡಿಬಿಟ್ಟಳು.
ಕಲ್ಕಿ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ?:
ಇಲ್ಲಿಯವರೆಗೂ ನೀವು ನಟಿಸಿದ ಚಿತ್ರಗಳಲ್ಲಿ ಯಾವ ಪಾತ್ರ ನಿರ್ವಹಣೆ ನಿಮ್ಮಲ್ಲಿನ ಕಲಾವಿದೆಗೆ ತೃಪ್ತಿ ತಂದಿದೆ?
ನನಗೆ `ಮಾರ್ಗರೀಟಾ ವಿತ್ ಎ ಸ್ಟ್ರಾ’ ಚಿತ್ರದಲ್ಲಿನ ಪಾತ್ರ ಹೆಚ್ಚಿನ ಆನಂದ, ತೃಪ್ತಿ ತಂದುಕೊಟ್ಟಿದೆ. ಈ ಚಿತ್ರದ ನಿರ್ದೇಶಕಿ ಸೋನಾಲಿ ಬೋಸ್ ನಿಜಕ್ಕೂ ಬಹಳ ಇಂಟೆಲಿಜೆಂಟ್‌ಎಮೋಶನ್. ಈ ಚಿತ್ರ ಇತ್ತೀಚಿನ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಬಹಳ ಪ್ರಶಂಸೆಗೆ ಒಳಪಟ್ಟಿತು.
`ಮಾರ್ಗರಿಟಾ ವಿತ್ ಎ ಸ್ಟ್ರಾ‘ ಚಿತ್ರದಲ್ಲಿ ನಿಮ್ಮ ಪಾತ್ರದ ಕುರಿತು ಸ್ವಲ್ಪ ವಿವರವಾಗಿ ಹೇಳ್ತೀರಾ?
ಈ ಚಿತ್ರದಲ್ಲಿ ನನ್ನದು ಲೈಲಾಳ ಪಾತ್ರ, ಇಂಥ ವಿಕಲಚೇತನ ಪಾತ್ರ ನಿಜಕ್ಕೂ ಬಹಳ ಛಾಲೆಂಜಿಂಗ್ ಅನ್ಸುತ್ತೆ. ಅವಳು ದೆಹಲಿ ಯೂನಿವರ್ಸಿಟಿಯ ವಿದ್ಯಾರ್ಥಿನಿ. ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ದಾಖಲಾತಿ ಪಡೆದ ನಂತರ, ತನ್ನ ತಾಯಿಯ ಜೊತೆಗೆ ಅಮೆರಿಕಾಗೆ ಹೋಗುತ್ತಾಳೆ. ಅಲ್ಲಿ ಅವಳು ಖಾನುಮ್ (ಸಯಾನಿ ಗುಪ್ತಾ) ಳನ್ನು ಪ್ರೇಮಿಸುತ್ತಾಳೆ, ಮುಂದೆ ಅವರಿಬ್ಬರಲ್ಲಿ ಲೈಂಗಿಕ ಸಂಬಂಧ ಬೆಳೆಯುತ್ತದೆ. ಈ ಚಿತ್ರದಲ್ಲಿ ಲೈಲಾ ಹಲವು ಬಗೆಯ ಎಮೋಶನ್ ಹಂತಗಳನ್ನು ಹಾದುಹೋಗುತ್ತಾಳೆ. ಅವಳು ಈ ಚಿತ್ರದಲ್ಲಿ ಬಹಳಷ್ಟು ಗ್ಲಾಮರಸ್ ಸೆಕ್ಸಿಯಾಗಿ ಕಾಣಿಸುತ್ತಾಳೆ. ಅವಳ ಉಡುಗೆಗಳು ಅಲ್ಟ್ರಾಪಾಷ್ ಆಗಿದ್ದು, ಈ ಚಿತ್ರದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಬೋಲ್ಡ್ ಸೀನ್ಸ್ ಇವೆ. ಮಡಿವಂತರು ಆಕ್ಷೇಪಿಸುವಂತೆಯೇ ಇವೆ. ನಮ್ಮ ಸೆನ್ಸಾರ್ ಬೋರ್ಡ್ ಏನೆಲ್ಲ ಆಕ್ಷೇಪಿಸಲಿದೋ ಗೊತ್ತಿಲ್ಲ. ಲೈಲಾಳಂಥ ಗೇ ಗರ್ಲ್ ಆಗಿ ನ್ಯೂಡ್ ಸೀನ್ಸ್ ನಲ್ಲಿ ನಟಿಸಲು ನಾನು ಮಾನಸಿಕವಾಗಿ ಬಹಳ ಸಿದ್ಧಳಾಗಬೇಕಾಯ್ತು.
ಲೈಲಾಳ ಪಾತ್ರ ನಿರ್ವಹಿಸಲು ಏನಾದರೂ ವಿಶೇಷ ಟ್ರೇನಿಂಗ್ ಪಡೆಯಬೇಕಾಯ್ತೇ?
ವಿಶೇಷ ಅಂತ ಅಲ್ಲ, ಆದರೂ ನಿರ್ದೇಶಕರ ಸಲಹೆಯ ಅನುಸಾರ ಹಲವು ಕೌನ್ಸೆಲಿಂಗ್ ಕ್ಲಾಸಸ್, ಸೆಮಿನಾರ್, ವರ್ಕ್ ಶಾಪ್ ಇತ್ಯಾದಿಗಳಿಗೆ ಹೋಗಿದ್ದೆ. ಲೈಲಾಳಂಥ ಬೋಲ್ಡ್ ಪಾತ್ರಕ್ಕೆ ನನ್ನಿಂದ ಅನ್ಯಾಯ ಆಗಬಾರದು ಎಂದು ನನ್ನ ಒಳಮನದಲ್ಲಿತ್ತು. ವಿಕಲಚೇತನಳಾದ ಲೈಲಾ ಅಂಥವರ ಪ್ರತಿನಿಧಿಯಾಗಿದ್ದಳು. ಅಂಥವರನ್ನು ಯಾವ ವಿಧದಲ್ಲೂ ತಪ್ಪು ಎಂದು ತೋರಿಸುವ ಉದ್ದೇಶ ನಮ್ಮದಾಗಿರಲಿಲ್ಲ. ಚಿತ್ರದ ನಿರ್ದೇಶಕಿ ಸೋನಾಲಿಯವರ ತಂಗಿ ಮನಾಲಿ ಸಹ ಅಂಗೈಕಲ್ಯಕ್ಕೆ ಗುರಿಯಾದರು. ಈ ಚಿತ್ರಕ್ಕಾಗಿ ಅವರೊಂದಿಗೆ ಬಹಳ ಓಡಾಡಿದೆ. ಆಕೆಯ ಮನೆಗೆ ಹೋಗಿ, 1-2 ದಿನ ಜೊತೆಯಲ್ಲೇ ಕಳೆದು, ಹೊರಗೆಲ್ಲ ಸುತ್ತಾಡಿದೆ. ಇತರರು ಆಕೆ ಜೊತೆ ಹೇಗೆ ವ್ಯವಹರಿಸುತ್ತಾರೆ ಎಂದು ಗುರುತಿಸಿಕೊಂಡೆ.
ಅಷ್ಟು ಮಾತ್ರವಲ್ಲದೆ ನಾನು ಫಿಸಿಯೋ ಥೆರಪಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ ರ ಜೊತೆಗೂ ಕೆಲಸ ಮಾಡಿದೆ. ಇದರಿಂದ ನಮ್ಮ ದೇಹದ ಅಂಗಾಂಗಗಳು ಹೇಗೆ ಕೆಲಸ ಮಾಡುತ್ತವೆ ಎಂದು ಅರಿತುಕೊಂಡೆ. ಮೆದುಳು ಮತ್ತು ಅಂಗಾಂಗ ಏಕರೂಪವಾಗಿ ಕೆಲಸ ಮಾಡಲು ಕಾಲಾವಕಾಶ ಬೇಕಾಗುತ್ತೆ ಎಂದು ಗೊತ್ತಾಯ್ತು.
ಈ ಚಿತ್ರದಲ್ಲಿ ನಟಿಸಿದ ನಂತರ ವಿಕಲಚೇತನರಿಗಾಗಿ ಏನಾದರೂ ವಿಶೇಷ ಮಾಡಬೇಕೆಂದಿರುವಿರಾ?
ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ್ದೇನೆ. ಸೋನಾಲಿ ತಂಗಿ ಮನಾಲಿ ಒಂದು ಅಡಾಪ್ಟರ್ ಸೆಂಟರ್ ನಡೆಸುತ್ತಿದ್ದಾರೆ, ಅದು ಮುಂಬೈನ ಬಾಂದ್ರಾದಲ್ಲಿದೆ. ಅಂಥ ಮಕ್ಕಳಿಗಾಗಿಯೇ ನಾನು ಅವರೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೀನಿ.
ಈ ಚಿತ್ರದ ಶೂಟಿಂಗ್‌ಗಾಗಿ ನ್ಯೂಯಾರ್ಕ್‌ಗೆ ಹೋಗಿದ್ದಾಗ, ಅಲ್ಲಿ ಇಂಥ ಜನರಿಗಾಗಿ ಇರುವ ಅನೇಕ ಸೌಲಭ್ಯಗಳನ್ನು ಕಂಡು ನಾವೆಲ್ಲ ನಿಜಕ್ಕೂ ಬೆರಗಾದೆವು. ಅಲ್ಲಿ ವೀಲ್‌ಚೇರ್‌ನ ಮಂದಿ ಬಸ್ ಹತ್ತಲೆಂದೇ ಬೇರೆ ಅನುಕೂಲಗಳಿವೆ, ಅದಕ್ಕಾಗಿ ವಿಶೇಷ ಪ್ಲಾಟ್ ಫಾರ್ಮ್ ಗಳಿವೆ. ನಮ್ಮ ದೇಶದಲ್ಲಂತೂ ಇಂಥ ಯಾವ ಸೌಲಭ್ಯಗಳೂ ಇಲ್ಲ. ಅಲ್ಲಿನ ಅವಕಾಶ, ಸೌಲಭ್ಯಗಳಿಂದ ವಿಕಲಚೇತನರು ಸ್ವಾವಲಂಬಿಗಳೆನಿಸುತ್ತಾರೆ.
ಈ ಚಿತ್ರದಲ್ಲಿನ ಕಾನ್ಸೆಪ್ಟ್ ನ್ನು ನಮ್ಮ ಭಾರತೀಯ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅಂತೀರಾ?
ಭಾರತೀಯ ಪ್ರೇಕ್ಷಕರು ಬಹಳ ಬುದ್ಧಿವಂತರು, ತೀರಾ ಹಿಂದಿನ ಮಡಿವಂತಿಕೆ ಈಗಿಲ್ಲ. ಭಾರತೀಯ ಸಿನಿಮಾರಂಗದವರು ಬೋಲ್ಡ್ ಆಗಿ ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಅಂತೀನಿ. ನಮ್ಮ ದೇಶದ ಸಿನಿಮಾ ಮಂದಿ ಯೋಚಿಸುವುದೊಂದೇ, ಸಲ್ಮಾನ್ ಖಾನ್‌ನಂಥ ಕಮರ್ಷಿಯಲ್ ಹಿಟ್ಸ್ ಮಾತ್ರವೇ ನಡೆಯುತ್ತವೆ ಅಂತ. ನಮ್ಮ ಜನ ಸದಾ ಕಮರ್ಷಿಯಲ್ಸ್ ಗೆ ಅಂಟಿಕೊಳ್ಳಲು ಕಾರಣ ಅವರ ಬಳಿ ಬೇರೆ ಚಾಯ್ಸ್ ಇಲ್ಲವಲ್ಲ….
ನಮ್ಮ ಈ ಚಿತ್ರವನ್ನು ಇಂದಿನ ತಲೆಮಾರಿನವರು ಖಂಡಿತಾ ಬೋಲ್ಡ್ ಆಗಿ ಸ್ವೀಕರಿಸುತ್ತಾರೆ ಅಂತೀನಿ. ಬಿ.ಸಿ, ಕೇಂದ್ರಗಳಲ್ಲಿ ಇದನ್ನು ಜನಪ್ರಿಯಗೊಳಿಸಲು ಸಾಧ್ಯವಿಲ್ಲದೇ ಇರಬಹುದು. ಆದರೆ ಬೆಂಗಳೂರು, ಮುಂಬೈ, ದೆಹಲಿಗಳಂಥ ಮಹಾನಗರಗಳಲ್ಲಿ ಮಲ್ಟೀ ಸ್ಕ್ರೀನ್ ಸಿಸ್ಟಂ ಬಂದ ಮೇಲೆ ಇದೇನೂ ಕಷ್ಟವಲ್ಲ.
ಇಂಟೆಲಿಜೆಂಟ್ ಆ್ಯಕೆಲ್ ಟ್ರಸ್ಟ್ ನ ಇಮೇಜ್ ಕಾರಣ ನಿಮಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ ಅಂತೀರಾ?
ಎಲ್ಲಕ್ಕಿಂತ ದೊಡ್ಡ ಲಾಸ್ ಎಂದರೆ, ಇದುವರೆಗೂ ಯಾವುದೇ ದೊಡ್ಡ ಕಮರ್ಷಿಯಲ್ ಫಿಲ್ಮ್ ನಲ್ಲಿ ನನಗೆ ಪ್ರಮುಖ ಹೀರೋಯಿನ್ ಪಾತ್ರದಲ್ಲಿ ನನ್ನ ಪ್ರತಿಭೆ ತೋರಲು ಅವಕಾಶ ಸಿಕ್ಕಿಲ್ಲ. ಬಹುಶಃ ನಿರ್ಮಾಪಕರು ನಾನೇನೂ ಅಷ್ಟು ಜನಪ್ರಿಯಳಲ್ಲ ಅಂದುಕೊಂಡಿದ್ದಾರೋ ಏನೋ…. ಹೀಗಾಗಿ 200, 300 ಕ್ರೋರ್ ಕ್ಲಬ್ ಚಿತ್ರಗಳಲ್ಲಿ ನಾನಿನ್ನೂ ಎಂಟ್ರಿ ಪಡೆದಿಲ್ಲ. ನಾನೊಬ್ಬ ಉತ್ತಮ ಕಲಾವಿದೆ ಎಂದು ಒಪ್ಪುತ್ತಾರಾದ್ದರಿಂದ ಬೇರೆ ಬೇರೆ ಚಿತ್ರಗಳಲ್ಲಿ ಇನ್ನೂ ಆಫರ್ಸ್ ಬರುತ್ತಿವೆ.
ಈ ಚಿತ್ರದ ನಂತರ `ಜಿಯಾ ಔರ್ ಜಿಯಾ’ ಚಿತ್ರದಲ್ಲಿ ನೀವು ಮತ್ತೆ ಲೆಸ್ಬಿಯನ್ ಪಾತ್ರ ಮಾಡ್ತಿದ್ದೀರಂತೆ….ಖಂಡಿತಾ ಇಲ್ಲ! ಈ ಚಿತ್ರ ಇಬ್ಬರು ಹುಡುಗಿಯರ ಭಾವನಾತ್ಮಕ ಸಂಬಂಧ ಹಾಗೂ ಅವರ ಫ್ರೆಂಡ್‌ಶಿಪ್ ಕುರಿತಾದುದು. ನಾನು ಈ ಚಿತ್ರದಲ್ಲಿ ಒಬ್ಬ ಬಜಾರಿ ಪಂಜಾಬಿ ಹುಡುಗಿ ಪಾತ್ರ ವಹಿಸಿದ್ದೀನಿ, ನನ್ನೊಂದಿಗೆ ರಿಚಾ ಚಡ್ಡಾ ನಟಿಸಿದ್ದಾಳೆ.
ಖಾಸಗಿ ಜೀವನದಲ್ಲಿ ನೀವು ರೊಮ್ಯಾಂಟಿಕ್ ಆಗಿದ್ದೂ ಅನುರಾಗ್ ಕಶ್ಯಪ್ರಿಂದ ಬೇರಾದುದು ಏಕೆ?
ಈ ನಿರ್ಧಾರ ತೆಗೆದುಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿತ್ತು. ನಾವು ಪರಸ್ಪರ ಬಹಳ ಪ್ರೀತಿಸುತ್ತೇವೆ, ಆದರೆ ಒಟ್ಟಿಗೇ ಒಂದೇ ಮನೆಯಲ್ಲಿ ವಾಸಿಸುವುದು ಆಗದ ಕೆಲಸ. ಹೀಗಾಗಿ ನಾವು ಅನಿವಾರ್ಯವಾಗಿ ಬೇರೆ ಆಗಿದ್ದೇವೆ ನಮ್ಮ ಕೆರಿಯರ್ ಕಡೆ ಗಮನ ಹರಿಸುತ್ತಿದ್ದೇವೆ.
ನಿಮ್ಮ ಖಾಸಗಿ ಜೀವನದಲ್ಲಿ ಸಂಬಂಧ ಮುರಿದುಬಿದ್ದಾಗ, ಅದು ನಟಿಯಾದ ನಿಮ್ಮ ಕೆರಿಯರ್ ಮೇಲೆ ಪ್ರಭಾವ ಬೀರಿದೆಯೇ?
ನಾನು ನನ್ನ ಜೀವನದ ಅನುಭವಗಳ ಆಧಾರದ ಮೇಲೆ ಹೇಳ್ತಿದ್ದೀನಿ, ನನ್ನ ಖಾಸಗಿ ಬದುಕನ್ನು ಮೀಡಿಯಾ ಎದುರು ತೆರೆದ ಪುಸ್ತಕವಾಗಿ ಇರಿಸಿ ದೊಡ್ಡ ತಪ್ಪು ಮಾಡಿಬಿಟ್ಟೆ! ನಮ್ಮ ಖಾಸಗಿ ಬದುಕನ್ನು ಎಂದೂ ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು ಎಂಬ ಕಟುಸತ್ಯದ ಅರಿವು ಈಗ ನನಗೆ ಸ್ಪಷ್ಟವಾಗಿ ಆಗಿದೆ. ಹೀಗಾಗಿಯೇ ನಾನೀಗ ಕಡಿಮೆ ಮಾತನಾಡುತ್ತೇನೆ.
– ಶ್ರೇಯಾ ಸ್ವರೂಪ್