ಮೊಳಕೆಕಾಳಿನ ಸಲಾಡ್
ಸಾಮಗ್ರಿ : 2 ಕಪ್ ಮೊಳಕೆಕಾಳು (ಕಡಲೆ, ಹೆಸರು, ಹುರುಳಿಕಾಳು ಇತ್ಯಾದಿ), 1-2 ಬೆಂದ ಆಲೂ, 2-3 ಹಸಿಮೆಣಸು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಹಸಿಶುಂಠಿ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಚಾಟ್ ಮಸಾಲ, ಲೆಟ್ಯೂಸ್ ಎಲೆ, ಟೊಮೇಟೊ ಸಾಸ್, ನಿಂಬೆರಸ, 1-1 ಈರುಳ್ಳಿ, ಟೊಮೇಟೊ, 1 ಕಪ್ ಸೀಡ್‌ಲೆಸ್ ದಾಳಿಂಬೆ.
ವಿಧಾನ : ಮೊಳಕೆ ಕಟ್ಟಿದ ಕಾಳುಗಳಿಗೆ ತುಸು ಉಪ್ಪು ಹಾಕಿ ಬೇಯಿಸಿ ಬಸಿದಿಡಿ. ಬೆಂದ ಆಲೂ, ಹಸಿ ಮೆಣಸು, ಈರುಳ್ಳಿ, ಟೊಮೇಟೋಗಳನ್ನು ಸಣ್ಣಗೆ ಹೆಚ್ಚಿಡಿ. ಒಂದು ದೊಡ್ಡ ಬಟ್ಟಲಲ್ಲಿ ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಬೆರೆಸಿಕೊಂಡು ಕೊನೆಯಲ್ಲಿ ನಿಂಬೆಹಣ್ಣು ಹಿಂಡಿಕೊಳ್ಳಿ. ನಂತರ ಒಂದು ಟ್ರೇನಲ್ಲಿ ಮೊದಲು ಲೆಟ್ಯೂಸ್ ಎಲೆಗಳನ್ನು ಹರಡಿ, ಅದರ ಮೇಲೆ ಸಲಾಡ್ ಹರಡಬೇಕು. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಬಿಸ್ಕೆಟ್ ಚಾಟ್
ಸಾಮಗ್ರಿ : 1 ಕಪ್ ಪನೀರ್, 1-1 ಈರುಳ್ಳಿ, ಟೊಮೇಟೊ, ಸೌತೆಕಾಯಿ, ಕ್ಯಾರೆಟ್, ಬೆಂದ ಆಲೂ, ನಿಂಬೆಹಣ್ಣು, ಅರ್ಧ ಕಪ್ ಹುರಿದ ಕಡಲೆಬೀಜ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಚಾಟ್ ಮಸಾಲ, ಟೊಮೇಟೊ ಸಾಸ್, 4-5 ಬಗೆಯ ಬಿಸ್ಕತ್ತು (ಮಾರಿ, ಕ್ರ್ಯಾಕ್‌ಜ್ಯಾಕ್, 50-50, ಚಸ್ಕಾಮಸ್ಕಾ ಇತ್ಯಾದಿ ಸಿಹಿಯಲ್ಲದ್ದು)ಗಳು, ಒಂದಿಷ್ಟು ಲೆಟ್ಯೂಸ್ ಎಲೆಗಳು.
ವಿಧಾನ : ಪನೀರ್‌ಸಮೇತ ಎಲ್ಲವನ್ನೂ ಸಣ್ಣಗೆ ಹೆಚ್ಚಿಡಿ. ಒಂದು ಟ್ರೇನಲ್ಲಿ ಮೊದಲು ಲೆಟ್ಯೂಸ್ ಎಲೆಗಳನ್ನು ಹರಡಿ, ಅದರ ಮೇಲೆ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಹರಡಿಕೊಳ್ಳಿ. ಕೊನೆಯಲ್ಲಿ ಟೊಮೇಟೊ ಸಾಸ್, ಉಪ್ಪು, ಮೆಣಸು, ಚಾಟ್ ಮಸಾಲ ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ಬಡಿಸುವ ಮುನ್ನ ಬಿಸ್ಕೆಟ್ ಮುರಿದು ಹಾಕಿ, ಮತ್ತೊಮ್ಮೆ ಕಲಸಿ, ತಕ್ಷಣ ಸವಿಯಲು ಕೊಡಿ.
ಬಿಸ್ಕೆಟ್ ಪಿಜ್ಜಾ
ಸಾಮಗ್ರಿ : 1 ಪ್ಯಾಕೆಟ್ ಯಾವುದೇ ಉಪ್ಪಿನ ಬಿಸ್ಕತ್ತು, ಅರ್ಧ ಕಪ್ ಪಿಜ್ಜಾ ಸಾಸ್, 1-1 ಈರುಳ್ಳಿ, ಕ್ಯಾಪ್ಸಿಕಂ, 100 ಗ್ರಾಂ ಮೋಜೆರೆಲಾ ಚೀಸ್.
ವಿಧಾನ : ಮೊದಲು ಚಿಕ್ಕ ಬಾಣಲೆಯಲ್ಲಿ ಹೆಚ್ಚಿದ ಈರುಳ್ಳಿ, ಆಮೇಲೆ ಕ್ಯಾಪ್ಸಿಕಂ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಪಿಜ್ಜಾ ಸಾಸ್, ಟೊಮೇಟೊ ಸಾಸ್ ಹಾಕಿ ಕೆದಕಿ ಕೆಳಗಿಳಿಸಿ. ನಂತರ ಬಿಸ್ಕತ್ತುಗಳ ಮೇಲೆ ಈ ಮಿಶ್ರಣ ಹರಡಿ, ಒಂದರ ಮೇಲೊಂದು ಜೋಡಿಸಿ. 4-5 ಬಿಸ್ಕತ್ತುಗಳ ಪದರ ಬರಲಿ. ಎಲ್ಲದರ ಮೇಲೂ ಮೋಜೆರೆಲಾ ಚೀಸ್‌ನ್ನು ತುರಿದು ಹಾಕಿಡಿ. ನಂತರ ಓವನ್‌ನಲ್ಲಿ ಚೀಸ್ ಕರಗುವವರೆಗೂ ಬೇಕ್ ಮಾಡಿ, ಬಿಸಿಯಾಗಿ ಸವಿಯಲು ಕೊಡಿ.
ಸಾಸೀ ಸ್ಯಾಂಡ್ವಿಚ್
ಸಾಮಗ್ರಿ : 5-6 ಬ್ರೆಡ್ ಸ್ಲೈಸ್, 50 ಗ್ರಾಂ ಪನೀರ್, 1 ಈರುಳ್ಳಿ, 1 ಸಣ್ಣ ಸೌತೆಕಾಯಿ, 1 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಸಾಸ್, 2-3 ಚಮಚ ಬೆಣ್ಣೆ.
ವಿಧಾನ : ಈರುಳ್ಳಿ, ಟೊಮೇಟೊ, ಸೌತೇಕಾಯಿಗಳನ್ನು ಸಣ್ಣದಾಗಿ ಹೆಚ್ಚಿಡಿ. ಇದಕ್ಕೆ ತುರಿದ ಪನೀರ್, ಉಪ್ಪು, ಮೆಣಸು, ಸಾಸ್‌ಸೇರಿಸಿ ಮಿಶ್ರಣ ತಯಾರಿಸಿ.
ಎರಡು ಬ್ರೆಡ್ ಸ್ಲೈಸ್‌ಗಳಿಗೆ ಬೆಣ್ಣೆ ಸವರಿಡಿ. ಒಂದರ ಮೇಲೆ 2-3 ಚಮಚ ಮಿಶ್ರಣ ಹರಡಿ, ಇನ್ನೊಂದನ್ನು ಅದರ ಮೇಲಿರಿಸಿ, ಸ್ಯಾಂಡ್‌ವಿಚ್ ತರಹ ಮಾಡಿ, ಹದನಾಗಿ ಹೊಂಬಣ್ಣ ಬರುವಂತೆ ಗ್ರಿಲ್ ಮಾಡಿ. ನಂತರ ಸಾಸ್ ಸವರಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಪಿಜ್ಜಾ ಡಿಲೈಟ್
ಸಾಮಗ್ರಿ : 4-5 ಪರೋಟ, 5-6 ಚಮಚ ಪಿಜ್ಜಾ ಸಾಸ್, 5-6 ಚಮಚ ಟೊಮೇಟೊ ಸಾಸ್, 200 ಗ್ರಾಂ ಮೋಜೆರೆಲಾ ಚೀಸ್, 1-1 ಈರುಳ್ಳಿ, ಕ್ಯಾಪ್ಸಿಕಂ, 1 ಸಣ್ಣ ಚಮಚ ಪಿಜ್ಜಾ ಸೀಸನಿಂಗ್.
ವಿಧಾನ : ಪಿಜ್ಜಾ ಸಾಸ್‌ಗೆ ಟೊಮೇಟೊ ಸಾಸ್‌ನ್ನು ಬೆರೆಸಿಕೊಳ್ಳಿ. ಮೋಜೆರೆಲಾ ಚೀಸ್‌ನ್ನು ತುರಿದಿಡಿ. ಎಲ್ಲಾ ಪರೋಟಾಗಳಿಗೂ ಸಾಸ್ ಸವರಿಡಿ. ಇದರ ಮೇಲೆ ಮೋಜೆರೆಲಾ ಚೀಸ್ ಉದುರಿಸಿ. ಈರುಳ್ಳಿ, ಕ್ಯಾಪ್ಸಿಕಂಗಳನ್ನು ಬಿಲ್ಲೆಗಳಾಗಿ ಕತ್ತರಿಸಿ. ಇದರ ಮೇಲೆ ಹರಡಿರಿ. ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ 45 ನಿಮಿಷ ಬೇಕ್ ಮಾಡಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ಕಿಡೀ ಕ್ಯಾಸ್ರೋಲ್
ಸಾಮಗ್ರಿ : 2 ಕಪ್ ಬೆಂದ ಪಾಸ್ತಾ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಟೊಮೇಟೊ, ಸಾ್ಸಾ (ಒಟ್ಟಾಗಿ 1 ಕಪ್), ಅರ್ಧ ಕಪ್ ಹೆಚ್ಚಿದ ಪಾಲಕ್‌ಸೊಪ್ಪು, ಅಗತ್ಯವಿದ್ದಷ್ಟು ಚೀಸ್ ಬ್ರೆಡ್ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಸಾಸ್, ಪಾಸ್ತಾ ಸಾಸ್.
ವಿಧಾನ : ಒಂದು ಓವನ್ ಪ್ರೂಫ್ ಬಟ್ಟಲಲ್ಲಿ ಪಾಸ್ತಾ, ಈರುಳ್ಳಿ, ಟೊಮೇಟೊ, ಸಾ್ಸಾ, ಪಾಲಕ್‌ಸೊಪ್ಪು, ಟೊಮೇಟೊ ಸಾಸ್, ಪಾಸ್ತಾ ಸಾಸ್, ಉಪ್ಪು, ಮೆಣಸು ಇತ್ಯಾದಿಗಳನ್ನು ಬೆರೆಸಿಕೊಂಡು, ಸ್ವಲ್ಪ ಹೊತ್ತು ಹಾಗೇ ನೆನೆಯಲು ಬಿಡಿ. ಇದರ ಮೇಲೆ ಚೀಸ್‌ತುರಿದು ಹಾಕಿ. ನಂತರ ಪಾಸ್ತಾ ಚೀಸ್ ಮತ್ತು ಬ್ರೆಡ್ ಕ್ರಂಬ್ಸ್ ಸೇರಿಸಿ. ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ ಇದನ್ನು 180 ಡಿಗ್ರಿ ಶಾಖದಲ್ಲಿ ಚೀಸ್ ಕರಗುವವರೆಗೂ ಬೇಕ್ ಮಾಡಿ, ಬಿಸಿಯಾಗಿ ಸವಿಯಲು ಕೊಡಿ.
ಚೀಸೀ ಡಿಲೈಟ್
ಸಾಮಗ್ರಿ : 1 ಕಪ್ ನೆನೆಸಿ, ಬೇಯಿಸಿದ ರಾಜ್ಮಾ, ಒಂದಿಷ್ಟು ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಟೊಮೇಟೊ, ಸಾ್ಸಾ (ರೆಡಿಮೇಡ್ ಲಭ್ಯ), 5-6 ಬ್ರೆಡ್ ಸ್ಲೈಸ್, ಅಗತ್ಯವಿದ್ದಷ್ಟು ಪಾಸ್ತಾ /ಮೋಜೆರೆಲಾ ಚೀಸ್ (ತುರಿದಿಡಿ), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಸಾಸ್, ತುಸು ಬೆಣ್ಣೆ.
ವಿಧಾನ : ಬ್ರೆಡ್ ಸ್ಲೈಸ್‌ಗೆ ಬೆಣ್ಣೆ ಸವರಿ, ಹೆಂಚಿನ ಮೇಲೆ ಎರಡೂ ಬದಿ ಚೆನ್ನಾಗಿ ಬಿಸಿ ಮಾಡಿ ಗರಿಗರಿಯಾಗಿಸಿ. ಆಮೇಲೆ ಇದನ್ನು ಮಿಕ್ಸಿಗೆ ಹಾಕಿ ಬ್ರೆಡ್ ಕ್ರಂಬ್ಸ್ ಆಗಿಸಿ. ಇದಕ್ಕೆ ಚೀಸ್ ಬೆರೆಸಿ ಪೈ ಡಿಶ್‌ನಲ್ಲಿ ಸೆಟ್ ಮಾಡಿ ಹಾಗೂ ಬಿಸಿಯಾದ ಓವನ್ನಿನಲ್ಲಿರಿಸಿ 180 ಡಿಗ್ರಿ ಶಾಖದಲ್ಲಿ 45 ನಿಮಿಷ ಬೇಕ್ ಮಾಡಿ. ಚೆನ್ನಾಗಿ ಬೆಂದ ರಾಜ್ಮಾಗೆ ಬೆಳ್ಳುಳ್ಳಿ, ಈರುಳ್ಳಿ, ಟೊಮೇಟೊ, ಸಾ್ಸಾ, ಟೊಮೇಟೊ ಸಾಸ್, ಉಪ್ಪು ಮೆಣಸು ಇತ್ಯಾದಿಗಳನ್ನು ಬೆರೆಸಿ ಪೈ ಡಿಶ್‌ನಲ್ಲಿ ಒಂದು ಪದರ ಬರುಂತೆ ಬ್ರೆಡ್ ಕ್ರಂಬ್ಸ್ ಮೇಲೆ ಹರಡಿಕೊಳ್ಳಿ. ಇದರ ಮೇಲೆ ಮೋಜೆರೆಲಾ ಚೀಸ್ ಉದುರಿಸಿ ಮತ್ತೊಮ್ಮೆ ಬೇಕ್ ಮಾಡಿ ಸವಿಯಲು ಕೊಡಿ.