2095 ಚದರ ಮೈಲಿ ಕ್ಷೇತ್ರದಲ್ಲಿರುವ ಬಾಲಿ ದ್ವೀಪದಲ್ಲಿ ಚಿಕ್ಕಪುಟ್ಟದು ಸೇರಿದಂತೆ 10,000ಕ್ಕೂ ಹೆಚ್ಚು ದೇವಾಲಯಗಳಿವೆ. ಅವು ಶಿಲ್ಪಕಲೆಯ ದೃಷ್ಟಿಯಿಂದ ಒಂದಕ್ಕೊಂದು ಭಿನ್ನವಾಗಿವೆ. ಈ ದೇಗುಲಗಳು ಹೊಲಗಳಲ್ಲಿ ಹಾಗೂ ಬೆಟ್ಟ ಪರ್ವತ ಪ್ರದೇಶದಲ್ಲಿವೆ. ಇಲ್ಲಿನ ಜನರು ಪ್ರಗತಿಪರ ರೈತರು. ಅವರು ತಮ್ಮ ಹೊಲಗಳಿಗೆ ನೀರಾವರಿ ಪದ್ಧತಿಯನ್ನು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಮಾಡಿದ್ದಾರೆ. ಇದರ ಹೊರತಾಗಿ ಬಾಲಿ ಜ್ವಾಲಾಮುಖಿ, ಸರೋವರಗಳು ಹಾಗೂ ಅದ್ಭುತ ನಿಸರ್ಗ ಸಿರಿಗೆ ಹೆಸರುವಾಸಿಯಾಗಿದೆ. ಸೈನೂರ, ಕೂಟಾವಾದಂತಹ ಸಮುದ್ರ ತೀರಗಳು ಇಲ್ಲಿನ ಮುಖ್ಯ ಆಕರ್ಷಣೆಯಾಗಿದೆ.

ಮಹಾಭಾರತ ರಾಮಾಯಣದ ಪ್ರಸಂಗಗಳನ್ನು ಅಧರಿಸಿದ ನೃತ್ಯ ನಾಟಕಗಳು ಇಲ್ಲಿನ ಸಾಂಸ್ಕೃತಿಕ ವಿಶೇಷತೆಗಳೇ ಆಗಿವೆ. ತನ್ನದೇ ಆದ ವಿಶಿಷ್ಟ ಹಬ್ಬಗಳು, ಮರದ ಹಾಗೂ ಶಿಲ್ಪದ ಕೆತ್ತನೆಗಾಗಿಯೂ ಬಾಲಿ ಹೆಸರುವಾಸಿಯಾಗಿದೆ. ಬಾಲಿಯ ರಾಜಧಾನಿ ಡೆನ್‌ಪಸಾರ್‌. ಜಕಾರ್ತಾದಿಂದ 1 ಗಂಟೆ 50 ನಿಮಿಷದಲ್ಲಿ ವಿಮಾನದ ಮೂಲಕ ಇಲ್ಲಿಗೆ ತಲುಪಬಹುದಾಗಿದೆ.

ವಿಮಾನ ನಿಲ್ದಾಣದಲ್ಲಿ ಇಳಿಯುತ್ತವೇ ನಮಗೆ ಭಾರತೀಯ ಸಂಸ್ಕೃತಿಯ ದರ್ಶನವಾಗುತ್ತದೆ. ಅಲ್ಲಿನ ವಿಮಾನ ನಿಲ್ದಾಣದ ಭವ್ಯ ಕಟ್ಟಡದ ಮೇಲೆ ಪ್ರಾಚೀನ ಭಾರತದ ಶಿಲ್ಪಕಲೆಯ ದೃಶ್ಯ ನೋಡಿ ಬಹಳ ಖುಷಿಯಾಯಿತು. ಗರುಡನ ಭವ್ಯ ಪ್ರತಿಮೆ, ಕಾರ್ತಿಕೇಯ, ಸರ್ಕಾರಿ ಕಛೇರಿಗಳ ಎದುರು ಕೂಡ ವಿಶೇಷ ರೂಪದಲ್ಲಿ ನಿರ್ಮಿಸಿದ ಪುಟ್ಟ ಮಂದಿರಗಳನ್ನು ನೋಡಿ ನಮ್ಮ ಉತ್ಸಾಹ ಹೆಚ್ಚುತ್ತಲೇ ಹೋಯಿತು.

ದೇವಾಲಯದಂತೆ ಕಾಣುತ್ತಿದ್ದ ಕಟ್ಟಡದತ್ತ ದೃಷ್ಟಿಹರಿಸಿ ಆಟೋದವನನ್ನು ಅದು ಯಾವ ದೇವಾಲಯ ಎಂದು ಕೇಳಿದೆವು. ಆಗ ಆ ಆಟೋ ಚಾಲಕ ನಗುತ್ತ, ಅದು ದೇವಾಲಯ ಅಲ್ಲ, ಸರ್ಕಾರಿ ಕಛೇರಿ ಎಂದ.

ಭಾರತೀಯ ಝಲಕ್

ಸಮುದ್ರದ ದಂಡೆಯ ಮೇಲೆ ನಾವು ಇಳಿದುಕೊಂಡಿದ್ದ ಹೋಟೆಲ್ ‌ರಾಜಸ್ಥಾನದ ಅರಮನೆಯಂತೆಯೇ ಕಾಣುತ್ತಿತ್ತು. ಕಪ್ಪು ಕಲ್ಲಿನ ಪ್ರವೇಶ ದ್ವಾರ, ರಿಸೆಪ್ಶನ್‌ ಕೌಂಟರ್‌ ಮೇಲೆ ಗರುಡನ ದೊಡ್ಡ ಮೂರ್ತಿ ಮತ್ತು ಸಮುದ್ರದಂಡೆಯ ಒಂದು ಎತ್ತರದ ಸ್ತಂಭದ ಮೇಲೆ ಬುದ್ಧನ ಮೂರ್ತಿ, ಅದರ ಮುಂದೆ ಉರಿಯುತ್ತಿದ್ದ ಗಂಧದ ಕಡ್ಡಿ ಅವೆಲ್ಲ ನಮ್ಮ ಗಮನ ಸೆಳೆಯುತ್ತಿದ್ದವು. ಅಲ್ಲಿನ ರಾಷ್ಟ್ರಪಕ್ಷಿ ಗರುಡ ಎಂಬುದು ಪ್ರವಾಸದ ಅವಧಿಯಲ್ಲಿ ನಮ್ಮ ಗಮನಕ್ಕೆ ಬಂತು. ಇಂಡೋನೇಶಿಯನ್ನರು ಬೌದ್ಧ ಧರ್ಮವನ್ನು ಹಿಂದೂ ಧರ್ಮದ ಒಂದು ಭಾಗವೆಂದೇ ಭಾವಿಸುತ್ತಾರೆ.

ಬಾಲಿಯ ಬಹುತೇಕ ಎಲ್ಲ ದೇಗುಲಗಳ ಸ್ಥಾಪನಾ ದಿನವನ್ನು ಅತ್ಯಂತ ಅದ್ಧೂರಿಯಿಂದ ಆಚರಿಸಲಾಗುತ್ತದೆ. ನಮ್ಮ ಪ್ರವಾಸದ ಸಂದರ್ಭದಲ್ಲಿ ನಾವು ಬಾಲಿಯ ಒಂದು ಹಳೆಯ ದೇವಾಲಯಕ್ಕೆ ಭೇಟಿ ಕೊಟ್ಟಿದ್ದೆವು. ಅದು ಡೆನ್‌ಸಾರ್‌ನಿಂದ 30 ಕಿ.ಮೀ. ದೂರದಲ್ಲಿ ಕೂಟಾ ಜಿಲ್ಲೆಯ ಪೆಕಾಟು ಗ್ರಾಮದಲ್ಲಿದೆ. ಅಲ್ಲಿನ ವಾತಾವರಣ ಭಾರತೀಯ ಗ್ರಾಮಗಳ ಜಾತ್ರೆಗಳ ಹಾಗೆಯೇ ಕಂಡುಬಂತು. ಸಾಲು ಸಾಲಾಗಿ ಅಂಗಡಿಗಳಲ್ಲಿ ಬಟ್ಟೆ, ಪಾತ್ರೆ, ಆಟಿಕೆಗಳು, ತಿಂಡಿ ಪದಾರ್ಥಗಳು, ಫ್ಯಾನ್ಸಿ ಐಟಂಗಳು, ಚಪ್ಪಲಿಗಳು ಹೀಗೆ ಬಗೆಬಗೆಯ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರು.

ನಾಲ್ಕೂ ಬದಿಯಿಂದಲೂ ಮಹಿಳೆಯರು, ಮಕ್ಕಳು ಮತ್ತು ಪುರುಷರು ಅಲ್ಲಿಗೆ ಬರುತ್ತಲೇ ಇದ್ದರು. ಮಹಿಳೆಯರ ತಲೆಯ ಮೇಲೆ ಸುಂದರವಾಗಿ ಅಲಂಕರಿಸಿದ ಬುಟ್ಟಿಗಳು ಕಾಣುತ್ತಿದ್ದವು. ಅದರಲ್ಲಿ ನೈವೇದ್ಯಕ್ಕಾಗಿ ತಂದ ಪದಾರ್ಥಗಳಿದ್ದವು. ಅವನ್ನು ಅವರು ತಮ್ಮ ಮನೆಯಲ್ಲಿಯೇ ತಯಾರಿಸಿಕೊಂಡು ಬಂದಿದ್ದರು.

ಸಾಮಾನ್ಯವಾಗಿ ನಮ್ಮ ಧಾರ್ಮಿಕ ಸಮಾರಂಭಗಳಲ್ಲಿ ಮಾಂಸಾಹಾರಿ ಪದಾರ್ಥ ಮಾರಾಟ ಇರುವುದಿಲ್ಲ. ಆದರೆ ಇಲ್ಲಿನ ಜಾತ್ರೆಯಲ್ಲಿ ಮಾಂಸಾಹಾರಿ ಪದಾರ್ಥಗಳು ಜೋರಾಗಿ ಮಾರಾಟವಾಗುತ್ತಿದ್ದವು. ದೇವಸ್ಥಾನಕ್ಕೆ ಹೊರಟಿದ್ದ ಪುರುಷರು ಹಾಗೂ ಮಹಿಳೆಯರು ಒಂದು ವಿಶೇಷ ಬಗೆಯ ಪೋಷಾಕು ಧರಿಸಿದ್ದರು. ಬಾಲಿ ನಿವಾಸಿಗಳು ಇಂಥ ಸಮಾರಂಭಗಳಲ್ಲಿ ಇಂತಹದೇ ವಿಶೇಷ ಪೋಷಾಕು ಧರಿಸಿರುತ್ತಾರೆ. ಮಹಿಳೆಯರು ಉದ್ದನೆಯ ತೋಳಿನ ರವಿಕೆ ಧರಿಸಿದ್ದರು ಹಾಗೂ ಸೊಂಟಕ್ಕೆ ಒಂದು

ಟವೆಲ್‌ನಂಥದ್ದನ್ನು ಸುತ್ತಿಕೊಂಡಿದ್ದರು. ಇದನ್ನು ಅಲ್ಲಿನ ಭಾಷೆಯಲ್ಲಿ `ಸೆರಾಂಗ್‌’ ಎಂದು ಕರೆಯಲಾಗುತ್ತದೆ. ಈ ವಿಶೇಷ ಪೋಷಾಕು ಧರಿಸದೇ ಇರುವವರನ್ನು ಮಂದಿರದೊಳಗಡೆ ಬಿಡುವುದೇ ಇಲ್ಲ. ಅಂಥ ಪೋಷಾಕು ಧರಿಸಿದ ಬಳಿಕವೇ ನಮ್ಮನ್ನು ಒಳಗೆ ಬಿಡಲಾಯಿತು. ಆ ದೇಗುಲ ಭಾರತೀಯ ದೇವಾಲಯಗಳಿಗಿಂತ ಭಿನ್ನವಾಗಿತ್ತು. ಮುಕ್ತ ಆಕಾಶದ ಕೆಳಗೆ ನಾಲ್ಕು ಗೋಡೆಯ ನಡುವೆ ಆ ದೇಗುಲ ನಿರ್ಮಾಣಗೊಂಡಿತ್ತು. ಅದಕ್ಕೆ ಯಾವುದೇ ಮೇಲ್ಛಾವಣಿಯಾಗಲಿ, ಗೋಪುರವಾಗಲಿ, ಕಳಸವಾಗಲಿ ಇರಲಿಲ್ಲ. ಆ ದೇಗುಲ ಸಮುದ್ರ ಮಟ್ಟದಿಂದ 70 ಮೀಟರ್‌ ಎತ್ತರದಲ್ಲಿ ನಿರ್ಮಾಣಗೊಂಡಿತ್ತು. ಅದರ ಮುಂಭಾಗದಲ್ಲಿಯೇ ಸನ್‌ ಸೆಟ್ ಪಾಯಿಂಟ್‌ ಕೂಡ ಇದೆ. ಅಲ್ಲಿಂದ ನೀವು ಅಸೀಮ ಸಾಗರದಲ್ಲಿ ಸೂರ್ಯ ಮುಳುಗುತ್ತಿರುವ  ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಅದು ನಿಜಕ್ಕೂ ಅದ್ಭುತ ದೃಶ್ಯವೇ ಆಗಿತ್ತು.

ಮದರ್ಆಫ್ಆಲ್ ಟೆಂಪಲ್ಸ್

ಬಾಲಿಯ ಅತ್ಯಂತ ಸುಪ್ರಸಿದ್ಧ ದೇವಾಲಯವೆಂದರೆ ಪುರ ಬೈಸಾಕಿ. ಅದು ಅಗುಂಗ್‌ ಪರ್ವತದ ಮೇಲಿದೆ. ಬಾಲಿ ದ್ವೀಪದ ಜನರು ಇದನ್ನು ಮದರ್‌ ಆಫ್‌ ಆಲ್ ಟೆಂಪಲ್ಸ್ ಎಂದು ಕರೆಯುತ್ತಾರೆ. ಈ ದೇಗುಲಕ್ಕೆ ತಲುಪಲು 10 ನಿಮಿಷದ ಏರುಮುಖ ರಸ್ತೆಯಲ್ಲಿ ಹೆಜ್ಜೆ ಹಾಕಬೇಕಾಗುತ್ತದೆ. ವಾಸ್ತವದಲ್ಲಿ ನಿಮಗೆ ಇಲ್ಲಿ 60 ಮಂದಿರಗಳ ಸಮೂಹ ಗೋಚರಿಸುತ್ತದೆ. ಆದರೆ ಉಲುವಾತು ಮಂದಿರದ ಹಾಗೆಯೇ ಇದಕ್ಕೆ ನಾಲ್ಕು ಗೋಡೆಗಳ ಆವರಣ ಇಲ್ಲ. ಬೇರೆ ಬೇರೆ ದೇವದೇವತೆಯರ ಮೂರ್ತಿಗಳನ್ನು ಇಲ್ಲೂ ಕೂಡ ಮುಕ್ತ ಆಕಾಶದ ಕೆಳಗೆ ಸ್ಥಾಪಿಸಲಾಗಿದೆ.

ಬಾಲಿಯ ಜನರು ಅಗುಂಗ ಪರ್ವತವನ್ನು `ಜಗತ್ತಿನ ನಾಭಿ’ ಎಂದು ಹೇಳುತ್ತಾರೆ. ಇಲ್ಲಿನ ಜನರ ಒಂದು ವೈಶಿಷ್ಟ್ಯವೆಂದರೆ, ಅವರು ಈ ಪರ್ವತದ ದಿಕ್ಕಿನಲ್ಲಿಯೇ ತಲೆ ಇಟ್ಟು ಮಲಗುತ್ತಾರೆ. ಬೈಸಾಕಿ ಮಂದಿರದ ಪೂಜೆಯ ಹಕ್ಕು ಮೊದಲು ರಾಜರಿಗೆ ಮಾತ್ರ ಇತ್ತು. ಬಳಿಕ ಇದನ್ನು ಸಾರ್ವಜನಿಕರ ಪೂಜೆಗಾಗಿ ಮುಕ್ತಗೊಳಿಸಲಾಯಿತು.

1917ರಲ್ಲಿ ಸಂಭವಿಸಿದ ಭೀಕರ ಭೂಕಂಪ ಈ ದೇವಸ್ಥಾನಕ್ಕೆ ಸಾಕಷ್ಟು ಹಾನಿಯನ್ನು ಉಂಟುಮಾಡಿತು. ಬಳಿಕ ಇಂಡೋನೇಷ್ಯಾದಲ್ಲಿ ಆಡಳಿತ ನಡೆಸುತ್ತಿದ್ದ ಡಚ್ಚರು ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಸಿದರು. 1963ರಲ್ಲಿ ಮತ್ತೊಮ್ಮೆ ಇಲ್ಲಿ ಭಯಂಕರ ಜ್ವಾಲಾಮುಖಿಯ ಸ್ಛೋಟ ಸಂಭವಿಸಿತು. ಅದು ಇದನ್ನು ಭಗ್ನಾವಶೇಷ ಮಂದಿರವಾಗಿ ಬದಲಿಸಿತು. ಆದರೆ ಇಲ್ಲಿನ ಮುಸ್ಲಿಂ ಸರ್ಕಾರ ಸ್ಥಳೀಯ ನಾಗರಿಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಪುನಃ ನಿರ್ಮಿಸಿತು.

ಈ ದೇವಾಲಯದಲ್ಲಿ ಒಂದೆಡೆ ಬ್ರಹ್ಮ, ವಿಷ್ಣು, ಮಹೇಶ್ವರರ ಮೂರ್ತಿಗಳಿದ್ದರೆ, ಇನ್ನೊಂದೆಡೆ ಬೇರೆ ಬೇರೆ ಅಸಂಖ್ಯ ದೇವದೇವತೆಯರ ಹಾಗೂ ಅಲ್ಲಿನ ರಾಜರ ಮೂರ್ತಿಗಳು ಕಂಡುಬರುತ್ತವೆ. ಈಗಲೂ ಅಲ್ಲಿ ಜ್ವಾಲಾಮುಖಿಯ ಅಪಾಯ ಇದ್ದೇ ಇದೆ. ಹೀಗಾಗಿ ಅಲ್ಲಿನ ದೇವಾಲಯಗಳಲ್ಲಿ ಕಟ್ಟಿಗೆಯನ್ನು ಯಥೇಚ್ಛವಾಗಿ ಬಳಸಲಾಗುತ್ತದೆ.

ಪಾಶ್ಚಿಮಾತ್ಯ ಜಗತ್ತಿನ ಪ್ರವಾಸಿಗರಿಗೆ ಬಾಲಿಯ ನೀಲಿ ನೀರು ಹಾಗೂ ಬಿಳಿಯ ಮರಳಿನ ಆಕರ್ಷಕ ಸಮುದ್ರತೀರ ಬಹಳ ಇಷ್ಟ. ಕೂಟಾ ಬೀಚ್‌ ಸಮೀಪವೇ ಹೆಚ್ಚಿನ ಹೋಟೆಲ್, ಮಾಲ್ ‌ಹಾಗೂ ಬಾರ್‌ಗಳಿವೆ. ಅದು ಸರ್ಫಿಂಗ್‌ಗಾಗಿ ಬಹಳ ಇಷ್ಟವಾದ ಜಾಗ. ನೀವು ಸರ್ಫಿಂಗ್‌ ಪ್ರಿಯರಾಗಿದ್ದರೆ, ಕಾಂಗೂ ಬೀಚ್‌ಗೂ ಹೋಗಬಹುದು. ಸೈನೂರ್‌ ಬೀಚ್‌ ತನ್ನ ಶಾಂತ ನೀರಿನಿಂದ ಈಜಲು ಹಾಗೂ ಬಿಸಿಲು ಕಾಯಿಸುವವರಿಗೆ ಅತ್ಯಂತ ಪ್ರಶಸ್ತ ಸ್ಥಳವೆನಿಸಿದೆ. ಕೂಟಾದ ಮಾಲ್ ‌ಚಿಕ್ಕಪುಟ್ಟ ಅಂಗಡಿಗಳಲ್ಲಿ ನೀವು ಸ್ಥಳೀಯ ಕುಶಲ ಕರ್ಮಿಗಳು ತಯಾರಿಸುವ ಸುಂದರ ವಸ್ತುಗಳನ್ನು ಖರೀದಿಸಬಹುದು. ಇಲ್ಲಿ ಬೆಳ್ಳಿಯಿಂದ ತಯಾರಿಸಿದ ವಸ್ತುಗಳು ಮತ್ತು ಆಭರಣಗಳು ಹೇರಳವಾಗಿ ದೊರೆಯುತ್ತವೆ.

ಬಾಲಿಯ ಅಲುನ್

ಅಲುನ್‌ ಪುಪುತಾನ್‌ ಅಂದರೆ ಪುಪುತಾನ್‌ ನಾಲ್ಕು ಹೆದ್ದಾರಿಗಳು ಕೂಡುವ ಜಾಗದಲ್ಲಿ ಬ್ರಹ್ಮನ ಸುಂದರ ಚತುರ್ಮುಖ ಮೂರ್ತಿಯನ್ನು ಕೂರಿಸಲಾಗಿದೆ. ಅದು ಸಹಜವಾಗಿಯೇ ಪ್ರವಾಸಿಗರ ಗಮನ ಸೆಳೆಯುತ್ತದೆ. ಇದು ಬಾಲಿಯ ಕೇಂದ್ರಸ್ಥಳ. ಒಂದು ವೇಳೆ ನೀವು ಬಾಲಿಯಲ್ಲಿ ಎಲ್ಲಾದರೂ ದಾರಿ ತಪ್ಪಿದರೆ ಬ್ರಹ್ಮನ ಈ ಮೂರ್ತಿಯ ಮುಖಾಂತರ ನಿಮ್ಮ ಹೋಟೆಲ್ ಹಾಗೂ ದಾರಿಯನ್ನು ಕಂಡುಹಿಡಿಯಬಹುದು.

ಈ ನಾಲ್ಕು ರಸ್ತೆಗಳು ಕೂಡುವ ಪೂರ್ವ ಭಾಗದಲ್ಲಿ ಬಾಲಿಯ ವಸ್ತು ಸಂಗ್ರಹಾಲಯವಿದೆ. ಅದರಲ್ಲಿ ಈ ದ್ವೀಪದ ಇತಿಹಾಸ, ಇಲ್ಲಿನ ಹಳೆಯ ಹಿಂದೂ ಮನೆತನಗಳ ಕಲೆ ಸಂಸ್ಕೃತಿಯ ಸಂಕ್ಷಿಪ್ತ ಮಾಹಿತಿ ಹಾಗೂ ಚಿತ್ರಗಳು ನೋಡಲು ಸಿಗುತ್ತವೆ.

ಈ ಕಟ್ಟಡದ ಮೇಲೆ ನಿಮಗೆ ಭಾರತೀಯ ಶಿಲ್ಪಕಲೆಯ ಪ್ರಭಾವ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಈ ಸಂಗ್ರಹಾಲಯ 4 ಭಾಗಗಳಲ್ಲಿ ವಿಂಗಡಣೆಯಾಗಿದ್ದು, ಮೊದಲ ಭಾಗದಲ್ಲಿ ಕಲ್ಲು, ಕಂಚು ಹಾಗೂ ಮರದ ಕಲಾಕೃತಿಗಳನ್ನು ಇಡಲಾಗಿದೆ. ದಕ್ಷಿಣ ಭಾಗದಲ್ಲಿ ಮುಖ್ಯವಾಗಿ ಬಟ್ಟೆಯ ಮೇಲೆ ಚಿತ್ರಿಸಿದ ಕಲಾಕೃತಿಗಳು ಗಮನ ಸೆಳೆಯುತ್ತವೆ.

ಸಂಗೀತ ಮತ್ತು ಜನಪದ ನೃತ್ಯ

ಉತ್ತರ ಭಾಗದಲ್ಲಿ ಬಾಲಿಯ ಸಂಗೀತ ಹಾಗೂ ಜನಪದದ ಇತಿಹಾಸದ ಮೇಲೆ ಬೆಳಕು ಚೆಲ್ಲಲು ಪ್ರಯತ್ನ ಮಾಡಲಾಗಿದೆ. ಕೇಂದ್ರ ಭಾಗದಲ್ಲಿ ನಮಗೆ ಹಿಂದೂ ಸಂಸ್ಕೃತಿಯ ಕುರಿತಾದ ಅನೇಕ ಸಂಗತಿಗಳು ನೋಡಲು ದೊರೆತವು. ವಸ್ತು ಸಂಗ್ರಹಾಲಯಕ್ಕೆ ತಗುಲಿಕೊಂಡೇ ಅಗುಂಗ ಜಗತ್‌ನಾಥಾ ಮಂದಿರ ಇದೆ. ಇದರ ವಿಶೇಷತೆ ಎಂದರೆ ಇದನ್ನು ರಾಜ್ಯ ಸರ್ಕಾರವೇ 1953ರಲ್ಲಿ ನಿರ್ಮಿಸಿತ್ತು. ನೀವು ಈ ದ್ವೀಪದ ಭವ್ಯ ಪಾಂಗನ ಪುಪುತಾನ ಮರಗರನಾ (ಪುಪುತಾನ ಪಾರ್ಕ್‌) ಸುತ್ತಾಡಲು ಅವಶ್ಯ ಹೋಗಿ. ಅಲ್ಲಿ ವಿದೇಶಿ ಆಡಳಿತಗಾರರ ಸಂಘರ್ಷದಲ್ಲಿ ಮೃತರಾದ ಬಾಲಿ ನಿವಾಸಿಗಳ ನೆನಪಿನಲ್ಲಿ ಭವ್ಯ ಬ್ರಜ್‌ ಸಂಧಿ ಸ್ಮಾರಕ ನಿರ್ಮಿಸಲಾಗಿದೆ. ಈ ಸ್ಮಾರಕದ ಎತ್ತರ 45 ಮೀಟರ್‌. ಈ ಪಾರ್ಕಿನ ಉತ್ತರ ಭಾಗದಲ್ಲಿ ಬಾಲಿ ರಾಜ್ಯಪಾಲರ ಕಟ್ಟಡ ಇದೆ.

ಅಲುನ್ಅಲುನ್

ಪಪುತಾನ್‌ನಿಂದ 300 ಮೀಟರ್‌ ದೂರದಲ್ಲಿ ಉತ್ತರದ ಕಡೆ ಡೆನ್‌ಪಸಾರ್‌ನ ರಾಜ ಕುಟುಂಬದ ಅರಮನೆ ಇದೆ.  ಅಲ್ಲಿ ರಾಜ ಕುಟುಂಬದರ ಸುಂದರ ದೇವಾಲಯ ಕೂಡ ಇದೆ.

ಒಂದು ವೇಳೆ ನಿಮ್ಮ ಬಳಿ ಸಾಕಷ್ಟು ಸಮಯವಿದ್ದರೆ, ರಾಮಾಯಣವನ್ನಾಧರಿಸಿದ ಜಗತ್ತಿನಲ್ಲಿಯೇ ಪ್ರಸಿದ್ಧವಾದ ಇಂಡೋನೇಷ್ಯಾದ ಸುಪ್ರಸಿದ್ಧ ನೃತ್ಯ ನಾಟಕ ನೋಡಲು ಮರೆಯಬೇಡಿ. ಈ ನೃತ್ಯ ನಾಟಕಗಳನ್ನು ಸಾಮಾನ್ಯವಾಗಿ ಹೋಟೆಲ್‌‌ಗಳಲ್ಲಿ ಆಯೋಜಿಸಲಾಗುತ್ತದೆ.

ಶಾಂತಾ ಮೂರ್ತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ