2095 ಚದರ ಮೈಲಿ ಕ್ಷೇತ್ರದಲ್ಲಿರುವ ಬಾಲಿ ದ್ವೀಪದಲ್ಲಿ ಚಿಕ್ಕಪುಟ್ಟದು ಸೇರಿದಂತೆ 10,000ಕ್ಕೂ ಹೆಚ್ಚು ದೇವಾಲಯಗಳಿವೆ. ಅವು ಶಿಲ್ಪಕಲೆಯ ದೃಷ್ಟಿಯಿಂದ ಒಂದಕ್ಕೊಂದು ಭಿನ್ನವಾಗಿವೆ. ಈ ದೇಗುಲಗಳು ಹೊಲಗಳಲ್ಲಿ ಹಾಗೂ ಬೆಟ್ಟ ಪರ್ವತ ಪ್ರದೇಶದಲ್ಲಿವೆ. ಇಲ್ಲಿನ ಜನರು ಪ್ರಗತಿಪರ ರೈತರು. ಅವರು ತಮ್ಮ ಹೊಲಗಳಿಗೆ ನೀರಾವರಿ ಪದ್ಧತಿಯನ್ನು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಮಾಡಿದ್ದಾರೆ. ಇದರ ಹೊರತಾಗಿ ಬಾಲಿ ಜ್ವಾಲಾಮುಖಿ, ಸರೋವರಗಳು ಹಾಗೂ ಅದ್ಭುತ ನಿಸರ್ಗ ಸಿರಿಗೆ ಹೆಸರುವಾಸಿಯಾಗಿದೆ. ಸೈನೂರ, ಕೂಟಾವಾದಂತಹ ಸಮುದ್ರ ತೀರಗಳು ಇಲ್ಲಿನ ಮುಖ್ಯ ಆಕರ್ಷಣೆಯಾಗಿದೆ.
ಮಹಾಭಾರತ ರಾಮಾಯಣದ ಪ್ರಸಂಗಗಳನ್ನು ಅಧರಿಸಿದ ನೃತ್ಯ ನಾಟಕಗಳು ಇಲ್ಲಿನ ಸಾಂಸ್ಕೃತಿಕ ವಿಶೇಷತೆಗಳೇ ಆಗಿವೆ. ತನ್ನದೇ ಆದ ವಿಶಿಷ್ಟ ಹಬ್ಬಗಳು, ಮರದ ಹಾಗೂ ಶಿಲ್ಪದ ಕೆತ್ತನೆಗಾಗಿಯೂ ಬಾಲಿ ಹೆಸರುವಾಸಿಯಾಗಿದೆ. ಬಾಲಿಯ ರಾಜಧಾನಿ ಡೆನ್‌ಪಸಾರ್. ಜಕಾರ್ತಾದಿಂದ 1 ಗಂಟೆ 50 ನಿಮಿಷದಲ್ಲಿ ವಿಮಾನದ ಮೂಲಕ ಇಲ್ಲಿಗೆ ತಲುಪಬಹುದಾಗಿದೆ.
ವಿಮಾನ ನಿಲ್ದಾಣದಲ್ಲಿ ಇಳಿಯುತ್ತವೇ ನಮಗೆ ಭಾರತೀಯ ಸಂಸ್ಕೃತಿಯ ದರ್ಶನವಾಗುತ್ತದೆ. ಅಲ್ಲಿನ ವಿಮಾನ ನಿಲ್ದಾಣದ ಭವ್ಯ ಕಟ್ಟಡದ ಮೇಲೆ ಪ್ರಾಚೀನ ಭಾರತದ ಶಿಲ್ಪಕಲೆಯ ದೃಶ್ಯ ನೋಡಿ ಬಹಳ ಖುಷಿಯಾಯಿತು. ಗರುಡನ ಭವ್ಯ ಪ್ರತಿಮೆ, ಕಾರ್ತಿಕೇಯ, ಸರ್ಕಾರಿ ಕಛೇರಿಗಳ ಎದುರು ಕೂಡ ವಿಶೇಷ ರೂಪದಲ್ಲಿ ನಿರ್ಮಿಸಿದ ಪುಟ್ಟ ಮಂದಿರಗಳನ್ನು ನೋಡಿ ನಮ್ಮ ಉತ್ಸಾಹ ಹೆಚ್ಚುತ್ತಲೇ ಹೋಯಿತು.
ದೇವಾಲಯದಂತೆ ಕಾಣುತ್ತಿದ್ದ ಕಟ್ಟಡದತ್ತ ದೃಷ್ಟಿಹರಿಸಿ ಆಟೋದವನನ್ನು ಅದು ಯಾವ ದೇವಾಲಯ ಎಂದು ಕೇಳಿದೆವು. ಆಗ ಆ ಆಟೋ ಚಾಲಕ ನಗುತ್ತ, ಅದು ದೇವಾಲಯ ಅಲ್ಲ, ಸರ್ಕಾರಿ ಕಛೇರಿ ಎಂದ.
ಭಾರತೀಯ ಝಲಕ್
ಸಮುದ್ರದ ದಂಡೆಯ ಮೇಲೆ ನಾವು ಇಳಿದುಕೊಂಡಿದ್ದ ಹೋಟೆಲ್ ರಾಜಸ್ಥಾನದ ಅರಮನೆಯಂತೆಯೇ ಕಾಣುತ್ತಿತ್ತು. ಕಪ್ಪು ಕಲ್ಲಿನ ಪ್ರವೇಶ ದ್ವಾರ, ರಿಸೆಪ್ಶನ್ ಕೌಂಟರ್ ಮೇಲೆ ಗರುಡನ ದೊಡ್ಡ ಮೂರ್ತಿ ಮತ್ತು ಸಮುದ್ರದಂಡೆಯ ಒಂದು ಎತ್ತರದ ಸ್ತಂಭದ ಮೇಲೆ ಬುದ್ಧನ ಮೂರ್ತಿ, ಅದರ ಮುಂದೆ ಉರಿಯುತ್ತಿದ್ದ ಗಂಧದ ಕಡ್ಡಿ ಅವೆಲ್ಲ ನಮ್ಮ ಗಮನ ಸೆಳೆಯುತ್ತಿದ್ದವು. ಅಲ್ಲಿನ ರಾಷ್ಟ್ರಪಕ್ಷಿ ಗರುಡ ಎಂಬುದು ಪ್ರವಾಸದ ಅವಧಿಯಲ್ಲಿ ನಮ್ಮ ಗಮನಕ್ಕೆ ಬಂತು. ಇಂಡೋನೇಶಿಯನ್ನರು ಬೌದ್ಧ ಧರ್ಮವನ್ನು ಹಿಂದೂ ಧರ್ಮದ ಒಂದು ಭಾಗವೆಂದೇ ಭಾವಿಸುತ್ತಾರೆ.
ಬಾಲಿಯ ಬಹುತೇಕ ಎಲ್ಲ ದೇಗುಲಗಳ ಸ್ಥಾಪನಾ ದಿನವನ್ನು ಅತ್ಯಂತ ಅದ್ಧೂರಿಯಿಂದ ಆಚರಿಸಲಾಗುತ್ತದೆ. ನಮ್ಮ ಪ್ರವಾಸದ ಸಂದರ್ಭದಲ್ಲಿ ನಾವು ಬಾಲಿಯ ಒಂದು ಹಳೆಯ ದೇವಾಲಯಕ್ಕೆ ಭೇಟಿ ಕೊಟ್ಟಿದ್ದೆವು. ಅದು ಡೆನ್‌ಸಾರ್‌ನಿಂದ 30 ಕಿ.ಮೀ. ದೂರದಲ್ಲಿ ಕೂಟಾ ಜಿಲ್ಲೆಯ ಪೆಕಾಟು ಗ್ರಾಮದಲ್ಲಿದೆ. ಅಲ್ಲಿನ ವಾತಾವರಣ ಭಾರತೀಯ ಗ್ರಾಮಗಳ ಜಾತ್ರೆಗಳ ಹಾಗೆಯೇ ಕಂಡುಬಂತು. ಸಾಲು ಸಾಲಾಗಿ ಅಂಗಡಿಗಳಲ್ಲಿ ಬಟ್ಟೆ, ಪಾತ್ರೆ, ಆಟಿಕೆಗಳು, ತಿಂಡಿ ಪದಾರ್ಥಗಳು, ಫ್ಯಾನ್ಸಿ ಐಟಂಗಳು, ಚಪ್ಪಲಿಗಳು ಹೀಗೆ ಬಗೆಬಗೆಯ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರು.
ನಾಲ್ಕೂ ಬದಿಯಿಂದಲೂ ಮಹಿಳೆಯರು, ಮಕ್ಕಳು ಮತ್ತು ಪುರುಷರು ಅಲ್ಲಿಗೆ ಬರುತ್ತಲೇ ಇದ್ದರು. ಮಹಿಳೆಯರ ತಲೆಯ ಮೇಲೆ ಸುಂದರವಾಗಿ ಅಲಂಕರಿಸಿದ ಬುಟ್ಟಿಗಳು ಕಾಣುತ್ತಿದ್ದವು. ಅದರಲ್ಲಿ ನೈವೇದ್ಯಕ್ಕಾಗಿ ತಂದ ಪದಾರ್ಥಗಳಿದ್ದವು. ಅವನ್ನು ಅವರು ತಮ್ಮ ಮನೆಯಲ್ಲಿಯೇ ತಯಾರಿಸಿಕೊಂಡು ಬಂದಿದ್ದರು.